ಅಂಕಣ

mail-img print-img

ಮಹಿಳಾ ಪ್ರಾತಿನಿಧ್ಯವೆಂಬ ಪ್ರಹಸನ

ಬುಧವಾರ - ಆಗಸ್ಟ್ -08-2012

ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕ, ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆಯ ಬಾರಿಗೆ ಹೊಸ ಸರಕಾರ ಕಂಡು ಸುಭದ್ರವಾಗಿದೆ. ‘ಸಹಕಾರ’ ತತ್ವದಲ್ಲಿ ಬಲವಾದ ನಂಬಿಕೆಯಿಟ್ಟಂತೆ ತೋರುವ ಸರಕಾರವು ಅಧಿಕಾರವನ್ನು ಕೈಯಿಂದ ಕೈಗೆ ಬದಲಿಸಿಕೊಳ್ಳುತ್ತ, ಸರ್ವರನ್ನೂ ತೃಪ್ತಿಪಡಿಸುವುದರಲ್ಲೇ ತೊಡಗಿದೆ. ಜನಪರ ಕಾಳಜಿ, ಸಾಮಾಜಿಕ ಬದ್ಧತೆ, ಕನಿಷ್ಠ ಜವಾಬ್ದಾರಿಯಿಲ್ಲದ ಆಡಳಿತವನ್ನೇ ಈ ದಶಕದುದ್ದಕ್ಕೂ ಕಾಣುತ್ತ ಬಂದಿದ್ದೇವೆ.ಬರಹದ ಉದ್ದೇಶ ತಾತ್ವಿಕತೆಯ ತಲೆ ಬುಡವಿಲ್ಲದ ಆಡಳಿತದ ವಿಮರ್ಶೆಯಲ್ಲ. ಈ ಸಲದ ಸರಕಾರ ರಚನೆಯ ನಂತರ ಎದ್ದು ಕಾಣುವ ಒಂದಂಶದ ಕುರಿತು ಚರ್ಚಿಸಲೇಬೇಕೆನಿಸಿ ಅದನ್ನಿಲ್ಲಿ ಮಂಡಿಸಲಾಗಿದೆ. ಮೂರೂವರೆ ಕೋಟಿ ಮಹಿಳೆಯರಿರುವ ಕರ್ನಾಟಕದಲ್ಲಿ ಮಂತ್ರಿ ಸ್ಥಾನಕ್ಕೆ ಏರಲು ಕೇವಲ ಒಬ್ಬ ಮಹಿಳೆಗೆ ಅವಕಾಶ ದೊರೆಯಿತೆ? ಪ್ರಸ್ತುತ ಸರಕಾರ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದ ಅದರ ಕಣ್ಣಿಗೆ ಸಮರ್ಥ ಮಹಿಳಾ ನಾಯಕಿಯರೇ ಕಾಣಿಸುತ್ತಿಲ್ಲವೇ? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮುಂದುವರಿದ ರಾಜ್ಯ, ಸಿಲಿಕಾನ್ ವ್ಯಾಲಿ, ಪಿಂಚಣಿದಾರರ ಸ್ವರ್ಗ, ಅತಿ ಸುರಕ್ಷಿತ ಸಂಪನ್ಮೂಲಭರಿತ ರಾಜ್ಯ ವಗೈರೆ ವಗೈರೆ ಬಿರು ದಾಂಕಿತ ಕರ್ನಾಟಕ ರಾಜ್ಯದ ಮಂತ್ರಿಮಂಡಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರನೆಯ ಒಂದು ಭಾಗ ಮಂತ್ರಿಗಳಿರುವುದು ಹೋಗಲಿ, ಆರನೆಯ ಒಂದು ಭಾಗ ಮಹಿಳೆಯರೂ ಕಾಣದಾಗಿದ್ದಾರೆ.ಇದು ಆಧುನಿಕಗೊಳ್ಳುತ್ತಿರುವ ಕರ್ನಾಟಕಕ್ಕೆ, ಇಲ್ಲಿನ ರಾಜಕಾರಣಕ್ಕೆ ಅವಮಾನಕರ ಸಂಗತಿಯಾಗಿದೆ.

