ವಿಶ್ವಪಾರಂಪರಿಕ ತಾಣ ಯಾಕೆ ಬೇಕು ಎನ್ನುವ ಪ್ರಶ್ನೆಗೆ, ಅದರ ಪರವಾಗಿ ಇರುವ ಜನರಿಂದ ಬರುವ ಉತ್ತರ ಒಂದೇ ಆಗಿದೆ. ಅದೇನೆಂದರೆ ಪಶ್ಚಿಮಘಟ್ಟಗಳಿಗೆ ವಿಶ್ವಪಾರಂಪರಿಕ ತಾಣದ ಗಂಟು ಬಿದ್ದರೆ, ಭಾರತದ ಪ್ರತಿಷ್ಠೆ ಹೆಚ್ಚಾಗುತ್ತದೆ. ಮತ್ತು ಇಲ್ಲಿ ಪ್ರವಾಸೋದ್ಯಮ ವೃದ್ಧಿಯಾಗಿ ಆರ್ಥಿಕ ಬೆಳವಣಿಗೆಯಾಗುತ್ತದೆ ಮತ್ತು ಪಶ್ಚಿಮಘಟ್ಟಗಳ ಸಂರಕ್ಷಣೆಯಾಗುತ್ತದೆ. ಇಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ವಿಶ್ವಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರುವುದರ ಮೂಲಕವೇ ಮಾಡಿಕೊಳ್ಳಬೇಕೆ ಎಂಬುದೊಂದು ಪ್ರಶ್ನೆ ಸಹ ಏಳುತ್ತದೆ. ಈಗ ಪಶ್ಚಿಮಘಟ್ಟ ನಾಶವಾಗಿ ಹೋಗಿದೆಯೇ? ಇದು ನಾಶವಾಗಿ ಹೋಗಿದೆ ಎಂದು ಅದನ್ನು ಸಮರ್ಥಿಸುವವರು ಹೇಳುತ್ತಲೇ ಬರುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ?. ಒಂದು ವೇಳೆ ಪಶ್ಚಿಮಘಟ್ಟಗಳು ನಾಶವೇ ಆಗಿ ಹೋಗಿದ್ದರೆ, ಅದನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಶ್ನೆಯೇ ಉದ್ಭವವಾಗುತ್ತಿರಲಿಲ್ಲ. ಈಗ ಪಶ್ಚಿಮಘಟ್ಟಗಳಲ್ಲಿ ಅತೀ ಪ್ರಾಮುಖ್ಯವಾದ ಜೀವ ವೈವಿಧ್ಯಗಳಿವೆ. ಆ ಜೀವ ವೈವಿಧ್ಯಗಳನ್ನು ತನ್ನೊಳಗೆ ಇಟ್ಟುಕೊಳ್ಳುವ ವಾತಾವರಣ ಅಲ್ಲಿದೆ ಎನ್ನುವ ಕಾರಣ ದಿಂದಲೇ ಅದನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವನೆ ಮಂಡಿತವಾಗಿದೆ.
ಅಂದರೆ ಇದುವರೆಗೆ ಪಶ್ಚಿಮಘಟ್ಟಗಳು ಯುನೆಸ್ಕೋ ಮಧ್ಯಪ್ರವೇಶ ಇಲ್ಲದೆ, ಉಳಿದುಕೊಂಡು ಬಂದಿದ್ದು, ಅದು ಜೀವ ವೈವಿಧ್ಯಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ ಅದನ್ನು ರಕ್ಷಿಸಿಕೊಂಡು ಬಂದವರು ಯಾರು? ವಿಶ್ವಾ ಪಾರಂಪರಿಕ ಪಟ್ಟಿಗೆ ಸೇರಿಸುವುದರ ಪರವಾಗಿ ವಾದಿಸುವ ಡೋಂಗಿ ಪರಿಸರವಾದಿ ಗಳಂತೂ ಅಲ್ಲವೇ ಅಲ್ಲ. ಅದನ್ನು ರಕ್ಷಿಸಿ ಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ಬಂದವರು ಆ ಭೂಪ್ರದೇಶದಲ್ಲಿ ತಲೆತಲಾಂತರದಿಂದ ಬಾಳಿ ಬದುಕಿಕೊಂಡು ಬಂದ ಜನರಲ್ಲದೆ ಬೇರೆ ಯಾರೂ ಅಲ್ಲ.
