ಕನ್ನಡ ಸಾಹಿತ್ಯ, ರಾಜಕೀಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕ ಅತ್ಯಂತ ಮಹತ್ವ ಪೂರ್ಣವಾದದ್ದು.ಒಂದು ದೃಷ್ಟಿಯಿಂದ ಎಲ್ಲರೂ ನಾನಾ ಕಾರಣಗಳಿಗಾಗಿ ‘ಎಪ್ಪತ್ತು ಮತ್ತು ಎಂಬತ್ತರ ದಶಕ’ವನ್ನು ಅಡ್ಡಾದಿಡ್ಡಿ ಎಳೆದಾಡಿದ್ದಾರೆ.ಆದರೆ ಇಷ್ಟು ಎಳೆದಾಡಿದ್ದರೂ;ಅದರ ಅಂತರಂಗದೊಳಗೆ ಅರ್ಥವ್ಯಾಪ್ತಿಯನ್ನು ಕಾದಿಟ್ಟು ಕೊಂಡೇ ಬಂದಿದೆ. ಎಂತೆಂಥ ಚಳುವಳಿಗಳು,ವಾಗ್ವಾದಗಳು ಮತ್ತು ಸಾಮಾಜಿಕ ಇತಿಹಾಸ ಯಾವಾಗಲೂ ಉದಾಹರಿಸಬಹುದಾದ ಸಂಗತಿಗಳೆಲ್ಲ ನಡೆದು ಹೋಗಿದೆ.ಅತ್ಯತ್ತಮ ಲೇಖಕರು,ಕಲಾವಿದರು ಮತ್ತು ಚಿಂತಕರು ಕ್ರಿಯಾಶೀಲರಾಗಿ ಕಾಣಿಸಿಕೊಂಡರು. ಗಾಂಧೀಜಿಯವರ ಒಂದು ಬೃಹತ್ ವೃಕ್ಷದ ಸುತ್ತ;ಲೋಹಿಯಾ, ಜಯಪ್ರಕಾಶ್ ನಾರಾಯಣ್,ಅಶೋಕ್ ಮೆಹ್ತಾ ಪೆರಿಯಾರ್, ಅಂಬೇಡ್ಕರ್,ನಾರಾಯಣಗುರು ಈ ರೀತಿಯ ಯಾರ್ಯಾರೋ ಮಹಾನ್ ಚಿಂತಕರು ದಟ್ಟವಾದ ಪ್ರಭಾವವನ್ನು ಬೀರಲು ಸಾಧ್ಯವಾಯಿತು.ಮತ್ತೊಂದು ದಿಕ್ಕಿನಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದಲ್ಲಿ ಹೊಸ ಹೊಸ ಚಿಂತನಾ ಕ್ರಮಗಳು ದಟ್ಟವಾದ ಪ್ರಭಾವವನ್ನು ಬೀರಿದವು.
ಇದರಿಂದ ಒಂದು ಸಾಂಸ್ಕೃತಿಕ ಸಂದರ್ಭ ತುಂಬ ಶ್ರೀಮಂತವಾಗಿ ಬೆಳೆಯಲು ಸಾಧ್ಯವಾಯಿತು. ಇದಕ್ಕೆ ಪೂರ ಕವೆಂಬಂತೆ ಸಮಾಜವಾದ ಮತ್ತು ಸಮತಾವಾದದ ವೈವಿಧ್ಯಮಯವಾದ ಸಂವಾದಗಳು ಮುಖಾ ಮುಖಿಯಾಗಲು ಸಾಧ್ಯವಾಯಿತು. ಇವೆಲ್ಲ ಸಾಹಿತ್ಯ ಚಿಂತನೆಯಲ್ಲಿ ಕಸಿಯಾಗಿಯೇ ರೂಪ ಪಡೆಯುತ್ತಿತ್ತು. ಇದು ಒಟ್ಟು ಭಾರತೀಯ ಸಂದರ್ಭದಲ್ಲಿ ಮಾತ್ರವಲ್ಲ; ವಿಶ್ವದ ಬೇರೆ ಬೇರೆ ವಿದ್ಯಮಾನಗಳ ಜೊತೆಯೂ ಬೆಸುಗೆಗೊಂಡಿದ್ದ ಕಾಲಘಟ್ಟವಿದು.ಹಾಗೆಯೇ ಜಾತಿ ಮತ್ತು ಮತ ಧರ್ಮಗಳನ್ನು ಕುರಿತಂತೆ ವ್ಯಾಪಕವಾದ ಚರ್ಚೆ ಪ್ರಾರಂಭವಾಯಿತು.ಪ್ರತಿಯೊಂದು ಪುಟ್ಟ ಜಾತಿಯೂ ಸ್ವಾಭಿಮಾನದಿಂದ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ವಾತಾವರಣ ಸೃಷ್ಟಿಯಾಯಿತು.
