ಒಂದು ಬಹುಮುಖಿ ಸಮಾಜದಲ್ಲಿ ಆತಂಕಗಳು ಮತ್ತು ತಲ್ಲಣಗಳು ಹೇಗೆ ಸೃಷ್ಟಿಯಾಗುತ್ತಿರುತ್ತವೆ. ಒವ್ಮೊಮ್ಮೆ ಇದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ಈ ದೃಷ್ಟಿಯಿಂದ ಭಯೋತ್ಪಾದನೆ ನೆಪದಲ್ಲಿ ಒಂದಷ್ಟು ಮುಸಲ್ಮಾನ ಯುವಕರನ್ನು ಪೊಲೀಸರು ಬಂಧಿಸಿದಾಗ. ಅವರ ಕುಟುಂಬದವರ ಮತ್ತು ಬಂಧುಬಾಂಧವರ ಆಕ್ರಂದನದ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ಕಂಡು ಒದ್ದಾಡ ತೊಡಗಿದೆ. ಇದರ ಮುಂದೆಯೇ; ಕೆಲವು ದಿವಸಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಮುಸಲ್ಮಾನ ಬಾಂಧವರು ನಡೆಸುತ್ತಿದ್ದ ಕಾಲೇಜಿಗೆ ಭಾಷಣ ಮಾಡಲು ಹೋಗಿದ್ದೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಲ್ಲ ಜಾತಿ, ಮತ ಮತ್ತು ವರ್ಗಗಳಿಂದ ಬಂದವರು. ಅತ್ಯಂತ ಶಿಸ್ತುಬದ್ಧ ಶಿಕ್ಷಣ ಸಂಸ್ಥೆ. ನಾನು ಸ್ವಲ್ಪ ದೀರ್ಘವಾಗಿಯೇ ಮಾತಾಡಿದ್ದೆ. ಭಾಷಣದ ನಂತರ ಸಾಕಷ್ಟು ವಿದ್ಯಾರ್ಥಿಗಳು ಪ್ರಶ್ನೆಗಳ ಮೂಲಕ ಮುಖಾಮುಖಿಯಾದರು. ಆ ಪ್ರಶ್ನೆಗಳೆಲ್ಲ ಸಾಮಾಜಿಕ ಆಗು ಹೋಗುಗಳ ಮೂಲಕ ತಲ್ಲಣ ಗೊಂಡ ಪ್ರಶ್ನೆಗಳು. ಒಂದು ರೀತಿಯಲ್ಲಿ ಅಧೀರತೆಯಿಂದ ಸೃಷ್ಟಿಗೊಂಡಂಥವು. ಇವುಗಳ ಪರಿಹಾರಕ್ಕೆ ದೊಡ್ಡದನಿಯೊಂದು ಸಮಾಜದಲ್ಲಿ ಕಾಣುತ್ತಿಲ್ಲ ಎಂಬ ದುಗುಡವನ್ನು ತುಂಬಿಕೊಂಡವರು.
ಇಂಥ ನೋಟದ ಮುಂದೆ ಇದ್ದಕ್ಕಿದ್ದಂತೆ ಲಂಕೇಶ್ ಅವರು ಮಾನಸಿಕವಾಗಿ ಎದುರಾದರು. ಪ್ರತಿದಿವಸ ಸಂಜೆ ಅವರ ಕೊಠಡಿಯಲ್ಲಿ ಸೇರುವಾಗ, ಇಂಥದ್ದೇ ಯಾವಾಗಲೂ ಚರ್ಚೆಯಾಗುತ್ತಿತ್ತು. ಇದಕ್ಕೆ ಒತ್ತು ಕೊಡುವ ರೀತಿಯಲ್ಲಿ ಕರ್ನಾಟಕದ ಮೂಲೆಯೊಂದರ ಭಟ್ಕಳದ ಚಿತ್ರಣ ಧುತ್ತನೆ ಮುಂದೆ ಬಂದು ನಿಲ್ಲುತ್ತಿತ್ತು. ಇದು ಎರಡು ದಶಕಗಳ ಹಿಂದಿನ ಮಾತು. ಒಮ್ಮೆ ಇದ್ದಕ್ಕಿದ್ದಂತೆ “ಶೂದ್ರ, ಸಿದ್ಧವಾಗು ಹೊನ್ನಾವರ, ಭಟ್ಕಳ ಮತ್ತು ಅಂಕೋಲಗೆ ಹೋಗಿ ಬರೋಣ. ಅಲ್ಲಿಯ ಕಾಲೇಜುಗಳಲ್ಲಿ ಭಾಷಣ ಮಾಡಿ ಬರೋಣ.ತುಂಬ ದಿವಸಗಳಿಂದ ಕರೆಯು ತ್ತಿದ್ದಾರೆ” ಎಂದರು.
