ಯಾಂಬು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ!

ಯಾಂಬು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ!

ರಿಯಾದ್: ಸೌದಿ ಅರೇಬಿಯದ ಮದೀನಾ ಪ್ರಾಂತ್ಯದಲ್ಲಿರುವ ಕೆಂಪು ಸಮುದ್ರದ ಮಹತ್ವದ ಬಂದರು ‘ಯಾಂಬು’ವನ್ನು ಅಭಿವೃದ್ಧಿಪಡಿಸಲಾಗಿದ್ದು ಜಗಮಗಿಸುವ ನಗರವಾಗಿ ಮಾರ್ಪಟ್ಟಿದೆ ಹಾಗೂ ವಿದೇಶಿಯರು ಮತ್ತು ಶ್ರೀಮಂತ ಸ್ಥಳೀಯರ ಮೋಜಿನ ತಾಣವಾಗಿದೆ.ಜಿದ್ದಾದಿಂದ ಉತ್ತರಕ್ಕೆ ಸುಮಾರು 30 ಕಿ.ಮೀ. ದೂರಕ್ಕಿರುವ ಯಾಂಬು 1975ರವರೆಗೂ ಒಂದು ಸಣ್ಣ ಪಟ್ಟಣವಾಗಿತ್ತು. ಆಗ, ಸೌದಿ ಸರಕಾರ ಈ ಪಟ್ಟಣವನ್ನು ಎರಡು ಮಹತ್ವದ ಕೈಗಾರಿಕಾ ವಸಾಹತುಗಳ ಪೈಕಿ ಒಂದನ್ನಾಗಿ ಇದನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿತು. ಎರಡರ ಪೈಕಿ ಇನ್ನೊಂದು ಕೈಗಾರಿಕಾ ನಗರ ಅರೇಬಿಯನ್ ಕೊಲ್ಲಿಯಲ್ಲಿರುವ ಜುಬೈಲ್. ಈ ಎರಡು ನಗರಗಳನ್ನು ನಡೆಸುತ್ತಿರುವವರು ರಾಯಲ್ ಕಮಿಶನ್ ಫಾರ್ ಜುಬೈಲ್ ಮತ್ತು ಯಾಂಬು.

ವಿಂಗಡನೆ

ಯಾಂಬುವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಾಹನದಲ್ಲಿ 15 ನಿಮಿಷ ದೂರವಿದೆ.ಯಾಂಬು ಅಲ್-ಬಲಾದ್ (ಅರೇಬಿಕ್-ಡೌನ್‌ಟೌನ್ ಯಾಂಬು) ಇಲ್ಲಿನ ಮಹತ್ವದ ನಗರವಾಗಿದೆ. ಇಲ್ಲಿ ಸ್ಥಳೀಯರು ಮತ್ತು ವಿದೇಶಿಯರು ವಾಸಿಸುತ್ತಾರೆ.ಇದನ್ನು ಹಳೆಯ ಯಾಂಬು ಎಂದು ಕರೆಯಬಹುದಾಗಿದೆ. ಯಾಕೆಂದರೆ, ಇಲ್ಲಿ  ಹಳೆ ಕಾಲದ ಐತಿಹಾಸಿಕ ಕಟ್ಟಡಗಳು, ಶಾಪಿಂಗ್ ಸೆಂಟರ್‌ಗಳು ಮತ್ತು ರೆಸ್ಟೋರೆಂಟ್‌ಗಳಿವೆ.

ಯಾಂಬು ಅಲ್-ನಕೀಲ್ ಅಥವಾ ‘ಪಾಲ್ಮ್ಸ್ ಯಾಂಬು’ ನಗರದ ಅತ್ಯಂತ ಹಳೆಯ ಜನವಸತಿ ಪ್ರದೇಶ. ಇಲ್ಲಿ ಹೆಚ್ಚಾಗಿ ಹೊಲಗಳಿವೆ. ಖರ್ಜೂರ ಬೆಳೆಯುವ ಸೌದಿ ರೈತರು ಮಾತ್ರ ಇಲ್ಲಿ ವಾಸಿಸುತ್ತಾರೆ.ಯಾಂಬು ಅಲ್ ಸಿನಯ ಅಥವಾ ‘ಕೈಗಾರಿಕಾ ಯಾಂಬು’ವನ್ನು 1975ರ ವೇಳೆಗೆ ಸ್ಥಾಪಿಸಲಾಯಿತು.

ಈ ಭಾಗದಲ್ಲಿರುವ ಮನೆಗಳು ಮತ್ತು ಕಟ್ಟಡಗಳು ಆಧುನಿಕ ವಿನ್ಯಾಸ ಹೊಂದಿವೆ. ಇಲ್ಲಿ ಪ್ರಮುಖ ತೈಲ ಶುದ್ಧೀಕರಣ ಕೇಂದ್ರಗಳು ಮತ್ತು ಪೆಟ್ರೋಕೆಮಿಕಲ್ ಕೈಗಾರಿಕೆಗಳವೆ.ಇಲ್ಲಿ ಹೆಚ್ಚಾಗಿ ವಾಸಿಸುವವರು ಯುರೋಪಿಯನ್ನರು, ಅಮೆರಿಕನ್ನರು, ಏಶ್ಯನ್ನರು ಮತ್ತು ಮೇಲ್ವರ್ಗದ ಸೌದಿಗಳು.ರಾಯಲ್ ಕಮಿಶನ್ ಮುಖ್ಯವಾಗಿ ಜನವಸತಿ ಪ್ರದೇಶವಾಗಿದೆ. ಆದರೆ, ಇಲ್ಲಿ ಹಲವಾರು ಅಂತಾರಾಷ್ಟ್ರೀಯ ಚೇನ್ ರೆಸ್ಟೋರೆಂಟ್‌ಗಳು, ಶಾಪಿಂಗ್ ಸೆಂಟರ್‌ಗಳು, ಸೂಪರ್ ಮಾರ್ಕೆಟ್‌ಗಳು, ಒಂದು ಆಸ್ಪತ್ರೆ, ಸೌದಿ ಬ್ಯಾಂಕ್ ಶಾಖೆಗಳು ಮತ್ತು ಕಾಫಿ ಅಂಗಡಿಗಳಿವೆ.

ನಗರದ ಈ ಭಾಗ ಆಧುನಿಕತೆಯಿಂದ ಕಂಗೊಳಿಸುತ್ತದೆ.ಯಾಂಬುವಿನಲ್ಲಿ ಸೌದಿ ಅರೇಬಿಯದ ಎರಡು ಶ್ರೇಷ್ಠ ಬೀಚ್‌ಗಳಿವೆ. ಇಲ್ಲಿ ಈಜಬಹುದು, ಸ್ಕೂಬಾ ಡೈವಿಂಗ್ ಮಾಡಬಹುದು, ಮೀನುಹಿಡಿಯಬಹುದು, ಸ್ನೋರ್ಕೆಲ್ ಮಾಡಬಹುದು ಹಾಗೂ ಇತರ ಜಲಕ್ರೀಡೆಗಳನ್ನು ಆಡಬಹುದು.ಇಲ್ಲಿ ಕ್ಯಾಂಪಿಂಗ್ ಮತ್ತು ಹಕ್ಕಿ ಬೇಟೆ ಮುಂತಾದ ಭೂಮಿಯ ಮೇಲೆನಡೆಸುವ ಚಟುವಟಿಕೆಗಳೂ ಇವೆ.