ಅಂಕಣ - ಮಾತು ಮೌನದ ಮುಂದೆ

mail-img print-img

‘ಸಂದೇಶ’ದಿಂದ ‘ಹಸ್ತಶಿಲ್ಪ’ದವರೆಗೆ

ಶನಿವಾರ - ಜೂನ್ -23-2012

ನಮ್ಮ ಜನರ ಭಾಷೆ, ಆಚಾರ,ವಿಚಾರ ಇತ್ಯಾದಿಗಳನ್ನು ಕುರಿತು ಆಗಾಗ ಯೋಚಿಸಲು ತೊಡಗಿದಾಗ; ಎಷ್ಟು ರೋಮಾಂಚಿತರಾಗುತ್ತೇವೆ.ಈ ರೋಮಾಂಚನವೇ ಒಟ್ಟು ಸಮಾಜದ ವಿವಿಧ ಮುಖಗಳನ್ನು ಚೇತೋಹಾರಿಯಾಗಿಟ್ಟಿರುವುದು. ಇದನ್ನು ಅನುಭವಿಸುವುದಕ್ಕಾಗಿಯೇ ನಾವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳನ್ನು ರೂಪಿಸಿಕೊಂಡಿದ್ದೇವೆ. ಈ ದೃಷ್ಟಿಯಿಂದ ಆಯಾ ಕಾಲಗಳಿಗೆ ಅನುಗುಣವಾಗಿ ಅನುಭವಿಸಲು ನಮ್ಮ ಒಟ್ಟು ಮನಸ್ಸು ತೆರೆದಿಟ್ಟು ಕೊಂಡಿರುತ್ತದೆ. ಇಲ್ಲಿ ಕುತೂಹಲ, ತಲ್ಲಣ ಮತ್ತು ವಿಷಾದ ಸ್ಥಾಯಿಯಾಗಿಯೇ ಕೆಲಸ ಮಾಡುತ್ತಿರುತ್ತದೆ. ಇಂಥದ್ದನ್ನೆಲ್ಲ ಗಂಭೀರವಾಗಿ ಯೋಚಿಸಿದಾಗಲೂ ‘ಹಾಯ್’ ಅನ್ನಿಸುತ್ತಿರುತ್ತದೆ.ಹಾಗೆಯೇ ಉಡಾ ಫೆಯಿಂದ ಸ್ವೀಕರಿಸಿದಾಗಲೂ ಒಂದು ರೀತಿಯ ಲವಲವಿಕೆಯನ್ನು ಪಡೆದಿ ರುತ್ತೇವೆ. ಕೊನೆಗೂ ಜೀವನದ ವೈವಿ ಧ್ಯತೆ ಎಂದರೆ ಇದೇ ಇರಬಹುದು. ಆದ್ದರಿಂದಲೇ ಒಬ್ಬೊಬ್ಬರ ಬದುಕು ಒಂದೊಂದು ರೀತಿಯಲ್ಲಿರುವುದು.

ಸುಮಾರು ಎರಡು ದಶಕಗಳ ಹಿಂದಿನ ಮಾತು: ಲಂಕೇಶ್ ಅವರು ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಭರತಾದ್ರಿ, ತೇಜಸ್ವಿನಿ ಮತ್ತು ನನ್ನನ್ನು ಪುಸಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಾಟಕ್ಕೆ ಕರೆದುಕೊಂಡು ಹೋದರು. ಆಗ ತೇಜಸ್ವಿನಿಯ ವರು ಇನ್ನೂ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ. ಲಂಕೇಶ್ ಅವ ರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಮತ್ತು ಹಸಿರಿನ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿಮಾನ ವಿತ್ತು. ಎಂದೋ ತಮ್ಮ ತುಂಟತನದ ದಿನಗಳಲ್ಲಿ ಬೆಂಗಳೂರಿನ ‘ಮುಕ್ತ’ ಎಂಬ ತುಂಟ ಪತ್ರಿಕೆ ಯಲ್ಲಿ, ಬಿ.ವಿ. ಕಾರಂತರನ್ನು ದೃಷ್ಟಿಯಲ್ಲಿಟ್ಟು ಕೊಂಡು ‘ದ.ಕ.ಗಳು ನಂಬಿಕೆಗೆ ಅನರ್ಹರು’ ಎಂದು ಛೇಡಿಸಿದ್ದರು. ಈ ರೀತಿಯಲ್ಲಿ ಛೇಡಿಸುವ ಮತ್ತು ತುಂಟತನದಿಂದ ನೋಡುವ ನೋಟ ಲಂಕೇಶ್ ಅವರ ವ್ಯಕ್ತಿ ತ್ವದಲ್ಲಿ ಜೀವಂತವಾಗಿಯೇ ಇತ್ತು.

