ನನ್ನ ದೃಷ್ಟಿಯಲ್ಲಿ ಆತನು ಮಹಾನುಭಾವ. ಜಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಆರೋಗ್ಯವನ್ನು ಧಾರೆ ಎರೆಯುತ್ತಿರುವಂಥವರು. ಔಷಧಿಗಳ ಪಿಡುಗನ್ನು ಗುಮಾನಿಯಿಂದ ನೋಡುವಂಥ ಮನಸ್ಥಿತಿಯನ್ನು ಬೆಳೆಸುತ್ತಿರುವುದು ಅತ್ಯಂತ ಮಹತ್ವ ಪೂರ್ಣವಾದದ್ದು. ಎರಡು ವರ್ಷಗಳ ಹಿಂದೆ ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿ ನೂರಾರು ಸಭಿಕರ ಮುಂದೆ ಒಂದು ಘಂಟೆಗೂ ಮೇಲ್ಪಟ್ಟು ಮಾತಾಡಿದರು. ಎಲ್ಲರೂ ಸಂಭ್ರಮದಿಂದ ಪ್ರತಿ ಯೊಂದು ವಾಕ್ಯವನ್ನು ಒಬ್ಬ ಸಂತನ ಹೃದಯಾಂತ ರಾಳದಿಂದ ಬರುತ್ತಿದೆಯೆಂದು ಆಲಿಸುತ್ತಿದ್ದರು. ಆತ ನಿಜವಾಗಿಯೂ ನಮ್ಮ ಕಾಲದ ಒಬ್ಬ ದೊಡ್ಡ ಋಷಿಯೇ ಆಗಿದ್ದಾರೆ. ಒಂದೊಂದು ವಾಕ್ಯವೂ ಆರೋಗ್ಯದ ಮಾತ್ರೆಗಳನ್ನು ತುಂಬಿಕೊಂಡು ಧ್ವನಿಯಾಗಿ ಹೊರಗೆ ಬರುತ್ತಿದೆ ಅನ್ನಿಸಿತು. ಅವರ ಮಾತಿನಲ್ಲಿ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತ್ಯಂತರಗಳ ಕುರಿತಂತೆ ಒಳ ನೋಟಗಳು ತುಂಬಿಕೊಂಡಿತ್ತು. ಯಾಕೆಂದರೆ ಒಂದು ಸಮಾಜ ಚೆನ್ನಾಗಿದೆ ಅನ್ನಿಸುವುದು ಆ ಸಮಾಜದ ಜನ ಎಷ್ಟರ ಮಟ್ಟಿಗೆ ಆರೋಗ್ಯವನ್ನು ಪಡೆಯುತ್ತಿದ್ದಾರೆ ಎಂಬುದರ ಮೂಲಕ.
ಅವರ ಒಟ್ಟು ಮಾತಿನಲ್ಲಿ ಯಾಕೆ ಧ್ವನಿಪೂರ್ಣತೆ ತುಂಬಿಕೊಂಡಿತ್ತೆಂದರೆ ಹತ್ತಾರು ಶಾಸ್ತ್ರಗಳನ್ನು ಓದಿದವರು. ಅದರಿಂದ ಮನುಕುಲಕ್ಕೆ ಯಾವ ರೀತಿಯಲ್ಲಿ ಸಹಾಯವಾಗಬಲ್ಲುದು ಎಂಬುದನ್ನು ತಿಳಿದು ನುಡಿಯುತ್ತಿರುವರು. ನಿಜವಾಗಿಯೂ ಅಂದಿನ ದೀರ್ಘ ಭಾಷಣವನ್ನು ಕೇಳಿದ ಮೇಲೆ; ‘‘ಗುರೂಜಿ ನಿಮ್ಮ ಪಾದಗಳಿಗೆ ನಮಸ್ಕರಿಸಬಹುದಾ?’’ಎಂದು ಕೇಳಿದೆ. ‘‘ನಿನ್ನ ಇಷ್ಟ ಶ್ರೀನಿವಾಸ್’’ ಎಂದು ತಲೆ ನೇವರಿಸಿದರು. ನಾನು ನಿಜವಾಗಿಯೂ ಪುಳಕಿತನಾಗಿದ್ದೆ.ಇದು ನಡೆದದ್ದು: ಬೆಂಗಳೂರಿನ ‘ಪ್ರಶಾಂತ ಯೋಗಾಶ್ರಮ’ದ ಇಪ್ಪತ್ತೈದನೆಯ ವರ್ಷದ ನೆನಪಿನ ಸಮಾರಂಭದಲ್ಲಿ. ಅಂದು ಈ ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಅವರು ನಮ್ಮ ಮುಂದೆ ಎಷ್ಟೊಂದು ಚೇತೋಹಾರಿಯಾಗಿ ನಿಂತಿದ್ದರು.