ನಾನು ಎರಡನೆಯ ಮಾತಿಲ್ಲದೆ ಅವರೊಡನೆ ಹೊರಟೆ. ಹೊರಡುವ ಮುನ್ನ ಒಂದು ಸಂಜೆ ಶಿಕ್ಷಣ ಸಚಿವರಾಗಿದ್ದ ಯಾಹ್ಯಾ ಅವರ ಮನೆಗೆ ಕರೆದುಕೊಂಡು ಹೋದರು. ಯಾಹ್ಯಾ ಅವರನ್ನು ಲಂಕೇಶ್ ಅವರು ತುಂಬ ಇಷ್ಟಪಡುತ್ತಿದ್ದರು. ಸಭ್ಯ ರಾಜಕಾರಣಿ ಮತ್ತು ಶಿಕ್ಷಣ ತಜ್ಞ ಎಂದು. ಅವರ ಮನೆ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯಲ್ಲಿತ್ತು. ಲಂಕೇಶ್ ಪತ್ರಿಕೆ ಅಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಉತ್ತುಂಗದ ಸ್ಥಿತಿಯಲ್ಲಿದ್ದ ಕಾಲವದು. ಎಲ್ಲ ರಾಜಕಾರಣಿಗಳು ಮತ್ತು ಚಿಂತಕರು ಲಂಕೇಶ್ ಅವರು ಯಾವ ರೀತಿಯ ಧ್ವನಿಯನ್ನು ದಾಖಲಿಸುತ್ತಾರೆ ಎಂಬುದರ ಬಗ್ಗೆ ಕಾಯುತ್ತಿದ್ದರು.
ನಾವು ಯಾಹ್ಯಾ ಅವರ ಮನೆಗೆ ಹೋಗಿದ್ದು, ಭಟ್ಕಳದ ಬಗ್ಗೆ ಒಂದಷ್ಟು ಹಿನ್ನೆಲೆಯನ್ನು ಪಡೆಯಲು ಮನೆಗೆ ಹೋದಾಗ ಪ್ರೀತಿಯಿಂದ ಬರಮಾಡಿ ಕೊಂಡರು. ಲಂಕೇಶ್ ಅವರನ್ನು ಪ್ರತ್ಯಕ್ಷವಾಗಿ ನೋಡುವ ಕುತೂಹಲದಿಂದ ಕೆಲವರು ಯಾಹ್ಯಾ ಅವರಿಗೆ ರಾಜಕೀಯವಾಗಿ ಹತ್ತಿರದಲ್ಲಿದ್ದವರು ಬಂದಿದ್ದರು. ಅವರಲ್ಲಿ ಹಿಂದೂ ಮತ್ತು ಮುಸಲ್ಮಾನರು ಇದ್ದರು. ಯಾಹ್ಯಾ ಅವರು ಮೂಲಭೂತವಾಗಿ ಮುಸಲ್ಮಾನ ಜನಾಂಗದ ಮೇಲ್ವರ್ಗಕ್ಕೆ ಸೇರಿದ ಸಭ್ಯ ವ್ಯಕ್ತಿಯಾಗಿದ್ದರು. ಆ ಸಭ್ಯತೆಯ ಹಿನ್ನೆಲೆಗೆ ಏನೇನು ಕೊರತೆಯಾಗ ದಂತೆ, ನಮ್ಮನ್ನು ನೋಡಿಕೊಂಡರು. ನೋಡಿ ಕೊಂಡರು ಎನ್ನುವುದಕ್ಕಿಂತ, ಅವರ ವ್ಯಕ್ತಿತ್ವವೇ ಆ ರೀತಿಯಲ್ಲಿತ್ತು. ಸುಮಾರು ಒಂದು ಗಂಟೆ ಅವರ ಮನೆಯಲ್ಲಿ ಕಳೆದೆವು. ಆಗ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಮುಸಲ್ಮಾನ ಬಾಂಧವರ ಒಂದು ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದಿಟ್ಟರು.
ಭಟ್ಕಳದ ಬಹುಪಾಲು ಮುಸ್ಲಿಂ ಬಾಂಧವರು ಮೇಲ್ವರ್ಗಕ್ಕೆ ಸೇರಿದವರು. ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ಒಂದಷ್ಟು ಸಂಪತ್ತನ್ನು ಬೆಳೆಸಿಕೊಂಡು ಬಂದವರು. ಒಂದು ರೀತಿಯ ಮೇಲ್ವರ್ಗದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡು ಬಂದವರು. ಆದರೆ ಯಾವುದೇ ರೀತಿಯ ತೊಡಕನ್ನು ಬೇರೆಯವರಿಗೆ ಕೊಡುವಂಥವರಲ್ಲ. ವಾಣಿಜ್ಯ ವ್ಯವಹಾರದಲ್ಲಿ ಗಟ್ಟಿಯಾಗಿ ನಿಂತವರು. ಇದು ವ್ಯಾವಹಾರಿಕ ವಾಗಿ ಸಹಿಸದವರ ಗುಂಪು ಬೆಳೆಯಲು ಸಾಧ್ಯವಾಯಿತು. ಹಾಗೆಯೇ ಅಂಜುಮನ್ ಶಿಕ್ಷಣ ಸಂಸ್ಥೆಗಳ ಹಿನ್ನೆಲೆಯನ್ನು ಕೊಟ್ಟರು. ನಾವು ಹೋಗಬೇಕಾಗಿದ್ದುದು ಅಂಜುಮಾನ್ ಕಾಲೇಜಿಗೆ.