ಇದಿಲ್ಲದಿದ್ದರೆ ಪ್ರತಿಯೊಬ್ಬ ಸೃಜನಶೀಲ ಲೇಖಕ ತನ್ನ ಭಾಷೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ದಟ್ಟವಾಗಿ ನಂಬಿ ದ್ದರು. ನೈತಿಕತೆ ಮತ್ತು ಅನೈತಿಕತೆಯ ಸಂಬಂಧಗಳನ್ನು ಅರಿಯುವುದೇ ಬರಹ ಗಾರನ ನೋಟವಾಗಿರಬೇಕು ಎಂಬುದರ ಬಗ್ಗೆ ವಿವಿಧ ರೀತಿಯಲ್ಲಿ ಯೋಚಿಸುತ್ತಿದ್ದವರು. ಇರಲಿ, ಆದರೆ ಅವರು, ‘ದ.ಕ.ಗಳು ನಂಬಿಕೆಗೆ ಅನರ್ಹರು’ ಎಂದು ಕರೆದು ಬಿಟ್ಟರು. ಮುಂದೆ ಅದನ್ನು ಜೀರ್ಣಿಸಿ ಕೊಳ್ಳಲು ಎಷ್ಟು ಒದ್ದಾಡ ತೊಡಗಿದ್ದರು. ಒಂದು ದೃಷ್ಟಿಯಿಂದ ಅವರು ಎಷ್ಟು ಒರಟು ಸ್ವಭಾವದವರೋ ಅಷ್ಟೇ ಮೃದು ಸ್ವಭಾವದವರು.

ಇದರಿಂದಲೇ ದಕ್ಷಿಣ ಕನ್ನಡದ ಕೆಲವು ವ್ಯಕ್ತಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದರು. ಅದರಲ್ಲಿ ಮುಖ್ಯವಾಗಿ ಹಸ್ತಶಿಲ್ಪದ ಸೃಷ್ಟಿಕರ್ತ ವಿಜಯನಾಥ ಶೆಣೈ ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನವಿತ್ತು.ವಿಜಯನಾಥ್ ಶೆಣೈ ಅವರನ್ನು ನೋಡುವುದಕ್ಕೆ ಮತ್ತೊಂದು ಸುಸಂದರ್ಭ ಒದಗಿ ಬಂದಿತ್ತು. ಮಂಗಳೂರಿನ ಚರ್ಚ್ ಸಂಸ್ಥೆಯೊಂದು ಪ್ರತಿವರ್ಷ ಕೊಡುವ ‘ಸಂದೇಶ’ ಪ್ರಶಸ್ತಿಯನ್ನು ಆ ವರ್ಷ ಲಂಕೇಶ್ ಅವರಿಗೆ ಕೊಟ್ಟಿತ್ತು. ಇದರ ನೆಪ ಮಾಡಿ ಕೊಂಡೇ ದಕ್ಷಿಣ ಕನ್ನಡದ ಸುತ್ತಾಟಕ್ಕೆ ಹೊರಟಿದ್ದು. ಹೀಗೆ ಹೊರಡುವ ಮುನ್ನ ಮಣಿಪಾಲ್‌ಗೆ ಹೋಗಿ ವಿಜಯನಾಥ್ ಶೆಣೈ ಅವರನ್ನು ಭೇಟಿಯಾಗಲು ಯೋಜನೆ ರೂಪಿಸಿದರು. ಇದರ ಜೊತೆಗೆ ಮತ್ತೊಂದು ಮಾರ್ಮಿಕವಾದ ಕೆಲಸವನ್ನು ನಮಗೆ ಒಪ್ಪಿಸಿದರು.

ಅದೇನೆಂದರೆ: ಒಂದಷ್ಟು ಬೇರೆ ಬೇರೆ ಜನಾಂಗದ ಲೇಖಕರನ್ನು ಚಿಂತಕರನ್ನು ಹಾಗೂ ಸಮಾಜ ಸುಧಾರಕರನ್ನು ಒಂದೆಡೆ ಸೇರಿಸಿ ಕಾಲ ಕಳೆಯುವುದು. ಈ ರೀತಿಯ ಚಟುವಟಿಕೆಯನ್ನು ಲಂಕೇಶ್ ಅವರು ತುಂಬ ಇಷ್ಟಪಡುತ್ತಿದ್ದರು. ಇದಕ್ಕಾಗಿ ಆ ಕಾಲಕ್ಕೆ ಲಂಕೇಶ್ ಪತ್ರಿಕೆಯ ಜೊತೆ ಅನನ್ಯ ಸಂಬಂಧವನ್ನಿಟ್ಟುಕೊಂಡಿದ್ದ, ಮೋಹನ್ ಎಂಬ ಕ್ರಿಯಾಶೀಲ ತರುಣ ನಮ್ಮ ನ್ನೆಲ್ಲ ಬಳಸಿಕೊಂಡು ಕಾರ್ಯಕ್ರಮವನ್ನು ರೂಪಿಸಿ ದ್ದರು. ‘ಸಂದೇಶ್’ ಪ್ರಶಸ್ತಿಯನ್ನು ತುಂಬ ಸಂಕೋ ಚದಿಂದಲೇ ಸ್ವೀಕರಿಸಿದ ಲಂಕೇಶ್ ಅವರು ಜನಾಂಗ-ಜನಾಂಗಗಳ ನಡುವಿನ ಸಂಬಂಧದ ಮಾರ್ಮಿಕತೆಯನ್ನು ಕುರಿತು ಮಾರ್ಮಿಕವಾಗಿ ಮಾತಾಡಿದ್ದರು.