ಈಗ ಈ ಭೂಪ್ರದೇಶಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವುದರಿಂದ, ಆ ಭೂ ಪ್ರದೇಶದಲ್ಲಿ ವಾಸಿಸುತ್ತಾ ಬಂದ ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ಉಸಿರುಗಟ್ಟುವ ವಾತಾವರಣ ಅಲ್ಲಿ ನಿರ್ಮಾಣವಾಗಿ, ಅವರು ಅಲ್ಲಿ ವಾಸಿಸಲಾಗದೆ, ಪಲಾಯನ ಮಾಡಬೇಕಾ ದಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಎಂಬ ಆತಂಕ ವ್ಯಕ್ತವಾದಾಗ, ಅದಕ್ಕೆ ಡೋಂಗಿ ಪರಿಸರವಾದಿಗಳು ಉತ್ತರಿಸುತ್ತಾ, ಹಾಗೇನೂ ಆಗುವುದಿಲ್ಲ.
ವಿಶ್ವಪಾರಂಪರಿಕ ತಾಣವೆಂದು ಹೇಳುವುದು ಒಂದು ಪ್ರತಿಷ್ಠೆಯ ಕುರುಹು ಅಲ್ಲದೆ, ಮತ್ತೇನೂ ಅಲ್ಲ. ನಮ್ಮ ದೇಶದ ಕಾನೂನಿನಂತೆಯೇ ಎಲ್ಲವೂ ನಡೆಯುತ್ತದೆ ಮತ್ತು ನಮ್ಮ ಸರಕಾರಗಳ ನಿಯಂತ್ರಣದಲ್ಲಿಯೇ ನಡೆಯುತ್ತದೆ. ಯಾವ ಬದಲಾವಣೆಯೂ ಇಲ್ಲ ಎಂದು ಹೇಳುತ್ತಾರೆ.ಅಂದರೆ ವಿಶ್ವಪಾರಂಪರಿಕ ತಾಣದ ಹಣೆಪಟ್ಟಿ ಬಿದ್ದ ನಂತರವು ನಮ್ಮ ದೇಶದ ಕಾನೂನೇ. ನಮ್ಮ ದೇಶದ ಆಡಳಿತ ವರ್ಗದವರೇ ಪಶ್ಚಿಮಘಟ್ಟ ಗಳನ್ನು ರಕ್ಷಿಸಿಕೊಂಡು ಬರಬೇಕು ಎನ್ನುವುದಾದರೆ ಅದೇ ಕೆಲಸವನ್ನು ವಿಶ್ವಪಾರಂಪರಿಕ ತಾಣದ ಹಣೆಪಟ್ಟಿ ಇಲ್ಲದೆಯೇ ಮಾಡುವುದಕ್ಕೆ ಯಾಕೆ ಸಾಧ್ಯವಾಗುವುದಿಲ್ಲ?
ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪರಿಕ ತಾಣಕ್ಕೆ ಕೇವಲ ಪ್ರತಿಷ್ಠೆ ಗೋಸ್ಕರ ಸೇರಿಸಬೇಕೆನ್ನುವುದಾದರೆ, ಇಡೀ ಭಾರತವನ್ನೇ ವಿಶ್ವಪಾರಂಪರಿಕ ತಾಣವೆಂದು ಘೋಷಿಸಿ ಬಿಟ್ಟರೆ ನಮ್ಮ ಪ್ರತಿಷ್ಠೆ ಮತ್ತಷ್ಟು ಎತ್ತರಕ್ಕೆ ಹೋಗುತ್ತದಲ್ಲ.