ಅಸ್ಸಾಂನಲ್ಲಿ ಬೋಡೋ ಸಮುದಾಯ ಮತ್ತು ವಲಸೆ ಬಂದಿರುವ ಬಾಂಗ್ಲಾದೇಶದ ಮುಸ್ಲಿಮರ ನಡುವಿನ ಸಂಘರ್ಷವನ್ನು ಕೇವಲ ಜನಾಂಗೀಯ ದ್ವೇಷ ಮತ್ತು ಮತೀಯವಾದಿ ದೃಷ್ಟಿಕೋನದಿಂದ ಮಾತ್ರ ನೋಡುವುದು ಇತಿಹಾಸಕ್ಕೆ ಅಪಚಾರ ಬಗೆದಂತೆಯೇ ಸರಿ. ಹೌದು, ಮೇಲ್ನೋಟಕ್ಕೆ ಈ ಘರ್ಷಣೆ ಹಿಂದೂ- ಮುಸ್ಲಿಂ ಕಲಹದಂತೆಯೇ ಕಾಣುತ್ತದೆ. ಬೋಡೋ ಸಮುದಾಯದ ಆತಂಕ, ಆರೋಪಗಳು ಸುಳ್ಳೇನಲ್ಲ. ತಮ್ಮ ಸಾಮುದಾಯಿಕ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಹಲವು ದಶಕಗಳ ಹೋರಾಟ ನಡೆಸಿದ ಈ ಜನಾಂಗ ಈಗ ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿದೆ. ಇದು ಈಶಾನ್ಯ ರಾಜ್ಯಗಳಲ್ಲಿನ ಪ್ರತಿಯೊಂದು ಜನಾಂಗದ ಸಮಸ್ಯೆಯೂ ಆಗಿದೆ. ಬಾಂಗ್ಲಾ ಗಡಿ ಪ್ರದೇಶದಲ್ಲಿರುವ ಹಲವು ಜಿಲ್ಲೆಗಳಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದಿದ್ದು, ಭ್ರಾತೃಘಾತುಕ ಘಟನೆಗಳಿಗೆ ಎಡೆಮಾಡಿಕೊಟ್ಟಿದೆ. ಇಲ್ಲಿ ಗಲಭೆ ಸೃಷ್ಟಿಸುವ ಸಮಾಜಘಾತುಕ ಸಂಘಟನೆಗಳಿಗಿಂತಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉತ್ತರದಾಯಿತ್ವ ಪ್ರಶ್ನಾರ್ಹವಾಗುತ್ತದೆ. ಹೊಣೆಗಾರಿಕೆಯೂ ಸಹ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಜನಾಂಗೀಯ ಸಮಸ್ಯೆ ಹಾಸು ಹೊಕ್ಕಾಗಿದೆ.
ಸ್ವಾತಂತ್ರ್ಯಾನಂತರ ಭಾರತಕ್ಕೆ ಸೇರಿಸಲ್ಪಟ್ಟ ಹಲವು ರಾಜ್ಯಗಳಲ್ಲಿ ಇಂದಿಗೂ ಪ್ರತ್ಯೇಕತಾ ಚಳುವಳಿಗಳು ನಡೆಯುತ್ತಲೇ ಇವೆ. ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಭಾರತದ ಸಂವಿಧಾನವೇ ಅನ್ವಯವಾದರೂ ಅಲ್ಲಿನ ಜನತೆ ಇಂದಿಗೂ ತಮ್ಮ ಸಾಮುದಾಯಿಕ -ಜನಾಂಗೀಯ ಅಸ್ಮಿತೆಗಳನ್ನೇ ಪ್ರಧಾನವಾಗಿ ಪರಿಗಣಿಸುವುದು ಚಾರಿತ್ರಿಕ ಸತ್ಯ. ಮೇಲ್ನೋಟಕ್ಕೆ ಇಲ್ಲಿನ ಜನಾಂಗೀಯ ಘರ್ಷಣೆಗಳು ವಿವಿಧ ಕೋಮುಗಳ ನಡುವೆ ಸಂಭವಿಸುವ ಮತೀಯ ಸಂಘರ್ಷಗಳಂತೆ ತೋರಿದರೂ ವಾಸ್ತವವಾಗಿ ಈಶಾನ್ಯ ರಾಜ್ಯಗಳಲ್ಲಿರುವುದು ಸಾಮಾಜಿಕ-ಆರ್ಥಿಕ ಸುಭದ್ರತೆಯ ಪ್ರಶ್ನೆ.
