
2010 ನವೆಂಬರ್ನಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಡಿಪಾಯ ಹಾಕಲಾಗಿತ್ತು. ಕ್ರೀಡಾಕೂಟದಲ್ಲಿ ಗೆದ್ದ ಪದಕಗಳು 101;ಅವುಗಳ ಪೈಕಿ 38 ಚಿನ್ನದ ಪದಕಗಳು; ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಕ್ರೀಡಾಳುಗಳು ಇಂಗ್ಲೆಂಡನ್ನು ಕೆಳಗೆ ತಳ್ಳಿ ಪದಕ ಪಟ್ಟಿಯಲ್ಲಿ ಎರಡನೆ ಸ್ಥಾನ ಸಂಪಾದಿಸಿ ತಮ್ಮ ಸಾಧನೆಯ ಮೂಲಕ ಜಗತ್ತಿಗೆ ಹೇಳಿಕೆಯೊಂದನ್ನು ನೀಡಿದ್ದರು.ಆದಾಗ್ಯೂ, ಟೀಕಾಕಾರರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿನ ತುಲನಾತ್ಮಕವಾಗಿ ಕಡಿಮೆ ಮಟ್ಟದ ಸ್ಪರ್ಧೆಯತ್ತ ಗಮನ ಸೆಳೆದಿದ್ದರು ಹಾಗೂ ನಿಜವಾದ ಪರೀಕ್ಷೆ 2010ರ ನವೆಂಬರ್ನಲ್ಲಿ ಚೀನಾದ ಗುವಾಂಗ್‌ಝೂನಲ್ಲಿ ನಡೆಯಲಿರುವ ಏಶ್ಯನ್ ಕ್ರೀಡಾಕೂಟ ಎಂದು ಹೇಳಿದ್ದರು.ಏಶ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‌ಗಳು ನಿರಾಶಾದಾಯಕ ಸಾಧನೆಗೈದರು.ಏಶ್ಯನ್ ಗೇಮ್ಸ್‌ನ ಮೊದಲ ವಾರದಲ್ಲಿ ಭಾರತೀಯರ ಸಾಧನೆಯನ್ನು ನೋಡಿದಾಗ ಟೀಕಾಕಾರರ ಭವಿಷ್ಯವನ್ನು ನಿಜವೆಂದೇ ನಂಬಬೇಕಾದ ಪರಿಸ್ಥಿತಿ ಎದುರಾಯಿತು.ಆದರೆ, ಕ್ರೀಡೆಯಲ್ಲಿ ಕೊನೆಯ ಪದಕವನ್ನು ಗೆಲ್ಲುವವರೆಗೂ ಯಾವುದೇ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ.

ಏಶ್ಯನ್ ಗೇಮ್ಸ್‌ನ ಮೊದಲ ವಾರದ ಕೊನೆಯಲ್ಲಿ ಭಾರತ ಕೇವಲ ಒಂದು ಚಿನ್ನದ ಪದಕವನ್ನು ಪಡೆದಿತ್ತು.ಆ ಪದಕವನ್ನು ಗೆದ್ದವರು ಪಂಕಜ್ ಅಡ್ವಾಣಿ ಸ್ನೂಕರ್‌ನಲ್ಲಿ.ಆದರೆ, 2010 ನವೆಂಬರ್ 21ರಂದು ಒಮ್ಮೆಲೆ ಮೂರು ಪದಕಗಳನ್ನು ಗೆಲ್ಲುವ ಮೂಲಕ ಮರುಜೀವ ಪಡೆಯಿತು. ಪುರುಷರ ಡಬಲ್ ಟ್ರಾಪ್‌ನಲ್ಲಿ ರಂಜನ್ ಸೋದಿ ಚಿನ್ನಕ್ಕೆ ಗುರಿಯಿಟ್ಟರೆ, ಪ್ರೀಜಾ ಶ್ರೀಧರನ್ ಮತ್ತು ಸುಧಾ ಸಿಂಗ್ ಕ್ರಮವಾಗಿ 10,000 ಮೀ. ಮತ್ತು 3,000 ಮಿ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ಹಾಗೂ ಬಾಕ್ಸರ್‌ಗಳು ಅಮೋಘ ಸಾಧನೆ ತೋರಿಸುವುದರೊಂದಿಗೆ, ದೋಹದಲ್ಲಿ 2006ರಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 10 ಚಿನ್ನ ಪಡೆದ ಸಾಧನೆಯನ್ನು ಪುನರಾವರ್ತಿಸಬಹುದು ಎಂಬ ನಿರೀಕ್ಷೆ ಹುಟ್ಟಿತು.ಕೊನೆಯದಾಗಿ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಗಳಿಸಿದ ಚಿನ್ನ (ಭಾರತದ 14ನೆ ಚಿನ್ನ) ಅದು ಇರುವುದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಹೊಳೆಯಿತು.
75 ಕೆಜಿ ವಿಭಾಗದಲ್ಲಿ ಹೆಬ್ಬೆರಳು ಮುರಿದರೂ ಎದೆಗುಂದದ ವಿಜೇಂದರ್ ಆ ಚಿನ್ನವನ್ನು ಗೆದ್ದರು. ಈ ಚಿನ್ನದ ಸಹಾಯದಿಂದ ಭಾರತ ಪದಕಪಟ್ಟಿಯಲ್ಲಿ ಅಭೂತಪೂರ್ವ ಆರನೆ ಸ್ಥಾನಕ್ಕೇರಿತು. ಪ್ರತಿ ಹೆಜ್ಜೆಯಲ್ಲಿ ಆಡಳಿತಾತ್ಮಕ ನಿರ್ಲಕ್ಷ ಹಾಗೂ ಸರಕಾರಿ ಕೆಂಪು ಪಟ್ಟಿಯನ್ನು ಎದುರಿಸಿಯೂ ಸಾಧನೆಗೈದ ಭಾರತೀಯ ಕ್ರೀಡಾಳುಗಳ ಕ್ರೀಡಾ ಛಾತಿಯನ್ನು ಈ ಸಾಧನೆ ವಿಶ್ವಕ್ಕೆ ತೆರೆದಿಟ್ಟಿತು.ತಮ್ಮ ಸಾಧನೆಯನ್ನು ಪುನರಾವರ್ತಿಸಲು ಹಾಗೂ ಕ್ರೀಡೆಯ ಅತ್ಯುನ್ನತ ಮಟ್ಟದಲ್ಲಿ ಪದಕಗಳ ಬರ ಹೊಂದಿರುವ ಭಾರತಕ್ಕೆ ಪದಕಗಳನ್ನು ಗೆಲ್ಲಲು ಕ್ರೀಡಾಪಟುಗಳಿಗೆ ಲಂಡನ್ 2012 ವೇದಿಕೆಯಾಗುತ್ತದೆ ಎಂದು ನಿರೀ ಕ್ಷಿಸಲಾಗಿದೆ. ಏಶ್ಯನ್ ಗೇಮ್ಸ್‌ನ ಮಾನದಂಡದಲ್ಲಿ ಹೇಳುವುದಾದರೆ, ಲಂಡನ್ 2012ರಲ್ಲಿ ಭಾರತ ವಾಸ್ತವಿಕವಾಗಿ 7 ಪದಕಗಳನ್ನು ನಿರೀಕ್ಷಿಸ ಬಹುದು. ಇದು ಭಾರತ ಬೀಜಿಂಗ್ನಲ್ಲಿ ಗೆದ್ದಿರುವುದರ ದುಪ್ಪಟ್ಟಿಗಿಂತಲೂ ಹೆಚ್ಚು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಳುಗಳ ಸಂಭಾವ್ಯ ಸಾಧನೆಯ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆಯ ಕಾರ್ಯದರ್ಶಿ ರಣಧೀರ್ ಸಿಂಗ್ ಹೀಗೆ ಹೇಳುತ್ತಾರೆ: ‘‘ಭಾರತೀಯ ಕ್ರೀಡಾಪಟುಗಳ ಪಾಲಿಗೆ ವಿಚಿತ್ರ ಸನ್ನಿವೇಶವೊಂದು ಎದುರಾಗಿದೆ.ಹಣವಿಲ್ಲದೆ ನಾವು ಚಾಂಪಿಯನ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ ಹಾಗೂ ನಮ್ಮಲ್ಲಿ ಹೇಳಿಕೊಳ್ಳಲು
ಚಾಂಪಿಯನ್‌ಗಳಿಲ್ಲದಿದ್ದರೆ ಹಣ ಬರುವುದಿಲ್ಲ’’. ಅದೃಷ್ಟವಶಾತ್, ಪ್ರಚಾರ ನೀಡಲು ಹಾಗೂ ಬೆಂಬಲ ನೀಡಲು ವಿವಿಧ ಕ್ರೀಡೆಗಳಲ್ಲಿ ಸಾಕಷ್ಟು ಚಾಂಪಿಯನ್ ಆಟಗಾರರಿದ್ದಾರೆ ಎನ್ನುವುದನ್ನು ರಣಧೀರ್ ಮತ್ತು ಭಾರತದ ರಾಜಕೀಕರಣಗೊಂಡ ಕ್ರೀಡಾ ಪ್ರಾಧಿಕಾರಗಳು ಒಪ್ಪುತ್ತವೆ.
ಈ ಆಟಗಾರರು ದಿಲ್ಲಿ ಮತ್ತು ಚೀನಾಗಳಲ್ಲಿ ಮಾಡಿದ ಸಾಧನೆಗಳನ್ನು ಟಿವಿ ಚಾನೆಲ್‌ಗಳು ಗಂಟೆಗಟ್ಟಲೆ ವಿಶ್ಲೇಷಿಸಿದ ಹಿನ್ನೆಲೆಯಲ್ಲಿ, ಆಟಗಾರರಿಗೆ ವ್ಯಾಪಕ ಪ್ರಚಾರ ದೊರೆಯುವಂತಾಯಿತು.ಸುದ್ದಿ ಆಯ್ಕೆಯ ವಿಷಯದಲ್ಲಿ ಮಾಧ್ಯಮಗಳ ಮನೋಭಾವವೂ ಬದಲಾಗಿರುವುದು ವೇದ್ಯವಾಗಿದೆ.