ಅಂದು ಸಂಜೆಯ ಮಾತುಕತೆಯಲ್ಲಿ ಒಬ್ಬ ಗಟ್ಟಿ ಮುಟ್ಟಾದ ಮುಸಲ್ಮಾನ ರಾಜಕೀಯ ನಾಯಕ ಯಾಕೆ ಭಾರತದಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ ಎಂಬುದರ ಜೊತೆಗೆ ಕಾಶ್ಮೀರ ಕಣಿವೆಯ ಶೇಖ ಅಬ್ದುಲ್ಲಾ ಅವರಂಥ ಅದ್ಭುತ ನಾಯಕನನ್ನು ಕುರಿತೂ ಚರ್ಚೆಯಾಯಿತು. ಅಂಥ ನಾಯಕರು ಸೃಷ್ಟಿಯಾದಾಗಲೇ ಮತೀಯ ಸಾಮರಸ್ಯಕ್ಕೆ ಚೈತನ್ಯ ಬರುವುದು, ಈ ಕುರಿತು ಮಾತುಕತೆ ನಡೆಯಿತು. ಇಂಥದ್ದು ಬಹಳಷ್ಟು ಬಾರಿ ಲಂಕೇಶ್ ಅವರು ಹಾಗೂ ಅಬ್ದುಲ್ ನಜೀರ್ ಸಾಬ್ ಅವರು ಸೇರಿದಾಗ ತುಂಬ ದೀರ್ಘವಾದ ಚರ್ಚೆ ನಡೆದಿದೆ. ಯಾಕೆಂದರೆ ಯಾವುದೇ ಸಮಾಜದಲ್ಲಿ ನಾಯಕತ್ವ ಬೆಳೆಯದಿದ್ದರೆ, ಆಯಾ ಜನಾಂಗವನ್ನು ಧ್ವನಿಪೂರ್ಣವಾಗಿ ತವ್ಮೊಟ್ಟಿಗೆ ಬಹುದೂರ ಕರೆದೊಯ್ಯಲು ಸಾಧ್ಯವಿಲ್ಲವೆಂಬುದು ಚಾರಿತ್ರಿಕ ಸಂಗತಿ.
ಇಂಥ ಎಷ್ಟೋ ಮಾತುಗಳು ಚರ್ಚೆಯಾಯಿತು. ಯಾಹ್ಯಾ ಅವರು ಮತ್ತು ಅವರ ಸಂಗತಿಗರ ನಡುವೆ ಭಾವಚಿತ್ರಗಳಿಗೂ ಸಿದ್ಧವಾದವು. ನಮ್ಮಿಬ್ಬರಿಗೂ ಸಿಹಿಯ ಪಾಕೆಟ್ಟುಗಳನ್ನು ಕೊಟ್ಟರು. ಅದರ ಜೊತೆಗೆ ಅವರ ಸಿಹಿಯ ಮಾತುಗಳ ಪದ ಪುಂಜಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಗುನುಗುನಿಸುತ್ತಿದೆ. ಇಂಥ ಗುನುಗುನುವನ್ನು ಜೊತೆಗಿಟ್ಟುಕೊಂಡೇ ನಾವು ಉತ್ತರ ಕನ್ನಡದ ಕಡೆಗೆ ಹೊರಟೆವು. ಲಂಕೇಶ್ ಅವರ ಜೊತೆ ಪ್ರವಾಸ ಅಥವಾ ಸುತ್ತಾಟವೆಂದರೆ, ಯಾವಾಗಲೂ ರೋಚಕವಾಗಿಯೇ ಇರುತ್ತಿತ್ತು. ಏನೇನೋ ಪೋಲಿ ಪೋಲಿ ಮಾತುಗಳು. ಇದ್ದಕ್ಕಿದ್ದಂತೆ ಗಂಭೀರತೆ.
ಆಗ ಟಾಲ್‌ಸ್ಟಾಯ್, ದಾಸ್ತೋವಸ್ಕಿ, ಆಲ್ಬರ್ಟ್ ಕಾಮು, ಬ್ಲೇಕ್‌ಗೆ ಮೊರೆ ಹೋಗುತ್ತಿದ್ದ ಕ್ಷಣಗಳು. ಗಾಂಧೀಜಿ ಮತ್ತು ಬುದ್ಧ ಎಷ್ಟು ಧ್ವನಿಪೂರ್ಣವಾಗಿ ಬಂದು ಹೋಗುತ್ತಿದ್ದರು.ಮತ್ತೆ ಇಂಥದರ ನಡುವೆಯೇ ಕಾರ್‌ಡ್ರೈವ್ ಮಾಡುವಾಗ, ಬಿ.ಆರ್.ಛಾಯಾ ಅವರ ಗೀತೆಗಳ ಕ್ಯಾಸೆಟ್ ಹಾಕಿ ಸಂಭ್ರಮಿಸುತ್ತಿದ್ದರು. ನಾನು ಒವ್ಮೊಮ್ಮೆ ಬೋರ್ ಆಗಿ ನಿಲ್ಲಿಸಲು ಒತ್ತಾಯಿಸಿದಾಗ, “ಆ ಲೌಡಿ ಎಷ್ಟು ಚೆನ್ನಾಗಿ ಹಾಡ್ತಾಳೆ ಕೇಳು” ಎಂದು ಕಿಚಾಯಿಸುತ್ತಿದ್ದರು.ಲಂಕೇಶ್ ಅವರು ತಾವು ಇಷ್ಟ ಪಡುತ್ತಿದ್ದ ಹುಡುಗಿಯರನ್ನು ಪ್ರೀತಿಯಿಂದ ‘ಲೌಡಿ’ ಎಂದು ಕರೆಯುವುದು ಸ್ವಾಭಾವಿಕವಾಗಿ ಬಿಟ್ಟಿತ್ತು. ಮತ್ತು ಎಲ್ಲೆಂದರಲ್ಲಿ ನಿಲ್ಲಿಸಿ ಸಿಗರೇಟು ಸೇದುತ್ತ, ನನಗೆ ಬರ್ಪಿಯನ್ನು ಕೊಡಿಸುತ್ತಿದ್ದರು. ಅವರ ಆರೋಗ್ಯದ ದಿನ ಗಳಲ್ಲಿಯ ಉತ್ತುಂಗದ ಪ್ರವಾಸದ ದಿನಗಳು.
