ಅದು 1902ನೆ ಇಸವಿ. ಏಶ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷವದು. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು. ಬ್ರಿಟಿಷರೊಂದಿಗೆ ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿ ಕೊಂಡಿದ್ದ ಅವರು, ಆ ದಿಸೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು. ಈ ಸಂಧರ್ಭದಲ್ಲಿ ಒಂದು ಮಾತು, ಅದೇನೆಂದರೆ ಆಗಿನ್ನು ಮೈಸೂರು ಸಂಸ್ಥಾನಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರವೇಶ ಪಡೆದೇ ಇರಲಿಲ್ಲ! ಇರಲಿ, ವಿದ್ಯುತ್‌ಕೇಂದ್ರವನ್ನೇನೊ ನಾಲ್ವಡಿಯವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾ ಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟ! ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಿದ್ದ ನಾಲ್ವಡಿಯವರಿಗೆ ಈ ನಿಟ್ಟಿನಲಿ ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು ಮತ್ತು ಈ ಕಾರಣಕ್ಕಾಗಿ ಶಿವನಸಮುದ್ರದ ಬಳಿ ತೊರೆಕಾಡನಹಳ್ಳಿ ಎಂಬಲ್ಲಿ ಚೆಕ್‌ಡ್ಯಾಂ ನಿರ್ಮಿಸಲು ಕೂಡ ಅವರು ಆಲೋಚಿಸಿದರು. ಹಾಗೆಯೇ ನಿರ್ಮಾಣ ಕೂಡ ಆಯಿತು.
ಆದರೆ ಕೆಲವೇ ಅಡಿಗಳಷ್ಟಿದ್ದ ಚೆಕ್‌ಡ್ಯಾಂ ನೀರು ಏನೇನಕ್ಕು ಸಾಲುತ್ತಿರಲಿಲ್ಲ. ಅಂತಿಮವಾಗಿ ವಿದ್ಯುತ್ ಉತ್ಪತ್ತಿ ಮಾಡಲೇ ಬೇಕಾದ ಒತ್ತಡಕ್ಕೆ ಸಿಲುಕಿದ ಮಹಾರಾಜರು 1904ರಲ್ಲಿ ಜೋಗ್ ಬಳಿ ವಿದ್ಯುತ್ ಉತ್ಪತ್ತಿ ಮಾಡಲು ಅನುಮತಿ ಕೋರಿ ಅಂದಿನ ಬ್ರಿಟಿಷ್ ವೈಸ್‌ರಾಯ್ ಲಾರ್ಡ ಕರ್ಜನ್‌ಗೆ ಪತ್ರ ಕೂಡ ಬರೆದರು. ಆದರೆ ಪರಿಸರದ ನೆಪದಿಂದಾಗಿ ಅದಕ್ಕೆ ಅನುಮತಿ ಸಿಗಲಿಲ್ಲ. ಕಡೆಗೆ ಬೇರೆ ದಾರಿ ಕಾಣದೆ ನಾಲ್ವಡಿಯವರು ಜೋಗ್ ಆಲೋಚನೆ ಕೈಬಿಟ್ಟು ಕಾವೇರಿ ನದಿಯಿಂದಲೇ ಶಿವನಸಮುದ್ರಕ್ಕೆ ನಿರಂತರ ನೀರು ಒದಗಿಸುವ ನಿಟ್ಟಿನಲಿ ಚಿಂತನೆಗಿಳಿದರು. ಅಂದ ಹಾಗೆ ಈ ಸಂಧರ್ಭದಲ್ಲಿ ಅವರ ಜೊತೆ ಇದ್ದದ್ದು ವಿಶ್ವೋಶ್ವರಯ್ಯನವರಲ್ಲ. ಬ್ರಿಟಿಷ್ ಎಂಜಿನಿಯರ್ ಮ್ಯಾಕ್‌ಹಚ್!
