ಯುಪಿಎ ಸರಕಾರದ ದಿವಾಳಿಕೋರ ನೀತಿಯ ದುರ್ಲಾಭ ಪಡೆದು ಮತ್ತೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಹಿಂದೂ ಫ್ಯಾಸಿಸ್ಟ್ ಶಕ್ತಿಗಳು ಸಜ್ಜಾಗಿ ನಿಂತಿವೆ.ಅಂತಲೆ ಗುಜರಾತ್‌ನ ನರಹಂತಕ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸಲಾಗುತ್ತಿದೆ.ಸಂಜಯ್ ಜೋಶಿಯನ್ನು ಹೊರದಬ್ಬುವ ಮೂಲಕ ಮೋದಿ ನಾಯಕತ್ವವನ್ನು ಬಿಜೆಪಿ ಅಘೋಷಿತವಾಗಿ ಒಪ್ಪಿಕೊಂಡಿದೆ. ಆರೆಸ್ಸೆಸ್ ಕೂಡ ಮೋದಿಗೆ ಹಸಿರು ನಿಶಾನೆ ತೋರಿಸಿದೆ. ಕಾರ್ಪೊರೇಟ್ ಮಾಧ್ಯಮಗಳೂ ಇದಕ್ಕೆ ಪೂರಕವಾಗಿ ಡೋಲು ಬಾರಿಸುತ್ತಿವೆ.ಮೋದಿಯೂ ಈಚೆಗೆ ರಾಷ್ಟ್ರೀಯ ನಾಯಕನ ಪೋಸು ಕೋಡುತ್ತಿದ್ದಾರೆ.ಮೋದಿ ನಾಯಕತ್ವದ ಬಗ್ಗೆ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯವಿರುವುದು ನಿಜ.ಆದರೆ ಆತನ ಸೈದ್ಧಾಂತಿಕ ಬದ್ಧತೆ ಬಗ್ಗೆ ಅಪಸ್ವರವಿಲ್ಲ.ಇಹಲೋಕ ಯಾತ್ರೆ ಪೂರೈಸುವುದರೊಳಗೆ ಒಮ್ಮೆಯಾದರೂ ಪ್ರಧಾನಿಯಾಗುವ ಕನಸಿಗೆ ಈತ ಅಡ್ಡಿಯಾಗಿದ್ದಾನೆ ಎಂದು ಅಡ್ವಾಣಿಗೆ ಕೋಪವಿದೆ.ಪ್ರತಿಪಕ್ಷ ನಾಯಕಿಯಾದ ತಾನೇಕೆ ಪ್ರಧಾನಿಯಾಗಬಾರದು ಎಂದು ಹಂಬಲಿಸುತ್ತಿರುವ ಸುಶ್ಮಾ ಸ್ವರಾಜ್‌ಗೂ ಮೋದಿ ಮೇಲೆ ಇಂಥದೇ ಸಿಟ್ಟು. ಆದರೆ ಜನಸಮೂಹವನ್ನು ಕೋಮು ಆಧಾರದಲ್ಲಿ ವಿಭಜಿಸುವ ಸಾಮರ್ಥ್ಯ ಇವರಿಗಿಲ್ಲ.
ಅಡ್ವಾಣಿ ಮಾತ್ರ, ಮೋದಿಗೆ ಕೊಂಚ ಪೈಪೋಟಿ ನೀಡಬಹುದು. ಇನ್ನು ಆರೆಸ್ಸೆಸ್‌ಗೆ ಮೋದಿ ಜೊತೆಗೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯವಿಲ್ಲ.ಬದಲಾಗಿ ಹಿಂದೂ ರಾಷ್ಟ್ರ ಗುರಿಸಾಧನೆಗೆ ಈತನೇ ಸೂಕ್ತ ವ್ಯಕ್ತಿ ಎಂಬ ಮಮಕಾರವಿದೆ. ಗುಜರಾತ್ನಲ್ಲಿ ಮುಸಲ್ಮಾನರನ್ನು ಸಾಮೂಹಿಕವಾಗಿ ಕೊಚ್ಚಿ ಹಾಕುವ ಮೂಲಕ ಗೋಳ್ವಾಲ್ಕರ್ ಕನಸನ್ನು ಈತ ನನಸಾಗಿಸಿದ ಎಂಬ ಮೆಚ್ಚುಗೆ ಇದೆ. ಈ ರೀತಿ ಅಧಿಕಾರದಲ್ಲಿದ್ದು ಹತ್ಯಾಕಾಂಡ ನಡೆಸಿ ದಕ್ಕಿಸಿಕೊಂಡ ಮೋದಿ ಸಾಮರ್ಥ್ಯವನ್ನು ಸಂಘದ ಅನೇಕ ನಾಯಕರು ಕೊಂಡಾಡುತ್ತಾರೆ. ಹಿಟ್ಲರ್‌ನ ಇಂಥದೇ ‘ಸಾಧನೆ’ಯ ಬಗ್ಗೆ ಗುರೂಜಿ ಗೋಳ್ವಾಲ್ಕರ್ ಹೆಮ್ಮೆ ವ್ಯಕ್ತಪಡಿಸಿದ್ದರು. ಇನ್ನು ಎನ್‌ಡಿಎ ಪಾಲುಗಾರ ಪಕ್ಷಗಳು ಮೋದಿ ನಾಯಕತ್ವದ ಬಗ್ಗೆ ಬಿಹಾರದ ಸಂಯುಕ್ತ ಜನತಾದಳದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ವ್ಯಕ್ತಿಯನ್ನು ಪ್ರಧಾನಿ ಸ್ಥಾನಕ್ಕೆ ಬಿಂಬಿಸಬೇಕೆಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ಗೆ ಕೆಂಡದಂಥ ಕೋಪ ಬಂದಿದೆ.‘ಹಿಂದುತ್ವವಾದಿಯೇ ರಾಷ್ಟ್ರದ ಪ್ರಧಾನಿಯಾಗಬೇಕೆಂದು ಭಾಗವತ್ ಬಹಿರಂಗವಾಗಿ ಹೇಳಿದ್ದಾರೆ. ಹಿಂದುತ್ವ ಸಿದ್ಧಾಂತವನ್ನು ಜೀವಂತ ಇಡಬೇಕಾದರೆ ಜಾತ್ಯತೀತ ಜನತಂತ್ರಕ್ಕೆ ಎಳ್ಳುನೀರು ಬಿಡಬೇಕು. ಆ ತಾಕತ್ತು ಮೋದಿಗಿದೆ ಎಂಬ ವಿಶ್ವಾಸ ಇವರಿಗಿದೆ. ಈ ಬೆಳವಣಿಗೆಗೆ ಪೂರಕವೇನೊ ಎಂಬಂತೆ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಸಂಯುಕ್ತ ಜನತಾದಳ ಪ್ರಣಬ್ ಮುಖರ್ಜಿಯನ್ನು ಬೆಂಬಲಿಸುವ ಮೂಲಕ ಭಿನ್ನ ನಿಲುವು ತಾಳಿದೆ.
ಆದರೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಂಗ್ಮಾ ಬೆಂಬಲಕ್ಕೆ ನಿಂತಿದ್ದಾರೆ. ನವೀನ್ ಪಟ್ನಾಯಕ್‌ರ ಬಿಜೆಡಿ ಕೂಡ ಅದೇ ನಿಲುವನ್ನು ತಾಳಿದೆ. ಆದರೆ ಇದು ಮುಂದಿನ ಲೋಕಸಭೆ ಚುನವಣೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ. ಮೋದಿ ನಾಯಕತ್ವವನ್ನು ವಿರೋಧಿಸುತ್ತಿರುವ ಎನ್‌ಡಿಎ ಪಾಲುಗಾರ ಪಕ್ಷಗಳು ಕೊನೆಯ ಗಳಿಗೆವರೆಗೆ ಇದೇ ನಿಲುವಿಗೆ ಬದ್ಧವಾಗಿ ಉಳಿಯುತ್ತಯೇ? ಹಿಂದಿನ ಘಟನೆಗಳ ಆಧಾರದಲ್ಲಿ ಹೇಳುವುದಾದರೆ ಸಂಯುಕ್ತ ಜನತಾದಳದಂಥ ಎನ್‌ಡಿಎ ಪಾಲುಗಾರ ಪಕ್ಷಗಳು ತಾಳಿದ ನಿಲುವು ಸ್ಥಿರವಾದುದಲ್ಲ. ಮೋದಿಯನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ನಿತೀಶ್‌ಕುಮಾರ್ ಅಡ್ವಾಣಿ ಬಗ್ಗೆ ಮೃದುವಾಗಿದ್ದಾರೆ. ಹಾಗೆಂದು ಅಡ್ವಾಣಿ ಮೋದಿಗಿಂತ ಭಿನ್ನವೇ? ಬಾಬರಿ ಮಸೀದಿ ನೆಲಸಮ ರಥಯಾತ್ರೆ ಮೂಲಕ ರಕ್ತಪಾತದ ರಾಜಕೀಯಕ್ಕೆ ನಾಂದಿ ಹಾಡಿದ ಅಡ್ವಾಣಿ ಮತ್ತು ಮೋದಿ ನಡುವೆ ವ್ಯತ್ಯಾಸವೇನಿದೆ? ಆದರೂ ಅಡ್ವಾಣಿಗೆ ತನ್ನದೇ ನೆಲೆ ಎಂಬುದಿಲ್ಲ.
ಮೋದಿಗೆ ಜನಸಮೂಹದಲ್ಲಿ ಹಿಂದು ಮಾಧ್ಯಮ ವರ್ಗದ ಕೆಲ ವಲಯಗಳಲ್ಲಿ ಬೆಂಬಲವಿದೆ. ಜೊತೆಗೆ ವಯಸ್ಸಿದೆ. ಹೀಗಾಗಿ ಎನ್‌ಡಿಎ ಪಾಲುಗಾರ ಪಕ್ಷಗಳಲ್ಲಿ ನಿತೀಶ್‌ಕುಮಾರ್‌ರಂಥವರು ಈಗ ಮೋದಿಯನ್ನು ವಿರೋಧಿಸುತ್ತಿ ದ್ದರೂ ಬಿಜೆಪಿ ಈ ವಿರೋಧಕ್ಕೆ ಸೊಪ್ಪು ಹಾಕದೇ ಮೋದಿ ನಾಯಕತ್ವದಲ್ಲಿ ಚುನಾ ವಣೆಗಿಳಿದು 200ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಆಗ ಇದೇ ನಿತೀಶ್‌ಕುಮಾರ್-ಶರದ್ ಯಾದವ್ ಅನಿವಾರ್ಯವಾಗಿ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದ ಓಟಿಗಾಗಿ ಜಾತ್ಯತೀತ ಮುಖವಾಡ ಧರಿಸುವ ವ್ಯಕ್ತಿ ಆಧರಿತ ಪಕ್ಷಗಳು ಈ ರೀತಿ ಹಿಂದೆ ಅನೇಕ ಬಾರಿ ಕೋಮುವಾದಿ ಬಿಜೆಪಿ ಜೊತೆ ಸಂದರ್ಭ ಸಾಧಕ ಹೊಂದಾಣಿಕೆ ಮಾಡಿಕೊಂಡಿದೆ.
ಅಟಲ್ ಬಿಹಾರಿ ವಾಜಪೇಯಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಸಂಘಪರಿವಾರವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಶರದ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಅಧಿಕಾರಕ್ಕಾಗಿ ಎನ್‌ಡಿಎ ಹಡಗಿಗೆ ಜಿಗಿದು ಕೇಂದ್ರದಲ್ಲಿ ಮಂತ್ರಿಗಳಾಗಿ ಸಂಭ್ರಮಿಸಿದರು. ಆದರೆ ಪಾಸ್ವಾನ್ ನಂತರ ಎನ್‌ಡಿಎಯಿಂದ ಹೊರಗೆ ಬಂದು ಪಶ್ಚಾತಾಪವಾಗಿದೆ ಎಂದು ಹೇಳಿಕೊಂಡರು. ಶರದ್ ಯಾದವ್ ಇಂದಿಗೂ ಎನ್‌ಡಿಎ ಕೂಟದಲ್ಲೇ ಇದ್ದಾರೆ. ನವೀನ್ ಪಟ್ನಾಯಕ್‌ರ ಬಿಜೆಡಿ ಕೂಡ ಇವರಿಗಿಂತ ಭಿನ್ನವಲ್ಲ.
ಇನ್ನೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಯಾವುದೇ ತತ್ವ ಸಿದ್ಧಾಂತವಿಲ್ಲ. ತಮಿಳು ಸಿನಿಮಾಗಳಲ್ಲಿ ತನ್ನ ಹೀರೋ ಆಗಿದ್ದ ಎಂ.ಜಿ.ಆರ್. ಮೋಹದ ಬಲೆಗೆ ಸಿಲುಕಿ ಅಣ್ಣಾ ಡಿಎಂಕೆಯಲ್ಲಿ ಅವರ ಉತ್ತರಾಧಿಕಾರಿಯಾದರು. ಡಿಎಂಕೆ- ಎಡಿಎಂಕೆ, ಎಂಡಿಎಂಕೆಯಂಥ ದ್ರಾವಿಡ ಪಕ್ಷಗಳು ಜನ್ಮ ತಾಳಿದ್ದು, ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಕ್ರಾಂತಿಕಾರಿ ಸಿದ್ಧಾಂತದ ಅಡಿಪಾಯದ ಮೇಲೆ. ಆದರೆ ಅಯ್ಯಂಗಾರಿ ಜಯಲಲಿತಾಗೆ ಪೆರಿಯಾರ್ ವಿಚಾರವಾದದ ಬಗ್ಗೆ ನಂಬಿಕೆ ಇಲ್ಲ. ಅಂತಲೆ ಸಹಜವಾಗಿ ಎಲ್ಲ ಬ್ರಾಹ್ಮಣರಂತೆ ಆಕೆ ಬಿಜೆಪಿ ಪರ ಒಲವು ಹೊಂದಿದ್ದಾರೆ. ಕೇಂದ್ರದಲ್ಲಿ ಯಾವ ಸರಕಾರ ಇರುತ್ತದೋ ಆ ಸರಕಾರದ ಬಾಲ ಹಿಡಿದು ಬೇಳೆ ಬೇಯಿಸಿಕೊಳ್ಳುತ್ತ ಬಂದ ಜಯಲಲಿತಾ- ಕರುಣಾನಿಧಿ ರಾಜಕಾರಣ ಎಲ್ಲರಿಗೂ ಗೊತ್ತಿದೆ.
ಇನ್ನು ಮಮತಾ ಬ್ಯಾನರ್ಜಿ. ಈಕೆಗೂ ಕಮ್ಯೂನಿಸ್ಟರನ್ನು ವಿರೋಧಿಸುವುದೇ ಏಕ ಮಾತ್ರ ಸಿದ್ಧಾಂತ. ಹೀಗಾಗಿ ಬಿಜೆಪಿ ಮೋದಿ ನಾಯಕತ್ವದಲ್ಲೇ ಲೋಕಸಭಾ ಚುನಾವಣೆಗೆ ಹೋಗಿ ಯಶಸ್ವಿಯಾದರೆ ಈಗ ವಿರೋಧಿಸುತ್ತಿರುವವರೂ ಸೇರಿದಂತೆ ಎಲ್ಲ ಎನ್‌ಡಿಎ ಪಾಲುಗಾರ ಪಕ್ಷಗಳು ಕೊನೆಯ ಗಳಿಗೆಯಲ್ಲಿ ಮೋದಿಗೆ ಶರಣಾದರೆ ಅಚ್ಚರಿ ಪಡಬೇಕಾಗಿಲ್ಲ.ಎಡ ಪಕ್ಷಗಳು ಮೂರನೆ ರಂಗದ ಬಗ್ಗೆ ಮಾತಾಡುತ್ತಿದ್ದರೂ ಅದಿನ್ನೂ ಕನಸಿನ ಗಂಟಾಗಿದೆ. ಈ ವಿದ್ಯಮಾನಗಳನ್ನು ಗಮನಿಸಿದರೆ ಈ ದೇಶದಕ್ಕೆ ಫ್ಯಾಸಿಸ್ಟ್ ಪ್ರಧಾನಿ ವಕ್ಕರಿಸುವ ಅಪಾಯ ಎದುರಾಗಿದೆ.ಅಂತಲೇ ಎನ್‌ಡಿಎ ಮೋದಿಯನ್ನೇ ಪ್ರಧಾನಿ ಎಂದು ಬಿಂಬಿಸಲಾಗುತ್ತಿದೆ.ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಿಗೂ ಭಾರತದ ಕಾರ್ಪೊರೇಟ್ ಖದೀಮರಿಗೂ ಮೋದಿ ಪ್ರಧಾನಿಯಾಗುವುದು ಬೇಕಾಗಿದೆ.
ಒಂದು ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ ಗುಜರಾತ್ ಹತ್ಯಾಕಾಂಡದ ಪ್ರಯೋಗ ದೇಶವ್ಯಾಪಿ ಪುನರಾವರ್ತನೆ ಯಾಗುತ್ತದೆ.ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಗೆ ಚಟ್ಟ ಕಟ್ಟಲಾಗುತ್ತದೆ.ಸಾವರ್ಕರ್-ಗೋಳ್ವಾಲ್ಕರ್ ಕಲ್ಪನೆಯ ಹಿಂದೂರಾಷ್ಟ್ರ ನಿರ್ಮಾಣದ ವಿಷಬೀಜ ಮೊಳಕೆಯೊಡೆಯುತ್ತದೆ. ಹಾಗಾಗ ಬಾರದೆಂದಿದ್ದರೆ ಜಾತ್ಯತೀತ-ಪ್ರಜ್ಞಾವಂತ ವ್ಯಕ್ತಿ-ಶಕ್ತಿಗಳು ಒಂದುಗೂಡಿ ಮೋದಿಯನ್ನು ಮೂಲೆಗುಂಪು ಮಾಡಲು ಮುಂದಾಗಬೇಕಾಗಿದೆ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...