ಸ್ವಾತಂತ್ರ್ಯಪೂರ್ವ ದಿಂದಲೂ ಅವಕಾಶವಂಚಿತರಾಗಿ, ಸೌಲಭ್ಯವಂಚಿತರಾಗಿ, ಅಭಿವೃದ್ಧಿ ಪಥದಿಂದ ದೂರವೇ ಉಳಿದಿರುವ ಈ ರಾಜ್ಯಗಳ ಮೂಲ ಸಮಸ್ಯೆ ಇರುವುದು ಬಂಡವಾಳದ ಉತ್ಪಾದನೆ ಮತ್ತು ಹೂಡಿಕೆಯಲ್ಲಿ. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳಿಗೆ ಕೊರತೆಯೇ ಇಲ್ಲದ ಈ ರಾಜ್ಯಗಳಲ್ಲಿ ಉತ್ಪಾದನೆಯಾಗುವ ಬಂಡವಾಳ ಅಥವಾ ಸಂಪತ್ತು ಇಲ್ಲಿನ ಜನ ಸಮುದಾಯಗಳಿಗೇ ಲಭ್ಯವಾಗದಿರುವುದು ಇಲ್ಲಿನ ಮೂಲ ಸಮಸ್ಯೆಯಾಗಿದೆ.
ಹಾಗಾಗಿ ಈ ರಾಜ್ಯಗಳಲ್ಲಿ ಎಷ್ಟೇ ಸಂಪನ್ಮೂಲ ಉತ್ಪಾದನೆಯಾದರೂ ಉದ್ಯೋಗಾವಕಾಶಗಳು ಕುಂಠಿತವಾಗಿವೆ. ಯುವಜನತೆಯ ಭವಿಷ್ಯದ ಹಾದಿ ದುರ್ಗಮ ವಾಗಿವೆ. ಬೃಹತ್ ಕೈಗಾರಿಕೆಗಳನ್ನು ಇಲ್ಲಿ ನೆಲೆ ಮಾಡಲಾಗಿಲ್ಲ. ಸರಕಾದ ವತಿಯಿಂದ ಬಂಡವಾಳ ಹೂಡಿಕೆಯೂ ಇಲ್ಲಿ ದುರ್ಬಲವಾಗಿಯೇ ಇದೆ. ಮೇಲಾಗಿ ಇಲ್ಲಿನ ಬಹುತೇಕ ಬಂಡವಾಳಿಗರು ತಮ್ಮ ಉದ್ಯಮಗಳಿಗೆ ಬೇಕಾದ ಕಾರ್ಮಿಕರನ್ನು ಹೊರನಾಡುಗಳಿಂದ ಕರೆತಂದಿರುವುದೂ ಗಂಭೀರ ಸಮಸ್ಯೆಯಾಗಿದೆ. ಬಾಂಗ್ಲಾದೇಶದಿಂದ ವಲಸೆ ಬರುವ ಬಹುಪಾಲು ಜನರು ಈ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಆರು ದಶಕಗಳಿಂದ ದೇಶವನ್ನಾಳುತ್ತಿರುವ ರಾಜಕೀಯ ಪಕ್ಷಗಳ ವೈಫಲ್ಯ ಇರುವುದು ಇಲ್ಲೇ ಎನಿಸುತ್ತದೆ.