ಅದರಲ್ಲೂ ಲಂಕೇಶ್ ಅವರಿಗೆ ಬುದ್ಧ್ದ, ಕ್ರಿಸ್ತ ಮತ್ತು ಬಸವಣ್ಣ ಅವರನ್ನು ಕುರಿತು ಮಾತಾಡುವುದು ಪ್ರಿಯವಾದ ವಿಷಯವಾಗಿತ್ತು. ಈ ಕಾರಣಕ್ಕಾಗಿಯೇ ತಮ್ಮೆಲ್ಲ ದುಗುಡ ಮತ್ತು ದುಮ್ಮಾನಗಳ ನಡುವೆ ಭಿನ್ನ ಭಿನ್ನ ಮನಸ್ಸುಗಳನ್ನು ಒಳಗೆ ಬಿಟ್ಟುಕೊಳ್ಳುವುದರ ಬಗ್ಗೆ ನಮ್ಮಂಥವರಿಗೆ ಕಳಕಳಿಯನ್ನು ತುಂಬಿದವರು. ಹಾಗೆಯೇ ನಮ್ಮ ನಮ್ಮ ಜಾತಿಗಳನ್ನು ಗುಮಾನಿಯಿಂದ ನೋಡುವು ದನ್ನು ಕಲಿಸುತ್ತಲೇ ಬೇರೆ ಧರ್ಮೀಯರ ಜೊತೆ ಮಿಕ್ಸ್ ಆಗುವುದನ್ನು ಕಲಿಸಿದರು. ನನ್ನ ಕೆಲವು ಸ್ನೇಹಿತರು ಕೆಲವೊಮ್ಮೆ ಒಂದೆರಡು ಬಾರಿ ತಮ್ಮ ಜಾತಿಯವರೊಡನೆ ಲಂಕೇಶ್ ಅವರನ್ನು ಭೇಟಿ ಯಾಗಲು ಹೋದಾಗ ಛೀಮಾರಿ ಮಾಡಿಸಿ ಕೊಂಡು ಹೊರಗೆ ಬಂದಿದ್ದಾರೆ.

ಇಂಥ ನಡವಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ಬೆಳೆಸಿ ಕೊಂಡಿದ್ದರು. ಈ ದೃಷ್ಟಿಯಿಂದ ಅವರಿಗೆ ನಜೀರ್ ಸಾಬ್ ರೀತಿಯ ರಾಜಕಾರಣಿಯು ಒಬ್ಬ ಸಂತ ನಂತೆ ಕಾಣಿಸುತ್ತಿದ್ದರು. ಯಾಕೆಂದರೆ ಬೇರೆ ಬೇರೆ ಜನಾಂಗದವರು ನಜೀರ್‌ಸಾಬ್ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು. ಗೋಪಾಲಕೃಷ್ಣ ಅಡಿಗರು ತಮ್ಮ ವಿದ್ಯಾರ್ಥಿ ದಿನಗಳ ಕಾಲದಲ್ಲಿ;ಶಾಂತವೇರಿ ಗೋಪಾಲ ಗೌಡರು ಒಂದು ದಿನವಾದರೂ ಮುಖ್ಯಮಂತ್ರಿಯಾಗುವುದನ್ನು ಕಾಣಬೇಕು ಎಂಬ ತಹತಹವನ್ನು ಜೀವಂತವಾಗಿಟ್ಟು ಕೊಂಡು ಎಷ್ಟೋ ಸಭೆ ಸಮಾರಂಭಗಳಲ್ಲಿ ಭಾವನಾತ್ಮಕ ವಾಗಿ ಮಾತಾಡುತ್ತಿದ್ದುದು; ನಮಗೆ ಕುತೂಹಲ ಕಾರಿಯಾಗಿತ್ತು. ಅದೇ ರೀತಿಯಲ್ಲಿ ನಜೀರ್ ಸಾಬ್ ಅವರನ್ನು ಕುರಿತಂತೆ ಆಪ್ತವಾದ ಒಲವನ್ನು ತುಂಬಿಕೊಂಡಿದ್ದರು.

ಭಾಷೆ, ಆಚಾರ ಮತ್ತು ವಿಚಾರವನ್ನು ಉದ್ದೇಶಿಸಿ ಮಾತಾಡುವಾಗಲೆಲ್ಲ ಅದರ ಮುಂದುವರಿದ ಭಾಗವಾಗಿ ಅಡಿಗರಂಥ ವರು, ನಜೀರ್‌ಸಾಬ್ ಅಂಥವರು ನಮ್ಮ ಮನಸ್ಸಿನೊಳಗೆ ಆವರಿಸಿಕೊಂಡು ನಮ್ಮ ಚಿಂತನೆಯನ್ನು ಕಾಪಾಡುತ್ತಿರುತ್ತಾರೆ ಎಂಬುದನ್ನು ದಟ್ಟವಾಗಿ ನಂಬುತ್ತಿದ್ದರು. ನಾವು ನೀಚರಾಗದಿರುವುದಕ್ಕಾ ದರೂ ಬೇರೆಯವರ ಜೊತೆ ಸೇರುವುದು ಎಂದರೆ ‘‘ಇನ್ನೂ ಈ ನೆಲದ ಮೇಲೆ ಬದುಕುತ್ತಿ ದ್ದೇವೆ’’ ಎಂಬ ಧ್ವನಿ ಸ್ಪುರಿಸುವಂತೆ ಯೋಚಿಸುತ್ತಿ ದ್ದರು. ಆದ್ದರಿಂದಲೇ ಬುದ್ಧ, ಕ್ರೈಸ್ತ ಮತ್ತು ಬಸವಣ್ಣ ಮುಂತಾದವರನ್ನು ಕುರಿತು ಮಾತಾಡು ವಾಗ ಹೇಳುತ್ತಿದ್ದುದು: ಅವರು ದೊಡ್ಡದಾಗಿ ಬದುಕುವುದರ ಬಗ್ಗೆ ಹೇಳಲಿಲ್ಲ; ಸರಳವಾಗಿ ಹೇಗೆ ಜೀವಿಸಬೇಕು ಎನ್ನುವುದರತ್ತ ನಡೆದು ಹೋದರು.

