ಸಾಹಿತಿ, ಕಲಾವಿದ, ನಟ ಈ ರೀತಿಯ ಸಂಕೇತಗಳನ್ನು ಕುರಿತು ಯೋಚಿಸಿದಂತೆಲ್ಲ; ನಿಗೂಢತೆ ದಟ್ಟವಾಗುತ್ತಲೇ ಹೋಗುತ್ತದೆ. ನೂರಾರು ತಲೆಮಾರುಗಳು ಕಳೆದರೂ; ಇದಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಸಂಭ್ರಮಿಸುತ್ತಲೇ ಬಂದಿದ್ದೇವೆ. ಈ ಸಂಭ್ರಮವು ಎಲ್ಲಾ ರೀತಿಯ ಮಾನವ ಸಹಜ ಸಂಕುಚಿತಗಳನ್ನು ಮೀರಿರುವಂಥದ್ದು. ಆದ್ದರಿಂದಲೇ ಇತಿಹಾಸದಲ್ಲಿ ಇಂಥದಕ್ಕೆ ಅಡೆತಡೆಗಳು ಎಂದೂ ಗಟ್ಟಿಯಾಗಲೇ ಇಲ್ಲ. ಯಾಕೆಂದರೆ ಜನತೆ ತಮಗೆ ಇದು ಅಥವಾ ಅದು ಪ್ರಿಯ ಅನ್ನಿಸಿದರೆ; ಎಂಥದನ್ನು ಬೇಕಾದರೂ ಪಕ್ಕಕ್ಕೆ ತಳ್ಳಿ ಸ್ವೀಕರಿಸಿ ಅನುಭವದ ಸಂಭ್ರಮದಲ್ಲಿ ವಿಹರಿಸುತ್ತ ಹೋಗುತ್ತಿರುತ್ತಾರೆ. ಹೀಗೆ ಹೋಗುತ್ತ ಬಂದಿರುವುದರಿಂದಲೇ ‘ಇತಿಹಾಸ’ ಶ್ರೀಮಂತವಾಗಿ ಬದುಕಿರುವುದು. ಈ ಸಮಾಜಕ್ಕೆ ಏನೋ ಕೊಡಬೇಕು ಮತ್ತು ಪಡೆಯಬೇಕು ಎಂಬುದರ ಮುಂದೆ ರೋಮಾಂಚನಗಳು; ಒಂದು ರೀತಿಯ ಧ್ವನಿಪೂರ್ಣವಾದ ನಾದಮಯತೆಯನ್ನು ತುಂಬಿ ಕೊಂಡಿರುತ್ತದೆ. ಹೀಗೆ ತುಂಬಿಕೊಂಡಿರುವ ಕೊಡಗಳು ಬರಿದಾಗುವುದೇ ಇಲ್ಲ. ಅತೃಪ್ತ ಕಾಮನೆಗಳಿಂದ ಯಾವ ಸಾಮ್ರಾಜ್ಯ ಶಾಹಿಯೂ ಜೀವಂತವಾಗಿ ಉಳಿಯಲೇ ಇಲ್ಲ. ಕೊನೆಗೂ ಉಳಿದಿರುವುದು ತೃಪ್ತ ಕಾಮನೆಗಳಿಂದ ಕೊಟ್ಟವರ ಕೊಡುಗೆಯಿಂದ. ಈ ತೃಪ್ತ ಕಾಮನೆಗೆ ಸಂತತನದ ಲೇಪನವಿರಲೇಬೇಕಾಗುತ್ತದೆ.
ಈ ದೃಷ್ಟಿಯಿಂದಲೇ ಸಾಹಿತಿ, ಕಲಾವಿದ, ನಟ ಮುಂತಾದವುಗಳ ಬಗ್ಗೆ ಧ್ವನಿಪೂರ್ಣತೆ ಬರಿದಾಗದೆ ಮುಂದು ವರೆಯುತ್ತಿರುವುದು. ಇತ್ತೀಚೆಗೆ ನನಗೆ ತುಂಬ ಪ್ರಿಯರಾದ ಪತ್ರಕರ್ತ ಕುಲದೀಪ ನಾಯರ್ ಅವರ ‘ಬಿಯಾಂಡ್ ದಿ ಲೈನ್ಸ್’ ಓದುತ್ತಿರುವಾಗ; ಸಂಭ್ರಮ, ವಿಸ್ಮಯ ಮತ್ತು ನಿಗೂಢತೆ ನನ್ನ ಸುತ್ತಲೂ ಆವರಿಸಿಕೊಂಡಿದ್ದವು. ಯಾಕೆಂದರೆ ನನ್ನ ಇತಿಹಾಸದ ನೆನಪು ಗಳು ಆಕೃತಿಯ ಘಟನೆಯೊಳಗೆ ಭಾಗಿಯಾಗತೊಡಗಿದ್ದವು. ಅದಕ್ಕೆ ಮತ್ತೊಂದು ಮುಖ್ಯ ಕಾರಣವಿರಬಹುದು: ಕುಲದೀಪ ನಾಯರ್ ಅವರ ಜೊತೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ ಎಂಬುದು. ಆದರೂ ‘ಬಿಯಾಂಡ್ ದಿ ಲೈನ್ಸ್’ ತಲ್ಲಣಗಳನ್ನು ಮುಂದಿಡುತ್ತಲೇ ಹೋಗುತ್ತದೆ. ಒಂದು ಅಪರೂಪದ ಜೀವನ ಚರಿತ್ರೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ.
