ಎರಡು ದಿನಗಳಿಂದ 'ಗೋಡೆಗಳಿಂದಾಚೆ: ಆಕಾಶ' ಎಂಬ ಕಾದಂಬರಿಯನ್ನು ಓದುತ್ತಿದ್ದೆ. ಇದರ ಲೇಖಕ ಕುಂದನಿಕಾ ಕಾಪಾಡಿಯ. ಗುಜರಾತಿ ಭಾಷೆಯಿಂದ ಕನ್ನಡಕ್ಕೆ ಬಂದಿರುವಂಥದ್ದು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರು ವಂಥದ್ದು. ಸ್ತ್ರೀ ಚಿಂತನೆಯ ಚೌಕಟ್ಟಿನಲ್ಲಿ ರಚನೆ ಯಾಗಿರುವ ಉತ್ತಮ ಕೃತಿ. ಈ ಕೃತಿಯಲ್ಲಿ ಆವರಿಸಿ ಕೊಂಡಿರುವ ವಸುಧಾ ಹೀಗೆ ಪ್ರತಿಕ್ರಿಯಿಸುತ್ತಾಳೆ: ''ಕಾನೂನು ಬಹುಶಃ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಹುದು, ಆದರೆ ಸಮಾಜ ಸ್ತ್ರೀಯನ್ನೇ ಅಪ್ರತಿ ಷ್ಠಿತಳನ್ನಾಗಿ ಮಾಡುತ್ತದೆ. ನಾವು ಎರಡು ಪಟ್ಟು ರಾಕ್ಷಸರೊಡನೆ ಹೋರಾಡಬೇಕಾಗಿದೆ. ಕಾನೂನು ಮತ್ತು ಸಮಾಜ, ಇಬ್ಬರ ಹತ್ತಿರದಿಂದಲೂ ನ್ಯಾಯ ವನ್ನು ಪಡೆಯಬೇಕು. ನಮ್ಮಿಬ್ಬರ ಕಾರಣವೂ ಸಫಲವಾಗುವಂತೆ ನಾವು ಹೆಜ್ಜೆ ಹಾಕಬೇಕು.'' ಈ ಸಾಲುಗಳು ನನಗೆ ಪರಿಚಯವಿರುವ ಯಾರ್ಯಾ ರನ್ನೋ ನೆನಪು ಮಾಡಿಕೊಟ್ಟಿತು. ಹಾಗೆಯೇ ಈ ನಿಟ್ಟಿನಲ್ಲಿ ಪ್ರತಿಭಟಿ ಸುತ್ತ ಬರೆಯುತ್ತಿರುವ ಹಾಗೂ ಸುಮ್ಮನೆ ಮೌನವಾಗಿ ಮಹಿಳೆ ಯರನ್ನು ಎಚ್ಚರಿಸುತ್ತ ದುಡಿಯು ತ್ತಿರುವ ಮಂದಿ ಮುಖಾಮುಖಿ ಯಾದರು. ಆದರೆ ಇದೆಲ್ಲದಕ್ಕಿಂತ ಮಿಗಿಲಾಗಿ; ಕಾಲು ಶತಮಾನದ ಹಿಂದೆ ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ಅಗಾಧವಾದ ಕಾಳಜಿಯನ್ನು ಹೊಂದಿದ್ದ ಅಬ್ದುಲ್ ನಜೀರ್ ಸಾಬ್ ಅವರು ಬೆಂಗಳೂರಿನ ಗಾಂಧೀಭವನದಲ್ಲಿ ಒಂದು ಚರ್ಚೆ ಯನ್ನು ಏರ್ಪಡಿಸಿದ್ದರು. ಆಗ ಅವರು ಪಂಚಾ ಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗೆ ಸಚಿವರಾಗಿದ್ದರು.