2009 ಮಾರ್ಚ್-ಎಪ್ರಿಲ್‌ನಲ್ಲಿ ವಿಶ್ವದ ಬ್ಯಾಡ್ಮಿಂಟನ್ ಕ್ರೀಡೆಯ ಮಹೋನ್ನತ ಆಟಗಾರರು ಇಂಡಿಯನ್ ಓಪನ್ ಪಂದ್ಯಾವಳಿಯಲ್ಲಿ ಆಡುವುದಕ್ಕಾಗಿ ಹೈದರಾಬಾದ್‌ನಲ್ಲಿದ್ದರು. ಅದೇ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್‌ನಲ್ಲಿ ದ್ವಿಪಕ್ಷೀಯ ಸರಣಿ ಆಡುತ್ತಿತ್ತು.ಇಂಡಿಯನ್ ಓಪನ್ ಫೈನಲ್ ದಿನದಂದೂ ದೇಶಾದ್ಯಂತದ ಹೆಚ್ಚಿನ ಪತ್ರಿಕೆಗಳಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕುರಿತ ಸುದ್ದಿ ಕ್ರೀಡಾಪುಟದ ಕೆಳಾರ್ಧ ಭಾಗದಲ್ಲಿ ಪ್ರಕಟವಾಗಿತ್ತು.
ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೆ ಪಂದ್ಯಕ್ಕಾಗಿನ ಭಾರತೀಯ ತಂಡದ ಸಿದ್ಧತೆಯನ್ನು ಎಂಟು ಕಾಲಂ ಬ್ಯಾನರ್ ಹೆಡ್‌ಲೈನ್‌ನಲ್ಲಿ ವರದಿ ಮಾಡಲಾಗಿತ್ತು.ಇದು ಆಘಾತಕಾರಿಯಾಗಿದೆ.ಯಾಕೆಂದರೆ, ವಿಶ್ವ ಬ್ಯಾಡ್ಮಿಂಟನ್ನಿನ ಅಗ್ರ 25 ಆಟಗಾರರ ಪಟ್ಟಿಯಲ್ಲಿ ಕೆಲವು ಭಾರತೀಯ ಆಟಗಾರರಿದ್ದಾರೆ.
ವಿಶ್ವದ ಐದನೆ ರ್ಯಾಂಕಿಂಗ್‌ನ ಸೈನಾ ನೆಹ್ವಾಲ್ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯವಿರುವ ಆಟಗಾರ್ತಿ.ಅವರು ವಿಷಾದದಿಂದ ಹೇಳುವ ಈ ಮಾತುಗಳನ್ನು ಕೇಳಿ:‘‘ತುಂಬಾ ಪ್ರಮಾಣದಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಬ್ಯಾಡ್ಮಿಂಟನನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.8 ಅಥವಾ 9ನೆ ರ್ಯಾಂಕ್ ಪಡೆಯುವುದು ಸುಲಭವಲ್ಲ. ಹಲವಾರು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ, ಯಾರೂ ಈ ನಿಟ್ಟಿನಲ್ಲಿ ಮುಂದೆ ಬರುತ್ತಿಲ್ಲ.ಹತ್ತು ವರ್ಷಗಳಲ್ಲಿ ಒಮ್ಮೆ
ನಾವು ಸೈನಾ ನೆಹ್ವಾಲ್‌ರನ್ನು ಕಾಣಬೇಕಾಗುತ್ತದೆ’’.
ಮಾಧ್ಯಮಗಳ ಈ ಮೇಲಿನ ಪ್ರವೃತ್ತಿಗೆ ವಿರುದ್ಧವಾಗಿ ದಿಲ್ಲಿ ಮತ್ತು ಗುವಾಂಗ್‌ಝೂನಲ್ಲಿನ ಭಾರತೀಯರ ಸಾಧನೆಯನ್ನು ರಾಷ್ಟ್ರೀಯ ದೈನಿಕಗಳು ಮುಖ ಪುಟಗಳಲ್ಲಿ ಹೆಡ್‌ಲೈನ್ ಆಗಿ ಪ್ರಕಟಿಸಿದವು.
ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ ಭಾರತದ ವಿಜಯವನ್ನು ಕ್ರೀಡಾಪುಟಗಳಲ್ಲಿ ಪ್ರಕಟಿಸಿದವು.ಭಾರತ ಈಗ ಕ್ರಿಕೆಟ್ ಹೊರತಾದ ಕ್ರೀಡೆಗಳ ಮೇಲೂ ಗಮನ ಹರಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪಾಲಿಗೆ ಯಶಸ್ವಿ ಲಂಡನ್ ಒಲಿಂಪಿಕ್ಸ್ ಹಾಗೂ ಕ್ರೀಡಾ ಸಂಸ್ಕೃತಿ ದೂರದ ಕನಸಾಗಿಯೇನೂ ಉಳಿದಿಲ್ಲ.