ಮೇಲಿನ ಒಟ್ಟು ವಾಕ್ಯಗಳು ಅವರಿಗೆ ಅರ್ಪಿತವಾಗಿರುವಂಥವು. ಅವರನ್ನು ವರ್ಣಿಸಲು ನಾನೊಬ್ಬ ಸಣ್ಣ ಮನುಷ್ಯ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಜಗತ್ತಿನಲ್ಲಿ ಲಕ್ಷಾಂತರ ಮಂದಿಗೆ ತಮ್ಮ ತಂತಿವಾದ್ಯದ ಮೂಲಕ ಚೈತನ್ಯವನ್ನು ತುಂಬುತ್ತ ಬಂದ ಯಹೂದಿಮೆಹನ್ ಅವರು ಪಶ್ಚಿಮದ ದೇಶಗಳಿಗೆ ಪರಿಚಯಿಸಿದವರು. ನಿಜವಾದ ‘ಯೋಗ’ದ ಗುರು ವೆಂದು ತಮ್ಮ ನುಡಿಗಳಲ್ಲಿ ಹೇಳಿದವರು. ಇಂಥ ಪ್ರೊ.ಬಿ.ಕೆ.ಎಸ್.ಅಯ್ಯಂಗಾರ್ ಅವರು ತೊಂಬತ್ನಾಲ್ಕು ವರ್ಷಗಳ ಹಿಂದೆ ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಹುಟ್ಟಿದವರು. ಅತ್ಯಂತ ಬಡ ಕುಟುಂಬದಿಂದ ಬಂದವರು.
ಬಾಲ್ಯದ ಹೆಸರಿನ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು; ಇಂದು ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್. ಅವರು ಜಗತ್ತಿನ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ‘ಬಿ.ಕೆ.ಎಸ್.ಅಯ್ಯಂಗಾರ್ ಸ್ಕೂಲ್ ಆಫ್ ಯೋಗ’ ಎಂಬ ಪರಿಕಲ್ಪನೆಯ್ನು ಜನಮಾನಸದಲ್ಲಿ ರಿಜಿಸ್ಟರ್ ಮಾಡಿರುವಂಥವರು. ಇಂಥ ‘ಯೋಗ’ ಮಹರ್ಷಿಯನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಒಂದಷ್ಟು ಗಂಟೆಗಳು ಕಾಲಕಳೆಯುವ ಸದಾವಕಾಶ ದೊರಕಿದ್ದು ಕೂಡ ಬೆಂಗಳೂರಿನ ‘ಪ್ರಶಾಂತ್ ಯೋಗಾಶ್ರಮ’ ಸಂಸ್ಥೆಯ ಯೋಗ ಗುರುಗಳಾದ ಹೊ.ಶಾ.ಅರುಣ್ ಅವರಿಂದ.
ಹೊ.ಶಾ. ಅರುಣ್ ಅವರು ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಅವರ ಅಪ್ಪಟ ಶಿಷ್ಯ. ಇಂದು ಇವರು ಗುರೂಜಿಯವರ ಯೋಗಾಸನಗಳ ಮುಂದುವರಿದ ಭಾಗವಾಗಿ ತುಂಬ ಎತ್ತರಕ್ಕೆ ಬೆಳೆದಿರುವಂಥವರು. ನನ್ನ ಕತ್ತು ನೋವು ಮತ್ತು ಭುಜದ ನೋವನ್ನು ಕೆಲವು ಯೋಗಾಸನಗಳ ಮೂಲಕ ಪರಿಹರಿಸಿದವರು. ಇಂದು ನಿಜವಾಗಿಯೂ ನಮ್ಮ ಕೆಳವರ್ಗದವರಿಗೆ ಹಾಗೂ ಕೆಳಮಧ್ಯಮ ವರ್ಗದವರಿಗೆ ಯೋಗಾಸನಗಳ ಪರಿಚಯವಾಗಬೇಕಾಗಿದೆ. ಯಾಕೆಂದರೆ ಅವರು ನಿಜವಾಗಿಯೂ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ದುಬಾರಿ ಔಷಧಿಗಳ ಬಳಿ ಹೋಗಲಾರರು. ಅದರಲ್ಲೂ ಬಹು ಪಾಲು ನಮ್ಮ ಆಲೋಪಥಿಕ್ ವೈದ್ಯರು ಸಣ್ಣ ಪುಟ್ಟದಕ್ಕೆಲ್ಲಾ ರಾಶಿ ರಾಶಿ ಗುಳಿಗೆಗಳನ್ನು ಬರೆದುಕೊಡುವರು. ಎಂತೆಂಥದೋ ಪರೀಕ್ಷೆಗೆ ಒಳಪಡಿಸುವವರು.
ಇದರಿಂದ ಅವರು ನಿಜವಾಗಿಯೂ ತತ್ತರಿಸಿ ಹೋಗಿದ್ದಾರೆ. ಹಾಗೆ ನೋಡಿದರೆ ಎರಡು ದಶಕಗಳ ಹಿಂದೆ ನಾನೂ ಕೂಡ ಯೋಗಾಸನಗಳ ಅಭ್ಯಾಸವನ್ನು ಗುಮಾನಿಯಿಂದ ನೋಡುತ್ತಿದ್ದವನು. ಆದರೆ ಇಂದು ಹಾಗೆ ಮಾಡುವುದಿಲ್ಲ. ಯಾಕೆಂದರೆ ಅದರ ಮಹತ್ವಪೂರ್ಣತೆಯು ಅರಿವಾಗಿದೆ. ಈ ಕಾರಣಕ್ಕಾಗಿಯೇ ನಾನಾ ರೀತಿಯ ಯೋಗಾಸನ ಗಳ ತರಬೇತಿ ಶಾಲೆಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷ ವಾಗಿ ಹಾಗೂ ಪರೋಕ್ಷವಾಗಿ ಬಹುಪಾಲು ಮಂದಿ ಯೋಗ ಶಿಕ್ಷಕರು ಗುರೂಜಿ ಪ್ರೊ.ಬಿ.ಕೆ. ಅಯ್ಯಂಗಾರ್ ಅವರಿಂದ ಪ್ರೇರಿತರಾದವರು. ಮೇಲ್ವರ್ಗದವರಲ್ಲಿ ಹಾಗೂ ಮಧ್ಯವರ್ಗದವರಲ್ಲಿ ‘ಯೋಗ’ ಎಂಬ ಪರಿಕಲ್ಪನೆ ತುಂಬ ಜನಪ್ರಿಯ ವಾಗಿದೆ. ಇದರಿಂದ ಎಂತೆಂಥದೋ ನಕಲಿ ಯೋಗ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡಿವೆ. ‘ಯೋಗ’ದ ಜನಪ್ರಿಯತೆಯ ಕಾರಣಕ್ಕಾಗಿ.
ಇದೇನೆ ಆಗಿರಲಿ ‘ಯೋಗ’ದ ಬಗ್ಗೆ ಆಸಕ್ತಿ ಇರು ವವರೆಲ್ಲ ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸಿ ಕೊಳ್ಳುವರು. ಮತ್ತು ದೇಸೀ ವಸ್ತುಗಳನ್ನು ಹಾಗೂ ದೇಸೀ ಔಷಧಿಗಳನ್ನು ಗೌರವಿಸುವರು. ಒಂದು ದೃಷ್ಟಿಯಿಂದ ‘ಯೋಗ’ದ ಕುರಿತು ನಂಬಿಕೆಗಳು ದಟ್ಟವಾಗುತ್ತಿರುವುದರಿಂದ ಆಯುರ್ವೇದ ಮತ್ತು ಹೋಮಿಯೋಪಥಿಯ ಮೊರೆ ಹೋಗುತ್ತಿದ್ದಾರೆ. ನಮ್ಮ ಜನರಲ್ಲಿ ಆರೋಗ್ಯದ ಕುರಿತಂತೆ ಪ್ರಾಥ ಮಿಕ ಅರಿವು ಮೂಡುತ್ತಿವೆ. ಇದು ವಾಸ್ತವವಾಗಿ ‘ಯೋಗಾಬ್ಯಾಸ’ ಎಷ್ಟು ಮುಖ್ಯ ಎಂಬ ಆಲೋ ಚನಾ ಕ್ರಮದ ಪ್ರಚಾರತೆಯಿಂದ ಬೆಳೆದು ಬರುತ್ತಿ ರುವಂಥದ್ದು. ಈ ಹಿನ್ನೆಲೆಯಿಂದ ಒಟ್ಟು ಕೊಡುಗೆ ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಅಂಥವರಿಂದ ಬಂದಿರುವಂಥದ್ದು. ನಮ್ಮ ಹಿಂದಿನ ಸೂಫೀ ಸಂತರು ಹಾಗೂ ಇತರೆ ಪ್ರಾಮಾಣಿಕ ದೇಸೀ ಪಂಡಿತರು ನೂರಾರು ವರ್ಷಗಳಿಂದ ಇಂಥ ಅಪ್ಪಟ ದೇಸೀ ಆರೋಗ್ಯದ ಪರಿಕಲ್ಪನೆಗಳನ್ನು ಉಳಿಸಿಕೊಂಡು ಬಂದಿದ್ದಾರೆ.
