ಸರಕಾರಿ ಬಸ್ ಬಂದರೂ ಮುಗಿಯದ ವಿದ್ಯಾರ್ಥಿಗಳ ಗೋಳು

ಮಾನ್ಯರೆ,

ಕಳೆದ ಮೂರ್ನಾಲ್ಕು ವರ್ಷದಿಂದ ಅಂಬ್ಲಮೊಗರು ಗ್ರಾಮದ ವಿದ್ಯಾರ್ಥಿಗಳು ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಎರಡು ದಿನದ ಹಿಂದೆ ಈ ರೂಟ್‌ನಲ್ಲಿ ಸರಕಾರಿ ಬಸ್ ಚಲಿಸ ತೊಡಗಿದರೂ ಕೂಡ ವಿದ್ಯಾರ್ಥಿಗಳ ಗೋಳು ಮಾತ್ರ ಮುಗಿಯುತ್ತಿಲ್ಲ.ಅಂಬ್ಲಮೊಗರು ಗ್ರಾಮದಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ದಿನನಿತ್ಯ ತೊಕ್ಕೊಟ್ಟು, ಮಂಗಳೂರಿಗೆ ಬರಲು ಪರದಾಡುತ್ತಿದ್ದರು. ಇದನ್ನು ಮನಗಂಡ ಡಿವೈಎಫ್‌ಐ ಮದಕ ಘಟಕದ ಪದಾಧಿಕಾರಿಗಳು ನಡೆಸಿದ ಸತತ ಹೋರಾಟದ ಫಲವಾಗಿ ಎರಡು ಸರಕಾರಿ ಬಸ್ ಚಲಿಸತೊಡಗಿತ್ತು. ಆದರೆ ಖಾಸಗಿ ಬಸ್ ಸಿಬಂದಿಯ ಕಿರುಕುಳ ಮತ್ತು ತಾತ್ಕಾಲಿಕ ಪರ ವಾನಿಗೆ ಮುಗಿದ ಕಾರಣ ಸರಕಾರಿ ಬಸ್ ತನ್ನ ಸಂಚಾರ ನಿಲ್ಲಿಸಿತ್ತು.ಏತನ್ಮಧ್ಯೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನದಲ್ಲಿ ಎರಡು ಟ್ರಿಪ್ ಹರೇಕಳ ಗ್ರಾಮದ ನ್ಯೂಪಡ್ಪುವಿನಿಂದ ಬಿಜೈ ಸರಕಾರಿ ಬಸ್ ನಿಲ್ದಾಣದವರೆಗೆ ಸೋಮವಾರ ದಿಂದ ಸಂಚಾರ ಆರಂಭಿಸಿತ್ತು. ಆದರೆ, ಈ ಬಸ್ಸಿಗೆ ವಿದ್ಯಾರ್ಥಿಗಳು ಹತ್ತದಂತಹ ಸ್ಥಿತಿ ನಿರ್ಮಾಣವಾಗಿದೆ.

ಅಂದರೆ, 12 ವರ್ಷ ಪ್ರಾಯ ಮೀರದ ಮಕ್ಕಳು ಮಂಗಳೂರಿಗೆ (ಅದೂ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತ)ಬರಲು 6 ಮತ್ತು 12 ವರ್ಷ ಪ್ರಾಯ ಮೀರಿದ ಮಕ್ಕಳು 10 ರೂಪಾಯಿಯ ಟಿಕೆಟ್ ಪಡೆಯಬೇಕಾಗಿದೆ. ಸ್ಟೇಟ್‌ಬ್ಯಾಂಕ್‌ಗೆ ತೆರಳಲು ಈ ವಿದ್ಯಾರ್ಥಿಗಳು ಮತ್ತೆ 5 ರೂ. ಹಣ ತೆರಬೇಕಾಗಿದೆ.ಮಕ್ಕಳ ಹಿತದೃಷ್ಟಿಯಿಂದ ಆರಂಭಿಸಲಾದ ಈ ಬಸ್ ಸಂಚಾರ ಇದೀಗ ಮಕ್ಕಳಿಗೆ ಮಾರಕವಾಗಿ ಪರಿಣ ಮಿಸಿದ್ದು, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕಾಗಿದೆ

-ಇಬ್ರಾಹಿಂ, ಡಿವೈಎಫ್‌ಐ, ಅಂಬ್ಲಮೊಗರು