ಇದೇ ಸಂದರ್ಭದಲ್ಲಿ ಯಾವುದೋ ಲೇಖನದ ಆಕರದ ಕಾರಣಕ್ಕಾಗಿ ಇಪತ್ತನೇ ಶತಮಾನದ ದೊಡ್ಡ ಚಿಂತಕ ರಲ್ಲೊಬ್ಬರಾದ ಲೂಯಿಸ್ ಫಿಷರ್‌ನ ‘ವೇರ್ ಈಸ್ ಗಾಂಧೀಜಿ?’ ಎಂಬ ಲೇಖನವನ್ನು ಓದುತ್ತಿದ್ದೆ. ಆಗ ಗಾಂಧೀಜಿ ಯವರ ಅಹಿಂಸಾ ತತ್ವ ಮತ್ತು ಅಸಹಕಾರ ಚಳುವಳಿಯ ಸಿದ್ಧಾಂತವು ಜಗತ್ತಿನಾದ್ಯಂತ ಯಾರ್ಯಾರ ಮೇಲೆಯೋ ಪ್ರಭಾವ ಬೀರಿದೆ. ಅದರಲ್ಲೂ ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಗೆ ಹುತಾತ್ಮನಾದ ಎಂಬ ವಿಷಯ ಗೊತ್ತಿದೆ. ಹಾಗೆಯೇ ಎಷ್ಟೊ ವಿಶ್ವವಿದ್ಯಾ ನಿಲಯಗಳ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ವಿಯಟ್ನಾಂ ಮೇಲಿನ ಯುದ್ಧದ ವಿರುದ್ಧ ಧರಣಿ, ಸತ್ಯಾಗ್ರಹಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ರೋಮಾಂಚನ ಅನ್ನಿಸಿದ್ದು: ಅಮೆರಿಕಾದ ಸೈನ್ಯದ ಕ್ಯಾಪ್ಟನ್ ಒಬ್ಬರು; ‘‘ನಾನು ಯುದ್ಧದಲ್ಲಿ ಭಾಗವಹಿಸುವ ಪೈಲಟ್‌ಗಳಿಗೆ ತರಬೇತಿ ಕೊಡುವುದಿಲ್ಲ’’ ಎಂದು ಪ್ರತಿರೋಧ ವ್ಯಕ್ತಪಡಿಸಿದಾಗ ಆತನನ್ನು ಒಂದು ವರ್ಷ ಜೈಲಿನಲ್ಲಿ ಡುವರು. ಆದರೂ ಆತ ವಿಚಲಿತನಾಗಲಿಲ್ಲ.
ಒಂದು ಕ್ಷಣ ನನಗೆ ನಾನೇ ‘ಹೌ ಬ್ಯೂಟಿಫುಲ್’ ಎಂದು ಗುನುಗುನಿಸಿಕೊಂಡೆ. ಇದರ ಜೊತೆಗೆಯೇ ಲೂಯಿಸ್ ಫಿಷರ್‌ನ ಈ ಲೇಖನವನ್ನು ಹಿಂದೆ ಎರಡು ಮೂರು ಬಾರಿ ಓದಿಕೊಂಡಿದ್ದರೂ; ಈ ಬಾರಿಯ ಓದಿನಲ್ಲಿ ‘ಕ್ಯಾಪ್ಟನ್’ ನಿಜವಾಗಿಯೂ ನನ್ನ ಮನಸ್ಸಿನ ಬಯಲಿನಲ್ಲಿ ತುಂಬ ಎತ್ತರದ ಸ್ಥಾನದಲ್ಲಿ ನಿಂತಿದ್ದ. ಈ ಕಾರಣಕ್ಕಾಗಿಯೇ ನಮ್ಮ ನಡುವಿನ ಅಮೂಲ್ಯ ಕೃತಿಗಳು, ಚಿಂತನೆಗಳು ಹಾಗೂ ಕಲಾಕೃತಿಗಳು ಅರ್ಥಗಳನ್ನು ವಿಸ್ತರಿಸು ತ್ತಲೇ ಇರುತ್ತವೆ. ಆದ್ದರಿಂದಲೇ ‘ಓದು ಮತ್ತು ನೋಟ’ ಹೊಸ ಹೊಸ ಆಯಾಮಗಳನ್ನು ಪಡೆಯುತ್ತಲೇ ಹೋಗುವುದು. ಪರೋಕ್ಷವಾಗಿ ಸಮಾಜದ ರಕ್ಷಾಕವಚಗಳಾಗಿ ಕಾರ್ಯ ನಿರ್ವ ಹಿಸುವುದು.
ಇಷ್ಟೆಲ್ಲಾ ಮುಂದಿನ ವಾಕ್ಯಗಳಿಗೆ ಪೀಠಿಕೆಯಾಗಿ ಬರೆಯುವಾಗ; ಎಲ್ಲ ಶಬ್ದಗಳೂ ಕ್ಲೀಷೆಯಿಂದ ನರಳುತ್ತಿವೆಯೋನೋ ಎಂಬ ಭಯವೂ ಇದೆ. ಅದೇ ಸಮಯಕ್ಕೆ ಒಮ್ಮೆಮ್ಮೆ ಕೊನೆಗೂ ಸತ್ಯವಾಗಿ ಅಥವಾ ನಿಜವಾಗಿ ಯಾವುದು ಉಳಿಯುವುದು ಎಂಬ ಸಂಕೋಚದಿಂದಲೇ; ಒಂದು ಸಂಭ್ರಮ ವನ್ನು ಕುರಿತು ಇಲ್ಲಿ ದಾಖಲಿಸಬೇಕೆನ್ನಿಸುತ್ತಿದೆ. ಅದು ಅನುಭವದ ತೆಕ್ಕೆಯೊಳಗೆ ಚಾರಿತ್ರಿಕವಾ ದದ್ದು. ಇದೇ ತಿಂಗಳು ಜುಲೈ 13ರಂದು ಶುಕ್ರ ವಾರ ಜನಸ್ತೋಮದ ಸಾಹಿತ್ಯಿಕ ಸಂಭ್ರಮಕ್ಕೆ ಸಂಬಂಧಿಸಿದ್ದು. ತಮಿಳುನಾಡಿನ ಚೆನ್ನೈನಲ್ಲಿ ನಡೆ ದದ್ದು.
ಸಂದರ್ಭ: ತಮಿಳಿನ ಅತ್ಯಂತ ಜನಪ್ರಿಯ ಕವಿ ವೈರ ಮತ್ತು ಅವರ ಅರವತ್ತರ ಹುಟ್ಟು ಹಬ್ಬವಿತ್ತು. ಅದರಲ್ಲಿ ಭಾಗವಹಿಸಲು ಒಂದು ತಿಂಗಳ ಹಿಂದೆಯೇ ಕವಯಿತ್ರಿ ಮತ್ತು ಉತ್ತಮ ಅನುವಾದಕಿ ಮಲರ್‌ವಿಳಿಯವರು ಟ್ರೈನಿನಲ್ಲಿ ಟಿಕೆಟ್ ರಿಸರ್ವ್ ಮಾಡಿದ್ದರು. ಕಳೆದ ವರ್ಷವೇ ಕೊಯಮುತ್ತೂರಿನಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನಕ್ಕೆ ಹೋಗುವ ಆಸೆ ಇತ್ತು. ಆದರೆ ಹೋಗಲಾಗಲಿಲ್ಲ. ಅದಕ್ಕೆ ಪಶ್ಚಾತ್ತಾಪ ಪಟ್ಟಿದ್ದೆ. ಯಾಕೆಂದರೆ ಅಲ್ಲಿಯ ಲೇಖಕರು ಮತ್ತು ಸಾಹಿತ್ಯಾಭಿಮಾನಿಗಳು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ಹತ್ತಿರದಿಂದ ನೋಡುವ ಕುತೂಹಲ ದಟ್ಟವಾಗಿತ್ತು. ನಾವು ಬರುತ್ತೇವೆಂದು ಮಲರ್ ವಿಳಿಯವರು ವೈರಮುತ್ತು ಅವರಿಗೆ ತಿಳಿಸಿಬಿಟ್ಟಿದ್ದರು. ಅದಕ್ಕಿಂತ ಹೆಚ್ಚಾಗಿ ಮಲರ್‌ವಿಳಿಯವರು ಅತ್ಯಂತ ಮುಗ್ಧ ಮತ್ತು ಸಾಹಿತ್ಯ ಎಂದರೆ ಎಲ್ಲಿಲ್ಲದ ಉತ್ಸಾಹವನ್ನು ಮೈಮೇಲೆಳೆದುಕೊಂಡು ಕುಪ್ಪಳಿಸುವಂಥವರು.
