ಅಂಕಣ - ಪ್ರಚಲಿತ

mail-img print-img

ಮರೆಯಲಾಗದ ಕ್ಯಾಪ್ಟನ್ ಲಕ್ಷ್ಮಿ

ಸೋಮವಾರ - ಜುಲೈ -30-2012

ನಾಲ್ಕು ದಶಕಗಳ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ಕ್ಯಾಪ್ಟನ್ ಲಕ್ಷ್ಮಿಯವರ ಕುರಿತ ಪಾಠವನ್ನು ಶಿಕ್ಷಕರಿಂದ ಕೇಳಿದ ಮತ್ತು ಓದಿದ ನೆನಪು. ಆಗಲೇ ಈ ವೀರವನಿತೆಯ ಬಗ್ಗೆ ಅಪಾರ ಗೌರವ ಮೂಡಿತ್ತು. ಸುಭಾಷ್‌ಚಂದ್ರ ಬೋಸ್ ಅವರ ಕುರಿತ ಪುಸ್ತಕಗಳನ್ನು ಓದುವಾಗಲೆಲ್ಲ ಈ ಲಕ್ಷ್ಮಿಯವರ ಹೆಸರು ಪ್ರಸ್ತಾಪಕ್ಕೆ ಬರುತ್ತದೆ. ಭಾರತದಿಂದ ಹೊರಗೆ ಹೋಗಿ ನೇತಾಜಿ ಸುಭಾಷ್ ಅವರು ಕಟ್ಟಿದ ಆಜಾದ್ ಹಿಂದ್ ಫೌಜ್‌ನಲ್ಲಿ ಮಹಿಳೆಯರದ್ದೇ ಆದ ರಾಣಿ ಜಾನ್ಸಿ ರೆಜಿಮೆಂಟ್‌ನ ಕಮಾಂಡರ್ ಆಗಿದ್ದ ಈ ಲಕ್ಷ್ಮಿ ಎಂಥವರು ಇರಬಹುದು ಎಂಬ ಕುತೂಹಲ ಉಂಟಾಗಿತ್ತು. ಸುಭಾಷರ ಸಾವಿನ ನಂತರ ಬಹುಶಃ ಆಕೆಯು ಬದುಕಿರಲಿಕ್ಕಿಲ್ಲ ಎಂದು ಮರೆತು ಸುಮ್ಮನಾಗಿದ್ದೆ.ಆದರೆ ಕ್ಯಾಪ್ಟನ್ ಲಕ್ಷ್ಮಿಯವರು ಬದುಕಿದ್ದಾರೆ ಎಂಬ ಸಂಗತಿ ನನಗೆ ಗೊತ್ತಾಗಿದ್ದು, ತೊಂಬತ್ತರ ದಶಕದಲ್ಲಿ. ಕಾನ್ಪುರ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದ ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ಲೋಕಸಭಾ ಸದಸ್ಯೆ ಸುಭಾಷಿಣಿ ಅಲಿಯವರು ಈ ಕ್ಯಾಪ್ಟನ್ ಲಕ್ಷ್ಮಿಯವರ ಪುತ್ರಿಯೆಂದು ತಿಳಿದಾಗ ಹೆಮ್ಮೆ ಮೂಡಿತು. ಸುಭಾಷಿಣಿಯವರು ತಾಯಿಯಂತೆ ದಿಟ್ಟ ಹೋರಾಟಗಾರ್ತಿಯೆಂದು ಹೆಸರು ಮಾಡಿದ್ದಾರೆ. 1992ರಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ನೆಲಸಮದ ನಂತರ ಭುಗಿಲೆದ್ದ ಕೋಮು-ದಳ್ಳುರಿ ನಂದಿಸಲು ಸುಭಾಷಿಣಿಯವರು ಅಪಾರ ಪರಿಶ್ರಮ ಪಟ್ಟಿದ್ದರು. ನಾನು ಕ್ಯಾಪ್ಟನ್ ಲಕ್ಷ್ಮಿಯವರನ್ನು ಕಣ್ಣಾರೆ ಕಂಡಿದ್ದು ಜೆ.ಎಚ್. ಪಟೇಲರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ. ಆಗ ಬೆಂಗಳೂರಿನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ ವಿರುದ್ಧ ಪ್ರಗತಿಪರ ಮಹಿಳಾ ಸಂಘಟನೆಗಳು ಭಾರಿ ಪ್ರಮಾಣದ ಚಳವಳಿಯನ್ನು ಸಂಘಟಿಸಿದ್ದವು. ಈ ಪ್ರತಿಭಟನೆ ಯಲ್ಲಿ ಭಾಗವಹಿಸಲು ದೂರದ ಕಾನ್ಪುರದಿಂದ ಕ್ಯಾಪ್ಟನ್ ಲಕ್ಷ್ಮಿಯ ವರು ಬರುತ್ತಾರೆಂದು ತಿಳಿದು ಬೆಂಗಳೂರು ರೈಲು ನಿಲ್ದಾಣಕ್ಕೆ ಬೆಳಗಿನ ಜಾವ ಹೋಗಿದ್ದೆ. ಅಲ್ಲಿಂದಲೇ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಮಗಳು ಸುಭಾಷಿಣಿಯವರ ಜೊತೆಗೆ ಲಕ್ಷ್ಮಿ ಬಂದಿದ್ದರು. 90ರ ಇಳಿವಯಸ್ಸಿನಲ್ಲೂ ಉತ್ಸಾಹದ ಬುಗ್ಗೆಯಾಗಿದ್ದ ಅವರು ಅದೇ ತಾನೇ ಗುಲ್ಬರ್ಗಾದಿಂದ ರೈಲಿನಲ್ಲಿ ಬಂದು ಇಳಿದ ಕೆ.ನೀಲಾ ಅವರನ್ನು ಸ್ವಂತ ಮಗಳಂತೆ ತಬ್ಬಿಕೊಂಡು ಸಂಭ್ರಮಿಸಿದ್ದರು.ಕಳೆದ ವಾರ ಲಕ್ಷ್ಮಿಯವರು ತೀರಿಕೊಂಡಾಗ, ಈ ನೆನಪಿನ ಸುರಳಿ ಆಗಲೇ ಬಿಚ್ಚುತ್ತ ಹೋಯಿತು. ವಿಶ್ವಸುಂದರಿ ಸ್ಪರ್ಧೆ ವಿರುದ್ಧ ಪ್ರತಿಭಟನೆ ನಡೆದ ಆ ದಿನ ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿ ಪೊಲೀಸ್ ಸರ್ಪಗಾವಲನ್ನು ಭೇದಿಸಿ ಮುನ್ನುಗ್ಗಿದ ಮಹಿಳೆಯರ ತಂಡದಲ್ಲಿ ಕ್ಯಾಪ್ಟನ್ ಲಕ್ಷ್ಮಿ ಮುಂಚೂಣಿಯಲ್ಲಿದ್ದರು. ಬಂಧನಕ್ಕೆ ಒಳಗಾದರು. ಆ ನಂತರ ಅವರನ್ನು ಮತ್ತೆ ನೋಡಿದ್ದು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ. ಚುನಾವಣಾ ಪ್ರಚಾರಕ್ಕೆಂದು ಬಂದಿದ್ದ ಅವರನ್ನು ಕೆಲ ಕ್ಷಣಗಳ ಕಾಲ ಕಂಡು ಮಾತನಾಡುವ ಅವಕಾಶ ದೊರಕಿತು.