ಈ ದೃಷ್ಟಿಯಿಂದ 1947ರ ನಂತರದ ಆಗುಹೋಗುಗಳು ಸದಾ ಚರ್ಚಿಸಬಹುದಾದಂಥವು.ಹಾಗೆಯೇ ಮೂಲಭೂತ ವಾದಿಗಳ ಜೊತೆ ಸಂಘರ್ಷಕ್ಕಿಳಿದಿದೆಯಲ್ಲ; ಅದೂ ಕೂಡ ಚಾರಿತ್ರಿಕವಾಗಿ ಗಮನಿಸುವಂಥದ್ದು.ಇವೆಲ್ಲವುಗಳಿಗೆ ವೇದಿಕೆ ಎಂಬಂತೆ ‘ಸಮಾಜವಾದಿ ಚಳುವಳಿ ಮತ್ತು ಸಮತಾ ವಾದ ಚಳುವಳಿ’ ಸೃಷ್ಟಿಸಿದ ನೆಲೆಗಳು ತುಂಬ ಅರ್ಥಪೂರ್ಣವಾದವು. ನನ್ನಂಥವರು ಯಾವ ಯಾವುದೋ ಕಾರಣಕ್ಕಾಗಿ ಸಮಾಜ ವಾದಿ ಪಕ್ಷದ ಜೊತೆ ಗುರುತಿಸಿಕೊಂಡೆವು.
ಇದರಿಂದ ಆದ ಲಾಭವೆಂದರೆ:ಎಲ್ಲವನ್ನು ಅನನ್ಯತೆಯಿಂದ ನೋಡಬೇಕೆನ್ನುವುದರ ಜೊತೆ; ವೈವಿಧ್ಯಮಯವಾದ ಮುಖಗಳನ್ನೆಲ್ಲ ನನ್ನ ಅನುಭವದ ಪರಿಧಿಯೊಳಗೆ ಬಿಟ್ಟುಕೊಳ್ಳಲು ಸಾಧ್ಯವಾಯಿತು.
ಇದರ ಜೊತೆಗೆ ಮತ್ತೊಂದು ವಿಶೇಷತೆಯೆಂದರೆ: ಎರಡು ಸಮಾಜವಾದಿ ಪಕ್ಷಗಳು ಅಥವಾ ಚಿಂತನೆಯ ಸ್ಕೂಲ್‌ಗಳ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುವ ತುರ್ತು ಸ್ವಾಭಾವಿಕವಾಗಿಯೇ ಲಭಿಸಿತ್ತು. ಈ ಎರಡು ಅವಳಿ ಪಕ್ಷಿಗಳ ರೀತಿಯಲ್ಲಿ ಬೆಂಗಳೂರಿನ ಸದಾ ಆಕರ್ಷಕ ಕೇಂದ್ರವಾಗಿದ್ದ ಮೆಜೆಸ್ಟಿಕ್‌ನ ಸುಬೇದಾರ್ ಛತ್ರಂ ರಸ್ತೆಯಲ್ಲಿದ್ದಂಥವು. ಒಂದು ಅನ್ನಮ್ಮ ದೇವಸ್ಥಾನದ ಎದುರಿದ್ದರೆ ಮತ್ತೊಂದು ಇದರಿಂದ ಐವತ್ತು ಗಜಗಳ ದೂರದಲ್ಲಿ ರಾಮಕೃಷ್ಣ ಲಾಡ್ಜ್‌ನ ಬೋಧಿವೃಕ್ಷದ ಕೆಳಗೆ. ಮೂಲ ಸಮಾಜವಾದಿ ಪಕ್ಷದಲ್ಲಿ ಶಾಂತವೇರಿ ಗೋಪಾಲ ಗೌಡರು, ಜೆ.ಎಚ್.ಪಟೇಲರು, ಸಿ.ಜಿ.ಕೆ. ರೆಡ್ಡಿಯವರು, ಕಾಗೋಡು ತಿಮ್ಮಪ್ಪ ಮತ್ತು ಎಸ್.ವೆಂಕಟರಾಂ ಮುಂತಾದವರು ಇದ್ದರು.ಆದರೆ ಇದರಿಂದ ಸೆಟೆದು ಹೋದವರಂತೆ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರು ಸಾಂಕೇತಿಕವಾಗಿ; ಸಮಾಜವಾದಿ ಪಕ್ಷದ ಅರ್ಥಾತ್ ಯುವಜನಾ ಸಭಾದ ಕೇಂದ್ರ ಕಛೇರಿ ಈ ರಾಮಕೃಷ್ಣ ಲಾಡ್ಜ್‌ನ ಬೋಧಿವೃಕ್ಷದ ಕೆಳಗೆ ಅಸ್ತಿತ್ವವನ್ನು ಪಡೆದಿತ್ತು.