ಈ ಚರ್ಚೆಯನ್ನು ಉದ್ಘಾಟಿಸಲು ಭಾರತದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಬೇರುಬಿಡಲು ಜೀವನ ಪರ್ಯಂತ ದುಡಿದ ಎಸ್.ಕೆ.ಡೇಯವರು ಆಗಮಿಸಿದ್ದರು.ನಾವು ಅಬ್ದುಲ್ ನಜೀರ್‌ಸಾಬ್ ಅವ ರನ್ನು ಕೇವಲ ಉತ್ತರ ಕರ್ನಾಟಕದ ಮತ್ತು ಇತರೆ ನೀರಿನ ಸಮಸ್ಯೆ ಇರುವ ಕಡೆ; ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು ಎಂಬುದನ್ನು ಮಾತ್ರ ತಿಳಿದುಕೊಳ್ಳಬೇಕಾಗಿಲ್ಲ. ಅದರ ಜೊತೆಗೆ ಪಂಚಾಯತ್‌ರಾಜ್ ವ್ಯವ ಸ್ಥೆಯ ಮೂಲಕ ಹೆಚ್ಚು ಹೆಚ್ಚು ಮಹಿಳೆಯರು ಗ್ರಾಮ ಪಂಚಾಯತ್‌ಗಳಿಗೆ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ಆರಿಸಿ ಬರಲು ಸಂವಿಧಾನ ಬದ್ಧವಾಗಿ ಕಲ್ಪಿಸಿದರು. ಇದು ನಿಜಕ್ಕೂ ಮಹತ್ವಪೂರ್ಣವಾದದ್ದು. ಇಂಥ ಕೊಡುಗೆಯನ್ನು ಕುರಿತೇ ನಜೀರ್ ಸಾಬ್ ಅವರನ್ನು ಮುಕ್ತ ಕಂಠದಿಂದ ಹೊಗಳಿದ್ದರು. ಅಥವಾ ರಾಜಕೀಯವಾಗಿ ವಿಶ್ಲೇಷಿಸಿದ್ದರು. ಅಂದು ಸಿ.ನಾರಾಯಣ ಸ್ವಾಮಿಯವರೂ ಇದ್ದರು.
ಸಿ.ನಾರಾಯಣ ಸ್ವಾಮಿಯವರು ಬೆಂಗಳೂರು ಜಿಲ್ಲಾ ಪರಿಷತ್ತು ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸವನ್ನು ಮಾಡಿದವರು. ಇವರಿಗೆ ನಜೀರ್‌ಸಾಬ್ ಹಾಗೂ ರಾಮಕೃಷ್ಣ ಹೆಗ್ಗಡೆಯವರ ಮೆಚ್ಚಿಗೆಯೂ ಇತ್ತು. ನಾರಾಯಣ ಸ್ವಾಮಿಯವರ ಕಾರ್ಯ ವೈಖರಿಯನ್ನು ಕಂಡು ಬೇರೆ ಬೇರೆ ಜಿಲ್ಲಾ ಪರಿಷತ್ತಿನವರು ಅಧ್ಯಯನ ಮಾಡಿ ಅನುಸರಿಸುವ ರೀತಿಯಲ್ಲಿತ್ತು.ನಜೀರ್‌ಸಾಬ್ ಅವರ ನಂತರ ಕಾಂಗ್ರೆಸ್ ಸರಕಾರದಲ್ಲಿ ಎಂ.ವೈ.ಘೋರ್ಪಡೆಯವರು ತುಂಬ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸಿದರು. ಹಿಂದಿನ ರಾಮಕೃಷ್ಣ ಹೆಗ್ಗಡೆಯವರ ಸರಕಾರ ರೂಪಿಸಿದ ಮಾದರಿ ಸೂತ್ರಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಡಾ.ಎಲ್.ಸಿ.ಜೈನ್ ಅಂಥವರನ್ನು ಪೂರ್ತಿ ಬಳಸಿಕೊಂಡು ಒಂದು ಸೃಜನಾತ್ಮಕ ಪ್ರಕ್ರಿಯೆಯನ್ನು ಪಂಚಾಯತ್‌ರಾಜ್ ವ್ಯವಸ್ಥೆಗೆ ಕಲ್ಪಿಸಿ ಕೊಟ್ಟರು. ಇದು ನಿಜವಾಗಿಯೂ ಘೋರ್ಪಡೆಯವರ ಹೆಚ್ಚುಗಾರಿಕೆಯಾಗಿತ್ತು. ಹಾಗೆಯೇ ಇದಕ್ಕೆ ಅನ್ವಯಿಸಿ ಎಲ್.ಸಿ.ಜೈನ್ ಅಂಥವರು; ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ಚರ್ಚೆಗೆ ಬಿಟ್ಟರು. ಯಾಕೆಂದರೆ ಜೈನ್ ಅವರು ಮೂಲಭೂತವಾಗಿ ಅತ್ಯಂತ ಪ್ರಜಾಪ್ರಭುತ್ವವಾದಿ. ಯೋಜನಾ ಆಯೋಗದ ಸದಸ್ಯರಾಗಿದ್ದವರು.
ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಭಾರತದ ರಾಯಭಾರಿಯಾಗಿ ಮೆಚ್ಚಿಗೆಯನ್ನು ಗಳಿಸಿದವರು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಅವರು ಕರ್ನಾಟಕದಲ್ಲಿಯೇ ನೆಲೆಸಿ ಎಂಥ ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ.ಈ ಎಲ್ಲಾ ಹಿನ್ನೆಲೆಯ ದೃಷ್ಟಿಯಿಂದ; ಇತ್ತೀಚಿನ ದಿನಗಳಲ್ಲಿ 'ಕರ್ನಾಟಕ ರಾಜ್ಯ ಗ್ರಾಮ ಪಂಚಾ ಯತ್ ಹಕ್ಕೊತ್ತಾಯ' ಆಂದೋಲನವಂತೂ ಗಮನಾರ್ಹವಾದದ್ದು. ಕಳೆದ ವರ್ಷ ಅಂದರೆ, 2011 ಡಿಸೆಂಬರ್ 9, 10 ಮತ್ತು 11ರಂದು ಉಡುಪಿಯಲ್ಲಿ ನಡೆದ ಆಂದೋಲನವಂತೂ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಸಂದರ್ಭದಲ್ಲಿ ಅತ್ಯಂತ ಅರ್ಥಪೂರ್ಣವಾದದ್ದು.
ಸುಮಾರು ನಾಲ್ಕು ಸಾವಿರಕ್ಕೂ ಮೇಲ್ಪಟ್ಟು ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ; ಪರೋಕ್ಷವಾಗಿ ಪಂಚಾಯತ್ ರಾಜ್ ವ್ಯವಸ್ಥೆಗೆ ಚೈತನ್ಯವನ್ನು ತುಂಬುವುದಿದೆಯಲ್ಲ ಅದು ನಿಜ ವಾಗಿಯೂ ಮೆಚ್ಚುವಂಥದ್ದು. ನಮ್ಮ ರಾಜಕೀಯ ಪಕ್ಷಗಳು ಇದನ್ನು ಕುರಿತು ಮಾತಾಡುವುದನ್ನೇ ಮರೆತು ಬಿಟ್ಟಿದ್ದಾರೆ. ವೇದಿಕೆಗಳು ದೊರಕಿದಾಗ ಗ್ರಾಮಾಂತರ ಪ್ರದೇಶಗಳ ಬಗ್ಗೆ ಅಂಕಿ ಅಂಶಗಳಿ ಲ್ಲದೆ ಪತ್ರಿಕೆಗಳಲ್ಲಿ ಸುದ್ದಿಯ ಕಾರಣಕ್ಕಾಗಿ ಮಾತಾ ಡುವರು. ಆದರೆ ಒಟ್ಟು ಆಡಳಿತದ ವಿಕೇಂದ್ರಿ ಕರಣವೆಂಬುದು ಕೆಳ ಹಂತದಿಂದ ಗಟ್ಟಿಮುಟ್ಟಾಗಿ ಬರಬೇಕು ಎಂಬ ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ' ಪರಿಕಲ್ಪನೆಯನ್ನು ಬಹುಪಾಲು ಆಡಳಿತ ಪಕ್ಷಗಳು ಮರೆತೆ ಹೋಗುತ್ತವೆ. ಯಾರೋ ಕೆಲವು ದೂರದೃಷ್ಟಿಯುಳ್ಳ ನಾಯಕರು ಬಂದಾಗ ಮಾತ್ರ ಅದು ಗರಿಗೆದರಿ ಸುದ್ದಿಯಾಗಬೇಕಾಗಿಲ್ಲ. ಅದರ ಪಾಡಿಗೆ ಅದು ಆಗುತ್ತ ಹೋಗುವ ವಾತಾವರಣ ಸೃಷ್ಟಿಯಾಗಬೇಕು. ಅದು ಆಗುತ್ತಿಲ್ಲವೆಂಬುದೇ ವಿಷಾದದ ವಿಷಯವಾಗಿದೆ.