ಮಹಿಳಾ ಮೀಸಲಾತಿ ಜಾರಿಗೆ ಬಂದ ಮೇಲೆ ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಯಲ್ಲಿ ಮಹಿಳಾ ರಾಜಕಾರಣಿಗಳಿದ್ದಾರೆ. ನಮ್ಮ ಜಿಲ್ಲೆ ಉತ್ತರಕನ್ನಡವಂತೂ ಮಹಿಳಾಮಯವಾಗಿದೆ. ರಾಜಕಾರಣಿಗಳಷ್ಟೇ ಅಲ್ಲ, ಆಯಕಟ್ಟಿನ ಜಾಗಗಳಲ್ಲಿರುವ ಅನೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಇಂಥ ಜಿಲ್ಲೆಯಿಂದಲಾಗಲೀ ಅಥವಾ ಇಂಥ ಇತರ ಜಿಲ್ಲೆಗಳಿಂದಾಗಲೀ, ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಏಕೆ ಮಹಿಳೆಯರು ಚುನಾಯಿತರಾಗುವಷ್ಟು ಬೆಳೆಯುತ್ತಿಲ್ಲ? ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೆಂಬ ಭೇದಭಾವವಿಲ್ಲದೇ ಎಲ್ಲ ಪಕ್ಷಗಳೂ ಮಹಿಳಾ ರಾಜಕಾರಣಿಗಳನ್ನು ಬೆಳೆಸಲು ಯಾವ ಕಾರ್ಯಕ್ರಮ ಹಾಕಿಕೊಂಡಿವೆ?

ಸ್ವಂತಿಕೆಯ ಮಾತನಾಡುವ, ಹೋರಾಟದ ಛಲವಿರುವ ಮಹಿಳಾ ಪ್ರತಿನಿಧಿಗಳನ್ನು ಮೂಲೆಗುಂಪು ಮಾಡಿ ‘ಹೌದಪ್ಪ’ಗಳಿಗೇ ಏಕೆ ಮಣೆ ಹಾಕಲಾಗಿದೆ? ಈ ಕಹಿಪ್ರಶ್ನೆಗಳ ಉತ್ತರಗಳು ಗುಟ್ಟಾಗೇನೂ ಉಳಿ ದಿಲ್ಲ. ಈ ತನಕ ನಡೆದು ಬಂದ ದಾರಿಯ ಹೆಜ್ಜೆಗುರುತುಗಳನ್ನೊಮ್ಮೆ ಅವಲೋಕಿಸಿದರೆ ತಾನೇ ಅರಿವಾಗುತ್ತದೆ.

***

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ನೊಬೆಲ್ ಶಾಂತಿಪ್ರಶಸ್ತಿ ವಿಜೇತ ದಕ್ಷಿಣ ಆಫ್ರಿಕಾದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ‘‘ಭಾರತೀಯ ಮಹಿಳೆ ಆಧುನಿಕ ಭಾರತವನ್ನು ಮುನ್ನಡೆಸಿ ಆಳುವವಳಾಗಬೇಕು. 33% ಮೀಸ ಲಾತಿ ಕೊಡಹೊರಟಿರುವ ಭಾರತ ಜಗತ್ತಿಗೇ ದಾರಿದೀಪವಾಗಬೇಕು’’ ಎಂದು ಹೇಳಿದರು. ದಮನಿತ ಸಮುದಾಯಗಳಿಗೆ, ಮಹಿಳೆಯರಿಗೆ ಅಧಿಕಾರದಲ್ಲಿ ಪಾಲು ಕೊಡುವ ಮೀಸಲಾತಿ ವ್ಯವಸ್ಥೆ ವಿಶ್ವಕ್ಕೇ ಮೇಲ್ಪಂಕ್ತಿಯೆಂಬ ಮೆಚ್ಚುಗೆಯ ಮಾತು ಎಲ್ಲೆಡೆಯಿಂದ ಕೇಳಿಬಂದಿತ್ತು. ನಿಜ. ಅದು ಭಾರತೀಯ ಮಹಿಳೆಯ ಕನಸೂ ಹೌದು. ಏಕೆಂದರೆ ಇಂದು ನಿನ್ನೆಯ ಮಾತಲ್ಲ, ಸಾವಿರಾರು ವರ್ಷಗಳಿಂದ ಅವಳು ಆಳಿಸಿಕೊಳ್ಳುವ ವರ್ಗಕ್ಕೆ ತಳ್ಳಲ್ಪಟ್ಟಿದ್ದಾಳೆಯೇ ಹೊರತು ಆಳುವ ಮಹಿಳೆ ಯಾಗಿ ದೇಶ ಮುನ್ನಡೆಸಲಿಲ್ಲ. ರಾಣಿಯರೆಂದರೆ ನಮ್ಮ ನೆನಪು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಝಿಯಾ ಸುಲ್ತಾನಾ, ಚೆನ್ನಭೈರಾದೇವಿ ತನಕ ಹೋಗಿ ಹಾಗೇ ನಿಲ್ಲು ತ್ತದೆ. ಸಹಸ್ರಮಾನ ಹಿಂದೆ ಹೋದರೆ ಅದು ಬರೀ ರಾಜರ ಕಥೆ. ಮಹಿಳಾ ಸಂಕಥನ ದಮನಿ ತರ ಕಥನ.

