
ಅನಂತಮೂರ್ತಿಯವರಿಗೆ ಈಗ ಎಂಭತ್ತು. ಇದೇ ಸೆಪ್ಟಂಬರ್ ಒಂದರಿಂದ ಆರಂಭಗೊಂಡು ಇನ್ನು ಮೂರು ತಿಂಗಳ ಕಾಲ ಅನಂತಮೂರ್ತಿ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರು ಅಲ್ಲದೆ ಕಳೆದ ತಿಂಗಳಷ್ಟೆ ಅನಂತ ಮೂರ್ತಿಯವರು ಗುಲ್ಬರ್ಗದಲ್ಲಿ ಹೊಸದಾಗಿ ಆರಂಭಗೊಂಡಿರುವ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕುಲಾಧಿಪತಿಯಾಗಿ ರಾಷ್ಟ್ರಪತಿಯವರಿಂದ ನಿಯುಕ್ತಿಗೊಂಡಿದ್ದಾರೆ. ಅನಂತಮೂರ್ತಿಯವರ ಮಾರ್ಗದರ್ಶಕ ಗುಣ ಹಾಗೂ ಪ್ರಭಾವಶಾಲಿ ಹರಿತ ಚಿಂತನೆಗಳಿಗೆ ಒದಗಿಬಂದಿರುವ ಇತ್ತೀಚಿನ ಜವಾಬ್ದಾರಿಗಳು ಇವು.ಅಧ್ಯಾಪಕರಾಗಿ ಅನಂತಮೂರ್ತಿ ಕೊನೆಯ ಪಕ್ಷ ಎರಡರಿಂದ ಮೂರು ತಲೆಮಾರುಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದವರು. ಅನಂತಮೂರ್ತಿಯವರು ಅಧ್ಯಾಪಕ ರಾಗಿ ಕೆಲಸ ಆರಂಭಿಸಿದ ಕಾಲಕ್ಕೆ ಕರ್ನಾಟಕದಲ್ಲಿ ಕೇವಲ ಮೂರು ವಿಶ್ವವಿದ್ಯಾನಿಲಯಗಳಷ್ಟೇ- ಮೈಸೂರು, ಬೆಂಗಳೂರು, ಧಾರವಾಡಗಳಲ್ಲಿ-ಇದ್ದವು.ಹಾಗಾಗಿ ಅನಂತಮೂರ್ತಿಯವರ ವಿದ್ಯಾರ್ಥಿಗಳಾಗಿದ್ದ ಹಲವರು ಕರ್ನಾಟಕದ ಹಲವು ಭಾಗಗಳಲ್ಲಿ ಹೊರಗೂ, ಈಗಲೂ ಹರಡಿಕೊಂಡಿರುವವರು. ಅನಂತಮೂರ್ತಿಯವರ ಬಹುತೇಕ ವಿದ್ಯಾರ್ಥಿಗಳು ಅವರಿಂದ ಗಾಢವಾಗಿ ಪ್ರಭಾವಿತರಾದವರು. ಹೀಗೆ,ಅಧ್ಯಾಪಕಾಗಿ ಅನಂತಮೂರ್ತಿ ಬೀರಿರುವ ಪ್ರಭಾವ ಬಹಳ ವಿಶೇಷವಾದುದು, ವ್ಯಾಪಕವಾದುದು.