ಆಶ್ಚರ್ಯದ ಸಂಗತಿಯೆಂದರೆ:ಈ ಎರಡೂ ಸಾಂಸ್ಕೃತಿಕ ಕೇಂದ್ರಗಳು ಮೊದಲನೆಯ ಬಾರಿಗೆ ಲೇಖಕರನ್ನು ಮತ್ತು ಕಲಾವಿದರನ್ನು ಒಳಗೆ ಬಿಟ್ಟುಕೊಂಡಿದ್ದು ಅತ್ಯಂತ ಹೆಚ್ಚುಗಾರಿಕೆಯ ವಿಷಯವಾಗಿದೆ. ಯಾಕೆಂದರೆ ಅಷ್ಟರಮಟ್ಟಿಗೆ ಲೇಖಕರನ್ನು ಹಾಗೂ ಕಲಾವಿದರನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡು ರಾಜಕೀಯ ಸ್ಥಿತ್ಯಂತರಗಳ ಜೊತೆ ಸಮೀಕರಿಸಿ ಕೊಂಡಿತ್ತು. ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಆಗ ತಾನೇ ವಿದೇಶದಿಂದ ಕಾನೂನಿನಲ್ಲಿ ಉನ್ನತ ಶಿಕ್ಷಣ ವನ್ನು ಪಡೆದು ಬಂದವರು. ದೊಗಳೆ ಕೋಟು ಮತ್ತು ಪ್ಯಾಂಟು.ಅದಕ್ಕೆ ಹೊಂದಿಕೊಂಡಂತೆ ಮತ್ತು ಕುತ್ತಿಗೆಗೆ ಕಚ್ಚಿಕೊಂಡಂತಿದ್ದ ನೆಕ್‌ಟೈ.ಆಕರ್ಷಕ ಗಡ್ಡ.ಏನೇ ಮಾತಾಡಿದರೂ;ಮುಂದೆ ಕೂತಿರುವವರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ವಾಕ್ಯಗಳಲ್ಲಿ ತಮ್ಮ ಮಾತುಗಳನ್ನು ಅಥವಾ ಚಿಂತನೆಯನ್ನು ಮಂಡಿಸುತ್ತಿದ್ದವರು. ಆದರೆ ಅತ್ಯಂತ ಸ್ವಪ್ರತಿಷ್ಠೆಯ ವ್ಯಕ್ತಿತ್ವವನ್ನು ಹೊದಿದ್ದವರು. ಆದ್ದರಿಂದಲೇ ಸಮಾಜವಾದಿ ಪಕ್ಷಕ್ಕೆ ಹೋದ ಮೊದಲ ದಿವಸವೇ ಶಾಂತವೇರಿ ಗೋಪಾಲಗೌಡ ರಂಥ ನಾಯಕರೊಡನೆ ಜಗಳ ತೆಗೆದು ಹೊರಗೆ ಬಂದವರು. ಬರುವಾಗ ಸುಮ್ಮನೆ ಬರಲಿಲ್ಲ. ಎಂದಾದರೂ ಈ ಪಕ್ಷದಲ್ಲಿ ಬಂದು ಕೂರುತ್ತೇನೆ. ನೀವು ಹೊರಗೆ ಹೋಗುವಂತೆ ಮಾಡುತ್ತೇನೆ ಎಂದು ದೂರ್ವಾಸಮುನಿಯಂತೆ ಬಂದವರು.
ಕೊನೆಯ ತನಕ ಮುನಿಸನ್ನು ಉಳಿಸಿಕೊಂಡೇ ಬಂದವರು. ನಾವು ಅಪ್ಪಿತಪ್ಪಿ ‘ಸಮಾಜವಾದಿ ಪಕ್ಷ’ದ ಬಗ್ಗೆ ಪ್ರಸ್ತಾಪಿಸುತ್ತಲೇ ಇರಲಿಲ್ಲ.ಯಾಕೆಂದರೆ ಪ್ರಸ್ತಾಪಿಸಿದ ತಕ್ಷಣ; ಅದು ಸಮಾಜವಾದಿ ಪಕ್ಷದ ಕಛೇರಿಯಲ್ಲ. ಸಮಾಜಘಾತುಕ ಕಛೇರಿ ಎನ್ನುತ್ತಿದ್ದರು.ಆದರೆ ಓದು ಮತ್ತು ಬರಹಕ್ಕೆ ಸಂಬಂಧಿಸಿದಂತೆ ಶಿಸ್ತನ್ನು ಕಲಿಸಿದವರು. ನಾನಾ ಕಾರಣಗಳಿಗಾಗಿ ನಮಗೆ ಆಶ್ರಯ ನೀಡುತ್ತಿದ್ದ ಆ ವೃಕ್ಷವು ಬೋಧಿವೃಕ್ಷವೇ ಆಗಿತ್ತು. ನಾವು ಬುದ್ಧನನ್ನು ನೋಡಿದವರಲ್ಲ. ಆದರೆ ಇಷ್ಟು ಸಾವಿರ ವರ್ಷಗಳ ನಂತರವೂ ಜಗತ್ತಿನಾದ್ಯಂತ ವಿಸ್ತರಿಸುತ್ತಲೇ ಹೋಗುತ್ತಿರುವ ಆತನ ಚಿಂತನೆಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಂಡ ರೂ; ಇನ್ನೂ ಸಾಲದು ಎಂಬ ಅಪರಿಪೂರ್ಣತೆ ಧುತ್ತನೆ ಮುಂದೆ ನಿಂತಿರುತ್ತದೆ. ಇಂಥ ಚಿಂತನೆಯ ದೊಡ್ಡ ಸಂತನನ್ನು ಈ ಜಗತ್ತಿಗೆ ಕೊಟ್ಟಿ ರುವ ಆ ‘ಬೋಧಿವೃಕ್ಷ’ಕ್ಕೆ ಎಷ್ಟು ಚೈತನ್ಯವಿರಬಹುದು.ಧ್ಯಾನದ ಸಾಂಕೇತಿಕ ಸ್ವರೂಪವಾದರೂ; ನಾವು ಅದನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ.