1948ಕ್ಕೂ ಮುನ್ನ ಈಶಾನ್ಯ ರಾಜ್ಯಗಳಲ್ಲಿ ಬಂದು ನೆಲೆಸಿದ ಜನರನ್ನು ನಂತರ ಬಂದು ನೆಲೆಸಿದ ಜನರಿಂದ ಬೇರ್ಪಡಿಸಿ, ಅಕ್ರಮವಾಗಿ ವಲಸೆ ಬಂದು ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನು ಹಿಂದಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸರಕಾರಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಸಕ್ತ ಸಂಘರ್ಷಕ್ಕೆ ಕಾರಣವಾಗಿದೆ. ಇದುವರೆಗೆ ನಡೆದಿರುವ ಜನಗಣತಿಗಳ ಗುಣಮಟ್ಟ ಮತ್ತು ಸಾಫಲ್ಯವೂ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ತಮ್ಮ ದೈನಂದಿನ ಜೀವನ ನಡೆಸಲು ಪರದಾಡುತ್ತಿರುವ ಭಾರತೀಯ ಜನತೆಗೆ ಮತ್ತೊಂದು ದೇಶದ ಜನತೆಯನ್ನು ಸಲಹುವ ತಾಳ್ಮೆಯಾಗಲಿ, ಅನಿವಾರ್ಯತೆಯಾಗಲೀ ಇರಬೇಕೆಂದು ಅಪೇಕ್ಷಿಸುವುದು ತಪ್ಪಾಗುತ್ತದೆ.
ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನೆರೆ ರಾಜ್ಯಗಳ ಜನತೆ ನೆಲೆಸುವುದನ್ನೇ ವಿರೋಧಿಸುವ ಜನಾಂದೋಲನಗಳು ಹುಟ್ಟಿಕೊಳುತ್ತಿರುವಾಗ ಈಶಾನ್ಯ ರಾಜ್ಯಗಳಲ್ಲಿ ಹೊರದೇಶದ ವಲಸೆಗಾರರನ್ನು ವಿರೋಧಿಸುವುದು ಸಹಜವೇ ಅಲ್ಲವೇ? ಈ ಗಂಭೀರ ಸಮಸ್ಯೆಯನ್ನು ಆಳ್ವಿಕರು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ? ಇದರ ಉತ್ತರದಾಯಿತ್ವ ಯಾರದು ? ಬೆಕ್ಕಿಗೆ ಗಂಟೆ ಕಟ್ಟುವವರಾರು? ಇವು ಪ್ರಜ್ಞಾವಂತ ನಾಗರಿಕರನ್ನು ಕಾಡುವ ಪ್ರಶ್ನೆಗಳು. ಕೋಮುವಾದಿಗಳ ಒಕ್ಕೂಟ ಅಸ್ಸಾಂನ ಬೋಡೋ ಜನಾಂಗ ಮತ್ತು ವಲಸೆ ಬಂದಿರುವ ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷ ಮಾನವೀಯತೆಯ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿದೆ.
ರಾಜ್ಯದಲ್ಲಿ ನೆಲೆಸಿರುವ ಎಲ್ಲ ಮುಸ್ಲಿಮರನ್ನೂ ಹೊರಗಿನವರೆಂದು ಪರಿಗಣಿಸುವ ಮತೀಯ ಭಾವನೆಗಳನ್ನು ಅಲ್ಲಿನ ಜನರಲ್ಲಿ ಬಿತ್ತಲಾಗುತ್ತಿದೆ. ಇದು ಕಳೆದ ನಾಲ್ಕು ದಶಕಗಳ ವಿದ್ಯಮಾನ. ಈ ಜನಾಂಗೀಯ ದ್ವೇಷವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನಿರತರಾಗಿವೆ. ಕಾಂಗ್ರೆಸ್ ಪಕ್ಷದ ನೀತಿಗಳನ್ನು ಟೀಕಿಸುವ ಬಿಜೆಪಿ 1980ರ ದಶಕದ ಅಸ್ಸಾಂ ಜನಾಂಗೀಯ ಹಿಂಸೆಯನ್ನೇ ತನ್ನ ರಾಜಕೀಯ ಬಂಡವಾಳವಾಗಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಿಜೋರಾಂ ಮತ್ತು ಮಣಿಪುರಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಸೇನಾ ವಿಶೇಷಾಧಿಕಾರ ಕಾಯ್ದೆ ಅಲ್ಲಿನ ಜನರಲ್ಲಿ ಪ್ರತ್ಯೇಕತಾ ಭಾವನೆಗಳನ್ನು ಹೆಚ್ಚಾಗಿಸುತ್ತಿದೆ. ತಾವು ಭಾರತೀಯರೇ ಅಲ್ಲವೇನೋ ಎಂಬ ಭಾವನೆಯನ್ನೂ ಮೂಡಿಸುತ್ತುದೆ.
