ಅಂಕಣ - ಫೋಕಸ್‌

mail-img print-img

ಹಿಂದೂತ್ವ ಮತ್ತು ದಲಿತರು

ಶುಕ್ರವಾರ - ಜೂನ್ -15-2012

ಇಂದು ಭಾರತದ ಜನತೆ ಎದುರಿಸುತ್ತಿರುವ ಅತಿದೊಡ್ಡ ಆಂತರಿಕ ಶತ್ರು ‘ಹಿಂದೂತ್ವ’. ಹಿಂದೂತ್ವವೆಂದರೆ ಹಿಂದೂ ಧರ್ಮವೂ ಅಲ್ಲ.ಬಹುಸಂಖ್ಯಾತ ಹಿಂದೂಗಳು ‘ಹಿಂದೂತ್ವ ವಾದಿ’ಗಳೂ ಅಲ್ಲ. ಹಿಂದೂತ್ವವೆಂದರೆ ಜನ ರನ್ನು ಧರ್ಮದ ಆಧಾರದಲ್ಲಿ ಒಡೆದು ಆಳುವ,ಮೇಲು-ಕೀಳು ಎಂಬ ಬ್ರಾಹ್ಮಣೀಯ ಶ್ರೇಣೀಕರಣವನ್ನು ಶಾಶ್ವತಗೊಳಿಸುವ ರಾಜಕಾರಣ.ಪ್ರಜಾ ತಾಂತ್ರಿಕತೆ ಮತ್ತು ಸಮಾನತೆಯ ಮೌಲ್ಯಗಳು ಸರ್ವಮಾನ್ಯವಾಗುತ್ತಿರುವ ಈ ಆಧುನಿಕ ಯುಗದಲ್ಲಿ ದಲಿತರ ಮತ್ತು ಶೂದ್ರರ ದಾಸ್ಯವನ್ನು ಪುನರುಜ್ಜೀವಗೊಳಿಸುವ, ಮತ್ತು ಅದನ್ನು ದಾಸ್ಯಕ್ಕೊಳಗಾದವರೇ ಒಪ್ಪಿಕೊಳ್ಳುವಂತೆ ಮಾಡುವ ಅತಿಕ್ರೂರ ರಾಜಕೀಯ ಆಕ್ರಮಣವೇ ‘ಹಿಂದೂತ್ವ’.ಅದಕ್ಕೆ ಸಾಂಸ್ಕೃತಿಕ ರಾಜಕಾರಣದ ಮುಸುಕಿದ್ದರೂ ಹಿಂದೂತ್ವ ವೆಂಬುದು ಆಧುನಿಕ ಯುಗದಲ್ಲಿ ಬ್ರಾಹ್ಮ ಣೀಯ ಮೌಲ್ಯಗಳ ಅಂದರೆ ಸಾಮಾಜಿಕ ತಾರತಮ್ಯ, ಆರ್ಥಿಕ ಶೋಷಣೆ ಮತ್ತು ಸಾಂಸ್ಕೃತಿಕ ಗುಲಾಮಗಿರಿಯನ್ನು ಮರುಸ್ಥಾಪಿಸ ಬಯಸುವ ಫ್ಯಾಸಿಸ್ಟ್ ರಾಜಕಾರಣವೇ ಆಗಿದೆ. ಹಿಂದೂತ್ವವಾದಿಗಳು ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಭೌತಿಕ ಅಸ್ತಿತ್ವದ ಮೇಲೆ ಧಾಳಿ ನಡೆಸಿ ಅವರನ್ನು ನಿರ್ನಾಮ ಮಾಡುವ ಪ್ರಯತ್ನವನ್ನು ಸಾವರ್ಕರ್ ಕಾಲದಿಂದಲೂ ಬಹಿರಂಗವಾಗಿಯೇ ಮಾಡಿಕೊಂಡು ಬರುತ್ತಿದ್ದಾರೆ.

ಹಿಂದೂತ್ವವಾದಿಗಳ ಈ ಅಜೆಂಡಾವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಅದೇ ಸಮಯದಲ್ಲಿ ಅದು ದಲಿತ ಮತ್ತು ಅತಿಶೂದ್ರರ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ತಿತ್ವಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.ಆದ್ದರಿಂದಲೇ ಈ ಹಿಂದೂತ್ವ ಮುಸ್ಲಿಮರಿಗೆ ಹಾಗೂ ಕ್ರಿಶ್ಚಿಯನ್ನರಿಗೆ ಎಷ್ಟು ದೊಡ್ಡ ಶತ್ರುವೋ ಅಷ್ಟೇ ಮಟ್ಟಿಗೆ ಎಲ್ಲಾ ದಲಿತ ಹಾಗೂ ಶೂದ್ರ ಜನಸಾಮಾನ್ಯರಿಗೂ ಅಷ್ಟೇ ದೊಡ್ಡ ಶತ್ರುವಾಗಿದೆ.ಹೀಗಾಗಿಯೇ ಇದು ಭಾರ ತದ ಅತಿದೊಡ್ಡ ಅಂತರಿಕ ಶತ್ರುವಾಗಿದೆ.

