ಅಂಕಣ - ಮಾತು ವೌನದ ಮುಂದೆ

mail-img print-img

ಪೂನಾದ ಡಾ.ಕೇಲ್ಕರ್ ಮ್ಯೂಸಿಯಂ

ಶನಿವಾರ - ಜೂನ್ -30-2012

ಭಾ­­­ರತದ ಸಾಂಸ್ಕೃತಿಕ ಬದುಕಿನಲ್ಲಿ ಯಾವು ಯಾವುದೋ ಪ್ರದೇಶಗಳು ಸಂಭ್ರಮಿಸಿವೆ.ಇತಿಹಾಸದ ಪುಟಗಳಿಗೆ ಕೆಲವು ಶ್ರೀಮಂತವಾದ ನೆನಪುಗಳನ್ನು ಬಿಟ್ಟು ಹೋಗಿವೆ.ಆ ನೆನಪುಗಳನ್ನು ನಾವು ಆ ಕಡೆ ಈ ಕಡೆ ಎಳೆದಾಡಿ ಚರ್ಚಿಸಿದರೂ; ಒಂದು ರೀತಿಯ ಅಪೂರ್ಣತೆ ಕಾಡುತ್ತಲೇ ಇರುತ್ತದೆ.ಈ ದೃಷ್ಟಿಯಿಂದ ‘ಡೆಕ್ಕನ್ ಕ್ಯೂನ್’ ಎಂದು ಕರೆಸಿಕೊಂಡಿರುವ ಇಂದಿನ ಮಹಾರಾಷ್ಟ್ರದ ಪೂನಾ ಮನಸ್ಸಿಗೆ ಸದಾ ಮುದ ನೀಡುವ ನಗರ.ಸ್ವಾತಂತ್ರ ಪೂರ್ವದ ನೆನಪುಗಳಿಗಿಂತ ಇಪ್ಪತ್ತನೆಯ ಶತಮಾನದ ಕೆಲವು ಅಲಂಕಾರಪೂರ್ಣ ವರ್ಷಗಳು ನನ್ನ ಮನಸ್ಸಿನ ತುಂಬ ಸ್ಥಾಯಿಯಾಗಿ ನಿಂತಿವೆ. ಅದರಲ್ಲಿ ‘ಭಾರತ ಬಿಟ್ಟು ತೊಲಗಿ’ ಎಂಬ ಚಾರಿತ್ರಿಕ ಆಂದೋಲನದ ಸಮಯದಲ್ಲಿ ಗಾಂಧೀಜಿಯವರು ಇಲ್ಲಿಯ ಆಗಾ ಖಾನ್ ಅರಮನೆಯಲ್ಲಿ ತಮ್ಮ ಪತ್ನಿ ಕಸ್ತೂರಿಬಾ ಮತ್ತು ಮಹಾದೇವ ದೇಸಾಯಿ ಮುಂತಾದವರೊಡನೆ ಇದ್ದುದು, ಹಾಗೆಯೇ ನನಗೆ ‘ವೌನ’ ಎಂದರೆ ಏನು ಎಂದು ತಮ್ಮ ‘ಸೈಲೆನ್ಸ್’ ಎಂಬ ಉಪನ್ಯಾಸದ ಕ್ಯಾಸೆಟ್‌ನಿಂದ ಆಧ್ಯಾತ್ಮಿಕ ಥ್ರಿಲ್‌ನಿಂದ ನಿರಂತರ ಆನಂದಿಸುವ ‘ಓಶೋ’ ಎಂಬ ಮಹಾನ್‌ಗುರು, ಮತ್ತೊಂದು ದಿಕ್ಕಿನಿಂದ ಬದುಕಿನಲ್ಲಿ ಮೌನದ ಕಡೆ ಚಲಿಸುತ್ತಲೇ ಇರು ಎನ್ನುವ ರೀತಿಯಲ್ಲಿ ಸಂಗೀತ ಸಾಮ್ರಾಜ್ಯವನ್ನು ನಿರ್ಮಿಸಿದ ಭೀಮಸೇನ ಜೋಶಿಯವರು, ಇದರ ಜೊತೆಗೆ ‘ಯೋಗಕ್ಕೆ ಎಲ್ಲಿಲ್ಲದ ಆಯಾಮವನ್ನು ತಂದುಕೊಟ್ಟ ಬಿ.ಕೆ.ಎಸ್. ಅಯ್ಯಂಗಾರ್’ ಅವರನ್ನು ಬೆಚ್ಚಗೆ ತನ್ನ ತೆಕ್ಕೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ನಗರ.

ಇವರೆಲ್ಲರೂ ಪವಿತ್ರಗೊಳಿಸಿದ ನೆಲವನ್ನು ಕಣ್ಣಿಗೊತ್ತಿಕೊಂಡು ಆನಂದಿಸ ಬೇಕೆಂದು ಮೇ 2011ರಲ್ಲಿ ವಿವಿಧ ನೆನಪುಗಳ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದೆ.ಒಂದು ಕ್ಷಣ ಎರಡು ದಶಕಗಳ ಹಿಂದೆ ನೋಡಿದ ಪುಣೆ ಅಥವಾ ಪೂನಾ ಇದೇನಾ ಅನ್ನಿಸಿತು.ಭಾರತದ ಬಹುಪಾಲು ನಗರಗಳೂ ಲಂಗುಲಗಾಮಿಲ್ಲದೆ ಬೆಳೆದಂತೆ ಇದೂ ಬೆಳೆದಿದೆ. ಒಂದು ದೃಷ್ಟಿಯಿಂದ ‘ಬೆಳೆದಿದೆ’ ಎನ್ನುವ ಗುಣವಾಚಕಕ್ಕೆ ಅಪಚಾರವೆಸಗಿ ದಂತೆ.ಈ ಬಾರಿ ನನ್ನ ಕುಟುಂಬದ ಒಂದಷ್ಟು ಸದಸ್ಯರೊಡನೆ ಹೊರಟಿದ್ದೆ. ಅದೂ ಒಂದು ದೃಷ್ಟಿಯಿಂದ ಆಕಸ್ಮಿಕವೆಂಬಂತೆ. ಕಳೆದ ವರ್ಷ ಒಂದಷ್ಟು ದಿವಸ ಯುರೋಪು ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದೆ. ಆಗ ಸ್ವಿಸ್‌ನ ವೀಸಾ ಬರಲು ತಡವಾದಾಗ; ಮುಂಬೈಯ ಸ್ವಿಸ್‌ನ ರಾಯಬಾರಿ ಕಚೇರಿಯ ಬಾಗಿಲನ್ನು ತಟ್ಟಲು ಕರೆದಿದ್ದರು.

ಬೆಂಗಳೂರಿನಲ್ಲಿ ನನ್ನ ಕೆಲವು ಗೆಳೆಯರು ‘‘ನೀನು ಪಾಕಿಸ್ತಾನ ಮತ್ತು ಚೀನಾ ದೇಶವನ್ನು ಸ್ನೇಹಕೂಟದ ಮೂಲಕ ನೋಡಿರುವುದರಿಂದ ಅವರಿಗೆ ಗುಮಾನಿ ಬಂದಿದೆ.ನೀನೂ ಒಬ್ಬ ಟೆರರಿಸ್ಟ್ ಮರಿ ಇರಬಹುದೆಂದು’’ ತಮಾಷೆಯಾಡಿದ್ದರು. ಈ ಎಲ್ಲ ತಮಾಷೆ ಮತ್ತು ಗುಮಾನಿಗಳ ನಡುವೆ ವೀಸಾ ಅಧಿಕಾರಿಗಳ ಮುಂದೆ ಕೂತು; ಅವರ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಹೊರಗೆ ಬಂದಿದ್ದೆ.ಮತ್ತು ಮುಂಬೈಯನ್ನು ನೋಡಿಕೊಂಡು, ಸಚಿನ್ ಕಟ್ಟಿಸುತ್ತಿದ್ದ ಹೊಸ ಮನೆಯ ಮುಂದೆ ನಿಂತು ಭಾವಚಿತ್ರ ತೆಗೆಸಿಕೊಂಡು ಪೂನಾಗೆ ಬಂದಿದ್ದೆವು. ಪೂನಾದಲ್ಲಿ ಸುತ್ತಾಡುವಾಗ ಹಳೆಯ ಹೆಜ್ಜೆ ಗುರುತುಗಳನ್ನೆಲ್ಲ ಎದುರುಗೊಂಡು; ನಾನು ನೋಡದೆ ಇದ್ದ ‘ರಾಜಾ ದಿನಕರ್ ಕೇಲ್ಕರ್ ಮ್ಯೂಸಿಯಂ’ನ್ನು ನೋಡಲು ಹೋದೆವು.

ಇದೊಂದು ಅಪರೂಪದ ಮ್ಯೂಸಿಯಂ. ಸುಮಾರು ಮೂರು ನಾಲ್ಕು ಗಂಟೆ ಇಲ್ಲಿ ಸುತ್ತಾಡು ವಾಗ ಎಷ್ಟೊಂದು ‘ಹಾಯ್’ ಅನ್ನಿಸಿತು. ನನ್ನ ಬಾಲ್ಯ ಕಾಲವನ್ನು ಕೆದಕಿ ನೋಡಿಕೊಳ್ಳುವಂತಾಯಿತು. ಯಾಕೆಂದರೆ ಆ ರೀತಿಯಲ್ಲಿ ವೈಭವವನ್ನು ತುಂಬಿ ಕೊಂಡ ಅದ್ಭುತ ವಸ್ತುಗಳೆಲ್ಲ ಅಲ್ಲಿ ಇದ್ದವು. ಇಂಥ ಅಮೂಲ್ಯ ವಸ್ತುಗಳಿಗೆ ಡಾ. ದಿನಕರ್ ಗಂಗಾಧರ್ ಕೇಲ್ಕರ್ ಅವರು ಒಂಟಿಯಾಗಿ ರಾಷ್ಟ್ರದ ಉದ್ದಗ ಲಕ್ಕೂ ಸುತ್ತಾಡಿದವರು. ಅರವತ್ತು ವರ್ಷಗಳಿಗೂ ಮೇಲ್ಪಟ್ಟು ಬಿಸಿಲು, ಮಳೆ, ಗಾಳಿಯೆನ್ನದೆ ಎಲ್ಲೆ ಲ್ಲಿಗೋ ಭೇಟಿ ಕೊಟ್ಟಿದ್ದಾರೆ. ಯಾರಾದರೂ ಇಂಥ ಅಮೂಲ್ಯ ವಸ್ತು ಇಂಥ ಕಡೆ ಇದೆ ಎಂದರೆ ಆ ಕಡೆಗೆ ತಪಸ್ಸಿನ ರೀತಿಯಲ್ಲಿ ಓಡಿ ಹೋಗಿ; ಅದನ್ನು ಪಡೆದ ನಂತರ ನೆಮ್ಮದಿಯನ್ನು ಕಂಡವರು.

ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿಯೂ ಒಬ್ಬ ಯುವಕನ ರೀತಿಯಲ್ಲಿ ತಮ್ಮ ಮಗನ ಹೆಸರಿನಲ್ಲಿ ‘ಮ್ಯೂಸಿಯಂ’ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಆಕಾರ ಕೊಟ್ಟವರು.ಇದನ್ನೆಲ್ಲ ಯೋಚಿಸಿದಾಗ ಮನುಷ್ಯರ ಬದುಕಿನಲ್ಲಿ ಎಂತೆಂಥ ಹುಚ್ಚಾಟಗಳಿರುತ್ತವೆ ಅನ್ನಿಸುತ್ತದೆ. ಒಂದು ದೃಷ್ಟಿಯಿಂದ ಈ ಮ್ಯೂಸಿಯಂನ್ನು ನೋಡುವಾಗ; ಒಂದು ಕ್ಷಣ ನಮ್ಮ ವಿಜಯನಾಥ ಶೆಣೈ ಅವರ ‘ಹಸ್ತಶಿಲ್ಪ’ ನೆನಪಿಗೆ ಬಂದು ಹೋಯಿತು.ಡಾ. ದಿನಕರ್ ಗಂಗಾಧರ್ ಕೇಲ್ಕರ್ ಅವರು ತಮ್ಮ ಮಗ ರಾಜಾ ದಿನಕರ್ ಅವರು ಅಪ್ರಾಪ್ತ ವಯಸ್ಸಿನಲ್ಲಿ ನಿದನರಾದಾಗ; ಆ ನೋವನ್ನು ಮರೆಯಲು ಪ್ರಾರಂಭಿಸಿರುವಂಥದ್ದು. ಡಾ. ದಿನಕರ್ ಕೇಲ್ಕರ್ ಮತ್ತು ಅವರ ಶ್ರೀಮತಿಯವ ರಾದ ಕಮಲಾಬಾಯಿಯವರು ಈ ಮ್ಯೂಸಿ ಯಂಗೆ ಮಗನ ಹೆಸರನ್ನಿಟ್ಟರೂ ಎಲ್ಲಿಯೂ ಮಗನ ಭಾವಚಿತ್ರ ಕಾಣಿಸುವುದಿಲ್ಲ.

ಮೂರು ಅಂತಸ್ತಿನ ಈ ಕಟ್ಟಡವನ್ನು ವಿವಿಧ ಆಕಾರದಲ್ಲಿ ರೂಪಿಸಿ ದ್ದಾರೆ. ಮನುಷ್ಯ ಕೇವಲ ಹೊಟ್ಟೆ ಬಟ್ಟೆಯ ಬಗ್ಗೆ ಮಾತ್ರ ಯೋಚಿಸುತ್ತ ಬಂದಿಲ್ಲ.ಅದನ್ನು ಮೀರಿ ಇತಿಹಾಸದಲ್ಲಿ ಒಟ್ಟು ಪರಿಸರಕ್ಕೆ ಹೊಂದಿಕೊಳ್ಳಲು ನಡೆಸಿದ ಹುಡುಕಾಟ ಎಂಥ ರೋಚಕತೆಯಿಂದ ಕೂಡಿದೆ.ಒಂದನ್ನು ಸೃಷ್ಟಿಸಿದ ಮೇಲೆ ಅದಕ್ಕೆ ಮಿಗಿಲಾಗಿ ಇನ್ನು ಏನೇನೋ ಇದೆ ಎಂಬುದು ಮಹತ್ವಪೂರ್ಣವಾದದ್ದು. ಈ ಹುಡುಕಾಟಕ್ಕೆ ಅನ್ವಯಿಸಿ ಎಂತೆಂಥದೋ ಅಧ್ಯಯನಗಳು ನಡೆದಿದ್ದರೂ; ಇದು ಇನ್ನೂ ಪರಿಪೂರ್ಣ ಅಲ್ಲ ಎಂದು ವಿವಿಧ ರೂಪಗಳಲ್ಲಿ ಶೋಧಿಸುತ್ತಲೇ ಇದ್ದಾರೆ. ಈ ಶೋಧನೆಯ ಜಾಡು ಹಿಡಿದು ಡಾ. ಕೇಲ್ಕರ್ ಅವರು ಸುತ್ತಾಡಿ ಸಂಗ್ರಹಿಸಿರುವು ದಿದೆಯಲ್ಲ ನಿಜವಾಗಿಯೂ ಅದ್ಭುತವಾದದ್ದು.

ಇಲ್ಲಿ ಕೇವಲ ಶ್ರಮ ಮಾತ್ರ ವ್ಯಯವಾಗಿರುವುದಿಲ್ಲ. ಅಪಾರ ಪ್ರಮಾಣದ ಹಣವೂ ವೆಚ್ಚವಾಗಿ ರುತ್ತದೆ. ಹಾಗೆಯೇ ಅವುಗಳನ್ನೆಲ್ಲ ಸಾವಿರಾರು ಕಿ.ಮೀಟರ್ ದೂರದಿಂದ ಸಾಗಿಸಿರುವುದಿದೆಯಲ್ಲ; ಅದು ನಿಜವಾಗಿಯೂ ತಾದಾತ್ಮತೆ ಯಿಂದ ಕೂಡಿರುವಂಥದ್ದು. ಒಂದು ಸಂಸ್ಕೃತಿಯಲ್ಲಿ ಇಷ್ಟೊಂದು ಪ್ರಮಾಣದ ವೈವಿಧ್ಯಮಯವಾದ ಘಟಕಗಳು ತುಂಬಿಕೊಂಡಿರುತ್ತವೆ ಎಂಬ ಕಾರಣಕ್ಕಾಗಿಯೇ ನಮ್ಮ ಆಲೋಚನಾ ಕ್ರಮದ ಹಿಗ್ಗುವಿಕೆಗೆ ಅರ್ಥಪೂರ್ಣತೆ ಇದೆ. ಯಾಕೆಂದರೆ ಈ ಸಮಾಜದಲ್ಲಿ ಕೆಲವು ಮಂದಿ ತಮ್ಮ ಸಂಪತ್ತನ್ನು ಪ್ರದರ್ಶಿಸಲು ನಡೆಸುವ ಕ್ಷುಲ್ಲಕ ಕಾರ್ಯಗಳ ಮಧ್ಯೆ ಡಾ. ಕೇಲ್ಕರ್ ಮತ್ತು ಅವರ ಶ್ರೀಮತಿಯವರು ಎಂಥ ಮಹಾನು ಭಾವರ ರೀತಿಯಲ್ಲಿ ಕಾಣುತ್ತಿರುತ್ತಾರೆ.

ಕೆಲವರು ಈ ಸಮಾಜವನ್ನು ದುಷ್ಟ ಮಾರ್ಗಳಿಂದ ಭಸ್ಮ ಮಾಡುತ್ತಿದ್ದಾರೆ; ಮತ್ತೆ ಕೆಲವರು ಅದನ್ನು ಕಾಪಾಡುವಲ್ಲಿ ಸತ್ಯದ ಹುಡುಕಾಟದಲ್ಲಿ ತೊಡಗಿರುತ್ತಾರೆ ಎಂಬು ದೇ ಹೆಚ್ಚುಗಾರಿಕೆಯ ವಿಷಯವಾಗಿರುತ್ತದೆ. ಸೃಷ್ಟಿಯಲ್ಲಿ ಏನೂ ನಾಶವಾಗಬಾರದು ಎಂದು ಕೆಲವು ಮಹನೀಯರು ಕಾಪಾಡು ವುದಿದೆಯಲ್ಲ; ನಿಜವಾಗಿಯೂ ಅವರೇ ಸತ್ಯದ ವಾರಸುದಾರರು ಅನ್ನಿಸುತ್ತದೆ. ಇದನ್ನೆಲ್ಲ ನೋಡಿದಾಗ, ಯಾರೂ ಗಮನಿಸಲಿ ಅಥವಾ ಗಮನಿಸದಿರಲಿ ತಮ್ಮ ಪಾಡಿಗೆ ತಾವು ಪರರ ಇಲ್ಲವೇ ಈ ಸಮಾಜದ ಬದುಕಿಗೆ ಸುಖ ವನ್ನು ಹಂಚುವುದಿದೆಯಲ್ಲ; ಎಷ್ಟು ಆನಂದ ದಾಯಕವಾದದ್ದು.

ಇದನ್ನು ಬರೆಯುವ ಕಾಲಕ್ಕೆ ಗಾಂಧೀಜಿಯವರ ತತ್ವ ಚಿಂತನೆಗಳಿಂದ ಪ್ರಣೀತಗೊಂಡ ರಜಿನಿ ಭಕ್ಷಿಯವರು ಒಂದು ಮಾತು ಹೇಳುವರು: ‘‘ಗಾಂಧೀಜಿಯವರ ಆಲೋ ಚನಾಕ್ರಮಗಳಿಂದ ಪ್ರಭಾವಗೊಂಡ ನೂರಾರು ಮಂದಿ ಉನ್ನತ ದರ್ಜೆಯಲ್ಲಿದ್ದ ಅಧಿಕಾರಿಗಳು ತಮ್ಮ ಕೆಲಸಗಳನ್ನು ಬಿಟ್ಟು ಜನರ ಮಧ್ಯೆ ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೇ ನಿಜವಾಗಿಯೂ ಈ ಸಮಾಜವನ್ನು ಕಾಪಾಡುತ್ತಿರುವಂಥ ವರು’’ ಎಂದು. ಆಗ ಸುಂದರಲಾಲ್ ಬುಹುಗುಣ, ಬಾಬಾ ಆಮ್ಟೆ, ಮೇಧಾ ಪಾಟ್ಕರ್, ರಾಜಸ್ಥಾನದ ರಾಜೇಂದ್ರ ಸಿಂಗ್ ಮುಂತಾದವರ ಜೊತೆಗೆ ಡಾ. ಕೇಲ್ಕರ್ ಅವರನ್ನು ಸೇರಿಸಬೇಕು ಅನ್ನಿಸುತ್ತದೆ.ಯಾವುದೇ ಸಾಧನೆಯ ಹಿಂದೆ ತನ್ಮಯತೆ ಎಂಬುದು ಆರಾಧನೆಯ ಮುಂದುವರಿದ ಭಾಗವೇ ಆಗಿರುತ್ತದೆ.

ತಾಯಿ ಮಗುವನ್ನು ಅಲಂಕರಿಸುವಾಗ ಸಂಗೀತಗಾರ ತಂದಿಗಳ ನಡುವೆ ಹಾಗೂ ಗಂಟಲಿನ ನಡುವೆ ನಾದ ವನ್ನು ಹುಡುಕುವಾಗ, ಕಲಾವಿದರು ಆಕಾರಗಳ ವೈಭವವನ್ನು ಹುಡುಕುವಾಗ; ಹೀಗೆಯೇ ಮುಂದುವರಿದ ಭಾಗವಾಗಿ ಸೃಷ್ಟಿಯ ಸಂಗತಿಗಳಿಗೆ ಅಂಟಿಕೊಂಡ ಅನನ್ಯ ರೂಪಕ ಗಳು ಎಲೆಮರೆಯ ಕಾಯಿಗಳಂತೆ ಬೆಳಕು ನೀಡುತ್ತಿರುತ್ತವೆ ಎಂಬುದೇ ಅತ್ಯಂತ ಸೋಜಿಗದ ಸಂಗತಿ. ಇವೆಲ್ಲವೂ ಪರೋಕ್ಷವಾಗಿ ಜ್ಞಾನದ ಹುಡುಕಾಟವೇ ಆಗಿರುತ್ತದೆ. ಇಷ್ಟೆಲ್ಲ ಸುತ್ತಿ ಬಳಸಿ ಹೇಳಿದ ಮೇಲೆ; ಮ್ಯೂಸಿಯಂನಲ್ಲಿ ನಿಜವಾದ ನಿಧಿ ಏನಿದೆ ಎಂಬುದನ್ನು ವಿವರಿಸಲೇ ಬೇಕಾಗುತ್ತದೆ.

ಯಾಕೆಂದರೆ ಈ ಭೂಮಿಯ ಅಂತರಂಗ ದಲ್ಲಿ ಮನುಷ್ಯರು ದುರಾಸೆಯಿಂದ ಏನೇನೋ ದೋಚುತ್ತಿದ್ದಾರೆ. ಇನ್ನು ಕೆಲವರು ಸಂತರ ರೀತಿಯಲ್ಲಿ ಇಂತಿಂಥ ಅಚ್ಚರಿಯ ಸಂಗತಿಗಳು ಅವಿತು ಕೂತಿದೆ ಎಂದು ಜಗತ್ತಿಗೆ ಸಾರಿ ಹೇಳುವ ನಮ್ರತೆಯೂ ನಡೆಯುತ್ತಿರುತ್ತದೆ. ಹಾಗೆ ಡಾ. ಕೇಲ್ಕರ್ ಅವರ ನಾಲ್ಕು ಅಂತಸ್ತಿನ ಮ್ಯೂಸಿಯಂ ನಲ್ಲಿ ಎಲ್ಲವೂ ಬಂದು ಕೂತಿವೆ. ಕಳೆದು ಹೋಗಿ ರುವಂಥವು ಸಾವಿರಾರು ಇರಬಹುದು.ಆದರೆ ಅವೆಲ್ಲವುಗಳ ಪ್ರತಿನಿಧಿಗಳಂತೆ ಅಪೂರ್ವವಾಗಿ ‘ನಾವು ನೂರಾರು ವರ್ಷಗಳಿಂದ ಈ ಸಂಸ್ಕೃತಿಯ ರೂಪಕಗಳಾಗಿ ಉಳಿದು ಬಂದಿರುವಂಥವು’ ಎಂದು ಹೇಳುತ್ತಿರುವಂಥವು. ಒಂದು ಅಂತಸ್ತಿನ ವಿವಿಧ ವಿಶಾಲವಾದ ಕೊಠಡಿಗಳಲ್ಲಿ ವೈವಿಧ್ಯಮಯವಾದ ಪೂಜಾ ಸಾಮಾಗ್ರಿಗಳೇ ತುಂಬಿಕೊಂಡಿವೆ.

ಅವ್ಯಾವುವೂ ಗುಡಿಗುಡಿ ಪೂಜಾ ಸಾಮಾಗ್ರಿಗಳಲ್ಲ. ಕಲಾತ್ಮಕತೆಯನ್ನು ಮೈದುಂಬಿಕೊಂಡಿರುವಂಥವು. ಚಿಕ್ಕದರಿಂದ ದೊಡ್ಡದರ ತನಕ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವಂಥವು. ನಮ್ಮ ಒಡವೆಗಳಲ್ಲಿ ಯಾವ ಯಾವ ರೀತಿಯ ಕುಸುರಿ ಕೆಲಸಗಳಿವೆಯೋ ಅವುಗಳನ್ನೆಲ್ಲ ಪ್ರತಿನಿಧಿಸುವಂತೆ ಧುತ್ತನೆ ನಮಗೆ ಎದುರಾಗುತ್ತವೆ. ಎಂತೆಂಥ ಮನೆಗಳನ್ನು ಅಲಂಕರಿಸಿದ್ದುವೋ, ಎಂಥ ಸುಂದರವಾದ ಕೈಗಳಿಂದ ಪೂಜೆ ಮಾಡಿಕೊಂಡಿದ್ದವೋ, ಹಾಗೆಯೇ ಪೂಜೆ ಮಾಡುವ ಆ ಕೈಗಳು ಕಂಡುಂಡ ಸುಖ-ಸಂತೋಷ ಮತ್ತು ವಿಷಾದಕ್ಕೆ ಸಾಕ್ಷಿಭೂತವೆಂಬಂತೆ ಮೌನವಾಗಿ ಹೆಸರು ಪಡೆದು ಅಲ್ಲಲ್ಲಿ ಅಲಂಕಾರವಾಗಿ ಕೂತಿವೆ. ಇವುಗಳನ್ನೆಲ್ಲ ನೋಡುವಾಗ ಅಚ್ಚರಿಯಾಗದಿರದು.

ಯಾಕೆಂದರೆ ನೂರಾರು ದೇವರಿದ್ದಂತೆ;ಆ ದೇವರನ್ನು ದೇವತೆಗಳನ್ನು ಸಂತೃಪ್ತಿ ಪಡಿಸಲು ಸೃಷ್ಟಿಗೊಂಡ ಪೂಜಾ ಸಾಮಾಗ್ರಿಗಳು.ಕೊನೆಗೂ ಮನುಷ್ಯರು ತಮ್ಮ ಆನಂದಕ್ಕೆ ಏನೇನೋ ಕಂಡುಕೊಂಡರೂ; ಆ ಆನಂದದ ಉತ್ತುಂಗತೆಯನ್ನು ತಲುಪುದಕ್ಕೆ ನಡೆಸುವ ಕ್ರಿಯೆ ಇದೆಯಲ್ಲ; ಅದೇ ನಿಜವಾಗಿಯೂ ಪ್ರಸಾದ ಸ್ವರೂಪವಾದಂಥವು. ಹೀಗೆ ಇಂಥ ಸಾಮಗ್ರಿಗಳಿಂದ ಪೂಜಿಸುವಾಗ ಮನುಷ್ಯನ ಹುಚ್ಚು ಮನಸ್ಸಿನ ಕುಣಿತಗಳು ಯಾವ ಯಾವ ಘಟ್ಟವನ್ನು ತಲುಪಿರಬಹುದು ಎಂಬ ಭಾವನೆ ಬರದಿರದು. ಇದರ ಫಲಿತಾಂಶವಾಗಿ; ನಾವು ದೇವರನ್ನು ನಂಬದಿದ್ದರೂ; ‘‘ಅಯ್ಯ ದೇವರೇ ನೀನು ಪೂಜಿಸಿಕೊಳ್ಳುವ ಎಷ್ಟೊಂದು ಮುಖಗಳು’’ ಎಂಬ ಉದ್ಗಾರದ ನುಡಿ ಬಂದೇ ಬರುತ್ತದೆ.

ದೀಪಸ್ತಂಭಗಳಂತೂ ದೊಡ್ಡ ದೊಡ್ಡ ಪ್ರತಿಮೆಗಳಂತೆ ಅಲಂಕೃತಗೊಂಡಿರುವಂಥವು. ಅವುಗಳನ್ನು ನೋಡುವುದೇ ಒಂದು ವೈಭವ. ಇದಕ್ಕೆ ಹೊಂದಿಕೊಂಡ ಕೊಠಡಿಗಳಲ್ಲಿ ತಾಂಬೂಲದ ವಿವಿಧ ಸಾಮಗ್ರಿಗಳು.ಮನುಷ್ಯರು ಪೂಜೆ ಮಾಡಿದ ಮೇಲೆ, ಪ್ರಾರ್ಥನೆ ಮಾಡಿದ ಮೇಲೆ,ನಮಾಜ್ ಮಾಡಿದ ಮೇಲೆ ಸಂತೋಷವಾಗಿ ಊಟ ಮಾಡುವನು.ಆ ಊಟ ಅವನಿಗೆ ಅಥವಾ ಅವರಿಗೆ ಪರಿಪೂರ್ಣ ಅನ್ನಿಸುವುದು;ತಾಂಬೂಲದ ಮೂಲಕ.ಈ ತಾಂಬೂಲದ ಮುಂದುವರಿದ ಭಾಗವಾಗಿ ಏನೇನೋ ಸೇರಿಕೊಂಡಿರುತ್ತದೆ.ಸಾಮೂಹಿಕ ತಾಂಬೂಲವಿರಬಹುದು, ವೈಯುಕ್ತಿಕ ನೆಲೆಯಲ್ಲಿ ಪ್ರೀತಿ-ಪ್ರೇಮ ಮತ್ತು ಮನುಷ್ಯ ಸಂಬಂಧಗಳು ವಿಸ್ತರಿಸುವಂಥಹವು ಇರಬಹುದು.

ಅಂಥದ್ದನ್ನೆಲ್ಲ ನಾವು ನೂರಾರು ವರ್ಷಗಳಿಂದ ನೋಡುತ್ತ ಉಳಿದು ಬಂದಿದ್ದೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಅಲಂಕೃತಗೊಂಡು ಕೂತ ತಾಂಬೂಲದ ಕಲಾತ್ಮಕ ವಸ್ತುಗಳು. ಅಡಿಕೆಯನ್ನು ಕತ್ತರಿಸುವುದಕ್ಕೆ, ಕತ್ತರಿಸಿದ ಮೇಲೆ ಪುಡಿ ಮಾಡುವುದಕ್ಕೆ,ಪುಡಿ ಮಾಡಿದ ಮೇಲೆ ಎಲೆಗಳಲ್ಲಿ ಮಡಚಿ ಇಡುವುದಕ್ಕೂ ಸಾಮಾಗ್ರಿಗಳು.ಯಾವುದೂ ಸುಮ್ಮನೆ ಸೃಷ್ಟಿಯಾಗಿರುವುದಿಲ್ಲ.ಆ ಸೃಷ್ಟಿಗೆ ಒಂದು ಸೊಬಗು ಕಂಡುಕೊಂಡವರು. ಇದಕ್ಕೆ ಸಿದ್ಧರಾದ ಕಲಾವಿದರು, ಕಸುಬುದಾರರು. ಎಲ್ಲವೂ ಒಂದಕ್ಕೊಂದು ಅಂಟಿಕೊಂಡೇ ಬೆಳೆದಿರುತ್ತವೆ ಎಂಬುದೇ ಇಲ್ಲಿ ಅಪ್ರತಿಮವಾದದ್ದು.

ಏನೇ ಆಗಲಿ ಆ ತಾಂಬೂಲದ ಕೈಗಳನ್ನು ಆ ಕೈಗಳ ಬೆರಳಿನುಂಗುರಗಳನ್ನು ಹಾಗೆಯೇ ಇದರ ಮುಂದುವರಿದ ಭಾಗವಾಗಿ ಕೆಂಪಾದ ತುಟಿಗಳನ್ನು ಸಂಭ್ರಮಿಸುವ ಕ್ರಮವನ್ನು ತುಂಟತನದಿಂದ ಯೋಚಿಸುವುದಕ್ಕೂ ಎಷ್ಟು ಸಾಮಗ್ರಿ ದೊರಕುವುದು. ನಮ್ಮ ಒಟ್ಟು ಜನ ಸಮುದಾಯವು ನಾನಾ ರೀತಿಯ ಕಷ್ಟ ಕಾರ್ಪಣ್ಯಗಳ ನಡುವೆ ಸುಖದ ಕ್ಷಣಗಳಿಗಾಗಿ ಹುಡುಕಾಡುವುದಿದೆಯಲ್ಲ ಅದೇ ನಿಜವಾಗಿಯೂ ಜೀವಂತವಾಗಿರುವಂಥದ್ದು.ಆದ್ದರಿಂದಲೇ ಆಯಾ ಹಂತಕ್ಕೆ ತಕ್ಕಂತೆ ಪೂರಕ ಸಾಮಾಗ್ರಿಗಳು ಸೃಷ್ಟಿಯಾಗುವಂಥವು.ಮತ್ತೊಂದು ವಿಶಾಲವಾದ ಅಂತಸ್ತಿನಲ್ಲಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಬಳಕೆಯಾಗುತ್ತ ಬಂದ ಸಾಮಾಗ್ರಿಗಳ ನೋಟ.

ಒಂದೊಂದು ಪ್ರದೇಶದ, ಜನಾಂಗದ ಪ್ರತೀಕಗಳಾಗಿ ಇರುವಂಥವು. ದವಸ ಧಾನ್ಯಗಳನ್ನು ವಿವಿಧ ರೀತಿಯಲ್ಲಿ ಸಂಗ್ರಹಿಸಿಡಲು ಬಳಸಬಹುದಾದ ವಿವಿಧ ಸ್ವರೂಪದ ಗುಡಾಣಗಳು. ರೈತರು ಕೃಷಿಗೆ ಉಪಯೋಗಿಸುತ್ತಿದ್ದ ಸಲಕರಣೆಗಳು. ಇವುಗಳಲ್ಲಿಯೂ ಕಾಲಕಾಲಕ್ಕೆ ಬೆಳೆದು ಬಂದಿರುವಂಥವನ್ನು ನೋಡಬಹುದು. ಹಾಗೆಯೇ ನೊಗಗಳ ವೈವಿಧ್ಯಮಯತೆ. ಕಲಾತ್ಮಕ ಕಂಚು ಮತ್ತು ತಾಮ್ರದ ಪಾತ್ರೆಗಳು.ಇವುಗಳಲ್ಲಿ ಕಬ್ಬಿಣವೂ ಕೂಡ. ಯಾವುವೂ ಸುಮ್ಮನೆ ಸೃಷ್ಟಿಯಾಗಿಲ್ಲ.ಅವುಗಳು ರೂಪ ಮತ್ತು ಆಕಾರವನ್ನು ತುಂಬಿಕೊಂಡೇ ಹುಟ್ಟಿಕೊಂಡಿವೆ ಎಂಬುದು ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆಯೆನ್ನಬಹುದು.ನೆಲಮಹಡಿಯ ಮೂಲೆಯ ಕೊಠಡಿಗಳಂತೂ ವೈಭವದಿಂದ ಕೂಡಿರುವಂಥವು.

ನೂರಾರು ರೀತಿಯ ಸಂಗೀತದ ಕಲಾತ್ಮಕ ಸಲಕರಣೆಗಳು. ಶತಮಾನಗಳಿಂದ ಶೃತಿ ಮತ್ತು ಲಯಗಳಿಗೆ ತಕ್ಕಂತೆ ಸುಧಾರಣೆಯಾಗುತ್ತ ಬಂದಂಥವು. ಎಂತೆಂಥವರೋ ಮಹಾನ್ ಸಂಗೀತ ಕಲಾವಿದರ ಬೆರಳುಗಳ ಚಳಕಕ್ಕೆ ಮತ್ತು ನುಡಿಯ ನಾದಮಯತೆಗೆ ಒಗ್ಗಿಕೊಂಡು ಮುಂದುವರಿಯುತ್ತ ಸಾಗಿರುವಂಥವು.ಅವುಗಳನ್ನು ನೋಡುವುದಕ್ಕೆ, ಚಿಂತಿಸುವುದಕ್ಕೆ ವ್ಯಾಖ್ಯಾನಿಸುವುದಕ್ಕೆ ಪೂರಕವಾಗಿ ಒಂದೆಡೆ ಇರುವಂಥವು. ಎಲ್ಲ ಸಂಗೀತದ ಸಲಕರಣೆಗಳು ಸೇರಿ ವಾದ್ಯಗಳಗೋಷ್ಠಿಗಳನ್ನು ನಡೆಸುತ್ತಿವೆ ಎಂಬ ಭಾವನೆ ಬರುವಂತೆ ಶೇಖರಗೊಂಡಿವೆ.

ಇವುಗಳನ್ನೆಲ್ಲ ನೋಡುತ್ತ ಹೋದಂತೆ ಇನ್ನೂ ನೋಡುವಂಥವು ಎಷ್ಟೊಂದು ಇರಬಹುದು ಎಂಬ ಭಾವನೆ ಬಂದೇ ಬರುತ್ತದೆ. ಯಾಕೆಂದರೆ ಡಾ. ಕೇಲ್ಕರ್ ಅವರ ಕುಟುಂಬಕ್ಕೆ ಕಾಣದ ವಸ್ತುಗಳು ಈ ಜನಸಮುದಾಯದ ನಡುವೆ ನಾಪತ್ತೆಯಾಗಿರಲು ಸಾಧ್ಯವಿರುತ್ತದೆ. ಈ ಸಮಾಜ ಕಂಡ ಕಷ್ಟಗಳೆಷ್ಟು, ಯುದ್ಧಗಳು, ದರೋಡೆಗಳು ಹಾಗೂ ಪ್ರಕೃತಿಯ ವಿಕೋಪಗಳು, ಆದರೂ ಎಲ್ಲ ಜನಾಂಗಗಳು ನಾಗರಿಕತೆಯನ್ನು ಹುಡುಕುತ್ತಲೇ ತಮ್ಮ ಮಾನಸಿಕ ರಕ್ಷಣೆಯ ನೆಲೆಗಳಿಗಾಗಿ ನಿರಂತರ ಹೋರಾಟವನ್ನು ನಿಲ್ಲಿಸಿಲ್ಲ. ಇಂಥ ಹೋರಾಟಗಳನ್ನು ಜೀವಂತವಾಗಿಡುವುದಕ್ಕಾಗಿಯೇ ಇತಿಹಾಸದ ಸಂಗತಿಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಅಂಥ ಸಾಮಾಜಿಕ ಇತಿಹಾಸವನ್ನು ವಿನಮ್ರತೆಯಿಂದ ನಮಗಾಗಿ ಕಾಪಾಡಿ ಒಂದೆಡೆ ಅಚ್ಚುಕಟ್ಟಾಗಿ ಇಟ್ಟಿರುವ ಡಾ. ಕೇಲ್ಕರ್ ಅವರಿಗೆ ಅವರ ಕುಟುಂಬಕ್ಕೆ ನಮಸ್ಕರಿಸಿ ಹೊರಗೆ ಬಂದೆವು. ಇಷ್ಟಾದರೂ ಇನ್ನೂ ನೋಡುವುದು ಬೇಕಾದಷ್ಟಿದೆ. ಮತ್ತೊಮ್ಮೆ ಬರಬೇಕು ಅನ್ನಿಸಿತು.ಮ್ಯೂಸಿಯಂನಿಂದ ಹೊರಗೆ ಬಂದಾಗ; ಅಲ್ಲಿದ್ದ ಸ್ವಲ್ಪ ಬಯಲಿನಲ್ಲಿ ಅಬ್ದುಲ್ ಖಾದರ್ ಎಂಬ ವ್ಯಕ್ತಿ ನೂರಾರು ಕಂಚಿನ, ತಾಮ್ರದ ಮತ್ತು ಹಿತ್ತಾಳೆಯ ಕಲಾತ್ಮಕ ವಸ್ತುಗಳನ್ನು ರಾಶಿ ಹಾಕಿಕೊಂಡಿದ್ದ. ಆತನಿಗೆ ಆತನ ಕುಟುಂಬವು ಸಹಕಾರಿಯಾಗಿ ನಿಂತಿತ್ತು. ಎಲ್ಲೆಲ್ಲೋ ಗುಜರಿ ಮಾಲುಗಳನ್ನು ತಂದು ಪ್ರದರ್ಶನಕ್ಕಿಡುವುದು ಮತ್ತು ಮಾರುವುದು.

ಬೇರೆ ಬೇರೆ ರಾಜ್ಯಗಳಲ್ಲಿ ಪ್ರದರ್ಶನದ ದಿನಾಂಕಗಳನ್ನು ತಿಳಿಸಿದ.ಅವರ ವಂಶವೇ ಈ ರೀತಿಯ ವೃತ್ತಿಯನ್ನು ಮುಂದುವರೆಸಿಕೊಂಡು ಬಂದವರು.ನಾನು ಕಂಚಿನ ದೊಡ್ಡ ದೀಪಸ್ತಂಭವನ್ನು ಕೊಂಡುಕೊಂಡೆ.ಬೆಂಗಳೂರಿಗೆ ಬರುವ ದಿನಾಂಕವನ್ನು ತಿಳಿಸಿದ.ವಿಸಿಟಿಂಗ್ ಕಾರ್ಡ್ ಕೊಟ್ಟ.ನನ್ನ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡ. ಅವರೆಲ್ಲರಿಗೂ ನಮಸ್ಕರಿಸಿ ಆಗಖಾನ್ ಅರಮನೆಯತ್ತ ನಡೆದೆ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್