ವೊದಲಿಗೆ, ಅನಂತಮೂರ್ತಿ ಅತ್ಯುತ್ತಮ ಕೇಳುಗ ಹಾಗೂ ಓದುಗ. ಬಹಳ ದೊಡ್ಡ ಸಂಖ್ಯೆಯ ಕಿರಿಯ (ಮತ್ತು ಹಿರಿಯ) ಬರಹಗಾರರು, ಮಾರ್ಗದರ್ಶನ ಹಾಗೂ ಮುನ್ನುಡಿಗಳ ರೂಪದಲ್ಲಿ ಚಿಂತನೆಗಳ, ಸೂಕ್ಷ್ಮ ಗ್ರಹಿಕೆಯ ಪಾಠಗಳನ್ನು ಅನಂತ ಮೂರ್ತಿಯವರಿಂದ ಅನುಭವಿಸಿದವರು. ಹೊಸದಾಗಿ ಏನನ್ನಾದರೂ ಬರೆದವರು, ಹೊಸ ಚಿಂತನೆಗಳೊಂದಿಗೆ ಪ್ರಯೋಗ ನಡೆಸುತ್ತಿರುವವರು, ಇದನ್ನೊಮ್ಮೆ ಅನಂತ ಮೂರ್ತಿಯವರೊಡನೆ ಮೊದಲಿಗೆ ಹಂಚಿಕೊಳ್ಳಬೇಕು ಎನ್ನಿಸಿ ಹಲವರು ದೂರದ ಊರುಗಳಿಂದ ಕೂಡಾ ಅವರನ್ನು ಹುಡುಕಿಕೊಂಡು ಬರುತ್ತಾರೆ. ಇದು ಪರಸ್ಪರ ಕೂಡಾ, ಅನಂತಮೂರ್ತಿಯವರಿಗೂ ತಮ್ಮ ವಿಚಾರಗಳನ್ನು ಸದಾ ಹಲವರ ನಿಕಷಕ್ಕೆ ಒಡ್ಡುವ ಹಂಬಲ.
ಹೀಗೆ ಅನಂತ ಮೂರ್ತಿಯವರ ಸುತ್ತ ವಿಚಾರವಂತರ ಒಂದು ಸಂತೆಯೇ ಸದಾ ನೆರೆದಿರುತ್ತದೆ. ಇದು, ಮೈಸೂರು ಮೂಲವಾಗಿ ಆರಂಭಗೊಂಡ ಒಂದು ವಿಶೇಷ ವಿದ್ಯಮಾನ: ಕನ್ನಡದ ಕೆಲವೇ ಕೆಲವು ಹಿರಿಯರು ಈ ರೀತಿಯ ವಿಶೇಷ ಗೌರವಕ್ಕೆ ಪಾತ್ರರಾಗಿ ‘ಮೇಷ್ಟ್ರು’ ಎನ್ನಿಸಿಕೊಂಡವರು; ಉದಾ ಹರಣೆಗೆ, ಅನಂತಮೂರ್ತಿಯವರ ಸಮಕಾಲೀನರಲ್ಲಿ ಲಂಕೇಶ್ ಕೂಡ ಹೀಗೆ ‘ಮೇಷ್ಟ್ರು’. ಇದೊಂದು ವಿಶೇಷ ಅಭಿದಾನ ‘ಮೇಷ್ಟ್ರು’ ಎಂದರೆ ಕನ್ನಡದ ಚಿಂತನ ಲೋಕದಲ್ಲಿ ಕನ್ನಡ ಸಾಹಿತ್ಯದ ನವೋದಯ ಕಾಲದಿಂದ ಆರಂಭಗೊಂಡು ನಮ್ಮ ಕಾಲಕ್ಕೂ ಹರಿದು ಬಂದಿರುವ, ಹೊಸದೊಂದು ಪಾತ್ರ. ಅನಂತಮೂರ್ತಿಯವರು ಇದ್ದಲ್ಲಿ ಮಾತನಾಡಲು ಜನವಿಲ್ಲ ಎಂಬ ಪರಿಸ್ಥಿತಿ ಉಂಟಾಗುವುದಿಲ್ಲ. ಅಂಥದ್ದೊಂದು ಪರಿಸ್ಥಿತಿ ನಿರ್ಮಾಣವಾದರೆ ಅನಂತಮೂರ್ತಿ ಖಂಡಿತ ಚಡಪಡಿಸಿ ಹೋದಾರು.