ಈ ದೃಷ್ಟಿಯಿಂದ ಇತ್ತೀಚಿನ ವರ್ಷಗಳಲ್ಲಿ 'ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಹಕ್ಕೊತ್ತಾಯ' ಸಂಘಟನೆಯನ್ನು ನಂದನಾ ರೆಡ್ಡಿ, ಗಣಪತಿ ಎಂ.ಎಂ., ಕವಿತಾರತ್ನ ಮತ್ತು ದಾಮೋದರ ಆಚಾರ್ಯ ಅಂಥವರು ಅದಕ್ಕೆ ಕೊಟ್ಟಿರುವ ಆಕಾರ ಅಪೂರ್ವವಾದದ್ದು. ನಂದನಾರೆಡ್ಡಿಯವರು ತಮ್ಮ ಮನೆಯಿಂದ ಎಷ್ಟೊಂದು ಕಲಿತು ಬಂದಿದ್ದಾರೆ ಅನ್ನಿಸುತ್ತದೆ. ಯಾಕೆಂದರೆ ಅವರ ಮನೆ ಸ್ನೇಹಲತಾ ರೆಡ್ಡಿ ಮತ್ತು ಪಟ್ಟಾಭಿರಾಮ ರೆಡ್ಡಿಯವರ ಮೂಲಕ ಕೇವಲ ಕಲೆಗೆ ಸಂಬಂಧಿಸಿದ ಮನೆಯಾಗಿರಲಿಲ್ಲ. ಸಮಾಜವಾದಿ ಚಿಂತನೆಯನ್ನು ಸಾಕಾರಗೊಳಿ ಸುವ ಭಾರತದ ದೊಡ್ಡ ದೊಡ್ಡ ಮನಸುಗಳೆಲ್ಲ ಬಂದು ಸೇರುತ್ತಿದ್ದ ನಿಲ್ದಾಣವಾಗಿತ್ತು.
ಅದು ಗಾಂಧೀಜಿಯವರ, ರಾಮಮನೋಹರ ಲೋಹಿಯಾರವರ ಹಾಗೂ ಜಯಪ್ರಕಾಶ್ ನಾರಾಯಣ್‌ರವರ ಚಿಂತನೆಗಳು ರಚನಾತ್ಮ ಕತೆಯನ್ನು ಪಡೆದು; ಕಾರ್ಯ ನಿಷ್ಠತೆಯನ್ನು ಪಡೆಯುತ್ತಿತ್ತು ಎಂಬುದು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು. ನಿಜವಾಗಿಯೂ ಆ ಮನೆ ನನ್ನಂಥ ನೂರಾರು ಮಂದಿಗೆ ಎಂತೆಂಥವರನ್ನು ಪರಿಚಯ ಮಾಡಿಕೊಟ್ಟಿತು. ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ವಿಸ್ತರಿಸಿದ ಸಾಮರಸ್ಯದ ನೆಲೆಗಳನ್ನು ಇಂದು ಮೆಲುಕು ಹಾಕಿಕೊಳ್ಳುವುದೇ ಒಂದು ರೋಮಾಂಚನಕಾರಿ ಸಂಗತಿ. ವಿವಿಧ ಪ್ರತಿಭಟನೆಗಳು ರೂಪುಗೊಳ್ಳುತ್ತಿದ್ದುವು. ರಾಜಕೀಯ ಆರೋಗ್ಯಪೂರ್ಣತೆಗೆ ಶಕ್ತಿಯನ್ನು ತುಂಬುವಂತಾಗುತ್ತಿತ್ತು. ಇವೆಲ್ಲದರ ಮುಂದು ವರಿದ ಭಾಗ 'ಹಕ್ಕೊತ್ತಾಯ ಆಂದೋಲನ' ಎಂದು ಭಾವಿಸುವೆ.
