ಬಲಿಷ್ಠ ಲೋಕಪಾಲ ಕಾಯ್ದೆಯ ರಚನೆಗಾಗಿ ಅಣ್ಣಾ ಬಳಗ ನಡೆಸುತ್ತಿರುವ ಪ್ರಹಸನ ಬಹುತೇಕ ವಿಫಲವಾಗಿದೆ. ಈ ವಿಫಲತೆಗೆ ಕಾರಣಗಳು ಸ್ವತಃ ಅಣ್ಣಾ ಹಝಾರೆ ಮತ್ತು ಬಳಗವೇ ಆಗಿರುವುದು ಒಟ್ಟು ಚಳವಳಿಯ ಬಹು ದೊಡ್ಡ ದುರಂತವಾಗಿದೆ. ಖಾದಿ ಬಟ್ಟೆ, ಟೋಪಿ ಧರಿಸಿದ, ಅಪ್ಪಟ ನೆಲದ ವ್ಯಕ್ತಿಯಂತೆ ಅಣ್ಣಾ ಹಝಾರೆ ಎದ್ದು ಭ್ರಷ್ಟಾಚಾರದ ವಿರುದ್ಧ ನಿಂತಾಗ ಇಡೀ ದೇಶವೇ ರೋಮಾಂಚನಗೊಂಡುದು ಸತ್ಯ. ಮಾಧ್ಯಮಗಳಂತೂ ಅಣ್ಣಾ ಹಝಾರೆಯವರನ್ನು ನವ ಗಾಂಧಿಯಂತೆ ಪ್ರತಿಬಿಂಬಿಸಿದವು. ಎರಡನೆ ಸ್ವಾತಂತ್ರ ಸಂಗ್ರಾಮವೆಂಬಂತೆ ಅಣ್ಣಾ ಹಝಾರೆಯವರ ಹೋರಾಟವನ್ನು ಬಿಂಬಿಸಿದರು. ಇಡೀ ದೇಶದ ಜನರೇ ಅಣ್ಣಾ ಹಿಂದೆ ನಡೆದಂತೆ ಭಾಸವಾಯಿತು. ನಿಜಕ್ಕೂ ಇದನ್ನು ಬಳಸಿಕೊಂಡು ಅಣ್ಣಾ ಹಝಾರೆ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕ ಹೋರಾಟವನ್ನು ಮಾಡಿರುತ್ತಿದ್ದರೆ ಇಂದು ಯುಪಿಎ ಸರಕಾರ ಬಿದ್ದು ಬಿಡುತ್ತಿತ್ತು ಮಾತ್ರವಲ್ಲ, ಕರ್ನಾಟಕದಲ್ಲಿ ಬಿಜೆಪಿಯ ಹತ್ತು ಹಲವು ಮುಖಂಡರು ಜೈಲು ಪಾಲಾಗುತ್ತಿದ್ದರು. ಆದರೆ ಯಾವಾಗ ಬೆಂಬಲದ ಮಹಾಪೂರ ಹರಿದು ಬಂತೋ, ಅಲ್ಲಿಗೆ ಅಣ್ಣಾ ಹಝಾರೆಯವರ ಒಂದೊಂದೇ ಬಣ್ಣ ಹೊರ ಬೀಳುತ್ತಾ ಹೋಯಿತು.
ನರೇಂದ್ರ ಮೋದಿ ಸರಕಾರವನ್ನು ಬಾಯಿ ತುಂಬಾ ಹೊಗಳಿದುದು ಅಣ್ಣಾ ಹಝಾರೆ ಮಾಡಿದ ಮೊದಲ ತಪ್ಪು. ಎರಡನೆಯದಾಗಿ ಅವರಿಗೆ ಆರೆಸ್ಸೆಸ್‌ನೊಂದಿಗಿರುವ ಸಂಬಂಧ ಒಂದೊಂದಾಗಿ ಹೊರ ಬೀಳತೊಡಗಿದವು. ಇದರ ಜೊತೆಗೆ ಅಣ್ಣಾ ಹಝಾರೆ ಬಣದೊಳಗೇ ತಿಕ್ಕಾಟಗಳು ನಡೆದವು. ಸ್ವಾಮಿ ಅಗ್ನಿವೇಶ್ ಬಣದಿಂದ ಹೊರ ಬಿದ್ದರು. ಕಿರಣ್ ಬೇಡಿ ಮತ್ತು ಕೇಜ್ರಿವಾಲ್ ಮೇಲೆ ಆರೋಪಗಳು ಬಂದವು. ಸಂಸತ್ತನ್ನು ಹದ್ದು ಮೀರಿ ಟೀಕಿಸಿದರು. ನಿಧಾನಕ್ಕೆ ಅಣ್ಣಾ ಹಝಾರೆಯವರ ಮಾತುಗಳಲ್ಲಿ ಸರ್ವಾಧಿಕಾರಿಯ ಉದ್ಧಟತನ ಕಾಣ ತೊಡಗಿತು. ಆರೆಸ್ಸೆಸ್‌ನೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡುದು ಮಾತ್ರವಲ್ಲ, ಪ್ರಜಾಪ್ರಭುತ್ವದ ಕುರಿತಂತೆಯೇ ಅಸಹನೆ ಅವರ ಮಾತುಗಳಲ್ಲಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣ ತಿರಸ್ಕರಿಸಿ, ತಮ್ಮ ಮತುಗಳಂತೆ ಸರಕಾರ ನಡೆಯಬೇಕು ಎಂದು ಅವರು ಬಯಸಿದರು. ಇಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧ ಹೋರಾಟವೆಂದರೆ ಬರೇ ಯುಪಿಎ ಸರಕಾರದ ವಿರುದ್ಧದ ಹೋರಾ ಎಂಬಂತೆ ಬಿಂಬಿಸಿದರು. ಬಿಜೆಪಿ ಸರಕಾರವಿರುವ ರಾಜ್ಯಗಳ ಭ್ರಷ್ಟಾಚಾರದ ಕುರಿತಂತೆ ಜಾಣ ಮೌನವನ್ನು ತಾಳಿದರು. ತಾನು ಗಾಂಧೀವಾದಿಯಲ್ಲ ಎಂದು ಘೋಷಿಸಿದ ಬೆನ್ನಿಗೇ ದೇಶದ ಅರ್ಧ ಜನ ಅವರಿಂದ ಕಳಚಿಕೊಂಡಿದ್ದರು.
ನರೇಂದ್ರ ಮೋದಿಯವರ ಕುರಿತಂತೆ ಅವರು ವ್ಯಕ್ತಪಡಿಸಿದ ಒಲವು, ಗುಜರಾತ್‌ನ ಅಭಿವೃದ್ಧಿಯ ಕುರಿತು ಅವರ ನಿಲುವು ಅಣ್ಣಾ ಹಝಾರೆಯೊಳಗಿನ ಗೊಂದಲಗಳನ್ನು ತೆರೆದಿಟ್ಟವು. ಅಣ್ಣಾ ಹಝಾರೆಯವರನ್ನು ಸಂಘಪರಿವಾರ ಕುಣಿಸುತ್ತಿದೆ ಎನ್ನುವುದನ್ನು ದೇಶದ ಜನ ಬಹು ಬೇಗ ಅರಿತುಕೊಂಡರು.ಬಾಬಾ ರಾಮ್‌ದೇವ್ ಜೊತೆಗಿನ ಅವರ ಸಂಗ, ಅವರ ಕುರಿತ ಅಳಿದುಳಿದ ಭರವಸೆಯನ್ನೂ ನಾಶ ಮಾಡಿತು. ಬಾಬಾ ರಾಮ್‌ದೇವ್ ಈ ದೇಶಕ್ಕೆ ಮಾಡುತ್ತಿರುವ ವಂಚನೆ ಈಗಾಗಲೇ ಬಹಿರಂಗವಾಗಿದೆ. ಸ್ವತಃ ಕಪ್ಪು ಹಣವನ್ನು ಹೊಂದಿರುವ ರಾಮ್‌ದೇವ್‌ರಿಂದ ಆರಂಭದಲ್ಲಿ ಅಣ್ಣಾ ಹಝಾರೆ ಅಂತರವನ್ನು ಕಾಯ್ದುಕೊಂಡಿದ್ದರು.
ಆದರೆ ಯಾವಾಗ ಜನಬೆಂಬಲ ಕಡಿಮೆಯಾಯಿತೋ, ಅವರು ಬಾಬಾರ ಸಂಗವನ್ನು ಬಯಸಿದರು. ಇತ್ತೀಚೆಗೆ ವೇದಿಕೆಯಲ್ಲಿ ರಾಮ್‌ದೇವ್‌ರನ್ನು ತಬ್ಬಿಕೊಂಡರು. ಕಾರಣ ಸ್ಪಷ್ಟ. ಹಝಾರೆಯವರ ಸಭೆಗೆ ಜನ ಬೇಕಾಗಿದೆ. ಬಾಬಾ ರಾಮ್‌ದೇವ್ ಬಳಿಯಲ್ಲಿ ಅವರದೇ ಆದ ಭಕ್ತರ ತಂಡಗಳಿವೆ. ಅವರನ್ನು ಬಳಸಿಕೊಂಡು ತನ್ನ ಚಳವಳಿಯನ್ನು ಬೆಳೆಸುವ ಉದ್ದೇಶವನ್ನು ಅಣ್ಣಾ ಹಝಾರೆ ಹೊಂದಿದಂತಿದೆ. ಅಣ್ಣಾ ಹಝಾರೆ ರಾಜಕೀಯಕ್ಕಿಳಿಯುತ್ತಾರೆಯೋ ಎನ್ನುವ ಚರ್ಚೆ ನಡೆಯುತ್ತಿದೆ. ಈಗ ಮಾಡುತ್ತಿರುವುದು ಮತ್ತೇನು? ರಾಜಕೀಯವಲ್ಲವೇ? ಯುಪಿಎ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದನ್ನೇ ಅವರು ಗುರಿಯಾಗಿರಿಸಿಕೊಂಡಿದ್ದಾರೆ.
ಯುಪಿಎಯನ್ನು ಸೋಲಿಸುವುದು ಎಂದರೆ, ಅವರ ಅರ್ಥದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವುದು. ಉತ್ತರ ಪ್ರದೇಶ, ಹರ್ಯಾಣಗಳ ಚುನಾವಣೆಯ ಸಂದರ್ಭದಲ್ಲೂ ಅವರು ಇದೇ ಪ್ರಯತ್ನವನ್ನು ಮಾಡಿದ್ದರು. ಕರ್ನಾಟಕದ ಭ್ರಷ್ಟಾಚಾರದ ಕುರಿತಂತೂ ಗಾಢ ವೌನವನ್ನು ತಾಳಿದರು. ಆದುದರಿಂದ ಅವರು ನಿಧಾನಕ್ಕೆ ದೇಶದ ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ಅಣ್ಣಾ ಹಝಾರೆ ಚಳವಳಿಯನ್ನು ನಡೆಸುತ್ತಿಲ್ಲ, ಬದಲಿಗೆ ರಾಜಕೀಯ ನಡೆಸುತ್ತಿದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡರು.ಇದೀಗ ಜನ ಬೆಂಬಲವೂ ಇಲ್ಲದೆ, ಮಾಧ್ಯಮಗಳ ಬೆಂಬಲವೂ ಇಲ್ಲದೆ, ಬಾಬಾ ಜೊತೆ ಕೈಜೊಡಿಸಿಕೊಂಡು ಮತ್ತೆ ಉಪವಾಸ ಕೂತಿದ್ದಾರೆ ಅಣ್ಣಾ ಹಝಾರೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ನಿರಶನವನ್ನು ಹಮ್ಮಿಕೊಂಡಿದ್ದಾರೆ. ಆದರೆ, ಈ ನಿರಶನ ಯಶಸ್ವಿಯಾಗುವ ಸಾಧ್ಯತೆ, ದೇಶದ ಹೃದಯವನ್ನು ಮುಟ್ಟುವ ಸಾಧ್ಯತೆ ಕಡಿಮೆ. ಒಂದು ಚಳವಳಿಯ ಅಗತ್ಯವಿದೆ ಎಂದು ಜನರು ನಿರೀಕ್ಷಿಸುತ್ತಿರುವ ಕಾಲದಲ್ಲಿ ಅಣ್ಣಾ ಬೀದಿಗಿಳಿದರು. ಜನರು ಅವರನ್ನು ನಂಬಿ ಅವರ ಹಿಂದೆ ಹೋದರು. ಆದರೆ, ಅವರು ಆ ಚಳವಳಿಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡರು. ಇದರ ಪರಿಣಾಮವಾಗಿ, ಒಂದು ಹೋರಾಟದ ಸಾಧ್ಯತೆಯನ್ನೇ ಅವರು ದುರ್ಬಳಕೆ ಮಾಡಿಕೊಂಡರು. ಜನರ ವಿಶ್ವಾಸವನ್ನು ಕೊಂದು ಹಾಕಿದರು. ಇದು ನಿಜಕ್ಕೂ ವಿಷಾದನೀಯ. ಈಗ ಅಣ್ಣಾ ಹಝಾರೆ ಉಪವಾಸಕ್ಕೆ ಕೂತರೆ ಅದನ್ನು ಜನ ಗಂಭೀರವಾಗಿ ತೆಗೆದುಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...
Click here to post your views ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...