ಹೀಗಿರುವಾಗ ಸ್ವಾತಂತ್ರ್ಯ ಬಂದು 65 ವರ್ಷಗಳ ತರುವಾಯ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ 33% ಮೀಸಲಾತಿ ಕೊಡುವುದರ ಸಾಧಕ-ಬಾಧಕಗಳ ವಿಷಯ ಬಿಸಿ ಚರ್ಚೆಗೆ ಗ್ರಾಸವಾಯಿತು. ಮಹಿಳಾ ಮೀಸಲಾತಿ ಬೇರೆ ಬೇರೆ ನೆವಗಳ ಅಡೆತಡೆಗಳನ್ನೆದುರಿಸುತ್ತಿದೆ. ಇದೇನೂ ಹೊಸದಲ್ಲ. ಪಂಚಾಯತ್ ರಾಜ್ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಅವಶ್ಯಕತೆ ಎತ್ತಿ ಹಿಡಿದು ಬಲವಂತ ರಾಯ್ ಮೆಹ್ತಾ ಸಮಿತಿ 1957ರಲ್ಲಿ ನೀಡಿದ ವರದಿಯಂದ ಹಿಡಿದು, 1992ರ ಸಂವಿಧಾನದ 73ನೇ ತಿದ್ದುಪಡಿಯು ಪಂಚಾಯತ್‌ರಾಜ್‌ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಿಕೊಡು ವವರೆಗೆ ಮಹಿಳಾ ಮೀಸಲಾತಿ ಹಲವು ಮಜಲು ಗಳನ್ನು ದಾಟಿ ಬಂದಿದೆ.

ಮಹಿಳೆಯ ಬದುಕನ್ನು ಸಹನೀಯಗೊಳಿಸುವ ಕ್ರಮಗಳು ಸಂಘರ್ಷವಿಲ್ಲದೆ ಸಮಾಜದ ಒಪ್ಪಿಗೆ ಪಡೆಯುತ್ತವೆ. ಎಲ್ಲಿ ಆಕೆಯನ್ನು ಬರೀ ಜೈವಿಕ ಮಹಿಳೆಯನ್ನಾಗಿ ನೋಡಲಾಗಿದೆಯೋ, ಎಲ್ಲಿ ಆಕೆ ಫಲಾನುಭವಿ ಮಾತ್ರವೋ (ಉದಾ: ಜನನಿ ಸುರಕ್ಷಾ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್ ಯೋಜನೆಗಳು) ಅಂಥ ಕ್ರಮಗಳು ಸ್ವಾಗತಿಸಲ್ಪಡುತ್ತವೆ. ಆದರೆ ಅವಳನ್ನು ನಾಗರಿಕ ವ್ಯಕ್ತಿಯಾಗಿ ಪರಿಗಣಿಸಿ ಅಧಿಕಾರ ಮರು ಹಂಚಿಕೆಯಾಗಬೇಕಾದಾಗ ವಿವಾದ ಶುರುವಾಗುತ್ತದೆ. ಮೊದಲು ಅಂಬೇಡ್ಕರ್ ಉದ್ದೇಶಿಸಿದ್ದ ಹಿಂದೂ ಕೋಡ್ ಬಿಲ್ ಆಸ್ತಿ ಹಕ್ಕು ಕೊಡುವಂತೆ ಹೇಳಿದಾಗ ಸಾಂಪ್ರದಾಯಿಕ ಹಿಂದೂ ಸಮಾಜದಲ್ಲಿ ವಿವಾದ ಭುಗಿಲೆದ್ದಿತ್ತು.