ನಿಜದ ಅರ್ಥದಲ್ಲಿ ನಾನು ಮೆಜೆ ಸ್ಟಿಕ್‌ನ ಆ ವೃಕ್ಷವನ್ನು ಮರೆಯಲು ಸಾಧ್ಯವಿಲ್ಲ. ಸುಮಾರು ಎರಡು ದಶಕಗಳಿಗೂ ಮೇಲ್ಪಟ್ಟು ನಮಗೆ ಆಶ್ರಯ ಕೊಟ್ಟ ವೃಕ್ಷ. ಅದರ ಕೆಳಗೆ ಪ್ರೊ.ಎಂ.ಡಿ.ಎನ್. ಅವರನ್ನು ಪ್ರತಿದಿವಸ ನೋಡದಿದ್ದರೆ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಅನ್ನಿಸುತ್ತಿತ್ತು.ಶೂದ್ರದ ಮೊದಲ ಸಂಚಿಕೆಗೆ ಮುಖಪುಟವನ್ನು ರಚಿಸಿದವರು,ಲೇಖನಗಳನ್ನು ಬರೆದವರು. ಸಮಾಜವಾದಿ ಚಿಂತನೆಗಳಲ್ಲಿ ಮತ್ತು ಜಾತಿವಿನಾಶದ ಬಗ್ಗೆ ಕಳಕಳಿ ಇದ್ದವರೆಲ್ಲ; ಕರ್ನಾಟಕದ ಉದ್ದಗಲದಿಂದ ಬಂದು ಪ್ರೊ. ಎಂ.ಡಿ.ಎನ್ ಅವರನ್ನು ಭೇಟಿ ಯಾಗಿ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡು ಹೋಗುತ್ತಿದ್ದರು.
ಒಂದೇ ಸಮನೆ ಚಾರ್‌ಮಿನಾರ್ ಸಿಗರೇಟು ಸೇದುತ್ತ ಸಿದ್ಧಾಂತದ ಮಾತುಗಳಿಗೆ ತೊಡಗುತ್ತಿದ್ದರು. ಆದರೆ ಆ ಮಾತುಗಳು ನಮಗೆ ಎಂದೂ ಸಿದ್ಧಾಂತದ ಮಾತುಗಳು ಆಗಲಿಲ್ಲ.ಬದುಕಿಗೆ ಮತ್ತು ಸಮಾಜಕ್ಕೆ ಬೇಕಾದ ಪಿಸುನುಡಿಗಳಾಗಿ ಗೋಚರಿಸುತ್ತಿದ್ದವು.ಆದ್ದರಿಂದಲೇ ಕೊನೆಗೂ ಬದುಕೆಂದರೆ: ಹೋರಾಟ ಎಂದು ಮನದಟ್ಟು ಮಾಡಿಬಿಡುತ್ತಿದ್ದರು. ಇದಕ್ಕೆ ಪೂರಕವಾಗಿ ಯಾವುದಾದರೂ ಒಂದು ರೂಪದಲ್ಲಿ ವಾರಕ್ಕೊಮ್ಮೆ ಪ್ರತಿಭಟನೆ ಇದ್ದೇ ಇರುತ್ತಿತ್ತು. ಇದಕ್ಕೆ ಸದಾ ಸಿದ್ಧ ಎನ್ನುವ ರೀತಿಯಲ್ಲಿ ‘ಯುವಜನ ಸಭಾ’ ಸಂಘಟ ನೆಯು ಅತ್ಯಂತ ಕ್ರಿಯಾಶೀಲವಾಗಿತ್ತು.
ಪ್ರತಿಭಟನೆಗೆ ಇಂಥದೇ ದೊಡ್ಡ ವಿಷಯ ಎಂಬುದು ಇರುತ್ತಿರಲಿಲ್ಲ. ಬೆಲೆಯೇರಿಕೆ ಸಂಬಂಧಿಸಿದಂತೆ ಎಂತೆಂಥ ವರ್ಣಮಯ ಪ್ರತಿಭಟನೆಗಳು ಆಕಾರ ಪಡೆಯುತ್ತಿದ್ದುವು. ಅಶೋಕ ಹೋಟೆಲ್ ಮುಂತಾದ ಕಡೆ ಚೆನ್ನಾಗಿ ತಿಂದು, ಬೆಲೆ ತಗ್ಗಿಸಿ ಎಂದು ಧ್ವನಿಯೆತ್ತಿ ಕೂಗಿ ಬಿಲ್ ಕೊಡದೆ ಬಂಧನಕ್ಕೊಳಗಾಗುವುದರಲ್ಲಿ ಎಂಥ ಮನೋಲ್ಲಾಸವಿರುತ್ತಿತ್ತು. ಈಗ ಅಂಥ ವರ್ಣಮಯ ಪ್ರತಿ ಭಟನೆ ಇಲ್ಲದಿರುವಾಗ; ಪ್ರೊ. ಎಂ. ಡಿ. ಎನ್. ಅಂಥವರ ನಾಯಕತ್ವದ ಕೊರತೆ ಎದ್ದು ಕಾಣುತ್ತದೆ. ನಮ್ಮ ಯಾವುದೇ ರಾಜ ಕೀಯ ಪಕ್ಷ ಅಥವಾ ಸಮಾಜಿಕ ಸಂಘಟ ನೆಯು ಚೇತೋಹಾರಿಯಾದ ಸಾಮಾಜಿಕ ಕೂಗನ್ನೇ ಕಳೆದುಕೊಂಡು ಬಿಟ್ಟಿದೆ ಅನ್ನಿಸು ತ್ತಿದೆ. ಇಂಥ ವಿಷಾದದ ನೆನಪುಗಳ ಬುಟ್ಟಿಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುವುದು?