ಅದೇ ಹಳೆಯ ವಿಚಾರಗಳನ್ನು ಹೊಸ ಬೆಳಕಿನಲ್ಲಿ ಮೇಲಿಂದ ಮೇಲೆ ಮೆಲುಕು ಹಾಕುವುದು, ಆ ವಿಚಾರಗಳಿಗೆ ಹೊಸದಿಕ್ಕು ದೆಸೆಗಳನ್ನು ಅರಸುವುದು ಅವರಿಗೆ ಸ್ವಭಾವವೇ ಆಗಿದೆ. ಅವರ ಬಹುಪಾಲು ಬರವಣಿಗೆ ಮತ್ತು ಉಪನ್ಯಾಸಗಳು ಹೀಗೆ ಮೊದಲೇ ಹಲವು ಸಲ ಹಲವರ ಸಮ್ಮುಖದಲ್ಲಿ ಮಂಥನಗೊಂಡು ಪಾಕಗೊಳ್ಳುವಂಥವು. ಸೂಕ್ಷ್ಮವಾಗಿ ಕೇಳಿಸಿಕೊಳ್ಳದಿದ್ದರೆ, ಅವರು ಹೇಳಿದ್ದನ್ನೇ ಹೇಳುತ್ತಿದ್ದಾರೆ ಎಂಬಷ್ಟರ ಮಟ್ಟಿಗೆ ಅವರ ವಿಚಾರಗಳು ಹಲವರ ಕಿವಿಗೆ ವೊದಲೇ ತಲುಪಿರುತ್ತವೆ. ಅನಂತಮೂರ್ತಿಯವರು ರೂಢಿಸಿ ಬೆಳೆಸಿ ಕೊಂಡಿರುವ ಈ ಸ್ವಭಾವದಿಂದಾಗಿಯೇ, ಅವರು ಪ್ರತಿಪಾದಿಸುವ ವಿಚಾರ ಗಳಿಗೆ ಸಾಮುದಾಯಿಕ ಗುಣವೊಂದು ಪ್ರಾಪ್ತವಾಗಿದೆ. ಅಲ್ಲಿ ಹಲವು ಸ್ವರಗಳ ಮೇಳವಿರುತ್ತದೆ.
ಎಲ್ಲರೂ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾ, ಯಾರ ಮಾತನ್ನು ಯಾರೂ ಕೇಳಿಸಿಕೊಳ್ಳದಿರುವ ಅವರವರ ಸರಿತನಗಳ ಮೇಲಾಟದ ಸಂತೆ ಗದ್ದಲದ ನಮ್ಮ ಕಾಲದಲ್ಲಿ ಇದೊಂದು ವಿಶೇಷ. ಅನಂತಮೂರ್ತಿಯವರ ಒಟ್ಟಾರೆ ಬರಹಗಳಲ್ಲಿ ಅವರ ಕತೆ, ಕಾದಂಬರಿಗಳಲ್ಲಿ ಕೂಡಾ, ಅವರ ಉಪಸ್ಥಿತಿಯಿರುವುದು ಹೀಗೆ ಸಂವಾದ ನಡೆಸುವಂತವರಾಗಿಯೇ ಆಧುನಿಕತೆ ಮತ್ತು ಪರಂಪರೆ ಎಂದು ಸಾಮಾನ್ಯವಾಗಿ ಕರೆಯಿಸಿಕೊಳ್ಳುತ್ತಾ ಬಂದಿರುವ ವಿಚಾರ ಮತ್ತು ಆಚಾರಗಳ ಸಂಘರ್ಷವೇ ಕೇಂದ್ರವಾಗಿದ್ದ ಕಾಲಘಟ್ಟದಲ್ಲಿ ಅನಂತಮೂರ್ತಿಯವರು ತಮ್ಮ ಬರವಣಿಗೆಯನ್ನು ಆರಂಭಿಸಿದವರು.