‘ಸಂದೇಶ’ ಪ್ರಶಸ್ತಿಯ ಮೂಲಕ ಮಂಗಳೂರಿನ ಸಮುದ್ರ ದಂಡೆಯ ಆ ವಿಶಾಲವಾದ ರೆಸ್ಟೋರೆಂಟನ್ನು ಹೇಗೆ ಮರೆಯಲು ಸಾಧ್ಯ? ಸುಮಾರು ಐವತ್ತು, ಅರವತ್ತು ಮಂದಿ ಐದಾರು ಗಂಟೆ ಎಂತೆಂಥ ವಿಚಿತ್ರವಾದ ಮಾತುಕತೆಗೆ ಪಕ್ಕಾಗಿದ್ದೆವು. ನಮಗೆ ತೊಂದರೆ ಕೊಡಬಾರ ದೆಂದು ಸಮುದ್ರ ತನ್ನೆಲ್ಲ ತುಂಟ ಹುಡುಗರ ರೀತಿಯ ಅಲೆಗಳನ್ನು ಮಲಗಿಸಿಕೊಂಡು ಬಿಟ್ಟಿತ್ತು. ಹಾಗೆ ನೋಡಿದರೆ ಜಲತರಂಗದ ರೀತಿಯಲ್ಲಿ ಶಬ್ದವಾಗುತ್ತಿದ್ದುದು ನಮ್ಮ ಕೈಗಳಲ್ಲಿದ್ದ ಬಟ್ಟಲುಗಳಿಂದ. ಲಂಕೇಶ್ ಅವರಂತೂ ಹೃದಯ ತುಂಬಿ ಮಾತಾಡುತ್ತಿದ್ದರು. ಹತ್ತಾರು ಕ್ಯಾಮರಾಗಳಲ್ಲಿ ಮುಂದಿನ ದಿನಗಳ ನೋಟಕ್ಕಾಗಿ ನೆಗೆಟಿವ್ ಆಗಿ ಅವಿತುಕೊಳ್ಳುತ್ತಿದ್ದರು. ಹಾಗೆಯೇ ಎಲ್ಲರಿಂದಲೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮಾತುಗಳು.

ಪ್ರಾಸ್ತಾವಿಕವಾಗಿ ಡಿ.ಆರ್. ನಾಗರಾಜ್ ಸಂಸ್ಕೃತಿ ಮತ್ತು ಮಾನವೀಯ ಸಂಬಂಧಗಳಲ್ಲಿ ಸಮಾಜ ವಾದದ ಪುಟ್ಟ ಪೀಠಿಕೆಯನ್ನೇ ಮುಂದಿಟ್ಟಿದ್ದ. ಇಲ್ಲಿ ಕಾವ್ಯದ ಓದಿತ್ತು, ಗಝಲ್‌ಗಳ ಹಾಡಿತ್ತು. ಲಂಕೇಶ್ ಅವರಿಗೆ ಯಾವುದೇ ಖಾಸಗಿ ಸಮಾರಂಭದಲ್ಲಿ ಕವಿತೆಗಳನ್ನು ಓದಿಸದಿದ್ದರೆ; ಸಂತೋಷವೇ ಆಗುತ್ತಿರಲಿಲ್ಲ. ತಮ್ಮ ಬೆಂಗಳೂರಿನ ಪತ್ರಿಕೆಯ ಕೊಠಡಿ ಯಲ್ಲಿ ನಮ್ಮ ಕುವೆಂಪು, ಬೇಂದ್ರೆ, ಅಡಿಗರು ಮುಂತಾದವರ ಜೊತೆಗೆ; ಯುರೋಪಿನಿಂದ ಓಡಿ ಬಂದವರಂತೆ ಎಲಿಯಟ್, ಬ್ಲೇಕ್, ಆಡೆನ್, ಏಟ್ಸ್ ಮುಂತಾದವರು ತಮ್ಮ್‌ಟ್ಟಿಗೆ ರಾಬರ್ಟ್ ಗ್ರೇವ್ಸ್ ಹಾಗೂ ದಿಲಾನ್ ಥಾಮಸ್ ಅಂಥವರನ್ನು ಎಳೆದು ತಂದು; ನಮ್ಮೆಲ್ಲರ ಕವಿತೆಗಳನ್ನು ಓದಿ ಎನ್ನುವ ರೀತಿಯಲ್ಲಿರುತ್ತಿತ್ತು: ಎಷ್ಟೋ ‘ಸಂಜೆಯ ಕೂಟಗಳು’.ಇದಕ್ಕಾಗಿಯೇ ಹೇಳಿ ಮಾಡಿಸಿ ದಂತಿದ್ದ ರಾಮಚಂದ್ರ ಶರ್ಮ, ಕಿ.ರಂ. ನಾಗರಾಜ್ ಹಾಗೂ ಡಿ.ಆರ್. ನಾಗರಾಜ್ ಅಂಥವರು ಇದ್ದೇ ಇರುತ್ತಿದ್ದರು.