ಪ್ರೊ. ಎಂ. ಡಿ. ಎನ್, ಎಲ್. ಜಿ. ಹಾವನೂರು, ಲಂಕೇಶ್, ಡಿ. ಆರ್. ನಾಗರಾಜ್ ಮತ್ತು ನಾನು ಎಂಥ ಅಪೂರ್ವ ಸಮಾಜಿಕ ಸಂಜೆಗಳನ್ನು ಕಳೆದಿದ್ದೇವೆ. ಒಮ್ಮೊಮ್ಮೆ ಕೃಷ್ಣ ಆಲನಹಳ್ಳಿ, ದೇವನೂರು ಮಹಾದೇವ ಮತ್ತು ಡಾ. ಬೆಸಗರ ಹಳ್ಳಿ ರಾಮಣ್ಣ ಅಂಥವರು ಸೇರಿದಾಗ; ಸ್ವಾರಸ್ಯ ಗಳ ಸರಮಾಲೆಯೇ ಎದುರು ಬಂದು ನಿಲ್ಲುತ್ತಿತ್ತು.ಮೆಜೆಸ್ಟಿಕ್‌ನ ಆ ಬೋಧಿವೃಕ್ಷದ ಕೆಳಗೆ ಭಾರತ ದ ಹಿರಿಯ ಸಮಾಜವಾದಿ ಚಿಂತಕ ಕಿಷನ್ ಪಾಟ್ನಾಯಕ್ ಅವರು ಲೋಹಿಯಾ ಅವರನ್ನು ಕುರಿತು ಎಂಥ ಅಮೂಲ್ಯವಾದ ನುಡಿಗಳನ್ನು ದಾಖಲಿಸಿದ್ದಾರೆ. ಹಾಗೆ ನೋಡಿದರೆ ಕಿಷನ್ ಪಾಟ್ನಾಯಕ್ ಅವರು ಲೋಹಿಯಾ ಅವರ ಚಿಂತನೆಯ ಗಂಭೀರ ಓದುಗರಾಗಿದ್ದವರು.
ಲೋಹಿಯಾರ ನಂತರ ‘ಮ್ಯಾನ್‌ಕೈಂಡ್’ ಅಂಥ ಸಮಾಜವಾದಿ ಸಿದ್ಧ್ಧಾಂತದ ಪತ್ರಿಕೆಯ ಸಂಪಾದಕರಾಗಿದ್ದವರು. ವರ್ಷಕ್ಕೆ ಎರಡು ಮೂರು ಬಾರಿ ಕಿಷನ್ ಪಾಟ್ನಾಯಕ್ ಅವರು ಬೆಂಗಳೂರಿಗೆ ಬಂದಾಗಲೆಲ್ಲ ಬೋಧಿವೃಕ್ಷದ ಆಶ್ರಯದಲ್ಲಿಯೇ ಸೇರುತ್ತಿದ್ದುದು. ಕಾಂಗ್ರೆಸ್ ಕಮ್ಯುನಿಸ್ಟ್ ಮತ್ತು ಪಿ.ಎಸ್.ಪಿ ಕುರಿತಂತೆ ಎಂಥ ಸೈದ್ಧಾಂತಿಕ ಅರಿವನ್ನು ಧಾರೆಯೆರೆದಿದ್ದಾರೆ. ಪ್ರೊ. ಎಂ. ಡಿ. ಎನ್ ಮತ್ತು ಕಿಷನ್ ಪಾಟ್ನಾಯಕ್ ಅವರೊಡನೆ ಅಪರೂಪದ ಗೆಳೆತನವಿತ್ತು. ಇಬ್ಬರೂ ಎಂದೂ ಬಾಯಿಬಿಟ್ಟು ನಗುತ್ತಿದ್ದವರಲ್ಲ.ಆದರೆ ಮುಖದ ತುಂಬ ನಗುವನ್ನು ತುಂಬಿಕೊಂಡಿರುತ್ತಿದ್ದರು.
ಹಾಗೆಯೇ ಆ ಕಾಲಕ್ಕೆ ‘ಒಲಂಪಸ್’ ಮತ್ತೊಂದು ಅತ್ಯುತ್ತಮ ಸಮಾಜವಾದಿ ಪತ್ರಿಕೆಯಾಗಿತ್ತು.ಹೈದರಾಬಾದ್‌ನಿಂದ ಪ್ರಕಟವಾಗುತ್ತಿತ್ತು.ಅದರ ಸಂಪಾದಕರಾಗಿದ್ದ ಕೇಶವರಾವ್ ಜಾದವ್ ಅವರು ದಕ್ಷಿಣ ಭಾರತದಲ್ಲಿ ಪ್ರಭಾವಪೂರ್ಣವಾದ ಸಮಾಜವಾದಿ ಪಕ್ಷವನ್ನು ಕಟ್ಟಲು ಕನಸು ಕಂಡವರು. ಆದರೆ ವ್ಯಕ್ತಿ ವ್ಯಕ್ತಿಗಳ ನಡುವೆ ಅಗಾಧವಾದ ಪ್ರತಿಷ್ಠೆಯ ಗೋಡೆಗಳನ್ನು ಕೆಳಕ್ಕೆ ಉರುಳಿಸುವುದು ಹೇಗೆ? ಎಂಬ ಪ್ರಶ್ನೆ ಎದುರಾಗುತ್ತಿತ್ತು. ನಾನು ಮೂಲ ಸಮಾಜವಾದಿ ಪಕ್ಷದ ‘ಯುವಜನಾ ಸಭಾ’ದಲ್ಲಿ ಕ್ರಿಯಾಶೀಲನಾಗಿದ್ದವನು. ಎರಡು ಯುವಜನಾ ಸಭಾಗಳನ್ನು ಒಂದು ಮಾಡಲು ತುಂಬ ಪ್ರಯತ್ನಿಸಿದೆ. ಆ ಕಾಲಕ್ಕೆ ಗೆಳೆಯ ಡಿ. ಆರ್. ನಾಗರಾಜ್ ತನ್ನ ವಿದ್ಯಾರ್ಥಿ ದಿನಗಳಲ್ಲಿ ಪ್ರೊ. ಎಂ. ಡಿ. ಎನ್. ಅವರ ಪಕ್ಕಾ ಶಿಷ್ಯನಾಗಿದ್ದವನು. ಅದ್ಭುತ ಮಾತುಗಾರನಾಗಿದ್ದವನು.