ಈಗಲೂ ಅಧಿಕಾರ-ಆಸ್ತಿ ಹಂಚಿಕೆಯ ವಿಷಯ ಬಂದರೆ ಆ ಮಸೂದೆ ಸ್ಥಗಿತಗೊಳ್ಳುತ್ತದೆ. ಮಹಿಳಾ ಮೀಸಲಾತಿ ಮಸೂದೆಗೆ ಕಳೆದ 15 ವರ್ಷಗಳಿಂದ ಇದೇ ಆಗುತ್ತಿರುವುದು. ಜೊತೆಗೆ ಆಡಳಿತ ವ್ಯವಸ್ಥೆ ಯಥಾಸ್ಥಿತಿಯನ್ನು ಕಾಯ್ದು ಕೊಂಡು ಹೋಗಲು ಬಯಸುತ್ತದೆಯೇ ಹೊರತು ಬದಲಾಯಿಸಲು ಅಲ್ಲ. ಸಂಘರ್ಷ ವಿಲ್ಲದೆ ಜನರನ್ನು ನಿಯಂತ್ರಿಸುವುದೇ ಅದರ ಮುಖ್ಯ ಗುರಿಯಾಗಿ ಎಂದಿಗೂ ಸುಧಾರಣಾ ನೆಲೆ ಯಲ್ಲಿಯೇ ಯೋಚಿಸುತ್ತದೆ. ಈಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಪ್ರಾತಿನಿಧ್ಯಕ್ಕೆ ಧಕ್ಕೆ ಬರುವುದೆಂದು ಮಹಿಳಾ ಮೀಸಲಾತಿ ಮಸೂದೆ ನನೆಗುದಿಗೆ ಬಿದ್ದಿರುವಾಗ ಈ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳ ಬೇಕಿದೆ.

ಮಹಿಳೆಯ ಆದ್ಯತೆಗಳು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಅವು ಮಾದರಿ ಗ್ರಾಮಗಳಾಗುವ ಸಾಧ್ಯತೆ ಹೆಚ್ಚಿರುವು ದನ್ನು ಅಂಕಿಅಂಶಗಳ ಸಮೇತ ತೋರಿಸಿದರೂ ಪುರುಷ ಮೇಲುಗೈಯ ರಾಜಕೀಯ ವ್ಯವಸ್ಥೆ ಹೆಣ್ಣಿನ ಅಧಿಕಾರ ನಿಭಾಯಿಸುವ ಶಕ್ತಿಯನ್ನು ಅನುಮಾನಿಸುತ್ತಲೇ ಬಂದಿದೆ. ಮೊದಲ ಬಾರಿ ಅಧಿಕಾರ ಸಿಕ್ಕಿದಾಗ ಅದನ್ನು ಬಳಸಿಕೊಳ್ಳುವಲ್ಲಿ ಗೊಂದಲಗೊಳ್ಳಬಹುದು. ಮೊದಲ ಅವಧಿಯಲ್ಲಿ ತನಗೆ ಅರಿವಾಗದ ವಿಷಯಗಳ ಬಗೆಗೆ ಪುರುಷ ಬಂಧುಗಳ ಸಹಾಯ ಪಡೆಯ ಬಹುದು. ಆದರೆ ನಿಶ್ಚಿತ ಅಧಿಕಾರ ಸಿಕ್ಕರೆ ಏನು ಮಾಡಬೇಕೆಂದು ಮಹಿಳಾ ಪ್ರತಿನಿಧಿಗಳು ಸಿದ್ಧರಾಗಿಯೇ ಆಗುತ್ತಾರೆ.

ಮಹಿಳಾ ಪ್ರತಿನಿಧಿಗಳಲ್ಲಿ ಯಶಸ್ವೀ ಸದ ಸ್ಯರು, ರಬ್ಬರ್ ಸ್ಟಾಂಪ್‌ಗಳು, ಭ್ರಷ್ಟರು, ಜವಾಬ್ದಾರಿಯ ಅರಿವೇ ಆಗದವರು ಎಲ್ಲರೂ ನಮ್ಮೆದುರಿಗಿದ್ದಾರೆ. ಪ್ರಮೀಳಾ ರಾಜ್ಯ ರಾಮರಾಜ್ಯವಾದೀತೆಂದೇನೂ ಅಲ್ಲ. ಅವರ ನಡುವೆಯೇ ಅನಕ್ಷರಸ್ಥೆಯಾ ದರೂ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಪಟ್ಟು ಹಿಡಿದು ಕಲ್ಪಿಸಿಕೊಂಡವರಿದ್ದಾರೆ. ವಾದ ಮಾಡಿ ಜಯಿಸಿ ಹೊರಬಂದವರಿ ದ್ದಾರೆ. ಕುರ್ಚಿ ಮೇಲೆ ಕುಳಿತು ಗೊತ್ತೇ ಇಲ್ಲದಿದ್ದರೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು, ನಾಲ್ಕಾರು ಊರು ತಿರುಗಾಡಿ, ಪುಳಕಿತರಾದವರು; ರಾತ್ರಿ ಶಾಲೆಗೆ ಹೋಗಿ ಸಹಿ ಮಾಡಲು ಕಲಿತಿರು ವವರು; ಅಡುಗೆ-ಮನೆಯ ಪರಿಧಿಯಾ ಚೆಯೂ ತನ್ನ ಪ್ರಾಮುಖ್ಯತೆಯಿದೆ ಎಂದು ಮೊದಲ ಬಾರಿ ಅನುಭವಕ್ಕೆ ಬಂದವರು; ಮುಟ್ಟಿಸಿ ಕೊಳ್ಳಲಾರದ ಅನರ್ಹತೆಯೇ ಈಗ ಅಧ್ಯಕ್ಷಗಿರಿಗೆ ಅರ್ಹತೆಯಾಗಿ ಒದಗಿ ಬಂದಿದ್ದಕ್ಕೆ ಅಚ್ಚರಿಪಟ್ಟವರು - ಇಂಥ ನೂರಾರು ವಿಭಿನ್ನ ವಿನೂತನ ಅನುಭವಗಳು ಮಹಿಳೆಯ ಪಾಲಿಗೆ ದೊರಕಿವೆ.

ಸಬಲೀಕರಣದ ದಾರಿಯ ಮೊದಲ ಹೆಜ್ಜೆಯಲ್ಲಿ ಇವೆಲ್ಲ ಪ್ರಮುಖ ವಿಚಾರಗಳೇ. ಇಂಥ ಹೊಸ ಅನುಭವ ಕಥನಗಳು ಮಹಿಳಾ ಭಾವಕೋಶದಲ್ಲಿ ಸೇರಿಹೋಗುತ್ತಿರುವುದು ಖಂಡಿತವಾಗಿಯೂ ಹೊಸ ಬೆಳವಣಿಗೆಯೇ.ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಮೀಸಲಾತಿ ಪ್ರಣೀತ ರಾಜಕೀಯ ಪ್ರವೇಶ ಈ ಎರಡರಿಂದಲೂ ಹಿಂದೆಂದೂ ಕನಸದಿದ್ದ ಜಗತ್ತನ್ನು ಮಹಿಳೆ ಕಾಣತೊಡಗಿದ್ದಾಳೆ. ಅದರಲ್ಲೂ ಗ್ರಾಮೀಣ ಪ್ರದೇಶದ, ಅಷ್ಟೇನೂ ಪರಿಣತ ಕಲಿಕೆಯಿಲ್ಲದವರೂ ಧೈರ್ಯವಾಗಿ ನಿಲ್ಲಬಲ್ಲಷ್ಟು ಆಶಾಭಾವನೆ ಬೆಳೆಸಿಕೊಂಡಿದ್ದಾರೆ. ಬೇಲಿ ಬದಿಯ ಉಳಿದೆಲ್ಲ ಮಾತುಕತೆಗಳ ಜೊತೆಗೆ ರಾಜಕೀಯದ, ಜಾತಿಯ ಗಹನ ಲೆಕ್ಕಾಚಾರಗಳು ಹಳ್ಳಿಯ ಹೆಣ್ಣುಮಕ್ಕಳ ತಲೆಯೇರಿ ಕುಳಿತಿವೆ.

ದರಕು ಗುಡಿಸುತ್ತ, ಕಟ್ಟಿಗೆ ಕಡಿಯುತ್ತ, ಹೊಲಗದ್ದೆ-ಮನೆಗೆಲಸ ಮಾಡುತ್ತ, ನೀರು ಹೊರುತ್ತ, ನಾಲ್ಕು ಕಾಸು ದುಡಿದು ಗಂಡ ಮಕ್ಕಳ ಬಳಿ ಪಿರಿಪಿರಿಗೈದು ಹೇಗೋ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ಮುಗುದೆಯರು ತಮ್ಮ ಸಹಿ, ಅದಕ್ಕಿರುವ ಪ್ರಾಮುಖ್ಯತೆ, ದುಡ್ಡು ಗಳಿಸಲಿರುವ ಎಷ್ಟೆಷ್ಟೋ ಹಾದಿಗಳು ಇವೆಲ್ಲವುಗಳಿಗೆ ಬೆರಗಿನಿಂದ ತೆರೆದುಕೊಳ್ಳತೊಡಗಿದ್ದಾರೆ. ನಮ್ಮೂರ ಪಂಚಾಯತ್ ಅಧ್ಯಕ್ಷೆಯಾದ ಕೃಷಿ ಕಾರ್ಮಿಕಳಾಗಿದ್ದ ಮಾಸ್ತಿ ಹೇಳಿದಂತೆ, ‘‘ನಾ ಅಲ್ಲೀವರ್ಗೂ ಕುರ್ಚಿ ಮ್ಯಾಲೆ ಕುಂತೇ ಇರ್ಲಿಲ್ಲ.

ಕಲ್ಲಾದ್ರೂ ಇರ್ಲಿ, ಕೆಸರಾದ್ರೂ ಇರ್ಲಿ, ನಮ್ದು ಯಾವತ್ತೂ ನೆಲನೇ. ಈಗ ಎಲ್ಲ ಬದಲಾಗದೆ. ಎಲ್ರ ಜತೆ ಕುರ್ಚಿ ಮ್ಯಾಲೆ ಕುಂತಾಯ್ತು. ಹುಬ್ಳಿ, ಕಾರವಾರ, ಬೆಂಗಳೂರು ಅಂತ ಊರೂರು ತಿರ್ಗಿ ಸೋನ್ಯಾ ಗಾಂಧಿನೂ ನೋಡಾಯ್ತು. ನಿಜಕೂ ಎಲ್ಲ ಸಪ್ನ ಅನುಸ್‌ಬಿಟ್ಟಿದೆ.’’ ಹೌದು. ಗ್ರಾಮೀಣ ಮಹಿಳೆಯರಿಗೆ ಸಿಕ್ಕ ಅಧಿಕಾರ ಅವರು ಕನಸಿನಲ್ಲೂ ಊಹಿಸಲಾಗದ ಸವಲತ್ತು. ಅದೊಂದು ಪವಾಡವೇ. ಆದರೆ ಏನೇನು ತಮಗಾಗಿ ಲಭ್ಯವಿದೆ ಎಂಬುದು ತಿಳಿಯತೊಡಗಿದಷ್ಟೇ ಸಲೀಸಾಗಿ ಏನು ಮಾಡಬೇಕಿದೆ ಎನ್ನುವ ಕರ್ತವ್ಯಪ್ರಜ್ಞೆಯೂ ಅವರಲ್ಲಿ ಬಂದಿದೆಯೆ? ಯಾವುದು ಮೊದಲು? ಅಧಿಕಾರ ಅಥವಾ ಅಧಿಕಾರದ ಅರಿವು? ಹಕ್ಕುಪ್ರಜ್ಞೆ ಅಥವಾ ಕರ್ತವ್ಯದ ಅರಿವು?

ಈಗ ಅವಶ್ಯವಿರುವುದು ಗುಣಮಟ್ಟದ ಹಾಗೂ ಜವಾಬ್ದಾರಿಯುತ ಮಹಿಳಾ ನಾಯಕತ್ವ. ಮೀಸಲಾತಿಯೆಂಬ ಉಪಕರಣ ಬಳಸಿಕೊಂಡು ಮಹಿಳಾ ನಾಯಕತ್ವ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಒಟ್ಟೊಟ್ಟಿಗೆ ಕೈ ಜೋಡಿಸಬೇಕಾಗಿದೆ. ಇಲ್ಲದಿದ್ದರೆ 33% ಮಹಿಳಾ ಮೀಸಲಾತಿ ಕೇವಲ ರಬ್ಬರ್ ಸ್ಟಾಂಪ್‌ಗಳನ್ನಷ್ಟೇ ಉತ್ಪಾದಿಸಿ, ರಾಜಕೀಯ ಹಿನ್ನೆಲೆ-ಪ್ರಭಾವವಿರುವವರ ಹೊರತು ಮತ್ಯಾವ ಮಹಿಳೆಯೂ ಮಂತ್ರಿ ಸ್ಥಾನಕ್ಕೆ ಅರ್ಹಳಾಗಿ ಕಾಣದೇ ಮಹಿಳಾ ಪ್ರಾತಿನಿಧ್ಯ ಎನ್ನುವುದೊಂದು ಪ್ರಹಸನವಾದೀತು.

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್