120 ವರ್ಷಗಳ ಹಿಂದೆ ಟಿಪ್ಪು ಶಂಕು ಸ್ಥಾಪನೆ ಮಾಡಿದ್ದ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ಕಟ್ಟುವುದೆಂದು ನಿರ್ಧರಿಸಿದ ನಾಲ್ವಡಿಯವರು ಟಿಪ್ಪುಸುಲ್ತಾನನ ಆ ಕನಸಿನ ಯೋಜನೆಗೆ ಮರುಜೀವ ನೀಡಲು ನಿಶ್ಚಯಿಸಿದರು ಮತ್ತು ಈ ನಿಟ್ಟಿನಲಿ ಕಾರ್ಯ ಪ್ರವೃತ್ತರಾಗುವಂತೆ ತಮ್ಮ ಎಂಜಿನಿಯರ್‌ಗಳ ತಂಡಕ್ಕೆ ಕೂಡ ಅವರು ಸೂಚಿಸಿದರು.ನಾಲ್ವಡಿಯವರು ಹಾಗೆ ಸೂಚನೆ ನೀಡಿದ (1906) ಆ ಎಂಜಿನಿಯರ್‌ಗಳ ಆ ತಂಡದಲ್ಲಿಯೂ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ! ಯಾಕೆಂದರೆ ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯನವರು ಇನ್ನು ಕಾಲೇ ಇಟ್ಟಿರಲಿಲ್ಲ!
ಇರಲಿ, ಅಣೆಕಟ್ಟೆಯನ್ನೇನೊ ಕಟ್ಟಲು ಮಹಾರಾಜರು ನಿರ್ಧರಿಸಿದರು. ಆದರೆ ಅದು ಅಷ್ಟೊಂದು ಸರಾಗದ ಕೆಲಸವಾಗಿತ್ತೆ? ಖಂಡಿತ ಇಲ್ಲ. ಯಾಕೆಂದರೆ ಆ ಸಂದರ್ಭದಲ್ಲಿ ಬ್ರಿಟಿಷ್ ರೆಸಿಡೆಂಟರಿಂದ ಅವರಿಗೆ ಪರವಾನಿಗೆ ಸಿಕ್ಕಿದ್ದು ಕೇವಲ 70 ಅಡಿ ಎತ್ತರ ಕಟ್ಟಲು ಹಾಗೂ 60ಅಡಿ ನೀರು ಸಂಗ್ರಹಿಸಲು ಮಾತ್ರ! ಆದರೆ ಅದಕ್ಕೆ ಬಗ್ಗದ ನಾಲ್ವಡಿಯವರು 90ಅಡಿ ಎತ್ತರ ಕಟ್ಟಡ ಕಟ್ಟಲು ಮತ್ತು 80ಅಡಿ ನೀರು ಸಂಗ್ರಹಿಸಲು (ಮುಂದೆ ವಿಸ್ತರಿಸಬಹುದಾದ ಅವಕಾಶದೊಂದಿಗೆ) ಬ್ರಿಟಿಷರಿಂದ ಒಪ್ಪಿಗೆ ಪಡೆದರು ಮತ್ತು ಹಾಗೆ ಒಪ್ಪಿಗೆ ಸಿಕ್ಕಿದ್ದೆ ತಡ ಮ್ಯಾಕ್‌ಹಚ್ ಮತ್ತವರ ತಂಡ ಜಲಾಶಯದ ನಿರ್ಮಾಣಕ್ಕೆ(1908) ಕಾರ್ಯೋನ್ಮುಖವಾಯಿತು.
ಈ ನಿಟ್ಟಿನಲ್ಲಿ ಜಲಾಶಯ ನಿರ್ಮಾಣದ ಪ್ರಾಥಮಿಕ ತಯಾರಿ ನಡೆದ ಈ ಸಂಧರ್ಭದಲ್ಲಿಯೂ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ! ಅದು 1908ರ ಅಂತ್ಯದ ಸಮಯ. ಎಂಜಿನಿಯರ್ ಮ್ಯಾಕ್‌ಹಚ್ ಸೇವೆಯಿಂದ ನಿವೃತ್ತರಾದರು ಮತ್ತು ತೆರವುಗೊಂಡ ಅವರ ಸ್ಥಾನಕ್ಕೆ ಕ್ಯಾಪ್ಟನ್ ಡೇವಿಸ್ ಎಂಬುವವರು ನೇಮಕಗೊಂಡರು.ಕ್ಯಾ.ಡೇವಿಸ್ ನದಿಯ ಪಾತ್ರ ಬದಲಿಸುವ ಹಚ್‌ರ ಕಾಮಗಾರಿಯನ್ನು ಮುಂದುವರೆಸಿದರು. ದುರಂತವೆಂದರೆ 1909ರ ಮೇ-ಜೂನ್‌ನಲ್ಲಿ ನದಿಯ ಪ್ರವಾಹವೊಂದರಲ್ಲಿ ಆತ ಕೋಚ್ಚಿ ಹೋದ ಮತ್ತು ಘಟನೆಯಲ್ಲಿ ಡೇವಿಸ್ ಹಠಾತ್ ಸಾವಿಗೀಡಾದ.