ಆದರೆ ಪ್ರಜಾಪ್ರಭುತ್ವದ ಹರಿಕಾರರಂತೆ ಮಾತನಾಡುವ ಯಾವುದೇ ಪಕ್ಷವೂ ಈ ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಇದು ನಮ್ಮ ದೇಶದ ದುರಂತ. ಸನ್ನಿವೇಶಗಳು ಸದಾ ಕೋಮುವಾದಿ-ಫ್ಯಾಸಿಸ್ಟ್ ಶಕ್ತಿಗಳ ಏಳಿಗೆಗೆ ಪೂರಕವಾಗಿರುತ್ತದೆ. ಬೆಂಗಳೂರಿನಲ್ಲಿ ಸಂಭವಿಸಿರುವ ಘಟನೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಮತೀಯವಾದಿಗಳಿಗೆ ಜನಸಮುದಾಯಗಳ ಹಿತಾಸಕ್ತಿಗಳಿಗಿಂತಲೂ ತಮ್ಮ ಮತೀಯ ಅಸ್ಮಿತೆಗಳು ಮತ್ತು ಧರ್ಮಕೇಂದ್ರಿತ ಅಸ್ತಿತ್ವಗಳು ಪ್ರಧಾನವಾಗಿ ಕಾಣುತ್ತವೆ. ಭಾರತದಲ್ಲಿನ ಮುಸ್ಲಿಂ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಪ್ರತಿಭಟಿಸದ ಮುಸ್ಲಿಂ ಸಂಘಟನೆಗಳಿಗೆ ಹಠಾತ್ತನೆ ಅಸ್ಸಾಂನಲ್ಲಿ ಆಕ್ರಮಣಕ್ಕೊಳಗಾದ ಬಾಂಗ್ಲಾ ವಲಸಿಗರ ಮೇಲೆ ಕರುಣೆ ಉಕ್ಕಿ ಹರಿಯುತ್ತದೆ. ಇಲ್ಲಿ ಅಕ್ರಮ-ಸಕ್ರಮ ವಲಸಿಗರ ಪ್ರಶ್ನೆಗಿಂತಲೂ ವಲಸೆಯ ಸಮಸ್ಯೆಯ ನೈಜತೆ ಮತ್ತು ಅದರಿಂದುಂಟಾಗುವ ಪರಿಣಾಮಗಳು ಮುಖ್ಯವಾಗುತ್ತವೆ.
ಬಾಂಗ್ಲಾದಿಂದ ಲಕ್ಷಾಂತರ ಜನರು ಅಕ್ರಮವಾಗಿ ವಲಸೆ ಬಂದು ನೆಲೆಸಿರುವುದೇ ಆದಲ್ಲಿ ಕಾನೂನುರಿತ್ಯಾ ಅವರನ್ನು ಹಿಂದೆ ಕಳುಹಿಸುವುದು ಪ್ರಭುತ್ವದ ಆದ್ಯತೆಯಾಗಬೇಕು. ಸರಕಾರ ಕ್ರಮ ಕೈಗೊಳ್ಳದಿದ್ದಾಗ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಅಸ್ಸಾಂನ ಮುಸ್ಲಿಮರ ಮೇಲಿನ ಆಕ್ರಮಣವನ್ನು ಖಂಡಿಸಬೇಕು, ನಿಜ. ಪ್ರತಿಭಟನೆಯೂ ಅವಶ್ಯಕ. ಆದರೆ ಯಾರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂಬ ನಿರ್ಧಾರಕ್ಕೆ ಸ್ಪಷ್ಟ ಗುರಿ ಇರಬೇಕು. ಮಹಾರಾಷ್ಟ್ರದಲ್ಲಿ, ಅಲಹಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಂಘಟನೆಗಳು ಅನಗತ್ಯವಾಗಿ ಹಿಂಸಾಚಾರದಲ್ಲಿ ತೊಡಗಿ ತಮ್ಮ ಉದ್ದೇಶವನ್ನೇ ಮರೆತು ಕೋಮು ಭಾವನೆಗಳಿಗೆ ಎಡೆಮಾಡಿಕೊಟ್ಟಿರುವುದು ಅಕ್ಷಮ್ಯ, ಖಂಡನಾರ್ಹ.