ಜನ ಸಾಮಾನ್ಯರಿಗೆ ತಮ್ಮ ಚಿಕಿತ್ಸೆಯ ಮೂಲಕ ಸೇವೆ ಮಾಡುವುದು ನೂರು ಜನ್ಮಗಳ ಪುಣ್ಯ ಎಂದು ತಿಳಿದು ಬಂದವರು. ಪ್ರೊ.ಬಿ.ಕೆ.ಎಸ್.ಅಯ್ಯಂಗಾರ್ ಅವರು ಇದನ್ನೆಲ್ಲ ಗೌರವದಿಂದ ನೋಡುತ್ತ ಬಂದವರು. ತಮ್ಮ ಬಾಲ್ಯಕಾಲದಲ್ಲಿ ಅನಾರೋಗ್ಯದಿಂದ ತತ್ತರಿಸಿ ಹೋಗಿದ್ದಾಗ ಮೈಸೂರಿನಲ್ಲಿದ್ದ ತಮ್ಮ ಸೋದರಮಾವ ಪ್ರಸಿದ್ಧ ಯೋಗಿ ತಿರುಮಲ ಕೃಷ್ಣಮಾಚಾರ್ಯರಿಂದ ಚಿಕಿತ್ಸೆ ಪಡೆದು ಗುಣಮುಖತೆಯ ಮೂಲಕವೇ; ಒಟ್ಟು ಯೋಗ ಶಿಕ್ಷಣದ ಬಗ್ಗೆ ಒಲವು ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ಬೆಳೆದರು. ಇದಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣವಾದುದನ್ನು ಮಾಡಬೇಕು ಎಂದು ದೂರದ ಮಹಾರಾಷ್ಟ್ರದ ಪೂನಾಗೆ ಓಡಿ ಹೋದವರು.
ಸುಮಾರು ವರ್ಷಗಳ ಹಿಂದೆಯೇ ಅಲ್ಲಿಗೆ ಹೋಗಿ; ಭಾಷೆ ಗೊತ್ತಿಲ್ಲದ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಅಲ್ಲಿ ಸಾಬೀತು ಪಡಿಸುವರು. ಕೆಲವೇ ವರ್ಷಗಳಲ್ಲಿ ತಮ್ಮ ಸತತ ಯೋಗಾಧ್ಯಯನ ಮತ್ತು ಪ್ರಾಕ್ಟೀ ಸ್‌ನಿಂದ ದೇಶವಿದೇಶದ ಪ್ರಜ್ಞಾವಂತರಿಗೆ ಪರಿಚಯವಾಗುವರು. ನನ್ನ ಮೆಚ್ಚಿನ ಲೇಖಕ ಖುಷ್‌ವಂತ್ ಸಿಂಗ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಅಪ್ರಸ್ತುತವಾಗಲಾರದು ಎಂದು ಭಾವಿಸುವೆ. ಸಿಂಗ್ ಅವರು ತಮ್ಮ ಬಹುಮುಖ್ಯ ಲೇಖನವಾದ ‘ಗೋಯಿಂಗ್ ಗಾಗಾ ಓವರ್ ಯೋಗ’ (ಈ ಲೇಖನವಿರುವ ಕೃತಿಯನ್ನು ವಿಕ್ರಮ್ ಸೇಥ್ ಅವರು ‘ನಾಟ್ ಎ ನೈಸ್ ಮ್ಯಾನ್ ಟು ನೋ’ ಎಂಬ ಶೀರ್ಷಿಕೆಯಲ್ಲಿ ಖುಷ್‌ವಂತ್ ಸಿಂಗ್ ಅವರ ಪ್ರಾತಿನಿಧಿಕ ಲೇಖನಗಳನ್ನು ಸಂಪಾದಿಸಿರುವರು) ಎಂಬ ಲೇಖನದಲ್ಲಿ ಧೀರೇಂದ್ರ ಬ್ರಹ್ಮಚಾರಿಯವರನ್ನು ಕುರಿತು ತುಂಬ ದೀರ್ಘವಾಗಿ ಬರೆದಿರುವಂಥವರು.
ಧೀರೇಂದ್ರ ಬ್ರಹ್ಮಚಾರಿಯವರು ಒಂದು ಕಾಲದಲ್ಲಿ ಹೇಗೆ ಇಂದಿರಾ ಗಾಂಧಿಯವರ ಕುಟುಂಬಕ್ಕೆ ಹತ್ತಿರವಾಗಿದ್ದು ವ್ಯವಹರಿಸುತ್ತಿದ್ದಾರೆ ಎಂಬುದು ದಿನನಿತ್ಯ ಚರ್ಚೆ ಅಥವಾ ಸುದ್ದಿಯಾಗುತ್ತಿದ್ದ ದಿನಗಳಿದ್ದವು. ಅಂಥ ಧೀರೇಂದ್ರ ಬ್ರಹ್ಮಚಾರಿಯವರನ್ನು ಕುರಿತು ಬರೆಯುವಾಗ; ಪ್ರೊ.ಬಿ.ಕೆ.ಎಸ್.ಅಯ್ಯಂಗಾರ್ ಅವರನ್ನು ತುಂಬಾ ಗೌರವದಿಂದ ಪ್ರಸ್ತಾಪಿಸುವರು:‘‘ಭಾರತ ಮತ್ತು ವಿದೇಶಗಳಲ್ಲಿ ಯೋಗಾಭ್ಯಾಸಕ್ಕೆ ವೃತ್ತಿ ಗೌರವವನ್ನು ತಂದು ಕೊಟ್ಟವರು ಪ್ರೊ.ಬಿ.ಕೆ.ಎಸ್.ಅಯ್ಯಂಗಾರ್ ಅವರು’’ ಎಂದು. ನಾನು ಈ ಲೇಖನವನ್ನು ನನ್ನ ‘ಯೋಗ’ ಗುರುಗಳಾದ ಹೊ.ಶಾ.ಅರುಣ್ ಮತ್ತು ಅವರ ಕೆಲವು ಮಂದಿ ಪ್ರಮುಖ ಶಿಷ್ಯರಿಗೆ ಜೆರಾಕ್ಸ್ ಮಾಡಿ ಹಂಚಿದ್ದೆ.
ಈ ವಿಷಯವನ್ನು ಕೆಲವು ವರ್ಷಗಳ ಹಿಂದೆ ಅವರ ಮುಂದೆ ಕೂತು ಪ್ರಸ್ತಾಪಿಸಿದೆ. ಅವರು ನಗುತ್ತ ‘‘ಶ್ರೀನಿವಾಸ್ ಯು ರೆಡ್ ದಾಟ್ ಆರ್ಟಿಕಲ್’’ ಎಂದರು. ನಾನು ಹೌದು ಎಂದು ಖುಷಿಯಿಂದ ಹೇಳಿದೆ. ಆಗ ಅವರು ಮುಂದುವರಿದು ನಗುತ್ತ ಒಂದು ಮಾತು ಹೇಳಿದರು: ‘‘ಶ್ರೀನಿವಾಸ್ ಒಂದು ದಿವಸ ಇದ್ದಕ್ಕಿದ್ದಂತೆ ಖುಷ್‌ವಂತ್ ಸಿಂಗ್ ಅವರು ಪೂನಾದ ನಮ್ಮ ಯೋಗ ಸೆಂಟರ್‌ಗೆ ಬಂದರು. ನಾನು ಅಭ್ಯಾಸದಲ್ಲಿ ತೊಡಗಿದ್ದೆ, ಅರು ಬಾಗಿಲಲ್ಲಿ ತುಂಬ ಸಮಯ ನಿಂತೇ ಇದ್ದರು. ನಂತರ ನಾನು ಅವರನ್ನು ಮಾತಾ ಡಿಸಲು ಹೋದೆ.
ಆಗ ಅವರು ಗಂಭೀರವಾಗಿಯೇ; ‘‘ಮಿಸ್ಟರ್ ಅಯ್ಯಂಗಾರ್, ನಾನು ನನ್ನ ಬದುಕಿನಲ್ಲಿ ದೊಡ್ಡ ತಪ್ಪು ಮಾಡಿದೆ. ಮೊದಲೇ ಗೊತ್ತಾಗಿದ್ದರೆ ನಾನೂ ನಿಮ್ಮ ಯೋಗಾಭ್ಯಾಸದ ವಿದ್ಯಾರ್ಥಿಯಾಗುತ್ತಿದ್ದೆ. ಯಾಕೆಂದರೆ ಎಂತೆಂಥ ಸುಂದರವಾದ ಹೆಂಗಸರೆಲ್ಲಾ ಬರುತ್ತಾರೆ’’ ಎಂದರು. ಇದನ್ನು ಕೇಳಿ ನಾನು ನಿಜವಾಗಿಯೂ ಎಂಜಾಯ್ ಮಾಡಿದ್ದೆ. ಪ್ರೊ.ಅಯ್ಯಂಗಾರ್ ಅವರ ಈ ಮಾತಿನ ಬಗ್ಗೆ ಖುಷ್‌ವಂತ್ ಸಿಂಗ್ ಅವರನ್ನು ಬೆಂಗಳೂರಿನ ಕುಮಾರ ಕೃಪಾ ಗೆಸ್ಟ್ ಹೌಸ್‌ನಲ್ಲಿ ಹಾಗೂ ಮತ್ತೊಮ್ಮೆ ದೆಹಲಿಯ ಅವರ ಮನೆಯಲ್ಲಿ ಭೇಟಿಯಾದಾಗ ನೆನಪು ಮಾಡಿದೆ. ಆಗ ಖುಷ್‌ವಂತ್ ಸಿಂಗ್ ಅವರು ತಮ್ಮ ಮಾಮೂಲಿ ತುಂಟತನದ ನಡುವಿನಲ್ಲಿ ‘‘ದಟ್ ಅಯ್ಯಂಗಾರ್ ಸ್ಟಿಲ್ ರಿಮಂಬರ್ ದಿಸ್’’ ಎಂದಿದ್ದರು.
ಯಾಕೆಂದರೆ ಇವರಿಬ್ಬರೂ ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಆ ಗೆಳೆತನದ ಕೆಲವು ಸ್ವಾರಸ್ಯಗಳನ್ನು ತುಂಬ ರಂಜಕವಾಗಿ ಹೇಳಿದ್ದರು. ಇಬ್ಬರೂ ಜಗತ್ತಿನ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಭೇಟಿಯಾಗಿ ಕಾಲ ಕಳೆದವರು ಅಲ್ಲವೇ ? ಬೆಂಗಳೂರಿನ ಶಂಕರಪುರಂನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ರಂಗಮಂದಿರದಲ್ಲಿ ಪ್ರೊ.ಅಯ್ಯಂಗಾರ್ ಅವರು ‘ಯೋಗ’ ಕುರಿತು ಡೆಮಾನ್‌ಸ್ಟ್ರೇಷನ್ ಕೊಟ್ಟರು. ಒಂದು ದೃಷ್ಟಿಯಿಂದ ನಾನು ಸದಾ ನೆನಪು ಮಾಡಿಕೊಳ್ಳುವಂಥದ್ದು, ನಿಜವಾದ ಸಾಧಕರಿಗೆ ತಮ್ಮ ಒಟ್ಟು ಸಾಧನೆಯ ಬಗ್ಗೆ ಎಷ್ಟು ಆತ್ಮೀಯವಾದ ಗೌರವವಿರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಅಂದು ಸುಮಾರು ಎರಡು ಗಂಟೆ ಮನುಷ್ಯನ ದೇಹಕ್ಕೆ ಸಂಬಂಧಿಸಿದಂತೆ ಅಮೋಘವಾದ ಪ್ರಯೋಗಾತ್ಮಕ ಉಪನ್ಯಾಸಕೊಟ್ಟರು.
ಆ ಸಮಯದಲ್ಲಿ ನನ್ನ ಪಕ್ಕದಲ್ಲಿ ಹಿರಿಯ ಗಾಂಧಿವಾದಿ ಮತ್ತು ಮಾಜಿ ಶಿಕ್ಷಣ ಸಚಿವರಾದ ಎಂ.ಚಂದ್ರಶೇಖರ್ ಅವರು ಕೂತಿದ್ದರು. ಅವರು ಆಗ ತೀವ್ರವಾದ ಪೆರಾಲಿಸ್‌ಗೆ ತುತ್ತಾಗಿ; ದೇಹದ ಬಲಭಾಗ ಚೈತನ್ಯವನ್ನೇ ಕಳೆದುಕೊಂಡಿತ್ತು. ಅಂಥ ಸಮಯದಲ್ಲಿ; ಅವರು ಒಂದು ಪ್ರಶ್ನೆ ಕೇಳಿದರು; ಅಲೋಪತಿ ಮೆಡಿಸಿನ್‌ಗೆ ಸಂಬಂಧಿಸಿ. ತಕ್ಷಣ ಅಯ್ಯಂಗಾರ್ ಅವರು; ‘‘ನನಗೆ ತಿಳಿದಿದೆ ನೀವು ಎಂಥ ಅನಾರೋಗ್ಯದಿಂದ ನರಳುತ್ತಿದ್ದೀರಿ ಎಂದು. ಆದರೂ ಭಯ ಪಡಬೇಡಿ ಬನ್ನಿ ಸ್ಟೇಜ್ ಮೇಲೆ’’ ಎಂದು ಎಂ.ಚಂದ್ರಶೇಖರ್ ಅವರನ್ನು ಮೆಲ್ಲಗೆ ಕರೆಸಿಕೊಂಡರು. ಎಲ್ಲರೂ ಇದನ್ನು ಆಶ್ಚರ್ಯ ಮತ್ತು ಕುತೂಹಲದಿಂದ ನೋಡತೊಡಗಿದರು.
ಮತ್ತೊಮ್ಮೆ ‘‘ನೀವು ಭಯ ಪಡಬೇಡಿ ನಿಮ್ಮ ದೇಹಕ್ಕೆ ಏನೂ ತೊಂದರೆಯಾಗುವುದಿಲ್ಲ’’ ಎಂದು ಪ್ರಮಾಣ ಮಾಡುವ ರೀತಿಯಲ್ಲಿ ಕರೆಸಿಕೊಂಡಿದ್ದರು. ಅಂಥ ತೀವ್ರವಾದ ಅನಾರೋಗ್ಯದಿಂದ ಎಂ.ಚಂದ್ರಶೇಖರ್ ಅವರಂಥ ಎಪ್ಪತೈದು ವರ್ಷಕ್ಕೂ ಮೇಲ್ಪಟ್ಟು ವಯಸ್ಸಾಗಿದ್ದ ಅವರನ್ನು ವೇದಿಕೆಯಲ್ಲಿ ಮಲಗಿಸಿ ಕೈ ಕಾಲು ಮಡಚಿ ವಿವರಿಸುವುದರ ಮೂಲಕ ಸಭಿಕರನ್ನೆಲ್ಲಾ ಚಾರಿತ್ರಿಕ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಎಂ.ಚಂದ್ರಶೇಖರ್ ಅವರೂ ಅಷ್ಟೇ; ಧೈರ್ಯವಾಗಿ ಅದಕ್ಕೆ ಸ್ಪಂಧಿಸಿದ್ದರು. ಆ ದಿನ ಮತ್ತೊಮ್ಮೆ ಅವರಿಗೆ ಪ್ರಮಾಣಿಕವಾಗಿ ಕೈ ಮುಗಿದೆ. ತಾವು ಜಗತ್ತಿನ ಕೆಲವೇ ಮಹಾನುಭಾವರಲ್ಲಿ ಒಬ್ಬರು ಎಂದು. ಇಂಥ ವ್ಯಕ್ತಿತ್ವ ಇದ್ದಿದ್ದರಿಂದಲೇ ಯಹೂದಿಮೆಹನ್ ಅವರಂಥ ಜಗತ್ತಿನ ಶ್ರೇಷ್ಠ ಕಲಾವಿದ ಪ್ರೊ.ಅಯ್ಯಂಗಾರ್ ಅವರನ್ನು ಎಲ್ಲೆಲ್ಲೋ ಯಾರ್ಯಾರಿಗೋ ಪರಿಚಯಿಸಿದ್ದು.
ಇದೆಲ್ಲವೂ ಸ್ವಲ್ಪ ಮಟ್ಟಿಗೆ ಅವರಿಗೆ ಗೊತ್ತಿದ್ದರಿಂದ. ಪ್ರೊ. ಅಯ್ಯಂಗಾರ್ ಅವರಿಂದ ಅರ್ಧ ಗಂಟೆ ‘ ವಾಟ್ ಲೈಫ್ ದಾಟ್ ಟು ಮೀ’ ಎಂಬ ವಿಷಯದ ಬಗ್ಗೆ ಸಾಕ್ಷ ಚಿತ್ರಕ್ಕಾಗಿ ಕ್ಯಾಮರಾ ಮುಂದೆ ಕೂರಿಸುವ ಆಸೆ ಇತ್ತು. ಆಗ ವಿಷಾದದಿಂದ ‘‘ನೋಡು ಶ್ರೀನಿವಾಸ್, ನಾನು ಎಷ್ಟೋ ವರ್ಷವಾಯಿತು ಕ್ಯಾಮರಾದ ಬೆಳಕನ್ನು ಎದುರಿಸಿ. ಇಂದು ನಿಜವಾಗಿಯೂ ನನ್ನಿಂದ ಆಗುವುದಿಲ್ಲ’’ ಎಂದಿದ್ದರು.ಇದಕ್ಕೆ ನನ್ನ ಗೌರವಾನ್ವಿತ ಯೋಗ ಗುರುಗಳಾದ ಹೊ.ಶಾ.ಅರುಣ್ ಅವರು ಮಧ್ಯವರ್ತಿಯಾಗಿದ್ದರು.ಆದರೆ ಅವರು ನನಗೊಬ್ಬನಿಗೆ ಮಾತ್ರ ಮನಸ್ಸಿನ ತುಂಬಾ ಅರ್ಥಪೂರ್ಣ ಸಾಕ್ಷ ಚಿತ್ರವಾಗಿ ಉಳಿದಿದ್ದಾರೆ.
ಅಂದು ಬೇರೆ ಬೇರೆ ಮಾತಾಡುವಾಗ ಅವರ ಜೀವನದಲ್ಲಿ ಬಂದು ಹೋದ ಮಹಾನುಭಾವ ಅವರನ್ನು ಕುರಿತು ಮಾತಾಡಿದರೆ ರೆಕಾರ್ಡ್ ಮಾಡಿಕೊಂಡು ಒಟ್ಟು ಸ್ಕ್ರಿಪ್ಟ್‌ನ್ನು ನಿಮಗೆ ಕೊಟ್ಟು ಪರಿಶೀಲಿಸಿದ ನಂತರ ಪ್ರಕಟಿಸುವ ಆಸೆ ಇದೆ ಎಂದು ಹೇಳಿದ್ದೆ, ಅದಕ್ಕೆ ಅವರು ನಗುತ್ತಾ ‘‘ಬಿಡುವು ಮಾಡಿಕೊಂಡು ಪೂನಾಗೆ ಬಾ’’ ಎಂದಿದ್ದರು. ನನಗೆ ತಕ್ಷಣ ಹೋಗಲಾಗಲಿಲ್ಲ. ಆದರೆ 2011ರ ಮೇ ತಿಂಗಳಲ್ಲಿ ಪೂನಾದಲ್ಲಿ ಸುತ್ತಾಡುವಾಗ; ನನ್ನ ಮನಸ್ಸಿನ ಮುಂದೆ ಬೃಹತ್ತಾಗಿ ನಿಂತಿದ್ದು ; ಹೋ.ಶೋ. ಅವರ ವ್ಯಕ್ತಿತ್ವ, ಪಂಡಿತ್ ಭೀಮಸೇನ ಜೋಶಿಯವರ ಸಂಗೀತದ ನಾದಲಹರಿ, ಆಗಖಾನ್ ಅರಮನೆಯ ಚಾರಿತ್ರಿಕ ಒಳನೋಟಗಳು, ರಾಜಾ ದಿನಕರ್ ಕೇಲ್ಕರ್ ಮ್ಯೂಸಿಯಂ ಮತ್ತು ಪ್ರೊ.ಬಿ.ಕೆ. ಎಸ್. ಅಯ್ಯಂಗಾರ್ ಅವರ ಯೋಗದ ಪರಿಕಲ್ಪನೆ.
ಗುರೂಜಿಯವರ ಯೋಗ ಕೇಂದ್ರವನ್ನು ನೋಡುವುದಕ್ಕಾಗಿಯೇ ಬೆಂಗಳೂರಿಗೆ ಫೋನ್ ಮಾಡಿ ಗೆಳತಿ ಶಮಂತ ಅವರಿಂದ ವಿಲಾಸವನ್ನು ಪಡೆದಿದ್ದೆ. ಶಮಂತ ಅವರು ನನ್ನನ್ನು ಯೋಗ ಗುರು ಹೊ.ಶಾ. ಅರುಣ್ ಅವರಿಗೆ ಪರಿಚಯಿಸಿದವರು. ಅವರಿಂದ ಫ್ರೊ. ಗುರೂಜಿಯವರು ನನ್ನ ನೆನಪಿಗೆ ಲಭ್ಯವಾದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...