‘ಗಾಡ್‌ಫಾದರ್’ ನಾನು ಇತ್ತೀಚೆಗೆ ನೋಡಿದ ಕನ್ನಡದ ಒಂದು ಒಳ್ಳೆಯ ಚಿತ್ರ. ಮೂಲ ತಮಿಳು ಚಿತ್ರದ ಕನ್ನಡದ ಅವತರಣಿಕೆಯಿದು. ಕಥೆಯೇ ಈ ಸಿನಿಮಾದ ಹೀರೋ. ತಮಿಳಿನ ರವಿ ಬರೆದಿರುವ ಚಿತ್ರಕಥೆ ಕನ್ನಡಕ್ಕೂ ತಲುಪಿ ನಟ ಉಪೇಂದ್ರರ ವಿಭಿನ್ನ ಅಭಿನಯ ಪರಿಶ್ರಮದಿಂದ, ಸದ್ಯದ ಕನ್ನಡ ಪ್ರೇಕ್ಷಕರು ನೋಡಬೇಕಾದ ಒಂದು ಒಳ್ಳೆಯ ಸಿನಿಮಾ ಆಗಿರುವುದು ಈ ಚಿತ್ರದ ಹೆಗ್ಗಳಿಕೆ. ಸ್ವಾತಂತ್ರ ಮತ್ತು ಸ್ವೇಚ್ಛೆಗೆ ವ್ಯತ್ಯಾಸ ಗೊತ್ತಾಗುವಂತೆ ಜವಾಬ್ದಾರಿಯುತ ಪ್ರೀತಿಯ ತಂದೆಯೊಬ್ಬ ಹುಟ್ಟುವುದು, ಈ ಚಿತ್ರದ ಕಥಾ ವಸ್ತು. ಇಂತಹ ಕಥಾ ವಸ್ತುವನ್ನು ಕನ್ನಡಕ್ಕೆ ತಂದಿರುವ ನಿರ್ಮಾಪಕ ಕೆ.ಮಂಜುರವರ ಸಾಹಸವನ್ನು ಈ ಸಂದರ್ಭದಲ್ಲಿ ಕನ್ನಡದ ಪ್ರೇಕ್ಷಕರು ಸ್ವಾಗತಿಸಿ ಹುರಿದುಂಬಿಸಿ ಈಗಾಗಲೇ ಯಶಸ್ಸು ಕಂಡಿರುವ ಈ ಕನ್ನಡ ಚಿತ್ರವನ್ನು ಇನ್ನೂ ದೀರ್ಘಕಾಲ ಥಿಯೇಟರ್‌ಗಳಲ್ಲಿ ಬಾಳಿಸಿ ಉಳಿಸಿದರೆ ಪರಿಣಾಮಕಾರಿ ಚಿತ್ರಕಥೆಯೊಂದು ಮನೆ ಮಂದಿಯ ಮನಃಪಟಲದಲ್ಲಿ ತನ್ನದೇ ಆದ ರೂಪ ತಳೆದು ಒಳಿತಿನತ್ತ ಪ್ರೇರೇಪಿಸಲು ಸಹಕಾರಿಯಾಗುತ್ತದೆ ಎಂದು ಕನ್ನಡ ಪ್ರೇಕ್ಷಕ ಪ್ರತಿನಿಧಿಯಾಗಿ ನನ್ನ ಪ್ರತಿಪಾದನೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ಈ ಉತ್ತಮ ಕಥಾ ಚಿತ್ರವನ್ನು ವಾಣಿಜ್ಯ ಕಾರಣಗಳಿಗಾಗಿ-ಇತರ ಭಾಷೆಯ ಚಿತ್ರಗಳನ್ನು ರಿಲೀಸ್ ಮಾಡುವುದಕ್ಕಾಗಿ ಬಲವಂತವಾಗಿ ಈಗಲೇ ತೆರವುಗೊಳಿಸಿದರೆ ಕನ್ನಡ ಸಿನಿಮಾ ನೀತಿಗೆ ಶೋಭೆ ತರದು.
ಫಿಲಂ ಚೇಂಬರ್ ಮುಖ್ಯಸ್ಥರು ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟದಲ್ಲಿ ಪೋಷಿಸುವ ಸಾಂಸ್ಕೃತಿಕ ಮನೋಭಾವದವರಾಗಿದ್ದರೆ ‘ಗಾಡ್‌ಫಾದರ್’ ಎಂಬ ಈ ಕನ್ನಡದ ಹೊಸ ಚಿತ್ರವನ್ನು ಪುರಸ್ಕರಿಸಿ ಹೊಸ ಥಿಯೇಟರ್‌ಗಳಲ್ಲಿ ಇನ್ನೂ ಹೆಚ್ಚು ದಿನ ನೆಲೆ ನಿಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಬೇಕು. ಹಿಂದೆ ರವಿಚಂದ್ರನ್ ಅಭಿನಯದ ‘ರಾಮಾಚಾರಿ’ ವಿಷ್ಣುವರ್ಧನ್ ಅಭಿನಯದ ‘ಯಜಮಾನ’ ಮುಂತಾದ ಚಿತ್ರಗಳು ಕನ್ನಡ ಪ್ರೇಕ್ಷಕರ ಮನಗೆದ್ದಿರುವ ರೀಮೇಕ್ ಯಶಸ್ವೀ ಚಿತ್ರಗಳಾಗಿವೆ. ಈ ಭಾಗ್ಯ ‘ಗಾಡ್‌ಫಾದರ್’ ಚಿತ್ರಕ್ಕೂ ಸಿಗಲಿ. ಕನ್ನಡ ಚಿತ್ರರಂಗದಲ್ಲಿ ಚೇತೋಹಾರಿ ಹೊಸ ಶಖೆ ಆರಂಭವಾಗಲಿ. ಮನೋರಂಜನೆ ಎಂಬುದು ನೇಟಿವಿಟಿಯ ಬುನಾದಿಯಲ್ಲಿ ಸಾಂಸ್ಕೃತಿಕ ಮಹತ್ವವುಳ್ಳದ್ದಾದರೆ ಅದನ್ನು ಪೋಷಿಸಬೇಕಾದುದು ನಮ್ಮ ಕರ್ತವ್ಯ.
‘ಗಾಡ್‌ಪಾದರ್’ ಕಥೆ ‘ಸಿಂಗಲ್ ಮದರ್’ ಅನುಭವಿಸುವ ಕಷ್ಟ ಪರಂಪರೆಯ ಗಾಢವಾದ ನೋವಿನಿಂದ ಆರಂಭವಾಗುತ್ತದೆ. ನೃತ್ಯಕಲಾವಿದೆ ತಾಯಿ ತಾನೊಬ್ಬ ಒಳ್ಳೆಯ ತಾಯಿಯಾದರೂ ಸಹಾ ತನ್ನ ಒಬ್ಬನೇ ಮಗನ ನಡೆನುಡಿಗಳಲ್ಲಿ ನೃತ್ಯದ ಕಲೆಯನ್ನೇ ತುಂಬಿ ಅವನನ್ನು ಕಲಾವಿದನನ್ನಾಗಿಸುವಲ್ಲಿ ಯಶಸ್ವಿಯಾಗಿ ಅವನ ಬಹಿರಂಗ ನಡಿಗೆಯನ್ನು ರೂಪಿಸುವಲ್ಲಿ ವಿಫಲಳಾಗಿ ಬಿಡುತ್ತಾಳೆ. ಇದರ ಪರಿಣಾಮ ತಾರುಣ್ಯಕ್ಕೆ ಬಂದ ಮಗನ ನಡಿಗೆಯೂ ಕೂಡಾ ನೃತ್ಯದ ನಡಿಗೆಯಂತೆಯೇ ಬಳುಕುತ್ತಾ ಹೆಣ್ಣನ್ನು ನೆನಪಿಗೆ ತರುತ್ತಾ, ಬಹಿರಂಗದ ಕಣ್ಣಿಗೆ - ಲೋಕರೂಢಿಯ ಕಣ್ಣಿಗೆ ಅವನ ಗಂಡಸುತನದ ಬಗ್ಗೆ ಅನುಮಾನ ಹುಟ್ಟುವಂತೆ ಆಗಿಬಿಡುತ್ತದೆ.
ಈ ಅವಮಾನದ ಆಘಾತ ತಡೆದುಕೊಳ್ಳಲಾಗದೇ ಅವನ ತಾಯಿ ಹೃದಯಾಘಾತದಿಂದ ಅಸುನೀಗಿಬಿಡುತ್ತಾಳೆ. ಇದನ್ನು ನಿರೀಕ್ಷಿಸದಿದ್ದ ಮಗನ ಮನಸ್ಸಿನಲ್ಲಿ ಸೇಡು ಹುಟ್ಟಿ ತನ್ನನ್ನು ಮದುವೆ ಆಗಲು ನಿರಾಕರಿಸಿದ್ದ ಮದುವೆ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿ ತಾನು ಗಂಡೆಂದು ಸಾಬೀತುಪಡಿಸುತ್ತಾನೆ. ಆಗ ಆ ಹೆಣ್ಣಿನ ಮಾನಸಿಕ ಸ್ಥಿತಿ ದುರ್ಬಲವಾಗುತ್ತದೆ. ಆದರೆ ಅತ್ಯಾಚಾರ ನಡೆಸಿದವನ ಕೆಡುಕು ಮನಸ್ಸು ಪರಿವರ್ತನೆಯಾಗಿ ಅವಳಿಗೆ ಹುಟ್ಟಿದ ಮಗುವಿಗೆ ತಂದೆಯಾಗುವುದೊಂದೇ ತನ್ನ ಬಾಳ ಗುರಿಯೆಂದು ನಿರ್ಧರಿಸಿ ಆ ಮಗುವನ್ನು ತನ್ನ ವಶಕ್ಕೆ ಪಡೆದು ಸಾಕುತ್ತಾ -ತಂದೆಯೂ ಆಗಿ ತಾಯಿಯೂ ಆಗಿ ಆ ಮಗುವನ್ನು ಸ್ವತಂತ್ರ ಆರೋಗ್ಯಕರ ಪ್ರಜೆಯನ್ನಾಗಿ ರೂಪಿಸುತ್ತಾನೆ. ಅವಳಿ ಮಕ್ಕಳಲ್ಲಿ ಇನ್ನೊಂದು ಮಗು ತಾಯಿಯ ಹತ್ತಿರ ಬೆಳೆಯುವ ಪರಿಸ್ಥಿತಿ ಏರ್ಪಟ್ಟಿರುತ್ತದೆ. ಆದರೆ ಅವಳು ಮಾನಸಿಕ ಅಸ್ವಸ್ಥಳಾದ ಕಾರಣ ಆ ಮಗನೇ ತಾಯಿಯನ್ನು ತಂದೆಯಂತೆ ಪೋಷಿಸುವ ವಿದ್ರಾವಕ ಸನ್ನಿವೇಶ ಏರ್ಪಡುತ್ತದೆ. ಅವನು ತನ್ನ ತಾಯಿಯ ಅತ್ಯಾಚಾರಕ್ಕೆ ಕಾರಣನಾದ, ಅವಳ ಅಸ್ವಸ್ಥತೆಗೆ ಕಾರಣನಾದ ತಂದೆಯನ್ನು ದ್ವೇಷಿಸುತ್ತಾನೆ. ಕೊಲ್ಲಲು ಬರುತ್ತಾನೆ.
ಆದರೆ ಆ ವೇಳೆಗೆ ಅವನ ತಂದೆ ‘ಗಾಡ್‌ಫಾದರ್’ ಆಗಿ ಭಕ್ತನಂತೆ ಪರಿವರ್ತನೆಯಾಗಿರುವುದರಿಂದ ಮಗನಿಗೆ ಅರಿವು ಮೂಡುವಂತೆ ಮಾಡಿ ತನ್ನ ಶುದ್ಧ ನಡತೆಯನ್ನು ನಿರೂಪಿಸಿ ಅವನ ಸಾವನ್ನು ತಪ್ಪಿಸಿ - ಆ ಸಾವನ್ನು ತಾನೇ ಸ್ವೀಕರಿಸುವ ನಿಸ್ವಾರ್ಥ ತಂದೆಯಾಗಿ ಜನ ಮಾನಸದಲ್ಲಿ ನಿಲ್ಲುತ್ತಾನೆ.‘ಗಾಡ್‌ಫಾದರ್’ ನಿಸ್ವಾರ್ಥ ತಂದೆಯೊಬ್ಬ ಕೂರುವ ಗಾಲಿ ಕುರ್ಚಿಯ ಕಥೆ. ಮಗುವಿಗಾಗಿ ತನ್ನ ಜೀವ ಮುಡಿಪಾಗಿಡುವ ತಾಯಿ ಮಮತೆಯ ಕಥೆ. ಅತ್ಯಾಚಾರದ ಸ್ವೇಚ್ಛೆಯ ವಿರುದ್ಧ ಸೆಣಸಿ ವಿಜಯ ಸಾಧಿಸುವ ಜೀವಿತೋದ್ದೇಶದ ಸ್ವಾತಂತ್ರದ; ಭಕ್ತಿಯ ಶುದ್ಧ ಪ್ರೀತಿಯ ಕಥೆ.
ಭಕ್ತನ ನಡೆ ಶುದ್ಧ ಭಕ್ತನ ನುಡಿ ಶುದ್ಧ
ಭಕ್ತನ ತನು ಶುದ್ಧ ಭಕ್ತನ ಮನ ಶುದ್ಧ
ಭಕ್ತನ ಭಾವ ಶುದ್ಧ ಅಖಂಡೇಶ್ವರ
ಭಕ್ತನ ಕರ್ಮ ಕ್ರಿಯೆಗಳಲ್ಲಿ ಶುದ್ಧ ನೀವು ಒಲಿದ ಸದ್ಭಕ್ತರ ಕಾಯವೇ ಕೈಲಾಸವಲ್ಲ
-ಅಖಂಡೇಶ್ವರ ವಚನ
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...