ಡೇವಿಸ್‌ನ ಈ ಸಾವಿನಿಂದಾಗಿ ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಹುದ್ದೆ ಖಾಲಿಬಿದ್ದಿತು. ಮೈಸೂರು ಸಂಸ್ಥಾನದಲ್ಲಿ ಈ ಸಂಧರ್ಭದಲ್ಲಿ ಒಳಗೊಳಗೆ ಒಂದು ಹೋರಾಟ ಪ್ರಾರಂಭವಾಗಿತ್ತು.ಸಂಸ್ಥಾನದಲ್ಲಿದ್ದ ಮದ್ರಾಸಿ ಅಧಿಕಾರಿಗಳನ್ನು ಓಡಿಸುವ ಮೈಸೂರು ಮೈಸೂರಿಗರಿಗೆ ಎಂಬ ಹೆಸರಿನ ಹೋರಾಟವದು. ಈ ಹೋರಾಟ ಕಾವು ಪಡೆದು ಕೊಳ್ಳುತ್ತಿದ್ದಂತೆ ಇದನ್ನು ಶಮನಮಾಡಬೇಕಾದ ತುರ್ತು ಮಹಾರಾಜರಿಗೊದಗಿತು. ಹಾಗೆಯೇ ಖಾಲಿಬಿದ್ದ ಎಂಜಿನಿಯರ್ ಹುದ್ದೆಗೆ ಭರ್ತಿಮಾಡಬೇಕಾದ ಅನಿವಾರ್ಯತೆ ಕೂಡ ಅವರಿಗೆ ಎದುರಾಯಿತು.
ಎಂಜಿನಿಯರ್ ನೇಮಕ ಮತ್ತು ಮೈಸೂರು ಮೈಸೂರಿಗರಿಗೆ ಎಂಬ ಎರಡೂ ಬೇಡಿಕೆಯ ಹಿನ್ನೆಲೆಯಲ್ಲಿ ಮಹಾರಾಜರು ಮುಂಬೈಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಸಂಸ್ಥಾನದವರೆ ಆದ ವಿಶ್ವೇಶ್ವರಯ್ಯರವರನ್ನು ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಿಸಿದರು. ಅಂತೂ ಮಹಾರಾಜರ ಆದೇಶದ ಮೇರೆಗೆ 1909ರ ಅಂತ್ಯದಲ್ಲಿ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದರು!