ಸುಭಾಷ್‌ಚಂದ್ರ ಬೋಸರು ಬದುಕಿದ್ದಾರೋ ಅಥವಾ ಇಲ್ವೊ ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ತುಂಬ ದಿನದಿಂದ ಇತ್ತು. ಯಾಕೆಂದರೆ, ಅವರು ಇನ್ನೂ ಬದುಕಿದ್ದಾರೆಂದು ಅವರ ಅಭಿಮಾನಿಗಳು ಹೇಳುತ್ತಿದ್ದರು. ಸನ್ಯಾಸಿ ವೇಷದಲ್ಲಿ ಸುಭಾಷರು ದೇಶವನ್ನು ಸುತ್ತುತ್ತಿದ್ದಾರೆಂದು ಕೆಲ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಲಕ್ಷ್ಮಿ ಅವರನ್ನು ಪ್ರಶ್ನಿಸಿದಾಗ, ಅವರು ಸುಭಾಷರ ಸಾವನ್ನು ದೃಢಪಡಿಸಿದರು. ವಿಮಾನ ಅಪಘಾತದಲ್ಲಿ ನೇತಾಜಿ ಅಸುನೀಗಿದರು ಎಂದು ಹೇಳಿದರು. ನೇತಾಜಿ ತೀರಿಕೊಂಡ ನಂತರ ಬರ್ಮಾದಿಂದ ಭಾರತಕ್ಕೆ ಬಂದ ಲಕ್ಷ್ಮಿ ಕಮ್ಯೂನಿಸ್ಟ್ ಪಾರ್ಟಿ ಸೇರಿದರು. ಆ ಪಾರ್ಟಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರೆಂದು ಪ್ರಶ್ನಿಸಿದಾಗ, ನನ್ನ ಜೀವನಕ್ರಮವೇ ಕಮ್ಯೂನಿಸ್ಟ್ ಆಶಯಗಳಿಂದ ಕೂಡಿದೆ. ಹಣ ಮಾಡುವುದರಲ್ಲಿ ನನಗೆ ಆಸಕ್ತಿಯಿಲ್ಲ. ಬಡವರ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಅಂತಲೇ ನನ್ನ ಆಯ್ಕೆ ಅದೇ ಆಗಿತ್ತು ಎಂದು ಹೇಳಿದರು.