ತಮಿಳಿನ ಬಹುದೊಡ್ಡ ಕವಿ ಮತ್ತು ಚಿಂತಕ ಪುದುಮೈಪಿತ್ತಂ ಮತ್ತು ನಮ್ಮ ಕನ್ನಡದ ಮಾಸ್ತಿಯವರನ್ನು ಕುರಿತು ಪಿಎಚ್‌ಡಿ ಪ್ರಬಂಧವನ್ನು ಸಿದ್ಧಪಡಿಸುವಂಥವರು.ಈಚೆಯಿಂದ ಎರಡು ವರ್ಷಗಳ ಹಿಂದೆ ವೈರಮುತ್ತು ಅವರು ಪರಿಚಯವಾಗಿದ್ದರು. ಪರಿಚಯವಾಗುವುದಕ್ಕೆ ಮುನ್ನ ಮಲರ್‌ವಿಳಿಯ ವರು ವೈರಮುತ್ತು ಅವರ ಬಗ್ಗೆ ಎಷ್ಟೊಂದು ಗುಣಗಾನ ಮಾಡಿದ್ದರು. ಈಗಲೂ ಆ ಗುಣ ಗಾನಕ್ಕೆ ಕಿಂಚಿತ್ತೂ ಊನವಾಗಿಲ್ಲ. ಮಲರ್‌ವಿಳಿ ಯವರು ವೈರಮುತ್ತು ಅವರ ಮೂವತ್ತೆರಡು ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದನ್ನು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದವರು ಪ್ರಕಟಿಸಿದ್ದಾರೆ.
ಚಿ.ಶ್ರೀನಿವಾಸ ರಾಜು ಅವರು ಕಟ್ಟಿ ಬೆಳೆಸಿದ ಕನ್ನಡ ಸಂಘದ ಪ್ರಕಾಶನ ಸಂಸ್ಥೆಯನ್ನು ಜೀವಂತವಾಗಿ ಉಳಿಸಿ ಕೊಂಡಿರುವಂಥವರು. ಈ ಕವನಗಳ ಸಂಕಲನವನ್ನು ಬಿಡುಗಡೆ ಮಾಡುವುದಕ್ಕೆ ವೈರಮುತ್ತು ಅವರು ಚೆನ್ನೈನಿಂದ ಬಂದಿ ದ್ದರು. ಬಿಡುಗಡೆಯ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ವಿಶಿಷ್ಟ ರೀತಿಯ ಕವಿ ಚಂದ್ರಶೇಖರ ಕಂಬಾರರು ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಶೇಷನಾರಾಯಣ ಅವರು ಮುಖ್ಯ ಅತಿಥಿಯಾಗಿದ್ದರು. ಕವಿಯ ಅಭಿಮಾನಿಗಳು ಕ್ರೈಸ್ಟ್ ಕಾಲೇಜಿನ ಸಭಾಂಗಣ ತುಂಬಿ ಹೊರಗೆ ಮತ್ತೊಂದು ಸಭಾಂಗಣಕ್ಕೆ ಆಗುವಷ್ಟು ತುಂಬಿದ್ದರು. ಬಿಡುಗಡೆ ಆಯಿತು. ವೈರಮುತ್ತು ಅವರು ತಮಿಳಿನಲ್ಲಿ ಮಾತಾಡಲು ನಿಂತರು. ಚಪ್ಪಾ ಳೆಯೋ ಚಪ್ಪಾಳೆ.
ಕಪ್ಪಗೆ ಸಣ್ಣಗೆ ಉದ್ದಕ್ಕಿರುವ ವೈರಮುತ್ತು ಅವರು ನೆಹರೂ ಪೈಜಾಮ ಮತ್ತು ಬೆಳ್ಳನೆಯ ಜುಬ್ಬಾ ಧರಿಸಿದ್ದರು. ಒಂದು ರೀತಿಯ ನಗು ಮುಖದಲ್ಲಿ ಎದ್ದು ಕಾಣುವ ಮೀಸೆ. ಆಕರ್ಷಕ ವ್ಯಕ್ತಿತ್ವ. ಇದಕ್ಕಿಂತ ಮೊದಲು ಎಂದೂ ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಆದರೆ ಎ.ಆರ್. ರೆಹಮಾನ್ ಎಂಬ ಅದ್ಭುತ ಸಂಗೀತ ಸಂಯೋಜಕನನ್ನು ಕುರಿತ ಕೃತಿಯಲ್ಲಿ ಗೀತೆ ಓದುವ ಆಕರ್ಷಕ ಭಾವಚಿತ್ರವನ್ನು ನೋಡಿದ್ದೆ. ನಿಜವಾಗಿಯೂ ಎಲ್ಲರನ್ನು ಆಕರ್ಷಿಸುವ ನೋಟ. ಇನ್ನು ಕಳೆದ ಮೂರು ನಾಲ್ಕು ದಶಕಗಳಿಂದ ಏಳು ಸಾವಿರಕ್ಕೂ ಮೇಲ್ಪಟ್ಟು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆಂದರೆ ಕೇಳಲೇಬೇಕಾಗಿಲ್ಲ. ಅವರ ಹಾಡುಗಳನ್ನು ಕೇವಲ ತಮಿಳುನಾಡು ಮಾತ್ರವಲ್ಲ, ಬೇರೆ ಭಾಷೆಯ ಚಲನಚಿತ್ರಪ್ರಿಯರು ಇಷ್ಟಪಡುತ್ತಾರೆ.
ಅವರ ‘ರೋಜಾ’ ಚಿತ್ರದ ಹಾಡನ್ನು ಈಗಲೂ ಗುನುಗುನಿಸುತ್ತಲೇ ಇರುತ್ತಾರೆ. ಅಂದು ಕ್ರೈಸ್ಟ್ ಕಾಲೇಜಿನಲ್ಲಿ ಸುಮಾರು ಮುಕ್ಕಾಲುಗಂಟೆ ಮಾತಾಡಿ ರೋಜಾ ಚಲನಚಿತ್ರದ ನುಡಿಗಳನ್ನು ಗುನು ಗುನಿಸಿದಾಗ ಇಡೀ ಸಭೆಯ ತಮಿಳು ಬಾಂಧವರು ಎದ್ದು ಅವರು ಧ್ವನಿಗೂಡಿಸಿದರು. ಅದೊಂದು ಭಾವನಾತ್ಮಕವಾದ ನಿಲುವಾಗಿತ್ತು. ನಾನು ಅವರ ನಡುವೆ ಕುಬ್ಜವಾಗಿ ಕೂತಿದ್ದೆ. ಮನುಷ್ಯರು ತಮ್ಮ ಭಾವನೆಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಮತ್ತು ಹಂಚುವುದಕ್ಕೆ ಎಷ್ಟೊಂದು ನೆಲೆಗಳಿವೆ ಅನ್ನಿಸಿತ್ತು.ಆ ಕಾಲಘಟ್ಟದಲ್ಲಿ ಕರುಣಾನಿಧಿ ಮತ್ತು ಎಸ್.ಎಸ್. ರಾಜೇಂದ್ರನ್ ಅಂಥವರು ತುಂಬ ಕ್ರಿಯಾಶೀಲರಾಗಿದ್ದರು. ಇದಕ್ಕೆ ಪೂರಕವಾಗಿ ಇವರಿಗೆಲ್ಲ ಮಾಸ್ಟರ್ ಗುರುವಿನ ರೀತಿಯಲ್ಲಿ ಪೆರಿಯಾರ್ ಅವರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.
ಪುರೋಹಿತಶಾಹಿಯ ವಿರುದ್ಧದ ಮನಸ್ಥಿತಿ ದಲಿತರಲ್ಲಿ ಮತ್ತು ಕೆಳವರ್ಗಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ: ಪೆರಿಯಾರ್, ಕರುಣಾನಿಧಿ, ಎಸ್.ಎಸ್.ರಾಜೇಂದ್ರನ್ ಮತ್ತು ಅಣ್ಣಾ ದೊರೈ. ಇಂದು ಅದರ ಮುಂದುವರಿದ ಭಾಗವಾಗಿ ವೈರಮುತ್ತು ಅವರು ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೃಹಧಾಕಾರವಾಗಿ ಬೆಳೆದು ನಿಂತಿದ್ದಾರೆ.ಅಂದು ಕ್ರೈಸ್ಟ್ ಕಾಲೇಜಿನಲ್ಲಿ ವೈರಮುತ್ತು ಅವರು ಮಾತಾಡಿ ಕೂತ ಮೇಲೆ; ಚಂದ್ರಶೇಖರ ಕಂಬಾರರು ಮತ್ತು ಶೇಷನಾರಾಯಣ ಅವರು ಮಾತಾಡುವ ಮುನ್ನ ಕನ್ನಡ ಗೀತೆಗಳನ್ನು ಹಾಡಿಸಲು ಪ್ರಯತ್ನಿಸಿದರು. ಆಗ ನಾನು ಮೃದುವಾಗಿ ಪ್ರತಿಭಟಿಸಿ: ‘‘ವೈರಮುತ್ತು ಅವರ ಮಾತೇ ಭಾವಗೀತಾತ್ಮಕವಾಗಿತ್ತು. ಮತ್ತೇಕೆ ಭಾವಗೀತೆಗಳನ್ನು ಹಾಡಿಸುತ್ತೀರಿ. ಆ ಭಾಷಣದ ಗುಂಗನ್ನು ಯಾಕೆ ಮುರಿಯುವಿರಿ’’ ಎಂದೆ. ಅಕ್ಕಪಕ್ಕ ಕೂತವರು ಬೆಂಬಲ ಸೂಚಿಸಿದರು.
ಆಗ ಕಥೆಗಾರ ಶೇಷನಾರಾಯಣ ಅವರು ವೈರಮುತ್ತು ಅವರ ಕಾವ್ಯದ ಹೆಚ್ಚುಗಾರಿಕೆ ಹಾಗೂ ಮಲರ್‌ವಿಳಿಯವರ ಉತ್ತಮ ಅನುವಾದ ಕುರಿತು ಮಾತಾಡಿದ್ದರು. ನಂತರ ಚಂದ್ರಶೇಖರ ಕಂಬಾರರು ಉತ್ತಮ ಭಾಷಣಕಾರರಾದರೂ; ವೈರಮುತ್ತು ಅವರು ಇಷ್ಟು ಅದ್ಭುತವಾಗಿ ಮಾತಾಡಿದ ಮೇಲೆ ನನ್ನ ಮಾತು ಅಗತ್ಯವಿದೆಯಾ? ಎಂದು ಅವರೊಡನೆ ಕೆಲವು ವರ್ಷಗಳಿಂದ ಇರುವ ಒಡನಾಟವನ್ನು ಸ್ಮರಿಸಿಕೊಂಡಿದ್ದರು. ಹಾಗೆಯೇ ವಿದೇಶದ ಕವಿಗೋಷ್ಠಿಗಳಲ್ಲಿ ಒಟ್ಟಿಗೆ ಭಾಗವಹಿಸಿ ಸಂಭ್ರಮಿಸಿದ್ದನ್ನು ಕುರಿತು ಸೂಚ್ಯವಾಗಿ ಪ್ರಸ್ತಾಪಿಸಿ ಅಧ್ಯಕ್ಷ ಭಾಷಣವನ್ನು ಮುಗಿಸಿದರು. ಮಲರ್‌ವಿಳಿಯವರು ನನ್ನನ್ನು ಅವರಿಗೆ ಪರಿಚಯಿಸಿದರು. ಆಗ ನನ್ನ ಬೆನ್ನು ಸವರಿ ‘‘ಹೌ ಬ್ಯೂಟಿಫುಲ್, ಯು ಆರ್ ಬ್ರಿಂಗಿಂಗ್ ಶೂದ್ರ’’ ಎಂದಿದ್ದರು. ನಂತರ ‘‘ಕಮ್ ಟು ಚೆನ್ನೈ ವಿಥ್ ಮರಲ್‌ವಿಳಿ’’ ಎಂದಾಗ ನಾನು ಆಗಲಿ ಎಂದು ಒಪ್ಪಿಗೆ ಸೂಚಿಸಿದ್ದೆ.
ವೈರಮುತ್ತು ಅವರ ಅಭಿಮಾನಿಗಳು ಕವನ ಸಂಕಲನಕ್ಕೆ ಹಸ್ತಾಕ್ಷರ ಪಡೆಯಲು ಕೋಟೆಯ ರೀತಿಯಲ್ಲಿ ಸುತ್ತುವರಿದಿದ್ದರು. ಅದನ್ನು ಭೇದಿಸಿಕೊಂಡು ನಾವು ಹೊರಗೆ ಬಂದಿದ್ದೆವು.ಇದಾದ ಎರಡು ತಿಂಗಳಿಗೆ ಬೆಂಗಳೂರಿನ ತಿಲಕ್‌ನಗರದ ಒಂದು ಮದುವೆಗೆ ಬಂದಿದ್ದರು. ಅಷ್ಟರಲ್ಲಿ ಅವರ ಕವನಗಳನ್ನು ಓದಿಕೊಂಡು ಖುಷಿಪಟ್ಟಿದ್ದೆ. ಇದೇ ಸಂದರ್ಭದಲ್ಲಿ ಒಮ್ಮೆ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಭೇಟಿಯಾದರು. ಅವರ ಬಳಿ ವೈರಮುತ್ತು ಅವರ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದೆ. ಹಂಸಲೇಖ ಅವರು ಬೇಸರದಿಂದ ‘‘ಶೂದ್ರ ಅವರೇ ನನಗೆ ತಿಳಿಸಬೇಕಾಗಿತ್ತು. ನಾನೂ ಅವರನ್ನು ಭೇಟಿಯಾಗಬೇಕಾಗಿತ್ತು. ಇಡೀ ದ್ರಾವಿಡ ಸಂಸ್ಕೃತಿಯನ್ನು ಅಂದು ನೀರು ಕುಡಿದಿರುವಂಥವರು’’ ಎಂದಾಗ; ವೈರಮುತ್ತು ಅವರನ್ನು ಕುರಿತು ಮತ್ತಷ್ಟು ಗೌರವ ಮೂಡಿತು. ಇದೇ ಮಾನಸಿಕ ಗುಂಗಿನಲ್ಲಿ ಮದುವೆಯ ಸಮಾರಂಭದಲ್ಲಿ ಅವರನ್ನು ಭೇಟಿಯಾಗಲು ಮಲರ್‌ವಿಳಿಯವರ ಜೊತೆ ಹೋಗಿದ್ದೆ. ಅಲ್ಲಿ ನನಗೆ ಪ್ರಿಯರಾದ ಮತ್ತು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿಯವರು ಆ ಚಾಲ್ಟ್ರಿಯಲ್ಲಿ ಭೇಟಿಯಾದರು.
ಈ ಮದುವೆಯ ಸ್ವಾರಸ್ಯವೆಂದರೆ: ವರನ ಹೆಸರೂ ವೈರಮುತ್ತು ಎಂದು. ಈ ಹೆಸರಿಡಲು ಮುಖ್ಯ ಕಾರಣ: ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ವರನ ತಂದೆ ತಮಿಳು ನಾಡಿನ ಪ್ರಸಿದ್ಧ ನಗರ ಮದುರೈನಲ್ಲಿ ವೈರಮುತ್ತು ಅವರ ಕಾವ್ಯವನ್ನು ಕೇಳಿ ಪ್ರಭಾವಿತನಾದವನು. ತನಗೆ ಮಗ ಹುಟ್ಟಿದರೆ ‘ವೈರಮುತ್ತು’ಎಂದು ಹೆಸರಿಡಬೇಕೆಂದು ಶಪಥ ಮಾಡಿ ಮುಂದೆ ಹುಟ್ಟಿದ ಮಗುವಿಗೆ ‘ವೈರಮುತ್ತು ’ಎಂದು ನಾಮಕರಣ ಮಾಡಿ ಬೆಳೆಸಿದವರು.ಇಂಥ ಜನಪ್ರಿಯ ಕವಿ ಮದುವೆಗೆ ಬಂದು ವದೂವರರನ್ನು ಆಶೀರ್ವದಿಸಲು ಬಂದಾಗ ವಿಚಿತ್ರ ರೀತಿಯ ನೂಕು ನುಗ್ಗಲು. ಕೊನೆಗೆ ವರನ ತಂದೆ ತಾಯಿಗಳು ಬಂದು ರಾಮ ಲಿಂಗಾರೆಡ್ಡಿಯವರನ್ನು ಕರೆದು ನಿಲ್ಲಿಸಿದರು.
ನಾನು ಜನರಿಂದ ತಪ್ಪಿಸಿಕೊಂಡು ದೂರ ನಿಂತಿದ್ದರೆ; ರೆಡ್ಡಿಯವರು ಮತ್ತು ಮಲರ್‌ವಿಳಿಯವರು ಒತ್ತಾಯಮಾಡಿ ಕರೆದರು. ‘ಗುಂಪಿನಲ್ಲಿ ಗೋವಿಂದ’ ಎನ್ನುವ ರೀತಿಯಲ್ಲಿ ವೀಡಿಯೋ ಕ್ಯಾಮರಾದಲ್ಲಿ ಬಿದ್ದೆವು. ಕೊನೆಗೆ ನಾವು ಹೇಗೋ ತಪ್ಪಿಸಿಕೊಂಡು ಮದುವೆಯ ಮಂಟಪದ ವೇದಿಕೆಯಿಂದ ಕೆಳಕ್ಕೆ ಇಳಿದೆವು. ರಾಮಲಿಂಗಾರೆಡ್ಡಿಯವರು ವೈರಮುತ್ತು ಅವರ ಬಗ್ಗೆ ಕೇಳಿದರು. ವಿಷಯ ತಿಳಿಸಿದೆ. ಅವರು ಆಶ್ಚರ್ಯದಿಂದ ಈ ರೀತಿ ಇರಲು ಸಾಧ್ಯವಾ? ಎಂದರು. ಅವರು ಊಟಕ್ಕೆ ಇರಲಿಲ್ಲ. ಮೆಲ್ಲಗೆ ತಪ್ಪಿಸಿಕೊಂಡರು. ನಾನು ತಪ್ಪಿಸಿಕೊಳ್ಳಲು ಆಗಲಿಲ್ಲ.
ಮಲರ್‌ವಿಳಿಯವರು ಮತ್ತು ಆಕೆಯ ತಂದೆಯವರು ಊಟ ಮಾಡಿ ಹೋಗಲೇಬೇಕೆಂದು ರೋಸಲಿನ್ ಎಂಬ ನಗುಮುಖದ ಕನ್ಯೆಗೆ ಜವಾಬ್ದಾರಿ ವಹಿಸಿದರು. ಈಕೆ ಮಲರ್‌ವಿಳಿಯವರ ಸಹೋದ್ಯೋಗಿ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ. ಮುಸ್ಲಿಂ ಸಮುದಾಯದ ಮ್ಯಾನೇಜ್‌ಮೆಂಟಿನವರು ನಡೆಸುತ್ತಿರುವ ಕಾಲೇಜು. ಇಡೀ ಕಾಲೇಜು ವಾತಾವರಣವೇ ಅರಮನೆಯ ರೀತಿಯಲ್ಲಿದೆ. ಅಷ್ಟು ಸ್ವಚ್ಫವಾಗಿಟ್ಟುಕೊಂಡಿದ್ದಾರೆ. ಇಲ್ಲಿಗೆ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಹೋಗಿದ್ದೆ. ರೋಸಲಿನ್ ಅವರ ಜೊತೆಯಲ್ಲಿ ಊಟಮಾಡಿ ಹೊರಟೆ. ಹೊರಡುವಾಗ ಮಲರ್‌ವವಿಳಿಯವರು ಬಂದು ‘‘ಶ್ರೀನಿವಾಸ್ ಕ್ಷಮಿಸಿ, ನಿಮ್ಮನ್ನು ವೈರಮುತ್ತು ಅವರ ಜೊತೆ ಊಟಕ್ಕೆ ಕೂರಿಸಬೇಕೆಂದು ತುಂಬ ಆಸೆ ಇತ್ತು’’ ಎಂದರು. ನಾನು ನಗುತ್ತ ಇರಲಿ ಬಿಡಿ ಕವಿಯ ಈ ರೀತಿಯ ಜನಪ್ರಿಯತೆಯನ್ನು ನೋಡಿದಂತಾಯಿತು ಎಂದು ಹೊರಟೆ. ಮನೆ ತಲುಪುವವವರೆಗೂ ವೈರಮುತ್ತು ಅವರು ನನ್ನ ಮನಸಿನ ತುಂಬಾ ಆವರಿಸಿಕೊಂಡಿದ್ದರು.
ಈ ಎಲ್ಲ ಹಿನ್ನೆಲೆಯ ನೆನಪಿನಿಂದ ವೈರಮುತ್ತು ಅವರ ಅರವತ್ತನೆಯ ವರ್ಷದ ಕಾರ್ಯಕ್ರಮದ ಸಂಭ್ರಮ ಹೇಗಿರುತ್ತದೆಂದು ತಿಳಿಯಲು ಮಲರ್‌ವಿಳಿಯವರ ಕುಟುಂಬದ ಜೊತೆಗೆ ಹೊರಟೆ. ನಮ್ಮ ಜೊತೆಯಲ್ಲಿ ಕವಿ ಮಿತ್ರರಾದ ಫ್ರೊ.ಬಿ.ಯಲ್ಲಪ್ಪ ಮತ್ತು ಬೇಲೂರು ರಘುನಂದನ್ ಅವರೂ ಇದ್ದರು. ಚೆನ್ನೈಗೆ ರೈಲಿನಲ್ಲಿ ಹೋದೆವು. ಬೆಳಗ್ಗೆ ನಾಲ್ಕೂವರೆಗೆ ತಲುಪಿದೆವು. ಇಡೀ ಭಾರತದ ಜನತೆ ಆ ರೈಲು ನಿಲ್ದಾಣದಲ್ಲಿ ಇದೆಯೇನೋ ಎನ್ನುವ ರೀತಿಯಲ್ಲಿ ಪ್ರಯಾಣಿಕರ ಗಿಜಿ ಗಿಜಿ. ಆರಾಮವಾಗಿ ಓಡಲಾಗದಷ್ಟು ಕಾಲ್ತೊಡರು. ಇದಕ್ಕಿಂತ ಹಾಯ್ ಅನ್ನಿಸಿದ್ದು ಜಿನುಗು ಮಳೆ. ಯಾಕೆಂದರೆ ಚೆನ್ನೈನಲ್ಲಿ ಬಿಸಿ ಇಲ್ಲವಲ್ಲ ಎನ್ನುವ ಖುಷಿ. ಕೊನೆಗೆ ರೋಸಲಿನ್ ಅವರ ಸೋದರ ವ್ಯವಸ್ಥೆ ಮಾಡಿದ್ದ ಟ್ಯಾಕ್ಸಿಯಲ್ಲಿ ನಮಗಾಗಿ ವ್ಯವಸ್ಥೆ ಮಾಡಿದ್ದ ಲಾಡ್ಜ್‌ಗೆ ಹೋಗಿ ಸ್ನಾನ ಮಾಡಿದೆವು. ಹತ್ತ್ತೂವರೆಗೆ ಇದ್ದ ಹುಟ್ಟಿದ ಹಬ್ಬದ ಕಾರ್ಯಕ್ರಮಕ್ಕೆ ಹೋದೆವು. ಅದು ಇದ್ದದ್ದು ಪೊನ್ನುಮನಣೆ ಮಾಳಿಗೈಯಲ್ಲಿ. ಜನ ತುಂಬಿಕೊಂಡಿದ್ದರು.
ಹತ್ತು ಮುಕ್ಕಾಲಿಗೆ ವೈರಮುತ್ತು ಅವರು ತಮ್ಮ ಮಾಮೂಲಿ ಬಿಳಿಯ ಉಡುಪಿನಲ್ಲಿ ಬಂದರು. ಎಲ್ಲರಿಗೂ ನಮಸ್ಕರಿಸುತ್ತಾ ನೂಕುನುಗ್ಗಲಿನಲ್ಲಿ ವೇದಿಕೆಯ ಮೇಲೆ ಹೋದರು. ಯಾವುದೇ ಆಡಂಬರವಿಲ್ಲದ ವೇದಿಕೆ. ಆದರೆ ರಸ್ತೆಯ ಉದ್ದಕ್ಕೂ ಕರುಣಾನಿಧಿಯವರ ಪೋಸ್ಟರ್‌ಗಳು. ಬಹಳ ಆಶ್ಚರ್ಯ ಸಂಗತಿಯೆಂದರೆ: ಸ್ವಾಗತದ ನಂತರ ಯಾವುದೇ ಮಾತು ಇರಲಿಲ್ಲ. ಸುಮಾರು ಎರಡೂವರೆ ಗಂಟೆಗೂ ಮೇಲ್ಪಟ್ಟು ವೈರಮುತ್ತು ಅವರು ನಿಂತೇ ಹೂವಿನ ಜೊಂಕೆಗಳನ್ನು ಸ್ವೀಕರಿಸುತ್ತಾ ಬಣ್ಣ ಬಣ್ಣದ ಶಾಲುಗಳನ್ನು ಹಾಕಿಸಿಕೊಂಡರು. ಕೈಮುಗಿಯುತ್ತ ಕೈಕುಲುಕುತ್ತಾ ವೀಡಿಯೋ ಕ್ಯಾಮರಾ ಮತ್ತು ಬೇರೆ ಬೇರೆ ರೀತಿಯ ಕ್ಯಾಮರಾಗಳಿಗೆ ಎದುರಾದರು. ನಾವು ಕಷ್ಟಪಟ್ಟು ವಿಷ್ ಮಾಡಲು ಹೋದೆವು. ನಗುತ್ತಾ ಇನ್ನೂ ಹತ್ತಿರ ಎಳೆದುಕೊಂಡು ಫೋಟೊಗೆ ನಿಂತರು. ಅಂಥ ಗದ್ದಲದಲ್ಲೂ ಹೌ ಈಸ್ ಕಂಬಾರ್ ಟೆಲ್ ಮೈ ವಿಷಸ್ ಎಂದರು. ಮತ್ತು ಊಟ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ನಾವು ಕೆಲವರು ಅಲ್ಲಿ ಊಟ ಮಾಡಲಿಲ್ಲ. ಹೊರಗೆ ಬಂದು ಏನೋ ತಿಂದು ನಮ್ಮ ಗೆಸ್ಟ್‌ಹೌಸ್‌ಗೆ ಹೋದೆವು. ಅಲ್ಲಿ ಸ್ವಲ್ಪ ಸಮಯವಿದ್ದು ಕಾರ್ಯಕ್ರಮಕ್ಕೆ ಹೊರಟೆವು. ವೈರಮುತ್ತು ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಕಾರ್ಯಕ್ರಮವಿದ್ದುದು ತೇನಂಪೇಟೆಯ ಕಾಮರಾಸ್‌ರ್ ಅರಂಗಮ್ ಸಭಾಂಗಣದಲ್ಲಿ ಬಹುದೊಡ್ಡ ಆಡಿಟೋರಿಯಂ. ಮೂರು ಸಾವಿರಕ್ಕೂ ಮೇಲ್ಪಟ್ಟು ಆಸನ ವ್ಯವಸ್ಥೆ ಇರುವಂತದ್ದು.ಆರೂವರೆಯ ಕಾರ್ಯಕ್ರಮಕ್ಕೆ ಐದು ಗಂಟೆಗೆ ಬಂದು ತುಂಬಿಕೊಂಡಿದ್ದರು. ನಾವು ಹಿಂದೆ ಹೇಗೋ ಸೀಟು ಪಡೆದೆವು. ಸಭಿಕರು ಸೀಟು ಸಿಗದೇ ಸುತ್ತಲೂ ನಿಂತರು. ಓಡಾಡುವ ಜಾಗದಲ್ಲೆಲ್ಲಾ ಒಬ್ಬರಿಗೊಬ್ಬರು ಅಂಟಿಕೊಂಡು ಕೂತರು. ಹೊರಗೆ ಸಭಿಕರು ಒಳಗೆ ಬರುವುದಕ್ಕೆ ಗದ್ದಲ ಮಾಡುತ್ತಿದ್ದರು.
ಒಬ್ಬೊಬ್ಬ ಅತಿಥಿ ಬಂದಾಗಲೂ ಚಪ್ಪಾಳೆ ಮತ್ತು ಸಿಳ್ಳೆಯ ಧ್ವನಿಯು ಸಭಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು.ಕರುಣಾನಿಧಿಯವರು ತಳ್ಳುಗಾಡಿಯಲ್ಲಿ ವೇದಿಕೆಗೆ ಬಂದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿದರು. 89ವರ್ಷದ ಕರುಣಾನಿಧಿಯವರು ಶ್ರೀಮಂತ ಬದುಕಿನ ಅನುಭವದಲ್ಲಿ ನಗುಮುಖವನ್ನು ತುಂಬಿಕೊಂಡಿದ್ದರು. ಎಲ್ಲರನ್ನೂ ವೇದಿಕೆಗೆ ಸ್ವಾಗತಿಸುವುದು, ಅವರಿಗೆ ಶಾಲು ತೊಡಿಸಿ ಸನ್ಮಾನ ಮಾಡುವುದು ಎಲ್ಲವನ್ನೂ ವೈರಮುತ್ತು ಅವರೇ ಮಾಡಿದರು. ತುಂಬಾ ಶಿಸ್ತಿನಿಂದ ಆಯೋಜಿಸಿದ್ದ ಕಾರ್ಯಕ್ರಮ.
ವೈರಮುತ್ತು ಅವರ ವ್ಯಕ್ತಿತ್ವವನ್ನು ಚಿತ್ರಿಸುವ ಸಣ್ಣ ಸಾಕ್ಷ ಚಿತ್ರ. ಅವರ ಕವಿತೆಗಳ ವಾಚನ,ಬಿಡುಗಡೆಯಾದ ಕೃತಿಯ ಆಯ್ದ ಕೆಲವು ಗದ್ಯಭಾಗಗಳು , ಕಮಲಾ ಹಾಸನ್, ಜಯಕಾಂತನ್ ಅವರು ತಮ್ಮನುಭವಗಳನ್ನು ಹಂಚಿಕೊಂಡರು. ಎಲ್ಲರೂ ಕರುಣಾನಿಧಿಯವರಿಗೆ ಆಗಾಧವಾದ ಗುಣಗಾನವನ್ನು ಸಲ್ಲಿಸಿದರು. ಅದನ್ನು ಅತ್ಯಂತ ಸ್ಥಿತ ಶ್ರಜ್ಞರಂತೆ ಸ್ವೀಕರಿಸುತ್ತಾ ಕೂತಿದ್ದರು. ಜಯಕಾಂತನ್ ಮಾತಾಡುವಾಗಲಂತೂ ನನಗೆ ಅವರೊಡನೆ ಕಳೆದ ಕೆಲವು ಗಂಟೆಗಳ ನೆನಪು ಧುತ್ತನೆ ಮನದಲ್ಲಿ ತುಂಬಿಕೊಂಡಿತು. ಇಪ್ಪತೈದು ವರ್ಷಗಳ ಹಿಂದೆ ಆಗ್ರಹಾರ ಕ್ರಷ್ಣಮೂರ್ತಿಯ ಮುಲಕ ಚೆನ್ನೈನಲ್ಲಿ ಸಂಜೆಯನ್ನು ಕಳೆದಿದ್ದು ಹಾಗೆಯೇ,‘ಶೂದ್ರ’ದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಕರೆಸಿದು ಲಂಕೇಶ್ ಅವರು ಜಯಕಾಂತನ್ ಅವರ ಮಾತುಗಳನ್ನು ಕೇಳುವುದಕ್ಕಾಗಿಯೇ ಬೆಂಗಳೂರಿನ ಯವನಿಕಾದ ಸಭಾಂಗಣದಲ್ಲಿ ಕಾಲ ಕಳೆದಿದ್ದರು.
