ಭಾರತ ಅಭಿವೃದ್ಧಿ ಪಥದತ್ತ ಹೊರಟಿದೆ. ಆರ್ಥಿಕ ಸುಧಾರಣಾ ಕ್ರಮದಲ್ಲಿ ದಾಖಲೆ ಸ್ಥಾಪಿಸಿದೆ ಎಂದು ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಬ್ಬರದಿಂದ ಪ್ರಚಾರ ಮಾಡುತ್ತಲೇ ಇವೆ. ಆಳುವವರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ವಿದೇಶಿ ಬಂಡವಾಳ ಹೂಡಿಕೆ. ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ. ಇದು ಅಭಿವೃದ್ಧಿಯ ಮಾನದಂಡವಾಗಿದೆ. ಆದರೆ ಈ ದೇಶದಲ್ಲಿ ಹಸಿ ದವರು ಎಷ್ಟು ಜನ ಇದ್ದಾರೆ? ಎಷ್ಟು ಜನರಿಗೆ ಸೂರಿಲ್ಲ? ಎಂಬ ಬಗ್ಗೆ ಅಧಿಕಾರದಲ್ಲಿರುವವರು ಬಾಯಿ ಬಿಡುವುದಿಲ್ಲ. ಒಂದೆಡೆ ದೇಶ ಥಳಥಳ ಹೊಳೆಯುತ್ತಿದ್ದರೆ, ಇನ್ನೊಂದೆಡೆ ಮನುಷ್ಯನ ಬದುಕು ಚಿಂದಿಯಾಗುತ್ತಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯ ಪಡೆ ಜಿನಿವಾದಲ್ಲಿ ಬಿಡುಗಡೆ ಮಾಡಿದ ವರದಿ ಭಾರತದ ಮಾನವ ಹಕ್ಕು ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ. ಮಾನವ ಹಕ್ಕು ಉಲ್ಲಂಘನೆಯಲ್ಲಿ ಭಾರತ ಜಾಗತಿಕ ದಾಖಲೆ ಸಾಧಿಸಿದೆ. ಮುಖ್ಯವಾಗಿ ಪ್ರಭುತ್ವದಿಂದ ನಡೆಯುವ ಭಯೋತ್ಪಾದನೆ, ಪೊಲೀಸ್ ದೌರ್ಜನ್ಯ, ಪೊಲೀಸ್ ವಶದಲ್ಲಿ ಪ್ರಜೆಗಳು ಅನುಭವಿಸುವ ಯಾತನೆ ಈ ಎಲ್ಲ ಅಂಶಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.
ಈ ವರದಿಯನ್ನು ಸಿದ್ಧಪಡಿಸುವಲ್ಲಿ ಭಾರತದ ಮಾನವ ಹಕ್ಕು ಸಂಘಟನೆಗಳು ಪ್ರಮುಖ ಪಾತ್ರ ವಹಿಸಿವೆ.ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ 2 ವರ್ಷಗಳ ಕಾಲಾವಧಿಯ ಸಮೀಕ್ಷೆ ಅನೇಕ ಆಘಾತಕಾರಿ ಅಂಶಗಳನ್ನು ಬೆಳಕಿಗೆ ತಂದಿದೆ. ಈ 2 ವರ್ಷಗಳಲ್ಲಿ ಪ್ರತಿ ವರ್ಷ 1 ಕೋಟಿ 8 ಲಕ್ಷ ಮಂದಿ ಪೊಲೀಸರ ಚಿತ್ರಹಿಂಸೆಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವರದಿಯ ಪ್ರಕಾರ 2001-2010ರ ಕಾಲಾವಧಿಯಲ್ಲಿ ಪ್ರತಿ ದಿನ ಪೊಲೀಸರ ವಶದಲ್ಲಿ ಸರಾಸರಿ 43 ಸಾವುಗಳು ಸಂಭವಿಸಿವೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಬಂದ ದೂರುಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಅನೇಕ ಸಾವುಗಳ ಬಗ್ಗೆ ದೂರುಗಳು ಬಂದಿರುವುದಿಲ್ಲ. ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಕಾನೂನು ಸುವ್ಯವಸ್ಥೆ ರಕ್ಷಿಸುವುದು ಪೊಲೀಸರ ಕರ್ತವ್ಯ. ತಮ್ಮ ಕರ್ತವ್ಯ ಪಾಲನೆಯಲ್ಲಿ ಪೊಲೀಸರು ಯಾವುದೇ ಸಂದರ್ಭದಲ್ಲಿ ಅತಿರೇಕವಾಗಿ ವರ್ತಿಸಬಾರದು. ಅಪರಾಧವೆಸಗಿದವರನ್ನು ಬಂಧಿಸುವುದು ತಪ್ಪಲ್ಲ. ಆದರೆ, ಅಪರಾಧ ಎಸಗಿದವರನ್ನು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸ ಬೇಕಾಗುತ್ತದೆ. ನ್ಯಾಯಾಲಯ ಸಾಕ್ಷಾಧಾರಗಳನ್ನು ಆಧರಿಸಿ ಆರೋಪಿಗಳು ಅಪರಾಧಿಗಳೋ ಅಲ್ಲವೋ ಎಂಬುದನ್ನು ತೀರ್ಮಾನಿಸುತ್ತದೆ.