ಒಮ್ಮಿಮ್ಮೆ ಯೋಚಿಸುವೆ:ಲಂಕೇಶ್ ಅವರಿಗೆ ಕಾವ್ಯದ ಬಗ್ಗೆ ಈ ರೀತಿಯ ವ್ಯಾಮೋಹವಿದ್ದುದರಿಂದ ‘ಅಕ್ಷರ ಹೊಸ ಕಾವ್ಯ’ದಂಥ ಕವಿತೆಗಳ ಸಂಗ್ರಹ ಬರಲು ಸಾಧ್ಯವಾಗಿದ್ದು. ಅದರ ಮುನ್ನುಡಿ ಯಂತೂ ಕಾವ್ಯದ ಚರ್ಚೆ ಬಂದಾಗಲೆಲ್ಲ; ಪ್ರಸ್ತಾಪವಾಗುತ್ತಲೇ ಇರುತ್ತದೆ.ನಮಗ್ಯಾರಿಗೂ ಮಂಗಳೂರಿನ ಆ ಸಮುದ್ರ ದಂಡೆಯ ರೆಸ್ಟೋರೆಂಟನ್ನು ಬಿಡಲು ಮನಸ್ಸೇ ಇರಲಿಲ್ಲ. ಅಷ್ಟರಮಟ್ಟಿಗೆ ಮಾನಸಿಕವಾಗಿ ನಾವು ಅಲ್ಲಿ ಕರಗಿ ಹೋಗಿದ್ದೆವು. ಲಂಕೇಶ್ ಅವರು ತಮ್ಮ ಸಿಗರೇಟಿನ ಹೊಗೆಯ ನಡುವೆ; ಇಂಥ ಅದ್ಭುತ ರಾತ್ರಿಯ ಕ್ಷಣಗಳಲ್ಲಿ ಇವರೆಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ ಎನ್ನುವ ರೀತಿಯಲ್ಲಿ ಯೋಚಿಸುತ್ತಿದ್ದರು. ಇದರ ಮಧ್ಯೆ ಡಿ. ಆರ್. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮತ್ತು ನಾನು ತುಂಟತನದಿಂದ ‘‘ ಇರಲಿ, ಬಿಡಿ ಸರ್, ದ.ಕ ನಂಬಿಕೆಗೆ ಅನರ್ಹರು’’ ಎಂಬ ಹೇಳಿಕೆ ಯನ್ನು ಪಕ್ಕಕ್ಕೆ ಸರಿಸಿದಂತೆ ಎಂದು ಹೇಳಿದ್ದೆವು.

ಇದಕ್ಕೆ ಲಂಕೇಶ್ ಅವರು ಪ್ರತಿಕ್ರಿಯಿಸದೆ; ಸಿಗರೇಟಿನ ಹೊಗೆಯ ನಡುವೆ ನಕ್ಕಿದ್ದರು. ಈ ನಗು ಮತ್ತು ನಮ್ಮೆಲ್ಲರ ರಾಶಿ ರಾಶಿ ಮಾತುಗಳ ನಡುವೆ ರೆಸ್ಟೋರೆಂಟನ್ನು ಬಿಟ್ಟೆವು. ಯಾವುದೋ ಚಾರಿತ್ರಿಕ ಸ್ಮಾರಕವನ್ನು ಬಿಟ್ಟಂತೆ. ಲಂಕೇಶ್ ಅವರು ರೆಸ್ಟೋರೆಂಟ್‌ನ ಕೆಲಸಗಾರರನ್ನು ಹಾಗೂ ಅದರ ಯಜಮಾನರಿಗೆ ನಮಸ್ಕರಿಸುವುದನ್ನು ಮರೆಯಲಿಲ್ಲ. ಹೊರಗೆ ಬರುವಾಗ ಸಮುದ್ರ ನಿಮ್ಮ ಸಂತೋಷಕೂಟ ಮುಗಿಯಿತಾ ಎಂದು ಹೇಳಿದಂತೆ; ಅಲೆಗಳು ಬೋರ್ಗರೆಯುತ್ತಿದ್ದವು.ನಾವು ನಮ್ಮ ಹೋಟೆಲ್‌ನ ಕೊಠಡಿಗಳನ್ನು ತಲುಪಿದೆವು. ಪಕ್ಕದ ಕೊಠಡಿಯಲ್ಲಿದ್ದ ಅನಂತ್‌ನಾಗ್ ಅವರ ಕುಟುಂಬ ಕೊಠಡಿಯನ್ನು ಬಿಟ್ಟಿದ್ದರು. ಹಿಂದಿನ ದಿವಸ ರಾತ್ರಿ ಎಷ್ಟು ಸಮಯದವರೆಗೂ ನಮ್ಮ ಜೊತೆಯಲ್ಲಿ ಹರಟೆ ಕೊಚ್ಚಿದ್ದರು.