ಒಮ್ಮೆ ಮೂಲ ಸಮಾಜವಾದಿ ಪಕ್ಷಕ್ಕೆ ಬಂದು ಜೆ. ಎಚ್. ಪಟೇಲ್, ಎಸ್. ವೆಂಕಟರಾಂ, ಕಾಗೋಡು ತಿಮ್ಮಪ್ಪ ಮುಂತಾದವರೊಡನೆ ವಾದಕ್ಕಿಳಿದು ‘‘ನೀವು ಇಲ್ಲಿ ಜಾಗ ಬಿಡಬೇಕು ಮತ್ತು ಇಲ್ಲಿ ಪ್ರೊ. ಎಂ. ಡಿ. ನಂಜುಂಡ ಸ್ವಾಮಿಯವರು ಬಂದು ಕೂರಬೇಕು’’ ಎಂದು ಹೇಳಿದವನು. ಇದಾದ ಕೆಲವೇ ವರ್ಷಗಳಲ್ಲಿ ಪ್ರೊಫೆಸರ್ ಅವರ ವಾದ ಸರಣಿಯಿಂದ ದೂರವಾಗಿದ್ದ. ಕೇವಲ ವೈಯುಕ್ತಿಕ ಆರೋಪಗಳಿಂದ ಯಾವ ಗಟ್ಟಿಯಾದ ಸಿದ್ಧಾಂತವೂ ಕೊನೆಯವರೆಗೆ ಜೀರ್ಣಶಕ್ತಿಯನ್ನು ಉಳಿಸಿಕೊಳ್ಳುವುದಿಲ್ಲ ಎಂಬುದರ ಮೊರೆ ಹೋದ.
ಬುದ್ಧ ಬದುಕಿನ ಸಮಾಜದ ಹಾಗೂ ಇತಿಹಾಸದ ಏರುಪೇರುಗಳನ್ನು ಅರಿಯಲು ಬೋಧಿವೃಕ್ಷದ ಏಕಾಂತದ ಆಶ್ರಯವನ್ನು ಪಡೆದ. ಅರ್ಥದ ಸಿದ್ಧಯನ್ನು ಪಡೆದ. ಸಿದ್ಧಾರ್ಥನನ್ನು ಹಿಂದಿರುಗಿ ಅವಲೋಕಿಸಿಕೊಂಡ. ಆದರೆ ನಾವು ಎಷ್ಟೋ ವರ್ಷ ಪ್ರೊ.ಎಂ.ಡಿ.ಎನ್ ಅವರ ಅಧ್ಯಕ್ಷತೆಯಲ್ಲಿ ಕೂರುತ್ತಿದ್ದುದು ಸದಾ ಗದ್ದಲದ ನಡುವಿನ ಬೋಧಿವೃಕ್ಷದ ಕೆಳಗೆ. ನಾನಾ ರೀತಿಯ ಮೋಸ ವಂಚನೆಗಳ ವ್ಯವಹಾರಗಳಿಂದ ನಲುಗಿ ಹೋಗಿದ್ದ ವೃಕ್ಷ ಸ್ವಾಭಾವಿಕವಾದ ಹಸಿರನ್ನು ಕಳೆದುಕೊಂಡಿತ್ತು. ಈ ದೃಷ್ಟಿಯಿಂದ ಪ್ರತಿಯೊಬ್ಬರ ಬದುಕಿಗೂ ಏಕಾಂತವೆನ್ನುವುದು ಎಷ್ಟೊಂದು ಆಪ್ತವಾದ್ದು. ಗಾಂಧೀಜಿಯವರು ಉಪವಾಸ ಸತ್ಯಾಗ್ರಹದ ನೆಪದಲ್ಲಿ ವೌನದ ನೆರಳಿನ ಆಶ್ರಯ ಪಡೆಯುತ್ತಿದ್ದುದು ಈ ಕಾರಣಕ್ಕಾಗಿಯೇ ಅನ್ನಿಸುತ್ತದೆ. ಪ್ರಕೃತಿ ಕತ್ತಲನ್ನು ನಮಗೆ ಧಾರೆಯೆರೆದದ್ದೂ ಕೂಡ; ಬೆಳಕನ್ನು ಅರಿಯಲು ಅಲ್ಲವೇ?