ಕ್ಯಾಪ್ಟನ್ ಲಕ್ಷ್ಮಿ ಜನಿಸಿದ್ದು 1914ರ ಅಕ್ಟೋಬರ್ 24ರಂದು. ಅವರ ತಂದೆ ಎಸ್.ಸ್ವಾಮಿನಾಥನ್ ಮದ್ರಾಸ್‌ನಲ್ಲಿ ಹೆಸರಾಂತ ವಕೀಲರಾಗಿದ್ದರು. ತಾಯಿ ಎ.ವಿ.ಅಮ್ಮುಕುಟ್ಟಿ ಕೂಡ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ತಾಯಿ-ತಂದೆ ಇಬ್ಬರೂ ಕಾಂಗ್ರೆಸ್ ಕಾರ್ಯಕರ್ತರು. ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಲಕ್ಷ್ಮ್ಮಿ ಅವರಿಗೆ ಮೊದಲ ಬಾರಿಗೆ ಕಮ್ಯೂನಿಸ್ಟ್ ಸಿದ್ಧಾಂತ ಪರಿಚಯಿಸಿದವರು ಸರೋಜಿನಿ ನಾಯ್ಡು ಅವರ ಸಹೋದರಿ ಸುಹಾಸಿನಿ ನಂಬಿಯಾರ್. ನಂತರ ಎಡ್ಗರ್ ಸ್ನೊ ಬರೆದ, ರೆಡ್‌ಸ್ಟಾರ್ ಓವರ್ ಚೈನಾ ಅವರ ಮೇಲೆ ಪ್ರಭಾವ ಬೀರಿತು.

 ಮಹಾತ್ಮಾಗಾಂಧಿಯವರ ಅಹಿಂಸಾತ್ಮಕ ಚಳವಳಿಯ ಬಗ್ಗೆ ಭಿನ್ನಾಭಿಪ್ರಾಯ ತಾಳಿದ ಸುಭಾಷ್‌ಚಂದ್ರ ಬೋಸರು ಬ್ರಿಟಿಷರನ್ನು ಈ ದೇಶದಿಂದ ಓಡಿಸಲು ಸೇನೆಯೊಂದನ್ನು ಕಟ್ಟಲು ಯೋಚಿಸಿದರು. ಈ ಸೇನೆಯಲ್ಲಿ ಮಹಿಳೆಯರದ್ದೇ ಪ್ರತ್ಯೇಕ ಪಡೆಯನ್ನು ಕಟ್ಟಲು ಬಯಸಿದ ಅವರು ಅದಕ್ಕಾಗಿ ನಾಯಕತ್ವ ವಹಿಸಲು ದಿಟ್ಟ ಯುವತಿಗಾಗಿ ಹುಡುಕಾಡು ತ್ತಿದ್ದರು. ಆ ಸಂದರ್ಭದಲ್ಲಿ ಸಿಂಗಾಪುರಕ್ಕೆ ಹೋಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿ ಕೊಂಡಿದ್ದ ಕ್ಯಾಪ್ಟನ್ ಲಕ್ಷ್ಮಿಯವರ ಅರ್ಪಣಾ ಮನೋಭಾವದ ಬಗ್ಗೆ ಕೇಳಿ ತಿಳಿದುಕೊಂಡ ಸುಭಾಷರು ಲಕ್ಷ್ಮಿಯವರನ್ನು ಕರೆಸಿ, ಸುಮಾರು ಐದು ಗಂಟೆಗಳ ಕಾಲ ಚರ್ಚಿಸಿ, ಆಜಾದ್ ಹಿಂದ್ ಫೌಜ್‌ನಲ್ಲಿ ಮಹಿಳೆಯರದ್ದೇ ಆದ ರಾಣಿ ಜಾನ್ಸಿ ಬಟಾಲಿಯನ್ ಕಟ್ಟಲು ತೀರ್ಮಾನಿಸಿದರು. ಅದರ ಹೊಣೆಯನ್ನು ಕ್ಯಾಪ್ಟನ್ ಲಕ್ಷ್ಮಿಯವರ ಹೆಗಲಿಗೆ ಹೊರೆಸಿದರು.