ಮಾತುಕತೆಯ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಬಂದರೂ, ನಮ್ಮನ್ನೆಲ್ಲ ಬಿಟ್ಟು ಒಬ್ಬರೇ ಕಾರು ಓಡಿಸುತ್ತ ಬೆಂಗಳೂರಿನ ಕಡೆ ಹೋಗಿ ಬಿಡು ತ್ತಿದ್ದರು. ಅಂಥದ್ದನ್ನು ತುಂಬ ಎದುರಿಸಿದ್ದೇವೆ. ಇಷ್ಟಾದರೂ ಅತ್ಯಂತ ಇಷ್ಟಪಡುವಂಥ ಸಂಘಜೀವಿ. ಏಕಾಂತ ಮತ್ತು ಸಂಘತ್ವದ ನಡುವಿನ ಹೆಚ್ಚುಗಾರಿಕೆ ಯನ್ನು ಯಾವಾಗಲೂ ಹುಡುಕುತ್ತಿದ್ದವರು. ಹೊನ್ನಾವರದ ಕಾಲೇಜಿನಲ್ಲಿ ಭಾಷಣ ವಾಯಿತು. ಜನ ಕಿಕ್ಕಿರಿದು ತುಂಬಿದ್ದರು. ಅಲ್ಲಿಯ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಭಾವಪೂರ್ಣ ಅಭಿಮಾನವನ್ನು ಕಂಡು ಬೆರಗಾಗಿದ್ದರು. ಒಬ್ಬ ಲೇಖಕನನ್ನು ಇಷ್ಟು ಗೌರವಿಸುವ ಅಗತ್ಯವಿದೆಯಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಾತಾ ಡುತ್ತಿದ್ದವರು. ಅವರ ಮಾತು, ಭಾಷಣ ತುಂಬ ಒಳನೋಟಗಳಿಂದ ಕೂಡಿರುತ್ತಿತ್ತು.
ಆದರೂ ಭಾಷಣದ ನಂತರ ಏನೇನೋ ಮಾತಾಡಿಬಿಟ್ಟೆ ಎಂಬ ಉದ್ವಿಗ್ನತೆಯನ್ನು ತುಂಬಿಕೊಳ್ಳುತ್ತಿದ್ದರು. ತರಗತಿಯಲ್ಲಿ ಪಾಠ ಮಾಡುವಾಗಲೂ ಇದೇ ಅವಸ್ಥೆಯನ್ನು ಅನುಭವಿಸುತ್ತಿದ್ದರು. ಯಾವ ಯಾವ ಕಾರಣಕ್ಕಾಗಿಯೋ ತಲ್ಲಣಗಳನ್ನು ಮಣಗಟ್ಟಳೆ ಬರಮಾಡಿಕೊಳ್ಳುತ್ತಿದ್ದರು. ಒಂದು ದೃಷ್ಟಿ ಯಿಂದ ಕೆಂಡವನ್ನು ಸೆರಗಿನಲ್ಲಿ ಗಂಟಾಕಿ ಕೊಂಡು ಬದುಕಿದಂತೆ. ಒಂದು ಸಾಹಿತ್ಯ ಕೃತಿಯ ಭಾಷೆ, ಪಾತ್ರ ಮತ್ತು ಘಟನೆಗಳನ್ನು ಕುರಿತಂತೆ ಆ ಪ್ರಮಾಣದಲ್ಲಿ ಒಳ ನೋಟಗಳ ಉದ್ವೇಗಕ್ಕೆ ಒಳಗಾಗುತ್ತಿದ್ದ ಮತ್ತೊಬ್ಬ ಲೇಖಕನನ್ನು ನಾನು ಕಂಡಿಲ್ಲ.
