ಅಂಕಣ - ಫೋಕಸ್‌

mail-img print-img

ಜಾತಿವ್ಯಾಕರಣ ಮತ್ತು ಹಿಂದುತ್ವ ರಾಜಕಾರಣ

ಗುರುವಾರ - ಜುಲೈ -19-2012

ಅತ್ತ ಜಗದೀಶ ಶೆಟ್ಟರೆಂಬ ಕುಂತಿಪುತ್ರನಿಗೆ ಪಟ್ಟಾಭಿಷೇಕ ಆಗುತ್ತಿದ್ದಂತೆ ಇತ್ತ ಕರಾವಳಿಯ ಭಂಟ ಸಮುದಾಯದ ಪ್ರಭಾವಿ ರಾಜಕಾರಣಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಅವರು ಕೊಡುತ್ತಿರುವ ಕಾರಣ ಅತ್ಯಂತ ಕೂತೂಹಲದಾಯಕವಾಗಿದೆ. ‘‘ತನ್ನ ಪಾಡಿಗೆ ತಾನು ತನ್ನ ಕ್ಷೇತ್ರದಲ್ಲಿದ್ದರೆ ಯಡಿಯೂರಪ್ಪನವರ ಮಗ ರಾಘವೇಂದ್ರ ಮತ್ತು ಸ್ಥಳೀಯ ಆರೆಸ್ಸೆಸ್ ನಾಯಕರೊಬ್ಬರು ತನಗೆ ಮಂತ್ರಿಗಿರಿಗೆ ಆಯ್ಕೆ ಮಾಡಲಾಗಿದೆಯೆಂದೂ ಕೂಡಲೇ ಬೆಂಗಳೂರಿಗೆ ಬರಬೇಕೆಂದೂ ತಿಳಿಸಿದರು. ಶೆಟ್ಟರ್ ಸಂಪುಟ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನ ಬೆಳಗ್ಗೆಯಿಂದ ಸಂಭವನೀಯರ ಪಟ್ಟಿಯಲ್ಲಿ ತನ್ನ ಹೆಸರು ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಸದಾನಂದ ಗೌಡರೂ ಸಹ ರಾಜ್ಯ ಗುಪ್ತಚರ ದಳದವರು ಬಂದು ತಮ್ಮನ್ನು ಸಮಾರಂಭಕ್ಕೆ ಕರೆದುಕೊಂಡು ಬರುವುದಾಗಿ ಹೇಳಿದ್ದರು. ಹೀಗಾಗಿ ಕರಾವಳಿಯ ಇತರ ಶಾಸಕರ ಜೊತೆ ತಾನೂ ಶಾಸಕರ ಭವನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕುಟುಂಬದೊಂದಿಗೆ ಕಾಯುತ್ತಿದ್ದೆ. ಆದರೆ ಅಂತಿಮ ಕ್ಷಣದಲ್ಲಿ ತನ್ನ ಹೆಸರನ್ನು ಕೈಬಿಟ್ಟು.ಬೆಳಗ್ಗೆ 11 ಗಂಟೆಯೆವರೆಗೂ ತನ್ನ ಜೊತೆಗೆ ಇದ್ದ ಮತ್ತೊಬ್ಬ ಶಾಸಕ ಪೂಜಾರಿಯವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ತನಗೆ ಮಂತ್ರಿಗಿರಿಯ ಬಗ್ಗೆ ಆಸೆ ಇಲ್ಲ. ಆದರೆ ಬೆಂಗಳೂರಿಗೆ ಕರೆಸಿ ಪಟ್ಟಿಯಲ್ಲಿ ಹೆಸರಿದ್ದರೂ ಅದನ್ನು ಅಳಿಸಿ ಬೇರೆಯವರಿಗೆ ನೀಡಿ ಅವಮಾನ ಮಾಡಲಾಗಿದೆ. ಇದು ತನಗಾದ ಅವಮಾನವಲ್ಲ. ಬದಲಿಗೆ ತನ್ನ ಕ್ಷೇತ್ರದ ಜನತೆಗೆ ಆದ ಅವಮಾನ’’ ಎಂದು ‘ಸಜ್ಜನ’, ‘ಸಂಭಾವಿತ’ ಎಂದೆಲ್ಲಾ ಖ್ಯಾತ ರಾದ ಶೆಟ್ಟರು ತಿಳಿಸಿದ್ದಾರೆ.