ಆ ನಂತರ ಆಜಾದ್ ಹಿಂದ್ ಫೌಜ್‌ನಲ್ಲಿ ಮಹತ್ತರ ಪಾತ್ರವಹಿಸಿದ ಲಕ್ಷ್ಮ್ಮಿಯವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಇದೇ ಸಂದರ್ಭದಲ್ಲಿ ಫಾರ್ಮೊಸಾ ಬಳಿ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ದುರಂತ ಸಾವಿಗೀಡಾದರು. ಆಗ ಬರ್ಮಾದಲ್ಲಿದ್ದ ಲಕ್ಷ್ಮಿಯವರನ್ನು ಬ್ರಿಟಿಷ್ ಪೊಲೀಸರು ಸೆರೆ ಹಿಡಿದರು. ಅದೇ ಕಾಲಘಟ್ಟದಲ್ಲಿ ಭಾರತದ ಸ್ವಾತಂತ್ರ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿತ್ತು. ಬ್ರಿಟಿಷರು ದೇಶದಿಂದ ತೊಲಗುವುದು ಬಹುತೇಕ ಖಚಿತವಾಗಿತ್ತು.

1947ರ ನಂತರ ಕ್ಯಾಪ್ಟನ್ ಲಕ್ಷ್ಮಿಯವರ ಬದುಕಿನಲ್ಲಿ ಮಹತ್ವದ ಬದಲಾವಣೆಯಾಯಿತು. ಆಜಾದ್ ಹಿಂದ್ ಫೌಜ್‌ನಲ್ಲಿ ಹಿರಿಯ ಸೇನಾಧಿಕಾರಿಯಾಗಿದ್ದ ಪ್ರೇಮಕುಮಾರ್ ಸೆಹಗಲ್ ಅವರೊಂದಿಗೆ ಪ್ರೀತಿ ಅಂಕುರಿಸಿ ಅವರನ್ನು ವಿವಾಹ ವಾದರು. ವಿವಾಹದ ನಂತರ ಉತ್ತರಪ್ರದೇಶದ ಕಾನ್ಪುರಗೆ ಬಂದು ನೆಲೆಸಿದ ಲಕ್ಷ್ಮಿಯವರು ದವಾಖಾನೆಯನ್ನು ಆರಂಭಿಸಿದರು. ಅವರ ಆಸ್ಪತ್ರೆ ಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ದೊರೆಯುತಿತ್ತು. ಜೀವನದಲ್ಲಿ ಆಸೆ-ಭರವಸೆಗಳನ್ನು ಕಳೆದುಕೊಂಡು ಬಂದವರಲ್ಲಿ ಲಕ್ಷ್ಮಿಯವರು ಜೀವನೋತ್ಸಾಹ ತುಂಬುತ್ತಿದ್ದರು.

