ಅಂಕಣ

mail-img print-img

ಯುನೆಸ್ಕೊ ಸ್ಥಾನಮಾನದ ಸುತ್ತ...

ಮಂಗಳವಾರ - ಜುಲೈ -17-2012

ಪಶ್ಚಿಮ ಘಟ್ಟದ 39 ತಾಣಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಗೆ ಸೇರಿಸಿರುವ ಬಗ್ಗೆ ಈಗ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ನಮ್ಮ ಕಡೆ ಒಂದು ಗಾದೆ ಇದೆ. ‘ಅತ್ತೆನ ಮಾವಂಗೇ ದಾನ ಮಾಡಿದಂಗೆ’ ಅಂತ. ಹಾಗೆ ಮಾಧ್ಯಮಗಳಲ್ಲಿ ಇವತ್ತು ವಿದೇಶದ ದುಡ್ಡಿನ ಆಸೆಗೆ ಪರಿಸರ ಬಗ್ಗೆ ಮಾತನಾಡುವವರು, ಸರ್ಕಾರದ ಪ್ರತಿನಿಧಿಗಳು ಎಲ್ಲ ತಮ್ಮಷ್ಟಕ್ಕೆ ತಾವೇ ಇದು ಸರಿಯೋ, ತಪ್ಪೋ ಅಂತ ಚರ್ಚೆ ಮಾಡ್ತಾ ಇದ್ದಾರೆ. ಯಾರೂ ಸ್ಥಳೀಯರು ಏನೆನುತ್ತಾರೆ, ಅವರ ಅಭಿಪ್ರಾಯ ಏನು ಅಂತ ಕೇಳ್ತಾನೇ ಇಲ್ಲ.ರಾಜ್ಯದ ಹತ್ತು ತಾಣಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಿದ್ದು ಇದ್ದಕ್ಕಿದ್ದ ಹಾಗೆ ನಡೆದ ಪ್ರಕ್ರಿಯೆಯೇನೂ ಅಲ್ಲ. ಹೋದ ವರ್ಷವೇ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸ್ಥಳೀಯರು ವಿರೋಧಿಸಿದ್ದು ಆಗಿತ್ತು. ಆದರೆ ಅವತ್ತು ನಾವು ಎತ್ತಿದ ಯಾವ ಪ್ರಶ್ನೆಗೂ ಉತ್ತರ ಕೊಡದೇ ಕೇಂದ್ರ ಸರಕಾರ ಮತ್ತೊಮ್ಮೆ ಈ ಬಗ್ಗೆ ಪ್ರಸ್ತಾಪವನ್ನು ಕಳಿಸಿ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ.

ಹೋಗಲಿ ಈಗಲಾದರೂ ಸ್ಪಷ್ಟವಾಗಿ ಎಲ್ಲ ವಿಷ ಯಗಳನ್ನು ಪಾರದರ್ಶಕವಾಗಿ ಜನರ ಮುಂದಿಡು ತ್ತಿದೆಯೇ ಎಂದು ನೋಡಿದ್ರೆ, ಅದೂ ಇಲ್ಲ. (ಮಾಧವ್ ಗಾಡ್ಗೀಳ್ ನೇತೃತ್ವದ ತಂಡ ಪಶ್ಚಿಮ ಘಟ್ಟದ ಬಗ್ಗೆ ನೀಡಿರುವ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಎಷ್ಟೆಲ್ಲಾ ಹೋರಾಟ ಮಾಡಬೇಕಾಗಿ ಬಂದಿತು ಎಂಬು ದು ಎಲ್ಲರಿಗೂ ಗೊತ್ತಿದೆ ಅಂದುಕೊಳುತ್ತೇನೆ)

ತುಂಬಿದ ಕುಟುಂಬದಲ್ಲಿ ಏನಾದ್ರೂ ವಿಶೇಷವಾದ ಕೆಲ್ಸವನ್ನು ಹೇಳಿದಾಗ ಕಿರಿಮಗ ಕೊಸರಾಡುತ್ತಾನಲ್ಲ, ‘ಅದು ನಂಗಾಗಲ್ಲ, ಇದನ್ನು ಕೊಟ್ರೆ ಅದನ್ನ ಮಾಡ್ತೀನಿ, ನಾನಂತೂ ಮಾಡೋಲ್ಲ’ ಅಂತ. ಹಂಗೆ ನಮ್ಮ ರಾಜ್ಯ ಸರಕಾರ ಈಗ ವಿರೋಧವೇನೋ ಮಾಡ್ತಾ ಇದೆ. ಯಜಮಾನ ಗದರಿಸುವವರೆಗೂ ಈ ಕೊಸರಾಟ ನಡೀಬಹುದು. ಹಾಗಾಗಿ ಸರಕಾರದ ಈ ವಿರೋಧ ಎಲ್ಲಿಯವರೆಗೆ, ಎಷ್ಟು ದಿನ ನೆಡೆಯುತ್ತೆ ಅಂತ ಹೇಳೋಕ್ಕಾಗಲ್ಲ. ಅಲ್ಲದೆ ಈಗ ವಿರೋಧ ಮಾಡ್ತಾ ಇರೋ ರಾಜ್ಯ ಸರಕಾರವೇ ನಮ್ಮಲ್ಲಿ (ಕುದುರೆಮುಖ ಅಭಯಾರಣ್ಯದಲ್ಲಿ) ತಲೆ-ಬುಡವಿಲ್ಲದ ಹುಲಿ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಕೊನೆಗೆ ಎಲ್ಲದಕ್ಕೂ ತಲೆಕೊಡ ಬೇಕಾದವರು ನಾವೇ...ಅಂದ್ರೆ ಸ್ಥಳೀಯರೇ.

ಯುನೆಸ್ಕೊ ನೀಡಿರುವ ಈ ಮಾನ್ಯತೆ ಯನ್ನು ಮುಂದಿಟ್ಟುಕೊಂಡು ವಿದೇಶಿ ಹಣದಲ್ಲಿ ನಡೆಯುವ ಎನ್‌ಜಿಒಗಳವರು ಮಾತ್ರ ಜನತೆಯನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಲೇ ಇದ್ದಾರೆ. ಯಾವ ಪತ್ರಿಕೆ ನೋಡಿದರೂ ಅವರದ್ದೇ ಅಭಿಪ್ರಾಯ. ಸ್ಥಳೀಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಂಗ್ಲಿಷ್ ಪತ್ರಿಕೆಗಳು ಪರಿಸರದ ಬಗ್ಗೆ ಏನಾದರೂ ಚರ್ಚೆ ನಡೆಯುವಾಗ ಎನ್‌ಜಿಒ ಗಳ ಅಭಿಪ್ರಾಯವನ್ನಷ್ಟೇ ಪ್ರಕಟಿಸುತ್ತವೆ. ಈ ರೋಗ ಈಗ ಕನ್ನಡದ ರಾಜ್ಯಮಟ್ಟದ ಪತ್ರಿಕೆಗಳಿಗೂ ಬಂದಂತಿದೆ.

ಯುನೆಸ್ಕೊ ಈ ರೀತಿಯ ಮಾನ್ಯತೆ ನೀಡು ತ್ತಿರುವುದು ಹೊಸದೇನೂ ಅಲ್ಲ. ನಮ್ಮ ಹಂಪಿಗೇ ಈ ಮಾನ್ಯತೆ ದೊರಕಿದೆ. ಈಗಾಗಲೇ ನಮ್ಮ ದೇಶದಲ್ಲಿ ಐದು ನೈಸರ್ಗಿಕ ತಾಣಗಳೂ ಈ ಮಾನ್ಯತೆ ಪಡೆದಿವೆ. ಹೀಗಿರುವಾಗ ಇದರಿಂದ ಏನಾಗುತ್ತದೆ, ಒಳ್ಳೆಯದೋ, ಕೆಟ್ಟದೋ ಎಂಬು ದನ್ನು ತಿಳಿಯಲು ಕಷ್ಟಪಡಬೇಕಾಗಿಲ್ಲ. ಹಾಗೆಯೇ ಈ ವಿದೇಶಿ ಏಜೆಂಟರು ಹೇಳುವ ಮಾತನ್ನು ಸಂಪೂರ್ಣವಾಗಿ ನಂಬಬೇಕಾಗಿಯೂ ಇಲ್ಲ. ಅಲ್ಲವೇ?

ಹಂಪಿಯ ಕತೆ ನೋಡೋಣ, 1986 ರಲ್ಲಿಯೇ ಇದನ್ನು ಪಾರಂಪರಿಕ ಪಟ್ಟಿಗೆ ಸೇರಿಸಲಾಗಿತ್ತು. 1999ರಲ್ಲಿ ಸ್ಥಳೀಯ ಜನರು ಓಡಾಡಲೆಂದು ಆನೆಗುಂದಿ ಸೇರಿದಂತೆ ಎರಡು ಸೇತುವೆಗಳನ್ನು ನಿರ್ಮಿಸಲು ನಮ್ಮ ರಾಜ್ಯ ಸರಕಾರ ನಿರ್ಧರಿಸುತ್ತಿದ್ದಂತೆಯೇ ಯುನೆಸ್ಕೊ ಏನು ಮಾಡಿತು? ಹಂಪೆಯನ್ನು ‘ಡೇಂಜರ್ ಲೀಸ್ಟ್’ ಗೆ ಸೇರಿಸಿತು. ಆಮೇಲೆ ಸರಕಾರ ಹಂಪಿಯನ್ನು ಈ ಪಟ್ಟಿಯಿಂದ ಹೊರಗಿಡುವಂತೆ ಮಾಡಲು ಏನೆಲ್ಲಾ ಸರ್ಕಸ್ ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಆನೆಗುಂದಿ ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಏಕೆ ನಡೆಯಿತು? ಅದು ಬಿದ್ದಿದ್ದೇಕೆ, ಎಲ್ಲ ಈ ನಾಟಕ ನೋಡಿದವರಿಗೆ ಅರ್ಥವಾಗುವಂತದ್ದೇ. 2006ರಲ್ಲಿ ಹಂಪೆಯನ್ನು ಡೇಂಜರ್ ಪಟ್ಟಿಯಿಂದ ಹೊರಗಿಡಲಾಯಿತು. 2009ರಲ್ಲಿ ಆನೆಗುಂದಿ ಸೇತುವೆಯೂ ಬಿದ್ದು ಹೋಯಿತು. ಆಮೇಲೆ ನಿರಂತರವಾಗಿ ಈ ಸೇತುವೆಯ ಅವಶೇಷಗಳನ್ನು ತೆಗೆದು ಹಾಕುವಂತೆ ಯುನೆಸ್ಕೊ ಸೂಚಿಸುತ್ತಲೇ ಬಂದಿದೆ. ಈ ಬಗ್ಗೆ ಅನುಮಾನವಿದ್ದವರು ಯುನೆಸ್ಕೊದ ವೆಬ್‌ಸೈಟ್‌ನಲ್ಲಿರುವ 2010 ಮತ್ತು 2011ರ ಡಿಶಿಷನ್‌ಗಳನ್ನು ನೋಡಬಹುದು.

ಇಷ್ಟೇ ಅಲ್ಲ, ಹಂಪಿಯಲ್ಲಿನ ವಸತಿ ಹೀನರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರಕಾರ ಹೊರಟಿದ್ದರೆ ಅದನ್ನು ಯುನೆಸ್ಕೊ ಕಾನೂನು ಬಾಹಿರ ಕ್ರಮಗಳು ಎಂದು ಅದನ್ನು ಜಾರಿಗೆ ತರದಂತೆ ಸೂಚನೆ ನೀಡಿದೆ. Stop illegal constructions within the property and the buffer zone area (namely in Hampi Village and Virupapura Gada Island), and control and manage other planned developments, such as social housing projects, to ensure that they do not have a negative impact on the integrity of the landscape;-  Decision - 34COM 7B.67 - Group of Monuments at Hampi (India) (C 241) ) ಸಾಮಾಜಿಕ ವಸತಿ ಯೋಜನೆಗಳನ್ನು ಜಾರಿಗೆ ತರಬೇಡಿ ಎಂದರೆ ಅಲ್ಲಿರುವವರ ಗತಿ ಏನು?

ಈ ಸೂಚನೆ ಪಾಲಿಸದೇ ಇದ್ದಲ್ಲಿ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಹೋಗುತ್ತದೆಯೆಂದೂ ಒತ್ತಡ ಬಾರದೇ ಇರು ತ್ತದೆಯೇ? ಹಂಪಿಯ ಅವಶೇಷಗಳು ಉಳಿಯ ಬೇಕು ನಿಜ, ಆದೇ ರೀತಿಯಾಗಿ ಅಲ್ಲಿಯೇ ತಲತಲಾಂತರಗಳಿಂದ ಅವುಗಳೊಂದಿಗೇ ಬಾಳಿ ಬದುಕಿದವರಿಗೆ ಬದುಕುವ ಹಕ್ಕೂ ಕೂಡ ಇರಬೇಕು ತಾನೆ?

ಹಂಪಿಯಂತೆ ಅಸ್ಸಾಂನ ‘ಕಾಜಿರಂಗ ರಾಷ್ಟ್ರೀಯ ಉದ್ಯಾನವನ’ವೂ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದರ ದಕ್ಷಿಣ ತುದಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ನ್ನು ಅಪ್‌ಗ್ರೇಡ್ ಮಾಡುವುದು ಸ್ಥಳೀಯರ ಹಿತದೃಷ್ಟಿ ಯಿಂದ ಅನಿವಾರ್ಯವಾಗಿತ್ತು. ಅದಕ್ಕೂ ಯುನೆಸ್ಕೊ ಕಲ್ಲು ಹಾಕಿದೆ. ಕೊನೆಗೆ ಅಸ್ಸಾಂ ಸರಕಾರ ಈ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಹಾಕಿ ಕೊಂಡ ಯೋಜನೆಗಳನ್ನೆಲ್ಲಾ ಕೈಬಿಟ್ಟಿತು. ಈಗ ಈ ಉದ್ಯಾನವನದ ಸಮೀಪವಿರುವ ಕರ್ಬಿ ಪರ್ವತ ಶ್ರೇಣಿಯನ್ನು ಹೇಗೆ ಕಾಪಾಡಬೇಕು, ಸುತ್ತಮುತ್ತ ಏನೆಲ್ಲಾ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸುತ್ತಿದೆ.

ಈ ಉದ್ಯಾನವನವನ್ನು ಯುನೆಸ್ಕೊ ಪಟ್ಟಿಗೆ ಸೇರಿಸಿದ್ದರಿಂದ ಪ್ರವಾಸೋದ್ಯಮ ಮಾತ್ರ ಜೋರಾಗಿ ಬೆಳೆಯುತ್ತಿದೆ. 2004-05ನೆ ಸಾಲಿ ನಲ್ಲಿ 74 ಸಾವಿರ ಪ್ರವಾಸಿಗರು ಇಲ್ಲಿಗೆ ಬಂದಿ ದ್ದರು. 2009-10ನೆ ಸಾಲಿನಲ್ಲಿ ಈ ಸಂಖ್ಯೆ 1.15 ಲಕ್ಷಕ್ಕೆ ಏರಿದೆ. ಇವರ ಅನುಕೂಲಕ್ಕಾಗಿ 32 ಹೊಟೇಲ್‌ಗಳಾಗಿವೆ. ಸ್ಥಳೀಯರು ಅವರ ಸೇವೆಯನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಥೈಲೆಂಡ್‌ನ ಸ್ಥಿತಿ ಅಲ್ಲಿ ನಿರ್ಮಾಣವಾಗುತ್ತಿದೆ.

1974ರಲ್ಲಿ ನಡೆದ ಚಿಪ್ಕೋ (ಅಪ್ಪಿಕೋ) ಚಳವಳಿ ಬಗ್ಗೆ ನಿಮಗೆ ಗೊತ್ತೇ ಇದೆ. ಉತ್ತರಾಂಚಲದ ರೇನಿ ಮತ್ತು ಲಾಟಾ ಹಳ್ಳಿಗಳ ಜನರು ಅರಣ್ಯ ಕಡಿಯಲು ಬಂದ ಸರಕಾರವನ್ನು ಹಿಮ್ಮೆಟ್ಟಿಸಿದ್ದರು. ಗೌರಿದೇವಿ ಎಂಬಾಕೆಯ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಸ್ಥಳೀಯರು ಮರವನ್ನು ಬಿಗಿಯಾಗಿ ಅಪ್ಪಿಕೊಂಡು ಕಡಿಯಲು ಬಂದ ಸರಕಾರಿ ಪಡೆಯನ್ನು ಓಡಿಸಿದ್ದರು. ಈ ಪ್ರದೇಶ ನಂದಾದೇವಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರುತ್ತದೆ. ಇದೂ ಕೂಡ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ. ಇದರಿಂದಾಗಿ ಅಲ್ಲಿ ಅಂದು ಯಾರು ಕಾಡನ್ನು ಉಳಿಸಿದ್ದರೋ ಅವರೇ ಕಾಡಿಗೆ ಹೋಗುವಂತಿಲ್ಲ ಎಂಬ ಕಾನೂನನ್ನು ನಮ್ಮ ಸರಕಾರ ಜಾರಿಗೆ ತಂದಿತ್ತು.

ಕೊನೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅವರ ಕಾಡಿನ ಮೇಲಿನ ಹಕ್ಕನ್ನು ಎತ್ತಿ ಹಿಡಿಯಬೇಕಾಯಿತು. ಈಗ ಅಲ್ಲಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಅಂದು ಕಾಡು ಉಳಿಸಿ ದವರು ಇಂದು ಪ್ರವಾಸಿಗರಿಗೆ ಕಾಡು ತೋರಿ ಸುವ ಕೆಲಸ ಮಾಡಿ ಜೀವನ ಸಾಗಿಸ ಬೇಕಾದ ಪರಿಸ್ಥಿತಿ ಇದೆ. ಇದನ್ನು ಯುನೆಸ್ಕೊ ಉತ್ತೇಜಿಸು ತ್ತಿದ್ದು, ಸ್ಥಳೀಯರಿಗೆ ಇಕೋ ಟೂರಿಸಂ ಬಗ್ಗೆ, ರಾಕ್ ಕ್ಲೈಂಬಿಂಗ್ ಬಗ್ಗೆ ಮಾಹಿತಿ ಕೊಡಿ ಅಂತ ಉತ್ತರಾಂಚಲ ಸರಕಾರಕ್ಕೆ ಸಲಹೆ ಸೂಚನೆ ನೀಡುತ್ತಿದೆ!

ಇವನ್ನೆಲ್ಲಾ ಇಲ್ಲಿ ಏಕೆ ಪ್ರಸ್ತಾಪ ಮಾಡಿದ್ದೇನೆ ಎಂದರೆ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾದರೆ ಅನುಕೂಲವೂ ಇಲ್ಲ, ಅನಾನೂಕೂಲವೂ ಇಲ್ಲ. ಇದು ಬರೀ ಮಾನ್ಯತೆ ಮಾತ್ರ ಎಂದು ಎನ್‌ಜಿಒಗಳವರು ವಾದಿಸುತ್ತಿರುವುದು ಹಸಿ ಹಸಿ ಸುಳ್ಳು ಎಂಬುದನ್ನು ಎತ್ತಿ ತೋರಿಸಲು. ಯುನೆಸ್ಕೊ ಎಂದರೆ ಹಣಕೊಡುವ, ಆಡಳಿತ ನಡೆಸುವ ಸಂಸ್ಥೆ ಅಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಪಾರಂಪರಿಕ ಪಟ್ಟಿಯಲ್ಲಿರುವ ಸ್ಥಳಗಳ ರಕ್ಷಣೆಗೆ ಅದು ದೇಣಿಗೆ ನೀಡುತ್ತದೆ. ನಮ್ಮ ಹಂಪೆಗೇ ಇದುವರೆಗೆ ಒಟ್ಟು 109.740 ಅಮೆರಿಕನ್ ಡಾಲರ್ ನೀಡಿದೆ. ಇದು ಹೇಗೆ, ಯಾವುದಕ್ಕೆ ಬಳಕೆಯಾಗಿದೆಯೋ ವಿರೂಪಾಕ್ಷಗೇ ಗೊತ್ತು.

ವಿದೇಶಿ ದುಡ್ಡಿನಾಸೆಗಾಗಿ ಪರಿಸರದ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಎನ್‌ಜಿಒಗಳು ಇದರ ಪರ ವಕಾಲತ್ತು ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಇದರಿಂದ ನೇರವಾಗಿ ದುಡ್ಡು ಬಾರದೇ ಇರಬಹುದು. ಆದರೆ ಯುನೆಸ್ಕೊ, ಪರಿಸರ ರಕ್ಷಣೆಗೆ ಹಣ ಕೊಡುವ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪರಿಸರ ರಕ್ಷಣೆಯ ನಾಟಕವಾಡುವ ಈ ಎನ್‌ಜಿಒಗಳ ನಡುವಿನ ದಳ್ಳಾಳಿಯಂತೆ ಕೆಲಸ ಮಾಡುತ್ತದೆ.

ಉದಾಹರಣೆಗೆ 2008ರಲ್ಲಿ ಯುನೆಸ್ಕೊ ‘ವರ್ಲ್ಡ್ ಹೆರಿಟೇಜ್ ಬಯೋಡೈವರ್ಸಿಟಿ ಪ್ರೋಗ್ರಾಂ ಪಾರ್ ಇಂಡಿಯಾ’ (ಏಆಐ) ಎಂಬ ಯೋಜನೆ ಜಾರಿಗೆ ತಂದಿತ್ತು. ಇದರಡಿ ಅಸ್ಸಾಂನ ಮಾನಸ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಬಹುಕಾಲ ನಿರ್ವಹಿಸುವ ಹಾಗೂ ರಕ್ಷಿಸುವ ತಂತ್ರಗಾರಿಕೆ ರೂಪಿಸಲು ಬೆಂಗಳೂರಿನ ಏಟ್ರಿ ಎಂಬ ಎನ್‌ಜಿಒಗೆ 6,42,180 ಅಮೆರಿಕನ್ ಡಾಲರ್ ನೀಡಿದೆ. ಈ ಹಣ ಎಲ್ಲಿಂದ ಬಂತು ಗೊತ್ತೇ, ಫೋರ್ಡ್ ಫೌಂಡೇಷನ್ ಮತ್ತು ಎಸ್.ಎಂ.ಸೆಹಗಲ್ ನೀಡಿದ್ದು! ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವ ಕಾಜಿರಂಗ ನ್ಯಾಷನಲ್ ಪಾರ್ಕ್ ರಕ್ಷಿಸಲು ಬೆಂಗಳೂರಿನ ಎನ್‌ಜಿಒಗೆ ಜವಾಬ್ದಾರಿ ವಹಿಸಲಾಗುತ್ತದೆ. ಸ್ಥಳೀಯರಿಗೆ ಇಲ್ಲದ ತಿಳುವಳಿಕೆ ಈ ಎನ್‌ಜಿಒನ ತಜ್ಞರಿಗೆ ಅದೇನಿದೆಯೋ... ಈ ವರ್ಷವೂ ಅಲ್ಲಿ ಪ್ರವಾಹಕ್ಕೆ ಸಿಲುಕಿ 560 ಪ್ರಾಣಿಗಳು ಸತ್ತಿವೆ. ಇದಕ್ಕೆ ಫೋರ್ಡ್ ಫೌಂಡೇಷನ್ ದುಡ್ಡು ನೀಡುತ್ತದೆ, ಈ ಯೋಜನೆ ಜಾರಿಗೆ ಬರುವುದು ಯುನೆಸ್ಕೊದಿಂದ! ಇದೇ ಏಟ್ರಿ ಸಂಸ್ಥೆ ನೀಡಿರುವ ವರದಿಯನ್ನು ಆಧರಿಸಿಯೇ ಈಗ ನಮ್ಮ ಪಶ್ಚಿಮ ಘಟ್ಟಕ್ಕೂ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ದೊರಕಿರುವುದು. ಬಹುಶಃ ಅವರಿಗೇ ಹೆಚ್ಚಿನ ಪ್ರಾಜೆಕ್ಟ್‌ಗಳು ದೊರೆಯುವಂತೆ ಕಾಣುತ್ತಿದೆ. ಇದಕ್ಕೇ ಮಾನ್ಯ ಸಂಜಯ್ ಗುಬ್ಬಿಯವರು ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಈ ಎನ್‌ಜಿಒ ವಿರುದ್ಧ ಕೆಂಡ ಕಾರಿಕೊಂಡಿರುವುದು!

ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸುವ ಸಂದಭರ್ದಲ್ಲಿ ಇದರ ಹಿಂದಿರುವ ಸಾಮ್ರಾಜ್ಯಶಾಹಿಗಳ ಕುತಂತ್ರವನ್ನು ಹೇಳಿಕೊಂಡೇ ಬಂದಿದ್ದೇವೆ. ಆದರೂ ಉದ್ಯಾನವನ ಆಯಿತು. ಈಗ ಅದರ ಮುಂದುವರೆದ ಭಾಗವಾಗಿ ಈ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.ಗಿರಿಜನರನ್ನು ಎತ್ತಂಗಡಿ ಮಾಡಲಾಗುತ್ತದೆ, ಜೀವ ವೈವಿಧ್ಯತೆಯ ಲೂಟಿಯಾಗುತ್ತದೆ, ಪ್ರವಾಸೋದ್ಯಮಕ್ಕೆ ಆದ್ಯತೆ ದೊರೆಯುತ್ತದೆ, ಔಷಧಿ ಸಸ್ಯಗಳ ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕನ್ನು ಸ್ಥಳೀಯರು ಕಳೆದುಕೊಳ್ಳಬೇಕಾಗುತ್ತದೆ ಎಂಬ ನಾಲ್ಕು ಕಾರಣಗಳಿಂದ ನಾವು ಮುಖ್ಯವಾಗಿ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿದ್ದೆವು. ಅವೇ ಕಾರಣಗಳನ್ನು ಮುಂದಿಟ್ಟು ಕೊಂಡು ಈಗಲೂ ಈ ಮಾನ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ.

ಪರಿಸರವಾದಿ ಪಾಂಡುರಂಗ ಹೆಗಡೆಯವರು ತಮ್ಮ ಲೇಖನವೊಂದರಲ್ಲಿ ಈ ಮಾನ್ಯತೆಯನ್ನು ‘ಭಾರತ ರತ್ನ’ಕ್ಕೆ ಹೋಲಿಸಿದ್ದಾರೆ. ‘ಭಾರತ ರತ್ನ’ ಕೊಡಲಿ ಸಂತೋಷ. ಆದರೆ ನಿಮಗೆ ಈ ಪ್ರಶಸ್ತಿ ದೊರೆತಿರುವುದರಿಂದ ನೀವು ಹೀಗೇ ಮಾತಾಡಬೇಕು, ಇಷ್ಟೇ ತಿನ್ನಬೇಕು, ನಾವು ಹೇಳಿದ ಕಾರ್ಯಕ್ರಮಗಳಿಗೆ ಮಾತ್ರ ಹೋಗಬೇಕು, ಅಲ್ಲಿ ಹೀಗೆಯೇ ವರ್ತಿಸಬೇಕು ಎಂದೆಲ್ಲಾ ಕಟ್ಟು-ಪಾಡು ವಿಧಿಸುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.

ರಾಜ್ಯದ ಹತ್ತು ತಾಣಗಳು ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಯಾವುದಕ್ಕೆಲ್ಲಾ ಅಡ್ಡಿಯಾಗುತ್ತದೆ, ಸ್ಥಳೀಯರು ಯಾವ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸುತ್ತಾ ಹೋದರೆ ಅದೇ ದೊಡ್ಡ ಲೇಖನವಾದೀತು. ಸರಳವಾಗಿ ಒಂದೇ ಉದಾಹಣೆ ನೀಡುತ್ತೇನೆ. ಕರಾವಳಿಗೂ ಕರ್ನಾಟಕದ ಇತರ ಭಾಗಕ್ಕೂ ಸಂಪರ್ಕ ಕಲ್ಪಿಸಲು ಘಾಟಿಗಳಿವೆ. ಇಲ್ಲಿಯ ರಸ್ತೆಗಳೆಲ್ಲಾ ಅಂಕು-ಡೊಂಕಾಗಿದೆ. ಇದರಿಂದ ಅಪಘಾತ ಸರ್ವೇ ಸಾಮಾನ್ಯ. ಮುಂದೊಮ್ಮೆ ವೈಜ್ಞಾನಿಕವಾಗಿ ಈ ರಸ್ತೆಯನ್ನು ನೇರವಾಗಿ ಮಾಡಲು ಸಾಧ್ಯವಾದರೂ ಆ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಘಾಟಿ ರಸ್ತೆಗಳೆಲ್ಲಾ ಹಾಗೇ ಇರಬೇಕು! ಹಾಗೆಯೇ ಈ ತಾಣಗಳ ವ್ಯಾಪ್ತಿಯಲ್ಲಿ ಬರುವ ಮನೆಗಳು, ರಸ್ತೆಗಳು ಎಲ್ಲ... ಯಥಾಸ್ಥಿತಿ ಕಾಪಾಡುವುದು ಎಂದರೆ ಇದೇ.

ಯುನೆಸ್ಕೊ ಪಟ್ಟಿಗೆ ಸೇರಿರುವ ಪಶ್ಚಿಮಘಟ್ಟವನ್ನು ಜೋಪಾನವಾಗಿ ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದ ಉಸ್ತುವಾರಿ ಅಗತ್ಯ ಎಂದು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಸಲಹೆ ನೀಡಿದೆ. ಈ ಸಲಹೆ ಜಾರಿಗೆ ಬಂದಲ್ಲಿ ರಾಜ್ಯ ಸರಕಾರ ಅದರ ಕೈಗೊಂಬೆಯಾಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಿಂದೆ ಬ್ರಿಟಿಷರು ಕಾಫಿ, ಏಲಕ್ಕಿ ಎಸ್ಟೇಟ್ ಮಾಡಿದ ಹಾಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಶ್ರೀಗಂಧದ ಎಸ್ಟೇಟ್ ಮಾಡಲು ಹೊರಟಿದ್ದರು. ಸ್ಥಳೀಯ ಗಿರಿಜನರಿಗೆ ಶ್ರೀಗಂಧದ ಬೀಜ ನೀಡಿ ಬಿತ್ತುವಂತೆ ಸೂಚಿಸಿದ್ದರು.

ಬೀಜ ಬಿತ್ತದಿದ್ದರೆ ದೊರೆಗಳ ಆಜ್ಞೆ ಉಲ್ಲಂಘಿಸಿದಂತಾಗುತ್ತದೆ, ಬಿತ್ತಿದರೆ ಕಾಡು ನಮ್ಮದಾಗಿ ಉಳಿಯುವುದಿಲ್ಲ ಎಂದು ಲೆಕ್ಕಹಾಕಿದ ಗಿರಿಜನರು ಕೊನೆಗೆ ಉಪಾಯ ಮಾಡಿ ಬ್ರಿಟಷ್ ಅಧಿಕಾರಿಗಳು ನೀಡಿದ ಗಂಧದ ಬೀಜವನ್ನು ರಾತ್ರೋರಾತ್ರಿ ಹುರಿದು, ಹಗಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಎದುರಿಗೇ ಬಿತ್ತಿ ಅವು ಹುಟ್ಟದಂತೆ ನೋಡಿಕೊಂಡಿದ್ದರು, ಜೀವ ವೈವಿಧ್ಯತೆಯ ಆಗರವನ್ನು ಉಳಿಸಿಕೊಂಡಿದ್ದರು.

ನಾವು ಹೇಳುತ್ತಿರುವುದು ಗಿರಿಜನರ ಈ ಪರಂಪರೆಯನ್ನು ಉಳಿಸೋಣ ಎಂದು. ಯುನೆಸ್ಕೊ ಪರಂಪರೆಯ ಪಟ್ಟಿಗೆ ಸೇರಿಸಿ ನೀಡುವ ಮಾನ್ಯತೆಗಿಂತ ಈ ಪರಂಪರೆ ದೊಡ್ಡದು. ಪಶ್ಚಿಮ ಘಟ್ಟ ಎಷ್ಟು ಸೂಕ್ಷ್ಮ ಪ್ರದೇಶ ಮತ್ತು ಇದನ್ನು ಕಾಪಾಡುವುದು ಎಷ್ಟು ಅಗತ್ಯ ಎಂಬುದು ನಮಗೆ ಗೊತ್ತಿದೆ. ಯುನೆಸ್ಕೊ ಔಟ್ ಸ್ಟ್ಯಾಂಡಿಂಗ್ ಯುನಿವರ್ಸಲ್ ವ್ಯಾಲ್ಯೂ ಎಂದು ದೊಡ್ಡ ದೊಡ್ಡ ಶಬ್ದಗಳಲ್ಲಿ ವರ್ಣಿಸಿದ ಮಾತ್ರಕ್ಕೆ ಇದರ ಪ್ರಾಮುಖ್ಯತೆಯೇನೂ ಹೆಚ್ಚುವುದಿಲ್ಲ. ಪರಿಸರ ಎಂದರೆ ಪ್ರತಿಯೊಬ್ಬರಿಗೂ ಸೇರಿದ್ದು, ಎಲ್ಲರೂ ಕೂಡಿ ಉಳಿಸಬೇಕು, ಪರಿಸರ ಸಹ್ಯ ಜೀವನ ಶೈಲಿ ರೂಢಿಸಿಕೊಳ್ಳಬೇಕೇ ಹೊರತು, ಶೋಕೇಸ್‌ನಲ್ಲಿ ಇಡುವ ಅಲಂಕಾರಿಕ ವಸ್ತುವಂತೆ ಎಲ್ಲೋ ಒಂದಿಷ್ಟು ಜಾಗವನ್ನು ಉಳಿಸುತ್ತೇವೆ ಎಂದರೆ ಭೂಲೋಕ ಉಳಿಯದು.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್

ಬೌದ್ಧ ಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್

1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...


- -ರಘೋತ್ತಮ ಹೊ.ಬ., ಚಾಮರಾಜನಗರ