ಅನೇಕ ಬಾರಿ ಪೊಲೀಸರು ತಮ್ಮ ವ್ಯಾಪ್ತಿಯನ್ನು ಮೀರಿ ನ್ಯಾಯಾಲಯದ ಪಾತ್ರವನ್ನು ನಿರ್ವಹಿಸುತ್ತಾರೆ. ಬಂಧಿತರಿಗೆ ಚಿತ್ರಹಿಂಸೆ ನೀಡುತ್ತಾರೆ. ತಪ್ಪು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಇದರಿಂದ ಮಾನವ ಹಕ್ಕು ಉಲ್ಲಂಘನೆಯ ಘಟನೆಗಳು ಹೆಚ್ಚುತ್ತಲೇ ಇವೆ. ಉದಾಹರಣೆಗೆ ಮಂಗಳೂರಿನ ಆದಿವಾಸಿ ಯುವಕ ವಿಠ್ಠಲ ಮಲೆಕುಡಿಯನ ಪ್ರಕರಣದಲ್ಲೂ ಪೊಲೀಸರು ವರ್ತಿಸಿದ ರೀತಿ ಪಾರದರ್ಶಕವಾಗಿರಲಿಲ್ಲ. ಪೊಲೀಸರಿಗೆ ತುರ್ತಾಗಿ ನಕ್ಸಲನೊಬ್ಬನನ್ನು ಸೃಷ್ಟಿಸ ಬೇಕಾಗಿತ್ತು. ಅದಕ್ಕಾಗಿ ಈ ಸಮೂಹ ಸಂವಹನ ವಿದ್ಯಾರ್ಥಿಗೆ ಬಲೆ ಬೀಸಿದರು. ಆತನ ಮನೆಯಲ್ಲಿ ಭಗತ್ ಸಿಂಗ್ ಕುರಿತ ಪುಸ್ತಕ ದೊರಕಿತೆಂದು, ಆತ ಮಾವೋವಾದಿ ಎಂದು ಹೇಳಿದರು. ಆತನನ್ನು ಜಾಮೀನಿನ ಮೇಲೆ ಬಿಡಲು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನ್ಯಾಯಾಲಯ ಕೊನೆಗೂ ವಿಠ್ಠಲನಿಗೆ ಜಾಮೀನು ನೀಡಿದೆ.
ಛತ್ತೀಸ್‌ಗಡದ ಶಾಲಾ ಶಿಕ್ಷಕಿ ಸೋನಿ ಸೊರಿ ಪ್ರಕರಣದಲ್ಲೂ ಪೊಲೀಸರು ಅತ್ಯಂತ ಅಮಾನವೀಯವಾಗಿ ನಡೆದುಕೊಂಡರು. ಈ ಶಾಲಾ ಶಿಕ್ಷಕಿಗೆ ಕಾಡಿನಲ್ಲಿರುವ ಮಾವೋವಾದಿಗಳ ಸಂಪರ್ಕವಿದೆಯೆಂದು ಆರೋಪಿಸಿ ಆಕೆಯನ್ನು ಹಿಡಿಯಲು ಬೆನ್ನು ಹತ್ತಿದರು. ಚಿತ್ರಹಿಂಸೆ ನೀಡಿದರು. ಆಕೆ ತನ್ನನ್ನು ರಕ್ಷಿಸಿಕೊಳ್ಳಲು ಕಾಡಿನ ದಾರಿಯ ಮೂಲಕ ದಿಲ್ಲಿಯನ್ನು ಬಂದು ತಲುಪಿದಳು. ಪೊಲೀಸರು ಅಲ್ಲೂ ಬಿಡಲಿಲ್ಲ. ಅಲ್ಲಿಗೆ ಬಂದು ಆಕೆಯನ್ನು ಹಿಡಿದು, ಯಾವ ಪರಿ ಹಿಂಸೆ ನೀಡಿದರೆಂದರೆ ಆಕೆಯಿನ್ನೂ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾಳೆ. ಇನ್ನು ಭಯೋತ್ಪಾದಕರೆಂದು ಅಲ್ಪಸಂಖ್ಯಾತ ಸಮುದಾಯದ ಅಮಾಯಕ ಯುವಕರನ್ನು ಪೊಲೀಸರು ಬಂಧಿಸುತ್ತಾರೆ.