ಈ ಹಿನ್ನೆಲೆಯಲ್ಲೇ ಕರ್ನಾಟಕದಲ್ಲೂ ಸಹ ಹಲವು ಸಂಘಟನೆಗಳು ಈಶಾನ್ಯದ ಜನತೆಗೆ ಜೀವ ಬೆದರಿಕೆಯ ಮೆಸೇಜ್‌ಗಳನ್ನು ಕಳುಹಿಸಿರುವುದು, ಅಸ್ಸಾಂನಲ್ಲಿ ಹಲ್ಲೆಗೊಳಗಾದ ಮುಸ್ಲಿಮರ ಚಿತ್ರಗಳನ್ನು ಎಂಎಂಎಸ್ ಮಾಡಿರುವುದು ರಾಜ್ಯದಲ್ಲಿ ನೆಲೆಸಿರುವ ಈಶಾನ್ಯ ಜನತೆ ಗುಳೆ ಹೋಗಲು ಕಾರಣವಾಗಿದೆ. ಈ ಸಂದೇಶದ ಮೂಲ ಯಾವುದು ಎನ್ನುವುದಕ್ಕಿಂತಲೂ ಸಂದೇಶದ ಉದ್ದೇಶವನ್ನು ಪರಿಗಣಿಸಬೇಕಾಗುತ್ತದೆ. ಅಸ್ಸಾಂನ ಜನರು ಗುಳೆ ಹೋಗುವ ಪ್ರಕ್ರಿಯೆ ಚುರುಕಾಗುತ್ತಲೇ ತಮ್ಮ ಸಮವಸ್ತ್ರಗಳನ್ನು ಧರಿಸಿ, ದಂಡಗಳನ್ನು ಹಿಡಿದು ಹಿಂದೂಗಳ ರಕ್ಷಣೆಗೆ ಟೊಂಕಕಟ್ಟಿ ನಿಂತ ಚಡ್ಡಿಧಾರಿ ಸಂಘಪರಿವಾರದ ಕಾರ್ಯಕರ್ತರನ್ನು ನೋಡಿದಾಗ ಕೋಮುವಾದಿಗಳ ವ್ಯವಸ್ಥಿತ ಸಂಚು ಸ್ಪಷ್ಟವಾಗುತ್ತದೆ.
ಮಂಗಳೂರಿನಲ್ಲಿ ಹಿಂದೂಗಳಿಂದಲೇ ಹಲ್ಲೆಗೊಳಗಾದ ಹಿಂದೂಗಳ ರಕ್ಷಣೆಗೆ ಒಂದು ಹೆಜ್ಜೆ ಮುಂದಿರಿಸದ ಚಡ್ಡಿ ರೆಜಿಮೆಂಟ್ನ ಸದಸ್ಯರಿಗೆ ಅಸ್ಸಾಂನ ಜನತೆಯ ಬಗ್ಗೆ ಅಪಾರ ಕಾಳಜಿ ಮೂಡಲು ಕಾರಣವಾದರೂ ಏನು ? ಮುಸ್ಲಿಂ ಮತಾಂಧರಿಂದ ಅಪಾಯ ಕ್ಕೊಳಗಾಗಿದ್ದಾರೆ ಎಂಬ ಕಾರಣವಷ್ಟೆ ಇರಲಿಕ್ಕೆ ಸಾಧ್ಯ. ಸಂದೇಶವನ್ನು ಸೃಷ್ಟಿಸಿದವರಿಗೂ, ಸಂದೇಶದ ವಿರುದ್ಧ ಸಮರ ಸಾರುವವರಿಗೂ, ಅನಧಿಕೃತ ರಕ್ಷಣಾ ಪಡೆಗಳಿಗೂ ಇರುವ ಸಾಮ್ಯತೆಯನ್ನು ಇಲ್ಲಿ ಗಮನಿಸಬೇಕು.