ಭಾರತದ ಈ ಅಂತರಿಕ ಶತ್ರುವಾದ ‘ಹಿಂದೂತ್ವ’ಕ್ಕೆ ಭಾರತದ ಜನತೆ ಎದುರಿಸುತ್ತಿರುವ ಅತಿದೊಡ್ಡ ಬಾಹ್ಯ ಶತ್ರುವಾಗಿರುವ ಅಮೆರಿಕ ನೇತೃತ್ವದ ನವವಸಾಹತುವಾದಿ ಶಕ್ತಿಗಳೊಂದಿಗೆ ಮತ್ತು ಅವರು ವಿಶ್ವದ ಜನತೆಯ ಮೇಲೆ ಹರಿಬಿಟ್ಟಿರುವ ಜಾಗತೀ ಕರಣವೆಂಬ ಆಕ್ರಮಣದ ಜೊತೆ ಸಸ್ನೇಹ ಸಂಬಂಧವಿದೆ. ಅದು ಆರ್ಥಿಕ ದಾಸ್ಯವನ್ನು ಬಣ್ಣದ ಮಾತುಗಳಿಂದ ಹೇರುತ್ತಿದ್ದರೆ ‘ಹಿಂದೂತ್ವ’ವು ಅದನು ಮರುಮಾತಿಲ್ಲದೆ ಒಪ್ಪಿಕೊಳ್ಳಲು ಬೇಕಾದ ದಾಸ್ಯದ ಮನಸ್ಥಿತಿ ಯನ್ನು ಪುನರುಜ್ಜೀವಗೊಳಿಸುತ್ತಿದೆ. ಈ ನವವಸಾಹತುವಾದಿ ಶಕ್ತಿಗಳು ಪ್ರಾಣಿಲೋಕದಲ್ಲಿ ಸಂಭವಿಸುವಂತೆ ಇಂದಿನ ಸ್ಪರ್ಧಾತ್ಮಕ ಜಗತ್ತಿ ನಲ್ಲೂ ಬಲವಿದ್ದವನು ಮಾತ್ರ ಬದುಕಬೇಕೆಂಬ Social Darwinism ಸಿದ್ಧಾಂತವನ್ನು ಎತ್ತಿಹಿಡಿಯುತ್ತಿದ್ದರೆ, ಹಿಂದೂತ್ವವಾದಿ ಶಕ್ತಿಗಳು ‘ಸಾಮಾಜಿಕ ತಾರತಮ್ಯ ಸಹಜ ಮತ್ತು ಅನಿವಾರ್ಯ ಎಂಬ ಮನುವಾದಿ ಸಿದ್ಧಾಂತ ವನ್ನು ಎತ್ತಿಹಿಡಿದು ಶೋಷಣೆಗೆ ಮತ್ತು ದಮನಕ್ಕೆ ಸಮರ್ಥನೆ ಒದಗಿಸುತ್ತದೆ.

ಆದ್ದರಿಂದಲೇ ಪ್ರಖ್ಯಾತ ಚಿಂತಕ ಪ್ರೊ. ಕೆ. ಎನ್. ಪಣಿಕ್ಕರ್ ರವರು ‘‘ಹಿಂದೂತ್ವದ ಷಡ್ಯಂತ್ರಕ್ಕೆ ದಲಿತರು ಸುಲಭವಾಗಿ ಬಲಿಯಾಗಲು ಇರುವ ಇತರ ಕಾರಣಗಳಲ್ಲಿ ಜಾಗತೀಕರಣವೂ ಒಂದು’’ ಎಂದು ಅಭಿಪ್ರಾಯಪಡುತ್ತಾರೆ. ಹೀಗಾಗಿ ಪ್ರಾಯಶಃ ಆಧುನಿಕ ಜಗತ್ತಿನಲ್ಲಿ ಹುಟ್ಟಿಕೊಂಡ ಅತ್ಯಂತ ಪ್ರತಿಗಾಮಿ, ಅತ್ಯಂತ ಬರ್ಬರ ರಾಜಕೀಯ ಸಿದ್ಧಾಂತವಾದ ‘ಫ್ಯಾಸಿಸಂ’ ಎಂಬ ಪರಿಕಲ್ಪನೆಯ ಭಾರತೀಕರಣವೇ ‘ಹಿಂದೂತ್ವ’ ಎಂದರೆ ತಪ್ಪಾಗಲಾರದು.‘ಫ್ಯಾಸಿಸಂ’ ಎಂದರೆ ಕೇವಲ ಕ್ರೌರ್ಯವಲ್ಲ. ಕೇವಲ ಬರ್ಬರತೆಯಲ್ಲ.ಫ್ಯಾಸಿಸಂನ ಅಪಾಯವಿರುವುದು ಅದು ತನ್ನ ಈ ಎಲ್ಲಾ ಬರ್ಬರ ಕಾರ್ಯಾಚರಣೆಗೆ ಸಾಮಾಜಿಕ ಸಮ್ಮತಿಯನ್ನು ರೂಢಿಸಿಕೊಂಡಿರುವುದರಲ್ಲಿ ಮತ್ತು ಆ ಪ್ರಕ್ರಿಯೆಯಲ್ಲಿ ಇಡೀ ಸಮಾಜವನ್ನು ಬರ್ಬರಗೊಳಿಸುವುದರಲ್ಲಿ.

ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ಪ್ರಮಾಣ ದೊಡ್ಡದಾಗಿದ್ದರೂ, ದಲಿತರ ಮೇಲೆ ಮತ್ತು ಮಹಿಳೆಯರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಈ ಬಗೆಯ ಹತ್ಯಾಕಾಂಡಗಳು ಮತ್ತು ದೌರ್ಜನ್ಯಗಳು ನಡೆದುಕೊಂಡೇ ಬರುತ್ತಿದೆ. ಆದರೆ ಗುಜ ರಾತ್ ಹತ್ಯಾಕಾಂಡಕ್ಕೂ ಮತ್ತು ಇತರ ಪ್ರಕರಣ ಗಳಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಗುಜರಾತ್ ಹತ್ಯಾಕಾಂಡದಲ್ಲಿ ಪ್ರತ್ಯಕ್ಷವಾಗಿ ಯೂ ಸಾವಿರಾರು ಜನ- ಅದರಲ್ಲಿ ದಲಿತರು, ಆದಿವಾಸಿಗಳು ಮತ್ತು ಮಹಿಳೆಯರೂ ಭಾಗವ ಹಿಸಿದರೆ ಅದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು ಕೋಟ್ಯಂತರ ಮಂದಿ.

ಹೀಗಾಗಿಯೇ ಮನುಕುಲವೇ ತಲೆತಗ್ಗಿಸುವಂಥ ಹತ್ಯಾ ಕಾಂಡ ನಡೆಸಿದ ನಂತರವೂ ನರೇಂದ್ರ ಮೋದಿ ಹಿಂದಿಗಿಂತಲೂ ಹೆಚ್ಚಿನ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇದು ಮೋದಿಯ ರಾಜಕಾರಣ. ಇಡೀ ಸಮಾಜದ ನ್ಯಾಯಪ್ರಜ್ಞೆಯನ್ನು ಅಳಿಸಿಹಾಕಿ ಸಮಾಜವನ್ನು ಬರ್ಬರಗೊಳಿಸಿರುವುದನ್ನಷ್ಟೇ ಸೂಚಿಸುತ್ತದೆ. ‘ಫ್ಯಾಸಿಸಂ’ನ ಅತಿದೊಡ್ಡ ಅಪಾಯವಿದು.ಇತಿಹಾಸದಲ್ಲಿ ಇಂದಿರಾಗಾಂಧಿಯ ಎಮೆರ್ಜೆನ್ಸಿ ಕಾಲದ ನಿರಂಕುಶ ಆಡಳಿತ, ಪೊಲೀಸ್ ದೌರ್ಜನ್ಯ, ದೆಹಲಿಯ ಸಿಖ್ ಹತ್ಯಾಕಾಂಡ, ಅಥವಾ ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಸಶಸ್ತ್ರ ಪಡೆಗಳ ದೌರ್ಜನ್ಯ ಕೆಲವು ಮಾನದಂಡಗಳಲ್ಲಿ ಗುಜರಾತ್ ಅನ್ನು ಮೀರಿಸಬಹುದು. ಆದರೆ ಅವೆಲ್ಲದರ ಬಗ್ಗೆ ಸರಕಾರ ಏನೇ ಹೇಳಿದರೂ ಸಮಾಜದಲ್ಲಿ ಅದರ ಬಗ್ಗೆ ಖಂಡನೆಯಿತ್ತು.