ಉಡುಪಿಯ ಮೂರು ದಿವಸದ ಸಮಾ ವೇಶದಲ್ಲಿಯೇ ನಾವು ಕಳೆದು ಹೋಗಿಲ್ಲ ಎಂದು ನಂದನಾರೆಡ್ಡಿಯವರ ಹೋರಾಟದ ಗೆಳೆಯರ ಬಳಗ ಬೆಂಗಳೂರಿನಲ್ಲಿ ಅದ್ಭುತವಾದ ಸಮಾವೇಶವನ್ನು ಏರ್ಪಡಿಸಿತ್ತು. ಇದೆ ಜುಲೈ 18ರಂದು ಅದು ಬೆಂಗಳೂರಿನ 'ಫ್ರೀಡಂ ಪಾರ್ಕ್'ನಲ್ಲಿ. ಒಂದು ಕಾಲದಲ್ಲಿ ನಾನಾ ರೀತಿಯ ಹೋರಾಟವನ್ನು ಬಂಧಿಸಿಡುತ್ತಿದ್ದ ಸೆರೆಮನೆ. ಇತಿಹಾಸದ ಅಪೂರ್ವ ಘಟನೆ ಗಳನ್ನು ನೆನಪು ಮಾಡುವಂಥದ್ದು. ನಂದನಾ ರೆಡ್ಡಿಯವರ ತಾಯಿ ಸ್ನೇಹಲತಾ ರೆಡ್ಡಿಯ ವರು ಸಹಾ ದೀರ್ಘಕಾಲದ ಬಂಧನದಿಂದ ತತ್ತರಿಸಿ ಹೋದವರು. ಅದರಿಂದ ಚೇತರಿಸಿ ಕೊಳ್ಳಲಾಗದೆ ಈ ಸಮಾಜದಿಂದ ನೆನಪಾಗಿ ಉಳಿದು ಕಳೆದು ಹೋದವರು.
ಇವೆಲ್ಲವೂ ಧುತ್ತನೆ ಮುಖಾಮುಖಿಯಾಗುವಂತೆ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲ ಕರ್ನಾಟಕದ ಉದ್ದಗಲದಿಂದ ಬಂದವರು. ತಮ್ಮ ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದವರು. ಇವರೆಲ್ಲ ಆಡಳಿತ ಪಕ್ಷದವರಲ್ಲ. ಆದರೆ ನಿಜದ ಅರ್ಥದಲ್ಲಿ ಆಡಳಿತ ವಿಕೇಂದ್ರಿಕರಣ ವಾಗಬೇಕು ಎಂದು ಹೋರಾಟದ ಚೈತನ್ಯವನ್ನು ಮನಸ್ಸಿನಲ್ಲಿ ತುಂಬಿಕೊಂಡವರು. ಅವರ 'ಸಾವಿರಗಳ' ಮುಖದಲ್ಲಿ 'ಸ್ನೇಹಲತಾ ರೆಡ್ಡಿ' ಯವರ ಸದಾ ನಗುಮೊಗದ ಮನಸ್ಥಿತಿಯನ್ನು ಹುಡುಕುತ್ತಿದ್ದೆ. ಎಷ್ಟು ಗಂಭೀರವಾಗಿ ಮೋಡ ಕವಿದ ವಾತಾವರಣದಲ್ಲಿ ಕೂತು ಹತ್ತಾರು ಮಂದಿಯ ಮಾತುಗಳನ್ನು ಆಲಿಸುತ್ತಿದ್ದರು. ಹೋರಾಟದ ಮನಸ್ಥಿತಿ ಜೊತೆಗೆ ಶಿಸ್ತುಬದ್ಧವಾಗಿ ಕೇಳಿಸಿಕೊಳ್ಳುವುದು ಬಹುಮುಖ್ಯ ಎಂಬುದನ್ನು 'ಹಕ್ಕೊತ್ತಾಯ ಆಂದೋಲನ'ದವರು ಕಲಿತಿದ್ದಾರೆ ಎಂಬುದೇ ಸಂತೋಷದ ವಿಷಯ.
ಪ್ರಾರಂಭಕ್ಕೆ ಹಿಂದಿನ ದಿವಸ ಮುಂಬಯಿಯಲ್ಲಿ ಬಹುದೊಡ್ಡ ಸಮಾಜವಾದಿ ಹೋರಾಟಗಾರ್ತಿ ಹಾಗೂ ಚಿಂತಕಿ ಮೃಣಾಲ್ ಗೋರೆಯವರು ನಿಧನವಾದ ವಿಷಯ ತಿಳಿಸಿದೆ. ಒಂದು ನಿಮಿಷ ಶ್ರದ್ಧಾಂಜ ಲಿಯ ನಂತರ; ಸಮಾವೇಶದ ಮಾತುಕತೆ ಪ್ರಾರಂಭವಾಯಿತು. ನನಗೆ ಕರ್ನಾಟಕದಲ್ಲಿಯ ಹೋರಾಟಗಳ ಬಗ್ಗೆ ವಿಷಯ ಕೊಟ್ಟಿದ್ದರು.ಈ ಸಂಘಟನೆಗೆ ಎಷ್ಟೊಂದು ಶಾಸಕರನ್ನು ಹಾಗೂ ಇತರೆ ಸಮಾಜ ಚಿಂತಕರನ್ನು ಸೇರಿಸಿಕೊಂಡಿದ್ದಾರೆ ಎಂಬುದೇ ಸಂತೋಷದ ವಿಷಯ.
ಸಮಾವೇಶದ ಸಮಯದಲ್ಲಿ, ಉಡುಪಿ ಸಮಾವೇಶದಲ್ಲಿ ನಡೆದ ಒಟ್ಟು ಚರ್ಚೆ ಹಾಗೂ ನಿರ್ಣಯಗಳನ್ನೊಳಗೊಂಡ ‘ಗ್ರಾಮ ಸ್ವರಾಜ್ಯ ಸಮಾವೇಶ 2011 ಸಂಕಲನ’ ಎಂದು ಒಂದು ಅರ್ಥಪೂರ್ಣ ಕೃತಿಯನ್ನು ತಂದಿದ್ದಾರೆ. ಅದರಲ್ಲಿ ಮಣಿಶಂಕರ ಅಯ್ಯರ್ ಅವರಂಥ ಹಿರಿಯ ಪಂಚಾಯತ್ ರಾಜ್ ಚಿಂತಕರ ಮನನ ಮಾಡುವ ನುಡಿಗಳಿವೆ. ಅದರ ಜೊತೆಗೆ ನಿರ್ಣಯಗಳಲ್ಲಿ ದಾಖಲು ಮಾಡಬಹುದಾದ ಒಂದು ನಿರ್ಣಯದ ಹಿನ್ನೆಲೆಯ ಭಾಗವನ್ನು ಇಲ್ಲಿ ಉದಾಹರಿಸಲು ಬಯಸುವೆ: ‘‘ಹಿಂದುಳಿದ ವರ್ಗದವರು, ಆದಿವಾಸಿಗಳು ಹೆಚ್ಚಾಗಿರುವ ಸೌಲಭ್ಯಗಳ ದೃಷ್ಟಿಯಿಂದ ದೂರವಾಗಿರುವ ಪಂಚಾಯತ್‌ಗಳು, ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯತ್‌ಗಳು: ಭೌಗೋಳಿಕವಾಗಿ ಸೌಲಭ್ಯಗಳ ದೃಷ್ಟಿಯಂದ ದೂರವಾಗಿರುವ (ಕುಗ್ರಾಮವಾಗಿರುವ) ಗ್ರಾಮಪಂಚಾಯತ್‌ಗಳು: ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರೇ ಹೆಚ್ಚಾಗಿರುವ ಗ್ರಾಮಪಂಚಾಯತ್‌ಗಳು.
