ಜಗದೀಶ್ ಶೆಟ್ಟರ್‌ರ ಸರಕಾರದಲ್ಲಿ ಕಳಂಕಿತರನ್ನು ಸಚಿವರನ್ನಾಗಿ ಮಾಡಬಾರದೆಂದು ತಾನು ನೀಡಿದ ಸಲಹೆಯನ್ನು ಧಿಕ್ಕರಿಸಲಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ. ರಾಜ್ಯಪಾಲರ ಹೇಳಿಕೆಗೆ ಪೂರಕ ಎಂಬಂತೆ ಮಾತನಾಡಿರುವ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ‘‘ಹೊಸ ಸರಕಾರದಲ್ಲಿ ಯಾರಾದರೂ ಮಂತ್ರಿಗಳು ಜೈಲಿಗೆ ಹೋದರೆ ಆ ಸಚಿವ ಸ್ಥಾನವನ್ನು ತನಗೆ ನೀಡಬೇಕೆಂದು ಮುಖ್ಯಮಂತ್ರಿಯನ್ನು ಕೇಳಿಕೊಂಡಿದ್ದಾರೆ. ನೂತನ ಸಚಿವ ಸಂಪುಟ ರಚನೆಯಲ್ಲಿ ತನಗೆ ಅವಮಾನವಾಗಿದೆಯೆಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇರವಾಗಿ ಆರೋಪಿಸಿದ್ದಾರೆ. ಆರೆಸ್ಸೆಸ್ ಸರ್ವಾಧಿಕಾರಿ ಕಲ್ಲಡ್ಕ ಪ್ರಭಾಕರ ಭಟ್ಟರ ಕಾಲಿಗೆ ತಾನು ಬೀಳಲಿಲ್ಲವೆಂದು ತನಗೆ ಅವಕಾಶ ನಿರಾಕರಿಸಲಾಯಿತೆಂದು ಹಾಲಾಡಿ ಹೇಳಿದ್ದಾರೆ. ಈ ನಡುವೆ ಅವಕಾಶ ವಂಚಿತರಾದ ಯಡಿಯೂರಪ್ಪ ನಿಷ್ಠ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ರಚಿಸಲ್ಪಟ್ಟ ಸಂಪುಟದಲ್ಲೂ ಖಾತೆಗಳ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಮುಖ್ಯಮಂತ್ರಿ ದಿಲ್ಲಿಗೆ ಹೋಗಬೇಕಾಗಿ ಬಂದಿದೆ. ರಾಜ್ಯದಲ್ಲಿ ಬರಗಾಲದ ಕರಾಳ ಛಾಯೆ ಕವಿದಿರುವಾಗ ದಿಕ್ಕುಗಾಣದ ಜನ ಗುಳೆ ಹೋಗುತ್ತಿರುವಾಗ ಅದಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂಬಂತೆ ಬಿಜೆಪಿ ಶಾಸಕರು ಮಂತ್ರಿಯಾದವರು ತಮಗೆ ಬೇಕಾದ ಖಾತೆಗಳನ್ನು ಪಡೆಯಲು ನಡೆಸಿರುವ ನಿರ್ಲಜ್ಜ ರಾಜಕಾರಣ ಈ ರಾಜ್ಯದಲ್ಲಿ ಹಿಂದೆಂದೂ ನಡೆದಿರಲಿಲ್ಲ.
ಹೊಸದಾಗಿ ಮಂತ್ರಿಗಳಾದವರಿಗೆ ಖಾತೆಗಳು ಬೇಕಾಗಿರುವುದು ಜನರ ಏಳಿಗೆಗಾಗಿ ಇಲ್ಲವೇ ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ದಕ್ಷನಾದ ವ್ಯಕ್ತಿ ಯಾವುದೇ ಖಾತೆ ನೀಡಿದರೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾನೆ. ಆದರೆ, ಸಚಿವ ಖಾತೆ ಎಂಬುದು ತನಗೆ ಮೇಯಲು ಬೇಕಾದ ಹುಲ್ಲುಗಾವಲು ಎಂದು ತಿಳಿದವರು ಮಾತ್ರ ಈ ರೀತಿ ಖಾತೆಗಾಗಿ ಕ್ಯಾತೆ ತೆಗೆಯುತ್ತಾರೆ. ಇಂತಹವರನ್ನು ಚುನಾಯಿಸಿದುದಕ್ಕಾಗಿ ಕರ್ನಾಟಕದ ಜನ ಹಣೆ ಚಚ್ಚಿಕೊಳ್ಳಬೇಕಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಈ ಅಸಹ್ಯವನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ಅನಂತರ ಇಂತಹವರನ್ನು ಮತ್ತೆ ವಿಧಾನಸಭೆಗೆ ಕಳುಹಿಸಿದರೆ ಅದು ಮೂರ್ಖತನವಾಗುತ್ತದೆ.
ಇನ್ನು ಯಾರು ಕಳಂಕಿತರೆಂಬುದು ಮುಖ್ಯಮಂತ್ರಿಗೆ ಗೊತ್ತು, ಬಿಜೆಪಿ ಹೈಕಮಾಂಡ್‌ಗೂ ಗೊತ್ತು, ಈ ರಾಜ್ಯದ ಎಲ್ಲ ಜನರಿಗೂ ಗೊತ್ತು. ಆದರೆ ಕಳಂಕಿತರಿಗೆ ಅಧಿಕಾರ ನೀಡಬಾರದು ಎಂಬುದು ಬಿಜೆಪಿಯದೇ ಒಂದು ನಿಯಮವಾಗಿ ಉಳಿದಿಲ್ಲ. ಯಾರು ಹೆಚ್ಚು ಹೊಲಸನ್ನು ಮೈಗೆ ಮೆತ್ತಿಕೊಂಡು ನಿಂತಿದ್ದಾರೋ ಅವರಿಗೆ ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ.ಅಂತಲೇ ಬಿಜೆಪಿ ಶಾಸಕರೊಬ್ಬರು ದಿಲ್ಲಿಗೆ ಹೋಗುವ ಶಾಸಕರ ಬಗ್ಗೆ ಬಹಿರಂಗವಾಗಿ ಮಾತಾಡುವಂತಾಗಿದೆ. ಜಗದೀಶ್ ಶೆಟ್ಟರ್ ಸಂಪುಟದಲ್ಲಿ 6 ಮಂದಿ ಕುಖ್ಯಾತ ಕಳಂಕಿತ ವ್ಯಕ್ತಿಗಳು ಕಿರೀಟ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಂಡವಾಳದ ಹೆಸರಿನಲ್ಲಿ ರೈತರ ಭೂಮಿ ಕಬಳಿಸುವ ಮುರುಗೇಶ್ ನಿರಾಣಿ, ಮೆಗಾ ಸಿಟಿ ಹಗರಣದ ಸಿ.ಟಿ. ಯೋಗೇಶ್ವರ್, ಲೋಕಾಯುಕ್ತರ ಬಲೆಗೆ ಬಿದ್ದ ವಿ. ಸೋಮಣ್ಣ, ಹಿಂದುತ್ವದ ಹೆಸರು ಹೇಳುತ್ತಲೇ ವಂಚನೆಯ ಕಾಯಕದಲ್ಲಿ ನಿರತರಾದ ಸಿ.ಟಿ. ರವಿ ಇವರೆಲ್ಲ ಯಾವಾಗ ಪರಪ್ಪನ ಅಗ್ರಹಾರಕ್ಕೆ ಹೋಗುತ್ತಾರೆಂಬುದು ಗೊತ್ತಿಲ್ಲ. ಇವರಲ್ಲಿ ಸಿ.ಟಿ.ರವಿ ಎಂಬಾತ ಆರೆಸ್ಸೆಸ್‌ನ ನಿಷ್ಠಾವಂತ ಕಾರ್ಯಕರ್ತ. ಬಾಬಾಬುಡಾನ್‌ಗಿರಿ ದತ್ತಪೀಠ ವಿವಾದವನ್ನು ಕೆರಳಿಸಿ ಮಲೆನಾಡಿನಲ್ಲಿ ಸೌಹಾರ್ದ ಬದುಕಿಗೆ ಕೊಳ್ಳಿಯಿಟ್ಟ ಈತ ಕೋಮುವಾದಿ ಮಾತ್ರವಲ್ಲ ಮಹಾ ಭ್ರಷ್ಟ. ಈ ಭ್ರಷ್ಟ ಸಿ.ಟಿ. ರವಿ ತನ್ನನ್ನು ತಾನು ಸಮರ್ಥಿಸಿ ಕೊಳ್ಳುತ್ತಿದ್ದಾನೆ. ತಾನು ಆರೋಪಿ ಮಾತ್ರ ಅಪರಾಧಿ ಅಲ್ಲ ಎಂಬುದು ಈ ಸ್ವಯಂಸೇವಕನ ವಾದ. ಇದನ್ನೆಲ್ಲ ನೋಡಿಕೊಂಡು, ಕೇಳಿಕೊಂಡು ಜಗದೀಶ್ ಶೆಟ್ಟರ್ ಸುಮ್ಮನೆ ಕುಳಿತ್ತಿದ್ದಾರೆ. ಹೀಗೆ ಕಳಂಕಿತರನ್ನು ಕಟ್ಟಿಕೊಂಡು ಮುಂದಿನ ಹತ್ತು ತಿಂಗಳ ಕಾಲ ಸರಕಾರ ನಡೆಸಿಕೊಂಡು ಹೋಗುವುದು ಸುಲಭವಲ್ಲ.