ಬಿಜೆಪಿ ಶಾಸಕ ರಾದರೂ ಎಂದಿಗೂ ಅವರನ್ನು ಬೆಂಬಲಿ ಸುತ್ತಾ ಇನ್ನೊಬ್ಬ ‘ಅವಕಾಶ ವಂಚಿತ’ ಕರಾವಳಿಯ ಶಾಸಕ ಅಂಗಾರ ಸಹ ರಾಜೀನಾಮೆ ನೀಡಲು ಮುಂದಾಗಿದ್ದಾರೆ.ಈ ರೀತಿಯಲ್ಲಿ ಹಲವರಿಗೆ ಈ ಬಾರಿ ಮಂತ್ರಿಮಂಡಲದಲ್ಲಿ ಸ್ಥಾನ ವಂಚನೆಯಾಗಿದೆ.ಕರುಣಾಕರರೆಡ್ಡಿ, ಬೇಳೂರು ಗೋಪಾಲಕೃಷ್ಣ, ಕುಮಾರಸ್ವಾಮಿ ಇನ್ನಿತ ರರು ಈಗಾಗಲೇ ಬಹಿರಂಗ ಭಿನ್ನಮತ ತೋರುತ್ತಾ ಬಹಿರಂಗವಾಗಿಯೇ ಕಳಂಕಿತರನ್ನು ಸಂಪುಟದಿಂದ ಕೆಳಗಿಳಿಸಿ ತಮಗೆ ಸ್ಥಾನ ಕೊಡಬೇಕೆಂದು ಗುಪ್ತ ಸಭೆಗಳನ್ನು ಪ್ರಾರಂಭಿಸಿದ್ದಾರೆ. ವಿರೋಧಪಕ್ಷಗಳನ್ನೇ ನಿರುದ್ಯೋಗಿಗಳನ್ನಾಗಿಸುವಷ್ಟು ಹಾಲಿ ಮಂತ್ರಿಮಂಡಲದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈ ಬಗೆಯ ಭಿನ್ನಮತವನ್ನು ಬಿಜೆಪಿ ಕಳೆದ 4 ವರ್ಷಗಳಲ್ಲಿ ಹಲವಾರು ಬಾರಿ ಕಂಡಿದೆ. ಆದರೆ ಈ ಬಾರಿಯದ್ದು ಹಲವು ಕಾರಣಕ್ಕೆ ವಿಶೇಷವಾಗಿದೆ.

ಶತಾಯ ಗತಾಯ ಅಧಿಕಾರ ಹಿಡಿಯಲು ಹಿಂದೂತ್ವದ ಬಿಲ್ಲಿಗೆ ಜಾತಿಬಾಣ ಹೂಡಿ ಅಧಿಕಾರವನ್ನು ಹೊಡೆಯಲು ನಡೆಸುತ್ತಿದ್ದ ಪ್ರಯತ್ನ ಸ್ವಲ್ಪ ಬೂಮರಾಂಗ್ ಆಗುತ್ತಿರುವಂತೆ ಕಾಣುತ್ತಿದೆ. ಬಿಜೆಪಿ ನಡೆಸುತ್ತಿದ್ದ ಅಂತರಂಗ ಮತ್ತು ಬಹಿರಂಗದ ಜಾತಿ ರಾಜ ಕಾರಣ ಪ್ರಾಂಗಣವನ್ನು ದಾಟಿ ಈಗ ಗರ್ಭಗುಡಿಯನ್ನೇ ಪ್ರವೇಶಿಸಿದೆ. ಏಕೆಂದರೆ ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಬರಲು ಬಹುಪಾಲು ಕಾರಣವಾಗಿದ್ದು ಒಕ್ಕಲಿಗ ಮುಖ್ಯಮಂತ್ರಿ ಕುಮಾರಸ್ವಾಮಿ ಲಿಂಗಾಯತ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ ಎಂಬ ಅನುಕಂಪ, ಲಿಂಗಾಯತ ಮಠಾಧಿಪತಿಗಳ ಅವಕಾಶವಾದಿ ಜಾತಿವಾದಿ ರಾಜಕಾರಣ, ರೆಡ್ಡಿ ಬ್ರದರ್ಸ್‌ಗಳ ದುಡ್ಡು.