ಹಿಮಾಲಯಕ್ಕಿಂತಲೂ ಪುರಾತನವಾದದ್ದು ಪಶ್ಚಿಮಘಟ್ಟಗಳು ಎಂದೆಲ್ಲಾ ಹೇಳಲಾಗುತ್ತಿದೆ. ಎರಡು ಕೋಟಿ ವರ್ಷದ ಹಿಂದೆ ಈಗ ಹಿಮಾಲಯವಿರುವ ಸ್ಥಳದಲ್ಲಿ ಸಮುದ್ರವಿತ್ತು ಎಂದು ಹೇಳಲಾಗುತ್ತಿದೆ.ಅಂದರೆ ಹಿಮಾಲಯದ ಕೆಳಗಿನ ಭೂಪ್ರದೇಶಗಳೆಲ್ಲವೂ ಹಿಮಾಲಯ ಕ್ಕಿಂತಲೂ ಪುರಾತನವಾದದ್ದು.ಆದ್ದರಿಂದ ಪ್ರಾಚೀನ ರಾಷ್ಟ್ರವಾದ ಭಾರತ ಖಂಡವೇ ಒಂದು ವಿಶ್ವಪಾರಂಪರಿಕ ತಾಣ ವಾಗಿದೆ. ಪಶ್ಚಿಮಘಟ್ಟಗಳನ್ನು ರಕ್ಷಿಸುವುದಕ್ಕೆ ಯುನೆಸ್ಕೋ ಸಹಕಾರ ಬೇಕೆನ್ನುವುದಾದರೆ, ನಮ್ಮ ದೇಶ ರಕ್ಷಣೆ ಮಾಡುವು ದಾದರೂ ಹೇಗೆ? ಪಶ್ಚಿಮ ಘಟ್ಟಗಳನ್ನು ರಕ್ಷಿಸಲಾರದಷ್ಟು ಅಯೋಗ್ಯರು, ಅಪ್ರಮಾಣಿಕರು ನಾವಾಗಿ ದ್ದೇವೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಡೋಂಗಿ ಪರಿಸರವಾದಿಗಳಿಂದ ಉತ್ತರ ಬೇಕಾಗಿದೆ.
ವಿಶ್ವ ಪಾರಂಪರಿಕ ತಾಣವೆಂದು ಘೋಷಣೆ ಯಾದ ನಂತರವೂ, ನಮ್ಮ ದೇಶದ ಕಾನೂನಿನಡಿಯಲ್ಲಿಯೇ ಪಶ್ಚಿಮಘಟ್ಟಗಳು ರಕ್ಷಿಸಲ್ಪಡುತ್ತವೆ. ಬೇರೆ ಕಾನೂನಿಲ್ಲ ಎಂದು ವಾದಿಸುವುದು ಶುದ್ಧಾಂಗ ಕಪಟವಲ್ಲದೆ ಮತ್ತೇನೂ ಅಲ್ಲ. ನಮ್ಮ ದೇಶದ ಕಾನೂನು, ವಿಶ್ವ ಪಾರಂಪರಿಕ ಪಟ್ಟಿಯ ನಂತರ ಕೆಲಸ ಮಾಡುವ ರೀತಿಯೇ ಬದಲಾಗುತ್ತದೆ. ಕಾನೂನಿನ ವ್ಯಾಖ್ಯಾನವೇ ವಿಭಿನ್ನವಾಗುತ್ತದೆ. ಕಾನೂನೆಂಬುದು ರೋಬೋಟ್ ತರ ಕೆಲಸ ಮಾಡುವುದಿಲ್ಲ. ಕಾನೂನು ರಬ್ಬರ್ ಇದ್ದ ಹಾಗೆ. ಯಾವ ಕಡೆ ಎಳೆಯಲ್ಪಡುತ್ತದೋ ಆ ಕಡೆ ಬೆಳೆಯುತ್ತದೆ. ಎರಡೂ ಕಡೆ ಎಳೆದರೆ, ಎರಡೂ ಕಡೆ ವೃದ್ಧಿಯಾಗುತ್ತದೆ. ಇದು ಕೊಡಗಿನ ಜನತೆಯ ಅನುಭವದಿಂದಲೇ ನಾವು ಕಲಿತುಕೊಂಡಿರುವ ಪಾಠ.
ದೇಶದ ಸರ್ವೋಚ್ಚ ನ್ಯಾಯಾಲಯ ಅಂದರೆ ಸುಪ್ರೀಂ ಕೋರ್ಟ್ ಗೋದಾವರ್ಮನ್ ಪ್ರಕರಣದಲ್ಲಿ ಅರಣ್ಯದ ಬಗ್ಗೆ ವ್ಯಾಖ್ಯಾನಿಸಿ ರುವುದನ್ನೇ ಶಸ್ತ್ರ ಮಾಡಿಕೊಂಡು, ಖಾಸಗಿ ಭೂ ಹಿಡುವಳಿದಾರನ ಬದುಕಿಗೆ ಕೊಳ್ಳಿ ಇಟ್ಟದ್ದನ್ನು ಕೊಡಗಿನ ಹಾಗೂ ಇತರ ಮಲೆನಾಡು ಪ್ರದೇಶದ ಜನ ಅನುಭವಿಸಿದ್ದಾರೆ. ಗೋದಾವರ್ಮನ್ ಪ್ರಕರಣದಲ್ಲಿ ಅರಣ್ಯ ಎಂಬ ಪದವನ್ನು ಸುಪ್ರೀಂ ಕೋರ್ಟು ವ್ಯಾಖ್ಯಾನಿಸುವಾಗ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ, ನಿರ್ದಿಷ್ಟ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಖ್ಯಾನಿಸಿದೆ. ಅದೇ ಸುಪ್ರೀಂ ಕೋರ್ಟು ಅರಣ್ಯ ಎಂಬ ಶಬ್ದದ ಬಗ್ಗೆ ತಾನು ನೀಡಿದ ವ್ಯಾಖ್ಯಾನ ಖಾಸಗಿ ಪ್ಲಾಂಟೇಷನ್ ಜಮೀನುಗಳಿಗೆ ಅನ್ವಯವಾಗುವುದಿಲ್ಲ ವೆಂಬುದನ್ನು ಸಹ ಸ್ಪಷ್ಟಪಡಿಸಿದೆ.
ಹೀಗಿದ್ದರೂ ಸಹ ಆ ಗೋದಾವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಅರಣ್ಯ ಎಂಬ ಶಬ್ದ ವ್ಯಾಖ್ಯಾನವನ್ನೇ ಮುಂದೆ ಮಾಡಿಕೊಂಡು, ಅದು ಖಾಸಗಿ ಜಮೀನಿಗೆ ಅನ್ವಯ ವಾಗುತ್ತದೆಂದು ವಾದಿಸುತ್ತಾ, ಮರಗಳಿರುವ ಎಲ್ಲ ಖಾಸಗಿ ಜಮೀನುಗಳು ಡೀಮ್ಡ್ ಅರಣ್ಯ ಆಗುತ್ತದೆ ಎಂದು ಹೇಳುತ್ತಾ, ಖಾಸಗಿ ಜಮೀನಿನ ಮಾಲಕರು ತಬ್ಬಿಬ್ಬಾಗುವಂತೆ ಮಾಡಿದ್ದು, ಈ ಪ್ರದೇಶದಲ್ಲಿ ವಾಸಿಸುವ ಎಲ್ಲರ ಅನುಭವಕ್ಕೂ ಬಂದ ವಿಷಯವೇ ಆಗಿದೆ. ಕಡಮಕಲ್ ಎಂಬ ಗ್ರಾಮಾಂತರ ಪ್ರದೇಶದ ರಸ್ತೆ ನಿರ್ಮಾಣಕ್ಕೆ ಸಂಬಂದಪಟ್ಟಂತೆ ಏರ್‌ಮಾರ್ಷಲ್ ನಂದಾ ಕಾರ್ಯಪ್ಪನವರು ಶ್ರೇಷ್ಠ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸೋಗಿನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿ, ರೆಡೀಮ್ಡ್ ಸಾಗು ಜಮೀನುಗಳೆಲ್ಲವೂ ಡೀಮ್ಡ್ ಫಾರೆಸ್ಟ್ ಆಗುತ್ತದೆ.
ಆದ್ದರಿಂದ ರೆಡಿಮ್ಡ್ ಸಾಗು ಜಮೀನಿನಲ್ಲಿ ಸಹ ಮರ ಕಡಿಯಬೇಕಾದರೆ, ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕೇಂದ್ರ ಸರಕಾರದ ಅನುಮತಿ ಬೇಕು ಮತ್ತು ಸುಪ್ರೀಂ ಕೋರ್ಟಿನ ಒಪ್ಪಿಗೆ ಬೇಕು ಎಂದು ವಾದಿಸಿದ್ದಾರೆ. ಹಾಗೆಯೇ ಮಾಜಿ ಸೈನಿಕ ಕೋಟಾದಲ್ಲಿ ಮಂಜೂರಾಗಿ ಕಾಫಿ ತೋಟವಾಗಿರುವ ಜಮೀನಿನಲ್ಲಿದ್ದ ತೇಗದ ಮರಗಳನ್ನು ಕಡಿದು, ಸರಕಾರಿ ಡಿಪೋಕ್ಕೆ ಸಾಗಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ, ಕಾವೇರಿ ಸೇನೆ ಎಂಬ ಪರಿಸರವಾದಿಗಳ ಏಜೆಂಟ್ ಸಂಘಟನೆ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟಿನಲ್ಲಿ ಹೂಡಿ, ಈ ಜಮೀನು ಕೂಡ ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತದೆಂದು ಮತ್ತು ಗೋದಾವರ್ಮನ್ ಪ್ರಕರಣದ ಅರಣ್ಯ ಶಬ್ದದ ವ್ಯಾಖ್ಯೆಯಂತೆ ಇಲ್ಲಿ ಕೂಡ ಮರಗಳನ್ನು ಕಡಿಯುವುದಕ್ಕೆ ಕೇಂದ್ರ ಸರಕಾರದ ಪೂರ್ವಾನುಮತಿ ಬೇಕೆಂದು ವಾದಿಸಿದ್ದಾರೆ.