ನನ್ನ ಪ್ರಿಯ ಚಿಂತಕ ಓಶೋನ ‘ಸೈಲೆನ್ಸ್’ ಕುರಿತ ಉಪನ್ಯಾಸ ಎಷ್ಟೊಂದು ಮಾರ್ಮಿಕವಾದದ್ದು. ಇರಲಿ, ಈ ನಲುಗಿ ಹೋದ ಈ ಬೋಧಿವೃಕ್ಷದ ಆಶ್ರಯವೂ ಒಂದು ಶ್ರೀಮಂತವಾದ ನೆನಪು. ಧ್ಯಾನಸ್ಥ ಬುದ್ಧನಿಗೆ ಆಶ್ರಯಕೊಟ್ಟ ಆ ಮಹಾನ್ ವೃಕ್ಷವೂ ಪ್ರಕೃತಿಯ ಏರುಪೇರುಗಳಲ್ಲಿ ನಲುಗಿ ಹೋಗಿರಬಹುದು ಅಲ್ಲವೇ? ಆದರೆ ಅದರ ಸಾಂಸ್ಕೃತಿಕ ಸಂತಾನ ಮಾತ್ರ ಮುಂದುವರಿಯುತ್ತದೆ.ಪ್ರೊ. ಎಂ.ಡಿ.ಎನ್ ಅವರು ರೈತ ಸಂಘವನ್ನು ಕಟ್ಟಲು ಮನಸ್ಸಿನಲ್ಲಿಯೇ ಗುನುಗುನಿಸುತ್ತಿದ್ದ ದಿನಗಳವು.ಪಕ್ಕದ ತಮಿಳುನಾಡಿನಲ್ಲಿ ನಾರಾಯಣಸ್ವಾಮಿ ನಾಯ್ಡು ಅವರು ತುಂಬ ಪ್ರಭಾವಶಾಲಿಯಾಗಿ ರೈತ ಚಳವಳಿಯನ್ನು ಬೆಳೆಸಿದವರು.ಆದರೆ ಅಂಥ ಅದ್ಭುತ ಹೋರಾಟವನ್ನು ಎಂ.ಜಿ.ರಾಮಚಂದ್ರನ್ ಅವರು ತಮ್ಮ ಮುಖ್ಯಮಂತ್ರಿ ಕಾಲಾವಧಿಯಲ್ಲಿ ಸರ್ವನಾಶ ಮಾಡಿದ್ದರು.
ಸಾವಿರಾರು ಪೊಲೀಸರನ್ನು ಮಫ್ತಿಯಲ್ಲಿ ಬಿಟ್ಟು ಅವರೇ ರೈತರು ಎನ್ನುವ ಅಭಿಪ್ರಾಯ ಮೂಡಿಸಿದರು. ರೈತರೇ ರೈತ ಚಳವಳಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಸರಕಾರಿ ಮಾಧ್ಯಮಗಳ ಮೂಲಕ ಜೋರಾಗಿ ಹೇಳುತ್ತ ಹೋದರು. ನಾರಾಯಣ ಸ್ವಾಮಿ ನಾಯ್ಡು ಅವರು ಭೌತಿಕ ಮತ್ತು ಮಾನಸಿಕ ಆಘಾತಗಳಿಂದ ಕುಸಿದು ಹೋದರು. ಇದನ್ನು ಅಧ್ಯಯನ ಮಾಡಲು ನಾವು ಒಂದಷ್ಟು ಮಂದಿ ಮಧುರೆಗೆ ಹೋಗಿ ಮಫ್ತಿಯಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಬಂದದ್ದೇ ಹೆಚ್ಚು. ಇದನ್ನೆಲ್ಲ ಪ್ರೊ. ಎಂ. ಡಿ. ಎನ್. ಅವರಿಗೆ ಹೇಳಿದಾಗ ಮೌನವಾಗಿ ಆಲಿಸಿದ್ದರು. ನಂತರ ಸ್ಟೇಟ್‌ಪವರ್ ಮುಂದೆ ದೊಡ್ಡ ಜನಾಂದೋಲನವೇ ಸಿದ್ಧಗೊಳ್ಳಬೇಕು. ಇಲ್ಲದಿದ್ದರೆ ಎಂಥ ಹೋರಾಟವನ್ನು ಕಾನೂನಿನ ನೆಪದಲ್ಲಿ ಹೊಸಕಿ ಹಾಕಿ ಬಿಡುವರು ಎಂದು ಮೌನವಾಗಿ ದನಿಗೂಡಿಸಿದರು. ಸಮಾಜವಾದಿ ಪಕ್ಷ ನಾಶವಾಯಿತು.
ಪ್ರೊ. ಎಂ. ಡಿ. ಎನ್. ಅವರು ಮೆಜೆಸ್ಟಿಕ್‌ನಲ್ಲಿ ನಲುಗಿ ಹೋಗಿದ್ದ ಬೋಧಿವೃಕ್ಷದ ಆಶ್ರಯವನ್ನು ಬಿಟ್ಟರು. ತುಂಬ ತಡವಾಗಿ ಮದುವೆಯಾದರು. ಬಹುದೊಡ್ಡ ಪ್ರಮಾಣದ ರೈತ ಚಳವಳಿಯನ್ನು ಕಟ್ಟಿದರು. ಶಾಸಕರೂ ಆದರು. ವಿಧಾನ ಸಭೆಯಲ್ಲಿ ಮಾದರಿ ಪಾರ್ಲಿಮೆಂಟೀರಿಯನ್ ಆಗಿ ರೈತರಿಗೆ ಆಕರ್ಷಕ ನಾಯಕರಾಗಿ ಎದ್ದು ನಿಂತರು. ಆದರೆ ತಮ್ಮಂಥ ನಾಯಕರನ್ನು ಬೆಳೆಸಲಿಲ್ಲ. ವ್ಯಕ್ತಿಗತ ಪ್ರತಿಷ್ಠೆಗಳಲ್ಲಿ ತಮಗೆ ತಾವೇ ದೊಡ್ಡವರು ಎಂಬ ಧೋರಣೆ ಬೆಳೆಸಿಕೊಂಡರು. ಒಂದು ಉತ್ತಮ ವಾರಪತ್ರಿಕೆಯನ್ನು ರೈತರ ಧ್ವನಿಯಾಗಿ ತಂದರು. ಆದರೆ ರೈತ ಚಳವಳಿಯಲ್ಲಿದ್ದವರು ಈ ಪತ್ರಿಕೆ ತಮ್ಮದೆಂದು ಒಪ್ಪಿಕೊಳ್ಳುವ ಮೊದಲೇ ನಿಂತು ಹೋಯಿತು.