ಹೀಗಾಗಿ ಕರ್ನಾಟಕದ ಇತರ ಭಾಗದಲ್ಲಿ ಬಿಜೆಪಿಯ ವಿಜಯ ಪ್ರಧಾನವಾಗಿ ಅನು ಕಂಪದ ಮುಸುಕಿನಲ್ಲಿದ್ದ ಲಿಂಗಾಯತರ ಸೇಡಿನ ಜಾತಿ ಓಟಾಗಿತ್ತೇ ವಿನಃ ಸಂಪೂರ್ಣವಾಗಿ ಹಿಂದೂತ್ವದ ಸಿದ್ಧಾಂತದ ವಿಜಯವಾಗಿರಲಿಲ್ಲ. ಆದರೆ ಕರಾವಳಿ ಹಾಗಲ್ಲ. ಇಲ್ಲಿ ಆರೆಸ್ಸೆಸ್ ಕಳೆದ 20-25 ವರ್ಷಗಳಿಂದ ಸತತವಾಗಿ ಮೊಗ ವೀರ, ಬಿಲ್ಲವ ಮತ್ತು ಬಂಟ ಸಮುದಾಯಗಳ ನಡುವೆ ಹಿಂದೂತ್ವ ಸಂಘಟನೆಗಳನ್ನು ಕಟ್ಟುತ್ತಾ ಬಂದಿದೆ. ಅಲ್ಲಿಂದ ಬಿಜೆಪಿಗೆ ಆಯ್ಕೆಯಾಗಿ ಬಂದ ಎಲ್ಲರೂ ಆರೆಸ್ಸೆಸ್ಸ್ ಶಾಖಾ ಮಠದವರೇ. ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಪ್ರಬಲ ಮುಸ್ಲಿಂ ವಿರೋಧಿ ಸಮೂಹ ಸನ್ನಿಯನ್ನು ಸೃಷ್ಟಿಸಿರುವ ಸಂಘಪರಿವಾರ ಹಿಂದೂತ್ವವಾದಿ ಸಿದ್ಧಾಂತಕ್ಕೆ ಪ್ರಬಲವಾದ ಸಂಘಟನಾ ತಳಹದಿಯನ್ನು ಕರಾವಳಿಯ ಎಲ್ಲಾ ಸಮುದಾಯ ಗಳಲ್ಲೂ ಪಡೆದುಕೊಂಡಿತ್ತು.

ಹೀಗಾಗಿ ಅಲ್ಲಿ ಬಿಜೆಪಿ ಪಡೆಯುತ್ತಿದ್ದ ಓಟು ಜಾತಿ ಓಟಲ್ಲ. ಅದು ಬಿಜೆಪಿ ಪಕ್ಷದ ಹಿಂದೂತ್ವವಾದಿ ಸಿದ್ಧಾಂತಕ್ಕೆ ಬೀಳುತ್ತಿದ್ದ ಓಟು. ಕರಾವಳಿಯ ಇಡೀ ಹಿಂದೂ ಸಮುದಾಯವೇ ಸಂಘ ಪರಿವಾರದ ರಾಜಕಾ ರಣಕ್ಕೆ ಪಕ್ಕಾಗಿದೆಯೆಂಬುದು ಇದರ ಅರ್ಥವಲ್ಲ ವಾದರೂ ಚುನಾವಣೆಯ ಸಂದರ್ಭದಲ್ಲಿ ಅದು ಮುಖ್ಯವಾಗುತ್ತಿತ್ತು ಎಂಬುದಂತೂ ನಿಜ. ಹೀಗಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನಾದ೯ನ ಪೂಜಾರಿಯೆಂಬ ದೊಡ್ಡ ಕಾಂಗ್ರೆಸ್ ಘಟಕದೆದುರು ನಳಿನ್ ಕುಮಾರ್ ಕಟೀಲ್ ಎಂಬ ವ್ಯಕ್ತಿ ಬಿಜೆಪಿಯಿಂದ ಚುನಾವಣೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಆಯ್ಕೆಗೊಳ್ಳುತ್ತಾರೆ. ಇದೆಲ್ಲದರ ಹಿಂದೆ ಆರೆಸ್ಸೆಸ್‌ನ ನಿರಂತರ ಮತ್ತು ಸತತ ದ್ವೇಷ ರಾಜ ಕಾರಣದ ಸಂಘಟನಾ ಸಧೃಢೀಕರಣದ ಅಂಶವಿದೆ.

ಹೀಗಾಗಿಯೇ ಆರೆಸ್ಸೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸಭೆ ಕರ್ನಾಟಕದಲ್ಲಿ ನಡೆದಾಗ ಅವರು ಆಯ್ಕೆ ಮಾಡಿದ ಜಾಗ ಕರಾವಳಿಯ ಪುತ್ತೂರು. ಹಾಗೆಯೇ ಕರಾವಳಿ ಭಾಗದ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರು ಕೇವಲ ಕರಾವಳಿಯಲ್ಲಿ ಮಾತ್ರವಲ್ಲದೇ ಇಡೀ ಬಿಜೆಪಿ ಸರ್ಕಾರದ ರಿಮೋಟ್ ಕಂಟ್ರೋಲ್ ಆಗಿದ್ದಾರೆ ಮತ್ತು ದೇಶಮಟ್ಟದಲ್ಲೇ ಆರೆಸ್ಸೆಸ್ ಸಂಘಟನೆಯೊಳಗೆ ಪ್ರಭಾವಿಯಾಗಿ ಬೆಳೆದಿದ್ದಾರೆ.

ಆದರೆ ಈಗ ಇಂಥಾ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಕರಾವಳಿಯ ಹಿಂದೂ ಸಮುದಾ ಯವೇ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸು ತ್ತಿದೆ. ಕೊನೆ ಗಳಿಗೆಯಲ್ಲಿ ಭಂಟರ ಪ್ರಭಾವಿ ಹಿರಿಯ ನಾಯಕ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿಗಿರಿಯು ಕೊನೇ ಕ್ಷಣದಲ್ಲಿ ತಪ್ಪಲು ಕಲ್ಲಡ್ಕ ಪ್ರಭಾಕರ ಭಟ್ಟರೇ ಕಾರಣವೆಂದು ರಾಜೀನಾಮೆ ನೀಡಿ ಹೊರಬಂದ ಶಾಸಕ ಶೆಟ್ಟರೇ ಹೇಳಿದ್ದಾರೆ. ತಾನು ಪ್ರಭಾಕರ ಭಟ್ಟರ ಮಾತನ್ನು ಶಿರಸಾವಹಿಸಿ ಪಾಲಿಸದೇ ಇದ್ದದ್ದೇ ತನ್ನ ಹೆಸರು ಮಂತ್ರಿ ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಮಾಯವಾಗಲು ಕಾರಣವೆಂದು ಶ್ರೀನಿವಾಸ ಶೆಟ್ಟಿ ಸ್ಪಷ್ಟವಾಗಿ ಮತ್ತು ಬಹಿರಂಗವಾಗಿ ಹೇಳಿದ್ದಾರೆ. ಈ ಹಿಂದೆಯೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮುಖಸ್ಥರ ನೇಮಕಾತಿ ವಿಷಯದಲ್ಲಿ ಭಟ್ಟರು ಎಲ್ಲಾ ಕುತಂತ್ರಗಳನ್ನು ನಡೆಸಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆ ಸ್ಥಾನಕ್ಕೆ ಬರುವುದನ್ನು ತಡೆಗಟ್ಟಿದ್ದರಂತೆ.

ಆಸ್ತಿ ಮತ್ತು ಅಧಿಕಾರಕ್ಕೆ ಸಂಬಂಧಪಟ್ಟಂಥ ಇಂಥಾ ಹತ್ತು ಹಲವು ಸೆಕ್ಯುಲರ್ ಸಂಗತಿಗಳು ಈ ಧರ್ಮಾಧಾರಿತ ಪಕ್ಷದಲ್ಲಿ ಒಳಗೊಳಗೆ ಬಂಟ-ಭಟ್ಟ ಜಗಳಕ್ಕೆ ಕಾರಣವಾಗಿದೆ. ಹೀಗಾಗಿಯೇ ಇದು ತನಗಾದ ಅವಮಾನವಲ್ಲ ತನ್ನ ಕ್ಷೇತ್ರದ ಜನರಿಗಾದ ಅವಮಾನ ಎಂದು ಹೇಳಿರುವುದರ ಹಿಂದೆ ಬಂಟ ಸಮುದಾಯದ ಪ್ರತಿಷ್ಠೆಗೆ ಆಗಿರುವ ಅವಮಾನವೆಂಬುದೂ ಎದ್ದು ಕಾಣುತ್ತಿದೆ. ಇದರ ಪರಿಣಾಮವಾಗಿಯೇ ಕುಂದಾಪುರ ಕ್ಷೇತ್ರದ ಜನತೆ ಮಾತ್ರವಲ್ಲದೇ ಇತರ ಹಲವು ಕಡೆ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ರಾಸ್ತಾ ರೋಖೋ, ಭಟ್ಟರ ಪ್ರತಿಕೃತಿ ದಹನ, ಬೆಂಗಳೂರಿನಲ್ಲಿ ಚಪ್ಪಲಿ ಹಾರ ಇನ್ನಿತ್ಯಾದಿ ಪ್ರತಿಭಟನೆಗಳು ಸತತವಾಗಿ ನಡೆಯುತ್ತಿವೆ.

ಮತ್ತೊಂದು ಕಡೆ ಡಿಸಿಎಂ ಆದ ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರು ‘‘ಶ್ರೀನಿವಾಸ ಶೆಟ್ಟಿಯವರಿಗೆ ಅಧಿಕೃತವಾಗಿ ಪಕ್ಷದಿಂದ ಮಂತ್ರಿ ಭರವಸೆ ನೀಡಿರಲಿಲ್ಲ’’ ಎಂದು ಹೇಳುವ ಮೂಲಕ ಆರೆಸ್ಸೆಸ್‌ನ ಸ್ಥಳೀಯ ನಾಯಕರು ಮತ್ತು ಯಡಿಯೂರಪ್ಪನವರ ಪುತ್ರ ರಾಘವೇಂದ್ರರ ಮಾತಿಗೆ ಬೆಲೆಯಿಲ್ಲ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. ವಾಸ್ತವ ವಾಗಿ ರಾಘವೇಂದ್ರರಿಗೆ ಕುಂದಾಪುರದಲ್ಲಿ ಟೂರಿಸಂ ವ್ಯವಹಾರವಿದೆ. ಈ ವ್ಯವಹಾರದಲ್ಲಿ ‘ಸಜ್ಜನ’ ಶೆಟ್ಟರ ಪಾಲೆಷ್ಟು, ಪಾಲು ಕೊಡದಿದ್ದಕ್ಕೆ ಭಟ್ಟರ ಕೋಪವೆಷ್ಟು? ಗೊತ್ತಿಲ್ಲ.ಅದೇನೇ ಇದ್ದರೂ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಮಂತ್ರಿ ಮಾಡುವುದರಲ್ಲಿ ರಾಘವೇಂದ್ರನಿಗೆ ವಿಶೇಷ ಆಸಕ್ತಿ ಇದ್ದದ್ದು ಮಾತ್ರ ನಿಚ್ಚಳ. ಅದೇನೇ ಇರಲಿ ನಂತರದಲ್ಲೂ ಬಿಜೆಪಿಯ ನಾಯಕರು ಶೆಟ್ಟರನ್ನು ತಾಜಾ ಮಾಡಲು ಯಾವ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ.

ಹೋದರೆ ಹೋಗಲಿ ಎಂಬ ಬಿಜೆಪಿ ಪಕ್ಷದ ನಿಲುವು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ಗಟ್ಟಿಗೊಳಿಸಿದೆಯಲ್ಲದೆ ಅವರು ಪಕ್ಷದಿಂದಲೇ ಹೊರಹೋಗುವ ತೀರ್ಮಾನವನ್ನು ತೆಗೆದುಕೊಳ್ಳುವ ಹೊಸ್ತಿಲಲ್ಲಿ ದ್ದಾರೆ. ಈಗಾಗಲೇ ಜೆಡಿಎಸ್ ಅವರನ್ನು ಸಂಪ ರ್ಕಿಸಿದೆಯೆಂದೂ ಅದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆಂಬ ಎಂಬ ಸುದ್ದಿಯೂ ದಟ್ಟವಾ ಗಿದೆ. ಅದೇ ಹಾದಿಯಲ್ಲಿ ಮತ್ತೊಬ್ಬ ಕರಾವಳಿ ಶಾಸಕ ಅಂಗಾರ ಕೂಡ ಇದ್ದಾರೆ. ರಘುಪತಿ ಭಟ್ಟ, ಯೋಗೇಶ್ ಭಟ್ಟ ಹಾಗೂ ಇನ್ನಿತರ ಕರಾವಳಿಯ ಶಾಸಕರೂ ಸಹ ಪ್ರಪ್ರಥಮ ಬಾರಿಗೆ ಬಿಜೆಪಿ ಪಕ್ಷದ ವಿರುದ್ಧ ಮತ್ತು ಪರೋಕ್ಷವಾಗಿ ಆರೆಸ್ಸೆಸ್‌ನ ಕರಾವಳಿಯ ಸರಸಂಘ ಚಾಲಕ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೂ ಈ ಬಾರಿಯ ಬಿಕ್ಕಟ್ಟು ಹೊರಹಾಕಿರುವ ಅತಿ ಕೂತೂಹಲಕಾರಿ ಬೆಳವಣಿಗೆ.

ಲೇಖನದ ಮೊದಲಿನಲ್ಲೇ ಚರ್ಚಿಸಿದಂತೆ ಕರ್ನಾಟಕದ ಇತರ ಭಾಗದಂತಲ್ಲದೇ ಕರಾವಳಿಯ ಬಿಜೆಪಿ ಓಟು ಪ್ರಧಾನವಾಗಿ ಅದರ ಹಿಂದೂತ್ವವಾದಿ ಸಿದ್ಧಾಂತಕ್ಕೆ ಬಿದ್ದ ಓಟು. ಪ್ರಧಾನವಾಗಿ ಅಬ್ರಾಹ್ಮಣ ಮತ್ತು ಅವೈದಿಕ ಸಾಂಸ್ಕೃತಿಕ ಪರಂಪರೆ ಹೊಂದಿರುವ ಬಂಟ, ಬಿಲ್ಲವ ಮತು ಮೊಗವೀರ ಸಮುದಾಯಗಳನ್ನು ಮತ್ತೆ ಬ್ರಾಹ್ಮಣವಾದಿ ಮೇಲರಿಮೆಯ ಹಿಂದೂತ್ವದ ತೆಕ್ಕೆಗೆ ತರುವುದರಲ್ಲಿ ಆರೆಸ್ಸೆಸ್ ಇಲ್ಲಿ ಸಾಪೇಕ್ಷವಾಗಿ ಯಶಸ್ಸು ಕಂಡಿದೆ. ಇಲ್ಲಿನ ಭೂತಗಳ ಬಾಯಲೂ ಭಗವದ್ಗೀತೆ ಪ್ರವಚನ ಮಾಡಿಸುವಷ್ಟರ ಮಟ್ಟಿಗೆ ಕಳೆದ 20 ವರ್ಷಗಳಲ್ಲಿ ಸಂಘಪರಿವಾರ ಇಲ್ಲಿನ ಜನಸಂಸ್ಕೃತಿಯ ಮೇಲೆ ನಡೆಸಿದ್ದ ದಾಳಿ ಬ್ರಾಹ್ಮಣ್ಯದ ಅಧಿಪತ್ಯಕ್ಕೆ ಒಳಪಡಿಸಿದೆ.

ಈ ಸಾಂಸ್ಕೃತಿಕ ವಿಜಯದ ನಂತರದಲ್ಲಿ ಅವರ ಹಿಂದೂ ರಾಷ್ಟ್ರೀಯವಾದವನ್ನು ಬಹಳ ಸುಲಭವಾಗಿ ಅಲ್ಲಿನ ಬಂಟ ಮತ್ತು ಶೂದ್ರ ಶಕ್ತಿಗಳಿಗೆ ತುಂಬುವಲ್ಲಿ ಯಶಸ್ವಿಯಾಗಿವೆ. ಸಂಘಪರಿವಾರದ ಇತ್ತೀಚಿನ ಇತಿಹಾಸವನ್ನು ನೋಡಿದರೆ ಈ ಶೂದ್ರ ಮೇಲ್ ವರ್ಗವನ್ನು ಅದರ ಹಿತಾಸಕ್ತಿಗೆ ಧಕ್ಕೆಯಾಗದಂತೆ ತನ್ನ ಚೌಕಟ್ಟಿನೊಳಗೆ ಹಿಂದೂತ್ವ ತಂದುಕೊಳ್ಳದಿದ್ದಾಗಲೆಲ್ಲಾ ಆ ವರ್ಗ ತನ್ನ ಜಾತಿ ಬೆಂಬಲದೊಂದಿಗೆ ಹಿಂದೂತ್ವಕ್ಕೆ ಸವಾಲು ಹಾಕಿದೆ. ಆದರೆ ಬಹಳ ಬೇಗ ಹಿಂದೂತ್ವ ಆ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡು ಅಥವಾ ಇತರ ಒತ್ತಡಗಳನ್ನು ಸೃಷ್ಟಿಸಿ ಮಣಿಯುವಂತೆ ಮಾಡಿಕೊಂಡು ಮುನ್ನಡೆದಿದೆ. ಆದರೆ ಆ ಪ್ರಕ್ರಿಯೆಯಲ್ಲಿ ತನ್ನ ಹಿಂದೂತ್ವ ಚೌಕಟ್ಟಿನೊಳಗೂ ಸ್ವಲ್ಪ ಬದಲಾವಣೆ ಮಾಡಿಕೊಂಡಿದೆ.

ಆಸ್ತಿ ಮತ್ತು ಅಧಿಕಾರದ ನೆಲೆಯಲ್ಲಿ ಹುಟ್ಟಿಕೊಳ್ಳುವ ವೈರುಧ್ಯಗಳು ಕುಟುಂಬದೊಳಗೆ ಪೈಪೋಟಿಯನ್ನು ಹುಟ್ಟಿಹಾಕುವಂತೆ ಸಂಘಪರಿವಾರದೊಳಗೂ ಪೈಪೋಟಿಯನ್ನೂ, ಗುಂಪುಗಳನ್ನು ಹುಟ್ಟುಹಾಕಿದೆ. ಅದಕ್ಕೆ ವ್ಯಕ್ತಿ ಹಿತಾಸಕ್ತಿಯನ್ನು ಮೀರಿದ ಸಾಮಾಜಿಕ ನೆಲೆಯ ಬಣ್ಣವನ್ನು ಲೇಪಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಕೆಲವು ಜಾತಿಗೆ ಅನ್ಯಾಯವಾಗಿದೆ ಎಂತಲೂ ಕೆಲವರು ಸಂಘಟನೆಗೆ ಅನ್ಯಾಯವಾಗಿದೆ ಎಂತಲೂ ಬಣ್ಣ ಕಟ್ಟುತ್ತಾರೆ. ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತು ಆರೆಸ್ಸೆಸ್ ಒಳಗೂ ಸಹ ಯಡಿಯೂರಪ್ಪಮತ್ತು ಸದಾನಂದ ಗೌಡರ ಬಣಗಳು ರೂಪುಗೊಳ್ಳಲಿಲ್ಲವೇ...ಅದೇ ರೀತಿಯಲ್ಲಿ. ಹೀಗೆ ಬಿಜೆಪಿಯ ಗುಂಪುಗಾರಿಕೆ ಮತ್ತು ಕರಾವಳಿಯ ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಕರಣ ರುಜುವಾತುಗೊಳಿಸುವಂತೆ ಈ ಭ್ರಷ್ಟತೆ ಕೇವಲ ಬಿಜೆಪಿಯ ವಲಸಿಗರ ಅಥವಾ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.

ಆರೆಸ್ಸೆಸ್ ಅನ್ನು ಒಳಗೊಂಡಂತೆ ಇಡೀ ಸಂಘಪರಿವಾರ ಈ ಭ್ರಷ್ಟತೆಯಲ್ಲಿ ಪಾಲು ಪಡೆದಿದೆ. ಹೀಗಾಗಿಯೇ ಕೆಲವೊಮ್ಮೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕರಣದಲ್ಲಿ ಕಾಣುತ್ತಿರುವಂತೆ ಬಹಿರಂಗ ಬಂಡಾಯಗಳನ್ನು ಕಾಣಬೇಕಾಗುತ್ತದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಕರಣದಲ್ಲಿ ಪರಿವಾರದ ಸಂಘಟನೆಯನ್ನು ಬಳಸಿಕೊಂಡು ಕಲ್ಲಡ್ಕ ಪ್ರಭಾಕರ ಭಟ್ಟರು ಸಂಖ್ಯಾತ್ಮಕವಾಗಿ ಗಣನೀಯವಾಗಿರುವ ಪ್ರಬಲ ಮತ್ತು ಪ್ರಭಾವಿ ಭಂಟ ಸಮುದಾಯದ ಮೇಲ್ ವರ್ಗದ ಪ್ರತಿನಿಧಿಯಾದ ಶ್ರೀನಿವಾಸ ಶೆಟ್ಟರ ಬೆಳವಣಿಗೆಗೆ ಅಡ್ಡಗಾಲು ಹಾಕಿದ್ದಾರೆ. ಮತ್ತು ಒಟ್ಟಾರೆ ಬಿಜೆಪಿಯ 4 ವರ್ಷಗಳ ಅಧಿಕಾರಾವಧಿ ಆರೆಸ್ಸಸ್ ಮತ್ತು ಬಿಜೆಪಿಯನ್ನು ಎಷ್ಟು ಭ್ರಷ್ಟಗೊಳಿಸಿದೆ ಮತ್ತು ಗುಂಪುಗಾರಿಕೆಗೆ ಕಾರಣವಾಗಿದೆಯೆಂದರೆ ಶೆಟ್ಟಿಯವರು ಬಿಜೆಪಿ ತೊರೆದರೆ ತಡೆಯುವವರು ಯಾರೂ ಇಲ್ಲದೇ ಹೋಗಬಹುದು.

ಸಾರಾಂಶದಲ್ಲಿ ನೋಡಿದರೆ ‘ಹಿಂದೂ ಹಿಂದೂ ಒಂದು’ ಎಂದು ಸಂಘಪರಿವಾರ ಎಷ್ಟೇ ಬೊಬ್ಬೆ ಹಾಕಿದರೂ ಪ್ರಬಲ ಜಾತಿಗಳ ಮೇಲ್ ವರ್ಗದ ಹಿತಾಸಕ್ತಿಯನ್ನು ಹಿಂದೂತ್ವದ ಚೌಕಟ್ಟು ರಕ್ಷಿಸಿ ಬೆಳಯಲು ಅವಕಾಶ ಮಾಡಿಕೊಡದಿದ್ದರೆ ಸಾಮಾಜಿಕ ನೆಲೆಯನ್ನು ಪಡೆದುಕೊಳ್ಳುವುದು ಕಷ್ಟ. ದೇಶಾದ್ಯಂತ ಸಾಬೀತಾಗಿರುವುದೇ ಕರ್ನಾಟಕದಲ್ಲೂ ಸಾಬೀತಾಗಿದೆ. ಭಾರತದ ಈ ಜಾತಿ ಆಧಾರಿತ ಸಮಾಜದಲ್ಲಿ ಮೇಲಿನಿಂದ ಹೇರಿರುವ ವಿಕೃತ ಬಂಡವಾಳಶಾಹಿ ಆರ್ಥಿಕತೆ ಮತ್ತು ಪ್ರಜಾತಂತ್ರವು ಜಾತಿ ಮೀರಿದ ವರ್ಗ ಐಡೆಂಟಿಟಿಯನ್ನು ಕಟ್ಟಲು ಎಡಪಂಥೀಯರಿಗೆ ಸವಾಲು ಒಡ್ಡುತ್ತಿರುವಂತೆ ಬಲಪಂಥೀಯರಿಗೂ ಸವಾಲು ಒಡ್ಡುತ್ತದೆ.

ಇಲ್ಲಿ ಬೇರೆ ಬೇರೆ ಸಮುದಾಯಗಳ ಆಸಕ್ತಿಗಳನ್ನು ಬಲಗೊಳ್ಳುವುದು ಹಿಂದೂತ್ವದ ಜಾತಿ ಶ್ರೇಣೀಕೃತ ಸಿದ್ಧಾಂತಕ್ಕೆ ವ್ಯತಿರಿಕ್ತವಾದುದು. ಹೀಗಾಗಿಯೇ ಜಾತಿಯನ್ನು ಮೀರಿದ ಹಿಂದೂ ಐಡೆಂಟಿಟಿ ಸಮಾನ ಕಲ್ಪಿತ ಶತ್ರುವೊಬ್ಬ, ಮುಸ್ಲಿಮ್-ಪಾಕಿಸ್ತಾನ- ಇದ್ದಾಗ ರೂಪುಗೊಳ್ಳವುದು ಸುಲಭ. ಸಮಾನ ಶತ್ರುವಿಲ್ಲದಾಗ ಜಾತಿ ತಾರತಮ್ಯ ಮತ್ತು ಬಡತನ ಶತ್ರುಗಳಾಗಿ ಕಾಣತೊಡಗುವುದು ಸಹಜ. ಏಕೆಂದರೆ ಅದು ಕಲ್ಪಿತವಲ್ಲ. ನಿಜವಾದದ್ದು. ಆದರೆ ನಿಜವಾದರೂ ಒಂದು ಎಡಪಂಥೀಯ ಅರ್ಥಾತ್ ವರ್ಗದ ನೆಲೆಯಲ್ಲಿ ಜನರನ್ನು ಸಂಘಟಿಸುವ ರಾಜಕಾರಣದ ಅನುಪಸ್ಥಿತಿಯಲ್ಲಿ ಜೀವನದ ಅನುಭವ ಪ್ರಜ್ಞಾಪೂರ್ವಕ ಅಭಿಪ್ರಾಯವಾಗಿ ಮತ್ತು ಬದಲಾಗಬೇಕೆಂಬ ಹಂಬಲವಾಗಿ ಬದಲಾಗುವುದಿಲ್ಲ.

ಹೀಗಾಗಿ ಬಿಜೆಪಿಯೊಳಗಿನ ಗುಂಪುಗಾರಿಕೆ ಮತ್ತು ಆಸ್ತಿ ಹಾಗೂ ಅಧಿಕಾರ ಆರೆಸ್ಸನ್ನು ಒಳಗೊಂಡಂತೆ ಇಡೀ ಸಂಘಪರಿವಾರವನ್ನು ದುರ್ಬಲಗೊಳಿಸುವ ಸಂದರ್ಭವಿದ್ದರೂ ಅದು ಪ್ರಬಲ ಜಾತಿಗಳ ಜಾತಿ ರಾಜಕಾರಣಕ್ಕೆ ಇಂಬುಗೊಡಬಹುದೇ ವಿನಃ ಜನಪರ ರಾಜಕಾರಣಕ್ಕೆ ಬಳಸಿಕೊಳ್ಳುವ ಪರಿಸ್ಥಿಯಲ್ಲಿ ಪ್ರಗತಿಪರ ರಾಜಕಾರಣವಿಲ್ಲ. ಹೀಗೆ ಹಾಲಾಡಿ ಶ್ರೀನಿವಾಸಶೆಟ್ಟಿಯವರ ಪ್ರಕರಣ ಮತ್ತು ಬಿಜೆಪಿಯೊಳಗಿನ ಒಟ್ಟಾರೆ ಗುಂಪುಗಾರಿಕೆ ಹಿಂದೂತ್ವಕ್ಕೂ ಇರುವ ಸವಾಲನ್ನು ಸೂಚಿಸುತ್ತದೆ.

ಆದರೆ ಆರೆಸ್ಸೆಸ್‌ನ ಅಂತರಂಗದ ಬೆಂಬಲದೊಂದಿಗೆ ಯಡ್ಯೂರಪ್ಪನವರು ನಡೆಸಿದ ಲಿಂಗಾಯತ ರಾಜಕಾರಣ ಅದಕ್ಕೆ ವ್ಯತಿರಿಕ್ತವಾಗಿ ತೀವ್ರಗೊಂಡ ಒಕ್ಕಲಿಗ ರಾಜಕಾರಣ ಇವು ಮತ್ತೆ ಕರ್ನಾಟಕದ ರಾಜಕಾರಣದಲ್ಲಿ ಬಲಾಢ್ಯ ಜಾತಿಗಳ ಮೇಲಾಳ್ವಿಕೆಯನ್ನು ಮುನ್ನೆಲೆಗೆ ತಂದಿದೆ. ಅರಸು ಸಮಯದಲ್ಲಿ ಅಧಿಕಾರ ಕಂಡ ಸಣಪುಟ್ಟ ಹಿಂದುಳಿದ ಜಾತಿಗಳು ಮತ್ತು ದಲಿತ ಜಾತಿಗಳು ಮತ್ತೆ ಈ ಮೇಲ್ಜಾತಿಗಳ ರಾಜಕಾರಣದ ಬಾಲಂಗೋಚಿಯಾಗುವ ಸ್ಥಿತಿಗೆ ದೂಡಲ್ಪಟ್ಟಿವೆ.





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್