ಈ ಎರಡೂ ವಾದಗಳನ್ನು ಹೈಕೋರ್ಟು ಮತ್ತು ಸುಪ್ರೀಂ ಕೋರ್ಟು ಕ್ರಮವಾಗಿ ಅನುಮೋದಿಸಿ ಬಿಟ್ಟರೆ, ಕೊಡಗಿನ ಖಾಸಗಿ ಜಮೀನುಗಳಲ್ಲಿ ಬೆಳೆಸಿರುವ ಕಾಫಿ ತೋಟಗಳ ಗತಿ ಏನಾಗಿರುತ್ತದೆ? ಇದೆಲ್ಲವೂ ಅನುಭವಿಸಿದವರಿಗೆ ಮಾತ್ರ ಅರಿವಾಗುತ್ತದೆಯೇ ವಿನಹ, ಪರಿಸರವಾದಿಗಳೆಂಬ ಹಣೆಪಟ್ಟಿ ಧರಿಸಿಕೊಂಡು, ವಿದೇಶಿ ಹಣ ಲಪಟಾಯಿಸಿಕೊಂಡು, ಮೋಜಿನಲ್ಲಿ ಬದುಕುತ್ತಿರುವ ನಗರವಾಸಿಗಳಾದ ಡೋಂಗಿ ಪರಿಸರವಾದಿಗಳಿಗೂ ಮತ್ತು ಅವರನ್ನು ಸಮರ್ಥಿಸುವ ಏಜೆಂಟರುಗಳಿಗೂ ಅರ್ಥವಾಗುವುದಿಲ್ಲ. ಅರ್ಥವಾದರೂ, ಅರ್ಥವಾಗದಂತೆ ನಟಿಸುತ್ತಿದ್ದಾರೆ. ಈ ಜನರು ವಿಶ್ವಪಾರಂಪರಿಕ ತಾಣವೆಂಬ ಪಟ್ಟಿಗೆ ಪಶ್ಚಿಮಘಟ್ಟಗಳು ಸೇರ್ಪಡೆಗೊಂಡರೂ ಕೂಡ, ಕಾನೂನಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲವೆಂಬ ವಂಚನೆಯ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಈ ಪ್ರದೇಶದಲ್ಲಿ ಸಂಕಟಗಳನ್ನು ಅನುಭವಿಸಿಕೊಂಡು ಬದುಕುವ ಜನಗಳು ಖಂಡಿತಾ ಇಲ್ಲ.