ನೂತನ ಮುಖ್ಯಮಂತ್ರಿಯ ದಾರಿಯಲ್ಲಿ ಕಲ್ಲುಮುಳ್ಳುಗಳಿವೆ. ಬರಲಿರುವ ದಿನಗಳಲ್ಲಿ ಡಿನೋಟಿಫಿಕೇಶನ್ ಮತ್ತು ಗಣಿಗಾರಿಕೆಯ ಅನುಮತಿಗೆ ಸಂಬಂಧಿಸಿದ ಕಡತಗಳು ಮತ್ತೆ ಅವರ ಮುಂದೆ ಬರಲಿವೆ. ಆಗ ಶೆಟ್ಟರ್ ಕಣ್ಣು ಮುಚ್ಚಿ ಸಹಿ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ಸದಾನಂದ ಗೌಡರಂತೆ ಮನೆಗೆ ಹೋಗಬೇಕಾಗುತ್ತದೆ.ಕಾಂಗ್ರೆಸ್‌ಗಿಂತ ಭಿನ್ನವಾದ ಪಕ್ಷ, ಆರೆಸ್ಸೆಸ್ ಸಂಸ್ಕಾರದಲ್ಲಿ ಬೆಳೆದು ಬಂದವರು ನಾಯಕರಾಗಿರುವ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಅಧೋಗತಿಯ ಪಾತಾಳಕ್ಕೆ ತಲುಪಿರುವಾಗ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಕನಸು ಕಾಣುತ್ತಿದೆ.
ಕರ್ನಾಟಕ ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೆಲ್ಲ ಹಗರಣಗಳು ಈ ಪಕ್ಷವನ್ನು ಸುತ್ತಿಕೊಂಡಿವೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೋಮು ಉನ್ಮಾದ ಕೆರಳಿಸಲು ಸಂಘಪರಿವಾರ ಕಾರ್ಯತಂತ್ರ ರೂಪಿಸಿದೆ. ಕಾರ್ಯತಂತ್ರದ ಭಾಗವಾಗಿ ಶಾಲಾ ಪಠ್ಯಪುಸ್ತಕಗಳ ಕೇಸರೀಕರಣ ನಡೆದಿದೆ. ಜಗದೀಶ್ ಶೆಟ್ಟರ್‌ರ ಸರಕಾರ ಮುಂಬರುವ ಹತ್ತು ತಿಂಗಳ ಕಾಲ ಅಧಿಕಾರದಲ್ಲಿ ಉಳಿಯುವುದು ಗ್ಯಾರಂಟಿ ಇಲ್ಲ. ಪ್ರತಿಪಕ್ಷಗಳಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಸ್ವಪಕ್ಷೀಯರಿಂದಲೇ ನಿತ್ಯವೂ ಕಿರಿಕಿರಿ ಅನುಭವಿಸುತ್ತಾ ಅವರು ಸರಕಾರ ನಡೆಸಿಕೊಂಡು ಹೋಗ ಬೇಕಾಗುತ್ತದೆ. ಏನೇ ಕಸರತ್ತು ಮಾಡಿದರೂ ಡಿಸೆಂಬರ್ ಕೊನೆಯ ಒಳಗೆ ಈ ಸರಕಾರ ಪತನಗೊಂಡು ಮಧ್ಯಾಂತರ ಚುನಾವಣೆ ಬಂದರೆ ಅಚ್ಚರಿ ಪಡಬೇಕಾಗಿಲ್ಲ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...