ಟೀಕೆ ಮತ್ತು ಭಿನ್ನ ಅಭಿಪ್ರಾಯಗಳನ್ನು ಪ್ರೊ. ಎಂ. ಡಿ. ಎನ್. ಅವರು ಎಂದೂ ಒಪ್ಪಿಕೊಂಡವರಲ್ಲ. ನಾವೆಲ್ಲ ಒಂದಷ್ಟು ಗೆಳೆಯರು ಮಂಡ್ಯದ ಹೆಚ್. ಎಲ್. ಕೇಶವ ಮೂರ್ತಿಯವರು, ಮೈಸೂರಿನ ಕೆ. ರಾಮದಾಸ್ ಮತ್ತು ಡಿ. ಆರ್. ನಾಗರಾಜ್ ಕೂಡಿ ಲಂಕೇಶ್ ಮತ್ತು ಪ್ರೊ. ಎಂ. ಡಿ. ಎನ್. ಅವರನ್ನು ಒಂದು ಮಾಡಲು ಪ್ರಯತ್ನಿಸಿದೆವು. ಆದರೆ ಪ್ರೊಫೆಸರ್ ಅವರು ಆ ಗಾಂಧಿ ಬಝಾರಿನ ಗಾಂಧಿ (ಲಂಕೇಶ್)ರೊಡನೆ ಯಾವ ರೀತಿಯ ಮಾತುಕತೆಯೂ ಬೇಡ ಎಂದು ಕಡ್ಡಿ ಮುರಿಯುವ ರೀತಿಯಲ್ಲಿ ಹೇಳಿದರು. ಮತ್ತೆ ಮತ್ತೆ ಪ್ರಯತ್ನಿಸಿದೆವು. ಆಗಲಿಲ್ಲ. ಲಂಕೇಶ್ ಅವರಂತೂ ನಂಜುಂಡಸ್ವಾಮಿಯವರ ಬಗ್ಗೆ ತುಂಬ ಮೃದು ಧೋರಣೆಯನ್ನು ಬೆಳೆಸಿಕೊಂಡಿದ್ದರು.
ಈ ದೃಷ್ಟಿಯಿಂದ ಬಹಳಷ್ಟು ಬಾರಿ ಯೋಚಿಸಿರುವೆ: ನಾವು ಸಮಾಜದ ಒಳಿತಿಗಾಗಿ ಸಾವಿರಾರು ಮಾತುಗಳನ್ನು ಹೇಳುತ್ತೇವೆ. ಆದರೆ ಭಿನ್ನ ಭಿನ್ನ ಮನಸ್ಸುಗಳ ನಡುವೆ ಕೆಲಸ ಮಾಡುವಾಗ; ಕನಿಷ್ಟ ಪ್ರಮಾಣದ ಹೊಂದಾಣಿಕೆ ಬೇಕು ಎಂಬುದನ್ನು ಯೋಚಿಸುವುದಿಲ್ಲ. ಈ ಮಾತನ್ನು ಯಾಕೆ ಒತ್ತಿ ಹೇಳುತ್ತಿದ್ದೇನೆ ಎಂದರೆ ಪ್ರೊ.ಎಂ.ಡಿ.ಎನ್. ಅವರು ತುಂಬ ವರ್ಷಗಳ ಹಿಂದೆ ‘ಶೂದ್ರ’ದ ಮೂಲಕ ಡಿ. ಆರ್. ನಾಗರಾಜ್ ಮತ್ತು ನಾವು ಸೇರಿ ಅಸಂಘಟಿತ ಕಾರ್ಮಿಕರ ಬಗ್ಗೆ ಒಂದು ದೊಡ್ಡ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದೆವು. ಅದರ ಉದ್ಘಾಟನೆಯನ್ನು ಬೇರೆ ಬೇರೆ ಕಾರ್ಮಿಕ ನಾಯಕರ ನಡುವೆ ಎಂಥ ಅರ್ಥಪೂರ್ಣ ಉಪನ್ಯಾಸವನ್ನು ಕೊಟ್ಟರು. ಒಂದಷ್ಟು ದಿವಸ ಅದನ್ನೇ ಮೆಲುಕು ಹಾಕುತ್ತಿದ್ದೆವು.
ಈಗ ಕಾರ್ಮಿಕ ಚಳವಳಿಯೂ ಸತ್ತಿದೆ. ಅಸಂಘಟಿತ ಕಾರ್ಮಿಕರನ್ನು ಕೇಳುವಂಥವರೇ ಇಲ್ಲ. ಪ್ರೊ. ಎಂ. ಡಿ. ಎನ್. ಅವರ ಜೊತೆ ನಾನು ಗೌರವಿಸುತ್ತಿದ್ದ ಯಾರ್ಯಾರೋ ನಾಪತ್ತೆಯಾಗಿದ್ದಾರೆ. ಇತ್ತೀಚೆಗೆ ಮೆಜೆಸ್ಟಿಕ್‌ನಲ್ಲಿ ಆ ಬೋಧಿವೃಕ್ಷ ನೆನಪಿಗೆ ಬಂತು.ನೋಡಲು ಹೋದೆ. ಅದರ ಮುಂದಿನ ಹೊಟೆಲ್‌ನಲ್ಲಿ ಟೀ ಕುಡಿಯುವಾಗ ನೋಡಿದೆ. ಮನದ ತುಂಬ ಬೇಸರ ತುಂಬಿಕೊಂಡಿತು.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...