ಈ ರೀತಿ ಬಂಧನಕ್ಕೊಳಗಾದವರಿಗೆ ಚಿತ್ರಹಿಂಸೆ ನೀಡಿ ಜೈಲಿಗೆ ತಳ್ಳುತ್ತಾರೆ. ಅವರಲ್ಲಿ ಕೆಲವರನ್ನು ನಕಲಿ ಎನ್‌ಕೌಂಟರ್ ಮಾಡಿ ಸಾಯಿಸುತ್ತಾರೆ. ಬಂಧಿಸಲ್ಪಟ್ಟವರ ವಿಚಾರಣೆ ಬೇಗ ಮುಗಿಯುವುದಿಲ್ಲ. ನ್ಯಾಯಾಂಗ ಪ್ರಕ್ರಿಯೆ ನಡೆದು ನಿರಪರಾಧಿಯಾಗಿ ಹೊರಗೆ ಬರಬೇಕಾದರೆ ವರ್ಷಗಳೇ ಕಳೆದು ಹೋಗುತ್ತವೆ. ಈ ಅವಧಿಯಲ್ಲಿ ಆ ಯುವಕರ ಅಮೂಲ್ಯ ಆಯುಷ್ಯ ಕತ್ತಲ ಕೋಣೆಯಲ್ಲಿ ಕಮರಿ ಹೋಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಅಮಾಯಕ ಜನರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಹೋಗುವುದಿಲ್ಲ. ಮಾಧ್ಯಮಗಳ ಗಮನಕ್ಕೂ ಬರುವುದಿಲ್ಲ. ಆಕಸ್ಮಿಕವಾಗಿ ಮಾಧ್ಯಮಗಳ ಗಮನಕ್ಕೆ ಬಂದರೂ ಕೂಡ ಅದು ಪ್ರಕಟವಾಗುವುದಿಲ್ಲ.
ಮಾಧ್ಯಮಗಳಲ್ಲಿರುವ ಕೋಮುವಾದಿ ವಿಷ ಜಂತುಗಳು ಸತ್ಯವನ್ನು ತಿರುಚುತ್ತವೆ. ಈ ಮಾನವ ಹಕ್ಕು ಉಲ್ಲಂಘನೆ ನಿಲ್ಲಬೇಕಾದರೆ ನಮ್ಮ ಪೊಲೀಸ್ ವ್ಯವಸ್ಥೆ ಬದಲಾಗಬೇಕು. ಬ್ರಿಟಿಶ್ ವಸಾಹತುಶಾಹಿಗಳು ರೂಪಿಸಿದ ಈ ಪೊಲೀಸ್ ವ್ಯವಸ್ಥೆ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ. ಆದುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಿಕೆಯಾಗುವ ರೀತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನೂ ಪುನಾರೂಪಿಸಬೇಕಾಗಿದೆ. ಈ ಕುರಿತು ಧರ್ಮವೀರ ಆಯೋಗ ಸೇರಿದಂತೆ ಹಲವಾರು ಆಯೋಗಗಳು ವರದಿ ನೀಡಿದ್ದರೂ ಸರಕಾರ ಆ ವರದಿಗಳನ್ನು ನನೆಗುದಿಯಲ್ಲಿ ಇಟ್ಟಿದೆ.
ಪೊಲೀಸರು ನಮ್ಮ ಸಮಾಜದ ನಡುವಿನಿಂದಲೇ ಬಂದವರು. ಅವರು ಜನರ ಶತ್ರುಗಳಂತೆ ವರ್ತಿಸಬಾರದು. ಜನರು ಅವರನ್ನು ಶತ್ರುಗಳಂತೆ ಕಾಣಬಾರದು. ಇದು ಸಾಧ್ಯವಾಗಬೇಕಾದರೆ ಪೊಲೀಸ್ ತರಬೇತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕು. ಜಾತ್ಯತೀತ ಜನತಾಂತ್ರಿಕ ತತ್ವದ ಆಧಾರದಲ್ಲಿ ಪೊಲೀಸ್ ವ್ಯವಸ್ಥೆಗೆ ಹೊಸ ರೂಪ ನೀಡಬೇಕು.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...