ಸಂಸ್ಥಾನಕ್ಕೆ ಪ್ರವೇಶ ಪಡೆಯುತ್ತಿ ದ್ದಂತೆ ಎಂಜಿನಿಯರರಾದ ವಿಶ್ವೇಶ್ವರಯ್ಯ ನವರ ಹೆಗಲ ಮೇಲೆ ಸಂಸ್ಥಾನದ ಎಲ್ಲ ನಿರ್ಮಾಣ ಕಾಮಗಾರಿಗಳ ಹೊಣೆಯೂ ಬಿತ್ತು. ಹಾಗೆಯೆ ಮ್ಯಾಕ್‌ಹಚ್ ಮತ್ತು ಕ್ಯಾ.ಡೇವಿಸ್ ಪ್ರಾರಂಭಿಸಿದ್ದ ಕೆ.ಆರ್.ಎಸ್. ಕಾಮಗಾರಿ ಹೊಣೆ ಕೂಡ ಅವರ ಮೇಲೆ ಬಿತ್ತು. ಈ ನಿಟ್ಟಿನಲ್ಲಿ ಸ್ಪಷ್ಟವಾಗುವುದೇನೆಂದರೆ ಕೆ.ಆರ್.ಎಸ್. ಕಾಮಗಾರಿ ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ್ದಲ್ಲ ಎಂಬುದು. ಸ್ವತಃ ವಿಶ್ವೇಶ್ವರಯ್ಯನವರೆ ತಮ್ಮ ಆತ್ಮಕಥೆ ನನ್ನ ವೃತ್ತಿಜೀವನದ ನೆನಪುಗಳು ಕೃತಿಯಲ್ಲಿ ನಾನು ಬರುವುದಕ್ಕೆ ಮೊದಲೆ ಶ್ರೀರಂಗಪಟ್ಟಣದಿಂದ 10 ಮೈಲು ದೂರದಲ್ಲಿ ಕಾವೇರಿ ನದಿಯ ಪಶ್ಚಿಮ ದಂಡೆ ಮೇಲೆ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣದ ಕಾಮಗಾರಿ ನೆಡೆದಿತ್ತು ಎಂದು ಬರೆದುಕೊಳ್ಳುತ್ತಾರೆ.
ಆ ಮೂಲಕ ಜಲಾಶಯದ ಕಾಮಗಾರಿ ತನ್ನ ಆಗಮನಕ್ಕೂ ಮೊದಲೇ ಪ್ರಾರಂಭಗೊಂಡಿತ್ತೆಂಬುದನ್ನು ಅವರೇ ಸ್ಪಷ್ಟವಾಗಿ ದಾಖಲಿಸುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಕೆ.ಆರ್.ಎಸ್ ವಿಶ್ವೇಶ್ವರಯ್ಯನವರ ಕನಸಿನ ಕೂಸಂತು ಅಲ್ಲ. ಟಿಪ್ಪು ಕನಸಿದ್ದನ್ನು ನಾಲ್ವಡಿಯವರು ಕಾರ್ಯರೂಪಕ್ಕೆ ತಂದ ಸಂದರ್ಭದಲ್ಲಿ ಮಧ್ಯೆ ಇಂಜಿನಿಯರರಾಗಿ ನೇಮಕಗೊಂಡು ಅವರು ಕೆಲಸ ಮುಂದುವರೆಸಿದ್ದಾರೆ ಅಷ್ಟೆ!
ಇರಲಿ, ಈ ನಡುವೆ ಮಹಾರಾಜರ ವಿಶ್ವಾಸ ಸಂಪಾದಿಸಿದ ವಿಶ್ವೇಶ್ವರಯ್ಯನವರು ಮೈಸೂರು ಮೈಸೂರಿಗರಿಗೆ ಎಂಬ ಮತ್ತದೇ ತತ್ವದ ಅಡಿಯಲ್ಲಿ ದಿವಾನ ಹುದ್ದೆಗೂ ಕೂಡ ನೇಮಿಸಲ್ಪಟ್ಟರು. ಅಂದ ಹಾಗೆ ಆಗ ತೆರವಾದ ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಿಸಲ್ಪಟ್ಟವರು ಯಾರು? ಯಾರೂ ಯಾಕೆ ಅವರ ಹೆಸರು ಹೇಳುವುದಿಲ್ಲ? ಕೆ.ಆರ್.ಎಸ್. ಇತಿಹಾಸದ ದ್ವಂದ್ವವೆಂದರೆ ಇದೇ! ಏಕೆಂದರೆ ಜಲಾಶಯದಲ್ಲಿ ಈಗಲೂ ಕೆ.ಆರ್.ಎಸ್.ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ ೫೦ಕ್ಕೂ ಹೆಚ್ಚು ಎಂಜಿನಿಯರ್‌ಗಳ ಹೆಸರನ್ನೊಳಗೊಂಡ ನಾಮಫಲಕವಿದೆ.
ಅದರಲ್ಲಿ ವಿಶ್ವೇಶ್ವರಯ್ಯ ಒಬ್ಬರಷ್ಟೆ. ಬರೀ ವಿಶ್ವೇಶ್ವರಯ್ಯರವರೊಬ್ಬರೇ ಅಲ್ಲ! ಅಂದಹಾಗೆ 1911ರಲ್ಲಿ ಆರಂಭವಾದ ಜಲಾಶಯದ ಕಟ್ಟಡದ ಕಾಮಗಾರಿ ಪ್ರಾರಂಭದಲ್ಲೆ ಹಣದ ಕೊರತೆಯನ್ನೆದುರಿಸಿತು.ಧೃತಿಗೆಡದ ಮಹಾರಾಜ ನಾಲ್ವಡಿಯವರು ತಮ್ಮ ತಾಯಿ ಮತ್ತು ತಮ್ಮ ಧರ್ಮಪತ್ನಿಯವರಿಗೆ ಸೇರಿದ 4 ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಿ ಹಣ ಒದಗಿಸಿದರು.
ವಜ್ರಾಭರಣಗಳನ್ನು ಮಾರಿ ಮಹಾರಾಜರು ಒದಗಿಸಿದ ಆ ಹಣದಲ್ಲಿ ಮುಖ್ಯಎಂಜಿನಿಯರ್ ವಿಶ್ವೇಶ್ವರಯ್ಯನವರ ಸಂಬಳವೂ ಸೇರಿತ್ತೆಂಬುದು ವ್ಯಂಗ್ಯವೆನಿಸಿದರೂ ಸತ್ಯ! ಒಂದಂತು ನಿಜ ಕಾಮಗಾರಿಯುದ್ದಕ್ಕೂ ನೋವು ಅನುಭವಿಸಿದ್ದು ಮಹಾರಾಜರು. ಆದರೆ ಶ್ರೇಯಸ್ಸು? ಒಂದು ಮಾತು ಅದೇನೆಂದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಗೊಂದಲ ಉಂಟಾಗಿ ವಿಶ್ವೇಶ್ವರಯ್ಯನವರು 1918ರಲ್ಲಿ ದಿವಾನ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಪ್ರಶ್ನೆಯೇನೆಂದರೆ ಸರ್.ಎಂ.ವಿ.ರವರು ರಾಜೀನಾಮೆ ಇತ್ತಾಕ್ಷಣ ಕಾಮಗಾರಿ ನಿಂತು ಹೋಯಿತೆ? ಎಂಬುದು. ಖಂಡಿತ ಇಲ್ಲ! ಹಾಗೆ ಹೇಳುವುದಾದರೆ ಕೆ.ಆರ್.ಎಸ್ ನಿರ್ಮಾಣವೆ ವಿಶ್ವೇಶ್ವರಯ್ಯನವರ ಧ್ಯೇಯವಾಗಿದ್ದರೆ ಅವರು ರಾಜೀನಾಮೆ ನೀಡಲೇ ಬಾರದಿತ್ತು!
ಕೆ.ಆರ್.ಎಸ್ ಕಟ್ಟಿಯೇ ನಾನು ಹೋಗುವುದು ಎಂದು ಅವರು ಹೇಳಬೇಕಿತ್ತು! ಊಹ್ಞೂಂ, ಅದ್ಯಾವುದೂ ನಡೆದಿಲ್ಲ! ವಿಶ್ವೇಶ್ವರಯ್ಯನವರು ರಾಜೀನಾಮೆ ಇತ್ತು ಹೋದರು ಮತ್ತು ಜಲಾಶಯದ ಕಾಮಗಾರಿ ಅದರ ಪಾಡಿಗೆ ಅದು ನಡೆದಿತ್ತು! ಈ ನಿಟ್ಟಿನಲ್ಲಿ ಅವರು ತಮ್ಮ ರಾಜೀನಾಮೆಯ ನಂತರ ಅವರ ನಂತರದ ದಿವಾನರುಗಳಿಗೆ ಅಂದರೆ ದಿವಾನ್ ಕಾಂತರಾಜ ಅರಸ್, ದಿವಾನ್ ಬ್ಯಾನರ್ಜಿ,ದಿವಾನ್ ಮಿರ್ಜಾ ಇಸ್ಮಾಯಿಲ್‌ರವರುಗಳಿಗೆ ಸಹಾಯಕರಾದದ್ದಾಗಲಿ, ಸಲಹೆಗಾರರಾದದ್ದಾಗಲಿ ಎಂಥದ್ದೂ ಇಲ್ಲ! ಕಡೆಪಕ್ಷ ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದವರಿಗೆ ಮೇಸ್ತ್ರಿಯಾಗಿಯಾದರೂ ಅವರಿದ್ದರೆ? ಉಹ್ಞೂಂ, ಅದೂ ಇಲ್ಲ! ಹಾಗಿದ್ದರೆ ಅದರ ನಿರ್ಮಾಣದ ಶ್ರೇಯಸ್ಸು ಅವರಿಗೆ ಹೇಗೆ ಸಂದಿತು ಎಂಬುದು?