ರಾಷ್ಟ್ರೀಯ ಕ್ರೀಡಾ ಮಸೂದೆ ರಾಜಕೀಯ
ವ್ಯಾಪಕ ಚರ್ಚೆ ಮತ್ತು ಜಾಗರೂಕ ಪರಿಶೀಲನೆಯ ಬಳಿಕ ಭಾರತೀಯ ಕ್ರೀಡಾ ಸಚಿವಾಲಯ 2011ರ ಆಗಸ್ಟ್ 30ರಂದು ಕೇಂದ್ರ ಸಚಿವ ಸಂಪುಟದ ಮುಂದೆ ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಮಂಡಿಸಿತು. ಈ ಮಸೂದೆ ಸಿದ್ಧ ಗೊಳ್ಳಲು ಹಲವು ವರ್ಷಗಳು ತಗಲಿದ್ದವು. ಆದರೆ, ಸಚಿವ ಸಂಪುಟದ ಕೆಲವು ಸದಸ್ಯರಿಂದ ಮಸೂದೆಗೆ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಹಾಗೂ ಅವರು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ನೀಡಲಿಲ್ಲ.ಮಸೂದೆಯ ಕೆಲವು ಪರಿಚ್ಛೇದಗಳು ತೀಕ್ಷ್ಣವಾಗಿದ್ದವು.ಕರಡನ್ನು ಪುನರ್‌ರೂಪಿಸುವಂತೆ ಕ್ರೀಡಾ ಸಚಿವರಿಗೆ ಸೂಚಿಸಲಾಯಿತು.ಈ ಮಸೂದೆಗೆ ಪ್ರಮುಖವಾಗಿ ವಿರೋಧ ವ್ಯಕ್ತಪಡಿಸಿದವರು ಕೃಷಿ ಸಚಿವ ಶರದ್ ಪವಾರ್.2004 ಸೆಪ್ಟಂಬರ್‌ನಲ್ಲಿ ಪವಾರ್ ಬಿಸಿಸಿಐ ಚುನಾವಣೆಯಲ್ಲಿ ರಣಬೀರ್ ಸಿಂಗ್ ಮಹೇಂದ್ರ ವಿರುದ್ಧ ಸೋತಿದ್ದರು.
ಸೋತ ಬಳಿಕ ಅವರು ಪ್ರಸಿದ್ಧ ಹೇಳಿಕೆಯೊಂದನ್ನು ನೀಡಿದ್ದರು:‘‘ಇಲ್ಲಿ ಬೌಲರ್, ಅಂಪಯರ್ ಮತ್ತು ತರ್ಡ್ ಅಂಪಯರ್ ಒಬ್ಬರೇ ಆಗಿದ್ದಾರೆ’’.ಹಾಗೆ ಅವರು ಹೇಳಿದ್ದು ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಜಗಮೋಹನ್ ದಾಲ್ಮಿಯಾ ಬಗ್ಗೆ. ‘‘ಇದು ಹಿತಾಸಕ್ತಿ ಸಂಘರ್ಷದ ಸಮರ್ಥ ಉದಾಹರಣೆಯಾಗಿದೆ’’ ಎಂದು ಅವರು ಹೇಳಿದ್ದರು.
ಈಗ ಆಗಿರುವುದೂ ಅದೇ. ಐಸಿಸಿಯ ಅಧ್ಯಕ್ಷರಾಗಿ ಪವಾರ್ ಒಬ್ಬ ಆಸಕ್ತ ಪಕ್ಷವಾಗಿದ್ದಾರೆ. ಕೇಂದ್ರ ಕೃಷಿ ಸಚಿವರಾಗಿ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷರಾಗಿ ಅವರು ಬೌಲರ್ ಮತ್ತು ಅಂಪಯರ್ ಆಗಿದ್ದಾರೆ.ಅವರು ಮಸೂದೆಗೆ ವಿರೋಧ ವ್ಯಕ್ತಪಡಿಸುವುದರಲ್ಲಿಯೂ ತೀವ್ರ ಹಿತಾಸಕ್ತಿ ಸಂಘರ್ಷವಿದೆ.ಇಲ್ಲಿ ಕೇವಲ ಪವಾರ್ ಹಿತಾ ಸಕ್ತಿ ಸಂಘರ್ಷ ಮಾತ್ರವಿಲ್ಲ.ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಸಂಪುಟದ ಇನ್ನೊಬ್ಬ ಹಿರಿಯ ಸದಸ್ಯ ಫಾರೂಕ್ ಅಬ್ದುಲ್ಲ್ಲಾ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರಾಗಿರುವ ಪ್ರಫುಲ್ ಪಟೇಲ್ ಕೂಡ ಇದೇ ಗುಂಪಿನಲ್ಲಿದ್ದಾರೆ.ಕ್ರೀಡಾ ಸಂಸ್ಥೆಯ ವರಿಷ್ಠರಾಗಿ ಮಸೂದೆಗೆ ಅವರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥ ಮಾಡಿಕೊಳ್ಳಬಹುದು.ಆದರೆ, ಸಚಿವ ಸಂಪುಟದೊಳಗೇ ಮಸೂದೆಯ ವಿರುದ್ಧ ಕರಾಮತ್ತು ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ.
