ಬಂಡವಾಳ ಹೂಡಿಕೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದಿದೆ ಯಂತೆ. ಸುಮಾರು 400 ಒಪ್ಪಂದಗಳಿಗೆ ಸಹಿ ಹಾಕಲಾಗಿದೆಯೆಂದು ಸರಕಾರ ಹೇಳಿದೆ. ಆದರೆ ಈ ಒಪ್ಪಂದಗಳು ಅನುಷ್ಠಾನಕ್ಕೆ ಬರುವ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಗೆ ವಿಶ್ವಾಸವಿದ್ದಂತೆ ಕಾಣುವುದಿಲ್ಲ. ಶೇ.60 ಒಪ್ಪಂದಗಳು ಮಾತ್ರ ಜಾರಿಗೆ ಬರಬಹುದೆಂಬ ನಂಬಿಕೆ ಇಟ್ಟುಕೊಳ್ಳಬಹುದೆಂದು ಸ್ವತಃ ಅವರೇ ಹೇಳಿದ್ದಾರೆ. ಈ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ರೈತ ಸಂಘ ಹಾಗೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳು ವಿರೋಧಿಸಿವೆ. ಇದು ರೈತರ ಭೂಮಿಯನ್ನು ನುಂಗುವ ಹುನ್ನಾರವೆಂದು ಈ ಸಂಘಟನೆಗಳ ನಾಯಕರು ಆರೋಪಿಸಿದ್ದಾರೆ.

ರೈತರು ತಮ್ಮ ಕೃಷಿಯೋಗ್ಯ ಭೂಮಿಯನ್ನು ಬಂಡವಾಳ ಗಾರರಿಗೆ ಬಿಟ್ಟುಕೊಡಲು ಬಯಸುವುದಿಲ್ಲ ವೆಂದು ಅವರು ಹೇಳಿದ್ದಾರೆ. ರೈತರ ವಿರೋಧವನ್ನು ಹಗುರವಾಗಿ ಕಂಡಿರುವ ಮುಖ್ಯಮಂತ್ರಿ ಕೋಳಿ ಕೇಳಿ ಮಸಾಲೆ ಅರಿಯುವುದಿಲ್ಲವೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮುನ್ನ ಕಳೆದ 2010ರಲ್ಲಿ ನಡೆದ ಇಂತಹದೇ ಸಮಾವೇಶ ಹಾಗೂ 2011ರಲ್ಲಿ ನಡೆದ ವಿಶ್ವ ಕೃಷಿಬಂಡವಾಳ ಹೂಡಿಕೆದಾರರ ಸಮಾವೇಶಗಳ ಬಗ್ಗೆ ಪರಾಮರ್ಶೆ ನಡೆಸುವುದು ಅಗತ್ಯವಾಗಿದೆ. ಕಳೆದ ಸಮಾವೇಶದಲ್ಲಿ ನಾಲ್ಕು ಲಕ್ಷ ಕೋಟಿ ಬಂಡವಾಳ ಹರಿದು ಬರುವುದೆಂಬ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಈ ಕುರಿತಂತೆ 372 ಕಂಪೆನಿಗಳ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಆದರೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದೆ ಬಂದ ಕಂಪೆನಿಗಳು ಕೇವಲ 38 ಮಾತ್ರ. ಆಗ 5600 ಕೋಟಿ ರೂ. ಬಂಡವಾಳ ಮಾತ್ರ ರಾಜ್ಯಕ್ಕೆ ಬಂತು. ಆದರೆ ಕಳೆದ ಬಾರಿಯ ಹೂಡಿಕೆದಾರರ ಸಮಾವೇಶದ ನಂತರ ಕೈಗಾರಿಕಾ ಉದ್ದೇಶ ಗಳಿಗಾಗಿ ರಾಜ್ಯ ಸರಕಾರ ಭೂ ಬ್ಯಾಂಕ್‌ನ್ನು ಸ್ಥಾಪಿಸಿತು. ಆ ಮೂಲಕ ರೈತರಿಂದ 1.70 