ಆದ್ದರಿಂದಲೇ ಅವರ ಬರವಣಿಗೆಯಲ್ಲಿ ಭಾಷೆಯೆನ್ನುವುದು ಶ್ರೀಮಂತವಾಗಿ ಮಡುಗಟ್ಟಿರುವುದು. ಮತ್ತು ಅವರು ಯಾವುದನ್ನೇ ಕುರಿತು ಮಾತಾಡಿದರೂ, ಅದಕ್ಕೆ ಸಮಕಾಲೀನ ಆಗುಹೋಗುಗಳ ಲೇಪನ ವಿರುತ್ತಿದ್ದುದರಿಂದ, ಸಿಟ್ಟು, ವಿಮರ್ಶೆ ಮತ್ತು ಆಕ್ಷೇಪ ಮಿಶ್ರಗೊಳ್ಳುತ್ತಿತ್ತು. ಆದ್ದರಿಂದಲೇ ಹಿಂದೆ ಪ್ರಸ್ತಾಪಿಸಿದಂತೆ, “ನಾನು ಮಾತಾಡಿದ್ದು ಎಷ್ಟರ ಮಟ್ಟಿಗೆ ಸರಿ” ಎಂಬುದನ್ನು ಕೇಳಿ ಕೊಳ್ಳುತ್ತಲೇ ಜೀವನವನ್ನು ಸವೆಸಿದರು. ಬಹಳಷ್ಟು ಬಾರಿ ಅವರ ಟೀಕೆ-ಟಿಪ್ಪಣೆಯಂಥ ಮತ್ತು ಮರೆಯುವ ಮುನ್ನ ಅಂಕಣಗಳಲ್ಲಿ ಮರು ಓದನ್ನಿಟ್ಟುಕೊಂಡು ತಿದ್ದಲು ಹೋದವರಲ್ಲ, ಯಾಕೆಂದರೆ ಎಲ್ಲಿ ತಿದ್ದಿ, ಅದರ ಶಕ್ತಿಯನ್ನು ಕುಗ್ಗಿಸುತ್ತೇನೋ ಎಂದು.
ಹಾಗೆಯೇ ತಮ್ಮ ಟೀಕೆಯ ಮಾತು ಮತ್ತು ಬರವಣಿಗೆಗೆ ಎಂದು ಸಮಜಾಯಿಷಿಯನ್ನು ಎದುರಿಸಲು ಬಯಸಿದವರಲ್ಲ. ಈ ದೃಷ್ಟಿಯಿಂದ ಕನ್ನಡ ಸಹಿತ್ಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಅವರು ವಿರೋಧಿಗಳನ್ನು ಬರಮಾಡಿ ಕೊಂಡಷ್ಟು ಮತ್ಯಾರು ಬರಮಾಡಿಕೊಂಡಿಲ್ಲ. ಮತ್ತೊಂದು ಅವರ ದೊಡ್ಡಗುಣವೆಂದರೆ: ಯಾವಾಗಲೂ ಕೆಳವರ್ಗದವರ ಮತ್ತು ಅಲ್ಪಸಂಖ್ಯಾತರ ಬಗ್ಗೆ ಇದ್ದ ಅದಮ್ಯವಾದ ಕಳಕಳಿ, ಆದ್ದರಿಂದಲೇ ಘೋಷಣೆಯನ್ನಿಟ್ಟುಕೊಳ್ಳದೇ, ಜನತೆಯ ಲೇಖಕರಾಗಲು ತವಕಿಸುತ್ತಿದ್ದರು. ಯಾಕೆಂದರೆ, ಘೋಷಣೆಗಳು ನಮ್ಮ ಒಟ್ಟು ಆಲೋಚನಾ ಕ್ರಮವನ್ನೇ ಕುಗ್ಗಿಸಿಬಿಡುತ್ತದೆಂದು ತಿಳಿದಿದ್ದರು.
ಹೊನ್ನಾವರದ ಕಾರ್ಯಕ್ರಮದಿಂದ ಸಂಭ್ರಮಗೊಂಡಿದ್ದರು. ಈ ಸಂಭ್ರಮದಿಂದಲೇ ರಾತ್ರಿ ನಾವು ತಡವಾಗಿ ಮಲಗಿದರೂ, ಬೆಳಗ್ಗೆ ಜಾಗ್ರತೆ ಎಬ್ಬಿಸಿ ಬೋಟಿಂಗ್‌ಗೆ ಒಂದೆರಡು ಗಂಟೆ ಕರೆದುಕೊಂಡು ಹೋಗಿದ್ದರು. ಬೆಳಗ್ಗೆ ತಿಂಡಿಯ ನೆಪದಲ್ಲಿ ವಿವಿಧ ರೀತಿಯ ಮೀನಿನ ತಿಂಡಿಗಳನ್ನು ತಿಂದಿದ್ದೆವು. ಅವರಿಗೆ ಮೀನೆಂದರೆ ತುಂಬ ಇಷ್ಟ. ಅದರಲ್ಲೂ ಮೀನಿನ ತಿಳಿಯಾದ ಸಾರು. ಈ ಎಲ್ಲದರ ನೆನಪಿನಲ್ಲಿ ಭಟ್ಕಳಕ್ಕೆ ಸರಿಯಾದ ಸಮಯಕ್ಕೆ ಹೋದೆವು. ಅಲ್ಲಿ ಅಂಜುಮನ್ ಕಾಲೇಜಿನಲ್ಲಿ ಭಾಷಣ ಮುಗಿಸಿಕೊಂಡು, ಅಂಕೋಲಗೆ ದಿನಕರ ದೇಸಾಯಿಯವರ ಕಾಲೇಜಿಗೆ ಹೋಗಬೇಕಾಗಿತ್ತು.