ಆದರೆ ಗುಜರಾತ್ ಹತ್ಯಾಕಾಂಡ ಸಮಾಜವನ್ನೇ ಛಿದ್ರಗೊಳಿಸಿದೆ. ಸಮಾಜದಲ್ಲಿ ಪರಸ್ಪರರಲ್ಲಿ ಇದ್ದ ವಿಶ್ವಾಸವನ್ನು ವಿಧ್ವಂಸಗೊಳಿಸಿ ಸಮಾಜವನ್ನು ಮತಧರ್ಮಗಳ ಆಧಾರದಲ್ಲಿ ಧ್ರುವೀಕರಣಗೊಳಿಸಿದೆ.ಹೀಗಾಗಿಯೇ ‘ಹಿಂದೂತ್ವ’ದ ತ್ರಿಶೂಲದಿಂದ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಮಾತ್ರ ಸಾಯುತ್ತಿಲ್ಲ. ಬದಲಿಗೆ ಸಮಾಜದ ನ್ಯಾಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳೂ ಸಾಯುತ್ತವೆ.ಒಂದು ಸಮಾಜದಲ್ಲಿ ನ್ಯಾಯಪ್ರಜ್ಞೆ ಸತ್ತು ಅನ್ಯಾಯವೇ ರಾಜ್ಯಭಾರ ಮಾಡುತ್ತಿದ್ದರೆ ಬಲಿಯಾಗುವುದು ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹಂಬ ಲಿಸುತ್ತಿರುವ ಎಲ್ಲಾ ದುರ್ಬಲ, ಶೋಷಿತ ಮತ್ತು ದಮನಿತ ವರ್ಗಗಳು ಈ ಅನ್ಯಾಯದ ರಾಜ್ಯ ಭಾರದಲ್ಲಿ ಬಲಿಯಾಗುತ್ತಲೇ ಹೋಗುತ್ತವೆ.

ಈವರೆಗೆ ಹೋರಾಟದಿಂದ ಗಳಿಸಿಕೊಂಡಿದ್ದಲ್ಲೆವನ್ನೂ ಕಳೆದುಕೊಳ್ಳುತ್ತಾ ತಮಗೇ ಗೊತ್ತಿಲ್ಲದಂತೆ ಗುಲಾಮಗಿರಿಯತ್ತ ಸರಿಯುತ್ತಾ ಹೋಗುತ್ತವೆ. ಮಹಾರಾಷ್ಟ್ರದಲ್ಲಿ ಹಿಂದೂತ್ವವಾದಿಗಳ ಜೂನಿಯರ್ ಪಾರ್ಟ್‌ನರ್ ಆದ ಶಿವಸೇನೆಯ ಜೊತೆ ಭೀಮಶಕ್ತಿ+ಶಿವಶಕ್ತಿ= ರಾಷ್ಟ್ರ ಶಕ್ತಿ ಎಂಬ ಸಮೀಕರಣಕ್ಕೂ ಮುಂದಾಗಿದ್ದಾರೆ.