ಅದೇ ವೇಳೆ, ಮಸೂದೆಯ ಪರ ಹಾಗೂ ವಿರೋಧವಾಗಿರುವವರ ವಾದಗಳಲ್ಲಿ ಹುರುಳಿಲ್ಲ ಎಂದಲ್ಲ. ಆದರೆ, ಸಮಸ್ಯೆಯಾಗಿರುವುದು ಮಸೂದೆಯ ಸುತ್ತ ನಡೆಸಲಾಗುತ್ತಿರುವ ‘ಅಹಂ’ ಸಮರ. ಈ ಕಾಲೆಳೆಯುವ ಪ್ರವೃತ್ತಿ ಭಾರತೀಯ ಕ್ರೀಡೆಯ ಭವಿಷ್ಯದ ಮೇಲೆ ಶೀಘ್ರದಲ್ಲೇ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.ದುರದೃಷ್ಟವಶಾತ್, ಮಸೂದೆ ಕುರಿತ ಚರ್ಚೆಯಲ್ಲಿ ಪ್ರಧಾನ ಆಶಯಗಳಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಪ್ರಸ್ತಾಪಕ್ಕೇ ಬಂದಿಲ್ಲ.ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯನ್ನು ಸರಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವ ಬಗ್ಗೆ ಹಾಗೂ ತನ್ನ ಸ್ವಾಯತ್ತೆಯನ್ನು ಕಾಪಾಡಲು ಸಂಸ್ಥೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಬಗ್ಗೆ ಮಾತ್ರ ಚರ್ಚೆಯಾಗಿದೆ.ತುರ್ತಾಗಿ ಉತ್ತರದಾಯಿಯನ್ನಾಗಿ ಮಾಡ ಬೇಕಾದ ಯಾವುದಾದರೂ ಒಂದು ಸಂಸ್ಥೆಯಿದ್ದರೆ ಅದು ಐಒಎ. ಅದರ ನಿರ್ವಹಣೆ ಗ್ರಾಫ್ ನಿರಂತರವಾಗಿ ಕೆಳಗೆ ವಾಲುತ್ತಿದೆ.
ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಆರಂಭಿಸಿದ ನಂತರದ 88 ವರ್ಷಗಳಲ್ಲಿ ಕೇವಲ ಒಂದು ವೈಯಕ್ತಿಕ ಚಿನ್ನದ ಪದಕ ಗಳಿಸಿದೆ.1988ರಲ್ಲಿ ಸಿಯೋಲ್‌ನಲ್ಲಿ ಮತ್ತು 1992ರಲ್ಲಿ ಬಾರ್ಸಿಲೋನದಲ್ಲಿ ಅದು ಒಂದೇ ಒಂದು ಪದಕ ಗಳಿಸಿಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟದ ಸುತ್ತ ಆವರಿಸಿಕೊಂಡಿರುವ ವಿವಾದಗಳು ಐಒಎಯ ಪ್ರತಿಷ್ಠೆಗೆ ಮಸಿ ಬಳಿದಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಅದಕ್ಕೆ ಒಂದೇ ಒಂದು ರಾಷ್ಟ್ರೀಯ ಕ್ರೀಡಾಕೂಟವನ್ನು ಏರ್ಪಡಿಸಲು ಸಾಧ್ಯವಾಗಿಲ್ಲ. ಇದು ಭಾರತೀಯ ಕ್ರೀಡೆಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ.
ಪಿಸ್ತೂಲ್ ಕೋಚ್ ಇಲ್ಲ
ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಂಖ್ಯೆಯ ಶೂಟರ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡು ತ್ತಿರುವ ಹೊರತಾಗಿಯೂ, ಭಾರತದಲ್ಲಿ ಪಿಸ್ತೂಲ್ ಕೋಚ್ ಇಲ್ಲ.ಶೂಟಿಂಗ್ ಫೆಡರೇಶನ್ ಮತ್ತು ಐಒಎ ಇಂಥ ವಿಷಯಗಳನ್ನು ಬದಿಗೆ ಸರಿಸಿ ತಮ್ಮ ಸ್ವಾಯತ್ತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ! ಭಾರತದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತೀಯ ಕ್ರೀಡೆಯ ಸ್ವರೂಪವನ್ನೇ ಬದಲಿಸಿಬಿಡುವ ಸಾಮರ್ಥ್ಯ ಹೊಂದಿತ್ತು. ಆದರೆ, ನಿಷ್ಕ್ರಿಯ ಐಒಎ ಮತ್ತು ಪರಿಣಾಮಕಾರಿಯಲ್ಲದ ಕ್ರೀಡಾ ಸಚಿವಾಲಯದಿಂದಾಗಿ ಈ ಅವಕಾಶ ತಪ್ಪಿಹೋಯಿತು. ಆ ಕ್ರೀಡಾಕೂಟ ಈಗ ಅವ್ಯವ ಹಾರ ಮತ್ತು ಹಗರಣಗಳಿಗಾಗಿ ಮಾತ್ರ ಗುರುತಿಸಲ್ಪಡುತ್ತಿದೆ.ಕ್ರೀಡಾ ದೇಶವಾಗುವ ಭಾರತದ ಬಯಕೆಗೆ ಲಂಡನ್ 2012 ಮಹತ್ವದ ತಿರುವನ್ನು ನೀಡಬಹುದು. ಆದರೆ, ರಾಷ್ಟ್ರೀಯ ಕ್ರೀಡಾ ಮಸೂದೆಗೆ ಸಂಬಂಧಿಸಿದ ಅಹಂಗಳ ಸಂಘರ್ಷ ಈ ಸಾಧ್ಯತೆಗೆ ಕಲ್ಲು ಹಾಕುವುದನ್ನೂ ತಳ್ಳಿಹಾಕು ವಂತಿಲ್ಲ.
ಭಾರತದಿಂದ ಒಲಿಂಪಿಕ್ ಬಿಡ್?
