
ಬೆಂಗಳೂರು, ಜೂ.20: ಶಾಸಕಾಂಗ ಸಭೆ ಕರೆಯಲು ವರಿಷ್ಠರ ಅನುಮತಿ ಅಗತ್ಯ. ಸಂಪುಟ ವಿಸ್ತರಣೆ ಹಾಗೂ ಶಾಸಕಾಂಗ ಸಭೆಯ ಬಗ್ಗೆ ಬಿಜೆಪಿ ವರಿಷ್ಠರಲ್ಲಿ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಶಾಸಕರು ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಂದು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಬಿ.ಪಿ.ಹರೀಶ್ ನಿನ್ನೆ ಸದಾನಂದ ಗೌಡರ ವಿರುದ್ಧ ಮಾಡಿದ ವಾಗ್ದಾಳಿಗೆ ಉತ್ತರಿಸಿದ ಮುಖ್ಯಮಂತ್ರಿ, ಇಂತಹ ಶಾಸಕರನ್ನು ನಾವು ಲೆಕ್ಕದಿಂದ ಹೊರಗಿಟ್ಟಿದ್ದೇವೆ. ಅವರ ಮಾತಿನಲ್ಲಿಯೇ ಅವರ ನೈತಿಕತೆ ಏನೆಂಬುದು ತಿಳಿಯುತ್ತದೆ. ಶಾಸಕ ಹರೀಶ್‌ರ ಮಾತಿನಲ್ಲಿಯೇ ಇದಕ್ಕೆ ತಾನು ಉತ್ತರ ಕೊಡಬಹುದು. ಆದರೆ, ತಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ರಾಜ್ಯದ ಸಮಸ್ಯೆ ಪರಿಹಾರವೇ ತನ್ನ ಕರ್ತವ್ಯ. ಇಂಥವರಿಗೆ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ಶಾಸಕ ಹರೀಶ್ ತನ್ನ ವಿರುದ್ಧ ವಾಗ್ದಾಳಿ ನಡೆಸಿದ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಕೆಲವು ಶಾಸಕರು, ಸಚಿವರು ದಿಲ್ಲಿಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಕಾರ್ಯ ವ್ಯಾಪ್ತಿಯಲ್ಲಿ ಯಾರೂ ಬೇಕಾದರೂ ದಿಲ್ಲಿಗೆ ತೆರಳಬಹುದು. ಅದರಲ್ಲಿ ತಮ್ಮದೇನೂ ಅಭ್ಯಂತರವಿಲ್ಲ ಎಂದರು.