ವಾಸ್ತವದಲ್ಲಿ ಅವರು ರಾಜೀನಾಮೆ ನೀಡಿದ 14ವರ್ಷಗಳ ನಂತರ ಅಂದರೆ 1939ರಲ್ಲಿ ಜಲಾಶಯದ ಕಾಮಗಾರಿ ಮುಗಿದದ್ದು. ಆಶ್ಚರ್ಯವೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಆಗಲೂ ಕೂಡ ರಾಜರಾಗಿ ಮುಂದುವರಿದಿದ್ದರು. ಮತ್ತು ತಾವು ಪ್ರಾರಂಭಿಸಿದ ಯೋಜನೆಯನ್ನು ತಾವೇ ತಮ್ಮ ಕೈಯ್ಯಾರೆ ಉದ್ಘಾಟಿಸಿದರು! ದುರಂತವೆಂದರೆ ಅದರ ಶ್ರೇಯಸ್ಸು ಅವರಿಗೆ ಸಲ್ಲಲಿಲ್ಲ! ಅವರ ಕೈ ಕೆಳಗೆ ವೇತನಕ್ಕಾಗಿ ದುಡಿದವರೊಬ್ಬರಿಗೆ ಅದು ಸಂದಿತು! ಸತ್ಯ ಹೀಗಿರುವಾಗ, ಇತಿಹಾಸದಲ್ಲಿ ನಾಲ್ವಡಿಯವರಿಗೆ ಘಟಿಸಿರುವ ಇಂತಹ ಘೋರತೆಗೆ ಯಾರು ಹೊಣೆ? ನಮ್ಮ ಕಣ್ಣೆದುರೆ ಒಬ್ಬ ಶ್ರೇಷ್ಠ ರಾಜನಿಗೆ ಅವನ ಸಾಧನೆಯ ಶ್ರೇಷ್ಠತೆ ಧಕ್ಕಲಿಲ್ಲವೆಂದರೆ?
ಹಾಗಿದ್ದರೆ ತನ್ನ ತನು ಮನ ಧನವನ್ನೆಲ್ಲ ಧಾರೆ ಎರೆದು ಆತ ಮಾಡಿದ ಆ ತ್ಯಾಗಕ್ಕೆ ಬೆಲೆಯಾದರೂ ಎಲ್ಲಿದೆ? ನಾಲ್ವಡಿಯವರಿಗೆ ಯಾರು ಇಂಥ ದ್ರೋಹ ಎಸಗಿದ್ದು? ಸ್ವತಃ ವಿಶ್ವೇಶ್ವರಯ್ಯನವರಂತು ಖಂಡಿತ ಅಲ್ಲ. ಬದಲಿಗೆ ಕಪೋಲ ಕಲ್ಪಿತ ಕಥೆ ಕಟ್ಟಿದ ಅವರ ಅನುಯಾಯಿಗಳು! ಹಾಗೆಯೇ ಬಂಗಾರದ ಮನುಷ್ಯ ಚಿತ್ರದಲ್ಲಿ ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ..ಎಂಬ ಅಂತಹದ್ದೊಂದು ಆಘಾತಕಾರಿ ಸಾಹಿತ್ಯ ಬರೆಸಿದ ಆ ನಿರ್ಮಾಪಕ ಹಾಗೂ ಬರೆದ ಆ ಕವಿ!
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...