ಭಟ್ಕಳದಲ್ಲಿ ಪ್ರೀತಿಯಿಂದ ಬರಮಾಡಿಕೊಂಡರು. ಕಾರ್ಯಕ್ರಮ ಪ್ರಾರಂಭವಾಯಿತು. ಹಿಂದೂ ಮತ್ತು ಮುಸಲ್ಮಾನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಕೂತಿದ್ದಾರೆ ಅನ್ನಿಸಿತು. ಈ ಅನ್ನಿಸಿಕೆಯಿಂದ ಒಂದು ರೀತಿಯ ಕಿರಿಕಿರಿಯನ್ನು ಪ್ರಾರಂಭದಲ್ಲೇ ಅನುಭವಿಸಿದೆವು. ನಮ್ಮನ್ನು ವಿದ್ಯಾರ್ಥಿಗಳಿಗೆ ಸರಿಯಾಗಿಯೇ ಪರಿಚಯಿಸಿದರು. ಆದರೆ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಸಣ್ಣ ಪ್ರಮಾಣದ ಗದ್ದಲ ಎದ್ದು ಕಾಣುತ್ತಿತ್ತು. ಎರಡು ಜನಾಂಗದ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾದ ಪ್ರಾರ್ಥನೆ. ಆ ಪ್ರಾರ್ಥನೆಯ ಸಮಯದಲ್ಲೂ ಶಿಸ್ತುಬದ್ಧತೆ ಇರಲಿಲ್ಲ. ಇದರ ಮಧ್ಯೆ ಲಂಕೇಶ್ ಅವರು ಮಾತಾಡಲು ಎದ್ದು ನಿಂತರು. ವಿದ್ಯಾರ್ಥಿಗಳು ಸಹಕರಿಸಲಿಲ್ಲ. ತುಂಬಿಕೊಂಡಿದ್ದ ಅಧ್ಯಾಪಕರ ಬಳಗವೂ, ಅವರನ್ನು ನಿಯಂತ್ರಿಸಲು ಹೋಗಲಿಲ್ಲ. ಲಂಕೇಶ್ ಅವರು ಬೇಸರದಿಂದ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಕೂತುಕೊಂಡರು. ಇಲ್ಲಿಯ ‘ಅನ್‌ರೆಸ್ಟ್’ ಬಗ್ಗೆ ಒಂದು ರೀತಿಯಲ್ಲಿ ಯಾಹ್ಯಾ ಅವರು ವೊದಲೇ ನಮಗೆ ಸೂಚನೆಯನ್ನು ಕೊಟ್ಟಿದ್ದರು.
ನಾನು ಒಂದು ರೀತಿಯ ಸಮಾಧಾನದ ಸಿಟ್ಟಿನಿಂದಲೇ ಮಾತನ್ನು ಪ್ರಾರಂಭಿಸಿದೆ. ನೋಡಿ ವೊದಲನೆಯದಾಗಿ ಈ ರೀತಿಯಲ್ಲಿ ಎರಡು ಪ್ರಮುಖ ಜನಾಂಗದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸುವುದು ತಪ್ಪು. ಈ ತಪ್ಪಿನಿಂದಲೇ ಎರಡು ಪ್ರಾರ್ಥನಾ ಗೀತೆಗಳನ್ನು ಹಾಡುವಾಗಲೂ, ಇಬ್ಬರಲ್ಲಿ ಸೌಜನ್ಯದ ಸಾಮರಸ್ಯ ಬೆಳೆದು ಬಂದಿಲ್ಲ. ಇದನ್ನು ಗುರುಸ್ಥಾನದಲ್ಲಿ ಅಧ್ಯಾಪಕರು ನಿಜವಾಗಿಯೂ ಸರಿಪಡಿಸ ಬೇಕು. ಈ ದೃಷ್ಟಿಯಿಂದ ನಾನು ನಿಮ್ಮ ಅಧ್ಯಾಪಕರ ಪರವಾಗಿ ಮತ್ತು ಮ್ಯಾನೇಜ್‌ಮೆಂಟ್ ಪರವಾಗಿ ಹಾಗೂ ನನ್ನ ಗುರುಗಳಾದ ಲಂಕೇಶ್ ಅವರ ಪರವಾಗಿ ಮನವಿಕೊಡಿಕೊಳ್ಳುತ್ತೇನೆ.
ನಾಳೆಯಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರ ಮಕ್ಕಳಾದ ನೀವು ಒಬ್ಬರಿಗೊಬ್ಬರು ಮಿಕ್ಸ್ ಆಗಿ ಕೂರಬೇಕು. ಮತ್ತು ಎರಡು ಭಿನ್ನ ಪ್ರಾರ್ಥನೆಗಳಲ್ಲೂ, ಎರಡೂ ಜನಾಂಗದ ವಿದ್ಯಾರ್ಥಿಗಳು ಜೊತೆಗೂಡಿ ಹಾಡಬೇಕು. ಆ ಪ್ರಾರ್ಥನೆಯಲ್ಲಿ ಅಗಾದವಾದ ಚೈತನ್ಯವಿದೆ. ಪ್ರತಿಯೊಂದು ಪ್ರಾರ್ಥನೆಯೂ ಭಾವನಾತ್ಮಕತೆಯ ದೃಷ್ಟಿಯಿಂದ ಜನಾಂಗಗಳನ್ನು ಅರಿಯಲು ರೋಮಾಂಚನಗೊಳಿಸಬೇಕು. ಲಂಕೇಶ್ ಅವರಂಥ ನಾಡಿನ ಬಹುದೊಡ್ಡ ಲೇಖಕರೊಬ್ಬರಿಗೆ ಹೃದಯ ತುಂಬಿ ಮಾತಾಡಲು ಅವಕಾಶ ಕೊಡದೇ, ಅರ್ಧಕ್ಕೆ ನಿಲ್ಲಿಸಿದ ಪರಿಸ್ಥಿತಿ ತಂದೊಡ್ಡಿದ್ದು ಒಂದು ಚಾರಿತ್ರಿಕ ಅಪರಾಧ ಎಂದು ಇಲ್ಲಿ ಸೇರಿರುವ ಎಲ್ಲರೂ ತಿಳಿಯಬೇಕು. ಗಾಂಧೀಜಿಯವರು ಪ್ರಾರ್ಥನಾ ಗೀತೆಗಳ ಮೂಲಕ ಜನರನ್ನು ಸಾಮೂಹಿಕವಾಗಿ ಸೇರಿಸುತ್ತಿದ್ದರು. ನಂತರ ಸಮಕಾಲೀನ ಹೋರಾಟದ ಚಿಂತನೆಗಳನ್ನು ಜನರಿಗೆ ತಲುಪಿಸುತ್ತಿದ್ದರು. ಅವರಿಗೆ ರಾಮ ಮತ್ತು ರಹೀಮಾ ಎಂದೂ ಬೇರೆಯಾಗಿರಲಿಲ್ಲ. ನಮಗೂ ಬೇರೆ ಅನ್ನಿಸಬಾರದು.
ನೀವೆಲ್ಲ ತುಂಬ ಸ್ಥಿತಿವಂತ ಕುಟುಂಬದಿಂದ ಬಂದವರು. ನಿಮ್ಮ ಓದಿಗೆ ಮತ್ತು ಬದುಕಿಗೆ ಏನೇನು ತೊಂದರೆ ಇಲ್ಲ. ಆದರೆ ನಾನು ನಿಮ್ಮನ್ನು ನೋಡುತ್ತಿದ್ದರೆ, ನನಗೆ ಪ್ರತ್ಯಕ್ಷವಾಗುವುದು ಬೆಂಗಳೂರು ನಗರದ ಸಾವಿರಾರು ಬಾಲಕಾರ್ಮಿಕರು. ನೀವೆಲ್ಲ ಒಮ್ಮೆ ಅಧ್ಯಯನದ ದೃಷ್ಟಿಯಿಂದ ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟಿನ ಮತ್ತು ಕಲಾಸಿಪಾಳ್ಯದ ಸುತ್ತ ಮುತ್ತಲಿನ ವರ್ಕ್‌ಶಾಪ್‌ಗಳಲಿ ಕೆಲಸ ಮಾಡುವ ಮಕ್ಕಳನ್ನು ನೋಡಬೇಕು. ಅವರ ಮೈಗೆ ಮತ್ತು ಮುಖಕ್ಕೋ ಅಂಟಿಕೊಂಡಿರುವ ಕೀಲೆಣ್ಣೆ ಎಷ್ಟು ತೊಳೆದರೂ ಹೋಗಲಾರದಷ್ಟು ಅಂಟಿಕೊಂಡಿರುತ್ತದೆ. ಅವರೆಲ್ಲ ಆರರಿಂದ ಹದಿನೈದರೊಳಗಿನ ವಯಸ್ಸಿನ ಮಕ್ಕಳು. ಅವರಲ್ಲಿ ಬಹಳಷ್ಟು ಮಂದಿ ಇಪ್ಪತ್ತೈದು ವರ್ಷಗಳಿಗಿಂತ ಜಾಸ್ತಿ ಬದುಕಿರುವುದಿಲ್ಲ. ಇದನ್ನು ನಾವು ತಿಳಿಯದಿದ್ದರೆ, ನಾವು ತಿನ್ನುವ ಭಕ್ಷ-ಭೋಜನೆಗಳೆಲ್ಲ ವಿಷವಾಗಿ ಪರಿಣಮಿಸಿರುತ್ತದೆ.