1970ರಲ್ಲಿ ಕ್ಯಾಪ್ಟನ್ ಲಕ್ಷ್ಮಿಯವರ ಪುತ್ರಿ ಸುಭಾಷಿಣಿ ಅಲಿಯವರು ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷ ಸೇರಿದರು. ಆಗ ಬಾಂಗ್ಲಾದೇಶ ದಲ್ಲಿ ಯುದ್ಧ ನಡೆದು ಅಲ್ಲಿನ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ಬಂದಿದ್ದರು. ಅವರ ಪುನರ್ವಸತಿ ಕಾರ್ಯಕ್ಕಾಗಿ ಮುಖ್ಯಮಂತ್ರಿ ಜ್ಯೋತಿಬಸು ಅವರು ಮನವಿ ಮಾಡಿಕೊಂಡಾಗ ಕ್ಯಾಪ್ಟನ್ ಲಕ್ಷ್ಮಿಯ ವರು ತಮ್ಮ ವೈದ್ಯಕೀಯ ತಂಡದೊಂದಿಗೆ ಬಂಗಾಳಕ್ಕೆ ಹೋಗಿ ಪರ್ಯಾಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲಿ ಸಿಪಿಎಂ ಸದಸ್ಯತ್ವ ದೊರೆತಾಗ, ಮರಳಿ ತವರುಮನೆಗೆ ಬಂದೆ ಎಂದು ಸಂಭ್ರಮಿಸಿದ್ದರು.

ಕ್ಯಾಪ್ಟನ್ ಲಕ್ಷ್ಮಿಯವರದ್ದು ಒಂದು ವಿಧದಲ್ಲಿ ಜಾತ್ಯತೀತ ಕುಟುಂಬ. ದಕ್ಷಿಣ ಭಾರತೀಯ ಳಾದ ಅವರು ಉತ್ತರಭಾರತದ ಪ್ರೇಮಕುಮಾರ್ ಸೆಹಗಲ್ ಅವರನ್ನು ಮದುವೆಯಾದರು. ಮಗಳು ಸುಭಾಷಿಣಿ ಅಲಿಯವರು ಖ್ಯಾತ ಚಲನಚಿತ್ರ ನಿರ್ದೇಶಕ ಮುಜಫರ್ ಅಲಿಯವರನ್ನು ಪ್ರೀತಿಸಿ ವಿವಾಹವಾದರು. ಲಕ್ಷ್ಮಿಯವರ ಸಹೋದರಿ ಖ್ಯಾತ ನೃತ್ಯಗಾತಿ ಮೃಣಾಲಿನಿಯವರು ಗುಜರಾತ್‌ನ ಹೆಸರಾಂತ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರನ್ನು ಪ್ರೀತಿಸಿ ವಿವಾಹವಾದರು. ಈ ಸಾರಾಭಾಯಿ ದಂಪತಿಯ ಪುತ್ರಿ ಮಲ್ಲಿಕಾ ಸಾರಾಭಾಯಿ ಅವರು ಕೂಡ ವಿಶ್ವಖ್ಯಾತಿಯ ನೃತ್ಯಗಾತಿ ಮತ್ತು ರಂಗಕಲಾವಿದೆ. 2002ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಸಂತ್ರಸ್ತರಾದ ಅಲ್ಪಸಂಖ್ಯಾತರ ನೆರವಿಗೆ ಧಾವಿಸಿ ನರೇಂದ್ರ ಮೋದಿಯವರ ಕೆಂಗಣ್ಣಿಗೆ ಗುರಿಯಾದವರು ಮಲ್ಲಿಕಾ ಸಾರಾಭಾಯಿ.