ಯುರೋಪಿಯನ್ ಮೂಲದ ವಸಾಹತು ಶಾಹಿಯಿಂದ ತಳಮಟ್ಟದ ತನಕ ಪಲ್ಲಟಗಳನ್ನು ಕಂಡ ಸಮಾಜವೊಂದು ಹೊಸ ಸ್ವಾಸ್ಥವೊಂದನ್ನು ತೀವ್ರವಾಗಿ ಹಂಬಲಿಸುತ್ತಿದ್ದ ಕಾಲ ಅದಾಗಿತ್ತು.ಯುರೋಪಿಯನ್ ಅಥವಾ ಆಧುನಿಕ ಎಂದು ಕರೆಯಿಸಿಕೊಂಡ ವಿಚಾರ ಆಚಾರಗಳ ಸಮ್ಮುಖದಲ್ಲಿ, ಕೇವಲ ಕೀಳರಿಮೆಗಳನ್ನು ನೀಗಿಸಿಕೊಳ್ಳುವು ದಕ್ಕಷ್ಟೇ ಅಲ್ಲದೇ, ಕುಸಿಯುತ್ತಿರುವ ನಿಂತನೆಲವನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿಯೂ ಅದು ತುರ್ತಿನ ಅಗತ್ಯವಾಗಿತ್ತು.ವಸಾಹತು ಶಾಹಿಯಿಂದ ತಕ್ಕಮಟ್ಟಿನ ಬಿಡುಗಡೆಯನ್ನು ಒಂದು ಗಮನಾರ್ಹ ಲೇಖನದ ಹೆಸರು "the novelist as teacher.'’ ಅಂದರೆ, ಜಾಗತಿಕವಾಗಿ ಕೂಡಾ, ಅನಂತಮೂರ್ತಿಯಂಥವರು ಬರೆಯಲು ಶುರುಮಾಡಿದ ಕಾಲಘಟ್ಟದಲ್ಲಿ, ಪ್ರಮುಖವಾಗಿ ಆಫ್ರಿಕಾ ಮತ್ತು ಏಷ್ಯಾದ ದೇಶದ ಸಮಾಜಗಳಲ್ಲಿ, ಬರಹಗಾರರಾದವರು ನಿರ್ವಹಿಸಬಹುದಾದ ದೊಡ್ಡ ಜವಾಬ್ದಾರಿ, ಒಂದು ದೃಷ್ಟಿಯಿಂದ ನೋಡಿದರೆ, ‘ಮೇಷ್ಟ್ರರ’ ಕೆಲಸವೇ ಆಗಿತ್ತು.
ಪರಂಪರೆ ಆಧುನಿಕತೆಗಳೆಂಬ ಎರಡು ಏಕಶಿಲಾಕಾರಗಳಾಗಿ ಒಡೆದು ನಿಂತ ಪ್ರಕ್ಷುಬ್ಧ ಸಮಾಜಗಳಲ್ಲಿ ಎರಡೂ ಕಡೆಗೂ ಹೊಕ್ಕು ಬಳಕೆಯಿರುವ, ಆದರೆ ಈ ರೀತಿಯ ಸರಳ ಏಕಾಕಾರಗಳನ್ನು ನಿರಾಕರಿಸುವ ವಾಂಛೆಯಿರುವ ಮನಸ್ಸು ಕಟ್ಟಲು ಹಂಬಲಿಸುವ ಸಮಾಜದ ಸ್ವರೂಪ ಹೊಸ ಕನಸುಗಾರಿಕೆ ಮತ್ತು ಸೂಕ್ಷ್ಮಗಳ ಚೇತೋಹಾರಿ ಗುಣಗಳಿಂದ ಮಾಡಲ್ಪಟ್ಟಿದ್ದು ಆ ಕಾರಣದಿಂದಲೇ, ಚಿನುವಾ ಅಚಿಬೆಯವಾದದಿಂದ ಕೂಡ ಸ್ಪಷ್ಟವಾಗುವಂತೆ,ಆಫ್ರಿಕಾ ಮತ್ತು ಏಷ್ಯಾಗಳಂಥ, ಅದರಲ್ಲೂ ಪೂರ್ವವಸಾಹತುಗಳಾಗಿದ್ದ, ಸಮಾಜಗಳಲ್ಲಿ ಯಾವ ಕಲಾವಿದರಿಗೂ ತಾವು ಕೇವಲ ಕಲಾವಿದರು ಎನಿಸಿಕೊಳ್ಳುವ ಶುಚಿರ್ಭೊತ ಪಾತ್ರ ಲಭ್ಯವಾಗಲೇ ಇಲ್ಲ.