ಕರ್ನಾಟಕ ಭಿನ್ನವಾಗಿಲ್ಲ:ಕರ್ನಾಟಕದಲ್ಲಿ ದಲಿತ ರಾಜಕಾರಣ ಈ ಪ್ರಮಾಣದಲ್ಲಿ ಹಿಂದೂತ್ವದ ಸೈದ್ಧಾಂತಿಕ ಪ್ರಭಾವಕ್ಕೆ ಒಳಗಾಗಿಲ್ಲ ಎಂಬುದು ನಿಜವಾದರೂ ಆರೆಸ್ಸೆಸ್‌ನ ಶಾಖೆಗಳು ಈಗ ವಿಶೇಷವಾಗಿ ಸ್ಲಂಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿದೆ. ಒಟ್ಟಾರೆ ಶೋಷಣೆಯ ವಿರುದ್ಧದ ಹೋರಾಟವೇ ಕಾವು ಕಳೆದುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ದಲಿತ ಪ್ರಜ್ಞೆಯ ಹರಿತ ಕಡಿಮೆ ಆಗುತ್ತಿದೆ. ಹಿಂದೊಮ್ಮೆ ನ್ಯಾಯ ಪ್ರಜ್ಞೆ ಮತ್ತು ದಲಿತ ಪ್ರಜ್ಞೆಯ ಹರಿಕಾರರಾಗಿದ್ದ ಮೊದಲ ತಲೆಮಾರಿನ ದಲಿತ ಮಧ್ಯಮ ವರ್ಗ ಬದುಕಿನ ಅನಿವಾರ್ಯತೆ, ರಾಜಕೀಯ ಅವಕಾಶವಾದಗಳಿಂದಾಗಿ ಬದುಕು ಮಾಡುತ್ತಿದ್ದರೆ ಇಂದಿನ ದಲಿತ ಮಧ್ಯಮ ವರ್ಗದ ಬಹುದೊಡ್ಡ ಭಾಗ ಬ್ರಾಹ್ಮಣೀಕರಣಗೊಳ್ಳುತ್ತಿದ್ದಾರೆ. ಹಿಂದೊಮ್ಮೆ ಜಾಗೃತ ದಲಿತ ಶಕ್ತಿಯ ಪ್ರತೀಕಗಳಾಗಿದ್ದ ವ್ಯಕ್ತಿಗಳು ಮತ್ತು ಶಕ್ತಿಗಳು ಹಿಂದೂತ್ವವಾದಿ ಶಕ್ತಿಗಳೆಡೆ ಸಾಂಸ್ಕೃತಿಕ ವಲಸೆ ಪ್ರಾರಂಭಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸ್ವರೂಪದ ರಾಜಕೀಯ ಅಧಿಕಾರದ ‘ಮಾಯಾ ಮರೀಚಿಕೆ’ಯ ಮೋಹ ನಿಧಾನವಾಗಿ ಬಹುಬಗೆಯ ರಾಜೀಕೋರತನವನ್ನು ಕರ್ನಾಟಕದಲ್ಲೂ ಹುಟ್ಟುಹಾಕುತ್ತಿದೆ. ಅದರಲ್ಲೂ ಚುನಾವಣೆಯ ದೃಷ್ಟಿಯಿಂದ ಭ್ರಷ್ಟಾತಿಭ್ರಷ್ಟ ರಾಜಕಾರಣವನ್ನೂ ಜಾತಿನೆಲೆಯಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಅದಕ್ಕೆ ಲೋಹಿಯಾವಾದ ಇತ್ಯಾದಿಗಳ ಬಣ್ಣದ ಮೆರುಗು ತೊಡಿಸುವ ಸೈದ್ಧಾಂತಿಕ ಭ್ರಷ್ಟತೆ ಕರ್ನಾಟಕಕ್ಕೂ ಕಾಲಿಡುತ್ತಿದೆ. ಈ ಬಗೆಯ ತತ್ವಭ್ರಷ್ಟ ರಾಜಕಾರಣವನ್ನೇ ನಿಧಾನವಾಗಿ ಹಿಂದೂತ್ವವಾದಿಗಳು ದಲಿತರನ್ನು ತಮ್ಮ ಸಂಘಟನಾತ್ಮಕ ತೆಕ್ಕೆಗೆ ತೆಗೆದುಕೊಳ್ಳಲು ಒಂದು ಆಯುಧವನ್ನಾಗಿ ಮಾಡಿಕೊಂಡಿದ್ದನ್ನು ಗಮನಿಸಿದರೆ ಕರ್ನಾಟಕವು ಅದರ ಹೊಸ್ತಿಲಲ್ಲಿರುವುದು ಕಾಣುತ್ತದೆ.

ಇದಲ್ಲದೆ ಯಡಿಯೂರಪ್ಪನವರ ಕಾಲದಲ್ಲಿ ಮಠಗಳಿಗೆ, ದೇವಸ್ಥಾನಗಳಿಗೆ ಹಣವನ್ನು ನೀಡುವ ಸಾಂಸ್ಕೃತಿಕ ರಾಜಕಾರಣದ ಪ್ರಧಾನ ಫಲಾನುಭವಿಗಳು ಲಿಂಗಾಯತ ಮಠಗಳೇ ಆಗಿದ್ದರೂ ಅದರ ಹಿಂದೆ ‘ಹಿಂದೂತ್ವ’ದ ಒಂದು ದೊಡ್ಡ ಅಜೆಂಡಾವೇ ಅಡಗಿತ್ತು. ಬಿಜೆಪಿಯ ಅಧಿಕಾರಾವಧಿಯಲ್ಲಿ ಉತ್ತರ ಮತು ದಕ್ಷಿಣ ಕರ್ನಾಟಕದಲ್ಲಿ ಸಮುದಾಯ ಭವನಗಳ ಹೆಸರಲ್ಲಿ ದಲಿತರ ಮತ್ತು ಸಣ್ಣ ಪುಟ್ಟ ಜಾತಿಗಳ ಊರ ದೇವತೆಗಳನ್ನು ಗುಡಿಗಳನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ವಾರ್ಷಿಕ ಜಾತ್ರೆ ಮಾಡುವ ಕಾರ್ಯಕ್ರಮಕ್ಕೆ ಸರಕಾರ ಮತ್ತು ಬಿಜೆಪಿ ಪಕ್ಷ ನೇರವಾಗಿ ಹಣ ನೀಡುತ್ತಿದೆ.

ಈ ರೀತಿ ನವೀಕರಣಗೊಂಡ ದೇವಸ್ಥಾನಗಳಲ್ಲಿ ಈವರೆಗೆ ಇಲ್ಲದ ಬ್ರಾಹ್ಮಣೀಯ ಪೂಜೆಗಳನ್ನು, ನವೀಕರಣದಲ್ಲಿ ವಾಸ್ತು, ಪೂಜೆ, ಆಚಾರ, ವಿಚಾರ ಎಲ್ಲದರಲ್ಲೂ ಬ್ರಾಹ್ಮಣೀಯ ಅಂಶಗಳನ್ನು ತೂರಿಸಿ ಶೂದ್ರ ಮತ್ತು ದಲಿತ ದೈವಗಳನ್ನು ಬ್ರಾಹ್ಮಣ್ಯದ ಒಕ್ಕಲನ್ನಾಗಿಸುವ ಸಾಂಸ್ಕೃತಿಕ ರಾಜಕಾರಣವನ್ನು ಹಿಂದೂತ್ವ ಪ್ರಾರಂಭಿಸಿದೆ. ಇದು ಹೇಗೆ ದಲಿತ ಮತ್ತು ಶೂದ್ರ ಪ್ರಜ್ಞೆಯನ್ನು ಬ್ರಾಹ್ಮಣ್ಯದ ಅಧೀನವಾಗಿಸುತ್ತದೆ ಹಾಗೂ ಶೂದ್ರ ಮತ್ತು ದಲಿತರನ್ನು ಸಂಘಪರಿವಾರದ ಪದಾತಿದಳವಾಗಿಸುತ್ತದೆ ಎಂಬುದಕ್ಕೆ ಅವೈದಿಕ ನೆಲೆವೀಡಾದ ಅವಿಭಜಿತ ದಕ್ಷಿಣ ಕನ್ನಡ ಹೇಗೆ ಈ ಬಗೆಯ ಸಾಂಸ್ಕೃತಿಕ ರಾಜಕಾರಣದಿಂದ ‘ಹಿಂದೂತ್ವ’ದ ಸೈದ್ಧಾಂತಿಕ ನೆಲೆವೀಡಾಯಿತು ಎಂಬುದೇ ಒಂದು ದೊಡ್ಡ ಉದಾಹರಣೆ.
 
ಇದು ಈ ದೇಶದ ತುಳಿತಕ್ಕೊಳಗಾದ, ದಮನಿತ ಶೋಷಿತ ಜನರ ದೃಷ್ಟಿಯಿಂದ ಹಾಗೂ ಈ ದೇಶದ ಪ್ರಜಾಸತ್ತೆಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಆತಂಕಕಾರಿ ವಿದ್ಯಮಾನವಾಗಿದೆ. ‘‘ಈ ದೇಶದ ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಭವಿಷ್ಯದಲ್ಲೇ ದಲಿತರ ವಿಮೋಚನೆಯ ಬೆಳಕು ಇದೆ’’ಯೆಂದು ಈ ದೇಶದ ದಮನಿತ ಜನರೆಲ್ಲರ ನಾಯಕ ಮತ್ತು ದಾರ್ಶನಿಕ ಅಂಬೇಡ್ಕರ್ ಸ್ಪಷ್ಟವಾದ ಮಾತುಗಳಲ್ಲಿ ಹಲವಾರು ಬಾರಿ ಹೇಳಿದ್ದರು. ಈ ಪ್ರಜಾತಂತ್ರೀಕರಣ ಕೇವಲ ಪ್ರಭುತ್ವ ರಚನೆಯ ಮಟ್ಟದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲೂ ಬಲುಬೇಗನೆ ನಡೆಯದಿದ್ದರೆ ಈ ದೇಶದ ಸ್ವಾತಂತ್ರ್ಯಕ್ಕೆ ಏನೂ ಅರ್ಥವಿರುವುದಿಲ್ಲವೆಂದೂಸ್ಪಷ್ಟವಾಗಿ ಘೋಷಿಸಿದ್ದರು.