ಪ್ರತಿ ಬಾರಿ ಅನಂತ್‌ನಾಗ್ ಅವರ ಶ್ರೀಮತಿಯವರು ನಮ್ಮ ಕೊಠಡಿಯ ಬಾಗಿಲಿಗೆ ಬಂದು ‘‘ಇನ್ನೂ ಸಮಯವಾಗಲಿಲ್ವಾ?’’ ಎಂದು ಕೇಳಿದಾಗಲೆಲ್ಲ ‘‘ಬಂದೆ’’ ಎಂದು ತಮ್ಮ ಚಲನ ಚಿತ್ರರಂಗದ ಸ್ವಾರಸ್ಯಗಳನ್ನೆಲ್ಲ ಮುಂದಿಟ್ಟಿದ್ದರು. ಲಂಕೇಶ್ ಅವರು ತುಂಟತನದಿಂದ ‘‘ಅನಂತ್‌ನಾಗ್, ಈ ಬಾರಿ ನಿಮ್ಮ ಹೆಂಡತಿ ಬಂದರೆ; ನಿಮಗೆ ಉಗ್ರವಾದ ಶಿಕ್ಷೆ ಕಾದಿದೆ’’ ಎಂದಾಗ ನಗುತ್ತ ‘‘ಅಂಥ ಉಗ್ರವಾದ ಶಿಕ್ಷೆಗಳನ್ನೆಲ್ಲ ಜೀರ್ಣಿಸಿಕೊಂಡಿದ್ದೇನೆ’’ ಎಂದು ಹೇಳುತ್ತಲೇ ತಮ್ಮ ಕೊಠಡಿಗೆ ಹೊರಟಿದ್ದರು. ನಾವು ಒಂದಷ್ಟು ಸಮಯ ಸಮುದ್ರದ ರೆಸ್ಟೋರೆಂಟ್ ಸಂತೋಷವನ್ನು ಮೆಲುಕು ಹಾಕುತ್ತ ನಿದ್ರೆಯ ಮೊರೆ ಹೋದೆವು.

ಮಾರನೆಯ ದಿನ ಮಧ್ಯಾಹ್ನದ ಸುಮಾರಿಗೆ ವಿಜಯನಾಥ ಶೆಣೈ ಅವರನ್ನು ಕಾಣಲು ಹೋದೆವು. ಅದೇ ಮಾಸಲು ಬಣ್ಣದ ಷರ್ಟು, ಅದಕ್ಕೆ ಹೊಂದಿಕೊಂಡ ಪಂಚೆಯಲ್ಲಿ ನಗುತ್ತ ಸ್ವಾಗತಿಸಿದರು. ಅವರ ಮುಗ್ಧ ನಗು ಎಷ್ಟೊಂದು ಬೆಳಗಿತ್ತು. ಮುಖದಲ್ಲಿ ಕ್ಷೌರ ಮಾಡದ ಬಿಳಿಯ ಕೂದಲ ನಡುವೆ ಆ ‘ಹಸ್ತ ಶಿಲ್ಪ’ದ ಅಪೂರ್ವ ಮನೆಯಲ್ಲಿ ಮೂರು ನಾಲ್ಕು ಗಂಟೆ ಕಳೆದೆವು. ಎಷ್ಟೊಂದು ಮೂಲೆಗಳಲ್ಲಿ ಕೂತು ಆನಂದ ಪಟ್ಟೆವು. ಲಂಕೇಶ್ ಅವರಂತೂ ರೋಮಾಂಚಿತರಾಗಿದ್ದರು. ಈ ರೀತಿಯಲ್ಲಿಯೂ ಒಂದು ಕಲಾತ್ಮಕ ಮ್ಯೂಸಿಯಂ ರೀತಿಯ ಮನೆಯನ್ನು ಕಟ್ಟಲು ಸಾಧ್ಯವಾ? ಎಂದು. ಅದರ ಜೊತೆಗೆ ಎಷ್ಟೋ ಯಾವು ಯಾವುದೋ ದೊಡ್ಡ ಕುಟುಂಬಗಳಲ್ಲಿ ಮೌನ ಸಾಕ್ಷಿಗಳಂತಿದ್ದ ಕಲಾತ್ಮಕ ಕಂಬಗಳು, ಕೊಲೆಗಳು ಮತ್ತೆ ಈ ಹಸ್ತಶಿಲ್ಪದಲ್ಲಿ ಮರು ಜೀವಂತಿಕೆಯನ್ನು ಪಡೆದಿದ್ದವು.

ಹಸ್ತಶಿಲ್ಪದ ಒಂದೊಂದು ವಸ್ತುವನ್ನು ಶೆಣೈ ಅವರು ಸಂಗ್ರಹಿಸುವುದಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ. ಬಿಸಿಲು, ಮಳೆ, ಗಾಳಿ ಎನ್ನದೆ ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕೆಲವು ಮನೆಗಳನ್ನು ಕೆಡವಿ ಅದ್ಭುತ ವಸ್ತುಗಳೆಲ್ಲ ಬೆಂಕಿಯ ಪಾಲು ಮತ್ತು ಮಣ್ಣಿನ ಪಾಲು ಆಗುತ್ತಿದ್ದ ಸಮಯದಲ್ಲಿ ವೇದನೆಯಿಂದ ಸಂಗ್ರಹಿಸಿದಂಥವು. ಹೀಗೆ ಸಂಗ್ರಹಿಸುವಾಗ ಆದ ಅನುಭವಗಳನ್ನು ವಿಷಾದ ಮತ್ತು ಸ್ವಾರಸ್ಯಗಳ ಮಿಶ್ರಣದಿಂದ ಒಟ್ಟು ‘ಹಸ್ತ ಶಿಲ್ಪ’ದ ಹುಟ್ಟುವಿಕೆಯನ್ನು ಕುರಿತು ಹೇಳಿದ್ದರು. ಹೀಗೆ ಹೇಳುತ್ತಲೇ ಶಿಲ್ಪ ಕಲೆಯ ವೈವಿಧ್ಯಮಯ ಸಂಗತಿಗಳನ್ನೆಲ್ಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಂದ ಮಿಗಿಲಾಗಿ ನಮಗೆ ಧಾರೆಯೆರೆದಿದ್ದರು. ಅದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನಮ್ಮ ಜನ ತಮ್ಮ ಬದುಕಿನ ಜೊತೆಗೆ ನೂರಾರು ವರ್ಷಗಳಿಂದ ತಾವು ವಾಸಿಸುವ ಗೂಡುಗಳನ್ನು ಹೇಗೆ ನಿರ್ಮಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಎಂಥ ಸ್ಮರಣೆಯ ಚಿತ್ರಗಳನ್ನು ಶೆಣೈ ಅವರು ತಮ್ಮ ಚಿಂತನೆಯಲ್ಲಿ ತುಂಬಿಕೊಂಡಿದ್ದರು.

ಇದರ ಜೊತೆಗೆ ವಿಜಯನಾಥ ಶೆಣೈ ಅವರು ಶತಮಾನಗಳಿಂದ ಕುಟುಂಬಗಳ ಜೊತೆ ಅವಿನಾಭಾವ ಸಂಬಂಧವಿಟ್ಟು ಕೊಂಡಿದ್ದ ವಸ್ತುಗಳನ್ನು ಸಂಗ್ರಹಿಸಿದ್ದರು. ಒಂದು ವಿಶಾಲವಾದ ಕೊಠಡಿಯಲ್ಲಿ ಅವುಗಳನ್ನೆಲ್ಲ ಜೋಡಿಸಿಟ್ಟಿದ್ದರು. ನಮ್ಮೆಲ್ಲರ ಬಾಲ್ಯ ಕಾಲವನ್ನು ನೆನಪಿಸುವ ವಸ್ತುಗಳು. ಅವು ಪೂಜಾ ಸಾಮಗ್ರಿಗಳಿರಬಹುದು, ಮನೆಗಳನ್ನು ಕಾವಲುಗಾರರ ರೀತಿಯಲ್ಲಿ ಕಾಪಾಡಿಕೊಂಡು ಬಂದ ಬೀಗಗಳಿರಬಹುದು, ಸಂತೋಷದಿಂದ ಸಂಭ್ರಮಿಸಿದ ತಾಂಬೂಲಕ್ಕೆ ಸಂಬಂಧಿಸಿದ ಸಾಮಗ್ರಿಗಳು. ಹಾಗೆಯೇ ಗುಡ್ಡಗಾಡು ಜನರು ಬಳಸುತ್ತಿದ್ದ ವೈಭವಪೂರ್ಣ ಸಲಕರಣೆಗಳು.

ಇವುಗಳನ್ನೆಲ್ಲ ನೋಡಿ ‘‘ನಿಮ್ಮಂಥವರಿಂದಲೇ ನೂರಾರು ವರ್ಷಗಳ ಈ ಸಂಸ್ಕೃತಿಗೆ ಚಾಲನೆ ಇರುವುದು’’ ಎಂದು ಲಂಕೇಶ್ ಅವರು ಶೆಣೈ ಅವರ ಜೊತೆ ನಮ್ಮನ್ನೆಲ್ಲ ಎಳೆದುಕೊಂಡು ಭಾವಚಿತ್ರಗಳಿಗೆ ಒಡ್ಡಿಕೊಂಡಿದ್ದರು. ಒಂದು ದೃಷ್ಟಿಯಿಂದ ಕರ್ನಾಟಕದ ಉದ್ದಗಲಕ್ಕೂ ಸಾವಿರಾರು ಮನಸ್ಸುಗಳ ಮೇಲೆ ವಿಜಯನಾಥ ಶೆಣೈ ಅವರ ಮನೆ ಪ್ರಭಾವ ಬೀರಿದೆ. ತುಂಬಾ ಕೆಟ್ಟದ್ದಾಗಿ ಬೆಂಕಿ ಪೊಟ್ಟಣದ ರೀತಿಯಲ್ಲಿ ಸೃಷ್ಟಿಯಾಗುತ್ತಿದ್ದ ಮನೆಗಳು ಕಡಿಮೆ ಆಗಿವೆ. ನಾವು ವಾಸಿಸುವ ಮನೆಗಳು ಕೆಲವು ಮಿತಿಗಳಲ್ಲಿ ಆದರೂ ಚೆನ್ನಾಗಿರಬೇಕು ಎಂಬ ಪರಿಕಲ್ಪನೆ ವ್ಯಾಪಕವಾಗಿ ಹರಡಿದೆ. ಅಷ್ಟರ ಮಟ್ಟಿಗೆ ನಮ್ಮ ಸಮುದಾಯಕ್ಕೆ ಶೆಣೈ ಅವರ ಕೊಡುಗೆ ಅಪಾರವಾದದ್ದು.

ಇದೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಲಂಕೇಶ್ ಪತ್ರಿಕೆಯಲ್ಲಿ ಮೇಸ್ಟ್ರು ಮತ್ತು ನಾನು ಎರಡು ಮುಖಪುಟದ ಲೇಖನಗಳನ್ನು ಪ್ರಕಟಿಸಿದ್ದೆವು. ಹಾಗೆಯೇ ನಾನು ಬೆಂಗಳೂರು ದೂರದರ್ಶನಕ್ಕೆ ಇಪ್ಪತ್ತು ನಿಮಿಷಗಳ ದೀರ್ಘ ಸಂದರ್ಶನವನ್ನು ಮಾಡಿದ್ದೆ. ಆ ಸಂದರ್ಶನದಲ್ಲಿ ನಾನು ಎಲ್ಲಿಯೂ ಕಾಣಿಸಿಕೊಳ್ಳಕೂಡದು ಎಂಬ ಷರತ್ತಿನ ಮೇಲೆ. ಕೇವಲ ‘ಹಸ್ತಶಿಲ್ಪ’ ಕಲಾಕೃತಿ ಮತ್ತು ಶೆಣೈ ದಂಪತಿ ಕಾಣಿಸಿಕೊಂಡು ಸ್ಮರಣೆಯ ನುಡಿಗಳನ್ನು ದಾಖಲಿಸಿದ್ದರು.

ನಾವು ‘ಹಸ್ತಶಿಲ್ಪ’ವನ್ನು ಬಿಟ್ಟು ಹೊರಗೆ ಬರುವಾಗ; ಯಾವುದೋ ಒಂದು ಚಾರಿತ್ರಿಕ ಸ್ಮಾರಕವನ್ನು ನೋಡಿದೆವು ಎಂಬ ತೃಪ್ತಿ ನಮ್ಮಲ್ಲಿ ತುಂಬಿಕೊಂಡಿತ್ತು. ನಂತರ ಶೆಣೈ ಅವರು ಮಗುವಿನ ರೀತಿಯಲ್ಲಿ ನಮ್ಮ ಕೈ ಹಿಡಿದು ಒತ್ತಾಯ ಮಾಡಿ ಮಣಿಪಾಲ್ ಮೆಡಿಕಲ್ ಕಾಲೇಜಿನ ರೆಸ್ಟೋರೆಂಟ್‌ನಲ್ಲಿ ನಾವು ಸದಾ ನೆನಪು ಮೂಡಿಕೊಂಡು ನಾಲಿಗೆ ಚಪ್ಪರಿಸಿಕೊಳ್ಳಬಹುದಾದ ಊಟ ಕೊಡಿಸಿದ್ದರು. ಆಗಲೂ ತಮ್ಮ ಶಿಲ್ಪ ಕಲೆ, ಸಾಹಿತ್ಯ ಮತ್ತು ಸಂಗೀತಕ್ಕಿರುವ ಸಂಬಂಧವನ್ನು ಕುರಿತು ಮಾರ್ಮಿಕವಾಗಿ ನುಡಿದಿದ್ದರು. ಇತ್ತೀಚೆಗೆ ವಿಜಯನಾಥ ಶೆಣೈ ಅವರ ‘ನೆನಪಿನ ಶಿಲ್ಪಗಳು’ ಕೃತಿಯನ್ನು ಓದಿದಾಗ ಥ್ರಿಲ್ ಆದೆ. ತಮ್ಮ ದೀರ್ಘಕಾಲದ ಬದುಕಿನಲ್ಲಿ ಎಂತೆಂಥ ಕೆಲಸ ಮಾಡಿದ್ದಾರೆ.

ಭಾರತದ ಖ್ಯಾತ ಸಂಗೀತಗಾರರನ್ನೆಲ್ಲ ಕರೆಸಿ ಹಾಡಿಸಿದ್ದಾರೆ, ಕುಣಿಸಿದ್ದಾರೆ. ಇದರ ಮೂಲಕ ಅವರು ಕಾಪಾಡುತ್ತ ಮತ್ತು ಬೆಳೆಸುತ್ತ ಬಂದಿರುವ ಸಂಸ್ಕೃತಿ ಇದೆಯಲ್ಲ ಅದು ಅಪ್ರತಿಮವಾದದ್ದು. ‘ಹಸ್ತಶಿಲ್ಪ’ವನ್ನು ಮೂರು ನಾಲ್ಕು ಬಾರಿ ನೋಡಿದ್ದರೂ ಮತ್ತೊಮ್ಮೆ ನೋಡಬೇಕು ಎಂಬ ಆಶಯ ಜೀವಂತವಾಗಿಯೇ ಇರುತ್ತದೆ. ಉಡುಪಿಯ ರಥಬೀದಿ ಗೆಳೆಯರು ಕೆಲವು ವರ್ಷ ಮಾಡಿದ ಕೆಲಸಗಳಿಂದ ನನ್ನಂಥವನಿಗೆ ವಿಜಯನಾಥ ಶೆಣೈ ಅಂಥವರು ಆಪ್ತರಾದರು. ಅರಿವನ್ನು ವಿಸ್ತರಿಸಿದರು. ಈಗ ನನ್ನ ಭಾವಚಿತ್ರಗಳ ಆಲ್ಬಮ್‌ನಲ್ಲಿ ಮಂಗಳೂರಿನ ಸಮುದ್ರ ದಂಡೆಯ ರೆಸ್ಟೋರೆಂಟ್‌ನಲ್ಲಿಯ ಭಾವಚಿತ್ರಗಳಿವೆ. ‘ಹಸ್ತ ಶಿಲ್ಪ’ದ ಭಾವಚಿತ್ರಗಳಿವೆ. ಲಂಕೇಶ್, ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ತೇಜಸ್ವಿನಿ ಮತ್ತು ನಾನು ನಗುತ್ತ ನಿಂತಿದ್ದೇವೆ. ನಮ್ಮ ನಗುವಿಗಿಂತ ಶೆಣೈ ಅವರ ಮುಗ್ಧ ನಗು ಶ್ರೀಮಂತವಾದದ್ದು.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಆಹಾರದ ಹಾಹಾಕಾರ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