2010ರ ಕಾಮನ್‌ವೆಲ್ತ್ ಗೇಮ್ಸ್‌ನ ಹಿನ್ನೆಲೆಯಲ್ಲಿ, ಪ್ರಬಲ ಒಲಿಂಪಿಕ್ ಬಿಡ್ ಸಲ್ಲಿಸಲು ಭಾರತ ಸಿದ್ಧವಾಗಿದೆ ಎಂಬ ಅಂಶ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿತ್ತು.ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆ 2020ರ ಒಲಿಂಪಿಕ್ಸ್‌ಗೆ ಬಿಡ್ಡಿಂಗ್ ಸಲ್ಲಿಸಲು ಪೂರ್ವ ತಯಾರಿಯಾಗಿದೆ ಎಂಬ ಆಧಾರದಲ್ಲಿ ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು.ಆದರೆ, ಗಂಭೀರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಲು ಭಾರತ ತಯಾರಾಗಿಲ್ಲ ಎನ್ನುವುದನ್ನು ನೇರವಾಗಿ ಹೇಳಬೇಕಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟ 2003ರಲ್ಲಿ ಬೇಗನೆ ಭಾರತಕ್ಕೆ ಬಂತು.ಆ ಹಾದಿಯಲ್ಲಿ ಎದುರಾದ ಸಮಸ್ಯೆಗಳು ಹಾಗೂ ಈಗ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳನ್ನು ನೋಡಿದಾಗ ಈ ನಿರ್ಧಾರಕ್ಕೆ ಬರಬೇಕಾಗುತ್ತದೆ.ಕ್ರೀಡಾಕೂಟ ಸಂಘಟನಾ ಸಮಿತಿಯ ಉನ್ನತಾಧಿಕಾರಿಗಳ ಪೈಕಿ ಹೆಚ್ಚಿನವರು ಹಣ ದುರುಪಯೋಗದ ಆರೋಪದಲ್ಲಿ ಈಗ ಜೈಲಿನಲ್ಲಿದ್ದಾರೆ. ಭಿವಾನಿಯ ಬಾಕ್ಸರ್‌ಗಳು
2008ರ ಬೀಜಿಂಗ್ ಒಲಿಂಪಿಕ್ಸ್‌ನಿಂದ ಆರಂಭಗೊಂಡು ಬಳಿಕ ನಡೆದ ಎಲ್ಲ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಬಾಕ್ಸಿಂಗ್ ತಂಡದಲ್ಲಿರುವವರು ಉತ್ತರ ಭಾರತದ ಚಿಕ್ಕ ಪಟ್ಟಣ ಭಿವಾನಿಯ ಬಾಕ್ಸರ್‌ಗಳು. ಇಲ್ಲಿ ಇರುವುದು ಸೀಮಿತ ಸೌಲಭ್ಯ. ಆದರೆ, ಮಾನವ ಸಾಧನೆ ಎಲ್ಲ ಅಡೆತಡೆಗಳನ್ನು ಮೀರಿ ಸಾಗುತ್ತದೆ ಎಂಬ ಪ್ರಸಿದ್ಧ ಮಾತಿಗೆ ಭಿವಾನಿ ಉದಾಹರಣೆಯಾಗುತ್ತದೆ.
ಹಲವು ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ಗಳನ್ನು ಭಿವಾನಿ ದೇಶಕ್ಕೆ ನೀಡಿದ್ದರೂ, 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಮೊದಲು ಹರ್ಯಾಣದ ಪುಟ್ಟ ಪಟ್ಟಣ ಭಿವಾನಿ ರಾಷ್ಟ್ರೀಯ ಕ್ರೀಡಾವಲಯದಲ್ಲಿ ಗುರುತಿಸಿಕೊಂಡಿರಲಿಲ್ಲ. ಒಲಿಂಪಿಕ್ಸ್‌ನ ಆ ಕೆಲವು ದಿನಗಳು ಚಿತ್ರಣವನ್ನೇ ಬದಲಿಸಿದವು. 54 ಕೆಜಿ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅಖಿಲ್ ಕುಮಾರ್ ಸರ್ಗೀ ವೊಡಪಯನೊವ್‌ರನ್ನು ಸೋಲಿಸಿದಾಗ ಹಾಗೂ 75 ಕೆಜಿ ವಿಭಾಗದಲ್ಲಿ ವಿಜೇಂದರ್ ಸಿಂಗ್ ಸೆಮಿಫೈನಲ್‌ನಲ್ಲಿ ಎಮಿಲಿಯೊ ಕೊರಿಯರನ್ನು ಎದುರಿಸಿದಾಗ ಮಾಧ್ಯಮದವರು ಭಿವಾನಿಯ ಗಲ್ಲಿ ಗಲ್ಲಿಗೆ ಲಗ್ಗೆಯಿಟ್ಟರು.ರಾತ್ರಿ ಬೆಳಗಾಗುವುದರೊಳಗೆ ಈ ಪುಟ್ಟ ಪಟ್ಣಣ ದೇಶಾದ್ಯಂತ ಪ್ರಸಿದ್ಧಿಗೆ ಏರಿತು.
1960ರ ದಶಕದಲ್ಲೇ ಭಿವಾನಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಗುರುತಿಸಿಕೊಂಡಿತ್ತು.1966ರ ಏಶ್ಯನ್ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಹವಾಸಿಂಗ್ ಚಿನ್ನ ಗೆದ್ದಿದ್ದರು.1970ರ ಬ್ಯಾಂಕಾಕ್ ಏಶ್ಯಾಡ್‌ನಲ್ಲಿ ಅವರು ಇನ್ನೊಂದು ಚಿನ್ನ ಗೆದ್ದರು.1970, 80 ಮತ್ತು 90ರ ದಶಕಗಳಲ್ಲಿ ಭಿವಾನಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆಯೇನೂ ಕಾಣಲಿಲ್ಲ.ಆದರೆ, ಸಹಸ್ರಮಾನದ ಆರಂಭದ ಹೊತ್ತಿಗೆ ಅಲ್ಲಿ ಬಾಕ್ಸಿಂಗ್ ಕ್ರೀಡೆಯ ಬಗ್ಗೆ ಗಂಭೀರ ಪ್ರಯತ್ನಗಳು ಹುಟ್ಟಿಕೊಂಡವು.
2002ರಲ್ಲಿ ಪ್ರಸಕ್ತ ಕೋಚ್ ಜಗದೀಶ್ ಸಿಂಗ್ ‘ಭಿವಾನಿ ಬಾಕ್ಸಿಂಗ್ ಕ್ಲಬ್’ ಸ್ಥಾಪಿಸಿದರು.ಭಿವಾನಿಯಲ್ಲಿ ಕ್ರೀಡಾ ಸೌಕರ್ಯಗಳು ವೃದ್ಧಿಯಾಗಿದ್ದರೂ ಪಟ್ಟಣ ಮಾತ್ರ ಹಿಂದಿನಂತೆಯೇ ಇದೆ.ಇಲ್ಲಿ ಒಮ್ಮೆ ವಿದ್ಯುತ್ ಹೋಯಿತೆಂದರೆ ಕೆಲವು ದಿನಗಳ ಕಾಲ ಬರುವುದಿಲ್ಲ.ಮಳೆ ಬಂತೆಂದರೆ ಇಲ್ಲಿನ ರಸ್ತೆಗಳಲ್ಲಿ ಗಂಟೆಗೆ 5 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಕಾರು ಓಡಿಸಲು ಆಗುವುದಿಲ್ಲ. ಇಲ್ಲಿನ ಹುಡುಗರ ಸಾಧನೆಗಳನ್ನು ನೋಡಲು ಹೆಚ್ಚಿನವರು ಇನ್‌ವರ್ಟರ್ಗಳನ್ನು ಬಳಸುತ್ತಾರೆ.
ಭಿವಾನಿಯ ನೈಜ ಯಶಸ್ಸು ಅಡಗಿರುವುದು ಹೊಸ ತಲೆಮಾರಿನ ಅಚಲ ಆತ್ಮವಿಶ್ವಾಸದಲ್ಲಿ.ಅವರು ಕೇವಲ ಯಶಸ್ಸನ್ನು ಪುನರಾವರ್ತಿಸುವುದರಲ್ಲಿ ಆಸಕ್ತರಾಗಿಲ್ಲ.ಕ್ರೀಡೆಯನ್ನು ನೂತನ ಎತ್ತರಕ್ಕೆ ಕೊಂಡೊಯ್ಯಬೇಕೆಂದ ಅದಮ್ಯ ಚಲ ಅವರಲ್ಲಿದೆ. ‘‘ಹೆತ್ತವರು ಈಗ ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ.ಇದು ತಮ್ಮ ಕನಸಿನ ಭವಿಷ್ಯ ಎಂಬ ಅರಿವು ಅವರಲ್ಲಿದೆ. ಈಗ ಅವರು ಯಶಸ್ಸಿನ ಕತೆಗಳನ್ನು ನೋಡಿದ್ದು, ಅವರು ಅದನ್ನು ನಂಬಲು ತಯಾರಾಗಿದ್ದಾರೆ’’ ಎಂದು ಭಿವಾನಿ ಬಾಕ್ಸಿಂಗ್ ಕ್ಲಬ್‌ನ ಕೋಚ್ ಜಗದೀಶ್ ಸಿಂಗ್ ಹೇಳುತ್ತಾರೆ.
ಶೂಟಿಂಗ್ ಕತೆಯೂ ಇದೇ

ಅಭಿನವ್ ಬಿಂದ್ರಾ ಬೀಜಿಂಗ್‌ನಲ್ಲಿ ಚಿನ್ನ ಗೆದ್ದ ಬಳಿಕ ಶೂಟಿಂಗ್ ಕ್ರೀಡೆಯೂ ಏಳಿಗೆಯ ದಾರಿಯಲ್ಲಿದೆ. ಒಲಿಂಪಿಕ್ಸ್ ಬಳಿಕ ಗಗನ್ ನಾರಂಗ್ 10 ಮೀ. ಏರ್ ರೈಫಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.ಅವರು ಈಗಾಗಲೇ ಹಲವಾರು ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 4 ಚಿನ್ನ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ 2 ಬೆಳ್ಳಿಗಳನ್ನು ಗೆದ್ದಿರುವುದು ಅವರ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ.ಆದರೆ, ಇಲ್ಲೊಂದು ಆಘಾತಕರ ಸುದ್ದಿಯಿದೆ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತೀಯ ಶೂಟರ್‌ಗಳಿಗೆ ತರಬೇತಿ ನೀಡಲು ನಿಯೋಜಿಸಲಾಗಿದ್ದ 15 ಉನ್ನತ ಕೋಚ್‌ಗಳಿಗೆ 2009ರ ಜನವರಿಯಿಂದ ಮಾರ್ಚ್‌ವರೆಗೆ ಸಂಬಳವನ್ನೇ ಕೊಡಲಾಗಿಲ್ಲ ಎನ್ನುವುದು.ಗುತ್ತಿಗೆಯ ಶರತ್ತುಗಳ ಪ್ರಕಾರ ಅವರಿಗೆ ತಿಂಗಳಿಗೆ 30,000 ರೂ. ಸಂಬಳ ನಿಗದಿಯಾಗಿತ್ತು. ಅದೂ ಅಲ್ಲದೆ, ಅವರಿಗೆ ವಿದೇಶದಲ್ಲಿ ಆಧುನಿಕ ತರಬೇತಿ ನೀಡುವ ಭರವಸೆಯನ್ನೂ ನೀಡಲಾಗಿತ್ತು.ಆದರೆ, 2009 ಎಪ್ರಿಲ್‌ವರೆಗೆ ಯಾರನ್ನೂ ಕಳುಹಿಸಲಾಗಿಲ್ಲ.
