ಮುಂಬೈ, ಮೇ 15: ಜನಪ್ರಿಯ ತಾರೆ ಆಮಿರ್ ಖಾನ್‌ರ ಕಿರುತೆರೆ ಪ್ರವೇಶವು ದೇಶಾದ್ಯಂತ ಭಾರೀ ಅಲೆಯನ್ನೇ ಎಬ್ಬಿಸಿದೆ. ಹೀಗಾಗಿ ಅವರ ‘ಸತ್ಯಮೇವ ಜಯತೇ’ ಕಾರ್ಯಕ್ರಮಕ್ಕೆ ದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ದಾಖಲಾದ ಒಟ್ಟಾರೆ ಟಿವಿಆರ್ (ಡಿಡಿಯ ವ್ಯಾಪ್ತಿಯೂ ಸೇರಿ) ಪ್ರಮಾಣ 4.27ರಷ್ಟು ದಾಖಲಾಗಿ ದಾಖಲೆ ನಿರ್ಮಿಸಿದೆ. ಮೇ 6ರಂದು ಸ್ಟಾರ್ ಪ್ಲಸ್, ಸ್ಟಾರ್ ಪ್ರವಾಹ್ (ಮರಾಠಿ), ಡಿಡಿ ನ್ಯಾಶನಲ್, ಸ್ಟಾರ್ ಉತ್ಸವ್, ಇ ಟಿವಿ (ತೆಲುಗು), ವಿಜಯ್ (ತಮಿಳು), ಸ್ಟಾಲ್ ಜಲ್ಶಾ (ಬಂಗಾಳಿ), ಸ್ಟಾರ್ ವರ್ಲ್ಡ್ (ಇಂಗ್ಲಿಷ್) ಮತ್ತು ಏಶಿಯಾನೆಟ್ (ಮಲಯಾಳಂ)ಗಳಲ್ಲಿ ಏಕ ಕಾಲದಲ್ಲಿ ಸಹ ಪ್ರಸಾರ ಹೊಂದಿದ್ದ ಈ ಕಾರ್ಯಕ್ರಮವನ್ನು ಭಾರೀ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸಿದ್ದಾರೆ.
ಸತ್ಯಮೇವ ಜಯತೇ ಕಾರ್ಯಕ್ರಮ ವನ್ನು ಸುಮಾರು 8.96 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಟಿಎಎಂ ಮಾಧ್ಯಮ ಸಂಶೋಧನೆಯು ಪೂರೈಸಿರುವ ಅಂಕಿ ಅಂಶಗಳು ತಿಳಿಸಿವೆ ಎಂದು ವರದಿಗಳು ಹೇಳಿವೆ.
ಸಿ ಮತ್ತು ಎಸ್‌ನ ನಾಲ್ಕಕ್ಕಿಂತ ಮೇಲಿನ ಹರೆಯದ ಗುಂಪಿನಲ್ಲಿ ಕಾರ್ಯಕ್ರಮ ಪ್ರಸಾರದ ಪ್ರಧಾನ ಅವಧಿಯಲ್ಲಿ ಪ್ರದರ್ಶನವನ್ನು ಸುಮಾರು 81,46,000 ಮಂದಿ ವೀಕ್ಷಿಸಿದ್ದಾರೆ. ಎಲ್ಲ ಮಾರುಕಟ್ಟೆಯನ್ನು ಕ್ರೋಢಿಕರಿಸಿದಾಗ, ಪ್ರಧಾನ ಅವಧಿಯ ಪ್ರಸಾರದ ಸಂದರ್ಭ ಕಾರ್ಯಕ್ರಮವನ್ನು 89,60,000 ಮಂದಿ ವೀಕ್ಷಿಸಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಮೊದಲ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ದೂರವಾಣಿ ಕರೆ ಮಾಡಿ ಆಮಿರ್ ಖಾನ್ ಜೊತೆ ಮಾತುಕತೆಗೆ ಮುಂದಾಗುವ ಮೂಲಕ ಈ ಕಾರ್ಯಕ್ರಮವು ಆರಂಭದಲ್ಲೇ ದಾಖಲೆ ನಿರ್ಮಿಸಿತ್ತು. ಒಟ್ಟಾರೆ ದೇಶದಲ್ಲಿ ಆಮಿರ್ ಖಾನ್‌ರ ಸತ್ಯಮೇವ ಜಯತೇ ಕಾರ್ಯಮವು ಹೊಸ ಸಂಚಲನವನ್ನು ಸೃಷ್ಟಿಸಿದೆ.