ಆದರೆ ಕಳೆದ 6 ದಶಕಗಳಲ್ಲಿ ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ‘ಹಿಂದೂತ್ವವಾದಿ’ ಶಕ್ತಿಗಳು ಅಂಬೇಡ್ಕರ್ ಪ್ರತಿಪಾದಿಸಿದ ಮೌಲ್ಯಗಳಾದ ಪ್ರಜಾತಂತ್ರ ಮತ್ತು ಸಮಾಜವಾದದ ಮೇಲೆಯೇ ಸಮರ ಸಾರಿದ್ದಾರೆ. ಈ ಸಮರಕ್ಕೆ ದಲಿತರನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಡಾ. ಆನಂದ್ ತೇಲ್‌ತುಂಬ್ಡೆಯವರು ಒಂದು ಕಡೆ ಹೇಳಿರುವಂತೆ ‘‘ಅಂಬೇಡ್ಕರ್‌ರನ್ನು ಈ ದೇಶದ ದಲಿತ ಸಮೂಹ ದಾರಿದೀಪವಾಗಿ ಕಾಣುವ ಬದಲಿಗೆ ‘ಪ್ರತಿಮೆ’ಯಂತೆ ಕಾಣತೊಡಗಿದ್ದೂ ಇದಕ್ಕೆ ಒಂದು ಪ್ರಮುಖ ಕಾರಣ. ಅದೇ ರೀತಿ ಸಮಕಾಲೀನ ದಲಿತ ಸಂಘಟನೆಗಳು ಇಡೀ ಸಮಾಜವನ್ನೇ ಕ್ರಾಂತಿಕಾರಿಯಾಗಿ ಪುನಾರಚನೆ ಮಾಡಬೇಕೆಂಬ ಅಂಬೇಡ್ಕರ್ವಾದವನ್ನು ದಲಿತರಿಗೆ ಅಧಿಕಾರ ಬೇಕೆಂಬ ಹಂಬಲವೆಂಬ ಮಟ್ಟಕ್ಕೆ ಇಳಿಸಿದ್ದೂ ಸಹ, ವ್ಯವಸ್ಥೆಗೆ ಅದರಲ್ಲೂ ಹಿಂದೂತ್ವವಾದಿಗಳಿಗೆ ಅಂಬೇಡ್ಕರ್‌ರನ್ನು ಅಪವ್ಯಾಖ್ಯಾನಗೊಳಿಸಿ ತಮ್ಮ ಅಜೆಂಡಾಗಳಿಗೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿತು.

ಹೀಗೆ ದಲಿತರ ಮೇಲೆ ಹೆಚ್ಚಾಗುತ್ತಿರುವ ಹಿಂದೂತ್ವದ ಪ್ರಭಾವವು ಸಾರಾಂಶದಲ್ಲಿ ಈ ದೇಶದ ಪ್ರಜಾಸತ್ತೆ ಮತ್ತು ಸಮಾಜವಾದಿ ಕನಸುಗಳ ವಿರುದ್ಧ ಮತ್ತು ಈ ದೇಶದ ಜನತೆಯ ವಿರುದ್ಧ ಹಿಂದೂತ್ವವಾದಿಗಳು ನಡೆಸುತ್ತಿರುವ ಪ್ರತಿಗಾಮಿ ಆಕ್ರಮಣದ ತಾತ್ಕಾಲಿಕ ವಿಜಯದ ಕಥನವನ್ನೇ ತೆರೆದಿಡುತ್ತದೆ.ಆದ್ದರಿಂದಲೇ ಹಿಂದೂತ್ವ ರಾಜಕಾರಣ ಉಚ್ಛ್ರಾಯ ದೆಸೆಗೆ ಹೋದ ಕಾಲಘಟ್ಟದಲ್ಲೇ ಜಾಗತೀಕರಣ, ಉದಾರೀಕರಣದ ಆಕ್ರಮಣ ಗಳು ಜನಸಾಮಾನ್ಯರ ಮೇಲೆ ನಡೆಯುತ್ತಲಿದೆ. ಸ್ವಾತಂತ್ರ್ಯಹೋರಾಟದ ಕಾಲದಿಂದಲೂ ಈ ದೇಶದ ಶೋಷಿತ ಜನತೆ ಪಡೆದುಕೊಂಡಿದ್ದ ಆಹಾರ, ಶಿಕ್ಷಣ, ಆರೋಗ್ಯ, ವಸತಿಯಂಥ ಎಲ್ಲಾ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನೂ ಕಳೆದು ಕೊಳ್ಳುತ್ತಾ ಬರುತ್ತಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಆಗುತ್ತಿರುವ ಈ ಅನ್ಯಾಯವನ್ನು ಅರ್ಥಮಾಡಿಕೊಳ್ಳುವ, ಅದನ್ನು ತಮ್ಮ ಮೇಲೆ ಹೇರುತ್ತಿರುವ ಶಕ್ತಿಗಳನ್ನು ಗುರುತಿಸುವ ಹಾಗೂ ಅದರ ವಿರುದ್ಧ ಹೋರಾ ಡುವ ಪ್ರಜ್ಞೆಯನ್ನೇ ಇಂದು ಜಾಗತೀಕರಣ ಮತ್ತು ಹಿಂದೂತ್ವವಾದಿ ಶಕ್ತಿಗಳು ಭ್ರಷ್ಟಗೊಳಿಸಿಬಿಟ್ಟಿದೆ. ಇದು ಈ ಭಾರತೀಯ ಫ್ಯಾಸಿಸಂ ಭಾರತದ ಜನತೆಗೆ ಮತ್ತು ಪ್ರಜಾತಂತ್ರಕ್ಕೆ ಒಡ್ಡಿರುವ ಅತಿ ದೊಡ್ಡ ಅಪಾಯ.ಈ ಅಪಾಯವು ‘ಹಿಂದೂತ್ವ’ದ ಪ್ರಭಾವಕ್ಕೆ ದಲಿತರು ಹೆಚ್ಚೆಚ್ಚು ಒಳಗಾಗುತ್ತಿರುವುದರಲ್ಲಿ ಎದ್ದು ಕಾಣುತ್ತಿದೆ.

