ಮಹಾತ್ಮಾ ಗಾಂಧೀಜಿಯವರ ಆಸೆ ಆಕಾಂಕ್ಷೆಯಂತೆ ಸ್ವಾತಂತ್ರ ಪಡೆದು ಪ್ರಜಾರಾಜ್ಯ ನಮ್ಮ ದೇಶದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನೋಪಯೋಗಿಯಾದ, ಗ್ರಾಮೀಣ ಪುರಾತನ ಕಸುಬು ಬೆಳೆಸುವ, ಗ್ರಾಮೀಣ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ, ಸುಲಭದಲ್ಲಿ ಸಿಗುವ ಕಚ್ಚಾ ಮಾಲನ್ನು ಉಪಯೋಗಿಸುವ, ಜನತೆಗೆ ಉಪಯುಕ್ತವಾಗುವ ಪಕ್ಕಾ ಮಾಲನ್ನು ಒದಗಿಸುವ ಹಾಗೂ ಗ್ರಾಮೀಣ ನಿರುದ್ಯೋಗ ತೊಲಗಿಸಿ ಉದ್ಯೋಗ ಕಲ್ಪಿಸುವ ಮಹದುದ್ದೇಶದಿಂದ ಕೇಂದ್ರ ಮಟ್ಟದಲ್ಲಿ ಖಾದಿ ಆಯೋಗವನ್ನು, ರಾಜ್ಯ ಸರಕಾರಗಳು ರಾಜ್ಯಮಟ್ಟದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳನ್ನು 1957ರಲ್ಲಿ ರಚನೆ ಮಾಡಿ ಈ ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ಆರ್ಥಿಕ ನೆರವು ನೀಡಿ ಅವುಗಳು ಕಾರ್ಯ ನಿರ್ವಹಿಸುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಅಂತೆಯೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು 1957ರಲ್ಲಿ ರಚನೆ ಮಾಡಿ ರಾಜ್ಯ ಸರಕಾರ ಸಾಕಷ್ಟು ನೆರವನ್ನು ಪ್ರತಿವರ್ಷ ನೀಡುತ್ತಲೇ ಇದೆ. ಹಾಗೂ ಕೇಂದ್ರ ಖಾದಿ ಆಯೋಗ ಕೂಡ ಸಾಕಷ್ಟು ಧನ ಸಹಾಯವನ್ನು ರಾಜ್ಯದ ಖಾದಿ ಗ್ರಾಮೋದ್ಯೋಗ ಸಂಘ ಸಂಸ್ಥೆಗಳಿಗೆ ರಾಜ್ಯ ಮಂಡಳಿಯ ಮುಂಖಾಂತರ ನೀಡುತ್ತಲೇ ಇದೆ.
ರಾಜ್ಯದ ಖಾದಿ ಮಂಡಳಿ ಮೊದಲಿನಿಂದಲೂ ಅನೇಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿ, ಇಲ್ಲವೇ ಸ್ಥಾಪನೆಯಾದ ಸಹಕಾರಿ ಹಾಗೂ ನೋಂದಾಯಿತ ಸಂಘಗಳಿಗೆ ಉತ್ಪಾದನೆ ಹಾಗೂ ಮಾರಾಟಕ್ಕಾಗಿ ವಿವಿಧ ರೀತಿಯ ನೆರವನ್ನು ನೀಡಿ ರಾಜ್ಯದಲ್ಲಿ ಸಂಘ ಸಂಸ್ಥೆಗಳು ಉತ್ಪನ್ನಗಳನ್ನು ಉತ್ಪಾದಿಸಲಿಕ್ಕೆ ಹಾಗೂ ಉತ್ಪಾದನೆ ಯಾದ ಪಕ್ಕಾ ವಸ್ತುಗಳನ್ನು ಮಾರಾಟ ಮಾಡಲಿಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡುತ್ತಲೇ ಇದೆ. ನಮ್ಮ ರಾಜ್ಯದಲ್ಲಿ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಖಾದಿ ಹಾಗೂ ಪಾಲಿ ವಸ್ತ್ರಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಸಾಕಷ್ಟು ಅವಕಾಶವಿದೆ. ಅಂತೆಯೇ ಗ್ರಾಮಾಂತರ ಕಸುಬು ದಾರರು ತಮ್ಮ ಉತ್ಪಾದನೆಯನ್ನು ಮಾಡಲು ಹಾಗೂ ಮಾರಾಟ ಮಾಡಲು ಸಹ ಸಾಕಷ್ಟು ಅವಕಾಶವಿದೆ.
ರಾಜ್ಯದಲ್ಲಿ ಕುಂಬಾರಿಕೆ, ಸುಣ್ಣಗಾರಿಕೆ, ಜೇನು ಸಾಗಾಣಿಕೆ, ಬಿದರಿನ ಉತ್ಪಾದನೆ, ಗಿಡಮೂಲಿಕೆ, ಗಾಣದ ಎಣ್ಣೆ, ಖಂಡಸಾರಿ ಬೆಲ್ಲ, ಹಣ್ಣು ತರಕಾರಿ ಸಂಸ್ಕರಣ, ಸೋಪು, ಚರ್ಮ, ಕಡ್ಡಿ ಪೆಟ್ಟಿಗೆ, ಅಗರಬತ್ತಿ, ಮೇಣಬತ್ತಿ, ರಬ್ಬರ, ನಾರು, ಬಡಿಗತನ, ಕಮ್ಮಾರಿಕೆ, ಅಲ್ಯುಮಿನಿಯಂ, ಮಾರ್ಗೀ ಬಟ್ಟೆ, ಧೋಬಿ ಇತ್ಯಾದಿ ಸುಮಾರು 40ಕ್ಕೂ ಹೆಚ್ಚು ಉತ್ಪಾದನಾ ಸಂಘ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಿದ್ದು ಇಂತಹ ಅನೇಕ ಸಂಘಗಳಿಗೆ ಖಾದಿ ಗ್ರಾಮೋದ್ಯೋಗ ಮಂಡಳಿ ಪ್ರೋತ್ಸಾಹ ನೀಡುತ್ತಲೇ ಇದೆ.
ಎಲ್ಲಾ ತರಹದ ಕಸಬುದಾರಿಕೆಗೆ ಅನುಕೂಲವಾಗಲೆಂದು ಪ್ರತಿ ತಾಲೂಕಿಗೊಂದು, ತಾಲೂಕು ವಿವಿಧ ಉದ್ದೇಶಗಳ ಕಸಬುದಾರರ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳಿಗೆ ಸರಕಾರ ಹಾಗೂ ಖಾದಿ ಬೋರ್ಡ್ ವಿವಿಧ ನೆರವನ್ನು ಕೂಡ ನೀಡಿದೆ. ರಾಜ್ಯಮಟ್ಟದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಯಿದ್ದು, ಈ ಮಂಡಳಿಗೆ ಸಹಾಯಕರಾಗಿ ಪ್ರತಿ ಜಿಲ್ಲೆಗೊಂದು ಖಾದಿ ಮತ್ತು ಗ್ರಾಮೋ ದ್ಯೋಗ ಕಚೇರಿಯಿದ್ದು ಅಲ್ಲಿ ಅಧಿಕಾರಿಗಳು ಇದ್ದಾರೆ. ಆದರೆ ಈ ಜಿಲ್ಲಾ ಕಚೇರಿಗಳು ಸಮರ್ಪಕವಾಗಿ ಆಡಳಿತ ಮಾಡದೆ ರಾಜ್ಯಾದ್ಯಂತ ಖಾದಿ ಗ್ರಾಮೋದ್ಯೋಗ ಅವಸಾನದತ್ತ ಸಾಗಲು ಸಮರ್ಪಕ ಕಾರ್ಯ ನಿರ್ವಹಿಸದೆ ಕಾರಣರಾಗಿದ್ದಾರೆ. ಸ್ವಾತಂತ್ರ ಹಾಗೂ ಪ್ರಜಾರಾಜ್ಯ ಪ್ರಾರಂಭದ ಮೊದಲು ಸ್ಥಾಪಿತವಾದ ಅದೆಷ್ಟೋ ಖಾದಿ ಉತ್ಪಾದನಾ ಸಂಘಗಳು ಮುಳುಗಿ ಹೋಗಿ, ದಿವಾಳಿಯಾಗಿ ಸಮಾಪನ ದಾರಿ ಹಿಡಿದಿವೆ.
ರಾಜ್ಯದಲ್ಲಿ ಸುಮಾರು 40 ತರಹದ 20863 ಖಾದಿ ಗ್ರಾಮೋದ್ಯೋಗ ಸಂಘ ಗಳು ಇದ್ದು, ಅವುಗಳೆಲ್ಲಾ ಸರಕಾರಿ ಹಾಗೂ ಖಾದಿ ಬೋರ್ಡ್ ಧನ ಸಹಾಯ ಪಡೆದಿದ್ದು, ಅವುಗಳಲ್ಲಿ ಕೇವಲ 3073 ಸಂಘ ಅಥವಾ ಘಟಕಗಳು ಮಾತ್ರ ಕಾರ್ಯನಿರತವಾಗಿದೆ. ಇವೆಲ್ಲವುಗಳ ಉತ್ಪಾದನೆ 228.36 ಕೋಟಿ ರೂ. ಮಾತ್ರವಿದೆ. ಇದಕ್ಕೆಲ್ಲಾ ಜಿಲ್ಲಾ ಖಾದಿ ಬೋರ್ಡ್ ಹಾಗೂ ರಾಜ್ಯ ಖಾದಿ ಬೋರ್ಡಿನ ಅಧಿಕಾರಿಗಳು ನಾಚಿಕೆ ಪಡಬೇಕು. ಈ ಬಗ್ಗೆ ಖಾದಿ ಬೋರ್ಡ್ ಪದಾಧಿಕಾರಿಗಳು ಕೈಗಾರಿಕಾ ಇಲಾಖೆಯ ವರು ಹಾಗೂ ಸಂಬಂಧಿಸಿದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಗಮನಹರಿಸಿ ಈ ಎಲ್ಲಾ ಘಟಕಗಳು ತಮ್ಮ ಉತ್ಪಾದನೆ ಹೆಚ್ಚಿಸಲು ಹಾಗೂ ಮಾರಾಟ ಮಾಡಲು ಮುಂದಾಗಿ, ಖಾದಿ ಗ್ರಾಮೋದ್ಯೋಗ ಉದ್ಯಮಗಳು ಯಶಸ್ವಿಯಾಗಲು ಮುಂದಾಗಬೇಕಾದುದು ಅವರೆಲ್ಲರ ಆದ್ಯ ಕರ್ತವ್ಯ.
ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳದ ಆದಾಯ 26.81 ಕೋಟಿ ರೂ. ಇದ್ದರೂ ಈ ಹಣ ಬಹುಪಾಲು ನಿವೃತ್ತಿ ವೇತನ, ಸಿಬ್ಬಂದಿ ವೇತನ, ಭತ್ತೆ, ಆಡಳಿತ ವೆಚ್ಚ ಇತ್ಯಾದಿಗೆ ವೆಚ್ಚವಾಗುತ್ತಿದ್ದು ಸಂಘಗಳಿಗೆ ರಿಬೇಟ್ ಪ್ರೋತ್ಸಾಹಧನ, ಕೈಗಾರಿಕಾ ವಿಕಾಸ ಇತ್ಯಾದಿಗೆ ಕೇವಲ 7.56 ಕೋಟಿ ರೂ. ಮಾತ್ರ ವೆಚ್ಚವಾಗುತ್ತಿದೆ. ಸಿಬ್ಬಂದಿ ಪಗಾರ ಭತ್ತೆ, ನಿವೃತ್ತಿ ವೇತನ ಹಾಗೂ ಆಡಳಿತಕ್ಕೆ ಭಾರೀ ಪ್ರಮಾಣದಲ್ಲಿ ಹಣ ವೆಚ್ಚವಾದರೂ ಪರವಾಗಿಲ್ಲ ಆದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿ ದಿವಾಳಿ ಅಂಚಿನಲ್ಲಿರುವ ಘಟಕಗಳನ್ನು ಸುಧಾರಿಸಿ ಉತ್ಪಾದನೆ ಹೆಚ್ಚುವಂತೆ ಮಾಡಿದರೆ ಒಳ್ಳೆಯದು ಹಾಗೂ ಸಾರ್ಥಕ.
ಇಲ್ಲಿಯವರೆಗಿನ ಆರ್ಥಿಕ ನೆರವು 284.72 ಕೋಟಿ ರೂ. ಪಡೆದ 28682 ಘಟಕಗಳೆಲ್ಲಾ ಕಾರ್ಯಪ್ರವೃತ್ತವಾಗಿ ಹೆಚ್ಚಿನ ಉತ್ಪಾದನೆ ಮಾಡುವಂತೆ ಕ್ರಮ ತೆಗೆದುಕೊಂಡು ಗಮನಹರಿಸಿ ಮುಂದಾಗುವುದು ಅವರ ಕರ್ತವ್ಯ. ಸಂಘ ಸಂಸ್ಥೆ ಘಟಕಗಳಿಗೆ 2010-11ನೆ ಸಾಲಿನಲ್ಲಿ ಕೇವಲ 6.99 ಕೋಟಿ ರೂ. ರಿಬೇಟ್ ಕೊಟ್ಟಿದ್ದು ಇದನ್ನು ಹೆಚ್ಚಿಸಲೇಬೇಕು. ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ ಉತ್ಪಾದನಾ ಸಂಸ್ಥೆಗಳ ಸಂಖ್ಯೆ ರಾಜ್ಯದಲ್ಲಿ ಕೇವಲ 107 ಇದ್ದು, ಇವುಗಳ ಉತ್ಪಾದನೆ 20.64 ಕೋಟಿ ರೂ.ಗಳದ್ದು ಮಾತ್ರ. ಈ ಸಂಸ್ಥೆಗಳ ಸಂಖ್ಯೆ ಹಾಗೂ ಉತ್ಪಾದನೆ ಹೆಚ್ಚಲೇಬೇಕು.
ಈಗ ಮಾರಾಟ ಬಟ್ಟೆಯ ಮೇಲೆ ಕೊಡುವ ರಿಬೇಟ್ ಶೇಕಡಾ 10ರಿಂದ 15 ಇದ್ದು ಇದು ಹೆಚ್ಚಲೇ ಬೇಕು. ಹಾಗೂ ಅಕ್ಟೋಬರ್ 2ರ ಗಾಂಧಿ ಜಯಂತಿ, ಜೂನ್ 8ರ ಮೈಲಾರ ಮಹದೇವರ ಜಯಂತಿಯಂದು ಮಾರಾಟದ ಮೇಲೆ ಹೆಚ್ಚಿನ ರಿಬೇಟ ಕೊಡಬೇಕು. ಖಾದಿ ಬಟ್ಟೆಯನ್ನು ಸಮವಸ್ತ್ರಕ್ಕಾಗಿ, ಟವೆಲ್, ಬೆಡ್‌ಶೀಟ್‌ಗಳನ್ನು ಸರಕಾರಿ ಸಂಸ್ಥೆಗಳಲ್ಲಿ ಉಪಯೋಗಿಸಲು ಖರೀದಿ ಮಾಡಲು ವಿವಿಧ ಇಲಾಖಾ ಕಾರ್ಯದರ್ಶಿಯವರಿಗೆ ಹಾಗೂ ಮಂತ್ರಿಗಳಿಗೆ ಖಾದಿ ಬೋರ್ಡಿನವರು ಹಾಗೂ ಸಣ್ಣ ಕೈಗಾರಿಕಾ ಸಚಿವರು ತಿಳಿಸಬೇಕು.
ಖಾದಿ ಬಟ್ಟೆ ಉತ್ಪಾದನೆ ಮಾರಾಟಕ್ಕೆ ಪ್ರೋತ್ಸಾಹ ಸಿಕ್ಕರೆ ಖಾದಿ ಬೋರ್ಡ್ ಹಾಗೂ ಖಾದಿ ಕಮಿಶನ್‌ಗಳಿಗೆ ಉತ್ತಮ ಹೆಸರು ಬಂದೀತು. ಈ ದಿಸೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಗಮನ ಹರಿಸಿ ಸಂಬಂಧಿಸಿದವರಿಗೆ ಸೂಕ್ತ ಆದೇಶ ಕೊಟ್ಟರೆ ಗಾಂಧೀಜಿಯವರ ಕನಸಾದ ಖಾದಿ ಗ್ರಾಮೋದ್ಯೋಗ ಉದ್ಯಮ ನನಸಾದೀತು.
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...
Click here to post your views ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...