ಸಂಘಪರಿವಾರದ ಕೋಮುವಾದಿಗಳ ಬಾಯಿಯಲ್ಲಿ ಸದಾ ರಾಷ್ಟ್ರೀಯತೆಯ ಮಾತುಗಳು ಕೇಳಿ ಬರುತ್ತವೆ. ತಮ್ಮ ಪರಂಪರೆಗೆ ಸೇರಲಿಲ್ಲದ ಸುಭಾಷ್‌ಚಂದ್ರ ಬೋಸ್ ಮತ್ತು ಭಗತ್‌ಸಿಂಗ್ ಅವರ ಹೆಸರುಗಳನ್ನು ಈ ಕೋಮುವಾದಿಗಳು ದುರುಪಯೋಗ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಭಾರತದ ಯಾವೊಬ್ಬ ಸ್ವಾತಂತ್ರ ಹೋರಾಟಗಾರನು ಆರೆಸ್ಸೆಸ್ ವಿಭಜನಕಾರಿ ಸಿದ್ಧಾಂತವನ್ನು ಒಪ್ಪಿಕೊಂಡಿಲ್ಲ. ಸುಭಾಷ್‌ಚಂದ್ರ ಬೋಸ್ ಮತ್ತು ಭಗತ್‌ಸಿಂಗ್ ಪ್ರಖರ ಜಾತ್ಯತೀತ ವಿಚಾರವಾದಿಗಳಾಗಿದ್ದರು. ಭಗತ್‌ಸಿಂಗ್ ಗಲ್ಲಿಗೇರುವಾಗ ತನ್ನ ಕನಸಿನ ಭಾರತ ಸಮಾಜವಾದಿ ಭಾರತ ಎಂದು ಹೇಳಿದ್ದರು. ನೇತಾಜಿ ಸುಭಾಷರ ಸಮತವಾದಿ ನಿಷ್ಠೆ ಅಚಲವಾಗಿತ್ತು. ಈ ಸತ್ಯಸಂಗತಿಯನ್ನು ಮುಚ್ಚಿ ಸ್ವಾತಂತ್ರ ನಂತರದ ಪೀಳಿಗೆಯನ್ನು ದಾರಿ ತಪ್ಪಿಸಲು ಆರೆಸ್ಸೆಸ್ ಇವರಿಬ್ಬರ ಹೆಸರುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಕ್ಯಾಪ್ಟನ್ ಲಕ್ಷ್ಮಿಯವರು ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.

ಸಂಘಪರಿವಾರ ಏನೇ ಹೇಳಲಿ, ಸ್ವಾತಂತ್ರ ಚಳವಳಿಯಲ್ಲಿ ಸುಭಾಷ್ ಮತ್ತು ಭಗತ್‌ಸಿಂಗ್ ಒಡನಾಡಿಗಳಾಗಿದ್ದವರು ಸ್ವಾತಂತ್ರ ನಂತರ ಕಮ್ಯೂನಿಸ್ಟ್ ಚಳವಳಿಯನ್ನು ಸೇರಿದರು. ಪೃಥ್ವಿಸಿಂಗ್ ಆಜಾದ್, ಗಣೇಶ್ ಶಂಕರ್ ವಿದ್ಯಾರ್ಥಿ, ಕ್ಯಾಪ್ಟನ್ ಲಕ್ಷ್ಮಿ ಹೀಗೆ ಅನೇಕರ ಹೆಸರನ್ನ ಉದಾಹರಿಸಬಹುದು. ಆದರೆ ಸ್ವಾತಂತ್ರ ಚಳವಳಿಯಲ್ಲಿ ಬ್ರಿಟಿಷರ ಏಜೆಂಟರಾಗಿ ಸೇವೆ ಸಲ್ಲಿಸಿದ ಕೋಮುವಾದಿಗಳು ಇಂದಿಗೂ ರಾಷ್ಟ್ರ ಪುರುಷರ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕ್ಯಾಪ್ಟನ್ ಲಕ್ಷ್ಮಿಯವರು ನಿಧನರಾಗುವ ಒಂದು ವಾರ ಮುಂಚೆಯೇ ಕೊನೆಯುಸಿರೆಳೆದ ಮುಂಬೈಯ ಸಮಾಜವಾದಿ ಹೋರಾಟಗಾರ್ತಿ ಮೃಣಾಲ್ ಗೋರೆಯವರನ್ನು ಈ ದೇಶ ಮರೆಯಲು ಸಾಧ್ಯವಿಲ್ಲ. ಮುಂಬೈಯ ಮಹಾನಗರದಲ್ಲಿ ನೀರಿಗಾಗಿ ಹೋರಾಟ ನಡೆಸಿ, ಪಾನಿವಾಲಿ ಬಾಯಿ ಎಂದು ಹೆಸರಾಗಿದ್ದರು. ಕ್ಯಾಪ್ಟನ್ ಲಕ್ಷ್ಮಿ, ಮೃಣಾಲ್ ಗೋರೆ ಇಂತಹ ಮಹಾನ್ ಚೇತನಗಳ ನಿರ್ಗಮನದಿಂದ ನಮ್ಮ ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಸವಾಲುಗಳು ಎದುರಾದಾಗಲೇ ಹೊರಹೊಮ್ಮುವ ಹೋರಾಟಗಳಲ್ಲಿ ಇಂತಹವರು ಮರುಜನ್ಮ ಪಡೆದು ಬರುತ್ತಾರೆ ಎಂಬುದು ಮರೆಯಬಾರದು.


 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು