ಬಿಜೆಪಿ ಶಾಸಕಾಂಗ ಸಭೆಗೆ ಐವತ್ತು ಶಾಸಕರು ಗೈರು ಹಾಜರಾಗಿದ್ದರು. ಸಚಿವ ಸಂಪುಟದ ಖಾತೆಗಳ ಹಂಚಿಕೆ ಬಗ್ಗೆ ಬಿಕ್ಕಟ್ಟು ಉಂಟಾಗಿದೆ. ವಿಧಾನಸಭಾ ಅಧಿವೇಶನದ ನಂತರ ಖಾತೆಗಳ ಮರು ಹಂಚಿಕೆಯ ಭರವಸೆ ನೀಡಲಾಗಿದೆ. ಡಿ.ವಿ. ಸದಾನಂದ ಗೌಡರ ಮನೆಯಲ್ಲಿ ಭಿನ್ನಮತೀಯ ಶಾಸಕರ ಔತಣಕೂಟ ನಡೆಯಿತು. ಹೀಗೆ ನಾನಾ ವಿಧದ ಸುದ್ದಿಗಳು ಖಾಸಗಿ ಟಿ.ವಿ. ಚಾನಲ್ ಗಳಲ್ಲಿ, ಪತ್ರಿಕೆಗಳಲ್ಲಿ ಉಪ್ಪು, ಖಾರದ ಲೇಪನ ದೊಂದಿಗೆ ಪ್ರಕಟವಾಗುತ್ತಿವೆ. ಜನರಿಗೂ (ಅಂದರೆ ಮಧ್ಯಮ ವರ್ಗ) ಇವುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಆದರೆ ಮಿಡಿಯಾದಲ್ಲಿರುವವರಿಗೆ ಇದು ಬಿಟ್ಟರೆ ಬೇರೆ ಸುದ್ದಿಗಳೇ ಇಲ್ಲ ಎಂಬಂತಾಗಿದೆ.ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದಾದರೂ ಯಾಕೆ? ಇದರಲ್ಲಿ ನೀತಿ ಧೋರಣೆಗೆ ಸಂಬಂಧಿಸಿದ ಬಗ್ಗೆ ಒಡಕುಂಟಾಗಿದೆಯೇ? ಎಂಬುದನ್ನು ಹುಡಕಲು ಹೊರಟಾಗ ದುರ್ಬಿನು ಹಾಕಿ ನೋಡಿದರೂ ಅಂಥ ಯಾವುದೇ ಭಿನ್ನಮತ ಕಾಣುವುದಿಲ್ಲ. ಆದರೆ ಈ ಜಗಳ ಯಾಕೆ? ಒಂದು ಚಿಕ್ಕ ಉದಾಹರಣೆ ತೆಗೆದುಕೊಂಡರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ದಲ್ಲಿದ್ದಾಗ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಸರಕಾರಿ ಬಂಗಲೆಯಲ್ಲಿ ನೆಲೆಸಿದ್ದರು.
ಮುಖ್ಯಮಂತ್ರಿ ಕುರ್ಚಿ ಮತ್ತೆ ಸಿಗುವುದಿಲ್ಲ ಎಂದು ಖಾತ್ರಿಯಾದ ನಂತರ ಈ ಮನೆಯನ್ನು ಅವರು ತೆರವುಗೊಳಿಸಿ ದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಮನೆಯನ್ನು ತಮ್ಮ ಆಪ್ತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಲಾಟ್ ಮಾಡಿದರು.ಇದಿಷ್ಟೆ ಆಗಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ ಅದೃಷ್ಟದ ನಿವಾಸ ಎಂದು ಪರಿಗಣಿಸಲಾದ ರೇಸ್‌ಕೋರ್ಟ್ ರಸ್ತೆ ಬಂಗಲೆಯನ್ನು ತನಗೆ ಒದಗಿಸಬೇಕೆಂದು ಸಚಿವೆ ಶೋಭಾ ಕರಂದ್ಲಾಜೆ ಕೊಕ್ಕೆ ಹಾಕಿ ದರು. ಮುಖ್ಯಮಂತ್ರಿ ಶೆಟ್ಟರರ ಮೊರೆ ಹೋದರು. ಆದರೆ ಶೋಭಾ ನಡೆಸಿದ ಕರಾಮತ್ತಿನ ಸುಳಿವು ಸಿಕ್ಕ ನಂತರ ಜಾರಕಿಹೊಳಿ ಈ ಬಂಗಲೆಗೆ ಬೀಗ ಹಾಕಿ ಬ್ರಾಹ್ಮಣ ಪುರೋಹಿತರನ್ನು ಕರೆಸಿ ಹೋಮ, ಪೂಜೆ ಮಾಡಿ ಗೃಹಪ್ರವೇಶ ಮಾಡಿ ಬಿಟ್ಟರು.
ಸರಕಾರ ಉರುಳಿದರೆ ಉರುಳಲಿ ನಾನು ಈ ಮನೆ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಈ ಮನೆಯನ್ನು ನವೀಕರಿಸಲು ಯಡಿಯೂರಪ್ಪ ಸರಕಾರದ ಬೊಕ್ಕಸದಿಂದ ಒಂದೂವರೆ ಕೋಟಿ ರೂ. ಬಳಸಿದ್ದರೆಂಬುದನ್ನು ಮರೆಯಬಾರದು. ಇದು ಒಂದು ಉದಾಹರಣೆ ಮಾತ್ರ. ಇಂಥವೆಲ್ಲ ಭಿನ್ನಾಭಿಪ್ರಾಯಗಳಿರುವುದು ಕಬಳಿಕೆಗೆ ಮಾತ್ರ ಸೀಮಿತವಾಗಿದೆ. ಸ್ವಂತದ ತಿಜೋರಿ ಯನ್ನು ತುಂಬಬಲ್ಲ ಸಮೃದ್ಧ ಖಾತೆಗಳಿಗಾಗಿ.
ನಿಗಮ-ಮಂಡಳಿಗಳ ಕುರ್ಚಿಗಳಿಗಾಗಿ. ಉಳಿದ ಹತ್ತು ತಿಂಗಳಲ್ಲಿ ಯಾರ್ಯಾರು ಎಷ್ಟೆಷ್ಟು ದೋಚಬೇಕೆಂಬ ಬಗ್ಗೆ ಈ ಕಿತ್ತಾಟ ನಡೆದಿದೆ. ಶೆಟ್ಟರರು ಪೂರ್ಣ ಪ್ರಮಾಣದ ಸಂಪುಟವನ್ನೇನೋ ರಚಿಸಿದರು. ಆದರೆ ಅತೃಪ್ತರ ಒಳಗುದಿ ತಣ್ಣಗಾಗಿಲ್ಲ. ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ಸಚಿವ ಸಂಪುಟದ ಗಾತ್ರ ಇಷ್ಟೇ ಇರಬೇಕೆಂದು ಕಾನೂನು ಮಾಡಿದ್ದರು. ಈ ಕಾನೂನು ಇಲ್ಲದಿದ್ದರೆ ರಾಜ್ಯದಲ್ಲಿ 110 ಮಂದಿಯ ಮಂತ್ರಿಮಂಡಲ ರಚನೆಯಾಗುತ್ತಿತ್ತು ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿದರು.
ಆದರೆ ಸರಕಾರದ ಧೋರಣೆಗಳಿಗೆ ಸಂಬಂಧಿಸಿದಂತೆ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಈ ಕಿತ್ತಾಟದ ನಡುವೆಯೇ ಆರೆಸ್ಸೆಸ್, ತನ್ನ ಕೋಮುವಾದಿ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಸದ್ದಲ್ಲದೆ ಜಾರಿಗೆ ತರುತ್ತಿದೆ. ಈ ಕಾರ್ಯಸೂಚಿ ಎಂದರೆ ಪುರೋಹಿತ ಶಾಹಿ ಫ್ಯಾಸಿಸ್ಟ್ ಹಿಂದುತ್ವವನ್ನು ರಾಜ್ಯದಲ್ಲಿ ಬಲವಾಗಿ ಬೇರೂರಿಸುವುದಲ್ಲದೆ ಬೇರೇನೂ ಅಲ್ಲ. ಆದರೂ ಸರಕಾರದಲ್ಲಿರುವ ಯಾವೊಬ್ಬ ದಲಿತ, ಶೂದ್ರ ಮಂತ್ರಿಯೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಈಶ್ವರಪ್ಪನಂತವರಂತೂ ಈ ಕಾರ್ಯಸೂಚಿಯನ್ನು ಜಾರಿಗೆ ತರಲು ಹುಟ್ಟಿ ಬಂದವರಂತೆ ಮಾತಾಡುತ್ತಾರೆ.
ಈ ಭಿನ್ನಾಭಿಪ್ರಾಯದ ಬಿರುಗಾಳಿಯ ನಡುವೆಯೂ ಶಿಕ್ಷಣವನ್ನು ಕೇಸರೀಕರಣ ಅಂದರೆ ಕೋಮುವಾದೀಕರಣಗೊಳಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ಯಶಸ್ವಿಯಾಗಿದೆ. ಸಂಘ ಪರಿವಾರದ ಸ್ವಯಂ ಸೇವಕ ಕಾಗೇರಿ ಅತ್ಯಂತ ನಿಷ್ಠೆಯಿಂದ ತನಗೆ ವಹಿಸಿದ ಕೆಲಸ ಮಾಡುತ್ತಿದ್ದಾರೆ. ಈ ಕೇಸರೀಕರಣದ ಹೊಡೆತಕ್ಕೆ ಸಿಕ್ಕು ಹಂಪಿಯ ಕನ್ನಡ ವಿಶ್ವವಿದ್ಯಾಲಯ ದಿಕ್ಕಾಪಾಲಾಗಿ ಹೋಗುತ್ತಿದೆ. ವಿಶ್ವವಿದ್ಯಾಲಯಗಳ ಉನ್ನತ ಸ್ಥಾನಗಳನ್ನು ಚಡ್ಡಿ ಚತುರರು ಆಕ್ರಮಿಸುತ್ತಿದ್ದಾರೆ. ಈ ಬಗೆಗೆ ಗೋವಿಂದ ಕಾರಜೋಳ, ನಿರಾಣಿ, ಜಾರಕಿಹೊಳಿ, ಯಡಿಯೂರಪ್ಪ, ಬೇಳೂರು, ಹಾಲಾಡಿ, ಇವರ್ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ.
ಇದಕ್ಕೊಂದು ಉದಾಹರಣೆ ಇಲ್ಲಿದೆ. ಭಾರತೀಯ ಹಬ್ಬಗಳ ಬಗ್ಗೆ ಖಾಸಗಿ ಸಂಸ್ಥೆಯಿಂದ ಪುಸ್ತಕವನ್ನು ಖರೀದಿಸಿದ ಸರಕಾರ ಈ ಪುಸ್ತಕಗಳನ್ನು ರಾಜ್ಯದ ಶಾಲೆ ಕಾಲೇಜುಗಳ ಗ್ರಂಥಾಲಯಗಳಿಗೆ ಕಳಿಸಿದೆ. ‘‘ಭಾರತೀಯರ ಹಬ್ಬ ಹರಿದಿನಗಳು’ ಎಂಬ ತಲೆ ಬರಹದ ಈ ಪುಸ್ತಕದಲ್ಲಿ ಹಿಂದುಗಳ ಅದರಲ್ಲೂ ಬ್ರಾಹ್ಮಣರ ಹಬ್ಬಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಆದರೆ ರಮಜಾನ್ ಬಗ್ಗೆಯಾಗಲಿ, ಗುಡ್‌ಪ್ರಾಯಡೆ ಕುರಿತಾಗಲಿ, ಇಲ್ಲವೆ ಬುದ್ಧ ಪೂರ್ಣಿಮೆ ಬಗ್ಗೆಗಾಗಲಿ ಉಲ್ಲೇಖವೇ ಇಲ್ಲ. ಅಂದರೆ ಮುಸಲ್ಮಾನರು, ಕ್ರೈಸ್ತರು, ಬೌದ್ಧರು ಭಾರತೀಯರಲ್ಲ ಎಂಬುದು ಇದರ ಅರ್ಥ.
ಇದೊಂದೆ ಪುಸ್ತಕವಲ್ಲ. ಹಿಂದುಗಳ (ಬ್ರಾಹ್ಮಣರ) ಪರಂಪರೆ ಬಗ್ಗೆ ರಂಗಪ್ರಿಯ ಎಂಬ ಪಂಡಿತರು ಬರೆದ 500 ರೂ. ಮುಖಬೆಲೆಯ ಪುಸ್ತಕ ಮಾಲೆಯನ್ನು ಶಾಲಾ ಗ್ರಂಥಾಲಯಗಳಿಗಾಗಿ ಖರೀದಿಸಲಾಗಿದೆ. ಇದರಲ್ಲಿ ಪವಿತ್ರ ಗೋವು, ಹಿಂದುಗಳ ಮಂದಿರಗಳು, ಉಪಕರ್ಮಗಳು ಇತ್ಯಾದಿಗಳ ಬಗ್ಗೆ ಉಲ್ಲೇಖವಿದೆ. ಪುಸ್ತಕದ ಮುಖಪುಟದಲ್ಲೂ ಹಿಂದೂ ದೇವದೇವತೆಯರ ಧಾರ್ಮಿಕ ಸಂಕೇತಗಳನ್ನು ಮಾತ್ರ ಚಿತ್ರಿಸಲಾಗಿದೆ. ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ಮಹಾ ಶಿವರಾತ್ರಿ, ಅಕ್ಷಯ ತೃತೀಯಾಗಳಂಥ ಮೇಲ್ಜಾತಿ ಹಿಂದೂಗಳ (ಬ್ರಾಹ್ಮಣರ) ಹಬ್ಬಳ ಉಲ್ಲೇಖ ಮಾತ್ರವಿದೆ. ಮುಸಲ್ಮಾನರು, ಕ್ರೈಸ್ತರು ಒತ್ತಟ್ಟಿಗಿರಲಿ. ದಲಿತ ಶೂದ್ರರ ಹಬ್ಬ ಜಾತ್ರೆಗಳ ಉಲ್ಲೇಖವೇ ಇದರಲಿಲ್ಲ.
ಈ ದೇಶ ಯಾವುದೇ ಜಾತಿಯ, ಧರ್ಮದ ಖಾಸಗಿ ಸೊತ್ತಲ್ಲ. ಆದರೂ ನಮ್ಮ ಮಕ್ಕಳು ಈ ಪುಸ್ತಕ ಓದಿ ಹಿಂದುಗಳು ಮಾತ್ರ (ಅದರಲ್ಲೂ ಬ್ರಾಹ್ಮಣರು) ಭಾರತೀಯರು ಎಂದು ಭಾವಿಸು ವಂತಾಗುತ್ತದೆ. ಅಂದರೆ ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಜೈನರು, ಪಾರ್ಸಿಗಳು, ಸಿಖ್ಖರು ಹಾಗೂ ಇದ್ಯಾವ ಧರ್ಮಕ್ಕೂ ಸೇರದ ಆದಿವಾಸಿಗಳು ಭಾರತೀಯರಲ್ಲವೇ? ಇದೇಕೆ ಹೀಗೆ ಎಂದು ವೀರಶೈವ ಯಡಿಯೂರಪ್ಪ, ಒಕ್ಕಲಿಗ ಸದಾನಂದ ಗೌಡ, ಬಂಟರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶೂದ್ರರಾದ ಈಶ್ವರಪ್ಪ, ಪ್ರಶ್ನಿಸಲು ಸಾಧ್ಯವೇ ಇಲ್ಲ. ಇವರೆಲ್ಲರಿಗೆ ತಿನ್ನುವ ಬಾಯಿ ಮಾತ್ರ ಸ್ವಂತದು. ಯೋಚಿಸುವ ಮೆದುಳನ್ನು ಆರೆಸ್ಸೆಸ್‌ನ ಕಲ್ಲಡ್ಕ ಭಟ್ಟರಂಥವರಿಗೆ ಒತ್ತೆ ಇಟ್ಟಿದ್ದಾರೆ.
ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಇಲ್ಲಿ ಕಾಗೇರಿ ಮಾಡುತ್ತಿರುವುದನ್ನು ಅಲ್ಲಿ ಮುರಳಿ ಮನೋಹರ ಜೋಶಿ ಮಾಡುತ್ತಿದ್ದರು. ವಿದೇಶದಲ್ಲಿ ನೆಲೆಸಿದ್ದ ಮೇಲ್ಜಾತಿ ಹಿಂದುಗಳ ಮನೆಗಳಲ್ಲಿ ಪೂಜೆ ಪುನಸ್ಕಾರ, ಉಪಕರ್ಮ ಶ್ರಾದ್ಧಗಳಿಗೆಂದು ಬ್ರಾಹ್ಮಣ ಪುರೋಹಿತರನ್ನು ತಯಾರು ಮಾಡಲು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಿದ್ದರು. ಆಗಲೂ ಸರಕಾರದಲ್ಲಿದ್ದ ಬ್ರಾಹ್ಮಣೇತರ ಸಚಿವರು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಕುಳಿತಿದ್ದರು. ಯಾಕೆಂದರೆ ಅವರೆಲ್ಲ ಆರೆಸ್ಸೆಸ್ ಸ್ವಯಂ ಸೇವಕರು.