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತು. ಹೀಗೆ ವಶಪಡಿಸಿಕೊಂಡ ಭೂಮಿಯನ್ನು ಯಾರಿಗೆ ನೀಡಲಾಯಿತು? ಎಷ್ಟು ಉದ್ಯೋಗಗಳು ಸೃಷ್ಟಿಯಾದವು? ಎಷ್ಟು ಕೈಗಾರಿಕೆಗಳು ಸ್ಥಾಪನೆಯಾದವು? ಎಂಬ ವಿಷಯದಲ್ಲಿ ಸರಕಾರ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಬಳ್ಳಾರಿಯಲ್ಲಿ ಬ್ರಹ್ಮಿಣಿ ಮತ್ತು ಮಿತ್ತಲ್‌ಗಳಂತಹ ಬಂಡವಾಳಶಾಹಿ ಕಂಪೆನಿ ಗಳಿಗೆ ನೀಡಿದ ಸಾವಿರಾರು ಎಕರೆ ಭೂಮಿ ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲ್ಪಡಲಿಲ್ಲ. ಈಗ ಅದು ರಿಯಲ್ ಎಸ್ಟೇಟ್ ಮಾಫಿಯಾ ಗಳ ಪಾಲಾಗಿದೆ.

ಆದರೂ ಸರಕಾರ ಬಂಡವಾಳ ಹೂಡಿಕೆಯ ಹೆಸರಿನಲ್ಲಿ ಅಷ್ಟು ಭೂಮಿಯನ್ನು ವಶಪಡಿಸಿಕೊಳ್ಳುವ ಸಿದ್ಧತೆಯನ್ನು ನಡೆಸಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯಾರ ವಿರೋಧವು ಇಲ್ಲ. ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ನಿಜ. ಆದರೆ ದಶಕಗಳಿಂದ ಕರ್ನಾಟಕದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದ ಸಾವಿರಾರು ಸಣ್ಣ ಮತ್ತು ದೊಡ್ಡ ಉದ್ದಿಮೆಗಳು ಮುಚ್ಚಿ ಹೋಗಿವೆ. ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರಾಗಿದ್ದ ದಾವಣಗೆರೆ ಯಲ್ಲಿ ಈಗ ಎಲ್ಲ ಜವಳಿ ಉದ್ದಿಮೆಗಳು ಮುಚ್ಚಿ ಹೋಗಿವೆ. ಬೆಂಗಳೂರಿನಲ್ಲಿ ಸರಕಾರಿ ರಂಗದ ಅನೇಕ ಕಾರ್ಖಾನೆಗಳು ಬೀಗ ಹಾಕಲ್ಪಟ್ಟಿವೆ. ಆ ಕೈಗಾರಿಕೆಗಳಿದ್ದ ಪ್ರದೇಶವನ್ನು ರಿಯಲ್ ಎಸ್ಟೇಟ್ ಮಾಫಿಯಾ ನುಂಗಿದೆ. ವಾಸ್ತವ ಸಂಗತಿ ಹೀಗಿರುವಾಗ ಹೊಸ ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ರೈತರಿಂದ ಮತ್ತೆ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಕೈಗಾರಿಕೆಗಳನ್ನು ಸ್ಥಾಪನೆ ಮಾಡಿಬೇಕೆಂದಿದ್ದರೆ ಸಾವಿರಾರು ಭೂಮಿ ಸರಕಾರದ ವಶದಲ್ಲಿದೆ. ಆ ಭೂಮಿಯನ್ನು ಧಾರಾಳವಾಗಿ ನೀಡಬಹುದು. ರೈತರಿಗೆ ಗರಿಷ್ಠ ಮಟ್ಟದ ಪರಿಹಾರವನ್ನು ನೀಡಬೇಕು. ಅಗ್ಗದ ಬೆಲೆಯಲ್ಲಿ ಅವರ ಭೂಮಿಯನ್ನು ವಶಪಡಿಸಿ ಕೊಳ್ಳುವುದು ಅನ್ಯಾಯದ ಪರಮಾವಧಿ ಯಾಗಿದೆ.

ನವಉದಾರೀಕರಣ ನೀತಿಯ ಭಾಗವಾಗಿ ರೈತರ ಕೃಷಿಯೋಗ್ಯ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರಾಟ ಮಾಡಲು ರಾಜ್ಯದ ಬಿಜೆಪಿ ಸರಕಾರ ಇನ್ನಿಲ್ಲದ ಮಸಲತ್ತು ನಡೆಸಿದೆ. ಈ ಉದ್ದೇಶಕ್ಕಾಗಿ ಭೂ ಸುಧಾರಣಾ ಕಾಯ್ದೆ 1961ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹೊರಟಿದೆ. ತಿದ್ದುಪಡಿ ಗಳನ್ನು ರಾಜ್ಯ ವಿಧಾನಸಭೆ ಅನುಮೋದಿಸಿದರೆ ಬೇಸಾಯ ಎಂಬ ಪರಿಭಾಷೆಯ ವ್ಯಾಪ್ತಿಗೆ ಬೇಸಾಯ ಆಧಾರಿತ ಕೈಗಾರಿಕೋದ್ಯಮಗಳನ್ನು ಸೇರಿಸಲಾಗುತ್ತದೆ. ಮಾತ್ರವಲ್ಲ ಕೃಷಿಯೋಗ್ಯ ಭೂಮಿಯನ್ನು ದೀರ್ಘಾವಧಿಯಲ್ಲಿ ಗೇಣಿ ಆಧಾರದಲ್ಲಿ ಕೃಷಿ ವಾಣಿಜ್ಯದಲ್ಲಿ ತೊಡಗಿಸಲು ಕಾರ್ಪೋರೇಟ್ ಕಂಪೆನಿಗಳಿಗೆ ನೀಡಲು ಅವಕಾಶ ದೊರಕುತ್ತದೆ. ಭೂ ಸುಧಾರಣೆ ಕಾನೂನಿಗೆ ತಿದ್ದುಪಡಿ ತಂದರೆ ಕರ್ನಾಟಕದಲ್ಲಿ ಕಾರ್ಪೋರೇಟ್ ಕಂಪೆನಿಗಳ ಕೃಷಿ ಆರಂಭವಾಗಲಿದೆ. ರೈತರು ಇನ್ನು ಮುಂದೆ ತಮ್ಮದೆ ಭೂಮಿಯಲ್ಲಿ ಈ ಕಂಪೆನಿಗಳ ಕೂಲಿಯಾಳುಗಳಾಗಿ ಕೆಲಸ ಮಾಡಬೇಕಾಗುತ್ತದೆ.

ಕೃಷಿಯ ಕಾರ್ಪೋ ರೇಟೀಕರಣದಿಂದಾಗಿ ಯಾಂತ್ರೀಕರಣ ತೀವ್ರಗತಿಯಲ್ಲಿ ಸಾಗಿ ಕೃಷಿ ಕೂಲಿಕಾರರ ಬದುಕು ಹರಿದು ಛಿದ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶ ರಿಯಲ್ ಎಸ್ಟೇಟ್ ದಂಧೆಯಲ್ಲದೆ ಮತ್ತೇನಲ್ಲ. ಸರಕಾರವೇ ರಿಯಲ್ ಎಸ್ಟೇಟ್ ಎಜೆಂಟ್ ಆಗಿ ಕೆಲಸ ಮಾಡುತ್ತಿದೆ. ಅಂತಲೇ ರಾಜ್ಯದ ರೈತಾಪಿ ವರ್ಗ ಈ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗಿದೆ.