"ಗ್ಯಾಂಗ್ಸ್ ಆಫ್ ವಸ್ಸೇಪುರ್"ಅಲುಗಾಡಿಸುವ ಚಿತ್ರ!
mail-img print-img

"ಗ್ಯಾಂಗ್ಸ್ ಆಫ್ ವಸ್ಸೇಪುರ್"ಅಲುಗಾಡಿಸುವ ಚಿತ್ರ!

ಶನಿವಾರ - ಜೂನ್ -23-2012

‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ವಸ್ಸೇಪುರ್ ಮತ್ತು ಧನಬಾದ್‌ನ ಸ್ವಾತಂತ್ರ ಪೂರ್ವ ಮತ್ತು ಬಳಿಕದ ರಕ್ತದಲ್ಲಿ ಬರೆದ ದಾಖಲೆಗಳು. ದಂಡಕಾರಣ್ಯದಂತಿರುವ ವಸ್ಸೇಪುರ್ ಮತ್ತು ಧನ್‌ಬಾದ್ ಜನರ ಬದುಕಿನ ಕಪ್ಪು ರೂಪಕ ಇಲ್ಲಿನ ಕಲ್ಲಿದ್ದಲು ಗಣಿಗಳು.ಕಲ್ಲಿದ್ದಲು, ರಕ್ತ ಮತ್ತು ಸೇಡು ಇಲ್ಲಿಯ ಜನರ ಭಾಷೆ. ಸ್ವಾತಂತ್ರಪೂರ್ವದಿಂದ ಹಿಡಿದು 90ರ ದಶಕದ ವರೆಗಿನ ಇಲ್ಲಿನ ಬದುಕನ್ನು ಬಿಡಿ ಬಿಡಿಯಾಗಿ ಸಂಗ್ರಹಿಸುತ್ತಾ, ಅದನ್ನು ಸೇಡಿನ ಕರುಳಮಾಲೆಯಲ್ಲಿ ಬೆಸೆಯುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್.ಸ್ವಯಂ ನಿರ್ದೇಶಕರೇ ಈ ಚಿತ್ರ ವನ್ನು ವಸ್ಸೇಪುರ್‌ನ ಮುಸ್ಲಿಮರ ಮಹಾಭಾರತ ಇದು ಎಂದು ಕರೆದಿದ್ದಾರೆ.ಹಾಗೆ ನೋಡಿದರೆ ಈ ಚಿತ್ರಕ್ಕೆ ಒಂದು ಕತೆಯೇ ಇಲ್ಲ. ಸೇಡು ಇಲ್ಲಿನ ಮುಖ್ಯವಸ್ತು. ಆರಂಭದಲ್ಲಿ ವಸ್ಸೇಪುರ್ ಮತ್ತು ಧನ್‌ಬಾದ್‌ನ್ನು ಸುತ್ತುವರಿದಿರುವ ಕಲ್ಲಿದ್ದಲು ಮಾಫಿಯಾವನ್ನು ಅವಸರದಲ್ಲಿ ಪರಿಚಯಿಸುತ್ತಾ ಅದನ್ನು ಸುತ್ತಿಕೊಂಡ ಡಕಾಯಿತಿ ಮತ್ತು ದೇಶದ ರಾಜಕೀಯವನ್ನು ಪ್ರೇಕ್ಷಕರ ಮುಂದೆ ಕಪ್ಪು-ಬಿಳುಪಿನಲ್ಲಿ ತೆರೆದಿಡುತ್ತಾರೆ. ಅದರ ಜೊತೆ ಜೊತೆಗೆ ವಸ್ಸೇಪುರ್ ಮುಸ್ಲಿಮರ ಗ್ಯಾಂಗ್‌ಗಳ ವಂಶಾವಳಿಗಳ ಪುಟಗಳೂ ತೆರೆಯುತ್ತಾ ಹೋಗುತ್ತದೆ.

ಅಲ್ಲಿನ ಅರಣ್ಯ ಕಾನೂನನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ಎದೆ ಝಲ್ಲೆನಿಸುವಂತೆ ಮುಂದಿಡುತ್ತಾರೆ. ಹೀಗೆ ಮೊದಲ ಮೂವತ್ತು ನಿಮಿಷ ಹತ್ತು ಹಲವು ಹೆಸರುಗಳು, ಪಾತ್ರಗಳು ನಮ್ಮ ಮುಂದೆ ಪಟಪಟನೆ ಸರಿಯುತ್ತಾ ಹೋಗುತ್ತದೆ. ಕಟ್ಟಕಡೆಗೆ ಚಿತ್ರ ಶಾಹಿದ್ ಖಾನ್‌ನ ಮಗ ಸರ್ದಾರ್ ಖಾನ್(ಮನೋಜ್ ಭಾಜ್‌ಪೈ)ಯಲ್ಲಿಗೆ ಬಂದು ನಿಲ್ಲುತ್ತದೆ. ವಸ್ಸೇಪುರ್ ಡಕಾಯಿತಿ ಬದುಕಿನಿಂದ ಕಳಚಿಕೊಂಡು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಶಾಹಿದ್ ಖಾನ್(ಜೈದೀಪ್ ಅಹ್ಲಾವತ್) ತನ್ನ ಪತ್ನಿಯ ಹೆರಿಗೆಯ ಸಮಯದಲ್ಲಿ ಗಣಿ ಮಾಲಕರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಬಳಿಕ ಅಲ್ಲಿನ ಕಾರ್ಮಿಕರ ಜೊತೆ ನಿಂತು ಮಾಲಕರಿಗೆ ಸೆಡ್ಡು ಹೊಡೆಯುತ್ತಾನೆ.

ಮುಂದೆ ಇದೇ ಗಣಿಯ ಮಾಲಕ ರಾಮ್‌ಧೀರ್ ಸಿಂಗ್(ತಿಗ್ಮಾಂಶು ಧುಲಿಯಾ), ಶಾಹಿದ್ ನನ್ನು ತನ್ನ ಬಲಗೈ ಬಂಟನನ್ನಾಗಿಸಿ ಕಾರ್ಮಿಕರನ್ನು ಬಗ್ಗು ಬಡಿಯುತ್ತಾನೆ. ಕಾಲ ಸರಿದಂತೆ ಬಂಟ ಶಾಹಿದ್ ಮುಂದೊಂದು ದಿನ ತನಗೆ ಮುಳುವಾಗಬಹುದು ಎಂದು ರಾಮ್‌ಧೀರ್ ಸಿಂಗ್ ಆತನನ್ನು ಕೊಲ್ಲಿಸುತ್ತಾನೆ.ಶಾಹಿದ್‌ನ ಪುಟ್ಟ ಮಗನ ಜೊತೆಗೆ ಆತನ ಸಹಾಯಕ ಅಲ್ಲಿಂದ ಪರಾರಿಯಾಗುತ್ತಾನೆ.ಮುಂದೆ ಶಾಹಿದ್‌ನ ಪುಟ್ಟಮಗ ಸರ್ದಾರ್ ಖಾನ್ ಬೆಳೆದು ರಾಮ್‌ಧೀರ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಅಣಿಯಾಗುತ್ತಾನೆ.

ಮೇಲ್ನೋಟಕ್ಕೆ ಇಡೀ ಕತೆ ರಾಮ್‌ಧೀರ್ ಮತ್ತು ಸರ್ದಾರ್ ಖಾನ್‌ನ ನಡುವಿನ ಸೇಡಿನ ಕತೆಯಂತೆ ಭಾಸವಾದರೂ, ಅದನ್ನಿಟ್ಟುಕೊಂಡು ವಸ್ಸೇಪುರ್-ಧನ್‌ಬಾದ್ ಮುಸ್ಲಿಮರೊಳಗಿನ ರಕ್ತಸಿಕ್ತ ಬದುಕಿನ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್.1941 ಕಾಲಘಟದಲ್ಲಿ ಕಲ್ಲಿದ್ದಲ ಗಣಿಯಿಂದ ಭುಗಿಲೆದ್ದ ದ್ವೇಷದ ಬೆಂಕಿ ಕೌಟುಂಬಿಕವಾಗಿ, ರಾಜಕೀಯವಾಗಿ ಹಬ್ಬುತ್ತಾ ಹೋಗುತ್ತದೆ. ಕುರೇಶಿಗಳು ಮತ್ತು ಫಠಾಣ್ ಮುಸ್ಲಿಮರ ನಡುವಿನ ಈ ದ್ವೇಷ ಮತ್ತು ಹಿಂಸೆಯ ಮೂರು ತಲೆಮಾರುಗಳ ಕತೆಯನ್ನು ‘ಗ್ಯಾಂಗ್ಸ್‌ಆಫ್ ವಸ್ಸೇಪುರ್’ ಹೇಳುತ್ತದೆ. ಕತ್ತಲು, ಮಳೆ, ರಕ್ತ ಮತ್ತು ಕಲ್ಲಿದ್ದಲು ಇವುಗಳ ನ್ನೆಲ್ಲ ಕಶ್ಯಪ್ ತನ್ನ ನಿರೂಪಣೆಗೆ ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ.

ವಸ್ಸೇಪುರ್‌ನ ಇತಿಹಾಸವನ್ನು ಮಂಡಿಸುವಾಗ ಆರಂಭದಲ್ಲಿ ನಮಗೇ ಪಾತ್ರಗಳ ಕುರಿತಂತೆ ಗೊಂದಲಗಳಾಗತೊಡಗುತ್ತವೆ. ಇದು ಹೀಗೆ ಎಲ್ಲಿಯವರೆಗೆ ಮುಂದುವರಿಯುತ್ತದೆ ಎನ್ನುವಾಗ ಸರ್ದಾರ್ ಖಾನ್ ಮೂಲಕ ಚಿತ್ರ ಒಂದು ಉದ್ದೇಶಕ್ಕೆ ಬರುತ್ತದೆ. ಚಿತ್ರದ ಮುಖ್ಯಪಾತ್ರ(ಸರ್ದಾರ್‌ಖಾನ್)ದಲ್ಲಿ ನಟಿಸಿರುವ ಮನೋಜ್ ಬಾಜ್‌ಪೈ ಈಗಷ್ಟೇ ಕಲ್ಲಿದ್ದಲ ಗಣಿಯಿಂದ ಎದ್ದು ಬಂದವನ ಕಾಠಿಣ್ಯವನ್ನು, ಕ್ರೌರ್ಯವನ್ನು, ಅರಾಜಕತೆಯನ್ನು ಮೈಗೂಡಿಸಿಕೊಂಡು ನಟಿಸಿದ್ದಾರೆ. ಇಡೀ ಚಿತ್ರದ ಹೆಗ್ಗಳಿಕೆಯೇ ಸರ್ದಾರ್‌ಖಾನ್ ಪಾತ್ರ.

ಮಹಾಭಾರತದ ಧುರ್ಯೋಧನ ಮತ್ತು ಭೀಮನ ಪಾತ್ರಗಳನ್ನು ಹೋಲುವ ಈತನೊಳಗಿನ ಕ್ರೌರ್ಯ, ಹೆಣ್ಣುಬಾಕತನ, ಸೇಡು ಹಾಗೂ ಛಿದ್ರ ವ್ಯಕ್ತಿತ್ವ ಇಡೀ ವಸೇಪುರ್‌ನ ಅರಾಜಕ ಗುಣಲಕ್ಷಣಗಳಿಗೆ ಪೂರಕವಾಗಿದೆ. ಆತನ ಮೊದಲ ಹೆಂಡತಿ ನಗ್ಮಾ ಪಾತ್ರದಲ್ಲಿ ರಿಚಾ ಚಡ್ಡಾ ಕೂಡ ಅಷ್ಟೇ ಸ್ಫೋಟಕವಾಗಿ ಕಾಣುತ್ತಾಳೆ. ಸರ್ದಾರ್ ಖಾನ್‌ಗೆ ಸರಿಸಾಟಿಯಾಗಿ ನಟಿಸುವು ರಿಚಾ, ವಸ್ಸೇಪುರ್‌ನ ಕಲ್ಲಿದ್ದಲು ಗಣಿಯಿಂದ ಚಿಮ್ಮಿದ ಸ್ಫೋಟಕಗಳ ಚೂರಿನಂತೆ ಪ್ರತಿ ದೃಶ್ಯಗಳಲ್ಲಿ ಚಲಿಸುತ್ತಾಳೆ. ದುರ್ಗಾ ಪಾತ್ರದಲ್ಲಿ ರಿಮಾಸೇನ್‌ನ ಮೌನ ಸಿಟ್ಟು ಕೂಡ ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುತ್ತದೆ. ಸರ್ದಾರ್ ಖಾನ್‌ನ ಓರ್ವ ಮಗನಾಗಿ ನವಾಝುದ್ದೀನ್ ಸಿದ್ದೀಕ್ ಪಾತ್ರ ಸಣ್ಣದಾದರೂ ಬಹಳಷ್ಟು ಕಾಡುವಂತಹದ್ದು.

ಬಹುಶಃ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಇನ್ನಷ್ಟು ಬೆಳೆಯುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಿರ್ದೇಶಕ ಈ ಪ್ರತಿಭಾವಂತನನ್ನು ಆಯ್ಕೆ ಮಾಡಿಕೊಂಡಿರಬೇಕು. ಚಿತ್ರದ ಇನ್ನೊಂದು ಮುಖ್ಯಪಾತ್ರದಲ್ಲಿ ತಿಗ್‌ಮಾಂಶು ದುಲಿಯಾ ಕಾಣಿಸಿಕೊಂಡಿದ್ದಾರೆ. ರಾಮ್‌ಧೀರ್ ಸಿಂಗ್‌ನ ಗಾಂಭೀರ್ಯ, ತಣ್ಣಗಿನ ಕೌರ್ಯವನ್ನು ದುಲಿಯಾ ಪಳಗಿದ ನಟನಂತೆ ವ್ಯಕ್ತಪಡಿಸಿದ್ದಾರೆ.

ಜಿ.ವಿ. ಪ್ರಕಾಶ್ ಅವರ ಹಿನ್ನೆಲೆ ಸಂಗೀತ, ಸ್ನೇಹ ಖಾನ್‌ವಾಲ್ಕರ್ ಅವರ ಜಾನಪದ ಸಂಗೀತದ ಸೊಗಡು ಚಿತ್ರವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಕತೆಗೆ ಹಾಡು ಪೂರಕವಾಗಿದೆ. ಅದು ಸಂಗೀತದ ಮೂಲಕ ಇನ್ನಷ್ಟು ಆಳಕ್ಕೆ ಇಳಿಯುತ್ತದೆ. ನಮ್ಮೆಳಗಿನ ಒಳ್ಳೆಯತನ, ನಯ, ವಿನಯಗಳನ್ನೆಲ್ಲವನ್ನೂ ಒಂದು ಕ್ಷಣ ಅಲುಗಾಡಿಸಿ ಬಿಡುವ ಈ ಚಿತ್ರ ದುರ್ಬಲ ಹೃದಯದವರಿಗಲ್ಲ. ಚಿತ್ರ ಮುಗಿದಾಗಲೂ ಕತೆ ಮುಗಿಯುವುದಿಲ್ಲ. ಸೇಡಿನ ಹೆಡೆ ಮತ್ತೆ ಬಿಚ್ಚಿ ನಿಲ್ಲುತ್ತದೆ. ಇನ್ನೇನು ನಮ್ಮನ್ನು ಕಚ್ಚಿಯೇ ಬಿಡಬೇಕು ಎನ್ನುವಷ್ಟರಲ್ಲಿ ಸಿನಿಮಾಮಂದಿರದೊಳಗೆ ಬೆಳಕಾಗುತ್ತದೆ. ಚಿತ್ರ ಮುಗಿಯುವುದು ಮುಂದಿನ ಭಾಗಕ್ಕೆ ನಮ್ಮನ್ನು ತಯಾರು ಮಾಡುವ ಮೂಲಕ. ಈ ಚಿತ್ರವನ್ನು ನೋಡಿದವರು, ಇದರ ಮುಂದಿನ ಭಾಗಕ್ಕಾಗಿ ಚಿತ್ರಮಂದಿರದ ಬಾಗಿಲಲ್ಲೇ ಕುಕ್ಕರು ಕೂತರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಏನೇ ಇರಲಿ. ವಸ್ಸೇಪುರ್ ಗ್ಯಾಂಗ್‌ಗಳನ್ನು ಮುಖಾಮುಖಿಯಾಗುವ ಮುನ್ನ ನಿಮ್ಮ ಎಚ್ಚರದಲ್ಲಿ ನೀವಿರಿ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್