ಕರ್ನಾಟಕದ ಬಿಜೆಪಿ ಸರಕಾರ ಸಂವಿಧಾನಕ್ಕೆ ವಿರೋಧವಾದ ಮೂಢನಂಬಿಕೆ-ಕಂದಾಚಾರಿಗಳಿಗೆ ಜೋತು ಬಿದ್ದಿದೆ. ಆಂತರಿಕ ಕಚ್ಚಾಟದಲ್ಲಿ ಮುಳುಗಿ ಬರಗಾಲ ಪರಿಹಾರ ಕಾಮಗಾರಿ ಬಗ್ಗೆ ನಿರ್ಲಕ್ಷ ತಾಳಿದ ಈ ಸರಕಾರ ಇದೀಗ ಮಳೆಗಾಗಿ ದೇವರ ಮೊರೆ ಹೋಗಿದೆ. ರಾಜ್ಯದ 34000 ಮುಜರಾಯಿ ದೇವಾಲಯಗಳಲ್ಲಿ 2 ದಿನ ಮಳೆಗಾಗಿ ವಿಶೇಷ ಪೂಜೆ ನಡೆಸಲು ಆದೇಶ ಮಾಡಿದೆ. ಇದಕ್ಕಾಗಿ ಪ್ರತಿ ದೇಗುಲಕ್ಕೆ 5 ಸಾವಿರ ರೂ. ಮಂಜೂರು ಮಾಡಿದೆ. ಅಂದರೆ ಎಲ್ಲ ದೇವಾ ಲಯಗಳ ಪೂಜಾ ವೆಚ್ಚ ಸೇರಿಸಿದರೆ 17 ಕೋಟಿ ರೂಪಾಯಿ ಆಗುತ್ತದೆ. ಆರೆಸ್ಸೆಸ್ ತಲೆ ಮಾತ್ರ ಇಂಥ ಅವಿವೇಕತನಕ್ಕೆ ಮುಂದಾಗುತ್ತದೆ.
ರಾಜ್ಯದಲ್ಲಿ ಬರಗಾಲದ ಕರಾಳ ಛಾಯೆ ಕವಿದಿದೆ. ಕಳೆದ 42 ವರ್ಷಗಳಿಂದ ಇಂಥ ಬರ ಬಂದಿರಲಿಲ್ಲ. ಇಂಥ ಗಂಭೀರ ಸನ್ನಿವೇಶದಲ್ಲಿ ಲಭ್ಯವಿರುವ ಪ್ರತಿ ಸಂಪನ್ಮೂಲವನ್ನೂ ಬರಪರಿಹಾರ ಕಾಮಗಾರಿಗಾಗಿ ವಿನಿಯೋಗಿಸಬೇಕಾಗಿದೆ. ಆ ದಿಕ್ಕಿನತ್ತ ಮುಂದಾಗುವುದನ್ನು ಬಿಟ್ಟು ಮಳೆಗಾಗಿ ದೇವಾಲಯದಲ್ಲಿ ವರುಣ ಮಂತ್ರ, ಪೂರ್ವಕ ಜಲಾಭಿಷೇಕ ಮಾಡಲು ಬೊಕ್ಕಸದ 17 ಕೋಟಿ ರೂ. ವ್ಯಯಿಸುವುದು ಮೂರ್ಖತನವಲ್ಲದೇ ಬೇರೇನೂ ಅಲ್ಲ. ಇದನ್ನೆ ಆರೆಸ್ಸೆಸ್ ರಹಸ್ಯ ಕಾರ್ಯಸೂಚಿ ಎಂದು ಕರೆಯಲಾಗುತ್ತದೆ.
ಕೋಮುವಾದೀಕರಣದ ಅಪಾಯದಿಂದ ಕರ್ನಾಟಕವನ್ನು ಪಾರು ಮಾಡಬೇಕಾದರೆ ಬಿಜೆಪಿಯಲ್ಲಿ ಒಡಕುಂಟಾಗಿ ಶೆಟ್ಟರ್ ಸರಕಾರ ಉರುಳಿ ಹೋಗುತ್ತದೆ ಎಂದು ಅಸಹಾಯಕರಂತೆ ತೆಪ್ಪಗೆ ಕಾಯುತ್ತ ಕುಳಿತುಕೊಳ್ಳಬಾರದು. ಎಲ್ಲ ಸಮಾನ ಮನಸ್ಕ ಪ್ರಗತಿಪರ ಶಕ್ತಿಗಳು ಈ ಶೆಟ್ಟರ್, ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ಸೇರಿದಂತೆ ಫ್ಯಾಸಿಸ್ಟ್ ಪರಿವಾರವನ್ನು ಪೊರಕೆಯಿಂದ ಗೂಡಿಸಿ ಕಸದ ಬುಟ್ಟಿಗೆ ಹಾಕಿ ಈ ನಾಡನ್ನು ಸ್ವಚ್ಛಗೊಳಿಸಬೇಕಾಗಿದೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...