ಅಂಕಣ - ಫೋಕಸ್‌

mail-img print-img

ಹೆಚ್ಚುತ್ತಿರುವ ಕಗ್ಗತ್ತಲನ್ನು ನಂದುತ್ತಿರುವ ಮೀಸಲಾತಿ ಓಡಿಸಬಲ್ಲದೇ?

ಶುಕ್ರವಾರ - ಆಗಸ್ಟ್ -10-2012

ಒಂದು ದೇಶ ಎಷ್ಟು ಪ್ರಗತಿ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬೇಕೆಂದರೆ ಆ ದೇಶದ ಮಹಿಳೆಯರ ಪರಿಸ್ಥಿತಿಯನ್ನು ನೋಡಿ ದರೆ ಸಾಕಾಗುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಾತ್ರ ಅಷ್ಟು ಸಾಲುವುದಿಲ್ಲ. ಅದರ ಜೊತೆಗೆ ಮತ್ತು ಅಷ್ಟೇ ಪ್ರಮುಖವಾಗಿ ಈ ದೇಶದ ದಲಿತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಈ ದೇಶ ಎಷ್ಟು ಪ್ರಗತಿ ಸಾಧಿಸಿದೆ ಮತ್ತು ಎಷ್ಟು ಪ್ರಜಾತಾಂತ್ರಿಕ ವಾಗಿದೆ ಎಂಬುದೂ ಅರ್ಥವಾಗಿಬಿಡುತ್ತದೆ. ಅದೇ ರೀತಿ ಈ ನಾಡಿನಲ್ಲಿ ಅತ್ಯಂತ ಆಧುನಿಕ ರೆಂದು, ಪ್ರಗತಿಪರರೆಂದೂ ಕೊಚ್ಚಿಕೊಳ್ಳುವವರು ಎಷ್ಟರ ಮಟ್ಟಿಗೆ ಪ್ರಗತಿಪರರರು ಮತ್ತು ಆಧುನಿಕರು ಎಂಬುದೂ ಸಹ ಜಾತಿ ವ್ಯವಸ್ಥೆಯ ಬಗ್ಗೆ ಅದರಲ್ಲೂ ಮೀಸಲಾತಿಯ ಬಗ್ಗೆ ಅವರ ನಿಲುವೇನೆಂಬುದರಲ್ಲಿ ಸ್ಪಷ್ಟವಾಗಿಬಿಡುತ್ತದೆ. 1927ರಲ್ಲಿ ಚೌದಾರ್ ಕೆರೆ. 2007ರಲ್ಲಿ ಬಿಜಾಪುರದ ಕಡಕೋಳದ ಕೆರೆ! ಈ ನಡುವಿನ 80 ವರ್ಷ ದಲಿತರ ಸಾಮಾಜಿಕ ಬದುಕಿನಲ್ಲಿ ಯಾವ ಗಮನಾರ್ಹ ಬದಲಾವಣೆಯನ್ನು ತಂದಿದೆ? ಈ ಅವಧಿಯಲ್ಲಿ ಗ್ರಾಮಗಳ ಮೇಲ್‌ರಚನೆ ಬದಲಾಗಿರಬಹುದು. ಊರಿನ ರಸ್ತೆಗಳು ಅಭಿವೃದ್ಧಿಯಾಗಿರಬಹುದು. ಆದರೆ ಕೇರಿಗಳು? ಕೇರಿಯೊಳಗಿನ ಬದುಕುಗಳು? ದಲಿತರನ್ನು ಬಹಿಷ್ಕರಿಸುವ ಮತ್ತು ದಮನ ಮಾಡುವ ತತ್‌ಕ್ಷಣದ ಶಕ್ತಿಗಳು ಬದಲಾಗಿರ ಬಹುದು. ಆದರೆ ಬಹಿಷ್ಕೃತ ಭಾರತದ ಬದುಕು ಬದಲಾಗಿದೆಯೇ?

ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ(NCRB)ದ ಪ್ರಕಾರ ಪ್ರತಿದಿನ ಮೂರು ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಇಬ್ಬರು ದಲಿತರನ್ನು ಕೊಲ್ಲಲಾಗುತ್ತದೆ. ದಲಿತರ ಎರಡು ಮನೆಗಳಿಗೆ ಬೆಂಕಿ ಹಚ್ಚಲಾ ಗುತ್ತದೆ. ಈ ಸೂಪರ್ ಪವರ್‌ನ ಬೆಳಕು ಇದೇ ಭಾರತದ ವಾಸ್ತವವಾದ ಬೆಲ್ಚಿ, ಪಿಪ್ರಾ, ಕೀಲ್ವೇನ್ಮಣಿ, ಕರಂಚೇಡು, ಚುಂಡೂರು, ಬೆಂಡಿಗೇರಿ-ತತ್ತೂರು, ಜಝ್ಜೇರಾ, ಕಂಬಾಲಪಲ್ಲಿ, ಖೈರ್ಲಾಂಜಿ ಗಳನ್ನು ಕಣ್ಣಿಗೂ ಕಾಣದಂತೆ ಮಾಡುತ್ತಿದೆ. ಏಕೆಂದರೆ ಸ್ವಾತಂತ್ರ್ಯಾ ನಂತರದ ಕಳೆದ 63 ವರ್ಷಗಳಲ್ಲಿ ಶೈನಿಂಗ್ ಇಂಡಿಯಾದ ಬೆಳಕು ಕಂಬಾಲಪಲ್ಲಿಗಳ ಕತ್ತಲನ್ನು ಕಳೆಯುವ ಬದಲು ಹೆಚ್ಚಿಸುತ್ತಿದೆ.

ಇದು ಕತ್ತಲಿನ ವಿರುದ್ಧ ಬೆಳಕಿನ ಅಭಿವೃದ್ಧಿಯ ಸಂಚೆಂದರೂ ತಪ್ಪಾಗಲಾರದು!ಭಾರತೀಯ ಸಮಾಜ ಐತಿಹಾಸಿಕ ವಾಗಿ ವಿಕಸನಗೊಂಡಿದ್ದೇ ಮನುಸ್ಮೃತಿಯ ಆಧಾರದ ಮೇಲೆ. ದಲಿತರನ್ನು, ಶೂದ್ರರ ರನ್ನು ಮತ್ತು ಮಹಿಳೆಯರನ್ನು ಬ್ರಾಹ್ಮಣ, ಕ್ಷತ್ರಿಯ ವರ್ಣಗಳ ದಾಸರನ್ನಾಗಿ ಮಾಡಿದ (ಅ)ಧಾರ್ಮಿಕ, ಸಾಮಾಜಿಕ ಸೂತ್ರಗಳ ಆಧಾರದಲ್ಲಿ. ಆದ್ದರಿಂದಲೇ ಪ್ರಪಂಚದ ಬೇರೆ ಯಾವ ದೇಶಗಳಲ್ಲೂ ಇಲ್ಲದಂಥ ಶಾಶ್ವತ ಸಾಮಾಜಿಕ ಶ್ರೇಣೀಕರಣದ ಜಾತಿ ಪದ್ಧತಿ ಇಲ್ಲಿ ಹುಟ್ಟಿಕೊಂಡಿತು. ಅದರ ಮೌಲ್ಯವೇ ಅಸಮಾ ನತೆ, ದಮನ, ದಾಸ್ಯ, ಶೋಷಣೆ. ಆದರೆ ಸಹಸ್ರಾರು ವರ್ಷಗಳಿಂದ ಇದರ ವಿರುದ್ಧ ಸತತ ಸಂಘರ್ಷವೂ ನಡೆದುಕೊಂಡು ಬಂದಿದೆ. ಬುದ್ಧ, ಬಸವರು ಈ ಸಂಘರ್ಷದಲ್ಲಿ ಎದ್ದು ಕಾಣುವ ದೊಡ್ಡ ಹೆಸರುಗಳು. ಆದರೆ ಅವರು ನಡೆಸಿದ ಸಂಘರ್ಷ ಇಡೀ ಸಮಾಜದಲ್ಲಿ ಶಾಶ್ವತ ಬದಲಾವಣೆಗಳನ್ನು ತರದೆ ಒಂದೋ ದುರ್ಬಲಗೊಂಡವು ಅಥವಾ ಅದೇ ಜಾತಿ ಚೌಕಟ್ಟಿನಲ್ಲಿ ತಾವೇ ಸ್ಥಾವರವೂ ಆಗಿಬಿಟ್ಟವು.

ಆದರೆ ಅಂಬೇಡ್ಕರ್‌ರವರು ಈ ಜಾತಿ ವ್ಯವಸ್ಥೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನೆಲೆಗಳ ವಿರುದ್ಧ ಸಂಘರ್ಷ ನಡೆಸುವ ಹೊತ್ತಿಗೆ ಆಧುನಿಕ ಪ್ರಜಾತಂತ್ರದ ಕಾಲಮಾನ ಉದಯವಾಗಿತ್ತು. ವಿಶ್ವದೆಲ್ಲೆಡೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳು ಒಪ್ಪಿತ ನಾಗರಿಕ ಮೌಲ್ಯವಾಗುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ರವರು ಜಾತಿ ವ್ಯವಸ್ಥೆಯ ವಿನಾಶಕ್ಕಾಗಿ ನಡೆಸಿದ ಚಳವಳಿಯನ್ನು ಭಾರತದ ಜಾತಿಗ್ರಸ್ತ ಸಾಂಪ್ರದಾ ಯಿಕ ಶಕ್ತಿಗಳು ಮೊದಲಿನಷ್ಟು ಬಹಿರಂಗವಾಗಿ ನಿರಾಕರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವರು ಹೊಸ ತಂತ್ರವನ್ನೇ ಅನುಸರಿಸಿದರು.

ಐತಿಹಾಸಿಕ ಅನಿವಾರ್ಯದ ಕಾರಣಕ್ಕಾಗಿ ಜಾತಿ ವಿನಾಶದ ಕಾರ್ಯಕ್ರಮದ ಜೊತೆ ಆದಷ್ಟೂ ಕನಿಷ್ಟ ರಾಜಿ ಮಾಡಿಕೊಂಡು ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಅವರ ಪ್ರತಿ ತಂತ್ರವಾಗಿತ್ತು. ಹೀಗಾಗಿ ಜಾತಿ ವಿನಾಶಕ್ಕಾಗಿ ಅಂಬೇಡ್ಕರ್‌ರವರೂ ಹಗಲಿರುಳೂ ಹೋರಾಡಿ ದರೂ ಸಂವಿಧಾನದಲ್ಲಿ ಕೇವಲ ಅಸ್ಪಶ್ಯತೆಯನ್ನು ಮಾತ್ರ ನಿಷೇಧಿಸಲಾಯಿತು. ಅಂಬೇಡ್ಕರ್‌ರವರು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಹೋರಾಡಿದರೆ ರಾಜಕೀಯ ಸಮಾನತೆಯನ್ನು ಮಾತ್ರ ಕಾನೂನು ಬದ್ಧವಾಗಿ ಖಾತರಿಗೊಳಿಸಿ ಉಳಿದ ಸಮಾನತೆಗಳನ್ನು ಆಶಯಾತ್ಮಕ ಹೇಳಿಕೆಗಳನ್ನಾಗಿ ಮಾಡಿ ನಿರ್ದೇಶನಾ ತತ್ವಗಳಡಿ ಸೇರಿಸಿಬಿಡಲಾಯಿತು. ಅದರ ಭಾವಾಗಿಯೇ ದಲಿತರಿಗೆ ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಸಂವಿಧಾನದಲ್ಲಿ ಶರತ್ತು ಬದ್ಧವಾಗಿ ಸೇರಿಸಲಾಯಿತು. ನಂತರ ಇತರ ಹಿಂದುಳಿದ ವರ್ಗಗಳಿಗೂ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯ ಏರ್ಪಾಡನ್ನೂ ಮಾಡಲಾಯಿತು.

ಹೀಗೆ ವಂಚಿತರಿಗೆ ಇದ್ದಿದ್ದರಲ್ಲಿ ಅವಕಾಶ ಕಲ್ಪಿಸಿಕೊಡಲು ರೂಪಗೊಂಡ ಮೀಸಲಾತಿ ನೀತಿ ಒಂದು ತೀವ್ರ ಕ್ರಾಂತಿಕಾರಿ ಸ್ವರೂಪದ ಕ್ರಮವೇನಲ್ಲ. ಆದರೂ ಅದು ಒಂದು ಅತ್ಯಂತ ಅಪ್ರಜಾತಾಂತ್ರಿಕವಾದ ಮತ್ತು ಅಸಮಾನತೆಯನ್ನೇ ಉಸಿರಾಡುತ್ತಿದ್ದ ಸಮಾಜವನ್ನು ನಿಧಾನವಾಗಿ ಪ್ರಜಾತಾಂತ್ರಿಕಗೊಳಿಸುವ ಒಂದು ಅತ್ಯಂತ ಉಪಯುಕ್ತ ಕ್ರಮವಾಗಿತ್ತು. ಆದರೆ ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ದಂತಹ ಮೌಲ್ಯಗಳಿಗೆ ಪರಕೀಯವಾಗಿದ್ದ ಭಾರತೀಯ ಸಾಂಪ್ರದಾಯಿಕ ಸಮಾಜ ಈ ಮಂದಗಾಮಿ ಕ್ರಮಗಳನ್ನು ಸಹ ಉದ್ದಕ್ಕೂ ಹಲವು ರೀತಿಗಳಲ್ಲಿ ವಿರೋಧಿಸುತ್ತಲೇ ಬಂದಿದೆ.

ಹಲವಾರು ಕಡೆಗಳಲ್ಲಿ ಮೀಸಲಾತಿ ವಿರುದ್ಧ ದಂಗೆ ಗಳನ್ನು ಸಂಘಟಿಸಿ ದಲಿತರ ಕಗ್ಗೊಲೆಗಳನ್ನೂ ನಡೆಸಿದೆ. ಇದಕ್ಕೆ, ಎಂಬುದು ತಮ್ಮ ಅವಕಾಶ ಗಳನ್ನು ಕಿತ್ತುಕೊಳ್ಳುತ್ತದೆ ಎಂಬ ತಪ್ಪು ತಿಳುವಳಿ ಕೆಯ ಜೊತೆ ಜೊತೆಗೆ ಅದು ತಾವು ಕೀಳು ಎಂದು ಇದುವರೆಗೆ ಭಾವಿಸಿದ್ದ ಜನರನ್ನು ತಮ್ಮ ಸರಿ ಸಮಾನರನ್ನಾಗಿ ಮಾಡಿಬಿಡುತ್ತದೆ ಎಂಬ ಮೃಗೀಯ ಹಾಗೂ ಮೇಲ್ಜಾತಿ ದುರಭಿಮಾನಿ ಆಕ್ರೋಶವೂ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.ಆದ್ದರಿಂದಲೇ ಅವರು ಮೀಸಲಾತಿಯನ್ನು ವಿರೋಧಿಸಲು ಮುಂದಿಡುವ ಅತ್ಯಂತ ದೊಡ್ಡ ಕುತರ್ಕವೆಂದರೆ ಮೀಸಲಾತಿಯು ಅನರ್ಹರಿಗೆ, ಪ್ರತಿಭೆ ಇಲ್ಲದವರಿಗೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ ಎಂಬುದು.

ಇದು ಎಷ್ಟು ವಿಷಪೂರಿತವಾದ ತರ್ಕವೆಂದರೆ ಮೀಸಲಾತಿಯನ್ನು ಬೆಂಬಲಿಸುವ ಹಲವು ಪ್ರಗತಿಪರರು ಸಹ ತಮಗೇ ಗೊತ್ತಿಲ್ಲದಂತೆ ಈ ತರ್ಕವನ್ನು ಒಪ್ಪಿಕೊಂಡು ಬಿಟ್ಟಿರುತ್ತಾರೆ. ಆದರೆ ಮೀಸಲಾತಿಯ ಹಿಂದಿನ ತರ್ಕ ಅನರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿಕೊಡುವುದಲ್ಲ. ಬದಲಿಗೆ ಅರ್ಹರಾದ ಅಭ್ಯರ್ಥಿಗಳನ್ನು ಜಾತಿ ಪೂರ್ವಗ್ರಹ ಗಳಿಂದಾಗಿ ಅವಕಾಶ ನಿರಾಕರಿಸುವ ಸಮಾಜದ ಅನರ್ಹತೆಯನ್ನು ತಿದ್ದುಪಡಿ ಮಾಡಲು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಐತಿಹಾಸಿಕವಾದ ಮತ್ತು ವರ್ತಮಾನದ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿಯೇ ದಲಿತರು ಸೌಲಭ್ಯ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಬಂದ ಮೇಲೂ ಸಹ ನಮ್ಮ ಸಮಾಜದಲ್ಲಿ ಜಾತಿ ಶ್ರೇಣೀಕರಣ ಮುಂದು ವರೆದಿದ್ದು ಸಮಾ ಜವೇ ತಾನಾಗಿ ಮುಂದೆ ಬಂದು ಸೌಲಭ್ಯ ವಂಚಿತರಿಗೆ ಸೌಲಭ್ಯವನ್ನು ಕೊಡಮಾಡು ವುದಿಲ್ಲ. ಹೀಗಾಗಿ ಪ್ರಭುತ್ವ ಸಮಾಜದ ಈ ವಿಕೃತಿಯನ್ನು ಸರಿ ಮಾಡು ಶಾಸನಾತ್ಮಕವಾಗಿ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಮೀಸಲಾತಿ ಅದರಲ್ಲಿ ಒಂದು ಸಣ್ಣ ಉಪಕ್ರಮ ಅಷ್ಟೆ. ಇನ್ನು ಪ್ರತಿಭೆ ಇದ್ದರೆ ಸಾಕು ನಾವು ಜಾತಿ ಯನ್ನು ಪರಿಗಣಿಸುವುದೇ ಇಲ್ಲವೆಂಬ ಭಾರತದ ಪ್ರಮುಖವಾಗಿ ಮೇಲ್ಜಾತಿಯ ಜನರೇ ಇರುವ ಖಾಸಗಿ ಉದ್ಯಮಪತಿಗಳ ವಾದವೂ ಎಷ್ಟು ಸುಳ್ಳೆಂಬುದನ್ನು ವಿಶ್ವವಿದ್ಯಾಲಯ ಧನ ಅಯೋಗ (ಯುಜಿಸಿ)ದ ಅಧ್ಯಕ್ಷರಾಗಿದ್ದ ಪ್ರೊ. ಸುಖದೇವ್ ಥೋರಟ್ ಸಾಬೀತು ಪಡಿಸಿದ್ದಾರೆ.

2005ರಲ್ಲಿ ಅವರು ದೇಶದ 500 ಉದ್ಯಮ ಪತಿಗಳಿಗೆ ಸಮಾನ ವಿದ್ಯಾರ್ಹತೆ ಹೊಂದಿದ್ದ ಒಬ್ಬೊಬ್ಬ ದಲಿತ, ಹಿಂದುಳಿದ ಜಾತಿ, ಮುಸ್ಲಿಮ್ ಮತ್ತು ಬ್ರಾಹ್ಮಣ ಅಭ್ಯರ್ಥಿಗಳ ಹುಸಿ ಅರ್ಜಿ ಯನ್ನು ಕಳಿಸಿದ್ದರು. ಪ್ರತಿಭೆಯೇ ಮುಖ್ಯ ವಾಗಿದ್ದರೆ ಜಾತಿ ಭೇದವಿಲ್ಲದೆ ಎಲ್ಲರಿಗೂ ಸಂದರ್ಶನದ ಕರೆ ಬರಬೇಕಿತ್ತು. ಆದರೆ ಆದದ್ದೇನು?ಬ್ರಾಹ್ಮಣ ಹೆಸರಿನ ಅಭ್ಯರ್ಥಿಗಳಿಗೆ ಎಲ್ಲಾ ಉದ್ದಿಮೆಪತಿಗಳಿಂದಲೂ ಕರೆ ಬಂದಿದ್ದರೆ ದಲಿತರಿಗೆ ಶೇ.30ರಷ್ಟು ಕರೆಗಳು ಮತ್ತು ಮುಸ್ಲಿಮ್ ಅಭ್ಯರ್ಥಿಗಳಿಗೆ ಕೇವಲ ಶೇ.10ರಷ್ಟು ಕರೆಗಳು ಬಂದಿದ್ದವು. ಇದು ಪ್ರತಿಭೆ ಮತ್ತು ಅರ್ಹತೆ ಇದ್ದರೂ ಜಾತಿಪೂರ್ವಗ್ರಹವು ಹೇಗೆ ದಲಿತರನ್ನು ಮತ್ತು ಇತರ ಹಿಂದುಳಿದವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತದೆ ಎಂಬುದಕ್ಕೆ ಒಂದು ಅಕಾಡೆಮಿಕ್ ಸಾಕ್ಷ್ಯ.

ಹೀಗಾಗಿ ಇಲ್ಲಿ ಕೆಲಸ ಮಾಡುವುದು ಅನರ್ಹರಿಗೆ ಅವಕಾಶ ಸಿಕ್ಕಿಬಿಡುತ್ತದೆ ಎಂಬುದಕ್ಕಿಂತ ತಮಗಿಂತ ಕೀಳುಜಾತಿಯವರು ತಮಗೆ ಸರಿಸಮನಾಗಿ ಬಿಡುತ್ತಾರೆಂಬ ಮೇಲ್ಜಾತಿಯವರ ಅಸಹನೆ, ದುರಭಿಮಾನ.ಆರ್ಥಿಕತೆಯಲ್ಲಿ ಬಂದಿರುವ ಮುಕ್ತ ಮಾರುಕಟ್ಟೆ ನೀತಿಗಳು ಮತ್ತು ಸಮಾಜದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಮಾನ್ಯತೆ ಮತ್ತು ಪ್ರಾಬಲ್ಯವನ್ನು ಪಡೆದುಕೊಂಡಿರುವ ಸಮಾನತೆ ವಿರೋಧಿ, ಜೀವ ವಿರೋಧಿ ಹಿಂದುತ್ವವಾದ ಇವೆರಡೂ ಸಹ ದಲಿತ ಬದುಕನ್ನು ಮತ್ತಷ್ಟು ದಾರುಣಗೊಳಿಸುತ್ತಿವೆ. ಈವರೆಗೆ ದಲಿತರ ಮತ್ತು ಪ್ರಜಾತಾಂತ್ರಿಕ ಶಕ್ತಿಗಳು ಹೋರಾಟದಿಂದ ಪಡೆದುಕೊಂಡ ಎಲ್ಲಾ ಹಕ್ಕುಗಳನ್ನು ಹೊರಗಿಂದ ಮತ್ತು ಒಳಗಿನಿಂದ ಭ್ರಷ್ಟಗೊಳಿಸುತ್ತಿದೆ. ಹೀಗಾಗಿ ಮೀಸಲಾತಿ ಮತ್ತು ದಲಿತ ವಿಮೋಚನೆಯ ಬಗ್ಗೆ ಚರ್ಚೆ ಮಾಡುವಾಗ ದಲಿತ ಪ್ರಶ್ನೆ ಪ್ರಧಾನವಾಗಿ ಎರಡು ವಿಮೋಚನೆಯನ್ನು ಗುರಿಯಾಗಿರಿಸಿಕೊಂಡಿರುತ್ತದೆ.

ಹಸಿವಿನಿಂದ ವಿಮೋಚನೆ ಮತ್ತು ಸಾಮಾಜಿಕ ಅಪಮಾನದಿಂದ ವಿಮೋಚನೆ. ಇವೆರಡು ಸಾಧ್ಯವಾಗುವುದು ಆರ್ಥಿಕತೆಯಲ್ಲಿ ಮತ್ತು ಸಮಾಜದಲ್ಲಿ ಸಮಾನತೆ ನೆಲೆಯೂರಿದಾಗ ಮಾತ್ರ. ಆರ್ಥಿಕತೆಯಲ್ಲಿ ಸಮಾನತೆಯನ್ನು ನಿರಾಕರಿಸುವ ಶಕ್ತಿ ಬಂಡವಾಳವಾದ ಮತ್ತು ಸಮಾಜದಲ್ಲಿ ಸಮಾನತೆಯನ್ನು ನಿರಾಕರಿಸುವ ಶಕ್ತಿ ಬ್ರಾಹ್ಮಣವಾದ. ಹೀಗಾಗಿಯೇ ಅಂಬೇಡ್ಕರ್‌ರವರು ದಲಿತರಿಗೆ ಇಬ್ಬರು ಶತ್ರುಗಳು. ಬಂಡವಾಳವಾದ ಮತ್ತು ಬ್ರಾಹ್ಮಣವಾದ ಎಂದು ಸರಿಯಾಗಿ ಬೊಟ್ಟುಮಾಡಿ ತೋರಿಸಿದ್ದರು. ಈ ಎರಡೂ ಶತ್ರುಗಳನ್ನು ಎದುರಿಸಲು ಸಂವಿಧಾನದಲ್ಲಿ ಮೀಸಲಾತಿಯನ್ನೂ ಒಳಗೊಂಡಂತೆ ಹಲವಾರು ಕ್ರಮಗಳನ್ನು ಪ್ರತಿಪಾದಿಸಿದ್ದರು.

ಆದರೆ 1991ರ ನಂತರ ಜಾರಿಗೆ ಬಂದಂತೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನೀತಿಗಳು ಮುಕ್ತ ಮಾರುಕಟ್ಟೆಯ ಹೆಸರಲ್ಲಿ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಉದ್ಯಮಪತಿಗಳ ಪರವಾಗಿ ಬದಲಾಯಿಸಿದೆ. ಇದಲ್ಲದೆ ಸರಕಾರ ಎಲ್ಲಾ ಬಗೆಯ ವೆಲ್‌ಫೇರ್ ಚಟುವಟಿಕೆಗಳಿಂದ, ಅಂದರೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಇನ್ನಿತ್ಯಾದಿ ವಲಯಗಳಿಂದ ಹಿಂದೆ ಸರಿಯುತ್ತಿದೆ. ಅಲ್ಲೆಲ್ಲಾ ಲಾಭಕೋರ ಮಾರುಕಟ್ಟೆ ಶಕ್ತಿಗಳು ಆವರಿಸಿಕೊಳ್ಳುತ್ತಿವೆ. ಈ ಹೊಸ ಆರ್ಥಿಕತೆಯು ಯಾವುದೇ ಸಾಮಾಜಿಕ ಜವಾಬ್ದಾರಿಯಿಂದ ಸಂಪೂರ್ಣವಾಗಿ ಮುಕ್ತವಾಗಿರುವುದರಿಂದ ಅಲ್ಲಿ ಯಾವುದೇ ಸಾಮಾಜಿಕ ನ್ಯಾಯದ ಕ್ರಮಗಳನ್ನು ಅರಸುವುದೇ ತಪ್ಪಾಗುತ್ತದೆ ಆದ್ದರಿಂದಲೇ ಅವು ಆಧುನಿಕ ಅಗ್ರಹಾರಗಳಾಗಿಯೇ ಹೊಸ ವರ್ಣಾಶ್ರಮವನ್ನು ಹುಟ್ಟುಹಾಕುತ್ತಿವೆ.

ಅದೇ ರೀತಿ ವೆಲ್‌ಫೇರ್ ಸ್ಟೇಟ್‌ನ ಪರಿಕಲ್ಪನೆಯ ಜೊತೆಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಬಹುಮತದ ಸಮ್ಮತಿ ಪಡೆದುಕೊಂಡಿದ್ದ ಮೌಲ್ಯ ಸಾಮಾಜಿಕ ನ್ಯಾಯ. ಆದರೆ 1991ರ ನಂತರದಲ್ಲಿ ಈ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಹ ಮಹತ್ತರ ಬದಲಾವಣೆ ಆಗಿದೆ. ಈ ಹಿಂದೆ ಯಾವುದನ್ನು ಅನ್ಯಾಯವೆಂದು ಪರಿಗಣಿಸಲಾಗುತ್ತಿತ್ತೋ ಅವೆಲ್ಲವನ್ನು ನ್ಯಾಯವೆಂದು ಬಿತ್ತರಿಸುವ ಹಿಂದೂತ್ವವಾದ ಈಗ ಇತರ ಯಾವುದೇ ಪ್ರಗತಿಪರವಾದಗಳಿಗಿಂತಲೂ ಪ್ರಬಲವಾಗಿದೆ. ಈ ಹಿಂದುತ್ವವಾದದ ಸಾರಾಂಶವೇ ಬ್ರಾಹ್ಮಣವಾದ. ಅಂಬೇಡ್ಕರ್‌ರವರು ವಿವರಿಸಿದ ಹಾಗೆ ಬ್ರಾಹ್ಮಣವಾದ ಶೊಷಣೆಯನ್ನು ಮತ್ತು ದಮನವನ್ನು ಸಹಜವೆಂದು ಒಪ್ಪಿಸುವ ಮತ್ತು ಅದರ ವಿರುದ್ಧ ಬಂಡಾಯವನ್ನು ಅಮಾನ್ಯಗೊಳಿಸುವ ವಾದವಾಗಿದೆ.

ಆದ್ದರಿಂದಲೇ ದಲಿತರ ಮೇಲಾಗಲೀ ಇತರ ಶೋಷಿತ ವರ್ಗಗಳ ಮೇಲಾಗಲೀ ದಮನ ನಡೆಯುತ್ತಿದ್ದರೂ ಈ ಹಿಂದೆ ಕಂಡುಬರುತ್ತಿದ್ದ ಪ್ರತಿರೋಧ ಈಗ ಸಂಘಟಿತವಾಗಿ ತೋರಿಬರುತ್ತಿಲ್ಲ. ಒಂದು ನ್ಯಾಯಪ್ರಜ್ಞೆ ಇಲ್ಲದ ವಾತಾವರಣದಲ್ಲಿ ಯಾವುದೇ ದುರ್ಬಲ ಮತ್ತು ದಮನಿತ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಅಷ್ಟು ಸುಲಭವಲ್ಲ. ಇದಲ್ಲದೇ ಕಳೆದ 30-40 ವರ್ಷಗಳಲ್ಲಿ ಭೂ ಸುಧಾರಣೆ, ಹಸಿರು ಕ್ರಾಂತಿ, ಪಂಚಾಯತ್ ರಾಜ್ ವ್ಯವಸ್ಥೆಗಳು ಭಾರತದ ಗ್ರಾಮೀಣ ಪ್ರದೇಶದಲ್ಲಿ ಹೊಸ ಜಾತಿ ಸಮೀಕರಣವನ್ನು ಹುಟ್ಟುಹಾಕಿದೆ. 40 ವರ್ಷಗಳ ಹಿಂದೆ ಶೂದ್ರ-ದಲಿತ ಪದಗಳು ಒಂದೇ ಅರ್ಥವನ್ನು ಕೊಡುತ್ತಿದ್ದವು. ಆದರೆ ಮೇಲೆ ಹೇಳಿದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಗ್ರಾಮೀಣ ಪ್ರದೇಶದಲ್ಲಿ ಭೂ ಹಿಡುವಳಿ ಹೊಂದಿದ್ದ ಶೂದ್ರವರ್ಗದ ಒಂದು ಸ್ಥರವನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸಿದ್ದರೆ ಭೂ ಹೀನ ದಲಿತ ಸಮುದಾಯವನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ನಿತ್ರಾಣಗೊಳಿಸಿದೆ.

ಆದರೆ ಗ್ರಾಮೀಣ ಭಾರತದ ಈ ಹೊಸ ಶೋಷಕರೂ ಸಹ ಹಿಂದೆ ಬ್ರಾಹ್ಮಣವಾದದ ಬಲಿಪಶುಗಳೇ ಆಗಿದ್ದರೂ ಈಗ ದಲಿತರ ಮೇಲೆ ತಮ್ಮ ಸಾಮಾಜಿಕ ಹಿಡಿತ ಮತ್ತು ದಮನವನ್ನು ಮುಂದುವರಿಸಿಕೊಂಡು ಹೋಗಲು ಆಶ್ರಯಿಸಿದ್ದು ಬ್ರಾಹ್ಮಣವಾದವನ್ನೇ. ಹೀಗಾಗಿಯೇ 1967ರ ನಂತರದಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳ ಹಿಂದೆ ಇರುವುದು ಈ ಬ್ರಾಹ್ಮಣೀಕರಣಗೊಂಡ ಹೊಸ ಭೂಮಾಲಕ ಶೂದ್ರ ವರ್ಗವೇ. ಹೀಗಾಗಿಯೇ ಈ ವರ್ಗ ಬಹು ಸುಲಭವಾಗಿ ಹಿಂದುತ್ವವಾದಿಗಳ ಜೊತೆ ಹೊಸ ರಾಜಕೀಯ ಸಮೀಕರಣವನ್ನೇ ಏರ್ಪಡಿಸಿಕೊಂಡು ಅದರ ಸಾಮಾಜಿಕ ತಳಹದಿಯನ್ನು ವಿಸ್ತರಿಸುತ್ತಿದೆ.

ಹಾಗೆಯೇ ಕಳೆದ 63 ವರ್ಷಗಳು, ಅದರಲ್ಲೂ ಕಳೆದ 30 ವರ್ಷಗಳಲ್ಲಿ ದಲಿತ ಸಮುದಾಯದಲ್ಲೂ ಒಂದು ಸ್ವಾರ್ಥನಿಷ್ಠ ಸಮುದಾಯದಿಂದ ವಿಮುಖವಾದ ದಲಿತ ಮಧ್ಯಮವರ್ಗ ಹುಟ್ಟಿಕೊಂಡಿದೆ. ಇದೂ ಕೂಡಾ ಸಾಂಸ್ಕೃತಿಕವಾಗಿ ಬ್ರಾಹ್ಮಣೀಕರಣಗೊಂಡಿದ್ದು ದಲಿತ ಸಮುದಾಯ ತನ್ನ ವಿಮೋಚನೆಗೆ ಈ ವರ್ಗದಿಂದ ಯಾವುದೇ ನೈತಿಕ ಅಥವಾ ರಾಜಕೀಯ ಸಂಪನ್ಮೂಲವನ್ನು ನಿರೀಕ್ಷಿಸುವುದು ಕಷ್ಟವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಲೂ ಪ್ರಗತಿಪರ ಚಳವಳಿಗಳು ಕಳೆಗುಂದಿವೆ. ಹೀಗೆ ಎಲ್ಲಾ ರೀತಿಯಿಂದಲೂ ಒಂದು ಬಗೆಯ ಹೊಸ ಹುಟ್ಟನ್ನು ನಿರೀಕ್ಷಿಸುವ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ. ಇದು ಹಳೆಯ ಪ್ರಶ್ನೆಗಳ ಜೊತೆಗೆ ಕೆಲವು ಹೊಸ ಸವಾಲನ್ನು ನಮ್ಮ ಮುಂದಿಟ್ಟಿವೆ. ಈಗಿರುವ ಮೀಸಲಾತಿಯನ್ನು ಉಳಿಸಿಕೊಳ್ಳುತ್ತಲೇ ಖಾಸಗೀಕರಣದ ಈ ಯುಗದಲ್ಲಿ ಕೇವಲ ಮೀಸಲಾತಿಯೊಂದರ ಮೇಲೆ ಆಧಾರಪಟ್ಟ ರಾಜಕಾರಣದ ಮಿತಿಯನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕಿದೆ.
 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್