ಹೀಗೆ ಎಲ್ಲಾ ವಿಚಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಸವಾಲು, ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಪಂಚಾಯತ್‌ಗಳ ಸಮಸ್ಯೆ, ಸವಾಲುಗಳನ್ನು ಚರ್ಚಿಸಲಾಯಿತು. ಈ ಎಲ್ಲಾ ಸವಾಲುಗಳನ್ನು ಗ್ರಾಮಪಂಚಾಯತ್ ಚುನಾಯಿತ ಪ್ರತಿನಿಧಿಗಳು ಹಾಗೂ ಜನರ ದೃಷ್ಟಿಕೋನ ಇವೆರಡರಿಂದಲೂ ನೋಡಲಾಯಿತು. ಈ ಸವಾಲುಗಳನ್ನು ಪರಿಣಾಕಾರಿಯಾಗಿ ಎದುರಿಸಲು, ಪರಿಹರಿಸಿಕೊಳ್ಳಲು ಸ್ಪಷ್ಟವಾದ ಕಾರ್ಯತಂತ್ರಗಳು, ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕವಾಗಿ ಆಗಬೇಕಾದ ಪರಿವರ್ತನೆಗಳನ್ನು ಗುರುತಿಸಿಕೊಳ್ಳಲಾಯಿತು.
ಈ ಸೆಷನ್‌ನಲ್ಲಿ ಮೂರನೇ ಹಣಕಾಸು ಆಯೋಗದ ಶಿಫಾರಸುಗಳನ್ನು, ನಂಜುಂಡಪ್ಪ ವರದಿ ಮುಂತಾದ ಈಗಾಗಲೇ ರಾಜ್ಯ ಸರಕಾರದ ಮುಂದಿರುವ ಶಿಫಾರಸುಗಳತ್ತ ಕಣ್ಣೋಟ ಹರಿಸಲಾಯಿತು. ನಿರ್ದಿಷ್ಟವಾಗಿ ಅರಣ್ಯ ಮತ್ತು ಆದಿವಾಸಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಉಪಯುಕ್ತವಾಗಿರುವ ಪ್ರಸಕ್ತ ಇರುವ ನೀತಿಗಳು, ಕಾನೂನು ಮತ್ತು ಆಡಳಿತಾತ್ಮಕ ರಚನೆಗಳು ಮತ್ತು ವ್ಯವಸ್ಥೆಗಳನ್ನು ಪುನರಾವಲೋಕಿಸಬೇಕೆಂದು ಚರ್ಚಿಸಲಾಯಿತು. ಈ ನಿರ್ಣಯಗಳನ್ನು ಆದಿವಾಸಿಗಳ ಜನಸಂಖ್ಯೆ, ಪಂಚಾಯತ್ ಮತ್ತು ಕಾನೂನು ವ್ಯವಸ್ಥೆಗಳ ನಡುವಿನ ಸಂಘರ್ಷಗಳ ಪ್ರಯೋಗಾತ್ಮಕ ದೃಷ್ಟಿಯಂದ ನೋಡಲಾಗಿದೆ.’’ ಇದರ ಮುಂದುವರಿದ ಭಾಗವಾಗಿ ನಿರ್ಣಯಗಳಿವೆ. ಇವೆಲ್ಲವೂ ಒಂದು ಬೆಳೆಯುತ್ತಿರುವ ಸಮಾಜಕ್ಕೆ ಬೇಕಾದ ನಿರ್ಣಯಗಳು.
ಒಟ್ಟು ಈ ನಿರ್ಣಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಮಾವೇಶದಲ್ಲಿದ್ದ ಆ ಐದಾರು ಸಾವಿರ ಮಹಿಳಾ ಪ್ರತಿನಿಧಿಗಳ ಮುಖಗಳಲ್ಲಿದ್ದ; ದೂರದಲ್ಲಿ ಕಾಣುವ ಬೆಳಕಿಗಾಗಿ ಅವರ ತುಡಿತವನ್ನು ಕಾಣಲು ಪ್ರಯತ್ನಿಸಿದೆ. ಒಂದು ಸಮಾಜದಲ್ಲಿ ಎಂತೆಂಥ ಆಶಾದಾಯಕ ಸಂಗತಿಗಳು; ಕನಸುಗಳನ್ನು ಸಾಕಾರಗೊಳಿಸಲು ವಿಸ್ತಾರಗೊಳ್ಳುತ್ತಿರುತ್ತವೆ ಅನ್ನಿಸಿತು.ಕೆಲವು ಕಾರಣಗಳಿಂದ ನಾನು ಉಡುಪಿಯ ಸಮಾವೇಶದಲ್ಲಿ ಭಾಗವಹಿಸಲು ಆಗಲಿಲ್ಲ. ಅದಕ್ಕಾಗಿ ವಿಷಾದವನ್ನು ಅನುಭವಿಸಿದ್ದೇನೆ. ಆದರೆ ನನ್ನ ನೆನಪಿನ ಶ್ರೀಮಂತಿಕೆಯನ್ನು ವಿಸ್ತರಿಸುವ ಈ ಅರ್ಥಪೂರ್ಣ ಸಮಾವೇಶದಲ್ಲಿ (ಬೆಂಗಳೂರಿನ) ಭಾಗವಹಿಸಿದೆ ಎಂಬ ಖುಷಿ ಇದೆ. ಯಾಕೆಂದರೆ ಅಲ್ಲಿ ನೆರೆದಿದ್ದ ಸಾವಿರಾರು ಆಶಾದಾಯಕ ಮುಖಗಳಲ್ಲಿ; ನೂರಾರು ಮಂದಿಯಲ್ಲಿ ಮುಂದಿನ ದಿನಗಳಲ್ಲಿ ನಾಯಕಿಯರು ಆಗುವ ಚೇತನವನ್ನು ತುಂಬಿಕೊಂಡವರು.
ಹೌದು ಮಹಿಳೆಯರು ಸಮಾನತೆಯನ್ನು ಪಡೆದಾಗ ಮಾತ್ರ ಈ ಸಮಾಜ ಪರಿಪೂರ್ಣತೆ ಎಂಬ ಪತಾಕೆಯನ್ನು ಸಂತೋಷದಿಂದ ಹಾರಿಸಲು ಸಾಧ್ಯ. ಇದನ್ನು ಬರೆಯುವ ಕಾಲಕ್ಕೆ ರಾಮಕೃಷ್ಣ ಹೆಗ್ಗಡೆಯವರ ಒಂದು ಮಾತನ್ನು ದಾಖಲಿಸಲು ಪ್ರಯತ್ನಿಸುವೆ: ಅದು ಅವರು ಅನಾರೋಗ್ಯದಿಂದ ನರಳುತ್ತಿದ್ದ ದಿನಗಳು. ಒಮ್ಮೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅವರೊಡನೆ ಒಂದು ದೀರ್ಘವಾದ ಸಂವಾದದಲ್ಲಿ ತೊಡಗಿದ್ದೆ. ಆಗ ಅವರು ಒಂದು ಮಾತು ಹೇಳಿದ್ದರು: ‘‘ನೋಡಿ ಶೂದ್ರ, ಒಂದು ವಿಷಾದದ ಸಂಗತಿ ಎಂದರೆ; ಇಷ್ಟು ವರ್ಷಗಳ ನಂತರವೂ ನಮ್ಮ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳಿಗೆ ಶೌಚಾಲಯದ ಸಮಸ್ಯೆ ಬಗೆಹರಿದಿಲ್ಲ. ನಾವೆಲ್ಲ ತಲೆ ತಗ್ಗಿಸುವಂಥದ್ದು’’ ಎಂದು. ಇಂಥದ್ದೇ ಮಾತನ್ನು ಅವರ ಮನೆಯಲ್ಲಿ ನಾನು ಮತ್ತು ರಮಜಾನ್ ದರ್ಗಾ ಭೇಟಿಯಾದಾಗಲೂ ತಿಳಿಸಿದ್ದರು. ಇಂದಿಗೂ ಆ ಸಮಸ್ಯೆ ಬಗೆಹರಿದಿಲ್ಲ. ಇಂದಲ್ಲ ನಾಳೆ ‘ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ’ವೂ ನಿಜವಾದ ಅರ್ಥದಲ್ಲಿ ತನ್ನ ಬೇಡಿಕೆಗಳನ್ನು ಸಾರ್ಥಕ್ಯಗೊಳಿಸಿಕೊಂಡಾಗ ಶೌಚಾಲಯದ ಸಮಸ್ಯೆಯೂ ಹೋಗಲಿ ಎಂದು ಆಶಿಸುವೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...