ನಂತರ ಸಂಜೆಗೆ ಅವರು ಪತ್ರಿಕಾ ಕಚೇರಿಯಲ್ಲಿ ಮಾತುಕತೆಯ ಔತಣ, ಈ ಎಲ್ಲ ನೆನಪುಗಳ ಮುಂದೆ ಕರುಣಾನಿಧಿಯವರು ವೈರಮುತ್ತು ಅವರ ಕೃತಿಗೆ ಬರೆದ ಮುನ್ನುಡಿಯ ಮುವತ್ತೆರೆಡು ಪುಟಗಳನ್ನು ಎಷ್ಟು ಚೆನ್ನಾಗಿ ಓದಿದರೆಂದರೆ; ನಿಜವಾಗಿಯೂ ನಾನು ಥ್ರಿಲ್ ಆದೆ. ಆ ಶ್ರೀಮಂತ ಮನಸ್ಸಿನಲಿಯೂ ಮೂರುವರೆ ಗಂಟೆಗೂ ಮೇಲ್ಪಟ್ಟು ಕಾಲ ಕಳೆದರು. ಸಭಿಕರು ರೋಮಾಂಚಕಾರಿ ಚಪ್ಪಾಳೆ ಮತ್ತು ಸಿಳ್ಳೆಗಳ ನಡುವೆ, ಕಾರ್ಯಕ್ರಮ ಮುಗಿದ ಮೇಲೆ ಹೊರಗೆ ಬಂದರೆ ಸಭಿಕರೆ ವೈರಮುತ್ತು ಅವರ ಸುತ್ತ ತುಂಬಿದ್ದರು. ಎಲ್ಲರೂ ಅವರೊಡನೆ ಭಾವಚಿತ್ರಕ್ಕಾಗಿ ಒದ್ದಾಡುತ್ತಿದ್ದರು. ಇಂತದ್ದನ್ನೆಲ್ಲಾ ನಿರ್ಮಲ ಭಾವದಿಂದ ನೋಡುತ್ತಲೇ ಬಂದಿರುವ ಗಾಂಧೀಜಿಯವರ ಎತ್ತರವಾದ ಪ್ರತಿಮೆ.
ಒಂದು ಅಪರೂಪರದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂಬ ಭಾವನೆ ನನ್ನ ತುಂಬಿಕೊಂಡಿತ್ತು. ನಾನಂತೂ ಸಂತೋಷಪಟ್ಟಿದ್ದೆ. ಈ ಸಂತೋಷ ನನ್ನ ಪ್ರೀತಿಯ ಕಿವಿಗಳಾದ ಚಂದ್ರಶೇಕರ್ ಕಂಬಾರ್ ಅವರಿಗೆ ದೂರವಾಣಿಯಲ್ಲಿ ತಿಳಿಸಿದೆ. ಅವರು ತುಂಬಾ ಖುಷಿಯಿಂದ ಸ್ವೀಕರಿಸಿದರು. ಇದರ ಜೊತೆಗೆ ‘‘ಏಯ್ ಶೂದ್ರ, ಆ ವೈರಮುತ್ತು ಅದ್ಭುತ ಕಣೌ, ಹಿಂದೆ ಆಣ್ಣಾದೆರೈ ಮುಖ್ಯಮಂತ್ರಿಗಳಾಗಿದ್ದಾಗ; ಅವರಿಗೆ ತಿಳಿಸಿ ಅಂದಿನ ಮದ್ರಾಸ್‌ನ ಮೇಲಿನ ಬೀಚ್‌ನಲ್ಲಿ ಒಂದು ಕಿ.ಮೀಟರ್ ಶಾಮಿಯಾನ ಹಾಕಿಸಿ ಎ.ಕೆ.ರಾಮಾನುಜನ್ ಅವರಿಗೆ ಸನ್ಮಾನ ಮಾಡಿಸಿದರು. ಚಿನ್ನದ ಪದಕ ತೊಡಿಸಿದರು. ಅವರು ಸಂಗಂ ಕಾವ್ಯವನ್ನು ಇಂಗ್ಲಿಷಿಗೆ ಪರಿಚಯಿಸಿದಕ್ಕೆ.
ಆದರೆ ಇಲ್ಲಿ ನಾವು ಎಂ.ಪಿ.ಪ್ರಕಾಶ ಅವರನ್ನು ಮತ್ತೆ ಯಾರ್ಯಾರನ್ನು ಭೇಟಿಯಾಗಿ: ಪೊ.ಎ.ಕೆ ರಾಮಾನುಜನ್‌ಅವರು ಜಗತ್ತಿಗೆ ವಚನಗಳನ್ನು ‘ಸ್ಪೀಕಿಂಗ್ ಆಫ್ ಶಿವ’ ದ ಮೂಲಕ ಪರಿಚಹಿಸಿದ್ದಾರೆ. ನೂರಕ್ಕೂ ಮೇಲ್ಪಟ್ಟು ಜಗತ್ತಿನ ವಿಶ್ವವಿದ್ಯಾಲಯಗಳು ಆಕೃತಿಯನ್ನು ಅಧ್ಯಯನಕ್ಕೆ ಸ್ವೀಕರಿಸಿದೆ. ಒಂದು ಸನ್ಮಾನ ಮಾಡೋಣವೆಂದರೆ; ಯಾರೂ ಮುಂದೆ ಬರಲಿಲ್ಲ. ಶೂದ್ರ ನಾವು ದುರ್ಬಲರು’’ ಎಂದು ವಿಷಾದದಿಂದ ಹೇಳಿದರು.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...