ಮಾಫಿಯಾ ಕಾರ್ಯಭಾರ
ಭಾರತೀಯ ಕ್ರೀಡಾ ಸಂಸ್ಥೆಗಳ ಉನ್ನತ ಆಡಳಿತ ಅಧಿಕಾರಿಗಳ ಪ್ರವೃತ್ತಿಯೇ ಹೀಗಿದೆ. ಏನೇ ಆದರೂ, ಅವರು ಮಾಧ್ಯಮದ ಮೇಲೆ ಗೂಬೆ ಕೂರಿಸಿ, ತಮ್ಮ ಅಸಾಮರ್ಥ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಾರೆ.ಈ ಕ್ರೀಡಾಸಂಸ್ಥೆಗಳ ಆಡಳಿತಾಧಿಕಾರಿಗಳು ವರ್ಷಗಳ ಕಾಲ ಹುದ್ದೆಯಲ್ಲಿ ತಳವೂರುತ್ತಿರುವುದು ರಾಜಕಾರಣಿಗಳು ಕ್ರೀಡೆಗಳನ್ನು ನಿಯಂತ್ರಿಸುವುದಕ್ಕಿಂತಲೂ ಹೆಚ್ಚು ಅಪಾಯ ಕಾರಿಯಾಗಿದೆ. ‘‘ಪದಾಧಿಕಾರಿಗಳ ಅಧಿಕಾರಾವಧಿಯನ್ನು ಸೀಮಿತಗೊಳಿಸಬೇಕು’’ ಎಂಬ ದಿಲ್ಲಿ ಹೈಕೋರ್ಟ್‌ನ ಆದೇಶದ ಹೊರತಾಗಿಯೂ ಈ ವ್ಯಕ್ತಿಗಳು ತಮ್ಮ ಹುದ್ದೆಗಳಲ್ಲಿ ಅನಿಯಂತ್ರಿತವಾಗಿ ಮುಂದುವರಿಯುತ್ತಿದ್ದಾರೆ ಹಾಗೂ ಮಾಫಿಯಾ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದಾರೆ.ಹೈಕೋರ್ಟ್ ತೀರ್ಪಿನಿಂದ ಬಲ ಪಡೆದ ಕ್ರೀಡಾ ಸಚಿವ ಅಜಯ್ ಮಾಕನ್ ನೇತೃತ್ವದ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಕ್ರೀಡಾ ಮಸೂದೆಯಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಯಾವುದೇ ಕ್ರೀಡಾ ಆಡಳಿತಗಾರ 70ನೆ ವಯಸ್ಸಿನ ಬಳಿಕ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿ ಮುಂದುವರಿಯುವಂತಿಲ್ಲ ಎಂಬುದು ಆ ಪೈಕಿ ಮಹತ್ವದ ಅಂಶವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ ಸಂಘಟನೆಯ ಪರಿಣಾಮದ ನಿಜವಾದ ಪರೀಕ್ಷೆ 2012 ಆಗಸ್ಟ್‌ನಲ್ಲಿ ನಡೆಯುತ್ತದೆ.2008ರಲ್ಲಿ ಬೀಜಿಂಗ್‌ನಲ್ಲಿ ಗೆದ್ದ ಪದಕಗಳ ದುಪ್ಪಟ್ಟು ಪದಕಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾದರೆ ಅದು ಭಾರತೀಯ ಒಲಿಂಪಿಕ್ ಕ್ರೀಡೆಗೆ ಅಭೂತಪೂರ್ವ ಚೈತನ್ಯ ಒದಗಿಸುತ್ತದೆ.ಒಂದು ವೇಳೆ, ಆಡಳಿತಾತ್ಮಕವಾಗಿ ಹಾಗೂ ಪದಕಗಳ ಆಧಾರದಲ್ಲಿ ಭಾರತ ವಿಫಲವಾದರೆ, 2010ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಶ್ಯನ್ ಗೇಮ್ಸ್‌ಗಳು ನೀಡಿದ ಭರವಸೆ 2016ರ ರಿಯೊ ಒಲಿಂಪಿಕ್ಸ್ ವೇಳೆಗೆ ಕ್ರೀಡಾ ಇತಿಹಾಸ ಪುಸ್ತಕಗಳಿಗೆ ಸೀಮಿತವಾಗಿರುತ್ತದೆ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...