ಸಾಮಾಜಿಕ ವಿಪ್ಲವಗಳ ರಾಡಿಯಲ್ಲಿ ಕೈ ಮೈ ಕೊಳೆ ಮಾಡಿಕೊಂಡ ವರು ಮಾತ್ರ ಇಂಥ ಸಮಾಜಗಳಲ್ಲಿ ಕಲಾವಿದರಾಗಲು ಸಾಧ್ಯವಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಮಾಜದ ಪರಿವರ್ತನ ಶೀಲತೆ ಮತ್ತು ಕ್ರಿಯಾಶೀಲತೆಗಳಿಗೆ ಮೈ ಮರಿದು ದುಡಿಯದೇ “ಕಲೆ ” ಎಂಬುದನ್ನೇ ಪರಿಭಾವಿಸುವುದು ಅಸಾಧ್ಯವಿತ್ತು. ಅನಂತಮೂರ್ತಿಯವರ ಹಿಂದಿನ ತಲೆಮಾರಿನಿಂದ ಆರಂಭಗೊಂಡು ಕರ್ನಾಟಕಕ್ಕೆ, ಭಾರತಕ್ಕೂ, ಇಂಥದ್ದೊಂದು ಹೊಸ ಬಗೆಯ ಕಲೆಗಾರಿಕೆ ಲಭ್ಯವಾಗಿದೆ. ಜಾಗತೀಕರಣ ಹಾಗೂ ಅದರದ್ದೇ ಮುದ್ದು ಕೂಸಾದ ಕೋಮುವಾದ, ಮೂಲಭೂತವಾದಗಳಲ್ಲಿ ಜರ್ಝರಿತಗೊಳ್ಳುತ್ತಿರುವ, ರಕ್ತಸಿಕ್ತ ಗೊಳ್ಳುತ್ತಿರುವ ಈ ದಿನಗಳಲ್ಲೂ ನಾವು ಆಗಾಗ ನೆನಪಿಸಿಕೊಳ್ಳುವ ಸಾಮುದಾಯಿಕ ವಿವೇಕವೆಂಬುವುದು ಹೀಗೆ ಕಟ್ಟಲ್ಪಟ್ಟಂಥದ್ದು. ಅನಂತಮೂರ್ತಿಯವರನ್ನೂ ಒಳ ಗೊಂಡಂತೆ ಕನ್ನಡದ ಬಹುತೇಕ ಹಿರಿಯ ಕಲಾವಿದರು ಕೂಡಿ ದುಡಿದು ಕಟ್ಟಿದ್ದರಿಂದಲೆ ವಿವೇಕಯುತ ಸಮಾಜ ಎಂಬುದೊಂದು ನಮ್ಮ ಹಂಬಲಗಳಿಗೆ ಒದಗಿ ಬರುವ ಉಜ್ವಲ ಕನಸಾಗಿ ಈಗಲೂ ಜೀವಂತವಾಗಿದೆ.
ಈ ಪಾತ್ರ ವನ್ನು ಕೆಲವೊಮ್ಮೆ ‘ಸಂಸ್ಕೃತಿ ನಾಯಕ ’ ಎಂದು ಕರೆಯುವ ರೂಢಿಯಿದೆ. ಅದು ಅಷ್ಟೇನೂ ಉತ್ತಮ ಅಭಿದಾನವಾಗಿ ನನಗೆ ಕಾಣಿಸುವುದಿಲ್ಲ. ‘ಮೇಷ್ಟ್ರು’ ಎಂಬುದೇ ಹೆಚ್ಚು ಸೂಕ್ತವಾದ ಅಭಿದಾನವಿರಬಹುದು. ಅದೇನೇ ಇರಲಿ ಈಗ ಕಾಲ ಗುರುತು ಸಿಗಲಾರದಷ್ಟು ಬದಲಾಗಿದೆ.ಯಾವ ಊರುಗಳೂ ತಮ್ಮ ಹಳೆಯ ಚಹರೆಗಳನ್ನು ಉಳಿಸಿ ಕೊಂಡಿರುವಂತೆ ಕಾಣಿಸುತ್ತಿಲ್ಲ. ಉಳಿಸಿಕೊಂಡಿದ್ದರೆ, ಅವು ಈಗ ವಿಕಾರವಾಗಿಯೂ, ಹಾಸ್ಯಾಸ್ಪದವಾಗಿಯೂ, ಪಳೆಯುಳಿಕೆ ಗಳಂತೆಯೂ ಮಾತ್ರವೇ ಉಳಿದಿರಬಹುದು. ಜನರೂ ಕೂಡ ಅಷ್ಟೇ; ಹೊಸ ಸ್ವರೂಪದ ವಿಭಜನೆಗಳು ನಮ್ಮನ್ನು ಈಗ ಆಳುತ್ತಿವೆ. ಜಗತ್ತೇ ಒಂದು ವ್ಯಾಪಕ ಮಾರುಕಟ್ಟೆಯಾಗಿ ಪುನರ್ನಿಮಿಸಲ್ಪಡುತ್ತಿರುವ ಆಕ್ರಮಣಶೀಲ ಬಂಡವಾಳ ಶಾಹಿಯ ಈ ಕಾಲದಲ್ಲಿ, ಪ್ರಭಾವ ಶಾಲಿಯಾಗಿರುವ ಒಂದು ವರ್ಗದ ಎಲ್ಲರಿಗೆ ಎಲ್ಲವೂ ಗೊತ್ತು.
ಹಾಗಾಗಿ ಯಾವುದಕ್ಕೂ ಬೆಲೆಯಿಲ್ಲ. ಎಲ್ಲ ವಿವೇಕಗಳೂ ಚಿಲ್ಲರೆ ಮಾತುಗಳಾಗಿ ಕೇಳುವಷ್ಟು ಪುನರಾವರ್ತನೆಗಳಿಗೆ ಪಕ್ಕಾಗುತ್ತಿವೆ. ಹಾಗೆಂದು, ಈ ಆಕ್ರಮಣಶೀಲತೆಯಲ್ಲಿ ಮೂಲೆಗೊತ್ತಲ್ಪಡುತ್ತಿರುವ, ನಿಂತ ನೆಲದಲ್ಲೇ ಪರಕೀಯರೂ, ಭಿಕಾರಿಗಳೂ ಆಗುತ್ತಿರುವ ಬಹುಸಂಖ್ಯಾಂತ ಜನರಿಗೆ ಈ ಕಾಲದಲ್ಲಿ ಎಲ್ಲವೂ ತುಟ್ಟಿ. ಬೆಲೆಕಳೆದುಕೊಂಡ, ಚಿಲ್ಲರೆ ತನವನ್ನು ರೂಢಿಸಿಕೊಂಡ ವಿಚಾರಗಳೂ, ಸಿದ್ಧಾಂತಗಳೂ ಅವರಿಂದ ನರಬಲಿಯನ್ನೇ ಬೇಡುತ್ತಿವೆ.
ಉದಾಹರಣೆಗೆ, ಅಭಿವೃದ್ಧಿ ಎಂಬ ಪರಿಕಲ್ಪನೆಯಾಗಲೀ, ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಯಾಗಲೀ, ಧರ್ಮ ಎಂಬ ಪರಿಕಲ್ಪನೆಯಾಗಲೀ ಈ ಕಾಲದಲ್ಲಿ ಬೇಡುತ್ತಿರುವಷ್ಟು ನರಬಲಿ ಬಹುಶಃ ಈ ಕಾಲದ್ದೇ ವಿಶೇಷ. ಕಲಿಗಾಲವೆಂದರೆ ಇದೇ ಇರಬಹುದು. ಮೇಲೆ ನಾನು ಪ್ರಸ್ತಾಪಿಸಿದ ಈ ಮೂರು ಪರಿಕಲ್ಪನೆಗಳು ಆಕ್ರಮಣ ಶೀಲ ಬಂಡವಾಳಶಾಹಿ ಹುಟ್ಟಿಸಿ ಸಾಕಿ ಪೋಷಿಸುತ್ತಿರುವಂಥ ನಮ್ಮ ಕಾಲದ ಆಕ್ರಮಣಶೀಲವಾದ, ರಕ್ತದ ರುಚಿ ಅಲ್ಲಿಗೆ ಹತ್ತಿರುವ ಸಿದ್ಧಾಂತಗಳು. ಈ ಮೂರು, ಒಂದು ಕಡೆಯಿಂದ, ಮೂರೂ ಬಿಟ್ಟವರನ್ನು ಪ್ರಭುತ್ವದ ಪಲ್ಲಕ್ಕಿಗಳಲ್ಲಿ ಮೆರೆದಾಡಿಸಿದರೆ, ಇನ್ನೊಂದು ಕಡೆಯಿಂದ ಅಪಮಾನ ಮತ್ತು ದಾರಿದ್ರ ಗಳೆಂಬ ಗುರುತು ಚೀಟಿಗಳನ್ನು ಬಹುಸಂಖ್ಯಾತರಿಗೆ ಹಂಚುತ್ತಿವೆ.
