7.6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ : ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ತೆರೆ

15 ಲಕ್ಷ ಉದ್ಯೋಗ ಸೃಷ್ಟಿ 730 ಒಡಂಬಡಿಕೆಗಳಿಗೆ ಸಹಿ

 

ಬೆಂಗಳೂರು, ಜೂ.8: ಜಾಗತಿಕ ಬಂಡವಾಳ ಹೂಡಿಕೆದಾರರ ಎರಡನೆ ಸಮಾವೇಶಕ್ಕೆ ಸಂಭ್ರಮದ ತೆರೆ ಬಿದ್ದಿದ್ದು, ನಿರೀಕ್ಷೆಗೂ ಮೀರಿ 7.6ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಯಲ್ಲಿ ನೂತನ ಪರ್ವ ಆರಂಭವಾಗಿದೆ. ಕಳೆದ ಬಾರಿಗಿಂತ ದುಪ್ಪಟ್ಟು ಬಂಡವಾಳ ಆಕರ್ಷಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 7.6 ಲಕ್ಷಕೋಟಿ ರೂ.ಗಳ

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ-2012ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರೊಂದಿಗೆ ವಿಜಯದ ಸಂಕೇತ ಪ್ರದರ್ಶಿಸುತ್ತಿರುವುದು.

 

ಬಂಡವಾಳವನ್ನು ಕ್ರೋಡೀಕರಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯ 730 ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ. ಉದ್ದೇಶಿತ ಯೋಜನೆಗಳ ಅನುಷ್ಠಾನದಿಂದಾಗಿ 15 ಲಕ್ಷ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭವದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದಲ್ಲದೆ, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ 1.68 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯು ಹರಿದು ಬರುವ ನಿರೀಕ್ಷೆಯಿದೆ. ಕಳೆದ ಎರಡು ದಿನಗಳಲ್ಲಿ ಈ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರ ವೀಕ್ಷಕರು ಪಾಲ್ಗೊಂಡಿದ್ದಾರೆ.
6.58 ಲಕ್ಷ ಕೋಟಿ ರೂ.ಗಳ 712 ಒಡಂಬಡಿಕೆಗಳು/ಇಓಐ, 30 ಸಾವಿರ ಕೋಟಿ ರೂ.ಗಳ ಕೈಗಾರಿಕೆಗಳ ಆಸಕ್ತಿ ನೋಂದಾವಣೆ, 71 ಸಾವಿರ ಕೋಟಿ ರೂ.ಗಳ 6,800 ಎಸ್‌ಎಂಇ ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಮಗ್ರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಹಾಗೂ ಉದ್ಯೋಗಾವಕಾಶವನ್ನು ಹೆಚ್ಚಿಸಿ ಜನರ ಜೀವನ ಗುಣಮಟ್ಟ ಉತ್ತಮಗೊಳಿಸುವ ಜೊತೆಗೆ ಸಮತೋಲನವಾದ ಪ್ರಾದೇಶಿಕ ಅಭಿವೃದ್ಧಿಯನ್ನು ದೀರ್ಘಕಾಲದ ನೆಲೆಯಲ್ಲಿ ಸಾಧಿಸುವ ಉದ್ದೇಶವನ್ನು ನಮ್ಮ ವಿಷನ್ 2020ಯಲ್ಲಿ ಹೊಂದಿದ್ದು, ಈ ದಿಶೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ತೃಪ್ತಿದಾಯಕ ಪ್ರಗತಿಯನ್ನು ಸಾಧಿಸಿದೆ ಎಂದು ಸದಾನಂದಗೌಡ ಹೇಳಿದರು.
ಭವಿಷ್ಯದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಾಧಿಸುವತ್ತ ಬಂಡವಾಳ ಹೂಡಿಕೆದಾರರ ನಡುವಣ ಬಾಂಧವ್ಯವನ್ನು ವೃದ್ಧಿಸಲು ಸರಕಾರ ಶ್ರಮಿಸಲಿದೆ. ಕಳೆದ 20 ತಿಂಗಳಲ್ಲಿ ನಾವು ಈ ಸಮಾವೇಶದ ತಯ್ಯಿರಿಯಲ್ಲಿ ಅವಿರತ ಶ್ರಮಪಟ್ಟಿದ್ದು, ದೇಶದ ಮಾತ್ರವಲ್ಲ ಹಲವಾರು ದೇಶಗಳ ಬಂಡವಾಳ ಹೂಡಿಕೆದಾರರ ಜೊತೆಗೆ ವ್ಯಾಪಕವಾದ ವಿಚಾರ ವಿನಿಮಯವನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಹಿ ಮಾಡಿರುವ ಒಡಂಬಡಿಕೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಪ್ರತಿ 3 ತಿಂಗಳಿಗೊಮ್ಮೆ ತಮ್ಮ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ಎಲ್ಲ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದೆ. ಉದ್ದೇಶಿತ ಯೋಜನೆಗಳು 2ವರ್ಷದಲ್ಲಿ ಕಾರ್ಯಾರಂಭ ಮಾಡಬೇಕು, 5 ವರ್ಷಗಳಲ್ಲಿ ಉತ್ಪಾದನೆ ಪ್ರಾರಂಭವಾಗಬೇಕು. ಇಲ್ಲದಿದ್ದಲ್ಲಿ ಭೂಮಿಯನ್ನು ಸರಕಾರ ಹಿಂಪಡೆಯಲಿದೆ ಎಂಬ ಶರತ್ತನ್ನು ಹೂಡಿಕೆದಾರರಿಗೆ ವಿಧಿಸಲಾಗಿದೆ ಎಂದು ಅವರು ಹೇಳಿದರು. ಸರಕಾರವು ರಾಜ್ಯಕ್ಕೆ ಬಂಡವಾಳವನ್ನು ಆಕರ್ಷಿಸಿ ಸಮಗ್ರ ಬೆಳವಣಿಗೆಯನ್ನು ಸಾಧಿಸಿ ರಾಜ್ಯದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲು ಸಂಕಲ್ಪ ಮಾಡಿದೆ. ಈ ದಿಕ್ಕಿನಲ್ಲಿ ಐಸಿಟಿ ಗ್ರೂಪ್ 2020ಯನ್ನು ರಚಿಸಲಾಗಿದೆ. ಈ ಐಸಿಟಿ ಗ್ರೂಪ್ 2020ರ ಹೊತ್ತಿಗೆ ಐಸಿಟಿ ರಫ್ತು ವ್ಯವಹಾರವನ್ನು 4 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವ ಹಾಗೂ ಈ ಕ್ಷೇತ್ರದಲ್ಲಿ 12 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಈ ಗ್ರೂಪ್ 1000 ಇನ್‌ಕ್ಯೂಬೇಟಿಂಗ್ ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸುವಲ್ಲಿ ಸಹಕರಿಸಲಿದೆ ಎಂದು ಅವರು ಹೇಳಿದರು.

ಜಿಮ್ ಪ್ರದರ್ಶನ ಮೇಳದಲ್ಲಿ 462 ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪ್ರದರ್ಶಿಸಿದ್ದವು. ಜಪಾನ್, ಜರ್ಮನಿ, ಮೆಕ್ಸಿಕೋ, ಇಟಲಿ, ಕೆನಡಾ, ಯುಕೆ, ತೈವಾನ್ ಮೊದಲಾದ 13 ದೇಶಗಳು ಎಕ್ಸ್ ಪೋದಲ್ಲಿ ಪಾಲ್ಗೊಂಡಿದ್ದವು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿರುವ 300ಕ್ಕೂ ಹೆಚ್ಚಿನ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ಕೈಗಾರಿಕಾ ಭೂಮಿಯನ್ನು ಬಂಡವಾಳ ಹೂಡಿಕೆದಾರರಿಗೆ ಒದಗಿಸುವಲ್ಲಿ ಇರುವ ಸಮಸ್ಯೆಗಳು ಸರಕಾರದ ಅನುಭವಕ್ಕೆ ಬಂದಿದ್ದು, ಇದನ್ನು ಪರಿಹರಿಸಲು ದೇವನಹಳ್ಳಿ ಸುೀಪದಲ್ಲಿ ಲ್ಯಾಂಡ್ ಬ್ಯಾಂಕ್‌ನ್ನು ಸೃಷ್ಟಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಫಿಕ್ಕಿ ಅಧ್ಯಕ್ಷ ಸುಧಾಕರ್ ದಾಂಡೆ ಉಪಸ್ಥಿತರಿದ್ದರು.

ಬ್ಯಾಂಕ್‌ಗಳ ಸಹಕಾರ
ಎಸ್‌ಬಿಐ-50 ಸಾವಿರ ಕೋಟಿ ರೂ.
ಸಿಂಡಿಕೇಟ್ ಬ್ಯಾಂಕ್-11 ಸಾವಿರ ಕೋಟಿ ರೂ.
ಕಾರ್ಪೋರೇಷನ್ ಬ್ಯಾಂಕ್-10 ಸಾವಿರ ಕೋಟಿ ರೂ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್-10 ಸಾವಿರ ಕೋಟಿ ರೂ.
ಪಂಜಾಬ್ ನ್ಯಾಷನಲ್ ಬ್ಯಾಂಕ್-10 ಸಾವಿರ ಕೋಟಿ ರೂ.
ಇದಲ್ಲದೆ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಟೋಕಿಯೊ, ಕೋಟಕ್ ಮಹೀಂದ್ರಾ ಬ್ಯಾಂಕ್, ಆಂಧ್ರ ಬ್ಯಾಂಕ್, ಐಡಿಬಿಐ, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಹೂಡಿಕೆದಾರರಿಗೆ ಆರ್ಥಿಕ ಸಹಾಯ ಒದಗಿಸುವ ಸಂಬಂಧಪಟ್ಟಂತೆ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದವು.