ಜುಲೈ 16 ರಿಂದ 22 ರವರೆಗೆ ‘ಶಾಲಾ ಬಂದ್’ನ್ನು ಘೋಷಿಸಿದೆ. ‘ಶಿಕ್ಷಣ ಹಕ್ಕು ಕಾಯ್ದೆ’ಯ ನಿಯಮದ ಪ್ರಕಾರ ಪ್ರತಿ ಅನುದಾನರಹಿತ ಶಾಲೆಯೂ (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ತನ್ನ ನೆರೆಹೊರೆಯಲ್ಲಿರುವ ಹಿಂದುಳಿದ- ದಲಿತ-ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ತನ್ನ ಶಾಲೆಯ ಒಟ್ಟು ಸೀಟುಗಳಲ್ಲಿ ಶೇ.25ರಷ್ಟನ್ನು ಮೀಸಲಿರಿಸ ಬೇಕೆಂಬುದೇ ಇಂತಹ ‘ಹೋರಾಟ’ಕ್ಕೆ ಕಾರಣ. ಇದನ್ನು ಸರಕಾರದೊಂದಿಗೆ ತನ್ನ ಹಕ್ಕುಗಳಿಗಾಗಿ ನಡೆಸುತ್ತಿರುವ ಸಂಘರ್ಷವೆಂಬಂತೆ ‘ಕುಸ್ಮಾ’ ಬಿಂಬಿಸಿಕೊಂಡಿದೆ. ಆದರೆ ಇಂತಹ ‘ಬಂದ್’ನ ಘೋಷಣೆಯೇ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಆಳವಾದ ಸ್ವಾರ್ಥ ಹಿತಾಸಕ್ತಿ ಹಾಗೂ ಸಮಾಜ ವಿರೋಧಿ ನೀತಿಗಳನ್ನು ಬಹಿರಂಗಗೊಳಿಸುತ್ತದೆ.ವಾಸ್ತವದಲ್ಲಿ ಈ ಯಾವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ, ಈ ಶಾಲೆಗಳನ್ನು ನಡೆಸುತ್ತಿರುವುದು ‘ಸಮಾಜದ ಉದ್ಧಾರ’ ಕ್ಕಾಗಿಯಲ್ಲ. ಇವರ್ಯಾರು ಸಮಾಜದ ಆರೋಗ್ಯ ಕ್ಕಾಗಿ ಶ್ರಮಿಸುತ್ತಿರುವ ನಿಸ್ವಾರ್ಥಿ ಸಂತರಲ್ಲ.ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಪಠ್ಯಕ್ರಮ, ಉತ್ತಮ ಶಿಕ್ಷಣ ಮೊದಲಾದವುಗಳ ಕುರಿತು ಇಂದು ಪೋಷಕರಲ್ಲಿ ಮೂಡಿಸಲಾಗಿರುವ ಗೀಳು ಮತ್ತು ಗೊಂದಲಗಳನ್ನು ಬಂಡವಾಳವಾಗಿಸಿ ಕೊಂಡಿರುವ ಸಂಸ್ಥೆಗಳಿವು!
ಕನ್ನಡ ಮಾಧ್ಯಮ ಶಾಲೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವಂತಹ ತಾವು ಕೊಡುವ ಶಿಕ್ಷಣದ ಗುಣಮಟ್ಟಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹಣವನ್ನು ಪೋಷಕರಿಂದ ಸುಲಿಗೆ ಮಾಡುತ್ತಿರುವಂತಹ, ಬಿಡಿಗಾಸಿಗೆ ತನ್ನ ಶಿಕ್ಷಕರನ್ನು ಮತ್ತು ಸಿಬ್ಬಂದಿಯನ್ನು ಜೀತ ಮಾಡಿಸುತ್ತಿರುವಂತಹ, ಸರಿಯಾದ ಆಡಿಟ್ ವರದಿ ಸಲ್ಲಿಸದೇ ಸರಕಾರಕ್ಕೆ ಕೋಟಿಗಟ್ಟಲೆ ತೆರಿಗೆ ವಂಚಿಸುತ್ತಿರುವಂತಹ ಈ ಶಿಕ್ಷಣ ಸಂಸ್ಥೆಗಳು, (ಎಲ್ಲೋ ಕೆಲವು ಅಪವಾದಗಳಿರ ಬಹುದು) ತಮ್ಮ ಲಾಭಗಳಿಕೆಯಲ್ಲಿ ಎಲ್ಲೋ ಕೊಂಚ ಏರುಪೇರಾಗಬಹುದೇನೋ ಎಂಬ ಶಂಕೆ ಮೂಡಿದ ಕೂಡಲೇ ಉಗ್ರ ಕ್ರಮಗಳಿಗೆ ಮುಂದಾಗಿವೆ. ತಮ್ಮ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ‘ಬಂದ್’ ಘೋಷಿಸಿವೆ.
ಆದರೆ ಈ ಇಡೀ ವಿಚಾರವನ್ನು ಕೇವಲ ಶಿಕ್ಷಣದ ವ್ಯಾಪಾರಿಗಳ ಒಂದು ಉದ್ಧಟತನದ ಕ್ರಮವೆಂದಷ್ಟೇ ನೋಡಿ, ಅದರ ಸುತ್ತಲಷ್ಟೇ (ಅದರಲ್ಲೂ ‘ಕುಸ್ಮಾ’ದ ಅಧ್ಯಕ್ಷ ಜೆ.ಎಸ್. ಶರ್ಮಾರಂತಹವರ ‘ಬಡ ಮಕ್ಕಳು ನಮ್ಮ ಶಾಲೆಗಳಿಗೆ ಸೇರಿಕೊಂಡರೆ ಸಮುದ್ರಕ್ಕೆ ಕೊಚ್ಚೆ ನೀರು ಸೇರಿದಂತಾಗುತ್ತದೆ’ ಎಂಬ ಅಹಂಕಾರ ಮತ್ತು ಅವಿವೇಕದ ಹೇಳಿಕೆಗಳ) ನಮ್ಮೆಲ್ಲಾ ಚರ್ಚೆಗಳನ್ನು ಕೇಂದ್ರೀಕರಿಸುವುದರಿಂದ ಅಪಾ ಯವಿದೆ. ಬದಲಿಗೆ ಈ ವಿದ್ಯಮಾನವನ್ನು ನೆರೆಹೊರೆ ಸಮಾನ ಶಾಲೆಗಾಗಿ (Common School system based on Neighborhood school concept) ದೇಶಾದ್ಯಂತ ನಡೆಯುತ್ತಿರುವ ಚಿಂತನೆ ಹಾಗೂ ಆಂದೋಲನದ ಹಿನ್ನೆಲೆಯಲ್ಲಿ ನಾವು ಅರ್ಥೈಸ ಬೇಕಿದೆ.
ಜೂನ್ 30 ಮತ್ತು ಜುಲೈ 1ರಂದು ಮೇಲ್ಕಂಡ ವಿಚಾರದ ಸುತ್ತ ನಡೆದ ಅಖಿಲ ಭಾರತ ಸಮಾವೇಶವು ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಶಿಕ್ಷಣದ ವ್ಯಾಪಾರೀಕರಣದ ಕುರಿತು ಬಹಳ ವಿಷದವಾಗಿ ಚರ್ಚಿಸಿದೆ. ಅವುಗಳ ಆಧಾರದ ಮೇಲೆ ಕೆಲವು ಸಂಗತಿಗಳನ್ನು ಈ ಲೇಖನ ಪ್ರಸ್ತಾಪಿಸಲಿಚ್ಛಿಸುತ್ತದೆ.ಭಾರತದಲ್ಲಿ ‘ಶಿಕ್ಷಣದ ಹಕ್ಕು’ ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರದೇ ಇದ್ದರೂ ರಾಜ್ಯ ನಿರ್ದೇಶಕ ತತ್ವಗಳ ಕಲಂ 41 ಮತ್ತು 45ರ ಪ್ರಕಾರ ಮೂಲಭೂತ ಹಕ್ಕಿನಷ್ಟೇ ಪ್ರಾಮುಖ್ಯತೆ ಅದಕ್ಕೆ ಸಿಕ್ಕಿದೆ. ಅದರಂತೆ ಭಾರತದಲ್ಲಿ 14 ವರ್ಷ ವಯಸ್ಸಿನವರೆಗೆ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಮತ್ತು ಉಚಿತವಾಗಿ ಶಿಕ್ಷಣ ನೀಡುವುದು ಸರಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು.
ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಪ್ರತಿಯೊಂದು ಮಗುವೂ ಶಿಕ್ಷಣ ಪಡೆದಿರಬೇಕು ಎಂದು ಬೇರಾವ ರಾಜ್ಯ ನಿರ್ದೇಶನಾ ತತ್ವಕ್ಕೂ ಇಲ್ಲದ ಸಮಯ ಮಿತಿಯನ್ನು ವಿಧಿಸಿರುವುದೇ, ಸಂವಿಧಾನ ಕರ್ತೃಗಳು ಇದಕ್ಕೆ ನೀಡಿರುವ ಮಹತ್ವವನ್ನು ತೋರಿಸುತ್ತದೆ. ಆದರೆ ನಮ್ಮ ಸರಕಾರಗಳು ಕೂಡಾ ಇದುವರೆಗೂ ಇದನ್ನು ನಿರ್ಲಕ್ಷಿಸುತ್ತಲೇ ಬಂದಿರುವುದರಿಂದಲೇ ಇಂದಿಗೂ ಭಾರತದ ಶೇ.12ಕ್ಕಿಂತ ಹೆಚ್ಚು ಮಕ್ಕಳು ಶಾಲೆಯ ಮೆಟ್ಟಿಲನ್ನೂ ತುಳಿದಿಲ್ಲ. ಆಡಳಿತದ ಚುಕ್ಕಾಣಿ ಹಿಡಿದವರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವೇ ಇದಕ್ಕೆ ಹೊಣೆ ಎಂಬುದರಲ್ಲಿ ಎರಡು ಮಾತಿಲ್ಲ!
ಆದರೆ ಈ ಪರಿಸ್ಥಿತಿಗೆ ಇನ್ನೊಂದು ಮುಖವೂ ಇದೆ. ಸಂವಿಧಾನದಲ್ಲಿ ಹೇಳಿರುವ ಎಲ್ಲಾ ಹಕ್ಕುಗಳೂ ಪ್ರಜೆಗಳಿಗೆ ದಕ್ಕುವಂತೆ ಮಾಡುವುದು ಸರಕಾರದ ಹೊಣೆ; ಆದರೆ ಇದು ಕೇವಲ ಸರಕಾರದ ಹೊಣೆ ಮಾತ್ರವೇ ಅಲ್ಲ; ಭಾರತದ ಪ್ರತಿಯೊಬ್ಬ ಪ್ರಜೆಗೂ ಕೂಡಾ ಈ ಹೊಣೆಗಾರಿಕೆ ಇರುತ್ತದೆ. ಹಾಗೆ ಭಾರತದ ಯಾವುದೇ ಪ್ರಜೆ ಯನ್ನು ಅಥವಾ ಸಂಸ್ಥೆಯನ್ನು ತನ್ನ ಕರ್ತವ್ಯ ಈಡೇರಿಸುವಲ್ಲಿ ಸರಕಾರ ಉಪಕರಣವಾಗಿ ತೊಡಗಿಸಬಹುದು (instrument of state); ಹಾಗೆಯೇ ಈ ಎಲ್ಲರಿಗೂ ಸರಕಾರಕ್ಕೆ ನೆರವಾಗುವುದು ಪರ್ಯಾಯ ಹೊಣೆಗಾರಿಕೆ (parallel responsibility(when a right is a fundamental right it is the bounden duty of the state to ensure the same. At the same time even the pvt persons have parallel responsibility along with the state) ) ಆಗಿರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಮಾತುಗಳನ್ನು ಸುಪ್ರೀಂಕೋರ್ಟ್ ಹೇಳಿರುವುದು ಬೇರಿನ್ನಾವುದೋ ಮೊಕದ್ದಮೆಯಲ್ಲಿ ಅಲ್ಲ. ಇದೇ 25% ಸೀಟುಗಳ ವಿಚಾರ ದಲ್ಲಿ ರಾಜಸ್ತಾನದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೂಡಿದ್ದ ಮೊಕದ್ದಮೆಯಲ್ಲಿ! ಈ ಹಿನ್ನೆಲೆಯಲ್ಲಿ ನಾವು ‘ಕುಸಾ’್ಮ ಒಡ್ಡಿರುವ ಬೆದರಿಕೆಯನ್ನು ಪರಿಶೀಲಿಸಬೇಕಿದೆ. ತನ್ನ ಬಂದ್‌ಗೆ ಅದು ಕಾಯ್ದೆಯು ‘ಅಲ್ಪಸಂಖ್ಯಾತ ಸಂಸ್ಥೆಗಳು’ ಎಂಬುದಕ್ಕೆ ಸರಿಯಾದ ವ್ಯಾಖ್ಯಾನ ನೀಡದಿರುವುದು, ನೋಟಿಸ್ ನೀಡುತ್ತಿರುವುದು, ಅಧಿಕಾರಿಗಳ ದುರ್ವರ್ತನೆ ಇತ್ಯಾದಿ ಏನೇ ಕಾರಣ ನೀಡಿದರೂ, ತಮ್ಮ ಸಂಸ್ಥೆಯ 25% ಸೀಟುಗಳನ್ನು ಆರ್ಥಿಕವಾಗಿ ದುರ್ಬಲ, ಹಿಂದು ಳಿದ, ದಲಿತ ವರ್ಗಗಳ ಮಕ್ಕಳಿಗೆ ಬಿಟ್ಟುಕೊಡ ಬೇಕೆಂಬ ಸಂಕಟವೇ ಇದರ ಹಿಂದಿದೆಯೆಂಬುದು ನಿಚ್ಚಳ. ಅದೂ ಕೂಡಾ ಉಚಿತವಾಗಿಯಲ್ಲ; 25% ಅಡಿಯಲ್ಲಿ ಖಾಸಗಿ ಶಾಲೆಗೆ ದಾಖಲಾ ಗುವ ಪ್ರತಿ ಮಗುವಿಗೆ ಸರಕಾರ ವರ್ಷಕ್ಕೆ 11,800 ರೂ.ಗಳನ್ನು ಸಾರ್ವಜನಿಕ ಹಣದಿಂದ ಖಾಸಗಿ ಸಂಸ್ಥೆಗಳ ಬಾಯಿಗೆ ಸುರಿಯುತ್ತಿದೆ.
ಇಷ್ಟಾದರೂ ಆರ್‌ಟಿಇ ಜಾರಿಮಾಡುವು ದನ್ನು ಮುಂದೂಡಬೇಕೆಂದು ಖಾಸಗಿ ಸಂಸ್ಥೆಗಳು ಒತ್ತಾಯಿಸುವುದರ ಹಿಂದೆ, ಆ ಆಡಳಿತ ಮಂಡಳಿಗಳ ವರ್ಗ ಧೋರಣೆ, ಜಾತಿವಾದಿ ಧೋರಣೆ ಎದ್ದು ಕಾಣುತ್ತಿದೆ. ಕರ್ನಾಟಕದಲ್ಲಿ ಆರ್‌ಟಿಇ ಜಾರಿಮಾಡಲು ಹೊರಟ ಆರಂಭದಲ್ಲಿ, ಬೆಂಗಳೂರಿನ ಪ್ರತಿ ಷ್ಠಿತ ಖಾಸಗಿ ಸಂಸ್ಥೆಯೊಂದು ‘‘ಹಿಂದುಳಿದ ವರ್ಗಗಳ ಮಕ್ಕಳು ಬಂದು ನಮ್ಮ ಶಾಲೆಯ ವಾತಾವರಣ ಕಲುಷಿತಗೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಸರಕಾರ ಅದು ಹೇಗೆ 25% ಮಕ್ಕಳನ್ನು ನಮ್ಮ ಸಂಸ್ಥೆಯೊಳಗೆ ಸೇರಿಸುತ್ತದೋ ನೋಡುತ್ತೇವೆ.’’ ಎಂಬ ಉದ್ಧಟತನದ ಸವಾಲೆಸೆದದ್ದನ್ನು ಯಾರೂ ಮರೆತಿಲ್ಲ. ‘‘ಆಗಲೇ ನಾವೇನು ಸರಕಾರ ದಿಂದ ಅನುದಾನ ಪಡೆಯುತ್ತಿಲ್ಲ. ನಾವ್ಯಾಕೆ ಸರಕಾರದ ಮಾತು ಕೇಳಬೇಕು ಎಂಬ ಪ್ರಶ್ನೆಯೆತ್ತಿವೆ. ಅದೇ ಮಾತನ್ನೇ ನಿನ್ನೆ ಕುಸ್ಮಾ ಅಧ್ಯಕ್ಷ ಶರ್ಮಾ ಸಮುದ್ರಕ್ಕೆ ಕೊಚ್ಚೆ ನೀರು ಸೇರುವ ಮಾತಿನ ಮೂಲಕ ಮುಂದುವರೆಸಿದ್ದಾರೆ.
ಈ ಶಿಕ್ಷಣ ಸಂಸ್ಥೆಗಳು ಸರಕಾರದ ಅನುದಾನ ಪಡೆಯದಿದ್ದರೂ ಚಾರಿಟಬಲ್ ಟ್ರಸ್ಟ್‌ಗಳನ್ನು ಅಥವಾ ಎಜುಕೇಷನ್ ಸೊಸೈಟಿಗಳನ್ನು ಸ್ಥಾಪಿಸಿ ಕೊಂಡು ಹತ್ತು ಹಲವು ರೀತಿಗಳಲ್ಲಿ ಸರಕಾರದ ನೆರವನ್ನು ಬಾಚಿಕೊಂಡಿರುವಂಥವೇ. ಒಂದು ವೇಳೆ ಅದಿಲ್ಲವೆಂದುಕೊಂಡರೂ ಅವು ಸಂವಿ ಧಾನವೇ ತಮಗೆ ವಿಧಿಸಿರುವ ಪರ್ಯಾಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತೆಯೇ ಇಲ್ಲ. ಅಷ್ಟಕ್ಕೂ ಭಾರತದಲ್ಲಿ ಶಿಕ್ಷಣ ಇನ್ನೂ ಸೇವಾ ಕ್ಷೇತ್ರವೇ! ಸರಕಾರಗಳು ಮತ್ತು ನ್ಯಾಯಾಂಗ ಉನ್ನಿಕೃಷ್ಣನ್ ತೀರ್ಪು, 2002ರ ಟಿ.ಎಂ.ಪೈ ತೀರ್ಪುಗಳಲ್ಲಿ ಕಡ್ಡಾಯವಾಗಿ ಸೇವೆಯಾಗಿದ್ದ ಶಿಕ್ಷಣವನ್ನು ಒಂದು ಮಟ್ಟಕ್ಕೆ ಸಡಿಲಗೊಳಿಸಿದ್ದರೂ, ಸಂವಿಧಾನದ ಚೌಕಟ್ಟನ್ನು ಮೀರುವುದು ಸಾಧ್ಯವಾಗಿಲ್ಲ. ಆದರೆ ಅದನ್ನು ಬಂಡವಾಳ ಹೂಡಿ ಲಾಭ ತೆಗೆಯುವ ಅನಿಷ್ಟ ಉದ್ದಿಮೆಯ ಕೀಳುಸ್ಥಿತಿಗೆ ಇಳಿಸಿರುವುದು ಇಂದು ಬೀದಿಗಳಿದಿರುವ ಇಂತಹ ಲಾಭಕೋರ ಶಿಕ್ಷಣ ಸಂಸ್ಥೆಗಳೇ!
ಒಂದಿಡೀ ಸಮಾಜದ ಏಳ್ಗೆಗೆ, ತಲೆತಲೆಮಾರುಗಳ ಅಭ್ಯುದಯಕ್ಕೆ ಅತಿಮುಖ್ಯವಾದ ಅಡಿಪಾಯವಾದ ಶಿಕ್ಷಣ ವ್ಯವಸ್ಥೆಯನ್ನು ಇಂತಹ ಧನದಾಹಿಗಳ ವಶಕ್ಕೆ ಒಪ್ಪಿಸಿರುವುದರಲ್ಲಿ ಸರಕಾರದ ಖಾಸಗೀಕರಣದ ಪರವಾದ ನಿಲುವುಗಳನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಈಗಲೂ ಕೂಡಾ ಸರಕಾರಿ ಶಾಲೆ ಮುಚ್ಚುವುದರ ವಿರುದ್ಧ, ಭಾಷಾನೀತಿಯ ಗೊಂದಲ ಬಗೆಹರಿಸುವುದಕ್ಕಾಗಿ, ಸಮಾನ ಶಿಕ್ಷಣವ್ಯವಸ್ಥೆಗಾಗಿ ದಶಕಗಳಿಂದ ನಿರಂತರವಾಗಿ ಹೋರಾಡುತ್ತಿರುವ ಪ್ರಾಮಾಣಿಕ ಸಂಟನೆಗಳನ್ನು, ಸಾಹಿತಿ-ಚಿಂತಕರನ್ನು ಇದುವರೆಗೂ ಮಾತುಕತೆಗೆ ಕರೆಯದ ಸರಕಾರ, ಖಾಸಗಿ ಶಿಕ್ಷಣ ವ್ಯಾಪಾರಿಗಳು ಒಮ್ಮೆ ಗುಟುರು ಹಾಕಿದೊಡನೆ ಬಾಲಮುದುರಿಕೊಂಡು ಅವರೊಂದಿಗೆ ಮಾತಿಗೆ ಕೂತಿದೆ!
ಈಗಾಗಲೇ ಶಿಕ್ಷಣ ವ್ಯವಸ್ಥೆಯಲ್ಲಿನ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸಲು ಹೆಣಗುತ್ತಿರುವವರಿಗೆ ಇದು ನಿಜಕ್ಕೂ ಆತಂಕವನ್ನೂ, ಆಕ್ರೋಶವನ್ನೂ ಉಂಟುಮಾಡಿದೆ. ಶಿಕ್ಷಣ ಹಕ್ಕು ಕಾಯ್ದೆಯ ಒಂದು ಸಣ್ಣ ಪ್ರಯತ್ನವನ್ನೂ ಶಾಲೆಗಳು ಒಪ್ಪುವಂತೆ ಮಾಡಲಾಗದ ಸರಕಾರದ ನಿರ್ವೀರ್ಯತೆ ಅಪಾಯಕಾರಿ!
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...