ವಿಶ್ವಪಾರಂಪರಿಕ ತಾಣದ ಹಣೆಪಟ್ಟಿ ಸಿಕ್ಕಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಆರ್ಥಿಕ ಲಾಭವಾಗುತ್ತದೆ ಎಂಬುದು ಡೋಂಗಿ ಪರಿಸರವಾದಿಗಳ ಮತ್ತೊಂದು ವಾದ. ಇನ್ನೊಂದೆಡೆ ಸೂಕ್ಷ್ಮ ಜೀವ ವೈವಿಧ್ಯಗಳಿಂದ ಕೂಡಿದ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೂಡದು ಎಂಬುದು ಸಹ ಅವರದೇ ವಾದ. ಇಂತಹ ವಾದದ ಹಿನ್ನೆಲೆಯಲ್ಲಿ ಹುಲಿಧಾಮಗಳಲ್ಲಿ ಹುಲಿ ಸಫಾರಿ ನಿಷೇಧಿಸಿ, ಶ್ರೇಷ್ಠ ನ್ಯಾಯಾಲಯ ಇತ್ತೀಚೆಗಷ್ಟೇ ಮಧ್ಯಾಂತರ ಆದೇಶ ಹೊರಡಿಸಿರುವುದನ್ನು ಗಮನಿಸಬಹುದು. ಕೊಡಗು ಜಿಲ್ಲೆಯನ್ನೇ ಪ್ರವಾಸೋದ್ಯಮ ಭೂಪಟದಿಂದಲೇ ತೆಗೆದು ಹಾಕಬೇಕೆಂದು ಸಹ ಡೋಂಗಿ ಪರಿಸರವಾದಿಗಳೊಂದಿಗೆ ಪರೋಕ್ಷವಾಗಿ ಗುರುತಿಸಿಕೊಂಡಿರುವ ಕೊಡಗಿನ ಶಾಸಕರೊಬ್ಬರು ಹೇಳಿರುವುದನ್ನು ಸಹ ಇಲ್ಲಿ ಗಮನಿಸಬಹುದು.
ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳನ್ನು ರಕ್ಷಿಸುವುದಕ್ಕೋಸ್ಕರ ಪ್ರವಾಸೋದ್ಯಮವನ್ನೇ ನಿಲ್ಲಿಸಬೇಕೆಂಬ ಕೂಗು ಒಂದೆಡೆ ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಪ್ರವಾಸೋದ್ಯಮ ವೃದ್ಧಿಯಾಗುತ್ತದೆ ಎಂದು ಹುಯಿಲೆಬ್ಬಿಸುತ್ತಿರುವುದರ ಅರ್ಥವಾದರೂ ಏನು? ಹೀಗೆ ಸುಳ್ಳನ್ನೇ ಪದೇ ಪದೇ ಹೇಳುತ್ತಾ, ಆ ಸುಳ್ಳನ್ನೇ ಸತ್ಯ ಮಾಡುವ ಕುತಂತ್ರದಲ್ಲಿ ವಿಶ್ವಪಾರಂಪರಿಕ ತಾಣದ ಸಮರ್ಥಕರು ತೊಡಗಿದ್ದಾರೆನ್ನುವುದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ದಡ್ಡರಲ್ಲ ನಮ್ಮ ಜನ. ಪಶ್ಚಿಮಘಟ್ಟಗಳು ವಿಶ್ವ ಪಾರಂಪರಿಕ ತಾಣವೆಂದಾದರೆ, ಘಟ್ಟಗಳ ಸಂರಕ್ಷಣಾ ಕಾರ್ಯದಲ್ಲಿ ಯುನೆಸ್ಕೋ ಪ್ರವೇಶ ಮಾಡುವುದಿಲ್ಲವೆಂತಲೂ, ಯುನೆಸ್ಕೋದಿಂದ ತಾಂತ್ರಿಕ ಸಲಹೆಯೊಡನೆ ಅಗತ್ಯಬಿದ್ದಾಗ ಹಣದ ನೆರವು ದೊರೆಯುತ್ತದೆಂದು ಸಹ ಅದರ ಸಮರ್ಥಕರು ವಾದಿಸುತ್ತಿದ್ದಾರೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಪಶ್ಚಿಮಘಟ್ಟಗಳ ನಿರ್ವಹಣೆಗೆ ಯುನೆಸ್ಕೋದಿಂದ ಹಣದ ಅಗತ್ಯವಿದೆಯೇ? ಅಂತಹ ಹಣ ಇಲ್ಲದೆ ನಿರ್ವಹಣೆ ಸಾಧ್ಯವಿಲ್ಲವೇ? ಯಾವ ತಾಂತ್ರಿಕ ಸಲಹೆಗಳು ವಿದೇಶಿಗಳಿಂದ ಈ ದಿಸೆಯಲ್ಲಿ ಅಗತ್ಯವಿದೆ ಎಂಬುದು ಕೂಡ ಸ್ಪಷ್ಟವಾಗುತ್ತಿಲ್ಲ. ಪಶ್ಚಿಮಘಟ್ಟಗಳ ನಿರ್ವಹಣೆಗೆ ಯುನೆಸ್ಕೋದ ಹಣವಾಗಲಿ, ಅವರ ತಾಂತ್ರಿಕ ಸಲಹೆಯಾಗಲಿ ಅಗತ್ಯವಿಲ್ಲ. ಆ ಭೂ ಪ್ರದೇಶದಲ್ಲಿ ವಾಸ ಮಾಡುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಪಾಲ್ಗೊಳ್ಳುವಿಕೆಯಲ್ಲಿ ಪಶ್ಚಿಮಘಟ್ಟಗಳ ರಕ್ಷಣೆಗೆ ಕಾರ್ಯಸೂಚಿ ತಯಾರಿಸಿದರೆ, ಜಗತ್ತೇ ತಬ್ಬಿಬ್ಬಾಗುವಷ್ಟು ಉತ್ತಮ ರೀತಿಯಲ್ಲಿ ಪಶ್ಚಿಮಘಟ್ಟಗಳನ್ನು ಅಭಿವೃದ್ಧಿ ಪಡಿಸಿ, ಅಲ್ಲಿನ ಜೀವ ವೈವಿಧ್ಯಗಳನ್ನು ರಕ್ಷಣೆ ಮಾಡಿಕೊಂಡು ಬರುವುದು ಸಾಧ್ಯವಾಗುತ್ತದೆ.
ಸ್ವತಂತ್ರ ಭಾರತದಲ್ಲಿ ಜನಗಳ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಲ್ಲದೆ, ಜನರನ್ನು ದೂರ ಇಟ್ಟು, ಯಾರದೋ ಕಾರ್ಯಕ್ರಮಗಳನ್ನು ಯಾವುದೋ ದುರುದ್ದೇಶದಿಂದ ಜನರ ಮೇಲೆ ಹೇರಲಾಗದು.ಛತ್ತೀಸ್‌ಘಡ ರಾಜ್ಯದ ಪ್ರದೇಶದಲ್ಲಿ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಆದಿವಾಸಿಗಳ ಬಂಡಾಯವನ್ನು ರೂಪಿಸಿದ ಮಹಾನಾಯಕ ಬಿರ್ಸಾಮುಂಡ. ಈ ಸ್ವಾತಂತ್ರ ಹೋರಾಟಗಾರ ಹೇಳಿದ್ದು, ಈ ಕಾಡು ನಮ್ಮದು. ನಾವೇ ಇದನ್ನು ಆಳುವವವರು. ಬ್ರಿಟಿಷರೇ ಇಲ್ಲಿಂದ ತೊಲಗಿ ಎಂದು. ಕಡೆಗೂ ಬ್ರಿಟಿಷರು ಇವರೊಡನೆ ರಾಜಿಮಾಡಿಕೊಳ್ಳುವ ನಾಟಕವಾಡುತ್ತಾ, ಕಡೆಗೆ ಈ ಮಹಾ ಸ್ವಾತಂತ್ರ ಹೋರಾಟಗಾರ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಿ ಮರಣವನ್ನಪ್ಪಿದ.
ಆ ಪ್ರದೇಶಗಳಲ್ಲಿ ವ್ಯವಸಾಯಕ್ಕೆ ಒಳಪಡಿಸಿದ್ದ ಆದಿವಾಸಿಗಳ ಜಮೀನುಗಳಿಗೆ ಬ್ರಿಟಿಷರು ಭೂಕಂದಾಯ ವಿಧಿಸಲು ಹೊರಟಾಗ, ನಮ್ಮ ಜಮೀನಿಗೆ ಭೂಕಂದಾಯ ವಿಧಿಸಲು ನೀವು ಯಾರು ಎಂದು ಕೇಳಿದವರು ಅಲ್ಲಿನ ನಿವಾಸಿಗಳಾದ ಆದಿವಾಸಿಗಳು. ಅವರ ಪ್ರತಿಭಟನೆಗೆ ಮಣಿದ ಬ್ರಿಟಿಷ್ ಸರಕಾರ ರೆವಿನ್ಯು ದಾಖಲೆಯಲ್ಲಿ ಭೂಕಂದಾಯ ಎಂಬುದನ್ನು ಬದಲಿಸಿ ವಂತಿಗೆ ಎಂದು ದಾಖಲಿಸಿತು. ಇಂದಿಗೂ ರೆವಿನ್ಯು ದಾಖಲೆಗಳಲ್ಲಿ ಅದೇ ಮುಂದುವರಿದಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...