ಈ ಅತ್ಯಾಧುನಿಕ ವಿಚಾರಗಳನ್ನು ಎದುರಿಸಲು, ಎದುರಿಸಬಯಸುವವರಿಗೆ, ದೋರ್ದಂಡ ಬಲವೇ ಬೇಕು. ಜಾರ್ಜ್ ಲುಕಾಕ್ ಹೇಳುವಂತೆ, ನಮ್ಮ ಈ ಕಾಲದಲ್ಲಿ ಸರ್ವಸಾಮಾನ್ಯವಾದ ಒಂದು ಮೇಜನ್ನು ತಯಾರಿಸಲಿಕ್ಕೂ ಕೂಡ ಮೈಕೆಲ್‌ಏಂಜಲೋನ ಪ್ರತಿಭೆಯೇ ಬೇಕು. ಆಕ್ರಮಣಶೀಲ ಬಂಡವಾಳ ಶಾಹಿಯು ತಯಾರಿಸುತ್ತಿರುವ ಧರ್ಮ, ದೇಶ ಭಕ್ತಿಗಳೆಂಬ ಹಾಲಾಹಲ ಕುಡಿದು ಬದುಕುಳಿಯುವುದು ಎಷ್ಟು ಕಷ್ಟವೆಂಬುವುದು ಮೊನ್ನೆ ಮೊನ್ನೆ ಹೊರ ಬಂದ ನರೋಡಾಪಾಟಿಯ ತೀರ್ಪಿನ ಸಂದರ್ಭದಲ್ಲಿ ದೀರ್ಘಕಾಲದ ಹೋರಾಟದಲ್ಲಿ ತೊಡಗಿರುವ ತೀಸ್ತಾ ಸೆಟಲ್‌ವಾಡ್ ಮತ್ತು ಇತರರಿಗೂ, ಅಭಿವೃದ್ಧಿ ಎಂಬ ಹಾಲಾಹಲವನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಲು ಹವಣಿಸುತ್ತಾ ಜಲಸತ್ಯಾಗ್ರಹದಲ್ಲಿ ತೊಡಗಿರುವ ಮೇಧಾ ಪಾಟ್ಕರ್ ಮತ್ತು ಇತರರಿಗೂ, ಮೇಲಿಂದ ಮೇಲೆ ಅನು ಭವಕ್ಕೆ ಬರುತ್ತಲೇ ಇದೆ.
ಬೇರೆ ಮಾತುಗಳಲ್ಲಿ ಮತ್ತೊಮ್ಮೆ ಹೇಳುವುದಾದರೆ, ನಮ್ಮ ಈ ಕಾಲ ಗುರುತು ಸಿಗಲಾರದಷ್ಟು ಬದಲಾಗಿದೆ. ಅದು ನಿರೀಕ್ಷಿಸುವ ಜೀವಪೋಷಕ ಪಾತ್ರಗಳೂ, ಜವಾಬ್ದಾರಿಗಳೂ ಬದಲಾಗಿವೆ. ನಾನು ಈ ಮೇಲೆ ಪ್ರಸ್ತಾಪಿಸಿದ ಮೂರಣ ಅತ್ಯಾಧುನಿಕ ವಿಕಾರಗಳಿಗೆ ನೇರವಾಗಿ ಎದುರಾಗದೇ ನಾವ್ಯಾರೂ ಮಾನವಂತರಾಗಿ ಉಳಿಯುವುದು ಸಾಧ್ಯವಿಲ್ಲ. ಹಾಗೂ, ಹೀಗೆ ಎದುರಾಗುವುದಕ್ಕೆ ಮಾನವಂತರಾಗಿ ಉಳಿಯುವುದಕ್ಕೆ ಅಗತ್ಯವಿರುವ ಶಕ್ತಿ ಸಾಮರ್ಥ್ಯಗಳು ಇನ್ನೂ ತಯಾರಾಗುತ್ತಲೇ ಇರುವ, ಪ್ರಯೋಗದ ಹಂತದಲ್ಲೇ ಇರುವ ಹೊಚ್ಚಹೊಸ ಶಕ್ತಿ ಸಾಮರ್ಥ್ಯಗಳಾಗಿವೆ. ಅನಂತಮೂರ್ತಿಯವರು ಈ ಹೊಸ ಸಾಮರ್ಥ್ಯಗಳ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಹಾಗಾಗಿಯೇ ಈಗಲೂ ಪ್ರಸ್ತತರಾಗಿ ಬೆಳೆಯುತ್ತಿರುವವರು. ಹಿಂದೆ ಅವರೇ ಸಂಪಾದಿಸಿದ ಕೀರ್ತಿಯಲ್ಲಾಗಲಿ, ಅವರೇ ಕಟ್ಟಿಕೊಂಡ ಯಶಸ್ವಿ ಚಿಂತನೆಗಳ ಮಾದರಿಗಳಲ್ಲಾಗಲೀ ಅವರು ಕಳೆದು ಹೋಗಲಿಲ್ಲ. ಬರಿಯ ಮಾನವಂತಿಕೆಯ ಹಂಬಲವಷ್ಟೇ, ಇಂದಂತೂ, ಯಾರನ್ನೂ ಮಾನವಂತರಾಗಿ ಉಳಿಯಗೊಡು ವಷ್ಟು ಔದಾರ್ಯ ನಮ್ಮ ಕಾಲದಲ್ಲಿ, ಮರಳಿ ಪಡೆಯಲಾರದಂತೆ, ಕಳೆದು ಹೋಗಿದೆ. ನಮಗೆ ಎದುರಾಗಿರುವ ಅತ್ಯಾಧುನಿಕ ವಿಕಾರಗಳನ್ನು ವಿಶ್ಲೇಷಿಸಿ, ಅರ್ಥೈಸುವ, ಆ ಮೂಲಕ ಸಣ್ಣ ಪುಟ್ಟ ಜಯಗಳನ್ನು ಜಯಿಸುತ್ತಿರುವ ಪ್ರಯೋಗಗಳ ಈಗಿನ ಕಾಲದ ವಿದ್ಯಮಾನಗಳಲ್ಲಿ ಅನಂತಮೂರ್ತಿ ಮನಪೂರ್ವಕವಾಗಿಯೂ ಹೃದಯ ಪೂರ್ವಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರ ಸ್ವರೂಪ ಬೀದಿ ಹೋರಾಟದಂತೆ ಕಾಣದಿದ್ದರೂ, ಆಶಿಶ್ ನಂದಿ ಹೇಳುವಂತೆ ಈ ಕಾಲದ ಮಾನವಂತ ಬುದ್ಧಿಜೀವಿಯೂ ಕಲಾವಿದನಾಗಿಯೂ, ಕಲಾವಿದನಾಗಿಯೇ, ಬೌದ್ಧಿಕ ಬೀದಿ ಹೋರಾಟಗಾರರೇ (intellectual street fighter) ಹೌದು.
ಎಲ್ಲವನ್ನೂ ಬೀದಿಗೆ ಎಳೆಯುತ್ತಿರುವ ಆಧುನಿಕ ಬಂಡವಾಳಶಾಹಿಯ ಆಕ್ರಮಣಶೀಲತೆಯೂ, ತನ್ನ ಕೈ ಮೀರಿ ದಯಪಾಲಿಸಿರುವ ಹೊಸ ಪಾತ್ರ ಇದು. ಕನ್ನಡದಲ್ಲಿ ಅನಂತಮೂರ್ತಿ ಈ ಹೊಸ ಪಾತ್ರವನ್ನು ಈಗ ಹೆಚ್ಚು ಕಡಿಮೆ ಎರಡು ದಶಕಗಳಿಂದ ರೂಢಿಸಿಕೊಳ್ಳುತ್ತಾ, ನಿರ್ವಹಿಸುತ್ತಾ ಬರುತ್ತಿದ್ದಾರೆ. ಇವತ್ತು ಅತ್ಯುತ್ತಮವಾಗಿಯೇ ಬರೆಯುತ್ತಿರುವ, “ಕಲಾವಿದ” ರಾಗಿರುವ ಕನ್ನಡ ಹೊಸ ತಲೆಮಾರು ಈ ಹೊಸ ಎಚ್ಚರವನ್ನು ಹೊಂದಿಲ್ಲ ಎಂಬ ಕನ್ನಡದ ದಾರಿದ್ರ್ಯವನ್ನು ನೆನೆದರೆ, ಅನಂತಮೂರ್ತಿಯ ಚಿಂತನೆಗಳಿಗೆ ಹೊಸ ಅವತಾರ ತಳೆದ ಮರುಹುಟ್ಟು ಪಡೆದ ಪ್ರಸ್ತುತತೆಯಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...