ನಾನು ಈ ಸಂದರ್ಭದಲ್ಲಿ ಇಲ್ಲಿಯ ಸ್ಥಿತಿವಂತ ಮುಸಲ್ಮಾನ ಬಾಂಧವರಲ್ಲಿ ಮನವಿಕೊಡಿಕೊಳ್ಳುತ್ತೇನೆ: ಅಲ್ಲಿಯ ಒಂದಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ಓದಿಸಿ. ಆಗ ಮಾತ್ರ ನಾವು ಮಹಮ್ಮದ್ ಪೈಗಂಬರ್‌ಗೆ ಮತ್ತು ಇತರೆ ಸಂತ ಮಹನೀಯರಿಗೆ ಗೌರವವನ್ನು ದೊರಕಿಸಿಕೊಟ್ಟಂತಾಗುತ್ತದೆ. ಹಾಗೆಯೇ ಪವಿತ್ರ ಕುರ್‌ಆನ್‌ಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ. ನಾನು ಇದನ್ನು ಅಹಂಕಾರದಿಂದ ಹೇಳುತ್ತಿಲ್ಲ. ವಿಷಾದದಿಂದ ಹೇಳುತ್ತಿದ್ದೇನೆ. ನಮ್ಮ ಅಧ್ಯಾಪಕರು ಯಾವ ಭಯ ಮತ್ತು ಭೀತಿ ಇಲ್ಲದೆ ಮಕ್ಕಳಿಗೆ ಇಂಥದನ್ನು ತಲುಪಿಸಬೇಕು. ಇಲ್ಲದಿದ್ದರೆ ನಾವು ಶಿಕ್ಷಣ ಸಂಸ್ಥೆಗಳನ್ನು ಯಾಕೆ ನಡೆಸಬೇಕು ಎಂಬ ಪ್ರಶ್ನೆಗಳ ಜೊತೆಗೆ ಏನೇನೋ ಮಾತಾಡಿದೆ. ಹಾಗೆಯೇ ಇವೆಲ್ಲ ನನ್ನ ಅಹಂಕಾರದ ಮಾತುಗಳು ಅನ್ನಿಸಿದರೆ, ನಿಜವಾಗಿಯೂ ನನಗೆ ಛೀಮಾರಿ ಹಾಕಿ ಎಂದು ಕೂತೆ. ಲಂಕೇಶ್ ಅವರು ನನ್ನ ಎರಡು ಕೈಹಿಡಿದು ಬ್ಯೂಟಿಫುಲ್ ಎಂದು ಬೆನ್ನು ಸವರಿದರು. ನನಗೆ ತುಂಬ ಖುಷಿಯಾಯಿತು.
ಕಾರ್ಯಕ್ರಮದ ನಂತರ ಪ್ರಿನ್ಸಿಪಾಲರಿಂದ ವೊದಲ್ಗೊಂಡು ಯಾರ‍್ಯಾರ ಮನೆಗೂ ಕರೆದುಕೊಂಡು ಹೋದರು. ಸಂತೋಷವಾಗಿ ಊಟ ಮಾಡಿಸಿದರು. ನೆನಪಿನ ಕಾಣಿಕೆಗಳನ್ನು ಕೊಟ್ಟರು. ಅವರಿಂದ ಬಿಡಿಸಿಕೊಳ್ಳುವುದು ನಿಜವಾಗಿಯೂ ಕಷ್ಟವಾಯಿತು. ಅಂಕೋಲಾಗೆ ಹೋಗಲು ಸಮಯ ಮೀರುತ್ತಿತ್ತು. ಸಂಜೆ ಆರು ಗಂಟೆಗೆ ಅಲ್ಲಿ ಕಾರ್ಯಕ್ರಮವಿತ್ತು. ಲಂಕೇಶ್ ಅವರು ಕಟ್ಟುನಿಟ್ಟಿನ ಸಮಯಪಾಲಕರಾಗಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳದಿಂದ ಅಂಕೋಲಕ್ಕೇ ಎಷ್ಟು ರ‍್ಯಾಸಾಗಿ ಕಾರನ್ನು ಓಡಿಸಿದರೆಂದರೆ, ನಾನು ನಿಜವಾಗಿಯೂ ಭೀತಗೊಂಡಿದ್ದೆ.
ಸಮಯಕ್ಕೆ ಸರಿಯಾಗಿ ಸೇರಿದೆವು. ಹತ್ತು ನಿಮಿಷ ತಡವಾಗಿತ್ತು. ಗೆಳೆಯ ಶ್ರೀಪಾದ ಶೆಟ್ಟಿಗೆ ಖುಷಿಯಾಗಿತ್ತು. ಲಂಕೇಶ್ ಅವರಲ್ಲಿ ಅಪರಾಧಿ ಪ್ರಜ್ಞೆ ಇತ್ತು. ಅಲ್ಲಿಯ ಕಾರ್ಯಕ್ರಮದ ನಂತರ ಬೆಂಗಳೂರಿಗೆ ಬಂದೆವು. ಮಾರನೆಯ ದಿನ ಸಂಜೆ ಲಂಕೇಶ್ ಅವರು ಮಾತುಕತೆಯ ನಡುವೆ ಕೈ ಕುಲುಕಿ, ‘ಡೈಲಿ ಸಾಲಾರ್’ ಉರ್ದು ದಿನಪತ್ರಿಕೆಯನ್ನು ನನ್ನ ಕೈಗೆ ಕೊಟ್ಟರು. ಅಲ್ಲಿ ದೊಡ್ಡದಾಗಿ ನನ್ನ ಭಾವಚಿತ್ರ ಹಾಕಿ ನನ್ನ ಒಟ್ಟು ಮಾತುಗಳನ್ನು ಪ್ರಕಟಿಸಿದ್ದರು. ಇದರ ನೆನಪಿಗೆ ಡಿ.ಆರ್.ನಾಗರಾಜ್, ಬಸವರಾಜ ಅರಸ್ ಮತ್ತು ನನಗೆ ಸ್ಕಾಚ್‌ವಿಸ್ಕಿ ಕೊಡಿಸಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...