ಅನ್ಯಾಯ, ಸಾಮಾಜಿಕ ತಾರತಮ್ಯ, ಶೋಷಣೆ ಮತ್ತು ದಮನಗಳನ್ನು ಮುಂದುವರಿಸಲು ಹಿಂದೂ ತ್ವವು ನ್ಯಾಯ, ಸಾಮಾಜಿಕ ನ್ಯಾಯ, ಸಮಾನತೆ ಇನ್ನಿತರ ಮೌಲ್ಯಗಳ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ಹಿಂದೂತ್ವದ ವಿರುದ್ಧ ಸಮಾಜಕ್ಕೆ ನಾಯಕತ್ವ ಕೊಟ್ಟು ಯಾವ ದಲಿತ ಶಕ್ತಿಗಳು ಈ ನ್ಯಾಯ ಸಂಗ್ರಾಮದ ದಂಡನಾಯಕರಾಗಬೇಕಿತ್ತೋ ಅಂಥಾ ಶಕ್ತಿಗಳೇ ಇಂದು ಹಿಂದೂತ್ವದ ಪಡೆಗಳ ಕಾಲಾಳುಗಳಾಗಿರುವುದು ಸಂದರ್ಭದ ಗಂಭೀರತೆಯನ್ನೂ,ಅಪಾಯವನ್ನೂ, ವಿಪರ್ಯಾಸವನ್ನೂ ಸೂಚಿಸುತ್ತಿದೆ. ಗುಜರಾತಿನಲ್ಲಿ ಹಾಗೂ ಇತ್ತೀಚಿಗೆ ದೇಶದ ಇತರೆಡೆಗಳಲ್ಲಿ ಮುಸ್ಲಿಮರ ಮೇಲೆ ಹಿಂದೂತ್ವ ವಾದಿಗಳು ನಡೆಸುತ್ತಿರುವ ಹಲವು ಹತ್ಯಾಕಾಂಡಗಳಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬಹಳಷ್ಟು ಕಡೆ ತಾವೇ ನೇರ ವಾಗಿ ಮುಸ್ಲಿಂ ವಿರೋಧಿ ಗಲಭೆಗಳಲ್ಲಿ ಭಾಗ ವಹಿಸದಿದ್ದರೂ ಪರೋಕ್ಷವಾಗಿ ಮುಸ್ಲಿಮರ ಮೇಲಿನ ದಾಳಿಯ ಹಿಂದೂತ್ವದ ರಾಜಕಾರಣದ ಸಮರ್ಥನೆಯನ್ನು ಭಿಡೆಯಿಲ್ಲದೆ ಮಾಡುತ್ತಿದ್ದಾರೆ.ಕೆಲವು ಕಡೆ ಹಿಂದೂತ್ವವಾದಿಗಳ ಬರ್ಬರ ಆಕ್ರಮಣದ ಬಗ್ಗೆ ದಲಿತ ಶಕ್ತಿಗಳು ಮೌನವಾಗುಳಿದು ‘ಹಿಂದೂತ್ವವಾದಿ’ಗಳ ದೌರ್ಜನ್ಯಕ್ಕೆ ಮೌನ ಸಮ್ಮತಿ ವ್ಯಕ್ತಪಡಿಸುತ್ತಿದ್ದರೆ 2003ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ದಲಿತ ನಾಯಕಿ ಮಾಯಾವತಿ ಮಾಡಿದಂತೆ ಬಹಿರಂಗ ವಾಗಿಯೇ ‘‘ನರೇಂದ್ರ ಮೋದಿ ನಿರಪರಾಧಿ’’ ಎಂಬ ಪ್ರಚಾರಕ್ಕೆ ತಮ್ಮ ಧ್ವನಿಯನ್ನೂ ಸೇರಿಸುತ್ತಿದ್ದಾರೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್