ಹಲವು ವರ್ಷಗಳಿಂದ ಸೌಹಾರ್ದತೆಯನ್ನು ಕಾಣುತ್ತಿರುವ ಸಮಾಜದಲ್ಲಿ ಕೋಮುವಾದದ ವಿಷಬೀಜವನ್ನು ಮತ್ತೊಮ್ಮೆ ಬಿತ್ತಲು ಹಾತೊರೆಯುತ್ತಿರುವ ಮತೀಯವಾದಿಗಳ ವ್ಯವಸ್ಥಿತ ಸಂಚನ್ನು ಇಲ್ಲಿ ಕಾಣಬಹುದು. ಗೋಮಾಂಸ ಸೇವನೆ ನಿತ್ಯಾಹಾರವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಇದೇ ಜನತೆ ಮುಂದೊಂದು ದಿನ ಗೋಮಾಂಸ ಸೇವನೆಯನ್ನು ಸಮರ್ಥಸಿ ಹೋರಾಡಿದಲ್ಲಿ ಸಂಘ ಪರಿವಾರದ ನಿಲುವು ಏನಾಗಿರುತ್ತದೆ ? ವಿಶೇಷ ಸೇನಾ ಕಾಯ್ದೆಯಿಂದ ನಲುಗುತ್ತಿರುವ ಮಣಿಪುರದ ಜನತೆಯ ಪರವಾಗಿ ಸಂಘಪರಿವಾರ ಏಕೆ ಪ್ರತಿಭಟನೆ ನಡೆಸುತ್ತಿಲ್ಲ ? ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಂಚಿತರಾಗಿದ್ದರೂ ತಮ್ಮದೇ ಸರಕಾರ ಆರು ವರ್ಷ ಆಡಳಿತ ನಡೆಸಿದ್ದರೂ ಸಕಾರಾತ್ಮಕ ಕ್ರಮ ಕೈಗೊಳ್ಳದ ಸಂಘಪರಿವಾರಕ್ಕೆ ಗುಳೆ ಹೊರಟ ಅಸ್ಸಾಮಿಗಳ ಬಗ್ಗೆ ಹಠಾತ್ ಅನುಕಂಪ ಮೂಡಲು ಕಾರಣವೇನು?
ಪ್ರಶ್ನೆಗಳಿಗೆ ಉತ್ತರಗಳನ್ನು ಅರಸುತ್ತಾ ಹೊರಟಾಗ ಕೇವಲ ವದಂತಿಗಳಿಗೆ ಭಯಪಟ್ಟು ರಾಜ್ಯವನ್ನೇ ಬಿಟ್ಟು ಹೋಗುವ ಕಾರ್ಮಿಕ ವರ್ಗದ ನಿರ್ಧಾರದ ಹಿಂದೆ ಕೆಲವು ಅಗೋಚರ ಶಕ್ತಿಗಳು ಸಕ್ರಿಯವಾಗಿರುವುದು ಸ್ಪಷ್ಟವಾಗುತ್ತದೆ. ಗುಳೆ ಹೊರಟಿರುವವರಲ್ಲಿ ಬಹುಪಾಲು ಜನತೆ ಅತ್ಯಲ್ಪ ಆದಾಯದಿಂದ ದೂರದಲ್ಲಿರುವ ತಮ್ಮ ಕುಟುಂಬಗಳ ನಿರ್ವಹಣೆಯನ್ನು ಹೊತ್ತಿರುವ ಯುವಕರು ಅಥವಾ ಅಲ್ಲಿ ಶೈಕ್ಷಣಿಕ ಅವಕಾಶಗಳಿಲ್ಲದೆ ಇಲ್ಲಿಗೆ ವ್ಯಾಸಂಗಕ್ಕಾಗಿ ಬಂದಿರುವ ವಿದ್ಯಾರ್ಥಿಗಳು. ಈ ವರ್ಗದ ಜನತೆಗೆ ತಮ್ಮ ಬದುಕಿನ ಅನಿವಾರ್ಯತೆಗಳೇ ಮುಖ್ಯವಾಗುವುದೇ ಹೊರತು, ಮತೀಯ ಭಾವನೆಗಳಲ್ಲ.. ಆದರೂ ಇಂದು ಸಾವಿರಾರು ಅಮಾಯಕರು ಅನಿಶ್ಚಿತ ಭವಿಷ್ಯವನ್ನು ಹೊತ್ತು ತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ. ಇವರನ್ನು ತಡೆಯುವ ಶಕ್ತಿ ಇರುವುದು ಸಂಘಟನೆಗಳಲ್ಲಿ ಅಲ್ಲ, ಜನರ ಮನದಾಳದಲ್ಲಿನ ಭಾವನೆಗಳಲ್ಲಿ.
ಈ ಭಾವನೆಗಳನ್ನು ಕಲುಷಿತಗೊಳಿಸುವ ಶಕ್ತಿಗಳೇ ಇಂದು ರಕ್ಷಕರಾಗಿ ಟೊಂಕ ಕಟ್ಟಿ ನಿಂತಿರುವುದು ವಿಡಂಬನೆಯೋ ವಿಪರ್ಯಾಸವೋ, ದುರಂತವೋ ಎಂದರೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಮತೀಯ ಭಾವನೆಗಳಿಗೆ ಬಲಿಯಾಗುವ ಯುವಕರನ್ನು ನಿಯಂತ್ರಿಸುವ ಶಕ್ತಿಗಳು ಪ್ರಬಲವಾಗಿವೆ. ಸಾಂತ್ವನ ಹೇಳಿ ಸೌಹಾರ್ದತೆ ಬೆಳೆಸುವ ಶಕ್ತಿಗಳು ಕ್ಷೀಣಿಸಿವೆ. ಶಾಂತಿ ಸೌಹಾರ್ದ ಸಭೆಗಳು ಘಟನೆ ಸಂಭವಿಸಿದ ನಂತರ ನಡೆಯುತ್ತವೆ. ಆದರೆ ಇದು ಕೇವಲ ಚಿಕಿತ್ಸಕ ಪ್ರಭಾವ ಬೀರುತ್ತವೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ತಮ್ಮ ಸಮುದಾಯದ ಜನರಲ್ಲಿ ಮತೀಯ ಭಾವನೆಗಳು ಮೂಡದಂತೆ ಎಚ್ಚರ ವಹಿಸಿದಾಗ ಮಾತ್ರ ಈ ಅನಿಷ್ಟವನ್ನು ಹೋಗಲಾಡಿಸಬಹುದು. ಪವಿತ್ರ ಗ್ರಂಥಗಳನ್ನು ಉದ್ಧರಿಸಿ ತಮ್ಮ ಧರ್ಮಗಳು ಸೌಹಾರ್ದತೆ ಬಯಸುತ್ತವೆ ಎಂದು ಉಪನ್ಯಾಸ ನೀಡುವುದು ಶುಷ್ಕ ಸಾಂತ್ವನವಾಗುತ್ತದೆ.
ವಾಸ್ತವವಾಗಿ ಸಮಾಜದಲ್ಲಿ ಮತೀಯವಾದಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಧರ್ಮಗುರುಗಳು, ಧಾರ್ಮಿಕ ಸಂಸ್ಥೆಗಳು ಪರೋಕ್ಷವಾಗಿ ಪ್ರೇರಣೆಯನ್ನೂ ನೀಡುತ್ತಿರುವುದು ಸ್ಪಷ್ಟ. ಈ ವಿಷರ್ವತುಲದಿಂದ ಹೊರಬರದೆ ಹೋದಲ್ಲಿ ಮುಂದೊಂದು ದಿನ ಇಡೀ ರಾಷ್ಟ್ರವೇ ಫ್ಯಾಸಿಸ್ಟರ ಕೈವಶವಾಗುತ್ತುದೆ. ಮಾನವರು ಗುಳೆ ಹೊರಟರೆ ಹಿಂದಕ್ಕೆ ಕರೆತರಬಹುದು. ಮಾನವೀಯ ಮೌಲ್ಯಗಳು ಗುಳೆ ಹೊರಟರೆ ಏನು ಮಾಡುವುದು? ಇದು ಯಕ್ಷ ಪ್ರಶ್ನೆ !
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...